ಮೆಹಬೂಬ್ ಮಠದ
ಕೂಲಿ ಮಾಡಲೆಂದೇ ಹುಟ್ಟಿದವನಂತೆ
ಅದಕ್ಕಿಂತ ಬೇರೆ ಯೋಚಿಸಲೇ ಇಲ್ಲ.
ಹರಿದ-ಅಂಗಿ, ಮಾಸಿದ-ಲುಂಗಿ
ಅಪ್ಪನ ಬಡತನ ಕಂಡು ಮರುಗುತ್ತಿದ್ದವು.
ಕಟ್ಟಿಗೆ ಕಡಿಯುವ ಬುಲಾವು ಬಂದರೆ
ರೊಟ್ಟಿ ಸಿಗುವ ಖುಷಿಯಲ್ಲಿ
ಸಮರಕ್ಕೆ ಸಿದ್ಧವಾಗಿ ನಿಲ್ಲುತ್ತಿದ್ದ.
ಕೊಡಲಿ ಹೆಗಲಿಗೇರಿಸಿದರೆ ಕಣ್ಣುಗಳಲ್ಲಿ ಕನಸುಗಳ ರಾಶಿ.
ನೆತ್ತಿ ಸುಡುವ ಬಿಸಿಲಿಗೇ ಸವಾಲು
ಮಸೆಯುತ್ತಿದ್ದ ಕೊಡಲಿ ಹೊಳಪಿನ ನಕ್ಷತ್ರ.
ಅಪ್ಪ ಕಡಿಯುತ್ತಿದ್ದ ಪ್ರತಿ ಕಟ್ಟಿಗೆಯ ತುಂಡುಗಳಲ್ಲಿ
ನಮ್ಮೆಲ್ಲರ ತುತ್ತುಗಳಿದ್ದವು.
ಕೊಲ್ಲುತ್ತಿದ್ದ ಹಸಿವಿಗೆ ಚಹಾ-ಚುಟ್ಟದ ಸಮಾಧಾನ
ಬರುವ ಬಿಡಿಗಾಸೂ ಖರ್ಚಾಗುವ ಭಯದಿಂದ.
ಅಪ್ಪ ತರುತ್ತಿದ್ದ ಮಿರ್ಚಿ – ಮಂಡಾಳು
ಐತ್ ವಾರದ ಬಲುದೊಡ್ಡ ಸಂಭ್ರಮ ಮನೆಯಲ್ಲಿ
ಒಣಗಿದ ರೊಟ್ಟಿ ತಿಂದ ನಾಲಿಗೆಗಳಿಗೆ.

ಅಪ್ಪನ ಹೆಗಲು ಸಿ.ಸಿ. ಟಿ.ವಿ.
ಮೇಲೆ ಕುಳಿತು ಜಾತ್ರೆ ನೋಡಲು
ಅಪ್ಪನ ಟವೆಲ್ಲು ತಿಜೋರಿ
ಗಂಟು ಬಿಚ್ಚಿದರೆ ತಿಂಡಿ-ತಿನಿಸುಗಳು.
ಮೊಹರಮ್ಮಿನಲ್ಲಿ ಅಪ್ಪ
ಕುಣಿಯುತ್ತಿದ್ದರೆ
ಮೆರವಣಿಗೆಯ ದಾರಿ
ಆತನೊಂದಿಗೆ ಹೆಜ್ಜೆ ಹಾಕುತ್ತಿತ್ತು.
ಚಾಕರಿ ಮಾಡಿಯಾದರೂ
ಮಗನಿಗೆ ನೌಕರಿ ಕೊಡಿಸುವ ಇರಾದೆ.
ನೌಕರಿಯೇನೋ ಬಂತು
ಅಪ್ಪ ಇರಲಿಲ್ಲ.
ನನ್ನ ನೌಕರಿ ಮತ್ತು ಆತನ ಕೊಡಲಿ
ಇಂದಿಗೂ ಬಿದ್ದಿವೆ ಅನಾಥವಾಗಿ.
ಮೆಹಬೂಬ್…… ತುಂಬಾ ಚೆನ್ನಾಗಿದೆ…. ಅಪ್ಪನ ನೆನಪಲ್ಲಿ ಬರೆದದ್ದು.