‘ಅಮ್ಚಿ ಮುಂಬೈ’ನ ಅಕ್ಷರದೀಪ

ರಾಜೀವ ನಾರಾಯಣ ನಾಯಕ 

ಗತ್ತಿನಲ್ಲಿ ನಿಂತಿರುವ ಗಗನಚುಂಬಿಗಳು, ಅವುಗಳ ಪಕ್ಕದಲ್ಲೇ ಜೋಲುಮುಖದ ಜೋಪಡಿಗಳು, ಥಳಕುಬಳಕಿನ ಬಾಲಿವುಡ್ಡು, ಭಯಾನಕ ಅಂಡರವರ್ಲ್ಡು, ಕನಸುಗಳಿಗೆ ಏಣಿ ಹಾಕುವ ಮೆಹನತಿಗಳು, ಮುಗ್ಧತೆಯನ್ನು ಯಾಮಾರಿಸುವ ಮವ್ವಾಲಿಗಳು-ಹೀಗೆ ಎಲ್ಲೋ ಓದಿದ, ಎಲ್ಲೋ ಕೇಳಿದ ಸಂಗತಿಗಳ ಆಧಾರದಲ್ಲಿ ಮುಂಬೈ ಬಗ್ಗೆ ಒಂದು ಸ್ಥೂಲ ಚಿತ್ರಣ ಇಟ್ಟುಕೊಂಡು ಈ ಕತೆಗಾರನು ಮುಂಬೈಗೆ ಬಂದು ಎರಡು ದಶಕಗಳೇ ಆಗಿವೆ. 

ಈ ಎರಡು ದಶಕಗಳಲ್ಲಿ ಮಿಥಿ ನದಿಯಲ್ಲಿ ಸಾಕಷ್ಟು ಕೊಳಚೆ ಹರಿದು ಕಡಲು ಸೇರಿದೆ. ಒಂದೆರಡು ಬಾರಿ ಮುಂಬಯಿಯ ಗಂಧಗಿಯೇ ತೊಳೆದುಹೋಗುವಂಥ ಪ್ರಳಯ ಸ್ವರೂಪದ ಮಳೆಯಾಗಿದೆ. ಈ ನಡುವೆ  ಭಯಾನಕ ಬಾಂಬ್ ಸ್ಪೋಟಗಳೂ, ಅಮಾನವೀಯ ಕೋಮು ಗಲಭೆಗಳೂ ಸಂಭವಿಸಿವೆ. ಅಷ್ಟಾಗಿಯೂ, ಇಂಥ ಪ್ರಾಕೃತಿಕ ಅಥವಾ ಮನುಷ್ಯ ನಿರ್ಮಿತ ವಿಕೋಪಗಳ ಆಘಾತದಿಂದ ಮುಂಬೈ ಮಹಾನಗರಿಯು ಮತ್ತೆ ಮತ್ತೆ ಜೀವನ್ಮುಖಿಯಾಗಿರುವುದಕ್ಕೂ ಈ ಕತೆಗಾರನು ಸಾಕ್ಷಿಯಾಗಿರುವನು.  

ಆದರೆ ಈ ಕೊರೋನಾ ಕಾಲದಲ್ಲಿ ಮುಂಬೈನ ಪಾದರಸದಂಥ ಚಲನಶೀಲತೆ ಕೂಡ ಪಾಚಿಗಟ್ಟಿರುವುದು ಸುಳ್ಳಲ್ಲ!  ಲಾಕ್ ಡೌನ್ ಎಂಬುದು ಭಾಗದೌಡ್ ಮುಂಬೈನ ಕಾಲಿಗೆ ಸರಪಳಿ ಬಿಗಿದಿರುವುದು ನಿಜ. ಮುಂಬೈನ ಜೀವನಾಡಿ ಲೋಕಲ್‌ ಟ್ರೇನುಗಳು ಸಾಮಾನ್ಯ ಜನರಿಗೆ ಸ್ಥಗಿತಗೊಂಡು ಎರಡುನೂರು ದಿನಗಳೇ ಆಗಿವೆ.

ಈ ಮಹಾನಗರವನ್ನು ಚಲನಶೀಲ ಸ್ಥಿತಿಯಲ್ಲಿಡುತ್ತಿದ್ದ ಲಕ್ಷಾಂತರ ಜನರು ವಲಸೆ ಹೋಗಿರುವುದರಿಂದ ಮುಂಬೈನ ಅಸಲಿ ಜಿಂದಗಿ ಅಸ್ತವ್ಯಸ್ತ ಆಗಿದೆ. ಫುಟಪಾತುಗಳು ಜೋಪಡಪಟ್ಟಿಗಳು ಅಪಾರ್ಟಮೆಂಟುಗಳು ಪಾರ್ಕುಗಳು ಚೌಪಾಟಿಗಳು ಅರ್ಧಕ್ಕಿಂಥ ಹೆಚ್ಚು ಖಾಲಿಯಾಗಿವೆ. ಎಂದೂ ನಿದ್ರಿಸದ ನಗರವು ಇಂದು ಅರೆಪ್ರಜ್ಞಾವಸ್ಥೆಯಲ್ಲಿದ್ದಂತೆ ಕಾಣುತ್ತಿದೆ.

ಮುಂಬೈಯನ್ನು ಯಾಂತ್ರಿಕ ನಗರ ಎಂದು ಜರಿಯುವವರು, ಅದರ ಜೀವಂತಿಕೆಯನ್ನು ಕಾಣಲು ಮುಂಬೈನಲ್ಲಿ ಕೆಲಕಾಲ ಇರಬೇಕಾಗುತ್ತದೆ. ತಮ್ಮ ಪಂಚೇಂದ್ರಿಯಗಳನ್ನು ತೆರೆದಿಟ್ಟುಕೊಂಡವರಿಗೆ ಮುಂಬೈ ನಿಧಾನವಾಗಿ ದಕ್ಕುತ್ತಾ ಹೋಗುತ್ತದೆ. ದೇಶದ ಎಲ್ಲೆಲ್ಲಿಂದಲೋ ಬಂದಿರುವ ಜನರು ತಮ್ಮೊಂದಿಗೆ ಆ ಭಾಗದ ಭಾಷೆ, ಸಂಸ್ಕೃತಿ, ದೇಶೀತನದ ಗಂಧವನ್ನು ಹಚ್ಚಿಕೊಂಡೇ ಬರುವುದರಿಂದ, ಅವರೆಲ್ಲ ಮುಂಬೈನ ಯಾಂತ್ರಿಕತೆಯ ಗೋಡೆಗೆ ಸಾಂಸ್ಕೃತಿಕ ಚಿತ್ತಾರ ಬಿಡಿಸಿದಂತೆ ಭಾಸವಾಗುತ್ತದೆ.

ನಿತ್ಯ ತಿರುಗುವ ದಾರಿಯಲ್ಲಿಯ ಚಾಯ್ವಾಲಾ, ಸಬ್ಜಿವಾಲಾ, ವಡಾಪಾವ್-ಪಾನೀಪುರಿವಾಲಾಗಳು, ಘರ್‌ಗುತಿ ಖಾನಾವಾಲಿಗಳು ತಮ್ಮ ಅನಾಮಧೇಯತೆಯಲ್ಲೂ ಪರಿಚಿತ ವಲಯದೊಳಗೆ ಬಂದುಬಿಡುತ್ತಾರೆ. ಅಷ್ಟಾಗಿಯೂ ಅವರ ಹೆಸರುಗಳಾಗಲಿ ಹಿನ್ನೆಲೆಗಳಾಗಲಿ ನಮಗೆ ಮುಖ್ಯವಾಗುವುದಿಲ್ಲ; ಅದರ ಜರೂರತ್ತೂ ಇರುವುದಿಲ್ಲ. ಚಿಕ್ಕವರಾಗಿದ್ದರೆ  ಚೋಟು, ಬಾಳಾ ಅಂತಲೋ ಹಿರಿಯರಾಗಿದ್ದರೆ ಭಾಯಿಸಾಬ್, ಕಾಕಾ, ಮಾಂಶಿ ಅಂತಲೋ ಸಂಬಂಧವಲ್ಲದ ಸಂಬಂಧ ನಿತ್ಯದ ಜಿಂದಗಿಗೆ ಸಾಕಾಗುತ್ತದೆ.  

ಮುಂಬೈನಲ್ಲಿ ಕತೆ ಮತ್ತು ವಾಸ್ತವಗಳು ಸದಾ ಮುಖಾಮುಖಿಯಾಗುತ್ತಿರುತ್ತವೆ. ಇಲ್ಲಿಗೆ ಬರುವವರು ಕತೆಕಟ್ಟಿಕೊಂಡೇ ಬಂದಿದ್ದಾರೆ. ಅಥವಾ ಇಲ್ಲಿಗೆ ಬಂದ ಮೇಲೆ ಕತೆಯಾಗುತ್ತಾರೆ.  ಮುಂಬೈನ ಸಾಮಾನ್ಯ ದಿನಚರಿಯಲ್ಲೂ ನಮಗರಿವಿಲ್ಲದೇ ನೂರಾರು ಕತೆಗಳು ನಮ್ಮ ಭಾವಲೋಕ ಪ್ರವೇಶ ಮಾಡುತ್ತವೆ.

ಹೆತ್ತವರು, ಮನೆ, ಊರುಗಳನ್ನು ತೊರೆದು ಬಂದು, ಹಗಲಲ್ಲಿ ದುಡಿಯುತ್ತಾ, ರಾತ್ರಿಶಾಲೆಯಲ್ಲಿ ಕಲಿತು ಬದುಕನ್ನು ಸಾರ್ಥಕಗೊಳಿಸಿಕೊಂಡ, ಸಮಾಜದಲ್ಲಿ ಘನತೆಯನ್ನು ದಕ್ಕಿಸಿಕೊಂಡ ತುಳು-ಕನ್ನಡಿಗರದೇ ಸಾವಿರಾರು ಕತೆಗಳಿವೆ. ಮುಂಬೈನ ಯಾಂತ್ರಿಕತೆ ನಮ್ಮೊಳಗಿನ ಸೂಕ್ಷ್ಮತೆಯನ್ನು ಮೊಂಡಾಗಿಸಬಹುದು, ಇಲ್ಲಿಯ ಏಕತಾನತೆ ನಮ್ಮನ್ನು ಸಿನಿಕರನ್ನಾಗಿಸಬಹುದು ಎಂದು ನಾವು ತಪ್ಪು ತಿಳಿಯುತ್ತೇವೆ. ನಿಜ ಹೇಳಬೇಕೆಂದರೆ, ಮುಂಬೈನ  ಅಸಲಿ ಮತ್ತು ನಕಲಿ ಮುಖಗಳೇ ಆಗಾಗ ನಮ್ಮ ಸಂವೇದನೆಯನ್ನು ಚೂಪುಗೊಳಿಸುತ್ತಿರುತ್ತವೆ.

ವಿಸ್ತಾರದಲ್ಲಿ ಕಿರಿದಾದರೂ ಮುಂಬಯಿಯ ಒಡಲು ದೊಡ್ಡದು. ತನ್ನತ್ತ ಬಂದ ಯಾರನ್ನೂ ಅದು ದೂರತಳ್ಳುವುದಿಲ್ಲ. ಜಾತಿ-ಧರ್ಮ ಗಂಡು-ಹೆಣ್ಣು ಬಡವ-ಶ್ರೀಮಂತ ಎಂಬ ತಾರತಮ್ಯ ಮಾಡುವುದಿಲ್ಲ. ಹೃದಯವಂತರೂ ಮಾನವೀಯತೆಯುಳ್ಳವರೂ ಇರುವಂತೆಯೇ ಮವಾಲಿಗಳೂ ಮೋಸಗಾರರೂ ಅವಳಲ್ಲಿ ಆಸರೆ ಪಡೆಯುತ್ತಾರೆ. ಇಲ್ಲಿ ಯಾರೂ ಉಪವಾಸ ಮಲಗುವುದಿಲ್ಲ.

ಸೂರಿಲ್ಲದವರಿಗೆ ಫುಟಪಾತುಗಳನ್ನೇ ಸೆರಗಂತೆ ಹಾಸಿ ಸಹಸ್ರಾರು ಜನರಿಗೆ ಆಸರೆ ನೀಡಿದೆ ಮುಂಬಯಿ; ಎಂಥ ದುರ್ಘಟನೆಗಳಾದರೂ ಗಾಯವನ್ನು ನೆಕ್ಕಿಕೊಂಡು ಗುಣಮುಖಳಾಗಿ ಸರ್ವರನ್ನೂ ಸಲಹುವ ಅಂತ:ಕರಣದ ಮಾಯಿ! ಆದರೆ ಕೊರೋನಾ ಎಂಬ ಮಹಾಮಾರಿಯಿಂದಾಗಿ ಮುಂಬೈ ಮೊತ್ತಮೊದಲ ಬಾರಿಗೆ ಬಸವಳಿದಿರುವಂತೆ ಕಾಣುತ್ತಿದೆ. 

ವಿಶ್ವವೇ ಕೊರೋನಾ ಸೂತಕದ ಛಾಯೆಯಿಂದ ನರಳುತ್ತಿರುವುದು ನಿಜ. ಮುಂಬೈನಂಥ ಮುಂಬೈನ ಇಚ್ಚಾಶಕ್ತಿಯೂ ಕಮ್ಜೋರ್ ಆಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಅರ್ಧಕ್ಕರ್ಧ ತುಳು-ಕನ್ನಡಿಗರು ತಮ್ಮತಮ್ಮ ಊರುಗಳಿಗೆ ವಲಸೆ ಹೋಗಿದ್ದಾರೆ. ಲಾಕ್ ಡೌನ್ ಸಡಿಲುಗೊಳ್ಳುತ್ತಿದ್ದರೂ ಮುಖ್ಯವಾಗಿ ತುಳು-ಕನ್ನಡಿಗರೇ ನಡೆಸುತ್ತಿದ್ದ ಹೊಟೆಲ್ ಉದ್ಯಮ ಇನ್ನೂ ಪೂರ್ತಿಯಾಗಿ ತೆರೆದುಕೊಂಡಿಲ್ಲ. ಇಲ್ಲಿಯ ತುಳು-ಕನ್ನಡಿಗರ ಸಾಮಾಜಿಕ, ಸಾಂಸ್ಕೃತಿಕ ಸಂಬಂಧಗಳು ಸ್ಥಗಿತಗೊಂಡಿವೆಯೆಂದೇ ಹೇಳಬೇಕು.

ಎಲ್ಲಾ ಸರಿಯಾಗಿದ್ದರೆ ಮುಂಬೈನ ಹಲವಾರು ಸಂಘ ಸಂಸ್ಥೆಗಳಿಂದ ಹೊರನಾಡಿಗರ ಅಸ್ಮಿತೆಯನ್ನು ಜಾಗ್ರತಗೊಳಿಸುವ ನೂರಾರು ಕಾರ್ಯಕ್ರಮಗಳು ಜರುಗಬೇಕಿತ್ತು.  ಕನ್ನಡಿಗರ ಮಾತೃ ಸಂಸ್ಥೆಯಂತಿರುವ ಮುಂಬೈ ಕರ್ನಾಟಕ ಸಂಘವು ನಿರಂತರವಾಗಿ ನಡೆಸುತ್ತಿದ್ದ ಸಂಗೀತ ಸಾಹಿತ್ಯದ ಕಾರ್ಯಕ್ರಮಗಳಾಗಲಿ, ಜನಪ್ರಿಯ ಕುವೆಂಪು ನಾಟಕ ಸ್ಪರ್ಧೆಯಾಗಲಿ ಇಲ್ಲದೇ ಒಂದು ರೀತಿಯ ಸಾಂಸ್ಕೃತಿಕ ನಿರ್ವಾತ ನಿರ್ಮಾಣವಾಗಿದೆ.

ಇಲ್ಲಿಯ ಹೆಚ್ಚಿನ ಪತ್ರಿಕೆಗಳೂ ಪ್ರಕಟಣೆ ನಿಲ್ಲಿಸಿವೆ.  ಮುಂಬೈನ ತುಳು-ಕನ್ನಡಿಗರನ್ನು ಭಾವನಾತ್ಮಕವಾಗಿ ಬೆಸೆಯುವ ಉದಯವಾಣಿ ಕರ್ನಾಟಕ ಮಲ್ಲದಂಥ ದಿನಪತ್ರಿಕೆಗಳು ಇತ್ತೀಚೆಗೆ ಮತ್ತೆ ಪ್ರಾರಂಭವಾಗಿರುವುದು ಸ್ವಲ್ಪ ಸಮಾಧಾನಕರ ಸಂಗತಿಯಾಗಿದೆ. 

ಈ ದುರಿತ ಕಾಲದಲ್ಲಿ ಒಳನಾಡಿನ ಲೇಖಕರು, ಕಲಾವಿದರು ಡಿಜಿಟಲ್ ಮಾಧ್ಯಮಗಳ ಮೂಲಕ ಸಾಧ್ಯವಾದಷ್ಟು ಸಂವಹನ ನಡೆಸುತ್ತಿರುವುದನ್ನು ನಾವೆಲ್ಲ ಗಮನಿಸುತ್ತಿದ್ದೇವೆ. ಆದರೆ ಅದ್ಯಾಕೋ ಮುಂಬೈ ಕನ್ನಡಿಗರು ಅದರಲ್ಲಿ ಹೆಚ್ಚು ಸಕ್ರಿಯರಾದಂತೆ ಕಾಣುವುದಿಲ್ಲ.

ಕೊರೋನಾದಿಂದಾಗಿ ಸಾಮಾಜಿಕ ಸಂಪರ್ಕ ಸಾಧ್ಯವಾಗದ ಇಂಥ ವಿಷಮ ಗಳಿಗೆಯಲ್ಲಿ ಜೋಕಟ್ಟೆಯವರ ಸಂಪಾದಕತ್ವದಲ್ಲಿ “ಅವಧಿ” ಮುಂಬೈ ಬರಹಗಾರರಿಂದ, ಕಲಾವಿದರಿಂದ ವಿಶೇಷ ಸಂಚಿಕೆ ರೂಪಿಸುತ್ತಿರುವುದು ಅಭಿನಂದನಾರ್ಹವಾಗಿದೆ! ಮುಂಬೈ ಬರಹಗಾರರು ತಮ್ಮ ಬರಹಗಳನ್ನು ಆಗಾಗ ಅವಧಿಯಲ್ಲಿ ಪ್ರಕಟಿಸುವುದುಂಟು.

ಅದು ಅವರು ಒಳನಾಡಿಗರೊಂದಿಗೆ ನಡೆಸುವ ಬುದ್ಧಿ- ಭಾವಗಳ ಅನುಸಂಧಾನ. ಈ ಕತೆಗಾರನನ್ನು ಮೊತ್ತಮೊದಲ ಬಾರಿಗೆ ಅಂಕಣಕಾರನ ಪೀಠದಲ್ಲಿ ಕೂರಿಸಿದ್ದು ಅವಧಿಯೇ! ಆದರೆ ಹೀಗೆ ಅವಧಿಯ ಇಡೀ ಅಂಗಳವನ್ನೇ ಅಮ್ಚಿ ಮುಂಬೈ ಅಲಂಕರಿಸುತ್ತಿರುವುದು ಸಂಭ್ರಮಕ್ಕೆ ಕಾರಣವಾಗುತ್ತಿದೆ!  

ಕೊರೋನಾ ಈ ಸಲದ ಅಷ್ಟಮಿಗೆ ದಹಿಹಂಡಿಯಲ್ಲಿ ಹುಳಿ ಹಿಂಡಿತು.  ಚೌತಿಗೆ ಮುಂಬೈಚಾ ರಾಜಾ ಆಗಿ ಅವತರಿಸಬೇಕಾಗಿದ್ದ ಮಹಾಕಾಯ ಗಣಪನ‌ನ್ನು ವಾಮನಮೂರ್ತಿಯನ್ನಾಗಿಸಿತು. ಮುಂಬರುವ ನವರಾತ್ರಿಯಲ್ಲೂ ಗರ್ಬಾ ಉತ್ಸಾಹ ತರುವ ಲಕ್ಷಣಗಳಿಲ್ಲ. ಇನ್ನು ದೀಪಾವಳಿಗಾದರೂ ಬೆಳಕಾದೀತೇ?  ಭರವಸೆಯಿಲ್ಲ. ಅಂಥದ್ದರಲ್ಲಿ ಇಂಥ ಅಕ್ಷರಗಳ ದೀಪಗಳನ್ನು ಹಚ್ಚುವುದು ಹೆಚ್ಚು ಅರ್ಥಪೂರ್ಣವಾಗಿ ಕಾಣುತ್ತದೆ! 

ರಾಜೀವ ನಾರಾಯಣ ನಾಯಕ ಅವರು ಗುರ್ಬಾಣಕ್ಕಿ , ಲಾಸ್ಟ್ ಲೋಕಲ್ ಲೋಸ್ಟ್ ಲವ್…ಇಂತಹ ಕಥಾಸಂಕಲನಗಳ ಮೂಲಕ ಪ್ರಸಿದ್ದರು.ತಮ್ಮ ಅನೇಕ ಕತೆಗಳಿಗೆ ಬಹುಮಾನ ಪಡೆದಿರುವರು.

‍ಲೇಖಕರು Avadhi

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಗಳೆಗಳು ಬೇಕು..

ರಗಳೆಗಳು ಬೇಕು..

ಅನುಷ್ ಶೆಟ್ಟಿ ಯಾರೂ ಇರದ, ಯಾವ ಕೆಲಸವೂ ಇರದ, ಯಾವ ಜಂಜಾಟಗಳು, ರಗಳೆಗಳು, ಒತ್ತಡವೂ ಇರದ, ಸದ್ದಿರದ, ಏನೂ ಮಾಡದೆ ಎಲ್ಲರಿಂದ ದೂರವಿರುವ...

೧ ಪ್ರತಿಕ್ರಿಯೆ

  1. Shyamala Madhav

    ಹೌದು, ರಾಜೀವ್, ಇಂತಹ ಅಕ್ಷರದೀಪಗಳೇ ಮರಳಿ ಮುಂಬೈಯನ್ನು ಬೆಳಗಿ ಜೀವನ್ಮುಖಿ ಯಾಗಿ ಮಾಡಲಿ. ನಿಮ್ಮ ಯಥಾರ್ಥ ಚಿತ್ರಣ ತುಂಬಾ ಇಷ್ಟವಾಯ್ತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: