ಅಪ್ಪ, ನಾನು ಹಾಗೂ ಸಿತಾರ್…

– ಸುನಿಲ್ ರಾವ್

  ಒಂದೇ ದಿನ ಬಾಕಿ ನನ್ನ ಸಿತಾರ್ ಮನೆಗೆ ಬರಲು,ಯಾಕಾದ್ರೂ ದಿನ ಇಷ್ಟು ನಿಧಾನಕ್ಕೆ ನಡೀತಾ ಇದೆಯೋ ??ಅಜಮೀರ್ ನಿಂದ ಆ ವ್ಯಕ್ತಿ ಯಾವಾಗ್ ಬರ್ತಾನೋ?ಹೋಗಿ ತಂದು ದುನ್ ದುನ್ ಅಂತ ಸಿತಾರ್ ನುಡಿಸ್ತಾ ಇರೋಹಾಗೆ ,ಲಕ್ಷಾಂತರ ಜನ ನನ್ ಮುಂದೆ ಕೂತ್ಕೊಂಡು ಕೇಳಿಸಿಕೊಳ್ಳೋ ಹಾಗೆ,ಚಪ್ಪಾಳೆ,ಶಿಳ್ಳೆ ಹೊಡೀತಾ ಇರೋಹಾಗೆ …….ಬಹುಷ್ಯ ಬಹು ದೊಡ್ಡ ಕಲಾವಿದ ಪಂಡಿತ್ ರವಿಶಂಕರ್ ಕೂಡ ಇಂತಹ ಕನಸು ಕಂಡಿದ್ದರೋ ಇಲ್ವೋ…ಆ ಲೆವೆಲ್ ಗೆ ಉಬ್ಬಿ ಹೋಗಿದ್ದೆ….ಆಂತರ್ಯದಲ್ಲಿ ಒಳ್ಳೆ ಎಣ್ಣೆ ಜಿಡ್ಡು ಅಂಟಿಕೊಂಡಿರೋ ಥರ ಸಿತಾರ್ ಅಂಟಿಕೊಂಡು ಬಿಟ್ಟಿತ್ತು…..   ಆಗ ನನಗೆ ಸುಮಾರು ಹನ್ನೆರಡು ವರ್ಷವಿರಬಹುದು,ಸಂಗೀತ ಅಭ್ಯಾಸ ಮಾಡದೆ ಇದ್ದರೂ, ಅಕ್ಕ ಸ್ವಲ್ಪ ಹಾಡುಗಳನ್ನ ಹೇಳಿಕೊಟ್ಟಿದ್ದಳು,ನಾನು ಅರ್ದಂಬರ್ದ ಕಲಿತಿದ್ದೆ…..ಭಾನುವಾರದ ಸಂಜೆ 7 ಗಂಟೆಗೆ ಕೂತು ಮನೆಯವರೆಲ್ಲ ಭಜನೆ ಮಾಡುವ ಅಭ್ಯಾಸವಿತ್ತು..ಅಪ್ಪ ಹಳೆಯ ಇಂಡಾಲಿಯಂ ಡಬ್ಬಿ ಇಟ್ಟುಕೊಂಡು ತಬಲಾ ಎಂಬಂತೆ ಬಾರಿಸುತ್ತಿದ್ದರು,ಮಿಲಿಟರಿಯಲ್ಲಿ ಇದ್ದುದರಿಂದಲೋ ಏನೋ ಬಹಳ ಚನ್ನಾಗಿ ಬಾರಿಸಲು, ಹಾಡಲು ಬರುತ್ತಿತ್ತು…ಇಂಡಾಲಿಯಂ ಡಬ್ಬಿ ಒಂದೇ ಅಲ್ಲ ನನ್ನನ್ನೂ ಮೂರು ಬಾರಿ ಚರ್ಮ ಸುಲಿದುಹೊಗುವಂತೆ ಬಾರಿಸಿದ್ದರು…..ಏನಯ್ಯಾ ಈ ಮನುಷ್ಯ ಈ ಪಾಟಿ ಹೊಡೀತಾನೆ…ಥೂ!! ಅಂತ ಅಪ್ಪನ್ನ ರೇಗಿಕೊಳ್ತಿದ್ದೆ. ಎದುರಿಗೆ ಹೇಳುವ ಹಾಗಿಲ್ವಲ್ಲ.ಹಾಗೆಯೇ ಅಂತಹ ಸಂಜೆಯಲ್ಲಿ ತಪ್ಪದೆ ಹನುಮಾನ್ ಚಾಲಿಸಾ,ಓಂ ಜಯ ಜಗದೀಶ ಹರೇ ಹಾಡನ್ನು ಹಾಡುತ್ತಿದ್ದರು..ಅಂತಹ ತನ್ಮಯತೆ,ರಾಗ,ತಾಳ ಅದೊಂದು ರೋಮಾಂಚನವೇ ಸರಿ.ಅದ್ಭುತವಾದ ವೃತ್ತಿಪರನಲ್ಲದ ಗಾಯಕ ನನ್ನಪ್ಪ,ಅದಾದ ಮೇಲೆ ನನ್ನನು ಹಾಡು ಅಂತ ಹೇಳೋರು,ನಾನು ಸದಾ ಹಾಡುತ್ತಿದ್ದ ಹಾಡು ‘ಗುಡ್ಡಿ’ ಚಿತ್ರದ ವಾಣಿ ಜಯರಾಂ ಹಾಡಿರೋ “ಹಂ ಕೋ ಮನ್ ಕಿ ಶಕ್ತಿ ದೇನ….’ಹಾಡು ಬರುತ್ತಿದ್ದದ್ದು ಪೂರ್ತಿಯಾಗಿ ಅದೊಂದೇ ಹಾಡು ..ಬೇರೆ ಯಾವುದಾದರು ಹಾಡನ್ನ ಹಾಡಿ,ರಾಗ,ಶಭ್ದಗಳು ತಪ್ಪಾಗೊದ್ರೆ ನಮ್ಮಪ್ಪನ ಕೈಲಿ ತಬಲಾ ನಾನು….. ಇನ್ನು ನೆನಪಿದೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಒಂದು ಹಾಡು ಕಲಿತು ಬಾ ಅಂದಿದ್ದರು ಮೇಷ್ಟ್ರು..ಅಪ್ಪನ ಕೇಳಿದಕ್ಕೆ ಪೋಸ್ಟ್ ಮಾಸ್ಟರ್ ಚಿತ್ರದ “ಕನ್ನಡ ದ ಕುಲದೇವಿ”ಹಾಡು ಹೇಳಿಕೊಟ್ಟಿದ್ದರು…ಕೊನೆಯ ಸಾಲುಗಳು ಒಂದಾಗಿ ಕೂಗಲಿ ಕನ್ನಡ…ಕನ್ನಡ ಹಾಡುವಾಗ ಸ್ವಲ್ಪ ರಾಗ ಬದಲಿಸಿದ್ದೆ…ಅಬ್ಬ ಒಲೆಯ ಹತ್ತಿರ ಉರಿಯುತ್ತಿದ್ದ ಸೌಧೆ ತಂದು…ಬೆನ್ನಿಗೆ ಒಂದು ರಪ್ ಅಂತ ಬಾರಿಸಿದ್ದ ಅಪ್ಪ…..ಲೇಯ್ ಮಗನೆ…ಯಾರಾದ್ರೂ ಇಷ್ಟು ಗಬ್ಬು ಗಬ್ಬಾಗಿ ಹಾಡ್ತಾರೆನೋ ಬೇಕೂಫಾ…ಕನ್ನಡ….ಕನ್ನಡ ಅಂತ ಹಾಡಿದರೆ ಕರುಳು ಚುರ್ ಅನ್ಬೇಕು ಹಾಗ್ ಹಾಡು ಅಂದಿದ್ದರು…ಹು ನಿಜ ನನ್ನ ಕರುಳು, ಮಯ್ಯಿ ಎಲ್ಲ ಚುರ್ ಅಂದಿತ್ತು….ಹಾಡೊಂದೇ ಅಲ್ಲ..ದಿನ ಉಗಿಸಿಕೊಂಡು ಮಾಡುತ್ತಿದ್ದ ಸಂಧ್ಯಾವನ್ದನೆಯೂ ಅಷ್ಟೇ ಮಂತ್ರ ಮಂತ್ರಕ್ಕೂ ಉಗಿಸಿಕೊಂಡಿದ್ದು ಬಹಳ ಇದೆ …… ಪ್ರತಿಬಾರಿ ಅದೇ ಹಾಡು ಹಾಡಿದಾಗಲೂ,ಸಹಬಾಶ್!! ಮುಂಡೇದೆ ಎಷ್ಟ್ ಚನ್ನಾಗ್ ಹಾಡ್ತೀಯೋ??ಅಂತ ಬೆನ್ನು ತಟ್ಟೋರು,ಅಬ್ಬ ಓಳ್ಳೆ ಕಬ್ಬಿಣದ ಇಸ್ತ್ರಿ ಪೆಟ್ಟಿಗೆ ತಗೊಂಡು ಬೆನ್ನು ಇಸ್ತ್ರಿ ಮಾಡಿದಹಾಗೆ ಅನ್ಸ್ತಿತ್ತು,ಅಪ್ಪನದು ಕಬ್ಬಿಣದ ಕೈಗಳು. ನನ್ನ ಅಕ್ಕ ತುಂಬಾ ಬುದ್ಧಿವಂತೆ,ಬೇಗ ಜಾರಿಕೊಂಡುಬಿಡುತ್ತಿದ್ದಳು ,ನನಗೆ ನೆನಪಿದ್ದಂತೆ ಅಪ್ಪ ಅವಳನ್ನ ರೇಗಿದ್ದು,ಹೊಡೆದಿದ್ದು ತುಂಬಾ ವಿರಳ,ಕಾಶ್ಮಿರದಲ್ಲಿದ್ದಾಗ ಯಾರದೋ ಮನೆಯಲಿ ಮೈ ಸೋಪು ತಿನ್ದಿದ್ಲು ಅನ್ನೋ ಕಾರಣಕ್ಕೆ ತೊಡೆಗೆ ಹೊಡೆದಿದ್ರಂತೆ,ಈಗಲೂ ಮಾರ್ಕ್ ಇದೆ ಕಣೋ ಅಂತ ಅಕ್ಕ ಅಣ್ಣನಿಗೆ ಹೇಳುತ್ತಿದ್ದದ್ದು ಜ್ಞಾಪಕ.ಇನ್ನು ಅಮ್ಮ-ಅಣ್ಣನ ಸರಧಿ..ಅಮ್ಮ ಹಾಡುತ್ತಿದದ್ದು ಅಮ್ಮನಿಗೆ ಕೇಳಿಸುತ್ತಿರಲಿಲ್ಲ,ಒಂಥರಾ ಮೌನಿ ಬಾಬಾ ಇದ್ದಹಾಗೆ.ಹೆಚ್ಚಾಗಿ ಅಪ್ಪ,ಅಮ್ಮನನ್ನು ಕಾಡುತ್ತಿದದ್ದು ಕಾಫೀಗಾಗಿ,ಅಮ್ಮ ಹೇಳೋಳು ಹೀಗೆ ಕಾಫಿ ಕುಡಿತಾಇರು ಒಂದು ದೊಡ್ಡ ನೀರಿನ ದ್ರುಮ್ಮಿಗೆ ಡಿಕಾಕ್ಷನ್ ಹಾಕಿ,ಹಾಲು ಕುದಿಸಿ…ನಿನ್ನ ಬಾಯಿಗೆ ಪೈಪ್ ಹಾಕಿಬಿಡುವೆ, ಎಷ್ಟಾದ್ರೂ ಕುಡ್ಕೊಬಹುದು ಅಂತ…ದಿನಕ್ಕೆ 20 ಬಾರಿ ಈ ಡೈಲಾಗ್ ನಮ್ಮ ಮನೇಲಿ ನಡೆಯೋದು….ಇನ್ನು ಅಣ್ಣ ಯಾವುದೊ ಹಾಡಿಗೆ ,ಏನೋ ತಾಳ ಹಾಕಿಕೊಂಡು ತಲೆ ಬಗ್ಗಿಸಿಕೊಂಡು ಕೂತಿರುತ್ತಿದ್ದ,ಅವನ ಕೈಗೆ ಒಂದು ದಫಲಿ ಇರುತ್ತಿತ್ತು…ಅವನು ಕೂಡುತ್ತಿದದ್ದು ಪ್ರಸಾದ ಹಾಗು ಕಡಲೆ ಪುರಿಗೆ…ಸಂತೆಯಿಂದ ತರುತ್ತಿದ್ದ ಕಳ್ಳೆಪುರಿ ಬಹಳ ರುಚಿಯಾಗಿರುತ್ತಿತ್ತು….ಹೆಚ್ಚಾಗಿ ಅಪ್ಪನ ಕೈಲಿ ಬಿಸಿಕೊಳ್ಳುತ್ತಿದ್ದದು ಅವನೇ,ಒಂಥರಾ ಅಶ್ರದ್ಧೆ ತೋರಿಸುತ್ತಿದ್ದ,ಜೋರಾಗಿ ರೇಗಿದಾಗೊಮ್ಮೆ ಕೈಲಿದ್ದ ತಟ್ಟೆ ಎಸೆದು ಹೊರಗೆ ಹೊರಟುಬಿಡುತ್ತಿದ್ದ…ಒಂಥರಾ ದೂರ್ವಾಸ……

ಇವೆಲ್ಲ ಚಿತ್ರಣಗಳು ಒಂಥರಾ ನನ್ನನ್ನು ಸಂಗೀತದ ಕಡೆ ಆಸಕ್ತಿ ,ಮೂಡುವಂತೆ ಮಾಡಿತು ಎಂದು ನಾನು ಭಾವಿಸಿದ್ದೇನೆ.ಆದರೆ ಅಪ್ಪ ಭಾನುವಾರಗಳ ಹೊರತಾಗಿ ಇನ್ಯಾವತ್ತೂ ಹಾಡಲು ಬಿಡುತ್ತಿರಲಿಲ್ಲ,ಬರೀ ಪುಸ್ತಕದೊಂದಿಗೆ ನಮ್ಮ ನಂಟು.ಅಪ್ಪ ಮಿಲಿಟರಿ ಇಂದ ನಿವೃತ್ತಿ ಪಡೆದಿದ್ದರು,ಒಮ್ಮೆ ಅಣ್ಣನ ಜೊತೆ ಬಂಗಾರಪೇಟೆಯ ಯಾವುದೊ ನೆಂಟರ ಮನೆಗೆ ಹೋಗಿ ಬರುತ್ತಿದ್ದಾಗ ರೈಲಿನ ಅವಘಡಕ್ಕೆ ಸಿಲುಕಿ ಅಣ್ಣನ ಕಾಲು ಛಿದ್ರಗೊಂಡಿತ್ತು,ತೊಡೆಯ ಭಾಗದ ಚರ್ಮ ತೆಗೆದು ಕಾಲಿಗೆ ಹಾಕಿ ಸರಿಪಡಿಸಲಾಗಿತ್ತು ,ಹಿಮ್ಮಡಿಯ ಭಾಗ ಇಲ್ಲದೆ ಇದ್ದರೂ ಈಗ ನಡೆಯಲು ಯಾವ ತೊಂದರೆಯೂ ಇಲ್ಲ. ಆಗ ಅಪ್ಪನಿಗೂ ಕೊಂಚ ಕಾಲಿಗೆ ಪೆಟ್ಟಾಗಿ ಕಾಲು ಗಂಟು ಕಟ್ಟಿದ್ದವು,ನಡೆಯಲು ಹೆಚ್ಚಾಗಿ ಆಗುತ್ತಿರಲಿಲ್ಲ…ಇಂತಹ ಅಸ್ಥಿರತೆಯ ಮಧ್ಯೆ ಮಿಲಿಟರಿಯಲ್ಲಿ ಮಾಡೋದಾದರು ಏನು??ಆದ್ದರಿಂದ ವಿ.ಆರ್.ಎಸ್ ತೆಗೆದುಕೊಂಡಿದ್ ಆಯಿತು …ತದನಂತರ ಯಾವುದೊ ದೊಡ್ಡ ಕಂಪನಿಯ ಭದ್ರತೆಯ ಜವಾಬ್ದಾರಿಯನ್ನ ವಹಿಸಿಕೊಂಡಿದ್ದರು…ಶಿಫ್ಟ್ ಗಳ ಆಧಾರದ ಮೇಲೆ ಕೆಲಸ…. ಮಧ್ಯಾಹ್ನದ ಅಥವಾ ರಾತ್ರಿಯ ಶಿಫ್ಟ್ ಇದ್ದರೆ ನಮಗೆ ತೊಂದರೆಯಾಗುತ್ತಿರಲಿಲ್ಲ..ಈ ಬೆಳಗಿನ ಶಿಫ್ಟ್ಗಳು ಸಿಕ್ಕಾಪಟ್ಟೆ ಹಿಂಸೆ ಮಾಡುತ್ತಿದ್ದವು,ಸಂಜೆ ಸುಮಾರು ನಾಲ್ಕು ಮೂವತ್ತರ ಹೊತ್ತಿಗೆ ಮನೆಗೆ ಬರೋರು,ನಾವು ಸೀತಾರಾಂ ರ ‘ಮಾಯಾಮೃಗ’ ಧಾರವಾಹಿ ನೋಡುತ್ತಾ ಕೂರುತ್ತಿದ್ದೆವು,ಅಲ್ಲೆಲೋ ಅಪ್ಪನ ಚಪ್ಪಲಿ ಸದ್ದು ಆದರೆ ಪುಸ್ತಕ ಎತ್ತಿಕೊಂಡು ರೂಮಿಗೆ ಓಡಿಬಿದುತ್ತಿದ್ದೆವು….ನಾವು ಬಹಳ ಸೂಕ್ಷಮಗ್ರಾಹಿಗಳು….ಅಪ್ಪನ ಚಪ್ಪಲಿಯ ಸದ್ದು ಬಹಳ ಬೇಗ ಕೇಳಿಸಿ ಬಿಡುತ್ತಿತ್ತು ..ಬೆಕ್ಕಿಗೆ ಸಿಕ್ಕ ಇಲಿಗಳಂತೆ,ಕೋಣೆಯೊಳಗೆ ಪುಸ್ತಕ ಹಿಡಿದು ಓದುವಂತೆ ನಾಟಕ ಮಾಡುತ್ತಿದ್ದ ನಮಗೆ ಆಗ ಸಿಂಪತಿ ಸಿಗುತ್ತಿತ್ತು,ಪಾಪ ಮಕ್ಕಳು ಅದೆಷ್ಟು ಓದ್ತಾರೋ…ಬನ್ರೋ ಆಚೆ ಮಕ್ಳ ಇಂತಹ ಒಳ್ಳೆ ಧಾರ್ವಾಹಿನು ನೋಡಲ್ಲ ನೀವು ಅಂತ ಕರೆದು ಕೂರಿಸೋರು…ನಾವೋ ಅಮಾಯಕ ಇಲಿಮರಿಗಳು ಪಿಳಿ ಪಿಳಿ ಕಣ್ಣು ಬಿಟ್ಟುಕೊಂಡು ಬಂದು ಟೀವಿ ಯ ಮುಂದೆ ಕೂರುತ್ತಿದ್ದೆವು.   ಅವತ್ತು ತಾಲುಕ್ಕು ಮಟ್ಟದ ಭಾವಗೀತೆ ಸ್ಪರ್ಧೆ ಇತ್ತು,ನಾನು ಒಂದು ಭಾವಗೀತೆ ಹಾಡಬೇಕು ಅಂತ ಶಾಲೆಯಲ್ಲಿ ಹೇಳಿದ್ದರು,ನಾನು ಅಕ್ಕನ ಬಳಿ ಕೇಳಿದಾಗ ಬಿ.ಆರ್.ಛಾಯ ಹಾಡಿರುವ ಹುಚ್ಚು ಖೋಡಿ ಮನಸ್ಸುಹಾಡನ್ನು ಹೇಳಿಕೊಟ್ಟಳು…ಮರುದಿನ ಆ ಹಾಡನ್ನು ಶಾಲೆಯ ಕಾರ್ಯದರ್ಶಿಗಳ ಮುಂದೆ ಹಾಡಿ ತೋರಿಸಬೇಕಿತು,ಹಾಡಲು ಶುರುಮಾಡಿದೆ…’ಸೆರಗು ತೀಡಿದಷ್ಟು ಸುಕ್ಕು ಹಠ ಮಾಡುವ ಕೂದಲು, ನೆರೆ ಏಕೋ ಸರಿಯಾಗದು ಮತ್ತೆ ಒಳಗೆ ಓಡಿದಳು’….ಅಂದೇ…ಏಹ್!! ನಿಲ್ಸೋ..ನಿಲ್ಸೋ..ಎಷ್ಟೋ ನಿನ್ ವಯಸ್ಸು??ವಯಸ್ಸಿಗೆ ತಕ್ಕಂತೆ ಹಾಡೋ ಹಾಡ ಇದು…ಅದೇನೋ ಸೀರೆ,ಸೆರಗು,ಬ್ಲೌಸು,ಮಚ್ಚೆ..ಅಬ್ಭ ಅಸಹ್ಯ ಗೆಟ್ ಔಟ್ ಅಂದರು …ನನಗೇನೂ ಗೊತ್ತಾಗಲಿಲ್ಲ,ಅಸಲು ಆ ಹಾಡಿನ ಅರ್ಥವೇ ಗೊತ್ತಿರಲಿಲ್ಲ …ಕಣ್ಣಲ್ಲಿ ನೀರು ಸುರಿಸುತ್ತ ಹೊರಬಂದೆ,ಶಾಲೆಯ ಮುಖ್ಯೋಪಾದ್ಯಯರು ಸಿಕ್ಕಿ ಇದು ನೀ ಹಾಡುವ ಹಾಡಲ್ಲ ಮರಿ, ಬೇರೆ ಯಾವುದಾದರು ಬರತ್ತಾ??ಅಂದ್ರು…ನಾನು ಕರ್ತವ್ಯವೇನೋ ಎಂಬಂತೆ…ಉಹೂ ಇಲ್ಲ ಮಾತಾಜಿ ಅಂದೇ…ಮಹಿಳಾ ಅದ್ಯಾಪಕರನ್ನ ನಾವು ಮಾತಾಜಿ ಎಂದು ಸಂಬೋದಿಸುತ್ತಿದ್ದೆವು …ವಿಶ್ವ ಹಿಂದೂ ಪರಿಷದ್ ನ ಧ್ಯೇಯ ಇಟ್ಟುಕೊಂಡು ನಡೆಯುತ್ತಿದ್ದ ಸಂಸ್ಥೆ ಅದು…ಈಗೀಗ ಅನ್ಸತ್ತೆ ಬ್ರಹ್ಮಚರ್ಯದ ಪರಮಾವಧಿ ನಮ್ಮ ಕಾರ್ಯದರ್ಶಿಗಳು ಅಂತ…….. ಮರುದಿನ ಅದೇ ಹಾಡು ಹಾಡಿ ಬಹುಮಾನ ತಂದು ಅವರಿಗೆ ತೋರಿಸಿದೆ ತೋರಿಸಿದೆ….ಮುಖ ಸಿಂಡರಿಸಿಕೊಂಡರು …ಪದ್ದತಿಯಂತೆ ಅವತ್ತು ಬಹುಮಾನ ಮನೆಯವರಿಗೆ ತೋರಿಸಿ ವಾಪಸ್ ಶಾಲೆಗೇ ಕೊಟ್ಟುಬಿಡಬೇಕಿತ್ತು ,ಅದೊಂಥರ ಶೋಕಗೀತೆ…ಯಾಕಾದ್ರು ಹೀಗ್ ಮಾಡ್ತಾರೋ ಜನ..ಕಷ್ಟ ಪಟ್ಟು ಹಾಡೋದು ನಾನು,ಜೋಡಿಸಿಕೊಳ್ಳೋದು ಇವರ ಶೋ ಕೇಸ್ ಲಿ ಅಂತ ಬೈದುಕೊಳ್ಳುತ್ತಿದ್ದೆ….. ಹೀಗೆ ಸಾಗಿದ್ದ ನನ್ನ ಸಂಗೀತದ ಪಯಣದಲ್ಲಿ,ಒಂದು ತಿರುವು ಸಿಗತ್ತೆ ಅಂತ ಮಹದಾಶೆ ಇಟ್ಟುಕೊಂಡಿದ್ದು ನನ್ನ ಅಕ್ಕ ಕೆಲಸಕ್ಕೆ ಸೇರಿದಾಗ,ಹೇಗಾದರೂ ಮಾಡಿ ಸಂಗೀತದ ಫೀಜು ಹೊಂದಿಸಿ ಕೊಟ್ಟಾಳು ಅಂತ ಕಲ್ಪಿಸಿಕೊಂಡ ಸಮಾಧಾನ….ನನ್ನದು ಹಾಗು ಅಕ್ಕನದು ಒಂಥರಾ ಅವಿನಾಭವ ಸಂಬಂಧ…ಓದು ಬಿಟ್ಟು ಇನ್ನೇನು ಮಾಡಲೇ ಬಾರದು ಅಂತ ಅಪ್ಪ ಹೇಳುತ್ತಿದ್ದ ದಿನಗಳು ಅವು,ನಾನು ಸಂಗೀತಕ್ಕೆ ಸೇರಬೇಕು ಅಂತ ಹಠ ಹಿಡಿದಿದ್ದೆ.75 ರೂಪಾಯಿ ತಿಂಗಳ ಫೀಜು ಕೊಡು ಅಂದಾಗ…ಬೋಳಿಮಗನೆ ಹೇಳಿಲ್ವಾ ಓದೋದು ಒಂದು ಬಿಟ್ಟು ಇನ್ನೇನು ಮಾಡಬಾರದು ಅಂತ,ಏನೋ ಸಂಗೀತ ನಿನ್ನ ಪಿಂಡ,ನಾಳೆ ಬೀದಿಗೆ ಬರ್ತೀಯೋ ನಾಯಿ,ಓದೋದ ನೋಡು…ಹಾಡು ಗೀಡು ಅಂದ್ರೆ ಸುಟ್ಟುಬಿಡ್ತೀನಿ ಮಗನೆ…ಅಂತ ದಡಬಡಿಸಿದ್ದ ಅಪ್ಪ….ನನ್ನೊಳಗೆ ಇದ್ದ ಅಷ್ಟೂ ಧಂ ಕರಗಿಹೋಗಿತ್ತು…ಅಪ್ಪನ ಮೇಲೆ ಒಂಥರಾ ಕೋಪ ಶುರುವಾಗಿತ್ತು..ಈ childhood conviction ಅಂತಾರಲ್ಲ ಹಾಗೆ….ಆಗ ಅಕ್ಕ ಅಪ್ಪನಿಗೆ ಹೇಳದೆಯೇ ಸಂಗೀತದ ಕ್ಲಾಸಿಗೆ ಸೇರಿಸಿದ್ದಳು…ಅದು ಅವಳು ನನ್ನ ಜೀವನಕ್ಕೆ ಮಾಡಿದ ಮಹದುಪಕಾರ…ಸಾಧನೆಗೆ ಎಷ್ಟೊಂದು ಅಡ್ಡಿ ಅಂದುಕೊಳ್ಳುತ್ತಿದ್ದೆ…ಆದರೆ ಈಗ ಅನ್ಸತ್ತೆ…ಅಪ್ಪನ ಅನಿವಾರ್ಯತೆ ಏನೋ??ಒಬ್ಬೆ ವ್ಯಕ್ತಿ ಇಡೀ ಮನೆಯ ಸಂಭಾಲಿಸಬೇಕು….ಹೇಗೆ ಹೊಂದಿಸುತ್ತಿದ್ದನೋ ಪಾಪ …ಅಂತ ಮನಸ್ಸು ಒಂದು ಕಡೆ ಹೇಳಿದರೆ…75 ರೂಪಾಯಿ ಕೊಟ್ರೆ ಗಂಟೇನೂ ಹೋಗೋದು ಅಂತ ಇನ್ನೊಂದು ಕಡೆ ಅನ್ಕೊತಿದ್ದೆ….   ಅದಾದಮೇಲೆ ಆ ಸಂಗೀತವು ಹೆಚ್ಚು ದಿನ ಉಳಿಯಲಿಲ್ಲ,ಅಕ್ಕನಿಗೆ ಮದುವೆಯಾಗಿ ಹೋಗಿತ್ತು…ಪ್ರತಿ ತಿಂಗಳು 75 ರೂಪಾಯಿ ಹೊಂದಿಸೋದು ಹೇಗೆ??ನಂತರ ರೇಡಿಯೋ ನನ್ನ ದ್ರೋಣಾಚಾರ್ಯ…ನಾನು ಅದರ ಏಕಲವ್ಯ….ದಿನಗಳು ಕಳೆದಂತೆ…ಒಂದು ನೌಕರಿ ಸಿಕ್ಕಿತು..ಅಪ್ಪನು ಮೆತ್ತಗಾಗಿದ್ದ,ಕಾಲು ಮೊದಲೇ ಊನವಾಗಿದ್ದರಿಂದ ಗ್ಯಾಂಗರಿನ್ ಆಗಿ ಆಸ್ಪತ್ರೆ ಸೇರಿದ್ದರು,ಸುಮಾರು 8ತಿಂಗಳು ಆಸ್ಪತ್ರೆಯಲ್ಲಿ ವನವಾಸ ಅನುಭವಿಸಿದ್ದು ಆಯಿತು. ಯಾವಾಗಲಾದರು ಕೆಲಸ ಹೆಚ್ಚಾಗಿದ್ದು ಆಸ್ಪತ್ರೆಗೆ ಹೋಗಲು ಆಗಲಿಲ್ಲ ಎಂದಾಗ..’ಏನೋ ಮರೀ ಈ ಅಪ್ಪನ್ನನ್ನ ಮರೆತುಬಿಟ್ಯ ??’ಅಂತ ಕೇಳಿ ಕಣ್ಣಲ್ಲಿ ನೀರು ತರಿಸೋರು… ಆಗ ಬಂದಿತು ಒಂದು ಯುಗಾದಿ..ತನ್ನ ಡಾಕ್ಟರ್ನ ಅಂಗಲಾಚಿ ಬೇಡಿಕೊಂಡು ,ಈ ಬಾರಿಯ ಯುಗಾದಿ ಮನೆಯಲ್ಲೇ ಆಚರಿಸುವೆ ಅಂತ ಕೇಳಿಕೊಂಡು ಮನೆಗೆ ಬಂದಿದ್ದರು….ಅದು ಮನೆಯಲ್ಲಿ ಆಚರಿಸುವ ಕೊನೆಯ ಯುಗಾದಿ ಅಂತ ಅಪ್ಪನಿಗೆ ಗೊತ್ತಿತೇನೋ???ಅಮ್ಮನ ಕತ್ತಿಗೆ ಒಂದೆಳೆ ಚೈನು ಹಾಕಿ..ನನ್ನ ಜೀವನದುದ್ದಕ್ಕೋ ಹೆಂಡತಿ,ಕೆಲಸದವಳು,ನರ್ಸ್,ಡಾಕ್ಟರ ಎಲ್ಲ ಆಗಿಬಿಟ್ಟೆ ಕಣೆ ಮಿಸ್ಸಿ….. ನೀನು ಅಂತ ಹೇಳಿ ಕಣ್ಣೀರು ತರಿಸಿದ್ದರು ಅಪ್ಪ….ಹಾಗೆ ಅಣ್ಣನ ಕರೆದು ಏಟಿಎಂ ಲಿ ಇರುವ ಅಷ್ಟೂ ಹಣವನ್ನು ತೆಗೆಸಿ…ನನಗೆ ಹಾಗು ಅಣ್ಣನಿಗೆ ಕೊಟ್ಟಿದ್ದರು….ನನಗಂತೂ ಆಶ್ಚರ್ಯವಾಗಿತ್ತು….ಒಂದು ರೂಪಾಯಿ ಬೇಕಾದಾಗ ಒಂದು ವಾರದ ಮೊದಲು ಕೇಳಿದರೆ ಕೇವಲ ೫೦ ಪೈಸೆಯನ್ನ..ನೂರಾರು ಪ್ರಶ್ನೆ ಹಾಕಿ ಕೊಡುತ್ತಿದ್ದ ಅಪ್ಪ ಇದೇನಾ ಅಂತ….ಬಾರಿಸಿದರೆ ಮೈ ಮೂಳೇ ಬೆದರಿಹೊಗುವಂತೆ,ಸೌಧೆ ತುಂಡಾಗುವಂತೆ ಹೊಡೆಯುತ್ತಿದ್ದ ಅಪ್ಪ ಈತನೇನ??ಮಗುವಿನಂತೆ ನಿತ್ರಾಣನಾಗಿ ಮಂಚದ ಮೇಲೆ ಮಲಗಿಬಿಟ್ತಿದ್ದಾನೆ ಅನ್ಸಿತ್ತು …..ಮರುದಿನ ನಾನು ಮಹಿಮಾ ಪಟೇಲ್ ರ ಜೊತೆ ಚಿತ್ರದುರ್ಗದ ಯಾವುದೊ ಕಾರ್ಯಕ್ರಮಕ್ಕೆ ಹೋಗಿದ್ದೆ..ಮೂರುದಿನವಾಗಿತ್ತು…ಕೊನೆಯ ದಿನ ನಾನು ಮರಳಿದ್ದೆ ,ಅಣ್ಣ ಫೋನ್ ಮಾಡಿದ್ದ…ಅಪ್ಪ ಯಾಕೋ ಉಸಿರಾಡುತ್ತಿಲ್ಲ ಅಂತ…..ಸರಿಯಾಗಿ ಬಸ್ ಇಳಿದಿದ್ದೆ….ಆಸ್ಪತ್ರೆಯಲ್ಲಿ ಮಾತೂ ಕಥೆ ಇಲ್ಲದೆಯ ಅಪ್ಪ ಮಲಗಿದ್ದ…..ಉಸಿರೂ ನಿಂತುಹೋಗಿತ್ತು ..ಮುಖಕ್ಕೆ ಬಿಳಿ ಬಟ್ಟೆ ಹೊದೆಸಿದ್ದರು…..ಹಾಗೆ ಅಲ್ಲೊಂದು ಶಿಸ್ತಿನ ಪಾಠದ ಅಂತ್ಯವಾಗಿತ್ತು ಅಪ್ಪನ ಸಾವಾದಮೇಲೆ ಒಂಚೂರು ನಾನು ಸ್ವೇಚ್ಚಾಚಾರಿಯಾದೆ….ಕೆಲಸವಿದಿದ್ದರಿಂದ ಮತ್ತೆ ಸಂಗೀತಕ್ಕೆ ಸೇರಿಕೊಂಡೆ…ಹಾಗೆಯೇ ವರ್ಗಾವಣೆಯೂ ಆಯಿತು….ಈ ಸಲ ಕೆಲದಿನಕ್ಕೆ ನೆಲೆ ಊರಿದ್ದು ಬಿಹಾರದ ರಾಜಧಾನಿ ಪಾಟ್ನಾ ದಲ್ಲಿ….ಪಾಟ್ನಾ ಹೈಕೋರ್ಟ್ ನ ಮುಖ್ಯನ್ಯಾಯಧಿಷರ ತಂದೆಯ ಮನೆಯಲ್ಲಿ..ಅವರೂ ಕೂಡ ಪಾಟ್ನಾ ಹೈಕೋರ್ಟ್ ನ ಅತ್ಯಂತ ಹಿರಿಯ ವಕೀಲರು,ವಯಸ್ಸು ಸುಮಾರು 80ಇರಬಹುದು…ನನಗಂತೂ ಅತ್ಯುತ್ತಮವಾದ ಜಾಗ ಅನಿಸಿತೂ..ಮನೆಯಲ್ಲಿ ಬೃಹತ್ತಾದ ಲೈಬ್ರರಿ ಇತ್ತು ಸುಮಾರು 10ಸಾವಿರ ಪುಸ್ತಕಗಳು…ಅಬ್ಬ…. ಈ ಕಲ್ಕತ್ತೆಯಲ್ಲಿ ಸಂಗೀತದ ಅಭಿರುಚಿ ಹೆಚ್ಚು,ಹೇಗೆ ನಮ್ಮ ಕರ್ನಾಟಕದಲ್ಲಿ ಪ್ರತಿ ಮನೆಯಲ್ಲೂ ಸಂಗೀತಕ್ಕೆ ಶ್ರದ್ಧೆ ಇದೆಯೋ ಹಾಗೆ..ನಾ ಉಳಿದೊಕೊಂಡಿದ್ದ ವಕೀಲರ ಶಿಷ್ಯೆ ಮದರಾಸಿನ ಮೂಲದವರಾದ ಡಾ.ಉಷಾ ರಂಗಸ್ವಾಮಿ…ತುಂಬಾ ಓದಿಕೊಂಡವರು. ಒಂಥರಾ ಜಿಡ್ಡಿನ ಹೆಂಗಸು,ಕೆಲ ದಿನಗಳ ವರೆಗೂ ಮಾಹಿತಿಗಾಗಿ ಕಾನೂನಿನ ಬಗ್ಗೆ ಹೇಳಿಸಿಕೊಂಡಿದ್ದೆ..ಆದರೆ ಅವರ ವ್ಯಕ್ತಿತ್ವ ಇದು ವರೆಗೂ ನಂಗೆ ಅರ್ಥವಾಗಿಲ್ಲ…ಅವರು ಕಲ್ಕತ್ತೆಯ ಒಬ್ಬ ಸಂಸ್ಕಾರವಂತ ಗುರುಗಳಲ್ಲಿ ಸಿತಾರ್ ಅಭ್ಯಾಸ ಮಾಡಿ ನಿಲ್ಲಿಸಿದ್ದರು….ಅದುವರೆಗೂ ಸುಮಾರು 4ಸಿತಾರ್ ಒದೆದುಹಾಕಿದ್ದರು…ಈಗ ಮತ್ತೊಂದು ಸಿತಾರ್ ಕೊಂಡುಕೊಂಡು ಒಡೆದು ಹೋಗತ್ತೆ ಅನ್ನೋ ಕಾರಣಕ್ಕೆ ನುಡಿಸದೆಯೇ ಮನೆಯಲ್ಲಿ ಭದ್ರವಾಗಿ ಇಟ್ಟಿದ್ದರು. ಅದನ್ನು ತಂದಿದ್ದಾದರು ಯಾಕೋ ದೇವರೇ ಬಲ್ಲ. ಒಂದು ದಿನ ನನ್ನಲ್ಲಿ ಮಾತಾಡುತ್ತಿದ್ದಾಗ ನೀ ಯಾಕೆ ಸಿತಾರ್ ಕಲಿಯಕೂಡದು ಎಂದರು..ನಾನು ಆಗಬಹುದು ಎಂದೇ..ಮರುದಿನ ಗುರುಗಳನ್ನು ಭೇಟಿ ಮಾಡಿಸಿದ್ದರು…ಅವರ ಹೆಸರು ಪಂ.ಆಶಿಶ್ ಕುಮಾರ್ ಚಟರ್ಜೀ…ಅತ್ಯುತ್ತಮವಾದ ವ್ಯಕ್ತಿತ್ವ….ನನ್ನ ಜೀವನಕ್ಕೆ ಬಹಳ ಖುಷಿಯಾದ ಸಂಗತಿ ಏನು ಅಂದರೆ ಪ್ರತಿಬಾರಿಯೂ ನನಗೆ ಒಳ್ಳೆ ಗುರುವೇ ಸಿಗುತ್ತಾರೆ…ಶಾಲೆಯಲ್ಲಿ ೭ ನೆ ತರಗತಿಯಲ್ಲಿ ಶುಲ್ಕ ಕಟ್ಟಲು ಸಾಧ್ಯವಾಗದೆ ಇದ್ದಾಗ..ನನ್ನ ಮೇಷ್ಟ್ರುಗಳು ಎಲ್ಲರು ಸೇರಿ ತಮ್ಮ ಸಂಬಳದಿಂದ ದುಡ್ಡು ಕೊಟ್ಟಿದ್ದರು…ನಾನು ಸಿತಾರ್ ಕಲಿಯುತ್ತಿದ್ದೆ..ಎಂದೂ ತನ್ನ ಸಿತಾರ್ ತಾನೇ ಮುಟ್ಟದ ಉಷಾ ರಂಗ ಸ್ವಾಮಿಯವರು ನನ್ನ ಶ್ರದ್ಧೆ ಕಂಡು..ತಮ್ಮ ಕಾರಿನಲ್ಲಿ ಅವರ ಸಿತಾರ್ ಹೇರಿಕೊಂಡು ಬಂದಿದ್ದರು…ತಗೋ ಸುನಿಲ್..ಇದರ ಬೆಲೆ ೫೦ ಸಾವಿರ..ನೀನು ಶ್ರದ್ಧೆ ಇಟ್ಟು ಕಲಿಯುತ್ತೀಯ ಅಂತ ಕೊಡುತ್ತಿದ್ದೇನೆ ಜೋಪಾನ,ಹೋಗುವ ಮೊದಲು ಕೊಟ್ಟು ಹೋಗು ಅಂತ ಕೊಟ್ಟರು…ಬಹಳ ಖುಷಿಯಾಗಿತ್ತು..ಹಾಗೆಯೇ ಮತ್ತೊಂದು ಮಾತು ಜೋಡಿಸಿದ್ದರು…ನೋಡು ಇವತ್ತು ನೀನು ಸಿತಾರ್ ಕಲಿಯಲು ಮುಖ್ಯ ಕಾರಣ ನಾನು…so, u should not forget my help ಅಂದರು…ನನಗೇನು ಮಾತಾಡಬೇಕೋ ತೋಚಲೇ ಇಲ್ಲ…ಒಹ್ ಎಸ್ ಮೇಡಂ ಅಂದೇ…. ವಾಪಸ್ ನನ್ನ ವರ್ಗಾವಣೆ ಬೆಂಗಳೂರಿಗೆ ಆಯಿತು…ಹೋಗುವ ಮೊದಲು ಗುರುವಿಗೆ ವಂದನೆ ಸಲ್ಲಿಸಿ, ಉಷಾ ರ ಸಿತಾರ್ ವಾಪಾಸ್ ಕೊಟ್ಟು ಹೊರಟು ಬಂದೆ… ಹಾಗೆಯೇ ಪಾಟ್ನಾ ದಲ್ಲಿ ನನ್ನ ಸಂಗೀತಕ್ಕೆ ಮೆರಗು ಕೊಟ್ಟೋರು ರಶ್ಮಿ ಜೈನ್ ಎಂಬವರು..ಮನೆಯ ಪೂರ್ತಿ ಬಿಹಾರದ ಎಂ.ಎಲ್. ಏ ಗಳು,ನಮ್ಮ ಲಾಲು ಪ್ರಸಾದ್ ಯಾದವ್ ರ ಮನೆಯ ಪಕ್ಕದ ಮನೆ ಅವರದು…ನಾನು ಇದ್ದ ಅಷ್ಟೂ ದಿನವು ಅಲ್ಲಿನ ಸಂಗೀತದ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋಗುತ್ತಿದ್ದರು…ಅವರಿಗೆ ನಾನು ಋಣಿ…ತುಂಬಾ ನಿರ್ಗರ್ವಿ ಮಹಿಳೆ. ಬೆಳಗಾಗಿ ಎದ್ದು ಇವರಷ್ಟೂ ಜನರನ್ನ ನೆನೆಯಬೇಕು ನಾನು. ಬಿಹಾರ ಬಹಳ ಕೆಟ್ಟದಾಗಿ ಚಿತ್ರಿಸಿಕೊಂಡ ರಾಜ್ಯ, ಆದರೆ ನಂಗೆ ಬಹಳ ಅಭಿರುಚಿ ಕೊಟ್ಟ ರಾಜ್ಯ ಅದು…ಒಮ್ಮೆ ಸಂಸ್ಥೆಯ ಕೆಲಸಕ್ಕಾಗಿ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ರನ್ನು ಭೇಟಿ ಮಾಡಿದ್ದೆ…ಒಳ್ಳೆ ಐಎಎಸ್ ಅಧಿಕಾರಿಗಳೊಡನೆ ಮಾತುಕತೆ ಒಡನಾಟವು ಚಿಕ್ಕವನಾದ ನಂಗೆ ಸಿಕ್ಕಿತ್ತು….ನಾನು ನನ್ನ ಸಂಸ್ಥೆಗೆ ಚಿರಋಣಿ. ಬೆಂಗಳೂರಿಗೆ ಬಂದಮೇಲೆ ಮಲ್ಲೇಶ್ವರದಲ್ಲಿ ಅಭ್ಯಾಸಕ್ಕಾಗಿ ಸೇರಿಕೊಂಡೆ..ಹೀಗೆ ನನ್ನ ಸಿತಾರ್ ಕಲಿಯುವಿಕೆ ಮುಂದುವರೆದಿತ್ತು…ಪಟ್ನಾ ದಿಂದ ಬರುವ ಮೊದಲು ನನ್ನ ಗುರುಗಳು ಹೇಳಿದ್ದರು ನಿನಗೆ ಒಳ್ಳೆ ಗ್ರಹಿಕೆ ಇದೆ…ಬಿಡಬೇಡ..ಉನ್ನತ ಸ್ಥಾನಕ್ಕೆ ಎರುವೆ ಅಂತ…ಏರುವೇನೋ ಏನೋ ಗೊತ್ತಿಲ್ಲ..ಆದರೆ ಅಂತಹ ಭರವಸೆ ಮೂಡಿಸಿದ ಅವರಿಗೆ ಧನ್ಯವಾದ….ಹಾಗೆಯೇ ಬಂದ ಶುಭದಿನ ನನ್ನ ಹುಟ್ಟುಹಬ್ಬ,ಎಲ್ಲರನ್ನು ವಿನಂತಿಸಿಕೊಂಡೆ ನನಗೆ ಬೇಡವಾದ ಏನೇನೋ ಕೊಡೊಬದಲು ಒಂದಷ್ಟು ದುಡ್ಡು ಕೊಟ್ಟುಬಿಡಿ,ನಾ ಸಿತಾರ್ ಕೊಳ್ಳುವೆ ಅಂತ…ನನ್ನ ಅಷ್ಟೂ ಸ್ನೇಹಿತರು,ಮನೆಯವರು ಹಾಗೆ ಮಾಡಿದರು …. ಅಜಮೀರ್ ನಿಂದ ಒಳ್ಳೆಯ ತಾಂತ್ರಿಕವಾಗಿ ಪಕ್ವ ವಾಗಿರುವ ಸಿತಾರ್ ತರಿಸಲು ಹಣ ಕಳಿಸಿಕೊಟ್ಟೆ….ಇನ್ನೇನು ಬರುವ ಹಿಂದಿನ ದಿನ ಅಷ್ಟೂ ಕಥೆಗಳು ನೆನಪಿಗೆ ಬಂದವು…ಅಪ್ಪ ಬಂದು ಹೋದ…ನೋವುಗಳು ಬಂದುಹೋದವು, ನೆನಪುಗಳ ಮಾಧುರ್ಯ ಬಂದು ಹೋದವು, ನನ್ನ ಏಳಿಗೆಯ ದಾರಿಗೆ ಪ್ರೋತ್ಸಾಹಿಸಿದ ಅಷ್ಟೂ ಜನ ಬಂದರು, ಎಲ್ಲಕಿನ್ನ ಹೆಚ್ಚಾಗಿ ಅಮ್ಮ ನನಗಾಗಿ ಮಾಡಿದ ತ್ಯಾಗ, ಅಪ್ಪನ ಶಿಸ್ತಿನ ಅರಿವು,ಅಕ್ಕನ ಸಹಾಯ. ಭಾವನ ಪ್ರೀತಿ…..ಎಲ್ಲವೂ ಕಣ್ಣಲ್ಲಿ ನೀರಾಗಿ ಬಂದಿತ್ತು… ಕುಂದಿದಾಗೊಮ್ಮೆ ಮನಸ್ಸು ಎಚ್ಚರಿಸುತ್ತೆ …ನೀನು ಹುಟ್ಟಿರೋದು ಜಯಿಸುವುದಕ್ಕೆ ಅಂತ]]>

‍ಲೇಖಕರು G

March 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಐದು ದಶಕಗಳ ಹಿಂದೆ

ಐದು ದಶಕಗಳ ಹಿಂದೆ

ಶ್ಯಾಮಲಾ ಮಾಧವ ಕೋವಿಡ್ ಸಂಕಷ್ಟದ ಈ ದುಷ್ಕರ ಕಾಲದಲ್ಲಿ ಐದು ದಶಕಗಳ ಹಿಂದಿನ ದುರ್ಭರ ದಿನಗಳು ನೆನಪಾಗುತ್ತಿವೆ. ರೇಬಿಸ್ ಹಾಗೂ ಟೆಟನಸ್ ಬಗ್ಗೆ...

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ಡೀಗೋ ಮರಾಡೋನಾ… ಹೀಗೂ ದೇವರಾಗಬಹುದು!

ರಮಾಕಾಂತ್ ಆರ್ಯನ್‌ ಅವನು ಕಾಲ ಹೆಬ್ಬರಳ ತುದಿಯಲ್ಲಿ ವಿಶ್ವವನ್ನೇ ಪುಟಿಪುಟಿದು ಕುಣಿಸಿದವನು. ಫುಟ್ಬಾಲ್ ಅಂಗಳದಲ್ಲಿ ಅವನು ಓಡಿದ, ಓಡಾಡಿದ...

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

18 ಪ್ರತಿಕ್ರಿಯೆಗಳು

 1. manasu

  ಸುನಿಲ್ ತುಂಬಾ ಚೆನ್ನಾಗಿದೆ ಲೇಖನ… ಸಾಧಿಸುವ ಛಲವಿದ್ದರೆ ಒಂದಲ್ಲಾ ಒಂದು ದಿನ ಸಾಧಿಸಬಹುದು ಎಂಬುದನ್ನು ತೋರಿಸಿದೆ… ಸಂಗೀತದ ಹಾದಿ ಯಶಸ್ಸನ್ನು ನೀಡಲಿ…

  ಪ್ರತಿಕ್ರಿಯೆ
 2. Dr. Azad Ismail Saheb

  ತಮ್ಮ ಸುನಿಲ್ ಗೆ..
  ಬಹು ಅಕ್ಕರೆಯಿಂದ ಶುಭಾಶೀರ್ವಾದಗಳೊಂದಿಗೆ…ಚನ್ನಾಗಿದೆ.. ವಂದನೆ ಸಲ್ಲಿಸುವುದು, ಋಣಿಯಾಗಿರುವುದು ಸೃಜನಶೀಲತೆಗೆ ಸಿಗುವ ಮೊದಲ ಮನ್ನಣೆ..ಅದು ನಿನ್ನನ್ನು ಹೆಚ್ಚು ಹೆಚ್ಚು ಬೆಳೆಯುವಂತ ಮಾಡಲಿ…
  ಇದೇ ನೆಪದಲ್ಲಿ ಹೀಗೆ ನೀನೂ ಗುನುಗುನಿಸಬಹುದು..
  ದಿಲ್ ತಾರೋಂಕೊ ಜಿಸ್ ನೆ ಭೀ ಛೇಡಾ ಹೋ
  ತರಾನಾ ಐಸಾ ನಿಕಲಾ ಕೆ ಯಾರಾನಾ ಮಿಲ್ ಗಯಾ

  ಪ್ರತಿಕ್ರಿಯೆ
 3. badarinath palavalli

  ನನ್ನನ್ನು ತುಂಬಾ ಮೀಟಿ ಮೀಟಿ ಹಾಕಿದ ಬರಹವಿದು. ನಿಮ್ಮ ಆತ್ಮ ಚರಿತ್ರೆಯ ಸಾರಾಂಶದಂತಿದೆ. ಬಹು ಕಾಲ ರಿಂಗಣಿಸುತ್ತಲೇ ಇದ್ದೀತು.
  ಅಪ್ಪನ ಇರುವಿಕೆ ಸುತ್ತ ಹೆಣೆದುಕೊಂಡ ಇಲ್ಲಿನ ಪ್ರತಿಯೊಂದು ಘಟನೆಯಲ್ಲೂ ನಿಜಯತಿ ಇದೆ. ಇದು ಮನಸಿಗೆ ತಟ್ಟಿದ ಪರಿ ವಿವರಿಸಲಾರೆ!
  ನನ್ನ ತಂದೆ ತೀರಿಕೊಂಡಾಗ ನಾನು ೩ ವರ್ಷದ ಕೂಸು. ಹಾಗಾಗಿ ಅವರ ರೂಪು ದನಿ ನಡೆಗಳ ಪರಿಚಯವೇ ಇಲ್ಲ.
  “ಪಿತೃ ಶೋಕಂ ನಿರಂತರಂ”.
  ಬಲು ಬೇಗ ನಮಗೂ ನಿಮ್ಮ ಸಿತಾರ ರಸದೌತಣ ಉಣಬಡಿಸಿ.

  ಪ್ರತಿಕ್ರಿಯೆ
 4. uma prakash

  ಓದುತ್ತಾ ಓದುತ್ತಾ ಪ್ರತಿಯೊಂದು ನನ್ನೆದುರೇ ನಡೆಯುತ್ತಿದೆ ಅನ್ನೋ ಭಾಸ ಆಯಿತು; ಯಾವುದೇ ಕೃತ್ರಿಮತೆ ಇಲ್ಲದ ಸರಳ ನೈಜ್ಯ ಲೇಖನ ಮನ ಮುಟ್ಟುವಂತಿತ್ತು 🙂 ಎಷ್ಟೊಂದು ಕಷ್ಟದ ಹಾದಿಯಲ್ಲಿ ಸಾಗಿ ಬಂದಿದೀಯ ಅಂತ ಮನಸ್ಸಿಗೆ ತುಂಬ ವೇದನೆ ಆಯಿತು, ನನ್ನ ಕಣ್ಣಾಲಿಗಳಲ್ಲಿ ನೀರು ತುಂಬಿ ಕೊಂಡು ಅಕ್ಷರಗಳೆಲ್ಲ ಮಂಜು ಮಂಜಾದಂತೆ ಭಾಸವಾಯಿತು , ನೀನು ಈ ಮಟ್ಟ ತಲುಪಿದ್ದಿಯ ಅಂದ್ರೆ ಅದು ನಿನ್ನ ಸ್ವಶಕ್ತಿ ಇಂದ, ದೇವರ ಆಶಿರ್ವಾದದಿಂದ. ಇನ್ನು ಮುಂದೆ ನಿನಗಾವ ಕಷ್ಟ ಕೊಡಬೇಡ ಭಗವಂತ ಎಂದು ಆ ದೇವರನ್ನು ಬೇಡಿಕೊಳುತ್ತೇನೆ , ನಿನ್ನ ಮುಂದಿನ ಜೀವನ ಹೂವಿನ ಹಾಸಿಗೆಯಂತೆ ಇರಲಿ, ನಿನ್ನ ಗುರಿ ಮುಟ್ಟಲು ಭಗವಂತನ ಶ್ರೀ ರಕ್ಷೆ ಇರಲಿ ಎಂದು ಮನಃ ಪೂರ್ತಿ ಆಶಿಸುತ್ತೇನೆ

  ಪ್ರತಿಕ್ರಿಯೆ
 5. Prakash Srinivas

  ಮನಮೋಹಕ ಲೇಖನ !
  ನಿಜಕ್ಕೂ ಪ್ರತಿಯೊಂದು ಪದವೂ ಚೆನ್ನಾಗಿದೆ
  ಸುಂದರ ಬರವಣಿಗೆ ನಿಮ್ಮ ಶೈಲಿ ಕೂಡ ಹಿಡಿಸಿತು ಶುಭವಾಗಲಿ
  ಸುನಿಲ್ …
  ನಿಮಗೆ ಮತ್ತಷ್ಟು ಗೆಲುವಿನ ಮಾಲೆಗಳು ಸಿಗಲಿ

  ಪ್ರತಿಕ್ರಿಯೆ
 6. Ramakrishna M

  ತುಂಬ ಪ್ರಾಮಾಣಿಕ ಲೇಖನ. ಬಹಳ ಇಷ್ಟವಾಯಿತು. ಧನ್ಯವಾದಗಳು.

  ಪ್ರತಿಕ್ರಿಯೆ
 7. b.m.basheer

  ನೀವು ನುಡಿಸುವ ಸಿತಾರ್ ಅನ್ನು ಕೇಳುವ ಆಸೆಯಾಗಿದೆ ಸುನಿಲ್. ಈ ಬರಹವು ವೀಣೆಯ ತಂತಿಯಿಂದ ಹೊರಟ ನಾದದಂತೆ ಇದೆ. ಶುಭವಾಗಲಿ.

  ಪ್ರತಿಕ್ರಿಯೆ
 8. Poornima Girish

  ತು೦ಬಾ ಚೆನ್ನಾಗಿ ಎಲ್ಲರ ಪರಿಚಯ ಮಾಡಿಸಿದ್ದೀಯ? ಬರಹ ಸರಳ, ಸು೦ದರ ಮತ್ತು ಮನ ಮುಟ್ಟೋ ಹಾಗಿದೆ.. ದೇವರು ಒಳ್ಳೆಯದು ಮಾಡಲಿ..

  ಪ್ರತಿಕ್ರಿಯೆ
 9. Girish.S

  ಸುನಿಲ್ ಅವರೇ,
  ತುಂಬಾ ಚೆನ್ನಾಗಿದೆ ಲೇಖನ… ಏನಾದರು ಸಾಧಿಸಬೇಕು ಅಂತಿದ್ದರೆ ಇಂಥ ಒಂದು ಲೇಖನ ಸ್ಪೂರ್ತಿ ಆಗುತ್ತದೆ..ನಿಮ್ಮ ಸಿತಾರ ವಾದನ ಕೂಡ ಈ ಲೇಖನದಷ್ಟೇ ಚೆಂದ ಇರುತ್ತದೆ ಎಂದು ಭಾವಿಸುತ್ತೇನೆ..
  ಶುಭವಾಗಲಿ..

  ಪ್ರತಿಕ್ರಿಯೆ
 10. armanikanth

  suni,
  baraha chennaagide.sitaar banda nantara adannu tagondu mane ge baa.ninna modala kacheri namma mane li aagali..

  ಪ್ರತಿಕ್ರಿಯೆ
 11. jayashree

  Sunil, Ishtu mandiya shubhashirvadagalu nimmodanive.. jothege nanna prarthane saha.. nivu khandita bahala unnatiyanu honduttiri.. nanage a nimbikeyide.. Nimma baraha allalli kannirannu tarisidaru.. Inthaha appa igina kaladalli siguvudu ati virala anisutte.. You are blessed.. stay blessed. jay

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: