
ಆಶಾ ಜಗದೀಶ್
ಇಷ್ಟಿಷ್ಟೇ ನಿನ್ನ ಕಡೆ ವಾಲುತ್ತಿದ್ದೇನೆ
ಸರಿ ತಪ್ಪುಗಳ ಗುಡ್ಡೆ ಹಾಕಿ
ಬೆಂಕಿ ಇಟ್ಟು ಅದರ ಮುಂದೆ ಕುಳಿತು
ನಿನ್ನ ಹೆಗಲಿಗೆ ಒರಗಿ ಮತ್ತಷ್ಟು ನಿನ್ನತ್ತಲೇ
ಜಾರುತ್ತಿದ್ದೇನೆ
ನಾವು ಒಟ್ಟಾಗಿ ಅಥವಾ ಗುಟ್ಟಾಗಿ
ನಡೆದದ್ದು ಬಿಟ್ಟುಬಂದ ಹಾದಿಗು
ನಿಂತ ಹೆಜ್ಜೆಗಳ ಸಾಲಿಗೂ ಗೊತ್ತಿರುವ ಹಾಗೆ
ನಾವು ಅದುಮಿಟ್ಟ ಒಲ್ಮೆಗೂ ನಲ್ಮೆಗೂ ಗೊತ್ತು
ಮತ್ತದು ಎಷ್ಟೇ ಅದುಮಿಟ್ಟರೂ
ದಮನಿಸಲಾಗದ ಅದಮ್ಯ ಚೈತನ್ಯದ ಚಿಲುಮೆ
ಎಂಬುದು ಚಿಗುರಿದಾಗಲೊಮ್ಮೆ
ಸಾಬೀತಾಗುತ್ತಲೇ ಇದೆ
ಆದರೆ ನಾವು ಪ್ರತಿ ವಸಂತಕ್ಕೂ
ಪರದೆಯೊಂದನ್ನು ಖರೀದಿಸಿ ತರುತ್ತೇವೆ
ನಮ್ಮ ಪ್ರೇಮದ ಸಮಾಧಿಗೆ ಸುಣ್ಣ ಬಣ್ಣ ಮಾಡಿ
ಪರದೆಯನ್ನು ಹೊದೆಸಿ ಅದು ಹರಿದು ಹೋಗುವುದನ್ನು ಕಾಣುತ್ತಾ
ಮತ್ತೊಂದು ವಸಂತಕ್ಕಾಗಿ ಕಾಯುತ್ತೇವೆ
ಸುಣ್ಣ ಬಣ್ಣವಂತೂ ನಮ್ಮಲ್ಲಿ
ಖಾಲಿಯಾಗುವುದೇ ಇಲ್ಲ
ಇದು ಈಗ ಸೋಜಿಗವೆನಿಸುತ್ತದೆ
ಆದರಿದು ದುರಂತ ಎನ್ನುವುದು
ಇಬ್ಬರಿಗೂ ಗೊತ್ತು
ಅದೆಷ್ಟೋ ರಾತ್ರಿಗಳ ಒಡಲು ಒದ್ದೆಯಾದದ್ದು
ನಮ್ಮ ಕಣ್ಣೀರಿನಿಂದಲೇ
ಹೃದಯ ವಿದ್ರಾವಕವಾಗಿ ಅಳುತ್ತದೆ ಪ್ರತಿಕ್ಷಣ
ಮತ್ತದಕ್ಕೆ ಈ ಜನ್ಮದಲ್ಲಿ ಮುಕ್ತಿ ಇಲ್ಲ
ಎಂಬುದು ಗೊತ್ತಾಗಿ ಹೋದಂದಿನಿಂದಲೂ
ಅಳುವಿನ ತೀವ್ರತೆ ಹೆಚ್ಚಾಗಿದೆ

ಈಗ ಸಂತೆಯಲ್ಲಿ ಕೊಳಕು ಬಟ್ಟೆ ತೊಟ್ಟ
ಕೆಟ್ಟಾ ಕೊಳಕು ಹುಚ್ಚರಂತೆ ಸಿಕ್ಕ ಸಿಕ್ಕವರಿಗೆ
ಉಪದೇಶ ಮಾಡುತ್ತೇವೆ
ಸುಖಾ ಸುಮ್ಮನೇ ಯಾರೂ ಯಾರದೋ
ಕೈಹಿಡಿಯಬೇಡಿ
ನೆನಪುಗಳ ನೆನೆಯುತ್ತಾ ಒದ್ದೆಯಾಗುವ
ಹಾದಿಗಳ ಬಳಸಬೇಡಿ
ಅರ್ಧಕ್ಕೆ ನಿಲ್ಲಿಸುವುದಿದ್ದರೆ
ಹೆಜ್ಜೆಗಳ ಪೋಣಿಸಬೇಡಿ
ಅದು ಮತ್ತಿನೇನೋ ಅಲ್ಲ
ನೀವೇ ನಿಮ್ಮ ಬದುಕಿಗಾಗಿ
ಸಾಯುವವರೆಗೂ ಅನುಭವಿಸಲಿಕ್ಕಾಗಿ
ಕೊಟ್ಟುಕೊಳ್ಳುವ ಶಾಪ
ಎಂದು…
ಆದರೆ ಅದ್ಯಾವುದನ್ನೂ ಕೇಳಿಸಿಕೊಳ್ಳದ ಅವರು
ನಮ್ಮಂತೆ ನಮ್ಮದೇ ಹೆಜ್ಜೆಗಳ ಬಳಸುತ್ತಾ
ನಾವು ನಿಲ್ಲಿಸಿದ ಬಿಂದುವಿಗೆ ಬಂದು ನಿಂತು
ಒಬ್ಬರಿಗೊಬ್ಬರು ಬೆನ್ನು ಮಾಡಿ ಅವೇ
ವಿರುದ್ಧ ದಿಕ್ಕುಗಳಲ್ಲಿ ಹೊರಟು ಹೋಗುತ್ತಿದ್ದಾರೆ
ಕಹಿನೆನಪುಗಳ ವಿಷವನ್ನು ಬದುಕಿಗೆ
ಹಿಂಡಿಕೊಳ್ಳುತ್ತಾ…
ಯಾವುದೂ ನಮ್ಮ ಕೈಲಿಲ್ಲ
ಇತಿಹಾಸ ಮರುಕಳಿಸುವುದನ್ನು
ತಪ್ಪಿಸುವುದೂ ಸಹ…
ನಾನು ಮತ್ತಷ್ಟು ಅವನತ್ತ ಒತ್ತಿಕೊಳ್ಳುತ್ತಾ
ಮತ್ತೂ ಜಾರತೊಡಗುತ್ತೇನೆ
ಆಗಾಗ ಒಂದಷ್ಟು ನೆನಪುಗಳ
ಬೆಂಕಿಗೆ ಸುರಿದು ಚಳಿ ಕಾಯಿಸಿಕೊಳ್ಳುತ್ತಾ…
ನಾವು ನಿಲ್ಲಿಸಿದ ಬಿಂದುವಿಗೆ ಬಂದು ನಿಂತು
ಬಹಳ ಇಷ್ಟವಾಯ್ತು ಆಶಾ
ಉತ್ತಮ ಕವನ.ಇಷ್ಟವಾಯ್ತು.ಅಭಿನಂದನೆಗಳು