‘ಅಭಯಾರಣ್ಯ’ದಲ್ಲಿ ದೀವಟಿಗೆ ನೆನಪು

 

-ಜಿ ಎನ್ ಅಶೋಕವರ್ಧನ

subrahmnya chittani ARJUNA

ಝಗಮಗಿಸುವ ವಿದ್ಯುದ್ದೀಪಾಲಂಕೃತ’ ಎನ್ನುವುದು ಹೆಚ್ಚುಗಾರಿಕೆಯಾಗಿದ್ದ ಕಾಲದಲ್ಲಿ ಯಕ್ಷವೀಕ್ಷಣೆಗೆ ಬಂದವನು ನಾನು. ಎತ್ತರಿಸಿದ ಚೌಕಾಕಾರದ ವೇದಿಕೆಯ ಮೂರೂ ಬದಿಗೆ ಕಂಬದ ಮೇಲಿನುದ್ದಕ್ಕೂ ಮೇಲಿನಡ್ಡಕ್ಕೂ ಬಿಗಿದ ಟ್ಯೂಬ್ ಲೈಟುಗಳು ಏಕಕಾಲಕ್ಕೆ ರಂಗವನ್ನೂ ನಮ್ಮ ಕಣ್ಣನ್ನೂ ತುಂಬುತ್ತಿದ್ದವು. ರಂಗದ ಎದುರಿನ ಭಾರೀ ಬುರುಡೆಯ ಬಲ್ಬ್‌ಗಳು

ನಮ್ಮತ್ತ ಮರೆಕಟ್ಟಿಕೊಂಡರೂ ರಂಗಕ್ರಿಯೆಯನ್ನು ಹೆಚ್ಚಿನ ಪ್ರಖರತೆಯಲ್ಲಿ, ಸೂಕ್ಷ್ಮದಲ್ಲಿ ತೋರಿಸುತ್ತಿದ್ದವು. ಮುಂದುವರಿದ ದಿನಗಳಲ್ಲಿ ಈ ದೀಪಗಳಲ್ಲಿ ಹಲವು ತೆರನ ವರ್ಣ ಸಂಯೋಜನೆಗಳು, ಆರಿಸಿ ಬೆಳಗಿಸುವ ಚಮತ್ಕಾರಗಳು ಹೆಚ್ಚಿನ ರಸಪೋಷಣೆಗೆಂದೇ ಬಂದಂತಿತ್ತು. [ಬ್ರಹ್ಮಕಪಾಲ ಪ್ರಸಂಗದಲ್ಲಿ ಬಿಕ್ಷೆಬೇಡುವ ಶಿವನಿಗೆ ಪ್ರೇಕ್ಷಕ-ಭಕ್ತರು (ಪ್ರದರ್ಶನ ಚಟದವರು?) ಎಸೆದ ನಾಣ್ಯ ಬಲ್ಬ್ ಒಡೆದಾಗ ಪಾತ್ರಧಾರಿಯ ಲಾಭದಲ್ಲಿ ಮೇಳದ ಯಜಮಾನನ ಕಷ್ಟ, ನಷ್ಟ ನನಗೂ ತಟ್ಟಿತ್ತು.] ಬರಬರುತ್ತ ಪ್ರೇಕ್ಷಕನ ಕಣ್ಣು ಕುಕ್ಕುವ ದೀಪಗಳು ಬಹುತೇಕ ಮರೆಸೇರಿದರೂ ರಂಗದ ಬೆಳಕಿನ ಹಬ್ಬ ನಡೆದೇ ಇತ್ತು.

ರಾಘವ ನಂಬಿಯಾರ್ ಪರಿಚಯ ನನಗೆ ಕೇವಲ ಉದಯವಾಣಿಯ ಪತ್ರಕರ್ತ ಎಂಬ ಮಟ್ಟದ್ದಲ್ಲ. ಧರ್ಮಸ್ಥಳ ಮೇಳದ ಯಶಸ್ವೀ ಪ್ರಸಂಗಕರ್ತರಲ್ಲಿ ಒಬ್ಬರು ಎಂಬಲ್ಲಿಂದ ತೊಡಗಿ ಯಕ್ಷಗಾನದ ಶುದ್ಧಾಶುದ್ಧ ನಿರ್ಣಯಕ್ಕೆ ಇವರೂ ಒಂದು ನೆಚ್ಚಬಲ್ಲ ಒರೆಗಲ್ಲು ಎಂಬಲ್ಲಿವರೆಗೆ ಬೆಳೆದಿತ್ತು. ನಂಬಿಯಾರ್ ತನ್ನ ಕೆಲವು ಯಕ್ಷ ಲೇಖನಗಳ ಸಂಕಲನ – ತಿಳಿನೋಟ, ಹೊರತರಲು ಉಡುಪಿಯಲ್ಲಿ ಒಂ

ದು ವಿಶಿಷ್ಟ ಸಭೆ ನಡೆಸಿದರು. ಅದು ಯಕ್ಷಗಾನ ಮಾತ್ರವಲ್ಲದೆ ಹಲವು ರಂಗಶಿಸ್ತಿನ ಕಲಾವಿದರ, ವಿಮರ್ಶಕರ ಕೂಟ. ಪುಸ್ತಕದ ‘ಯಜಮಾನ’ ಘನಪೃಷ್ಟರ ದಾಕ್ಷಿಣ್ಯದಲ್ಲಿ ಬೆಳಗುವ ಸನ್ನಿವೇಶವೇ ಇರಲಿಲ್ಲ. ಬೆಳಗ್ಗಿನ ಕಾಫಿ ತಿಂಡಿಯಿಂದ ತೊಡಗಿ ಮಧ್ಯಾಹ್ನದ ಊಟದವರೆಗಿನ ವ್ಯವಸ್ಥೆ ಮಾಡಿ ಪುಸ್ತಕವನ್ನು ಇಡಿಯಾಗಿಯೂ ಕೆಲವು ವಿಚಾರಧಾರೆಗಳ ಮೂಲವಾಗಿಯೂ ಹಲವು ವಿದ್ವಾಂಸರು ವಿಮರ್ಶಿಸಿದರು. ಅದರೆಲ್ಲ ವಿವರಗಳನ್ನು ಇಂದು ನೆನಪಿನಿಂದ ಹೆಕ್ಕುವ ಪ್ರಕೃತಿ ನನ್ನದಲ್ಲ. ಆದರೆ ಯಕ್ಷಗಾನ ಕಾಲದ ಜತೆ ಕಾಲಿಡು

ವುದೆಂದರೆ ಆಧುನಿಕ ಸರಕುಗಳನ್ನು ಕುರುಡಾಗಿ ಹೇರುವುದು ಅಲ್ಲ ಎಂಬ ದಿವ್ಯ ಸತ್ಯ ಮಾತ್ರ ನನ್ನ ಅರಿವಿಗೆ ಬಂತು, ಅಚ್ಚಳಿಯದೆ ಉಳಿದಿದೆ. ಜಾನಪದದೊಳಗಿನ ಶಾಸ್ತ್ರ ಗಟ್ಟಿಯಿದೆ, ಅಭಿವೃದ್ಧಿಯ ಬೆಳಕು ತೋರುವವರಿಗೆ ಅರಿವಿನ ಕೊರತೆಯಿ

ದೆ ಎನ್ನುವುದು ಸ್ಪಷ್ಟವಾದಾಗ ಶಾಕ್ ಹೊಡೆದಂತೇ ಆಯ್ತು. ಬೆಳಕಿನ ಪ್ರಖರತೆಯೊಡನೆ ಉಡುಪು ತೊಡಪುಗಳ (ಆಹಾರ್ಯ) ಬದಲಾವಣೆ ಮೇಳೈಸಿ ಕಲೆ ತೀವ್ರ ಇಳಿದಾರಿಯಲ್ಲಿ ಸಾಗಿದೆ. ರಾತ್ರಿಯಿಡೀ ಎವೆಯಿಕ್ಕದ ಪ್ರೇಕ್ಷಕ ಅರಿವಿಲ್ಲದೆ ತಪ್ಪು ಸವಾರಿಯಲ್ಲಿ ಬಳಲುತ್ತಿದ್ದಾನೆ. ನಿರಂತರ ಏಕರೂಪದ ಅದರಲ್ಲೂ ಪ್ರಖರ ಬೆಳಕು, ಅದಕ್ಕೊಪ್ಪುವ ಮುಖವರ್ಣಿಕೆಯ ಬಣ್ಣ ಮತ್ತು ಉಡುಪು ತೊಡಪುಗಳ ಬದಲಾವಣೆಗಳನ್ನು ನಂಬಿಯಾರ್ ಸತರ್ಕ, ಸುವಿಸ್ತರವಾಗಿ ಖಂಡಿಸುವುದರೊಡನೆ ‘ಏನೋ ಸರಿಯಿಲ್ಲ’ ಎಂದು ತಹತಹಿಸುವ ಮನಗಳಿಗೆ ಆಶಾದೀವಿಗೆ ಬೆಳಗಿದರು. ಅಲ್ಲಿಗೇ ನಿಲ್ಲದೆ ಹವ್ಯಾಸಿಗಳನ್ನು ಕಟ್ಟಿಕೊಂಡು (ಯಕ್ಷಕೌಮುದಿ) ಆಡಿದ್ದನ್ನು ಮಾಡಿಯೂ ತೋರಲು ಹೆಣಗಿದ ಫಲವೇ ದೀವಟಿಗೆಯ ಆಟ.

ರಾಘವ ನಂಬಿಯಾರ್ ಒಮ್ಮೆ ತಮ್ಮ ದೀವಟಿಗೆ ಪ್ರಯೋಗ ನೋಡಲು ಪಡುಬಿದ್ರೆಗೆ ಆಹ್ವಾನಿಸಿದರು. ಹವ್ಯಾಸಿಗಳ ಕೂಟದ ಅಶಿಸ್ತಿನಲ್ಲಿ ನನ್ನ ಸಮಯದ ಮಿತಿ ಮೀರಿ ಬರಿದೇ ಮರಳಿದೆ. ಮುಂದೆ ಮಂಗಳೂರು ವಿವಿನಿಲಯದ ಯಕ್ಷಗಾನ ಭವನದ ಅಂಗಳದಲ್ಲಿ ಮೊದಲ ಬಾರಿಗೆ ನೋಡಿದೆ. ಆದರೆ ಅಲ್ಲಿ ಪರಿಸರದ ಕೊರತೆ ಕಾಡುವುದನ್ನು ಕಂಡು ನನ್ನ ‘ಅಭಯಾರಣ್ಯ’ದೊಳಗೊಂದು ಪ್ರಯೋಗ ಮಾಡಲು ನಾನು ವೀಳ್ಯ ಕೊಟ್ಟೇಬಿಟ್ಟೆ. ಅದೇ ಆವೇಶದಲ್ಲಿ ರಾಘವ ನಂಬಿಯಾರ್ ಕಷ್ಟವೋ ನಷ್ಟವೋ ಲೆಕ್ಕಿಸದೆ, ತಂಡ ಮತ್ತು ಪ್ರಯೋಗದ ಬಿಡಿ ವಿವರಗಳ ಗೋಜಲು ಬಿಡಿಸುವ ಕಾರ್ಯಭಾರದೊಡನೆ, ನಾಮಕಾವಸ್ಥೆ ಸಗಟು ಸಂಭಾವನೆಗೆ ಪ್ರದರ್ಶನ ನೀಡಲು ಒಪ್ಪಿಕೊಂಡರು. ಸಹಾಯಕ್ಕೆ ಸರಕಾರೀ ಇಲಾಖೆಗಳ ಎಡತಾಕುವುದು, ಆರ್ಥಿಕ ಪ್ರಾಯೋಜಕರನ್ನು ಒಪ್ಪಿಕೊಳ್ಳುವುದು ನನ್ನ ಜಾಯಮಾನದಲ್ಲೇ ಇರಲಿಲ್ಲ. ತೋರಿಕೆಂii ಲಕ್ಷ್ಯವೊಂದನ್ನು ಇಟ್ಟು ಪರೋಕ್ಷ ಆದಾಯಮೂಲಗಳನ್ನು ಶೋಧಿಸುವುದಂತೂ ನಾನು ಕಾಯಾ ವಾಚಾ ಮನಸಾ ವಿರೋಧಿಸಿದವನು. (ಕರ್ಣನ ಮಾತು ‘ಎರಡು ಮನ, ಎರಡು ನಾಲಗೆ ಎಂದು ಕಂಡೈ’) ನನ್ನ ಆರ್ಥಿಕ ಮಿತಿ, ಸಂಘಟನೆಯ ಶಕ್ತಿಗಳ ಅರಿವಿಲ್ಲದೆ ಧುಮುಕಿದ್ದೇ ಆದರೂ ಅವನ್ನು ಸಂಚಯಿಸಲು ಸಾಕಷ್ಟು ಸಮಯವಿತ್ತು ಎನ್ನುವುದೊಂದೇ ಸಮಾಧಾನದ ಸಂಗತಿ.

ಜುಲೈ ತಿಂಗಳ ಜಿಟಿಜಿಟಿ ಮಳೆಯಲ್ಲೊಂದು ಆದಿತ್ಯವಾರ ನಾನು ದೇವಕಿ ಅಭಯರು ‘ಅಭಯಾರಣ್ಯ’ದಲ್ಲಿ ನೈಜಾರ್ಥದಲ್ಲಿ ಮಣ್ಣಿನ ಮಕ್ಕಳಾಗಿದ್ದಾಗ ರಾಘವ ನಂಬಿಯಾರ್ ಬಂದರು. ಒತ್ತಿನ (ನನ್ನ ಚಿಕ್ಕಮ್ಮನ ಕೃಷಿಭೂಮಿ) ಎಡೆಂಬಳೆಯ ಪದವು (ಮುಳಿ ಹುಲ್ಲಷ್ಟೇ ಇರಬಹುದಾದ ಗುಡ್ಡೆಯ ಬೋಳು ನೆತ್ತಿ) ಒಂದನ್ನು ಆಯ್ದು, ರಂಗ ಚೌಕಿ ಇತ್ಯಾದಿ ಆಯ ಅಳತೆಗಳನ್ನು ಸೂಚಿಸಿದರು. ಕನಿಷ್ಠ ಐದು ತಿಂಗಳ ಬಿಡುವಿಟ್ಟುಕೊಂಡು ನವೆಂಬರಿನ ಒಂದು ದಿನವನ್ನು ಪ್ರದರ್ಶನಕ್ಕೆ ನಿಷ್ಕರ್ಷಿಸಿ ನಿರ್ಗಮಿಸಿದರು. ನನ್ನದೇನಿದ್ದರೂ ಅಂತಾರಾಷ್ಟ್ರೀಯ ಕ್ರಿಯಾಸೂಚಿಗಳನ್ನು ರುಜು ಮಾಡುವ ಕೋಟುಬೂಟಿನವರ ಸ್ಥಾನ! ಕ್ರಿಯಾ ಮುಖದಲ್ಲಿ ಚಿಕ್ಕಮ್ಮನ ಮಗ ಸತ್ಯನಾರಾಯಣ (ಉರುಫ್ ಸತ್ಯ ಉರುಫ್ ಪಾಪಣ್ಣ, ನನಗೆ ಸಂಬಂಧದಲ್ಲ್ನಿ ತಮ್ಮ) ಅವನ ತಂದೆ (ನನ್ನ ಚಿಕ್ಕಪ್ಪ) ಗೋಪಾಲ ಭಟ್ಟರ ಅನುಮೋದನೆಯೊಡನೆ ನಡೆಸಿಕೊಡುವವನಿದ್ದ.

ಮಳೆಗಾಲ ಮುಗಿದು ಚಳಿ ನಡೆಯುವ ಕಾಲದಲ್ಲಿ ಮುಳಿ ಹೆರೆದು, ಪೊದರು ಸವರಿ ಪ್ರೇಕ್ಷಾಂಗಣ, ವೇದಿಕೆ ಮತ್ತು ಚೌಕಿಯ ಜಾಗಗಳನ್ನು ತೆರವುಗೊಳಿಸುವಲ್ಲಿಂದ ತೊಡಗಿ ಪ್ರದರ್ಶನದ ದಿನದವರೆಗೂ ವ್ಯವಸ್ಥಿತವಾಗಿ ಕೆಲಸ ಸಾಗಿತು. ಹಾಳುಬಿದ್ದ ಕಲ್ಪಣೆಗಳಿಗೆ ರಕ್ಷಣಾ ಬೇಲಿ ಕಟ್ಟಿ (ಆಟದ ದಿನ ಕತ್ತಲಲ್ಲಿ ಯಾರಾದರೂ ಬೀಳದಂತೆ) ನೆಲದಲ್ಲಿ ಕೂರುವವರಿಗೆ ಕಿರಿಕಿರಿಯುಂಟು ಮಾಡಬಹುದಾದ ಚರಳುಗಲ್ಲುಗಳನ್ನು ಹೆಕ್ಕಿಸುವ ಸೂಕ್ಷ್ಮದವರೆಗೂ ಸತ್ಯ ತಲೆ ಓಡಿಸಿದ. ವೇದಿಕೆಯ ನೆಲಕ್ಕೆ ಒಂದು ಮುರಕಲ್ಲಿನೆತ್ತರಕ್ಕೆ ಮಿದುಮಣ್ಣು ತುಂಬಿ ಬಿಗಿಗೊಳಿಸಿ, ಸೆಗಣಿ ಸಾರಿಸಿದ. ಮೂಲೆಗಳೆಗೆ ನಾಲ್ಕು ಅಡಿಕೆ ಕಂಬ ನೆಟ್ಟು, ಅವಕ್ಕೆಲ್ಲ ಮಾವಿನ ಸೊಪ್ಪಿನ ಕುಚ್ಚು ಕಟ್ಟಿ, ರಂಗದ ನೆತ್ತಿಗೊಂದು ಬಿಳಿ ಬಟ್ಟೆ ಬಿಗಿದು ಮುಗಿಸಿತು. ಅದರ ಹಿತ್ತಿಲಿನಲ್ಲೇ ಚೌಕಿ – ವೇಷ ಕಟ್ಟುವ ಅಂಕಣ. ನನ್ನ ಅಂಗಡಿಯಲ್ಲಿ ಧಾರಾಳ ಬರುವ ಬಿಳಿ ಪ್ಲ್ಯಾಸ್ಟಿಕ್ ನೇಯ್ಗೆಯ ಗೋಣಿಯನ್ನು ಬಿಡಿಸಿ, ಜೋಡಿಸಿ ಮರೆ ಕಟ್ಟಿದೆವು.ಮತ್ತಿಂಥದ್ದೇ ಜೋಪಡಿ ವ್ಯವಸ್ಥೆ ಕ್ಯಾಂಟೀನಿಗೂ ಮಾಡಿದ್ದೆವು

ಪೂರ್ಣ ಓದಿಗೆ ಭೇಟಿ ಕೊಡಿ: ಆರೋಹಣ

‍ಲೇಖಕರು avadhi

November 7, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This