ಅಭೀ ಜಿಂದಾ ಹೆ!

‘ಸಿರಿ’ ಬಂದ ಕಾಲಕ್ಕೆ…

-ಮೃಗನಯನಿ

 

ಢಮಾರ್! ಢಮಾರ್! ಢಮಾರ್!
 
ಒಂದೇ ಕ್ಷಣದಲ್ಲಿ ಎಲ್ಲಾ ಅಲ್ಲೋಲ ಕಲ್ಲೋಲ! ಮೈ ಸುಟ್ಟು ಹೋಗುತ್ತಿದೆ, ಉಸಿರಾಡಲೂ ಆಗುತ್ತಿಲ್ಲ.. ಏನಾಯಿತನ್ನುವುದೂ ಗೊತ್ತಿಲ್ಲ.. ಉರಿ ಉರಿ. ಉರಿಗೆ ಜಿನುಗಿಹೋಗುತ್ತಿದ್ದೇನೆ. ಸಾಯುವುದೆಂದರೆ ಜಿನುಗಿಹೋಗುವುದಾ? ಚಿಕ್ಕಪ್ಪ ನೆನಪಾಗುತ್ತಿದ್ದಾರೆ… ನನ್ನ ಕಷ್ಟಗಳಲ್ಲೆಲ್ಲಾ ಜೊತೆಯಾಗಿದ್ದಾರೆ, ನನ್ನನ್ನ ಸಾಯಲು ಬಿಡುವುದಿಲ್ಲ ಚಿಕ್ಕಪ್ಪ. ನನಗೆ ಯಾವಾಗಲೂ ಬೀಳುತ್ತಿದ್ದ ಕನಸು ಸುಳ್ಳಾಗಿದೆ. ಯಾರೋ ಅಟ್ಟಿಸಿಕೊಂಡು ಬರುತ್ತಿದ್ದರು ಅಥವಾ ನಾನೇ ಸುಮ್ಮನೆ ಓಡುತ್ತಿದ್ದೆ ತಪ್ಪಿಸಿಕೊಳ್ಳಲು.. ಯಾವುದರಿಂದ, ಯಾರಿಂದ, ಗೊತ್ತಿಲ್ಲ? ಓಡುತ್ತಿದ್ದೆ.. ಎಲ್ಲಿ? ಅದೂ ಗೊತ್ತಿಲ್ಲ.. ನಮ್ಮೂರಂತೂ ಅಲ್ಲ. ಬಿರು ಬಿಸಿಲು, ಬಿರುಕು ಬಿರುಕು ನೆಲ, ಓಡುತ್ತಾ- ಓಡುತ್ತಾ ಬಾಯಿ ತೆರೆದುಕೊಂಡ ದೊಡ್ಡ ಬಾವಿಗೆ ಬಿದ್ದೇ ಬಿಟ್ಟೆ.. ನಿದ್ದೆಯಲ್ಲೇ ಬೆಚ್ಚಿ ಬೀಳುತ್ತಿದ್ದೆ. ಬಹಳ ಸಾರಿ ಆ ಕನಸೇ ಬಿದ್ದಿದ್ದರಿಂದ ನನ್ನ ಸಾವು ಬಾವಿಯಲ್ಲೇ ಅಂದುಕೊಂಡಿದ್ದೆ.. ಆದರೆ? ಉಹು ಅಸಾಧ್ಯ ಉರಿ..
 
‘ಗಂಗೆ ಬಾರೆ ಗೌರಿ ಬಾರೆ ತುಂಗ ಭದ್ರೆ ತಾಯಿ ಬಾರೆ..’ ಎಂದು ಅಮ್ಮ ರಾಗವಾಗಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿರುತ್ತಿರಬಹುದು ಈಗ… ಮಕ್ಕಳಿಗೆಲ್ಲಾ ಇಷ್ಟವಾಗುವ ಹಾಗೆ. ಅಪ್ಪ ತೋಟದಲ್ಲಿ ಕಳೆ ಕೀಳಿಸುತ್ತಿರಬಹುದು. ಶ್ರೀವತ್ಸನ ಬಗ್ಗೆ ಅಪ್ಪನಿಗೆ ಹೇಳಬೇಕಾದ ಪ್ರಸಂಗವೇ ತಪ್ಪಿಹೋಯಿತು. ಅವನದೇ ಫೋನಿರಬೇಕು ತೆಗೆದುಕೊಳ್ಳಲೂ ಶಕ್ತಿಯಿಲ್ಲ.. ದಿನವೂ ಅವನು ಇದೇಹೊತ್ತಿಗಲ್ಲವೆ ಕಾಲ್ ಮಾಡುವುದು? ಅಯ್ಯೋ ಬಟ್ಟೆ ಚರ್ಮಗಳಿಗೆ ವ್ಯತ್ಯಾಸವಿಲ್ಲದಂತೆ ಒಂದಕ್ಕೊಂದು ಅಂಟಿಕೊಂಡುಬಿಟ್ಟಿವೆ … ಸ್ಸ್ಸ್.. ಆಹ್..

‘ಎ ವೆಡ್ನಸ್ ಡೇ’ ಚನ್ನಾಗಿದೆಯೆಂದು ನಾನು, ‘ಆಮಿರ್’ ಚನ್ನಾಗಿದೆಯೆಂದು ಅವನು ಸಿನೆಮಾದ ಕಥೆ, ಸಂಭಾಷಣೆ, ಆಕ್ಟಿಂಗು ನಿರ್ದೇಶನದ ಬಗ್ಗೆ ಗಂಟೆಗಟ್ಟಲೆ ಚರ್ಚಿಸಿದ್ದೆವಲ್ಲ.. ನಾವೆಂದೂ ಅಂಥಹ ದಾಳಿಗೆ ತುತ್ತಾಗುವುದೇ ಇಲ್ಲವೆನ್ನುವ ಥರ… ಅದರ ಬಗೆಗೊಂದು ವಿಮರ್ಶೆ ಬೇರೆ ಬರೆದಿದ್ದೆ. ‘ಉಹು ಇಂಥದ್ದು ಉಪಯೋಗ ಇಲ್ಲ. ಕಾಮನ್ ಮ್ಯಾನ್ ಹೇಗೆ ಡಿಸ್ಟರ್ಬ್ ಆಗಿದ್ದಾನೆ ಅಂತ ಬರಿ. ಈ ಸಿನಿಮಾಗಳನ್ನ ಹಿನ್ನಲೆಯಾಗಿ ಇಟ್ಟುಕೋ. Terrorism is a burning issue today.. Use it, make a story.’  ಎಡಿಟರ್ ಮುಂದೆ ತಲೆಯಾಡಿಸಿ ಬಂದಿದ್ದೆ. ಹೇಗೆ ಸೆಮಿ ಅರ್ಬನ್ ಮತ್ತು ರೂರಲ್ ಪ್ರದೇಶದಲ್ಲಿ ಓದಿಕೊಂಡು ಡಾಕ್ಟರ್ಸ್ ಇಂಜಿನಿಯರ್ಸ್, ಆರ್ಕಟೆಕ್ತ್ಸ್, ರೇಡಿಯೋ ಜಾಕೀಸ್ ಆಗಿ ಕಾಸ್ಮಾಪಾಲಿಟನ್ ಪ್ರದೇಶದಲ್ಲಿ ದುಡಿಯುತ್ತಿರುವ ಯುವಕ ಯುವತಿಯರು, ಬಾಂಬ್ ದಾಳಿಗಳಿಗೆ ಸಿಲುಕಿ ಸತ್ತು ದೇಹವೂ ಸಿಗದಂತೆ ಆವಿಯಾಗಿಹೋಗುತ್ತಿದ್ದಾರೆ ಅಥವಾ ದಿನವೂ ಸಾವಿನ ಭಯ ಹೊತ್ತೇ ತಿರುಗಾಡುತ್ತಿದ್ದಾರೆ… ಊರಲ್ಲಿರುವ ಅಪ್ಪ ಅಮ್ಮಂದಿರು ಎಲ್ಲಿ ಮಕ್ಕಳ ಸತ್ತ ಸುದ್ದಿ ಬರುತ್ತೋ ಎಂದು ಉಸಿರು ಬಿಗಿಹಿಡಿದು ಕೂತಿರುತ್ತಾರೆ.. ಇದಕ್ಕೆಲ್ಲಾ ಪರಿಹಾರ ಏನು? ಯಾರ ತಪ್ಪಿಗೆ ಯಾರಿಗೆ ಶಿಕ್ಷೆ? ಇನ್ನೂ ಏನೇನೋ ನೆನಪಾಗುತ್ತಿಲ್ಲ… ಸ್ವಲ್ಪ ಓವರ್ ಎಮೋಶನಲ್ ಆಯ್ತು ಅಂದಿದ್ದ ಶ್ರೀವತ್ಸ. ಒಬ್ಬೊಬ್ಬರನ್ನಾಗಿ ಎಲ್ಲರನ್ನೂ ಸಾಗಿಸುತ್ತಿದ್ದಾರೆ.. ನಾನು ಬದುಕಿದ್ದೇನೆಂದು ಇವರಿಗೆ ಗೊತ್ತಾಗುತ್ತೋ ಇಲ್ಲವೋ? ಒಹೋ ಇವನ್ಯಾರು? ಹೆಸರೇನು ಕೇಳಬೇಕು? ಅಯ್ಯೋ ಮಾತೇ ಆಡಲು ಆಗುತ್ತಿಲ್ಲವಲ್ಲ. ಹಿಮಾಂಷುವೂ ಹೀಗೇ ಇದ್ದ ಈಗ ಎಲ್ಲಿದ್ದಾನೋ? ಮೇಘಾಲಯದ ಹುಡುಗನಿರಬೇಕು.
 
ಸೈಕಲಾಜಿಕಲಿ ಸ್ಪೀಕಿಂಗ್ ಈ ಟೆರರಿಸ್ಟ್ ಆಕ್ಟಿವಿಟೀಸ್ ಎಲ್ಲ displacement of anger ನೋಡು ಈ ಭಯೊತ್ಪಾದಕರಿಗೆ ನಮ್ಮ ಅಮರ್ ಜವಾನ್ ಜೊತೆ ಹೋರಾಡಿ ಗೆಲ್ಲಕ್ಕಾಗಲ್ಲ, ಜಮ್ಮು ಕಾಶ್ಮೀರನ ಪಡೆಯೋಕ್ಕಾಗಲ್ಲ .ಅದಕ್ಕೆ ವೀಕಾಗಿರೋ, ಹಾರ್ಮ್ಲೆಸ್ ಆಗಿರೋ, ಸುಲಭದಲ್ಲಿ ಸಿಕ್ಕಿಹಾಕಿಕೊಳ್ಳೋ ಜನಸಾಮಾನ್ಯರ ಮೇಲೆ ದಾಳಿ ಮಾಡ್ತಾರೆ, ಅವ್ರಿಗೆ ಹರ್ಟ್ ಮಾಡ್ತಾರೆ. ಇದು ಹೇಗೆ ಅಂದ್ರೆ ಚಿಕ್ಕವಯಸ್ಸಿನಲ್ಲಿ ನನ್ನ ಕಾಸ್ಮೇಟ್ ಒಬ್ಬ ಇದ್ದ. ಟೀಚರ್ ಅವ್ನಿಗೆ ಹೊಡ್ದಾಗ್ಲೆಲ್ಲಾ ಅವ್ನು ಅವ್ರ ಮನೆ ಬೆಕ್ಕಿಗೆ ಹೊಡೆಯೋನು. ಟೀಚರ್ಗೆ ವಾಪಸ್ ಹೊಡೆಯಕ್ಕಾಗಲ್ಲ. ಆದ್ರೆ ಸಿಟ್ಟನ್ನ ಯಾರಮೇಲಾದರೂ ತೀರಿಸ್ಕೊಬೇಕಲ್ಲ ಅದಕ್ಕೆ ಪಾಪದ ಬೆಕ್ಕಿಗೆ ಹಿಂಸೆ ಮಾಡೋದು. ಇದಕ್ಕೆ ‘ಡಿಸ್ಪ್ಲೇಸ್ಮೆಂಟ್’ ಅಂತ ಕರೀತಿವಿ. ಟೆರರಿಸಂ ಕೂಡಾ ಇಂಥದ್ದೇ ಅಂದಿದ್ದರು ಅತ್ತಿಗೆ. ಅಂದರೆ ಬೆಕ್ಕು ಹುಲಿಯಾಗಬೇಕಂತ ಹೇಳಿದ್ದರಾ? ಈ ಹುಡುಗ ಕೂಗುತ್ತಿದ್ದಾನೆ ‘ಏ ಲಡ್ಕಿ ಅಭೀ ಜಿಂದಾ ಹೆ! ಜಲ್ದಿ ಜಲ್ದಿ ಹಾಸ್ಪಿಟಲ್ ಲೇಕೆ ಜಾಒ ಇಸ್ಕೊ…’ ಹಾ ಹಾ ಇಧರ್ ಪಕ್ಡೋ… ಪೂರಾ ಜಲ್ಗಯೀ ಹೈ..
 
ಡೆಲ್ಲೀಲಿ ಡಿಫೆನ್ಸ್ ಕರೆಸ್ಪಾಂಡೆಂಸ್ ಕೋರ್ಸ್ ಅಂತ ಮಾಡ್ತಿದಾರೆ. ಇಂಡಿಯನ್ ಆರ್ಮಿ ಬಗ್ಗೆ, ಅವರ ಎಕ್ವಿಪ್ಮೆಂಟುಗಳ ಬಗ್ಗೆ ತಿಳಿಸಿ ಕೊಡ್ತಾರೆ. ನಿಮ್ಗೆ ಇಂಟ್ರೆಸ್ಟ್ ಇದ್ರೆ ಯು ಕ್ಯನ್ ಗೊ ವಿಥ್ ರಘು. ಎಡಿಟರ್ ಹೇಳಿದಾಗ ಎಷ್ಟು ಖುಶಿಯಲ್ಲಿ ಹೊರಟಿದ್ದೆ. ತಾಜ್ ಮಹಲ್ ನೋಡಬಹುದೆಂಬ ಕಲ್ಪನೆಯೇ ಮತ್ತಷ್ಟು ಖುಷಿ ಕೊಟ್ಟಿತ್ತು. ಅಪ್ಪ ಅಮ್ಮ ಬಂದು ಬಿಟ್ಟಿದ್ದಾರೆ, ಓ ಶ್ರೀವತ್ಸಾ?? ಅಪ್ಪನಿಗೆ ಗೊತ್ತಾಗಿಹೊಗಿತ್ತಾ?.. ಇವನ್ಯಾಕೆ ಹೀಗೆ ಕೂತಿದಾನೆ? ಅಮ್ಮನೂ ಬಿಕ್ಕಳಿಸುತ್ತಿದ್ದಾಳಲ್ಲ.. ನನಗೇಕೆ ನೋವೇ ಆಗುತ್ತಿಲ್ಲ? ಗಂಗೆ ಬಾರೆ ಗೌರಿ ಬಾರೆ, ವೆಡ್ನೆಸ್ ಡೆ, ಬೆಕ್ಕು-ಹುಲಿ, ತಾಜ್ ಮಹಲ್, ಚಿಕ್ಕಪ್ಪಾ…

‍ಲೇಖಕರು avadhi

November 4, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

 1. JOGI

  ಚಿಕ್ಕದಾಗಿ ಚೊಕ್ಕವಾಗಿ ಹೇಳುವ ಕತೆ ಇದು. ತುಂಬಾ ಇಷ್ಟವಾಯಿತು. ಸಾದತ್ ಹಸನ್ ಮಾಂಟೋ ಕತೆಗಳನ್ನು ಓದಿ. ಅವನೂ ಹೀಗೆ ಹೇಳಿಯೂ ಹೇಳದಂತೆ, ಹೇಳದೆಯೂ ಹೇಳುವಂತೆ ಹೇಳಲು ಯತ್ನಿಸುತ್ತಿದ್ದ.
  ಕತೆಗಳಲ್ಲಿ ಎಲ್ಲರಿಗೂ ಗೊತ್ತಿರುವ, ಎಲ್ಲರೂ ಆಡುವ ಮಾತುಗಳನ್ನು ಆದಷ್ಟು ನಿವಾರಿಸಿಕೊಳ್ಳುವುದು ಒಳ್ಳೆಯದು. ಕೆಲವು ಮಾತುಗಳು ಕೆಲವು ಸನ್ನಿವೇಶಗಳಲ್ಲಿ ಅನಿವಾರ್ಯ ನಿಜ. ಆದರೆ, ಅವೇ ಕೆಲವೊಮ್ಮೆ ಕತೆಗಳಿಗೆ ಭಾರವಾಗಿ ಪರಿಣಮಿಸುವುದೂ ಉಂಟು. ನಮ್ಮದು ದೃಶ್ಯಮಾಧ್ಯಮದ ಯುಗ ಎನ್ನುವುದು ಲೇಖಕನಿಗೂ ನೆನಪಲ್ಲಿರಬೇಕು.

  ಪ್ರತಿಕ್ರಿಯೆ
 2. Siri

  ನೆನಪಿಟ್ಟುಕೊಳ್ಳುತ್ತೇನೆ ಗುರುಜೀ… ಧನ್ಯವಾದಗಳು.. 🙂

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: