ಅಮರ ಅಮರವೀ ‘ಅಮರ ಚಿತ್ರ ಕಥೆ’

Ajatashatru

ಹರಿಪ್ರಸಾದ್ ನಾಡಿಗ್

ಹರಿಪ್ರಸಾದ್ ನಾಡಿಗ್- ಚಿಕ್ಕ ವಯಸ್ಸಿನಲ್ಲಿಯೇ ಬೆರಗಾಗುವ ಎತ್ತರಕ್ಕೆ ಬೆಳೆದವರು. ಕನ್ನಡದಲ್ಲಿ ಬ್ಲಾಗ್ ಪರಂಪರೆಗೆ ನಾಂದಿ ಹಾಡಿದವರು. ವಿಕಿಪೀಡಿಯಾ ವನ್ನು ಕನ್ನಡದ ತೆಕ್ಕೆಗೂ ತಂದವರು. ಸಂಪದವನ್ನು ಒಂದು ರೀತಿಯಲ್ಲಿ ಬ್ಲಾಗ್ ಬುತ್ತಿಯಾಗಿ ರೂಪಿಸಿದವರು. ಕನ್ನಡ ಬ್ಲಾಗ್ ಲೋಕ ಹರಿಪ್ರಸಾದರಿಗೆ ಹಲವು ರೀತಿ ಋಣಿಯಾಗಿದೆ. ಹರಿಪ್ರಸಾದ್ ತಮ್ಮ ಬಾಲ್ಯ ಕಾಲಕ್ಕೆ ಜಾರಿಹೋದ ಪರಿ ಇಲ್ಲಿದೆ.

***

ತನ್ನ ಹೆಸರಿಗೆ ತಕ್ಕಂತೆ ಅಮರ ಚಿತ್ರ ಕಥೆ ಇವತ್ತಿಗೂ ಭಾರತದ ಸಂಸ್ಕೃತಿಯ ಮಜಲುಗಳನ್ನು ಹೊತ್ತು ಎಂದಿನ ಕಳೆಯನ್ನು ಉಳಿಸಿಕೊಂಡಿದೆ. ಚಿಕ್ಕವನಿದ್ದಾಗ ನನಗೆ ಈ ಪುಸ್ತಕಗಳನ್ನು ಕೊಳ್ಳಲಾಗುತ್ತಿರಲಿಲ್ಲ. ಅಮ್ಮನ ಕೈಗೆ ಎಟುಕದ ಬೆಲೆ ಇರುತ್ತಿತ್ತು ಈ ಪುಸ್ತಕಗಳಿಗೆ (ಅಪ್ಪ ನನಗೆ ಎಂದಿಗೂ ಪುಸ್ತಕ ಕೊಡಿಸುವ ಗೋಜಿಗೆ ಹೋಗುತ್ತಿರಲಿಲ್ಲ). ಹೀಗಾಗಿ ಇವುಗಳು ಎಟುಕುತ್ತಿದ್ದುದು ಲೈಬ್ರೆರೀಲೆ. ಮಳೆ ಬರುತ್ತಿದ್ದರೂ ದೂರದ ಲೈಬ್ರೆರೀಗೆ ಛತ್ರಿ ಹಿಡಿದು ಅರ್ಧ ನೆಂದು ತೊಪ್ಪೆಯಾಗಿ ಹೋಗುತ್ತಿದ್ದೆ – ಅಷ್ಟೊಂದು ಹುಚ್ಚಿರುತ್ತಿತ್ತು. ಆದರೆ ನನ್ನ ಅಣ್ಣ ಅಕ್ಕನ ಮಕ್ಕಳಿಗೆ ಹೀಗಿಲ್ಲ – ನಾವೆಲ್ಲರೂ ಯಾವುದಾದರೊಂದು ಪುಸ್ತಕ ಕಂಡ ಕೂಡಲೆ ಕೊಂಡು ಮನೆಗೆ ತರುತ್ತಿರುತ್ತೇವೆ. ತಮಾಷೆಯೆಂದರೆ ನನ್ನ ಅಣ್ಣನ ಮಗನಿಗೆ ಈ ಪುಸ್ತಕ ಓದೋದಕ್ಕಿಂತ ನಿಕಲೋಡಿಯನ್ ಚ್ಯಾನಲ್ಲಿನಲ್ಲಿ ಬರೋ “ಹತ್ತೋರಿ”, ಪೋಗೋ ಚ್ಯಾನಲ್ಲಿನಲ್ಲಿನ “ನಾಡ್ಡಿ”, “ಮಿ. ಬೀನ್” ಮುಂತಾದವೇ ಬಲು ಇಷ್ಟ!
ಟಾಟಾ ಸ್ಕೈ ಹೊತ್ತು ತರುವ ಡಿಜಿಟಲ್ ಸಿಗ್ನಲ್ಲು ಕ್ಲಾರಿಟಿ ಇರುವ ಚೆಂದದ ಚಿತ್ರಗಳನ್ನು ಮೂಡಿಸಿ ಪುಸ್ತಕ ಓದು ಇನ್ನಷ್ಟು ದೂರ ಮಾಡಿಬಿಟ್ಟಿದೆ.

ಇವತ್ತಿನ ದಿ ಹಿಂದೂ ಪತ್ರಿಕೇಲಿ ಬಂದಿದ್ದ ಒಂದು ಸುದ್ದಿ ಓದಿದಾಗ ಇವತ್ತು ಅಮರ ಚಿತ್ರ ಕಥೆಯ ಬಗೆಗಿನ ಹಳೆಯ ನೆನಪುಗಳೆಲ್ಲ ಮರುಕಳಿಸಿದ್ವು. ಅಮರಚಿತ್ರಕಥೆ ಸಿರೀಸ್ ನಲ್ಲಿ ಸುಮಾರು ಟೈಟಲ್ಲುಗಳು ಬರುತ್ತಿದ್ವು. ಅದೆಲ್ಲವನ್ನೂ ಓದಬೇಕಲ್ಲ! ಲೈಬ್ರೆರಿಯಲ್ಲಿ ಎಲ್ಲ ಪುಸ್ತಕಗಳನ್ನು ತೆಗೆದು ಹೆಕ್ಕಿ ಓದಿಲ್ಲದ ಪುಸ್ತಕಗಳಿಗೆ ಹುಡುಕೋದು. ಸಿಗದಿದ್ದರೆ ಓದಿದ ಪುಸ್ತಕವನ್ನೇ ಹಿಡಿದು, ಯಾರಾದರೂ ಪುಸ್ತಕ ರಿಟರ್ನ್ ಮಾಡೋರು ಇರ್ತಾರಾ ಅಂತ ಹೊಂಚು ಹಾಕಿ ಕುಳಿತುಕೊಳ್ಳೋದು – ಹೀಗೆಲ್ಲ ಮಾಡುತ್ತಿದ್ದೆವು. ಅಮರಚಿತ್ರಕಥೇಲಿ ನನಗೆ ಬಹಳ ಇಷ್ಟವಾಗುತ್ತಿದ್ದುದು ಕನ್ನಡದಲ್ಲಿ ಬರುತ್ತಿದ್ದ ಪುಸ್ತಕಗಳು. ಯಾರೋ ಬಹಳ ಚೆನ್ನಾಗಿ ಅನುವಾದ ಮಾಡುವವರಿಗೇ ಆ ಕೆಲಸ ಕೊಟ್ಟಿದ್ರು ಅನ್ಸತ್ತೆ ಓದೋಕ್ಕೆ ತುಂಬಾ ಒರಿಜಿನಲ್ ಆಗಿ ಇರುತ್ತಿತ್ತು. ಒಂದೊಂದು ಸಾರಿ ಮೊದಲು ಕನ್ನಡದಲ್ಲೇ ತಂದು ಆಮೇಲೆ ಇಂಗ್ಲೀಷಿಗೆ ಅನುವಾದ ಮಾಡಿದ್ದಾರೇನೋ ಅನ್ನಿಸಿಬಿಡುತ್ತಿತ್ತು!

Churning the Ocean - Amar Chitra Katha
‘ಅಮೃತ ಮಂಥನ’ದ ಕುರಿತು ಒಂದು ಪುಸ್ತಕ ಓದಿದ್ದೆ. ನಾನೋದಿದ ಅಮರ ಚಿತ್ರ ಕಥೆಯ ಪುಸ್ತಕಗಳಲ್ಲಿ ನನಗೆ ಚೆನ್ನಾಗಿ ನೆನಪಿರುವ ಪುಸ್ತಕ ಅದು. ಯಾಕೆ ಗೊತ್ತ? ಅದನ್ನು ಸುಮಾರು ಸಲ ಓದಿಬಿಟ್ಟಿದ್ದೆ! ನನ್ನ ಸ್ವಂತದ ಕಲೆಕ್ಷನ್ನಿನಲ್ಲಿದ್ದ ಕೆಲವೇ ಅಮರ ಚಿತ್ರ ಕಥೆ ಪುಸ್ತಕಗಳಲ್ಲಿ ಅಪ್ಪ ಅಮ್ಮನ ಹತ್ತಿರ ಹಠ ಮಾಡಿ ಕೊಡಿಸಿಕೊಂಡಿದ್ದ ಕೆಲವೇ ಪುಸ್ತಕಗಳಲ್ಲಿ ಇದೂ ಒಂದಾಗಿತ್ತು. ಪುಸ್ತಕದ ಒಡೆಯ literally ನಾನೇ ಆದ್ರೂ, ನಮ್ಮಣ್ಣ ಅಪ್ಪ ಅಮ್ಮ ಕೊಡಿಸಿದ ಪುಸ್ತಕ ಅಂತ ತನ್ನ ಹಕ್ಕೂ ಚಲಾಯಿಸುತ್ತಿರುವಂತೆ ಅದರ ಮೇಲೆ ಪೆನ್ನಿನಲ್ಲಿ ಗೀಜುತ್ತಿದ್ದ, ಓದೋಕೆ ಅಷ್ಟು ಇಷ್ಟವಿಲ್ಲದಿದ್ದರೂ. ಹೀಗೆ ನನ್ನ ಬಳಿ ಇದ್ದ ಹಲವು ಪುಸ್ತಕಗಳು ನಾನು ಇಂಜಿನೀಯರಿಂಗ್ ಮಾಡಲು ಬೆಂಗಳೂರಿಗೆ ಬರುವ ಹೊತ್ತಿಗೆ ನನ್ನ ಉಳಿದ ಪುಸ್ತಕಗಳೊಂದಿಗೆ ನನ್ನ ಅಕ್ಕನ ಮಗಳಿಗೆ ಕೊಟ್ಟೆ. ಆ ಪುಸ್ತಕಗಳ ನೆನಪಾದಾಗ ನಾನೇ ಇಟ್ಟುಕೊಳ್ಳಬೇಕಿತ್ತು ಅನ್ನಿಸಿದ್ದುಂಟು, ಆದರೆ ಅದು ನಮ್ಮ ಹತ್ತಿರದವರೊಬ್ಬರಿಗೆ ಉಪಯೋಗವಾಗುತ್ತದೆ ಎಂಬ ವಿಷಯ ಆ ಅನಿಸಿಕೆಯನ್ನು ಹೊಸೆದುಹಾಕುವಂತದ್ದು.
ನನ್ನ ಮಾಮಂದಿರು (ಮಾವಂದಿರು – ಅಮ್ಮನ ಕಡೆ) ಸಾಕಷ್ಟು ಕನ್ನಡ ಪುಸ್ತಕಗಳನ್ನು ಓದುತ್ತಿದ್ದರು. ಅವರು ಓದಿ ಮುಗಿಸಿದ ಪುಸ್ತಕಗಳು ನನಗೇ ಎಂಬಂತೆ. ಅಂತಹ ಪುಸ್ತಕಗಳಲ್ಲಿ ಹಲವನ್ನು ನಾನು ಎತ್ತಿಕೊಂಡು ಬರುತ್ತಿದ್ದೆ. ಹೀಗಾಗಿ ನನ್ನ ಪುಟ್ಟ ಲೈಬ್ರೆರಿ ಇಕ್ಕಟ್ಟಿನ ಮನೆಯಲ್ಲಿ ಕಷ್ಟದ ಪ್ರಜೆಯಾಗಿ ಕಷ್ಟವಾದರೂ ಎರಡು ಬಾಕ್ಸುಗಳಿಗಿಂತ ಕಡಿಮೆ ಪುಸ್ತಕಗಳು ಇದ್ದದ್ದಿಲ್ಲ! ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸ ನಾನು ಬೆಳೆಸಿಕೊಂಡದ್ದೂ ನಮ್ಮ ಸೋದರಮಾವಂದಿರಿಂದಲೇ.

ನನಗೆ ಸೇರಿಸಿದ್ದ ಸ್ಕೂಲುಗಳಲ್ಲಿ ಇಂಗ್ಲೀಷ್ ಪುಸ್ತಕಗಳೇ ಹೆಚ್ಚು ಸಿಗುತ್ತಿದ್ವು. ಕನ್ನಡ ಪುಸ್ತಕಗಳು ಅಪರೂಪ. ಒಂದೊಂದು ಸಾರಿ ಉತ್ತರ ಭಾರತದ ಅಚ್ಚು ಹೊಡೆದ ಚಾಚಾ ಚೌದರಿ ಮುಂತಾದ ಪುಸ್ತಕಗಳು ಸಿಗುತ್ತಿದ್ವು. ಅದೂ ನಮಗಿಷ್ಟವಾಗುತ್ತಿತ್ತು. ಟಿಂಕಲ್ ಹಾಗೂ ಟಿಂಕಲ್ ಡೈಜೆಸ್ಟ್ ಬಹಳ ಓದುತ್ತಿದ್ದೆವು. ಆಗಾಗ “ಬಾಲಮಂಗಳ” ಕೊಂಡು ತರುತ್ತಿದ್ವಿ. ಆಗ ಅದರ ಆಫೀಸು ಮಾಗಡಿ ರೋಡಿನಲ್ಲಿ ಎಂಬುದು ಗೊತ್ತಿತ್ತು (ಕೇರಳದ ಕೊಟ್ಟಾಯಂನ ಒಂದು ಪಬ್ಲಿಶಿಂಗ್ ಹೌಸ್ ರವರದ್ದು ಬಾಲಮಂಗಳ). ಆದರೂ ಈಗ ಇವೆಲ್ಲ ಪುಸ್ತಕಗಳು ಓದೋಣವೆಂದು ಕೈಗೆ ತೆಗೆದುಕೊಂಡರೆ ಸಿಲ್ಲಿಯಾಗಿವೆ ಅನ್ನಿಸಿಬಿಡುತ್ತದೆ. ಮಕ್ಕಳಿಗೇ ಚೆಂದ.

ಕೆಲವು ದಿನಗಳ ಹಿಂದೆ ಹೀಗೆಯೇ ಒಂದು ಪುಸ್ತಕದ ಅಂಗಡಿಗೆ ಹೋಗಿದ್ದಾಗ ಅಮರಚಿತ್ರಕಥೆಯ “ಅಮೃತ ಮಂಥನ” ಟೈಟಲ್ ಮತ್ತೆ ಸಿಕ್ಕಿತ್ತು. ಆದರಿದು ಇಂಗ್ಲೀಷಿನಲ್ಲಿತ್ತು “Churning of the Ocean” ಎಂಬ ಹೆಸರಲ್ಲಿ. ಆದರೆ ಹಿಂದೆ ನಾನು ಕನ್ನಡದಲ್ಲಿ ಓದಿದ್ದ ಪುಸ್ತಕವೇ ಉತ್ತಮ ಅನಿಸಿತು. ಕನ್ನಡದಲ್ಲಿರುವ ಕಾಪಿಗೆ ಹುಡುಕಾಡಿದೆನಾದರೂ ಸಿಗದೆ ಇದನ್ನೇ ನನ್ನ ಅಣ್ಣನ ಮಗನಿಗೆ ಕೊಂಡು ತಂದಿದ್ದೆ. ಬಹುಶಃ ಕನ್ನಡದಲ್ಲಿ ಅಮರಚಿತ್ರಕಥೆ ಈಗ ಸಿಗುತ್ತಿಲ್ಲ ಅನ್ಸತ್ತೆ. ಒಂದು ಕಾಲದಲ್ಲಿ ನನ್ನ ಹತ್ತಿರ ಸಂಸ್ಕೃತದಲ್ಲಿರುವ ಅಮರಚಿತ್ರಕಥೆ ಪುಸ್ತಕ ಇತ್ತು! ಸಂಸ್ಕೃತ ಅಷ್ಟಿಷ್ಟು ಕಲೆತರೂ ಓದಿ ಸಂಪೂರ್ಣ ಅರ್ಥ ಮಾಡಿಕೊಳ್ಳಲಾಗದೆ ಸಂಸ್ಕೃತ-ಕನ್ನಡ ನಿಘಂಟು ಹಿಡಿದು ಅರ್ಥೈಸಿಕೊಳ್ಳಲು ಪ್ರಯತ್ನಿಸಿದ್ದು ನೆನಪಿದೆ. ಅಕ್ಕ ತಂದುಕೊಟ್ಟಿದ್ದಳು ಅನ್ಸತ್ತೆ ಆ ಪುಸ್ತಕವನ್ನ.

ಆದರೆ ಯಾವತ್ತೇ ಆಗಲಿ, ಭಾರತದ ಪುರಾಣಕಥೆಗಳು, ಇತಿಹಾಸ ಹಾಗೂ ಪ್ರಸಿದ್ಧ ವ್ಯಕ್ತಿಗಳ ಕುರಿತ ಅಮರಚಿತ್ರಕಥೆ ಮಕ್ಕಳಿಗೆ ಕೊಡಬಹುದಾದ ಒಳ್ಳೆಯ ಪುಸ್ತಕದ ಉಡುಗೊರೆ. ಹತ್ತೋರಿ, ಪೋಕೆಮಾನ್ ಅಥವ ಯೋ-ಯೋ ಗಿಂತ ಭಾರತದ ಬಗ್ಗೆ ಮೊದಲು ತಿಳಿದುಕೊಳ್ಳುತ್ತಾರೆ!

‍ಲೇಖಕರು avadhi

April 12, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This