‘ಅರ್ಧ ಸತ್ಯ’ ದ ಮೇಲೆ ಸೃಜನ್ ಕಣ್ನೋಟ

-ಸೃಜನ್

ಪೆಪ್ಪರ್ ಮಿಂಟ್

ಅರ್ಧಸತ್ಯ’- ಭಾರತೀಯ ಚಿತ್ರರಂಗದಲ್ಲೇ ಒಂದು ರೀತಿಯಲ್ಲಿ ಟ್ರೆಂಡ್ ಸೆಟ್ಟರ್ ಸಿನಿಮಾ. ಗೋವಿಂದ ನಿಹಲಾನಿಯವರು ನಿರ್ದೇಶಿಸಿದ ಸಿನಿಮಾ ಸಾಮಾನ್ಯರ ಬದುಕಿನಲ್ಲೊಂದು ತಮ್ಮ ನಡುವೆಯೇ ಇರುವ, ಭ್ರಷ್ಟ ಸರಕಾರಿ ವ್ಯವಸ್ಥೆಯೊಳಗೆ ನಲುಗುವ ಮತ್ತೊಬ್ಬ ವ್ಯಕ್ತಿಯ ಒಳದನಿ ಕೇಳಿಸಿದ ಚಿತ್ರ.

ಸತ್ಯಕ್ಕೂ ಅಸತ್ಯಕ್ಕೂ ನಡುವಿನ ದೂರ ಎಷ್ಟು ?

ಆದರ್ಶಕ್ಕೂ ವಾಸ್ತವಕ್ಕೂ ನಡುವಿನ ಅಂತರವೆಷ್ಟು ? ಈ ಪ್ರಶ್ನೆಗಳಿಗೆ ಇವತ್ತಿಗೂ ಸರಿಯಾದ ಉತ್ತರವಿಲ್ಲ. ಪರಿಸ್ಥಿತಿಗಳೊಂದಿಗೆ, ವ್ಯವಸ್ಥೆಯೊಂದಿಗೆ  ರಾಜಿಯ ಉತ್ತರಗಳನ್ನು  ಹುಡುಕಿಕೊಳ್ಳುತ್ತಿದ್ದಾರೆ. ಆ ಉತ್ತರ ಇಲ್ಲಿ’ಅರ್ಧ ಸತ್ಯ’ವಾಗಿರುತ್ತದೆ.ನಿಷ್ಟುರವಾದ ಸತ್ಯವನ್ನೇ  ಗೋವಿಂದ ನಿಹಲಾನಿ ‘ಅರ್ಧ ಸತ್ಯ’(1983) ಹೆಸರಿಂದ  ಸಿನಿಮಾ ಮಾಡಿದ್ದಾರೆ. ನಿರ್ದೇಶಕರಾಗಿ ಅವರಿಗೆ ಈ ಚಿತ್ರ ಮೈಲಿಗಲ್ಲು.

ardh_satya

ಸಿನಿಮಾದಲ್ಲಿ ನಾಯಕನಾಗಿ  ನಟಿಸಿದ ಓಂಪುರಿಗೂ ಇದು  ಕಂಡರಿಯದ ಮೊದಲ ಹಿಟ್.  ಒಂದು ಕಲಾತ್ಮಕ ಚಿತ್ರ  ಕಮರ್ಷಿಯಲ್ ಆಗಿ  ಜನಪ್ರಿಯಗೊಳ್ಳುವ ಟ್ರೆಂಡ್  ಇದರಿಂದಲೇ ಪ್ರಾರಂಭವಾಯ್ತು.  ಆದ್ದರಿಂದಲೇ ‘ಅರ್ಧ ಸತ್ಯ’  ಭಾರತಿಯ ಚಿತ್ರ ಇತಿಹಾಸದಲ್ಲೂ  ಮೈಲಿಗಲ್ಲೇ.

ನಮ್ಮ ಚಲನಚಿತ್ರ ಇತಿಹಾಸದ  ಪುಟಗಳನ್ನು ತಿರುವಿ ನೋಡಿದರೆ ಪೋಲಿಸ್ ಕಥೆಯಾಧಾರಿತ ಸಿನಿಮಾಗಳು ಪುಂಖಾನು ಪುಂಖವಾಗಿ ಸಿಗುತ್ತವೆ. ವೃತ್ತಿಯನ್ನು ಪವಿತ್ರವೆಂದು ಭಾವಿಸುತ್ತಾ ತಮ್ಮ ಪ್ರಾಣವನ್ನೇ ಧಾರೆಯೆರೆದ ನಿಷ್ಟಾವಂತ ಪೋಲಿಸ್ ಅಧಿಕಾರಿಗಳು ಒಂದು ಕಡೆಯಾದರೆ, ಲಂಚ-ಅಧಿಕಾರ ಧಿಮಾಕುಗಳಿಂದ ಮೆರೆದವರ ದಂಡು ಮತ್ತೊಂದು ಕಡೆ. ನಿಜ ಹೇಳಬೇಕೆಂದರೆ ಪೋಲಿಸ್ ಉದ್ಯೋಗ ಒಂದು ರೀತಿಯಲ್ಲಿ ಕತ್ತಿಯಂಚಿನ ಬದುಕು. ನಿಷ್ಠೆ ಪ್ರಾಮಾಣಿಕತೆಗಳು ಮೇಲಧಿಕಾರಿಗಳ ಲೋಲುಪತೆ ಎದುರು ಕೇವಲ ನಿಘಂಟಿನ ಪದಗಳು. ವೃತ್ತಿಗೆ ನ್ಯಾಯ ಒದಗಿಸಲಾಗದೆ, ಮನಸ್ಸಿಗೆ ವಿರುದ್ಧವಾಗಿ ಪರಿಸ್ಥಿತಿಗಳೊಂದಿಗೆ ರಾಜಿಯಾಗದೆ ಮಾನಸಿಕವಾಗಿ ಜರ್ಜರಿತರಾಗುತ್ತಿರುವ ಎಷ್ಟೋ ನಿಷ್ಠಾವಂತ ಅಧಿಕಾರಿಗಳಿದ್ದಾರೆ. ಜೈಲಿನ ಗೋಡೆಗಳ ಹಿಂದೆ, ಬಾಗಿಲ ಸರಳುಗಳ ಹಿಂದೆ ಕಮರಿ ಹೋಗುತ್ತಿರುವ ಖೈದಿಗಳಂತೆ ಜೈಲು ಗೋಡೆಗಳ ಈಚೆ ಇಂಥದೇ ಸ್ಥಿತಿಯಲ್ಲಿರುವ ಪೋಲೀಸರ ದುರ್ಭರ ಸ್ಥಿತಿಗಳ ಬಗ್ಗೆ ನಿಹಲಾನಿ ಸಿನಿಮಾ ಮಾಡುವವರೆಗೆ ಯಾರಿಗೂ ಗೊತ್ತಿರಲಿಲ್ಲ.

ardhy-satya-11

‘ಅರ್ಧ ಸತ್ಯ’ ಪ್ರಾಮಾಣಿಕ ಪೋಲಿಸ್ ಇನ್ಸಪೆಕ್ಟರ್ ಒಬ್ಬನ  ಕಥೆ.  ಅನಂತ್ ವೇಲಂಕರ್(ಓಂ ಪುರಿ) ಸೂಕ್ಷ್ಮ ಮನಸ್ಸಿನ ಕವಿ  ಹೃದಯದ, ಭಾವುಕ. ಆರ್ಟ್ಸ್‌ನಲ್ಲಿ ಪ್ರೊಫೆಸರ್ ಆಗಬೇಕೆಂಬ  ಮಹತ್ವಾಕಾಂಕ್ಷೆಯವ. ಆದರೆ ಅವನ ತಂದೆಯ(ಅಮರೀಶ್  ಪುರಿ) ಯೋಚನೆಗಳೇ ಬೇರೆ .ಬೀದಿಯ ರೌಡಿಗಳನ್ನು ಒದ್ದು  ದಾರಿಗೆ ತರುವಂತೆ ಹೆಂಡತಿಯನ್ನು ಕೂಡ ಒದ್ದು ದಾರಿಗೆ  ತರುವಲ್ಲಿ ತಪ್ಪೇನೂ ಇಲ್ಲವೆಂದು ಭಾವಿಸುವ ಹುಂಬ ಮನುಷ್ಯ.  ಅವನಿಗೆ ಎದುರಿನವರ ಇಷ್ಟಗಳ, ಆಸೆಗಳ ಪ್ರಮೇಯವೇ ಇಲ್ಲದವನಂತೆ ವರ್ತಿಸುವವ. ಎಲ್ಲ ತನ್ನಿಷ್ಟ.  ತಾನು ಅಂದು ಕೊಂಡದ್ದು ನೆರವೇರಿದರೆ ಸಾಕು. ಹಾಗೆಯೇ ಮಗ ಅನಂತನ ಪುಟ್ಟ ಪುಟ್ಟ ಆಸೆಗಳನ್ನು, ಬಯಕೆಗಳನ್ನು ನಿರ್ಲಕ್ಷ್ಯಿಸಿ, ನಿರಾಕರಿಸಿ ಪೋಲಿಸ್ ವೃತ್ತಿಯಲ್ಲಿ ಸೇರುವಂತೆ ಮಾಡಿದ.

ಇಷ್ಟ ಕಷ್ಟ ಗಳ ನಡುವೆ ಅನಂತ್ ಉದ್ಯೋಗಕ್ಕೆ ಸೇರಿದ ಬಳಿಕ ಅನ್ನ ಕೊಡುವ ಉದ್ಯೋಗ ಕ್ಕೆ ಪ್ರಾಮಾಣಿಕನಾಗಿರುತ್ತಾನೆ. ಹಾಗೆ ಇರಬೇಕಾಗಿರುವುದು ತನ್ನ ಕರ್ತವ್ಯವೆಂದೇ ಭಾವಿಸಿರುತ್ತಾನೆ. ಒಮ್ಮೆ ಅಲ್ಲಿ ಸ್ಥಳೀಯ ರೌಡಿ ರಾಮ್ ಶೆಟ್ಟಿ(ಸದಾಶಿವ್ ಅಮರಾಪುರಕರ್) ಹೆಸರಿನ ರೌಡಿಯನ್ನು  ಎದುರಿಸಬೇಕಾದ ಪರಿಸ್ಥಿತಿ ಬರುತ್ತದೆ. ಪೋಲಿಸ್ ಪೇದೆಯೊಬ್ಬನನ್ನು ರೌಡಿಗಳು ಥಳಿಸಿದ ಆರೋಪದ ಮೇಲೆ ರಾಮ್ ಶೆಟ್ಟಿ ಯ ಮೂವರು ಅನುಚರರನ್ನು ಅನಂತ್ ಬಂಧಿಸುತ್ತಾನೆ. ಆದರೆ ರಾಮ್‌ಶೆಟ್ಟಿಗೆ  ಅನಂತ್‌ನ ಮುಗ್ಧತೆ ನಗು ತರಿಸುತ್ತದೆ. ಆತ ಮೇಲಾಧಿಕಾರಿಗಳೊಂದಿಗೆ ಮಾತನಾಡಿ ಕ್ಷಣಗಳಲ್ಲಿ ಅವರ ಬಿಡುಗಡೆಯ ಆರ್ಡರ್ ಹೊರಡಿಸುತ್ತಾನೆ. ಇದೆಲ್ಲ ಅನಂತ್ ನ ಕಣ್ಣ ಮುಂದೆಯೇ ನಡೆಯುತ್ತದೆ. ಅನಂತನಿಗೆ ತನ್ನ ನಿಸ್ಸಹಾಯಕತೆ, ತನ್ನ ಇತಿ ಮಿತಿಗಳ ಕಲ್ಪನೆ ಸ್ಪಷ್ಟವಾಗುತ್ತದೆ. ಹತಾಶೆಯಿಂದ ಇದನ್ನು ತನ್ನಪೋಲಿಸ್  ಸ್ನೇಹಿತರೊಂದಿಗೆ ಹಂಚಿ ಕೊಳ್ಳಲು ಯತ್ನಿಸುತ್ತಾನೆ.

ಆದರೆ ಅನಂತನ ಸ್ನೇಹಿತರದೊಂದು ಕಥೆ. ಉದ್ಯೋಗದಲ್ಲಿ ಸೇರಿದ ಹೊಸದರಲ್ಲಿ ಅವರೂ ಈ ರೀತಿಯ ಆದರ್ಶ ಬದುಕಿಗಾಗಿ ಪಣ ತೊಟ್ಟವರೇ ! ಸುತ್ತಲಿನ ವ್ಯವಸ್ಥೆ ಯ ಪ್ರವಾಹದ ಎದುರು ಈಜಲಾಗದೇ ರಾಜಿಯಾದ ಮತ್ತೊಬ್ಬ ಇನ್ಸ್ಸ್‌ಪೆಕ್ಟರ್ ಹೈದರಾಲಿ(ಶಫಿ ಇನಾಮದಾರ) ಮತ್ತು ವ್ಯವಸ್ಥೆ ಯೊಂದಿಗೆ ಹೋರಾಡುತ್ತಲೇ ಜೀವಚ್ಚವವಾಗಿ ಬದುಕುತ್ತಿರುವ ಇನ್ನೊಬ್ಬ ಇನ್ಸ್ಸ್‌ಪೆಕ್ಟರ್ ಮೈಕ್ ಲೋಬೋ(ನಾಸಿರುದ್ದೀನ್ ಷಾ ) ರನ್ನು ಕಂಡು ಭಯವಾಗುತ್ತದೆ.

ಅನಂತ್ ಎದುರಿಗೆ ಎರಡೇ ದಾರಿ. ಒಂದು ರಾಜಿಯಾಗಿ ನೈತಿಕವಾಗಿ ಪತನ ಹೊಂದುವುದು, ಮತ್ತೊಂದು ರಾಜಿಯಾಗದೆ ಜೀವಚ್ಚವವಾಗಿ ಬದುಕುವುದು. ಈ ಮಧ್ಯೆ ನಲುಗುವ ಅನಂತ್ ತನ್ನ ದಾರಿಯನ್ನು ನಿರ್ಧರಿಸಲಾಗದೇ ಮದ್ಯದ ಮೊರೆ ಹೋಗುತ್ತಾನೆ. ಕ್ರಮೇಣ ಮದ್ಯ ವ್ಯಸನಿಯಾಗುತ್ತಾನೆ. ತನ್ನ ಬಗ್ಗೆ ಅತೀವ ಪ್ರೀತಿ ತೋರುವ ಕವಿತೆಯೆಂಥ ಚೆಂದನೆಯ ಹುಡುಗಿ ಜ್ಯೋತ್ಸ್ನಾಳನ್ನು ಅನಂತ್ ಹಿಂಸಿಸಲು ಪ್ರಾರಂಭಿಸುತ್ತಾನೆ. ಒಮ್ಮೆಯಂತೂ ಜ್ಯೋತ್ಸ್ನಾಳೊಂದಿಗೆ ಮಾತಾಡಲೇ ಬೇಕೆಂಬ ಉತ್ಕಟತೆಯಿಂದ ಫೋನ್ ಮಾಡಿದಾಗ “ನಾನೇ ಮಾತಾಡ್ತಿರೋದು’ ಎಂದು ಪದೇ ಪದೇ ಹೇಳಿದರೂ “ಆಕೆಗೆ ಫೋನ್ ಕೊಡಿ’ಎಂದು ಕೇಳುವಾಗಿನ ಅನಂತ್ ಮನಸ್ಥಿತಿ ಹೇಗಿರಬಹುದು ಊಹಿಸಿ. ಆ ಸಮಯದಲ್ಲಿ ಜ್ಯೋತ್ಸ್ನಾ “ಈಗ ಅವರು ಮನೇಲಿಲ್ಲ. ಬಂದ ನಂತರ ಹೇಳ್ತೇನೆ’ ಎಂದಾಗಲೇ ಅನಂತ್‌ಗೆ  ಸಮಾಧಾನ.

ತನ್ನನ್ನು ತಾನು ಅಂದಾಜಿಸಲಾಗದ ವಿಚಿತ್ರ ಸ್ಥಿತಿಯಲ್ಲಿನ ಅನಂತ್, ಲಾಕಪ್‌ನಲ್ಲಿ ಖೈದಿಯೊಬ್ಬನನ್ನು ಪ್ರಶ್ನಿಸುತ್ತಾ ಮಿತಿಮೀರಿ ಥಳಿಸುತ್ತಾನೆ. ಪರಿಣಾಮ ಖೈದಿಯ ಸಾವು. ಲಾಕಪ್ ಸಾವಿನ ಕೇಸು ಅನಂತ್ ಕೊರಳಿಗೆ ಸುತ್ತಿಕೊಳ್ಳುತ್ತದೆ. ಅದರಿಂದ ಹೊರ ಬರಲು ಅನಂತ್‌ಗೆ ಒಂದೇ ದಾರಿ ಎಂದರೆ ರಾಮ್ ಶೆಟ್ಟಿಯ ಆಶ್ರಯ ಎಂದು ಅವನ ಸ್ನೇಹಿತರೇ ಉಪಾಯ ಹೇಳುತ್ತಾರೆ. ಅನಂತ್ ನ ಗೊಂದಲಗಳು..ನಿಸ್ಸಹಾಯಕತೆ..ಆತ್ಮಸಾಕ್ಷಿಗೆ ವಿರುದ್ಧವಾಗಿ ಒಂದು ಹೆಜ್ಜೆಯನ್ನು ಮುಂದಿಡಲಾಗದ ಅವನ ಸ್ಥಿತಿ.. ಇಂಥ ವ್ಯವಸ್ಥೆಯೆಂಬ ಹೆಮ್ಮರಕ್ಕೆ ಮೂಲಕಾರಣರಾದ ರಾಮ್ ಶೆಟ್ಟಿಗಳಂಥವರೇ ಇರಬಾರದೆಂದು ತೀರ್ಮಾನಿಸಿ ಅವನನ್ನು ಕೊಂದು ಪೋಲಿಸರಿಗೆ ಶರಣಾಗತನಾಗುತ್ತಾನೆ.

ಇದು ಸದ ಪನ್ವಲ್ ಕರ್ ಬರೆದ “ಸೂರ್ಯ’ ಹೆಸರಿನ ಮರಾಠಿ ಸಣ್ಣ ಕಥೆಯಾಧರಿತ ಸಿನಿಮಾ. ಗೋವಿಂದ ನಿಹಲಾನಿ ಯವರನ್ನು ಮೂರು ಸಣ್ಣ ಕಥೆಗಳು ತುಂಬಾ ಕಾಡುತ್ತಿದ್ದವು. ಒಂದು ಪನ್ವಲ್ ಕರ್ ಬರೆದ “ಸೂರ್ಯ’, ಭೀಷ್ಮ ಸಹಾನಿಯವರ “ತಮಸ್’ ಹಾಗೂ ಮಹೇಶ್ ಎಲ್ ಕುಂಭಾರ್ ಕರ್ ನಾಟಕ “ಪಾರ್ಟಿ’.

“ಸೂರ್ಯ’ ಕಥೆಯಲ್ಲಿನ ತಲ್ಲಣ, ಮನುಷ್ಯ ಸಹಜ ಸಂಬಂಧ, ನಿಸ್ಸಹಾಯಕತೆಗಳು ನಿಹಲಾನಿಯವರನ್ನು ತುಂಬಾ ಕಾಡಿದ್ದವು. ಅಪ್ಪ ಮಗುವಿನ ನಡುವಿನ ಸಂಬಂಧದ ತೆರೆ, ತಮ್ಮ ಇಷ್ಟಗಳನ್ನು ಮಕ್ಕಳ ಮೇಲೆ ಹೇರುವ ಪರಿ,ಮಕ್ಕಳ ಮಾನಸಿಕ ವೇದನೆ,ಸಮಾಜದ ಪ್ರಭಾವ,ಪರಿಸ್ಥಿತಿಗಳೊಂದಿಗೆ ರಾಜಿಯಾಗುವ ಜನ,ರಾಜಿಯಾಗದೆ ಜೀವಚ್ಛವದಂತೆ ಬದುಕುತ್ತಾ ನಾಶವಾಗುವ ಜನ..ಇದನ್ನೆಲ್ಲಾ ಈ ಸಿನಿಮಾದಿಂದ ಮಾತ್ರ ತೋರಿಸಲು ಸಾಧ್ಯ ಎಂದು ನಿಹಲಾನಿ ಭಾವಿಸಿದ್ದರು.

ಮೂಲತಃ ನಿಹಲಾನಿ ಛಾಯಾಗ್ರಾಹಕರೂ ಆಗಿರುವುದರಿಂದ ಚಿತ್ರದಲ್ಲಿ ಅತ್ಯಂತ ಸಣ್ಣ ಸಣ್ಣ ಸಂಗತಿಗಳ ಕಡೆ ಅವರು ತೋರುವ ಪ್ರಾಮುಖ್ಯತೆ,ಅದ್ಭುತವಾದ ಕ್ಲೋಸ್ ಅಪ್  ಶಾಟ್ಸ್ ಬೆರಗುಗೊಳಿಸುತ್ತವೆ. ಕ್ಲೋಸ್ ಅಪ್ ಶಾಟ್ಸ್ ಗಳಿಂದಲೇ ಪಾತ್ರಗಳಲ್ಲಿನ ಸಂಘರ್ಷಗಳನ್ನು,ಭಾವೋದ್ವೇಗಗಳ ತೀವ್ರತೆಯನ್ನು ನಾವು ತುಂಬಾ ಸ್ಪಷ್ಟವಾಗಿ ಗಮನಿಸಬಹುದು.

govind nihalani 3

ಚಿತ್ರದಲ್ಲಿ ಅನಂತ್ ನ ಸ್ನೇಹಿತ  ಹೈದರಾಲಿ ವ್ಯವಸ್ಥೆಯೊಂದಿಗೆ  ರಾಜಿಯಾಗುತ್ತಾನೆ.  ಪ್ರಾಮಾಣಿಕತೆ, ನೈತಿಕ  ಮೌಲ್ಯಗಳನ್ನೂ  ನಿರ್ಲಕ್ಷ್ಯಿಸುತ್ತಾನೆ. ಆದರೆ  ವ್ಯವಸ್ಥೆಯ ವಿರುದ್ಧ ಈಜಲು  ಹೋಗಿ ನಾಶವಾಗುವ ಮೈಕ್  ಲೋಬೊ, ತನ್ನ  ಪ್ರಾಮಾಣಿಕತೆಯ  ಕಾರಣದಿಂದಲೇ ಉದ್ಯೋಗದಿಂದ  ಅಮಾನತುಗೊಳ್ಳುತ್ತಾನೆ.  ಬೀದಿಗೆ ಬಿದ್ದು ಭಿಕ್ಷೆ ಬೇಡುವ  ಸ್ಥಿತಿಗೆ ಬರುತ್ತಾನೆ. ಈ ಎರಡು ಸಂಕೀರ್ಣತೆಗಳು ಸಾಕು ಮನುಷ್ಯ ತನ್ನ ಮೌಲ್ಯಗಳ ಬಗ್ಗೆ ಯೋಚಿಸಲು. ಅನಂತನ ಪ್ರಾಮಾಣಿಕತೆಯ ಪ್ರತಿ ಹೆಜ್ಜೆಯನ್ನು ಮೆಚ್ಚುವ, ಅಭಿನಂದಿಸುವ ಮೂಲಕ ಜ್ಯೋತ್ಸ್ನಾ  ಅವನಲ್ಲಿ ಇಳಿಯುವ ಪರಿ ಕೂಡ ಖುಷಿಕೊಡುತ್ತದೆ. ಜ್ಯೋತ್ಸ್ನಾ ಳ ಸಹಜ ನಟನೆಯ ಸೊಬಗು ಮನಸೂರೆಗೊಳ್ಳುತ್ತದೆ.

ರಾಮ್ ಶೆಟ್ಟಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ ಸದಾಶಿವ್ ಅಮರಾಪುರ್‌ಕರ್ ಗೆ ಇದು ಮೊದಲ ಚಿತ್ರ. ಚಿತ್ರದಲ್ಲಿ ಅವರದು ಕೇವಲ ನಾಲ್ಕು ದೃಶ್ಯ ಅಷ್ಟೇ. ಪೂರ್ತಿಯಾಗಿ ರಂಗಭೂಮಿ ಹಿನ್ನೆಲೆಯಿಂದ ಬಂದ ಸದಾಶಿವ್ ನೀರು ಕುಡಿದಷ್ಟು ಸಹಜವಾಗಿವೆಯೇ ಅಭಿನಯಿಸಿ ನಮ್ಮನ್ನು ಆವರಿಸಿಕೊಳ್ಳುತ್ತಾರೆ. ಅನಂತ್ ನ ಪಾತ್ರದಲ್ಲಂತೂ ಓಂಪುರಿ ನಮ್ಮನ್ನು ಇವತ್ತಿಗೂ ಕಾಡುತ್ತಾರೆ. ಈ ಪಾತ್ರವನ್ನು ಓಂ ಪುರಿ ಹೊರತುಪಡಿಸಿದರೆ ಬೇರೆ ಯಾರಿಂದಲೂ  ಸಾಧ್ಯವಿಲ್ಲ.

ಭಾರತೀಯ ಸಿನಿಮಾಗಳಲ್ಲಿ ಕಡ್ಡಾಯವಾಗಿರುವಂತೆ ಈ ಸಿನಿಮಾದಲ್ಲಿ ಹಾಡುಗಳಿಲ್ಲ. ಖ್ಯಾತ ಮರಾಥಿ ಕವಿ ದಿಲೀಪ್ ಚಿತ್ರೆ ಯವರ ಎರಡು ಉರಿವ ಕೆಂಡದಂಥ ಕವನಗಳನ್ನು ಅನಂತ್ ಓದುತ್ತಾರೆ.

ಚಕ್ರವ್ಯೂಹ್ ಮೇ ಗುಸ್ ನೆ ಸೆ ಪೆಹ್ ಲೇ

ಕೌನ್ ಥಾ ಮೈ ಔರ್ ಕೈಸಾ ಥಾ

ಏ ಮುಜ್ಹೆ ಯಾದ್ ಯಾದ್ ಹೀ ನ ರಹೇಗಾ

ಚಕ್ರವ್ಯೂಹ್ ಮೇ ಗುಸ್ ನೆ ಕೇ ಬಾದ್

ಮೇರೆ ಔರ್ ಚಕ್ರವ್ಯೂಹ್ ಕೆ ಬೀಚ್

ಸಿರ್ಫ್ ಏಕ್ ಜಾನ್ ಲೇವಾ ನಿಕಟ್‌ತಾ ಹೈ

ಇಸ್ಕಾ ಮುಜ್ಹೆ ಪತಾ ಹಿ ನ ಚಲೇಗಾ

‘ತಕ್ಕಡಿಯಲ್ಲಿ ಒಂದು ಕಡೆ ಏನೂ ಮಾಡಲಾಗದ ನಪುಂಸಕತೆ,

ಮತ್ತೊಂದು ಕಡೆ ಪೌರುಷ.

ತಕ್ಕಡಿಯ ಮುಳ್ಳಿನ ಹತ್ತಿರ ಅರ್ಧಸತ್ಯ’ !

ಚಕ್ರವ್ಯೂಹದಂತಹ ಪೋಲಿಸ್ ವ್ಯವಸ್ಥೆ -ನಿಸ್ಸಹಾಯಕ ಅನಂತ್ …

ಸ್ಪಷ್ಟವಾಗಿ ಕಾಣುವ ‘ಅರ್ಧಸತ್ಯ’.

ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಪೋಷಕ ನಟ ಹಾಗೂ ಅತ್ಯುತ್ತಮ ಚಿತ್ರಕಥೆ ವಿಭಾಗಗಳಲ್ಲಿ ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ ಒಂದು ಜೀವಿತ ಕಾಲಕ್ಕೆ ಆಗುವಷ್ಟು ಪ್ರೇಕ್ಷಕರನ್ನು ಪಡೆದಿದೆ.

ಇದು ಮಾತ್ರ “ಅರ್ಧಸತ್ಯವಲ್ಲ’ !

ಚಿತ್ರ : ಅರ್ಧಸತ್ಯ, ವರ್ಷ-1983, ತಾರಾಗಣ : ಓಂಪುರಿ, ಸ್ಮಿತಾಪಾಟೀಲ್, ಅಮರೀಶ್ ಪುರಿ, ನಾಸಿರುದ್ದೀನ್ ಶಾ, ಸದಾಶಿವ್ ಅಮರಾಪುರ್‌ಕರ್, ಶಫಿ ಇನಾಮದಾರ, ಕವಿತೆಗಳು : ದಿಲೀಪ್ ಚಿತ್ರೆ. ಸಂಗೀತ : ಅಜಿತ್ ವರ್ಮನ್. ಛಾಯಾಗ್ರಹಣ ಮತ್ತು ನಿರ್ದೇಶನ : ಗೋವಿಂದ ನಿಹಲಾನಿ. ಸಮಯ : 130 ನಿಮಿಷ

‍ಲೇಖಕರು avadhi

May 3, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This