ಅಪ್ಪ ಹೇಗಿದ್ದೀರಾ?

ಜಡಿ

ಅಪ್ಪ ನೀವು ಹೋದ ಮೇಲೆ ನಾನು ಸಹ ಅಪ್ಪನಾದೆ! ಹೇಗಿದ್ದೀರಾ ಅಪ್ಪಾ? ನೀನು ಇರಬೇಕಿತ್ತಪ್ಪ, ನಾನೊಬ್ಬ ಅಪ್ಪನಾಗಿ ಹೇಗೆ ನಡೆದುಕೊಳ್ಳಬೇಕು ಎಂದು ಬೈದು ಹುಸಿಕೋಪ ಮಾಡಿಕೊಂಡು ಕಣ್ಣಲ್ಲಿಯೇ ಕತೆಯನ್ನು ಹೇಳುವುದಕ್ಕೆ ಮತ್ತು ನನ್ನ ಮಕ್ಕಳಿಗೆ ನಮ್ಮಪ್ಪ ಯಂಗಿದ್ದ ಎಂದು ತೋರಿಸುವುದಕ್ಕೆ. ಹೋಗಲಿ ಬಿಡಪ್ಪ ನೀನೇ ಹೇಳಿದಂಗೆ ಎಲ್ಲರೂ ಒಂದಲ್ಲ ಒಂದು ದಿನ ಹೋಗಲೇ ಬೇಕು, ನೀವು ಕಲಿಸಿಕೊಟ್ಟ ಇರದ-ಇರುವುಗಳ ನಡುವೆ ನಮ್ಮಲ್ಲಿರುವುದನ್ನು ಮತ್ತು ನಮ್ಮವರನ್ನು ಪ್ರೀತಿಸಿಬೇಕು ಅಂತಾ, ಅದನ್ನು ತಪ್ಪದೇ ಪಾಲಿಸುತ್ತಿದ್ದೇನೆ ಮತ್ತು ನನ್ನ ಮಕ್ಕಳಿಗೆ ಸಹ ಕಲಿಸುತ್ತಿದ್ದೇನೆ.

ಅಪ್ಪ ನಿಂಗೊತ್ತಲ್ವಾ! ನೆನಪಿದೆಯಾ? ಮಗ ಚೆನ್ನಾಗಿ ಓದಿದ್ದಾನೆ ಅವನಿಗೊಂದು ಸರ್ಕಾರಿ ಕೆಲಸವೊಂದು ಸಿಕ್ಕರೆ ಸಾಕು ಅಂತಾ ನೀನು ನಿನ್ನ ಗೆಳೆಯರ ಮುಂದೆ ಹೇಳಿಕೊಳ್ಳುತ್ತಿದುದು! ನೀನು ಹೋದ ಮಾರನೆ ವರ್ಷ ನಂಗೆ ಸರ್ಕಾರಿ ಕೆಲಸ ಸಿಕ್ತು ಅಪ್ಪ! ನಂಗೆ ಮನಸ್ಸಿಲ್ಲದಿದ್ದರು ಜೀವನಕ್ಕೆ ಭಯಪಟ್ಟು ಮತ್ತು ನನ್ನವರಿಗಾಗಿ ನನಗೆ ನಾನೇ ರಾಜಿ ಮಾಡಿಕೊಂಡು ಸರ್ಕಾರಿ ಕೆಲಸಕ್ಕೆ ಸೇರಿದೆ ಅಪ್ಪ. ಊರಲ್ಲಿ ನಮಗೆ ನಮ್ಮದು ಅಂತಾ ಯಾವುದೇ ಆಸ್ತಿ ಇಲ್ಲ! “ನನ್ನ ಮಕ್ಕಳೆ ನನಗೆ ಆಸ್ತಿ” ಎಂಬ ನಿಮ್ಮ ಡೈಲಾಗ್ ನೆನಪಾಗಿ ಎಲ್ಲಿದ್ದರೇನು ಕೈಯಲ್ಲೊಂದು ಕೆಲಸ ಇದ್ರೆ ಸಾಕು ದುಡಿದು ತಿನ್ನಬೇಕು ಮತ್ತು ನಮ್ಮ ಕೈಲಾದ್ರೆ ಇನ್ನೊಬ್ಬರಿಗೆ ಸಹಾಯ ಮಾಡಬೇಕು ಹೊರತಾಗಿ ಯಾರಿಗೂ ಕೆಟ್ಟದ್ದನ್ನು ಮಾಡಬಾರದು ಎನ್ನುವ ನಿಮ್ಮ ಮಾತನ್ನು ನೆನಪಿಟ್ಟುಕೊಂಡು.

ಅಪ್ಪ ನಿಮಗೆ ನೆನಪಿಲ್ಲ ಅನಿಸುತ್ತೆ! ನೀವು ಗುತ್ತಿಗೆ ಪಡೆದು ಮಾಡುತ್ತಿದ್ದ ಹೊಲದಲ್ಲಿ ತೊಗರಿ ಕಾಯಿಯನ್ನು ಯಾರೊ ಕಳ್ಳತನದಿಂದ ಹರಿದುಕೊಂಡು ಹೋಗುತ್ತಿದ್ದಾರೆ ಅಂತಾ ಅವ್ವ ಅಂದಾಗ, ಹೋಗಲಿ ಬಿಡು ಯಾರೊ ನಮಗಿಂತ ಬಡವರು ಹೊಟ್ಟೆಗೆ ತಿನ್ನಲು ಹರಿದುಕೊಂಡು ಹೋಗಿರುತ್ತಾರೆ ಎಂದು ನೀವು ಅವ್ವನಿಗೆ ಸಾಂತ್ವಾನ ಹೇಳಿದ್ದು. ಅದ್ಕೆ ಅವ್ವ ನಿಂಗೆ ಮಹಾರಾಜನ ತರ ಮಾತಾಡಬೇಡ ಅಂದು ಜಗಳಕ್ಕೆ ನಿಂತಿದ್ದು.

ಹಿಂಗೆ ಇನ್ನೊಂದು ಇನ್ಸಿಡೆಂಟಲ್ಲಿ ಅಣ್ಣ ಗೌಸಿ ಬಂಡೆಯ ನೀರಿನಲ್ಲಿ ಮೀನು ಸಾಕಾಣೆ ಮಾಡ್ತೀನಿ ಅಂತಾ ತನಗೊಂದು ಕೆಲಸ ಹುಡುಕಿಕೊಂಡಾಗ ಹಿಂಗೆ ಯಾರೊ ಒಬ್ಬರು ರಾತ್ರೊ ರಾತ್ರಿ ಅಣ್ಣನ ಮೀನುಗಳನ್ನು ಹಿಡಿದು ಸಂತೆಯಲ್ಲಿ ಮಾರುತ್ತಿದ್ದಾರೆ ಅಂದಾಗ ನಿಂಗೆ ಬಂದ ಕೋಪ ಮತ್ತು ಬೇಕಾದ್ರೆ ಅವರು ಕಳ್ಳತನ ಮಾಡಿದ ಮೀನುಗಳನ್ನು ತಿನ್ನಲಿ ಅದು ಬಿಟ್ಟು ವ್ಯಾಪಾರ ಮಾಡ್ತಾರೆ ಅಂದ್ರೆ ಯಂಗೆ ಅಂತಾ ಮನೆ ಮುಂದೆ ಚಿಕ್ಕ ಪಂಚಾಯ್ತಿ ಮಾಡಿದ್ದು?

ಬಾಲ್ಯದಲ್ಲಿ ನಡೆದ ಇಂತಹ ಕತೆಗಳು ಇಂದು ನನ್ನನ್ನು ಹಸಿವಿನ ಕಾರಣಕ್ಕೆ ನಡೆದ ಸಣ್ಣ ಕಳ್ಳತನಗಳು ಮತ್ತು ವ್ಯಾಪಾರ ದೃಷ್ಠಿಯಿಂದ ನಡೆದ ದೊಡ್ಡ ಕಳ್ಳತನಗಳಾವು ಎಂಬುದನ್ನು ಭಾಗ ಮಾಡಿ ನೋಡುವ ದೃಷ್ಟಿಕೋನ ನೀಡಿವೆ. ಹಸಿವಿನ ಕಾರಣದ ಸಣ್ಣ ಕಳ್ಳತನಗಳು ಬಾಲ್ಯದಲ್ಲಿ ನಾನು ಕದ್ದು ತಿಂದ ಬಾಲಲೀಲೆಗಳಷ್ಟೆ ಸುಂದರವಾಗಿ ಕಾಣಿಸುತ್ತಿವೆ ಅಪ್ಪ ನಂಗೆ.

ಅಯ್ಯೊ ನಿಂಗೊಂದು ಕತೆ ಹೇಳಲೇಬೇಕು ನಾನು! ನೀ ಹೇಳ್ತಿದ್ದಿಯಲ್ಲ ನನಗೆ ನಿಮ್ಮ ಕಾಲದ ಆಣೆ ಎಂಬ ಕಾಸಿನ ಕತೆಗಳನ್ನು, ನೆನಪಿದಿಯಾ? ನಾನು ಚಿಕ್ಕವನಿದ್ದಾಗ ನೋಡಿದ್ದು 5 ಪೈಸೆಯ ಕಾಯಿನ್, ಈಗ ಅದು ಇಲ್ಲ! ಈಗೇನಿದ್ದರೂ ಹಣ ಒಂದು ರೂಪಾಯಿಂದ ಆರಂಭವಾಗುತ್ತದೆ. ನಾನು ಚಿಕ್ಕವನಿದ್ದಾಗ ಮನೆಗೆ ಬಂದವರು ಯಾರಾದ್ರು ನಾಲ್ಕಾಣೆ ಕೊಟ್ರೆ ಹಿರಿ-ಹಿರಿ ಹಿಗ್ಗಿ ದಿನಕ್ಕೆ 5 ಪೈಸೆಯಂತೆ 5 ದಿನ ಖರ್ಚು ಮಾಡುತ್ತಿದ್ದೆ. ಈಗ ನಿನ್ನ ಮೊಮ್ಮಕ್ಕಳಿಗೆ ಯಾರಾದ್ರು ಮನೆಗೆ ಬಂದವರು ನೂರು ರೂಪಾಯಿ ಕೊಟ್ರು ಸಹ ಜಸ್ಟ್ ಹಂಡ್ರೆಡ್ ರೂಪಿಸ್ ಅಂತಾ ಮೂಗು ಮುರಿಯುತ್ತಾರೆ. ಕನಿಷ್ಟ ಅವರಿಗೆ 500 ರೂಪಾಯಿ ಅಂದ್ರೆ 5 ದಿನಕ್ಕೆ ಆಗುವ ಖರ್ಚು ಎನ್ನುತ್ತಾರೆ. ಕಾಲ ತುಂಬಾ ಬದಲಾಗಿದೆಯಪ್ಪ!

ಊರಲ್ಲಿ ನೀನು ನಮಗೆ ತಂದು ಕೊಡುತ್ತಿದ್ದ ಶೆಟ್ರು ಹೋಟೆಲ್ಲಿನ ರೂಪಾಯಿಗೆ ನಾಲ್ಕು ಮಿರ್ಚಿ ಇಂದು ಹತ್ತು ರೂಪಾಯಿಗೆ ನಾಲ್ಕು ಆಗಿದೆ. ಈಗಲೂ ಊರಿಗೆ ಹೋದಾಗ ನನ್ನ ಮಕ್ಕಳಿಗೆ ತಂದು ಕೊಡುತ್ತೇನೆ. ಶೆಟ್ರು ಹೋಟೆಲ್ಲಿನ ಮಿರ್ಚಿ ಅಂದ್ರೆ ನಿನ್ನಂಗೆ ಅವುಗಳಿಗೆ ಸಹ ತುಂಬಾ ಇಷ್ಟ.

ಅಪ್ಪ ಇಂದು ಹಣ-ಕಾಸಿನ ತೊಂದರೆ ಇಲ್ಲ ನಮಗೆ ಬಟ್ ಪ್ರೀತಿ-ವಾತ್ಸಲ್ಯಗಳ ಬಡತನ ಮತ್ತು ಮಾನವೀಯತೆಯ ದಾರಿದ್ರ್ಯ ಕಾಡುತ್ತಿದೆ ಅನಿಸುತೆ ಅಪ್ಪ! ಹಣದ ಮೌಲ್ಯ ಕುಸಿದಂತೆ ಸಂಬಂಧಗಳ ಮೌಲ್ಯ ಸಹ ಕುಸಿಯುತ್ತಿದೆ. ಬೈಕೋಬೇಡ! ಜಾಸ್ತಿ ಓದಿದ ಮಗ ದೊಡ್ಡ-ದೊಡ್ಡ ಪದಗಳನ್ನು ಬಳಸಿ ಬರಿತಿದ್ದಾನೆ ಅಂತಾ! ನಂಗೊತ್ತು ನೀನು ಸಂಬಂಧಗಳನ್ನು ಪ್ರೀತಿಸುತ್ತಿದ್ದ ಮತ್ತು ಗೌರವಿಸುತ್ತಿದ್ದ ಪರಿ.

ನೀವೂ ಹೋಗುವಾಗಲೂ ಸಹ ನಮಗೆಲ್ಲಿ ತೊಂದರೆ ಕೊಟ್ಟೆ ವಯಸ್ಸಾಗಿ ಎಂದು ಹಲುಬುತ್ತಿದ್ರಿ. ಹಂಗೇನಿಲ್ಲಪ್ಪ! ನಾವು ಚಿಕ್ಕವರಿದ್ದಾಗ ನಿಮಗೆ ಕೊಟ್ಟ ತೊಂದರೆಗಳು ನೆನಪಿಲ್ಲ. ಆದರೆ, ಇಂದು ನನ್ನ ಮಕ್ಕಳಿಂದ ಅಪ್ಪ ಎಂಬ ಪ್ರೀತಿಯ ಬೆಪ್ಪನ ಬದುಕು ಅನಾವರಣಗೊಳ್ಳುತ್ತಿದೆ.

ಮರೆತೋಗಿತ್ತು! ಸದ್ಯ ನೆನಪಾಯ್ತು ಕೇಳು. ಅವ್ವ ಬೇರೆಯವರ ಹೊಲದಲ್ಲಿ ಕೆಲಸಕ್ಕೆ ಹೋಗುವುದು ಬೇಡ ಅಂತ ನೀನು ಒಂದು ಉಡಾಳು ಎಮ್ಮೆಯನ್ನು ಕಡಿಮೆ ಕಾಸಿಗೆ ತಂದು ಅವ್ವನಿಗೆ ಕೊಡಿಸಿದ್ದೆಯಲ್ಲ, ತೇಟು ಹಂಗೆ ನಾನು ಸಹ ಎಮ್.ಎ ಮಾಡಿದ ನಿನ್ನ ಸೊಸೆಗೆ ಮತ್ತೊಂದಿಷ್ಟು ಚೆನ್ನಾಗಿ ಓದಲು ಸಹಾಯ ಮಾಡಿ ಪಿ.ಎಚ್.ಡಿ ಮಾಡಿಸಿದೆ. ಇತ್ತೀಚಿಗೆ ಅವಳಿಗೂ ಸಹ ಸರ್ಕಾರಿ ನೌಕರಿ ಸಿಕ್ತು. ಖುಷಿನಾ? ಆಗಿರ್ತೀಯಾ ಬಿಡು ನೀನು! ಖುಷಿ-ದುಃಖ ಯಾವುದನ್ನೂ ತೋರ್ಪಡಿಸಿದ ನಿನ್ನ ಗಾಂಭೀರ್ಯ ಅಲ್ಲಿ ಸಹ ಈಗಲೂ ಹಂಗೆ ಇರಬೇಕು. ಪ್ರತಿಯೊಬ್ಬರೂ ಇಂಡಿಪೆಂಡೆಂಟ್ ಆಗಿರಬೇಕು ಎನ್ನುವ ನಿನ್ನ ಥಿಯರಿಯನ್ನು ನಾನು ಅಳವಡಿಸಿಕೊಂಡಿದ್ದೇನೆ.

ನಾನು ಓದು ಮುಗಿಸಿ ಕೆಲಸಕ್ಕೆ ಸೇರಿದಾಗ ಮೊದಲ ತಿಂಗಳ ಸಂಬಳದಲ್ಲಿ ನಿಂಗೆ ಕೊಡಿಸಿದ್ದ ಮೊಬೈಲನ್ನು ನೀನು ಇಲ್ಲೆ ಬಿಟ್ಟು ಹೋಗಿದ್ದೀಯಾ! ಅದು ಸಹ ನಿನ್ನಂಗೆ ಬಹಳ ವರ್ಷಗಳ ಕಾಲ ಗಟ್ಟಿ ಮುಟ್ಟಾಗಿತ್ತು. ಇತ್ತೀಚಿಗೆ ಅದರಲ್ಲಿ ಮಾತು ಕೇಳಿಸುತ್ತಿಲ್ಲ ಮತ್ತು ಬ್ಯಾಟರಿ ಉಬ್ಬಿದೆ ಅಂತಾ ಬ್ಯಾಟರಿ ತೆಗೆದು ಹಾಕಿ ತಂಗಿಯ ಚಿಕ್ಕ ಮಗನಿಗೆ ಆಟ ಆಡಲು ಕೊಟ್ಟಿದ್ದಾರೆ ಮನೆಯಲ್ಲಿ. ಅವನು ಅದೇ ಫೋನಲ್ಲಿ ಆವಾಗೀವಾಗ ಹಲೋ ತಾತ ಅಂತಾ ತೊದೊಲು ತೊದಲಾಗಿ ಮಾತಾಡುತ್ತಾನೆ. ಇದನ್ನೆಲ್ಲ ನೋಡಿದ ಅವ್ವ ಹೇಳುತ್ತಾಳೆ ಮಕ್ಕಳು ದೇವರತ್ರ ಮಾತಾಡ್ತಾರಂತೆ..!

‍ಲೇಖಕರು Avadhi

December 17, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಂಘರ್ಷ-ಸಂಭ್ರಮ

ಸಂಘರ್ಷ-ಸಂಭ್ರಮ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಎದೆಬಿಲ್ಲೆಯೂ ಮಾತುಕತೆಯೂ…

ಎದೆಬಿಲ್ಲೆಯೂ ಮಾತುಕತೆಯೂ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್...

‘ಲೇಖ’ಕಿ ‘ಲೋಕ’ದ ಅನಾವರಣ

‘ಲೇಖ’ಕಿ ‘ಲೋಕ’ದ ಅನಾವರಣ

ಗಿರಿಜಾ ಶಾಸ್ತ್ರಿ ಕರ್ನಾಟಕ ಲೇಖಕಿಯರ ಸಂಘವು ಕೆಲವು ವರ್ಷಗಳಿಂದ ಲೇಖಕಿಯರು ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುವ 'ಲೇಖಕಿಯರ ಆತ್ಮ ಕಥೆಗಳ...

2 ಪ್ರತಿಕ್ರಿಯೆಗಳು

  1. ABHISHEK

    ಸೊಗಸಾಗಿದೆ. ಇಲ್ಲದೆಯೂ ಇದ್ದಂತೆ ಬಾವಿಸಿ ಬರೆದ ಪತ್ರ ಅವಧಿಯೆಂಬ ಅಂಚೆಯಣ್ಣ ಮೂಲಕ ನಮಗೂ ತಲುಪಿದ್ದು ಖುಷಿಯೆನಿಸಿತು. ನೋಡಲು ಅವರಿಲ್ಲದಿದ್ದರೂ ಈ ಪತ್ರ ಅವರಿಗೆ ತಲುಪಿದಂತೆ ಭಾಸವಾಗುತ್ತಿದೆ.

    ಪ್ರತಿಕ್ರಿಯೆ
  2. T S SHRAVANA KUMARI

    ಚಂದ. ತಿನ್ನಲು ಕದ್ದರೆ ತಪ್ಪಲ್ಲ, ಮಾರಲು ಕದಿಯಬಾರದು… ಎಂತಹ ಉದಾತ್ತ ಚಿಂತನೆ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: