ಅಮೇರಿಕನ್ನರ ಪುಸ್ತಕ ಪ್ರೀತಿ

ವಿಜಯಲಕ್ಷ್ಮಿ ಕೆ ಎಂ

ಮನುಷ್ಯನ ಮಿದುಳಿನಲ್ಲಿನ ಚಿಂತನೆಗಳು ಚಾಲನೆಯಲ್ಲಿರಬೇಕೆಂದರೆ, ಅವು ಇನ್ನಷ್ಟು ಪ್ರಖರಗೊಳ್ಳಬೇಕೆಂದರೆ, ಆ ಚಿಂತನೆಗಳು ಮಾತಾಗಬೇಕು. ಮಾತಾಡಲು ಮತ್ತೊಬ್ಬರಿರಬೇಕು. ಮತ್ತೊಬ್ಬರ ಮಾತಿಗೆ ತಮ್ಮ ಚಿಂತನೆಗಳನ್ನು ಬೆಸೆಸಬೇಕು, ಬೆಸೆಸಿ ಒರೆ ಹಚ್ಚಬೇಕು. ಆದರೆ ಈ ಅಮೇರಿಕಾ ದೇಶದಲ್ಲಿ ಮನೆಯಲ್ಲಿರುವವರಿಗೆ ನೆರೆಹೊರೆಯವರು ಮಾತಿಗೆ ಸಿಗುವುದೇ ಇಲ್ಲ. ಕಛೇರಿಯಲ್ಲಿ ಮಾತಾಡಲು ಪುರುಸೊತ್ತಿರುವುದಿಲ್ಲ.

ಮಕ್ಕಳಿಗೆ ಶಾಲೆಗೆ ಸೇರಿಸುವ ತನಕ ಮನುಷ್ಯ ಮುಖಗಳು ಅಪರೂಪಕ್ಕೆ ಕಾಣಸಿಕ್ಕರೂ ಮಾತಿಗೆಟುಕುವುದಿಲ್ಲ. ಈಗಿನವರು ಮಕ್ಕಳಿಗಾಗಿ ಸರೀಕ ಮಕ್ಕಳನ್ನು ಹುಡುಕಿ ಒಟ್ಟಾಗಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಇದು ನಿತ್ಯ ಆಗುವ ಕೆಲಸವಲ್ಲ. ಅದರಿಂದಲೇ ಇರಬಹುದು ಇಲ್ಲಿಯವರು ಮಕ್ಕಳಿಗೆ ಹುಟ್ಟುವ ಮೊದಲಿನಿಂದಲೇ, ಅಥವಾ ಹುಟ್ಟಿದಾರಭ್ಯ ಮಗುವಿನಲ್ಲಿ ಪುಸ್ತಕದ ಬಗ್ಗೆ ಪ್ರೀತಿ ಹುಟ್ಟುವಂತೆ ಮಾಡಲು ಸಕಲ ಪ್ರಯತ್ನಗಳನ್ನೂ ಮಾಡುತ್ತಾರೆ.

ಮನುಷ್ಯರಿಗಿಂತ ಇಲ್ಲಿಯ ಜನರಿಗೆ ಪುಸ್ತಕಗಳ ಜೊತೆಯೇ ಹೆಚ್ಚು ಸಲುಗೆಯೋ ಏನೋ. ಅವುಗಳೊಂದಿಗೆ ಮಾತಾಡುವವರ ಸಂಖ್ಯೆ ಹೆಚ್ಚು. ಅವುಗಳ ಜೊತೆ ಗೌರವದಿಂದ ಗಂಭೀರ ಮನದಿಂದ ಮಾತಾಡುವುzನ್ನು ಬಾಲ್ಯದಲ್ಲೇ ಕಲಿಸುವುದಕ್ಕಾಗಿ, ಪ್ರತಿ ರಾತ್ರಿ ಮಲಗುವ ಮುನ್ನ, ಪುಸ್ತಕ ಓದಿ ಮಲಗುವ ರೂಢಿ ಮಾಡುತ್ತಾರೆ. 

ಬಹುತೇಕ ಭಾರತೀಯರು ನಿದ್ದೆಗೆ ತೆರಳುವ ಮೊದಲು ದೇವರ ಶ್ಲೋಕಗಳನ್ನು ಹೇಳಿ ಕೈ ಮುಗಿದು ಮಲಗುವ ಹಾಗೆ ಇಲ್ಲಿಯ ಬಹುತೇಕರು ಮಾಡಿಸುವುದು ಪುಸ್ತಕ ಓದಿ, ಹಾಸಿಗೆಗೆ ಹೋಗುವ ಹವ್ಯಾಸ. ಪುಸ್ತಕಗಳು ಯಾರಿಗೇ ಆದರೂ ದೈವ ಸಮಾನವೇ ತಾನೇ? ಒಂಟಿಯಾಗಿದ್ದಾಗ ಮನಸ್ಸಿನೊಳ ಹೊಕ್ಕು ಒಂಟಿತನ ನಿವಾರಿಸುತ್ತವೆ. ಸಂಗಾತಿಯಾಗುತ್ತವೆ.

ಕಾಯುವಿಕೆಯ ಬೇಸರವನ್ನು ನಿವಾರಿಸಿ ಸಮಯದ ಸದುಪಯೋಗಕ್ಕೆ ಸಹಾಯ ಮಾಡುತ್ತವೆ. ದೇಶವಿದೇಶಗಳಿಗೆ ಕರೆದೊಯ್ಯುತ್ತವೆ. ಪೂರ್ಣ ಪ್ರಪಂಚವನ್ನೇ ಪರಿಚಯಿಸುತ್ತವೆ. ಧೈರ್ಯ ತುಂಬುತ್ತವೆ. ತಮ್ಮ ಮಡಿಲಿನಲ್ಲಿ ತುಂಬಿಕೊಂಡ ಸರ್ವ ಸಕಲ ಜ್ಞಾನವನ್ನೂ ಧಾರೆ ಎರೆಯುತ್ತವೆ. ಅರಿವು, ಅಹಂಕಾರದ ಆಸ್ತಿಯಾಗದಂತೆ ಬೋಧನೆ ನೀಡುತ್ತವೆ. ಇದು ಪುಸ್ತಕಗಳು ಮಾಡುವ ಪರಮ ಹಿತದ ಕೆಲಸ. ಪುಸ್ತಕವನ್ನು ಪ್ರೀತಿಸುವವರು, ಓದಿ ಅರಗಿಸಿಕೊಳ್ಳುವವರು ನಿಜಕ್ಕೂ ಅದೃಷ್ಟವಂತರು.

ಪುಸ್ತಕಗಳೊಳಗಿನ ಜ್ಞಾನದ ಸಿಹಿಯನ್ನು, ಪ್ರಜೆಗಳ ಮಿದುಳು ಮನಸ್ಸುಗಳಲ್ಲಿ ತುಂಬಿಸಲು ಇಲ್ಲಿಯ ಸರ್ಕಾರವೂ ಶ್ರಮ ಪಡುತ್ತದೆಂಬುದು ಗಮನೀಯ ವಿಚಾರ. ಇಲ್ಲಿ ಎಲ್ಲೆಡೆ ಸಾರ್ವಜನಿಕ ಗ್ರಂಥಾಲಯಗಳಿವೆ. ಒಂದೊಂದೂ ಬೃಹತ್ ಕಟ್ಟಡದ, ಲಕ್ಷೋಪ ಲಕ್ಷ ಪುಸ್ತಕಗಳ ರಾಶಿಯನ್ನೆ ಮಡಿಲಲ್ಲಿ ತುಂಬಿಕೊಂಡ, ಸುವ್ಯವಸ್ಥಿತವಾಗಿ ಜೋಡಿಸಲ್ಪಟ್ಟ, ಪುಸ್ತಕಪ್ರಿಯರಿಗೆ ಮೊದಲ ನೋಟಕ್ಕೇ ಆಕರ್ಷಿಸಿ ಬಾಯಲ್ಲಿ ನೀರೂರಿಸುವಂತಹ ಗ್ರಂಥಾಲಯಗಳೇ.

ಇಲ್ಲಿ ಪುಸ್ತಕಗಳು ಮಾತ್ರವಲ್ಲ, ಸಾಕ್ಷ್ಯ ಚಿತ್ರಗಳ ಸಿ.ಡಿ.ಗಳು, ಸಿನಿಮಾಗಳ ಸಿ.ಡಿ.ಗಳು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗುವ ಸರ್ವವಿಧದ ಮಕ್ಕಳ ಸಿನಿಮಾಗಳು, ಕಾರ್ಟೂನ್ ಸಿನಿಮಾಗಳ ಸಿ.ಡಿ.ಗಳು, ಲಭ್ಯ. ಹುಡುಕಲು ಪೆಟ್ರೋಲ್ ಖರ್ಚು ಮಾಡಬೇಕಾಗಿಲ್ಲ. ಗ್ರಂಥಾಲಯಕ್ಕೇ ಹೋಗಿ ಹುಡುಕಬೇಕಾಗಿಲ್ಲ. ನಿಮ್ಮ ವೇಳೇಯನ್ನೂ ವ್ಯಯಿಸಬೇಕಾಗಿಲ್ಲ.

ಮನೆಯಲ್ಲಿ ಕುಳಿತೇ ನಿಮಗೆ ಬೇಕಾದವುಗಳ ಪಟ್ಟಿಯೊಂದನ್ನು ಗ್ರಂಥಾಲಯಕ್ಕೆ ಕಳಿಸಿ ಕೊಟ್ಟರೆ ಸಾಕು. ಅದು ಲಭ್ಯವಾದ ಕೂಡಲೇ ನಿಮ್ಮ ಫೋನ್‌ಗೆ ಅಥವಾ ನಿಮ್ಮ ಇ-ಮೇಲ್‌ಗೆ ಸಂದೇಶ ಬರುತ್ತದೆ. ನಿಮಗೆ ಬೇಕಾದುದರಲ್ಲಿ ಲಭ್ಯವಾದ ಸಿ.ಡಿ.ಗಳು, ಪುಸ್ತಕಗಳು, ನಿಮ್ಮ ಹೆಸರಿನಲ್ಲಿ ಪ್ಯಾಕಾಗಿ ‘ಹೋಲ್ಡ್ಸ್’ ಎಂಬ ಹಣೆಪಟ್ಟಿಯ ರ‍್ಯಾಕ್‌ಗಳಲ್ಲಿ, ನಿಮ್ಮ ಬರುವಿಕೆಗೆ ಕಾದು ಕುಳಿತಿರುತ್ತವೆ. ಮಾಹಿತಿ ಪಡೆದ ಮೇಲೆ, ಯಾವಾಗ ಬೇಕಾದರೂ ಹೋಗಿ, ನಿಮ್ಮ ಪ್ಯಾಕನ್ನು ನೀವು ಎತ್ತಿಕೊಂಡು ಮನೆಗೆ ತರಬಹುದು. ಸಮಯವಿದ್ದಾಗ ಬಳಸಬಹುದು.

ಒಬ್ಬರು ಒಂದು ಸಲಕ್ಕೆ ಎಷ್ಟು ಬೇಕಾದರೂ ಪುಸ್ತಕಗಳನ್ನು ಮನೆಗೆ ತೆಗೆದುಕೊಂಡು ಹೋಗಬಹುದು, ಇಲ್ಲಿ ಸಂಖ್ಯೆಯ ಮಿತಿ ಇಲ್ಲ. ಇಂಥದೇ ಪ್ರದೇಶದ ಒಂದೇ ಸಾರ್ವಜನಿಕ ಲೈಬ್ರರಿಯುಲ್ಲಿ ಮಾತ್ರ ಪುಸ್ತಕ ತೆಗೆದುಕೊಳ್ಳಬೇಕೆಂಬ ನಿಯಮವಿಲ್ಲ. ಮೀರಾಮೇಸಾ ಗ್ರಂಥಾಲಯದಲ್ಲಿ ಪಡೆದ ಗ್ರಂಥವನ್ನು, ಲಾಹೊಯ್ಯಾ ಲೈಬ್ರರಿಯಲ್ಲಿ ಹಿಂತಿರುಗಿಸಬಹುದು. ಲಿಂಡಾವಿಸ್ತಾ ಪ್ರದೇಶದಲ್ಲಿ ತೆಗೆದುಕೊಂಡದ್ದನ್ನು ಲೋಗನ್ ಹೈಟ್ಸ್ನ ಡಬ್ಬದಲ್ಲಿ ಹಾಕಿಬರಬಹುದು. ನೀವು ಸದಸ್ಯರಾಗಿ ಬಿಟ್ಟರೆ, ಈ ನಗರದ ಯಾವುದೆ ಪಬ್ಲಿಕ್ ಲೈಬ್ರರಿಯಲ್ಲಿ ಪುಸ್ತಕ ತೆಗೆದುಕೊಳ್ಳಲು ಪರಿಮಿತಿ ಇದೆ.

ಮಕ್ಕಳಿಗೆ ಕಥೆ ಹೇಳುವ ಕೆಲಸವನ್ನೂ ಗ್ರಂಥಾಲಯದ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಮಾಡುವುದು ವಿಶೇಷ. ವಾರಕ್ಕೊಮ್ಮೆ ಪ್ರತಿ ಬುಧವಾರ ಅಥವಾ ಶುಕ್ರವಾರಗಳಂದು ಸಂಜೆ ಆರರಿಂದ ಏಳರವರೆಗೆ ಒಂದು ಗಂಟೆಯ ಸಮಯ ಪುಟ್ಟ ಮಕ್ಕಳಿಗೆ ಕಥೆ ಹೇಳುವ ಕೆಲಸವನ್ನೂ ಇವರು ಮಾಡುತ್ತಾರೆ. ಮಕ್ಕಳಿಗೆ ಇಷ್ಟವಾಗುವ ಒಂದು ಅದ್ಭುತ ಕಥೆಯನ್ನು ಆಯ್ದುಕೊಂಡು, ಮಕ್ಕಳನ್ನೂ ಹೇಳುವ ಕಾರ್ಯಕ್ಕೆ ಒಳಗೊಳಿಸಿಕೊಂಡು ಕಥೆಯನ್ನು ಹೇಳುವುದು ನಿಜಕ್ಕೂ ದೊಡ್ಡವರಿಗೂ ಸಹ ಆಸಕ್ತಿಕರ.

ಒಂದು ರಾಶಿ ಮೃದು ಬೊಂಬೆಗಳನ್ನು ಎದುರಿಗೆ ಸುರಿದು, ಮಕ್ಕಳಿಗೆ ಅವನ್ನು ಆಯ್ದುಕೊಳ್ಳಲು ಬಿಟ್ಟು, ‘ಕರಡಿಯೊಂದು ಮರದಿಂದ ಕೆಳಗೆ ಹಾರಿತು’ ಎನ್ನುವುದನ್ನು ಹೇಳುವಾಗ ಒಂದು ಕಟ್ಟೆಯೋ ಕುರ್ಚಿಯೋ ಹತ್ತಿ ಕೆಳಕ್ಕೆ ಧುಡುಮ್ಮನೆ ಹಾರಿ ತೋರಿಸುತ್ತಾ ಕಥೆ ಮುದುವರೆಯುತ್ತದೆ. ‘ವಿಮಾನದಲ್ಲಿ ಹಾರಿ ಬಂದ’ ಎನ್ನುವುದನ್ನು ಹೇಳುವಾಗ, ಒಂದು ವಿಮಾನದ ಬೊಂಬೆಯನ್ನು ಕೈಯ್ಯಲ್ಲಿ ಹಿಡಿದು, ಮಕ್ಕಳ ಹಿಂದಿನಿಂದ ಸುಂಯ್ಯನೆ ಹಾರುತ್ತಾ ಹಾರುತ್ತಾ ಓಡೋಡಿ ಹೋಗಿ, ಕುಳಿತು ಕೇಳುವ ಎಲ್ಲ ಮಕ್ಕಳಿಗೆ ಒಂದು ಸುತ್ತು ಹಾಕಿ, ಮುಂದೆ ಬಂದು ಒಂದೊಂದೇ ಕಾಲುಗಳನ್ನೆತ್ತಿ ಕೆಳಗಿಡುವಂತೆ ಅಭಿನಯಿಸಿ ಇಳಿದು ನಿಲ್ಲುವುದು ಎಂತಹವರನ್ನೂ ಆಕರ್ಷಿಸುತ್ತದೆ, ಕಥೆಯ ಒಳಗೆ ಮನಸ್ಸುಗಳನ್ನು ಎಳೆದುಕೊಂಡು ಬಿಡುತ್ತದೆ. ಹೀಗೆ ಅಭಿನಯ ಸಹಿತವಾಗಿ ಕೇಳಿದ ಕಥೆಗಳನ್ನು, ಜೀವನ ಪರ್ಯಂತ ಮಕ್ಕಳು ಮರೆಯಲಾರರು. ಓದುವುದನ್ನು ಬಿಡಲಾರರು.

ಇನ್ನೊಂದು ಗಮನೀಯ ವಿಚಾರವೆಂದರೆ, ಇಲ್ಲಿಯ ಎಲ್ಲಾ ಗ್ರಂಥಾಲಯಗಳ ಹೊರ ಭಾಗದಲ್ಲಿ ಅಥವಾ ಒಳಗಿಟ್ಟ ಕೆಲವು ಗಾಡಿ (ಕಾರ್ಟ್ ಗಳಲ್ಲಿ) ಹಾಕಿರುವ ನೂರಾರು ಪುಸ್ತಕಗಳು ಅತಿ ಕಡಿಮೆ ಬೆಲೆಯಲ್ಲಿ ಲಭ್ಯ. ಕೆಲವು ಕಡೆ ಉಚಿತವಾಗಿಯೂ ದೊರಕುವುದುಂಟು. ೨೫ ಸೆಂಟ್ಸ್ಗಳಿಗೆ ಒಂದು ಬೃಹತ್ ಗಾತ್ರದ ಉತ್ತಮ ಪುಸ್ತಕವೂ ಸಿಗಬಹುದು, ಒಂದು ಡಾಲರ್‌ಗೆ ಐದು ಪುಸ್ತಕಗಳೂ ಇರಬಹುದು. ಹಾಗೆಂದು ಇವೆಲ್ಲ ಕಳಪೆಯದಲ್ಲ. ಹೆಸರುವಾಸಿ ಬರಹಗಾರರಿಂದ ಹೆಸರೇ ಇಲ್ಲದವರವರೆಗಿನ ಎಲ್ಲ ರೀತಿಯ ಪುಸ್ತಕಗಳು ಮತ್ತು ಮಕ್ಕಳಿಗಾಗಿ ಬರೆದಂತಹ ಕೃತಿಗಳೂ, ಈ ಕಾರ್ಟ್ನಲ್ಲಿ ಬಿದ್ದಿರುತ್ತವೆ. ಆಯ್ಕೆ, ಆಸಕ್ತಿಗಳು ನಿಮ್ಮವು.

ನಗರದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮಗಳ, ಆರಂಭಿಸಲಾಗುವ ತರಗತಿಗಳ, ವ್ಯಾಯಾಮ ಶಾಲೆಗಳ, ಕಲಾ ಶಿಬಿರಗಳ, ಉತ್ಸವ ಅಥವಾ ಮೆರವಣಿಗೆಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದರೆ, ಮಾಹಿತಿ ಪ್ರಸಾರಕ್ಕೆ ಈ ಗ್ರಂಥಾಲಯಗಳ ನೆರವು ಪಡೆಯಬಹುದು. ಬ್ರಂಚ್ ವಿತ್ ಸಾಂಟಾ, ಹ್ಯಾಲೋವೀನ್ ಸೆಲೆಬ್ರೇಶನ್, ಏಜ್ ವೆಲ್ ಸರ್ವೀಸಸ್, ಆ್ಯನ್ಯುಯಲ್ ಕ್ರಾಫ್ಟ್ ಸೇಲ್, ಥ್ಯಾಂಕ್ಸ್ ಗಿವಿಂಗ್ ಫೆಸ್ಟ್, ಮೌಂಟನ್‌ಹೈಕ್, ಬೀಚ್ ಪಿಕ್‌ನಿಕ್, ಇತ್ಯಾದಿ, ಇತ್ಯಾದಿಯಾಗಿ – ಈ ಎಲ್ಲವುಗಳ ವಿವರಗಳುಳ್ಳ ಪಾಂಪ್ಲೆಟ್‌ಗಳನ್ನು, ಬ್ರೋಷರ್‌ಗಳನ್ನು, ಪ್ರಮುಖ ಪ್ರವೇಶ ದ್ವಾರದಲ್ಲಿರುವ ದೊಡ್ಡ ಮೇಜಿನ ಮೇಲೆ ಹರಡಿಟ್ಟರೆ ಸಾಕು. ಬಂದ ಓದುಗರೆಲ್ಲ ಅವುಗಳ ಮೇಲೊಮ್ಮೆ ಕಣ್ಣಾಡಿಸಿ ಅಗತ್ಯವೋ ಅಥವಾ ಆಸಕ್ತಿಯೋ ಇದ್ದರೆ ತೆಗೆದುಕೊಂಡು, ಸಂಬಂಧಿತರನ್ನು ಸಂಪರ್ಕಿಸಿ ಮುಂದುವರೆಯಬಹುದು.

ಓದುಗರಿಗೆ ಮಾತ್ರವಲ್ಲದೆ ಬರಹಗಾರರಿಗೆ ಬೆನ್ನು ತಟ್ಟುವ ಮತ್ತು ಅವರ ಬರವಣಿಗೆಗೆ ಬಹು ಅನುಕೂಲವಾಗುವ ಒಂದು ಯೋಜನೆಯೆಂದರೆ ‘ಲೋಕಲ್ ಆಥರ್ ಪ್ರೊಗ್ರಾಮ್.’ ಇದುಈ ದೇಶದ ಸರ್ವ ಗ್ರಂಥಾಲಯಗಳಲ್ಲಿ ಇದೆಯೋ ಇಲ್ಲವೋ, ನಾನು ನೋಡಿರುವ ಸ್ಯಾಂಡಿಯಾಗೋದಲ್ಲಂತೂ ಇದೆ.

ಮಕ್ಕಳೂ ಮತ್ತು ಹದಿಹರೆಯದವರೂ ಸೇರಿದಂತೆ, ಈ ನಗರದ ಎಲ್ಲಾ ಹಿರಿಯ ಕಿರಿಯ ಬರಹಗಾರರ ಪ್ರಕಟಿತ ಪುಸ್ತಕಗಳನ್ನು ಪ್ರತಿ ವರ್ಷ ನಿಗದಿತ ಮಾಸದಲ್ಲಿ ಗ್ರಂಥಾಲಯದ ಪರಿಶೀಲನೆಗೆ ಅರ್ಪಿಸಲು ಅವಕಾಶ ಮಾಡಿಕೊಡುವ ಒಂದು ಕಾರ್ಯಕ್ರಮವೇ ‘ಲೋಕಲ್ ಆಥರ್ ಪ್ರೊಗ್ರಾಮ್.’ ಸಂಗ್ರಹಗೊಂಡದ್ದರಲ್ಲಿ, ಯೋಗ್ಯ ಪುಸ್ತಕಗಳನ್ನು ಸ್ಯಾಂಡಿಯಾಗೋದ ಸೆಂಟ್ರಲ್ ಲೈಬ್ರರಿಯಲ್ಲಿ ಒಂದು ತಿಂಗಳ ಕಾಲ (ಫೆಬ್ರವರಿ) ಪ್ರದರ್ಶನಕ್ಕೆ ಇಡಲಾಗುತ್ತದೆ.

ಆನ್‌ಲೈನ್ ಗ್ಯಾಲರಿಯಲ್ಲಿ ಇಡೀ ವರ್ಷವೇ ನೋಡಲು ಸಿಗುತ್ತದೆ. ಪುಸ್ತಕದ ಮುಖಪುಟ, ಶೀರ್ಷಿಕೆ, ಬರೆದವರ ಪರಿಚಯ, ಇತ್ಯಾದಿ ಮುಖ್ಯ ವಿವರಗಳು ಇಲ್ಲಿ ಲಭ್ಯ. ಆಯ್ದ ಬರಹಗಾರರನ್ನು ಒಂದೆಡೆ ಸೇರಿಸಿ, ಪುಸ್ತಕಗಳ ಬಗ್ಗೆ ಚರ್ಚೆ, ಸಂವಾದಗಳೂ ನಡೆಯುತ್ತವೆ ಇಲ್ಲಿ. ಇದು ಬರೆಯುವವರನ್ನು ಪ್ರೋತ್ಸಾಹಿಸುವ ಸಲುವಾಗಿಯೇ ಇರುವ ಒಂದು ಯೋಜನೆ ಬರೆದವರು, ತಮ್ಮ ಈ ಪುಸ್ತಕಗಳನ್ನು ವರ್ಷದ ನಂತರ ವಾಪಸ್ ಪಡೆಯಬಹುದು ಅಥವಾ ಗ್ರಂಥಾಲಯಕ್ಕೆ ದಾನವಾಗಿ ಅಲ್ಲೇ ಉಳಿಸಲೂಬಹುದು. ಅದು ಬರೆದವರ ಇಷ್ಟ. ಹೀಗೆ ಕಳೆದ ವರ್ಷ, ಇಪ್ಪತ್ತೈದು ಭಾಷೆಗಳಲ್ಲಿ ಬರೆದ ಸುಮಾರು ಐದೂವರೆ ಮಿಲಿಯನ್‌ನಷ್ಟು ಪುಸ್ತಕಗಳು ಸಂಗ್ರಹಿತಗೊಂಡು, ಅವುಗಳಲ್ಲಿ ೨.೬೬ ಮಿಲಿಯನ್ ಪುಸ್ತಕಗಳು ಗ್ರಂಥಾಲಯದ ಸ್ವತ್ತಾಗಿವೆ. 

ಗ್ರಂಥಾಲಯದ ಮೂಲಕ ಜಾರಿಗೊಳ್ಳುವ ಅನೇಕ ಯೋಜನೆಗಳಲ್ಲಿ ಸ್ವಯಂ ಸೇವಕರಿಗೆ ಅನುಕೂಲ, ಅನುಭವ  ಕಲ್ಪಿಸುವ ಯೋಜನೆಯೂ ಒಂದು. ಸ್ವಇಚ್ಛೆಯಿಂದ ಯಾರು ಬೇಕಾದರೂ ಯಾವ ವಿಧಾನದಲ್ಲಿಯಾದರೂ, ಯಾವ ವಿಭಾಗಲ್ಲಿಯಾದರೂ, ಸಾರ್ವಜನಿಕರಿಗೆ ಸೇವೆ ಸಲ್ಲಿಸಬಹುದಾದ ಅವಕಾಶಗಳು. ಕಥೆ ಹೇಳುವವರಾಗಿ, ಕಲಾ ಬೋಧಕರಾಗಿ, ಚೆಸ್ ಕ್ಲಬ್ ಸಹಾಯಕರಾಗಿ, ಇನ್ನೂ ಖಾಲಿ ಇರುವ ಇಂತಹ ಹಲವು ನೌಕರಿಗಳಿಗೆ, ವಯಸ್ಸಿನ ಮಿತಿ ಇಲ್ಲದೆ, ಜಾತಿ ವರ್ಗಗಳ ಗಮನಕ್ಕೆ ತಾರದೆ, ಸ್ವಇಚ್ಛೆಯಿಂದ ಸೇರಿ, ಸರ್ಕಾರಕ್ಕೂ, ಸ್ವಂತಕ್ಕೂ ಲಾಭವಾಗುವ ಈ ಯೋಜನೆ, ಈ ಕ್ಷೇತ್ರದಲ್ಲಿ ಸಾಧಿಸಬಯುಸವವರಿಗೆ ಮತ್ತು ಸೇವಾ ಮನೋಭಾವದವರಿಗೆ ಒಂದು ಉಪಯುಕ್ತ ಸೇವಾ ಮಾರ್ಗ.

ವಿದ್ಯಾರ್ಥಿಗಳ ಕಾಲೇಜುಗಳ ಪ್ರವೇಶಕ್ಕೆ ಸಹಾಯಿಸಲು, ಹೆತ್ತವರಿಗಾಗಿ ಮತ್ತು ವಿದ್ಯಾರ್ಥಿಗಳಿಗಾಗಿ ಮಾರ್ಗದರ್ಶಕ ಉಪನ್ಯಾಸಗಳನ್ನೋ, ಮಾತುಕತೆಗಳನ್ನೋ, ನಡೆಸಿ ಕಾಲೇಜ್ ಪ್ರೊಫೈಲನ್ನು ಸೃಷ್ಟಿ ಮಾಡಿ ಕೊಡುವ, ಆರ್ಥಿಕ ಪರಿಸ್ಥಿತಿಗಳಿಗನುಸಾರ ಸೂಕ್ತ ಕಾಲೇಜುಗಳನ್ನು ಸೂಚಿಸುವ ಹಾಗೂ ಕಾಲೇಜ್ ಪ್ರೋಸೆಸ್‌ಗೆ ಪ್ರಬಂಧಗಳನ್ನು ಬರೆಯುವ ವಿಧಾನದ ಬಗ್ಗೆಯೂ ಮಾರ್ಗದರ್ಶನ ನೀಡುವಂತಹ ಕಾರ್ಯಕ್ರಮಗಳೂ, ಇನ್ನಿತರ ಅಕಾಡೆಮಿಗಳ ಸಹಯೋಗದೊಡನೆ, ಈ ಗ್ರಂಥಾಲಯಗಳಲ್ಲಿ ನಡೆಯುತ್ತವೆ.

ಗ್ರಂಥಾಲಯಗಳ ಸಂಖ್ಯೆಯಾಗಲೀ, ಕಟ್ಟಡಗಳ ವಿಸ್ತೀರ್ಣವಾಗಲೀ, ಲಭ್ಯವಾಗುವ ಪುಸ್ತಕಗಳ ಸಂಖ್ಯೆ, ಗಾತ್ರಗಳಾಗಲೀ ಕಡಿಮೆಯದಲ್ಲ. ೧,೩೬೮,೦೦೯ ಜನಸಂಖ್ಯೆ ಇರುವ ಸ್ಯಾಂಡಿಯಾಗೋ ನಗರದಲ್ಲಿ ೩೬ ಸಾರ್ವಜನಿಕ ಗ್ರಂಥಾಲಯಗಳಿವೆ. ಒಳಗೆ ಕಾಲಿಡುತ್ತಿದ್ದಂತೆಯೇ ಕಾಣುವ ಎತ್ತರದ ಬೃಹತ್ ಕಟ್ಟಡ, ಕಣ್ಣಿಗೆ ಕಾಣುವಷ್ಟೂ ದೂರಕ್ಕೆ ಕಾಣಿಸುವ, ಪುಸ್ತಕಗಳ ಕಪಾಟುಗಳು. ಅಂದವಾಗಿ ಜೋಡಿಸಿಟ್ಟ ಹೇರಳ ಪುಸ್ತಕಗಳ ಸಾಲು ಸಾಲು ಪ್ರದರ್ಶನ. ಪುಸ್ತಕ ಪ್ರಿಯರಿಗಂತೂ ಅಬ್ಬ ಆಹಾ ಎನಿಸಿಬಿಡುವಂತಹ ಪುಸ್ತಕ ಹಬ್ಬ. ಸಂತೋಷದ ಅಲೆಗಳು ಮೇಲೆದ್ದು ಮುಂಚಾಚಿ, ಎಲ್ಲ ಪುಸ್ತಕಗಳನ್ನೂ ಆಗಲೇ ಅಲ್ಲೇ ಓದಿ ನುಂಗಿ ಬಿಡುವಷ್ಟು ಮನದಲ್ಲಿ ಅಬ್ಬರಿಸುತ್ತವೆ

ಇಲ್ಲಿ ಗ್ರಂಥಾಲಯವೆಂದರೆ ಬರೀ ಗ್ರಂಥಗಳಿರುವ ಜಾಗವಲ್ಲ, ಅದು ನಗರದಲ್ಲಿ ನಡೆಯುವ ಕಾರ್ಯಕ್ರಮಗಳ ಮಾಹಿತಿಪ್ರಸಾರಾಲಯ. ಹಸುಗೂಸುಗಳಿಗೆ ಆಟದ ಸ್ಥಳ. ಮಕ್ಕಳಿಗೆ ಕಥಾ ಕೇಂದ್ರ. ಪ್ರೇಮಿಗಳ ಸಂಧಿಸ್ಥಾನ. ಪುಸ್ತಕ ಪ್ರೇಮಿಗಳಿಗೆ ಹೊತ್ತಿಗೆಗಳ ಸಾಗರ. ಕೆಲಸ ಬಯಸುವವರಿಗೆ ತರಬೇತಿ ಶಿಬಿರ. ಸೇವಾ ಮನೋಭಾವದವರಿಗೆ ಸೇವಾ ಕ್ಷೇತ್ರ. ಬರಹಗಾರರಿಗೆ ಪ್ರಚಾರ ವಾಹಿನಿ. ಜ್ಞಾನದಾಹಿಗಳಿಗೆ ಜ್ಞಾನದಮನೆ.

‍ಲೇಖಕರು Avadhi

February 18, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

ಅಂದು, ನಾನು ವಿದ್ಯಾರ್ಥಿಗಳ ಮುಂದೆ ತಲೆ ತಗ್ಗಿಸಿದೆ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

‘ಫಿರ್ ಭೀ ದಿಲ್ ಹೈ ಹಿಂದೂಸ್ತಾನಿ’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ 'ಅರೇ... ಹೋದ......

೧ ಪ್ರತಿಕ್ರಿಯೆ

 1. Dhanyakumar B Minajigi

  ಲೇಖನ ಓದುತ್ತಾ ಹೋದಂತೆ, ಗ್ರಂಥಾಲಯದ ಪುಸ್ತಕಗಳ ಜತೆ ಕಳೆದು ಹೋಗಿ ಇನ್ನೊಂದು ಲೋಕದಲ್ಲಿರುವ ಅನುಭವವಾಯಿತು.‌ ಅಮೇರಿಕನ್ನರ ಪುಸ್ತಕ ಪ್ರೀಯ ಅಗಾಧ ಮತ್ತು ಅನನ್ಯ.

  ಶ್ರೀಮತಿ ಕೆ ಎಮ್ ವಿಜಯಲಕ್ಷ್ಮಿಯವರ ಈ ಲೇಖನ‌ ಓದಿ , ಭಾರತದಲ್ಲಿ ಈ ತೆರನಾದ ಗ್ರಂಥಾಲಯ ಜಾಲ ಕಾರ್ಯ ನಿರ್ವಹಿಸಲು ಸಾಧ್ಯವೇ? ಈ ದಿಶೆಯಲ್ಲಿ ಸರಕಾರದ ಹಾಗೂ ಸಾರ್ವಜನಿಕರ ಗ್ರಂಥಾಲಯ ಕರ ದಿಂದ ನಡೆಸಲ್ಪಡುವ ಗ್ರಂಥಾಲಯ ಇಲಾಖೆ ಕಾರ್ಯ ಸಾಧು ಯೋಜನೆಯನ್ನು ರೂಪಿಸಿ ಕಾರ್ಯಗತ ಮಾಡಲು ಸಾಧ್ಯವೇ? ಈ‌ಕುರಿತು ಇಲಾಖೆಯ ಮುಖ್ಯಸ್ಥರು ತಮ್ಮ ಅಭಿಪ್ರಾಯ ಹಂಚಿಕೊಂಡರೆ ಒಳ್ಳೆಯದು.‌
  ಶ್ರೀಮತಿ ಕೆ ಎಮ್ ವಿಜಯಲಕ್ಷ್ಮಿ ಅವರಿಗೆ ಅನಂತ ವಂದನೆಗಳು.‌
  ಧನ್ಯಕುಮಾರ ಮಿಣಜಗಿ.‌
  ವಿಶ್ರಾಂತ ಮುಖ್ಯ ಗ್ರಂಥಾಯಾಧಿಕಾರಿ
  ಬೆಂಗಳೂರು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: