ಶ್ರೀಪಾದ ಭಟ್
ಪ್ರತಿವರ್ಷ ಅಕ್ಟೋಬರ್ ಮತ್ತು ಮೇ ರಜಾ ದಿನಗಳು ನನಗೆ ನಾಟಕವಾಡಿಸಲು ಸಿಗುವ ಅವಧಿಗಳು. ಮತ್ಯಾವುದಕ್ಕೂ ಅವನ್ನು ಪೋಲು ಮಾಡದಂತೆ ಜತನದಿಂದ ಆ ದಿನಗಳನ್ನು ಕಾದುಕೊಂಡು ಬಂದಿದ್ದೆ.
ಈ ವರ್ಷದ ಅಕ್ಟೋಬರ್ ನಲ್ಲಿ ನನ್ನ ಅನಾರೋಗ್ಯದಿಂದ ಮುಖ್ಯವಾದ ಯಾವ ನಾಟಕ ಎತ್ತಿಕೊಳ್ಳೋದಕ್ಕೂ ಆಗಲ್ಲ ಅಂದ್ಕೊಂಡಿದ್ದೆ.
ಬ್ರಹ್ಮಾವರದ ಎಸ್.ಎಂ.ಎಸ್. ಶಾಲೆಯ ಮುಖ್ಯಸ್ಥರಾಗಿರುವ ರಂಗ ನಿರ್ದೇಶಕರೂ ಆದಂತಹ ಅಭಿಲಾಷಾ ಹಂದೆಯವರು ಹುರುಪು ಮಾಡಿಯೇಬಿಟ್ಟರು. ಅವರದು ಸೆಂಟ್ರಲ್ ಸಿಲೆಬಸ್ ಶಾಲೆ. ಮಕ್ಕಳಿಗೆ ರಜವೂ ಇರಲಿಲ್ಲ. ಆದರೂ ಆಸಕ್ತ ೨೦ ಮಕ್ಕಳನ್ನು ಶಾಲೆಯ ಕೆಲಸವೇ ಇಲ್ಲಿಯೂ ನಡೆಯೋದು ಅಂತ ಪಾಲಕರನ್ನೂ, ಆಡಳಿತ ಮಂಡಳಿಯವರನ್ನೂ ಒಪ್ಪಿಸಿ ರಂಗತರಬೇತಿಗೆ ಕರೆ ತಂದರು.
ಈ ರಂಗ ತರಬೇತಿ ಶಿಕ್ಷಣದ ಮುಂದುವರಿಕೆಯ ಭಾಗವೇ ಆಗಬೇಕೆಂದು ನಿಶ್ಚಯಿಸಿದ್ದೆ. ಹೀಗಾಗಿ ‘ರಂಗ ಸಂಗಮ’ ಅನ್ನೋ ಸಂಗತಿಯಡಿ ಕಥಾರಂಗ, ಕಾವ್ಯರಂಗ ಹಾಗೂ ನಾಟ್ಯರಂಗ ವನ್ನು ಸಿದ್ದಪಡಿಸಿದೆ. ಕಥಾರಂಗದಡಿ ‘ತಪನ್’ ಮತ್ತು ‘ಅಂಚೆ ಸಂಗ್ರಹ’ ಕತೆಯನ್ನೂ, ಕಾವ್ಯರಂಗದಡಿ ಎಚ್ ಎಸ್ ವೆಂಕಟೇಶಮೂರ್ತಿ ಮತ್ತು ಕೆ ವಿ ತಿರುಮಲೇಶರ, ಸುಧಾ ಆಡುಕಳ ಅವರ ಕವನಗಳನ್ನೂ , ನಾಟ್ಯರಂಗದಡಿ ‘ಗೋಡೆಗಳು’ ನಾಟಕವನ್ನು ಮಕ್ಕಳು ಅಭಿನಯಿಸಿದರು.
ಅಗತ್ಯ ಸ್ಕ್ರಿಪ್ಟನ್ನು ಅಭಿಲಾಷಾ ಅವರೇ ರಚಿಸಿಕೊಟ್ಟರು. ಶಾಲಾ ಶಿಕ್ಷಕರಲ್ಲಿ ಆಸಕ್ತರೆಲ್ಲ ಸೇರಿ ಉಳಿದ ಅನುಕೂಲ ಕಲ್ಪಿಸಿದರು. ರಾಜು ಮಣಿಪಾಲ, ಪ್ರಶಾಂತ, ಭುವನ, ಕೌಶಿಕ್ ಮುಂತಾದ ಮಣಿಪಾಲದ ಗೆಳೆಯರು ರಂಗ ಪರಿಕರ ಸಿದ್ಧಪಡಿಸಿಕೊಟ್ಟರು.
ಈ ಮಧ್ಯೆ ಎಸ್.ಎಂ.ಎಸ್.ಹಾಗೂ ಎಂ. ಎಚ್. ಎಚ್.ಕುಂದಾಪುರದ ಶಿಕ್ಷಕರಿಗೆ ಒಂದು ದಿನದ ರಂಗತರಬೇತಿಯನ್ನೂ ‘ಚಿಂತನ’ ಅವರು ಸಂಘಟಿಸಿದರು.
ಅರೆ! ಎಷ್ಟೆಲ್ಲ ಆಯ್ತು. ಅಕ್ಟೋಬರ್ ದೀಪಾವಳಿ ನನಗೆ ಇನ್ನಷ್ಟು ಬೆಳಕು ತುಂಬ್ತು. ಮಕ್ಕಳಿಗೆ ಮತ್ತೆ ಅಭಿಲಾಷಾ ಅವರಿಗೆ ನಾನು ಋಣಿ ಅಂದ್ರೆ ಸಾಲದು.
0 ಪ್ರತಿಕ್ರಿಯೆಗಳು