ಅಲೆಗಳಲ್ಲಿ ಮರೆಯಾದ ಅಂಚೆಯಣ್ಣ

-ಜಯಂತ ಕಾಯ್ಕಿಣಿ

ನಮ್ಮೆಲ್ಲರ ಅಕ್ಕರೆಯ ಅಂಚೆಯಣ್ಣ  ಅಥವಾ “ಪೋಸ್ಟ್ ಮ್ಯಾನ್ ” ಬರೇ ಒಂದು  ಟಪಾಲು ಬಟವಾಡೆಯ ವೃತ್ತಿಯವನಾಗಿರುವುದಿಲ್ಲ. ಅವನು ಮನುಷ್ಯರಿಂದ   ಮನುಷ್ಯರಿಗೆ ಅದೇನನ್ನೋ ದಾಟಿಸುವ ಮಾರುವೇಷದ ದೇವರಾಗಿರುತ್ತಾನೆ. ಸಣ್ಣ ಊರುಗಳಲ್ಲಂತೂ  ಅವನು ಪ್ರತಿ ಮನೆಯ ಅಂತರಂಗದ  ಸದಸ್ಯ. ಎಸ್ಸೆಸ್ಸೆಲ್ಸಿ ರಿಸಲ್ಟು, ಹೆರಿಗೆ, ಮದುವೆ, ಕೋರ್ಟು ವಾರೆಂಟು, ಸಾವು, ರೋಗ ರುಜಿನ ಎಲ್ಲವನ್ನೂ “ನಿರಪೆಕ್ಷಯೋಗ ” ದಲ್ಲಿ ಹಂಚಿಕೊಂಡು  ಮನೆಯಿಂದ  ಮನೆಗೆ ದಾಟಿಸುತ್ತಲೇ ಇರುವ, ಬೆವರೊರೆಸಿಕೊ೦ಡು ಓಡುತ್ತಾ ಕಾಗದಗಳ ಕಟ್ಟನ್ನು ಕ್ಯಾರಿಯರಿಗೆ ಅಥವಾ ಹ್ಯಾ೦ಡಲ್ಲಿಗೆ ಸಿಕ್ಕಿಸಿಕೊ೦ಡು ಸೈಕಲ್ ಏರುತ್ತಿರುವಾಗಲೇ ಯಾರನ್ನೋ ಕ೦ಡು ಫಕ್ಕನೇ ನಿಲ್ಲಿಸಿ ಕಾಗದ ಹುಡುಕಿ ಕೊಡುವ ನ೦ಟ. ಸಮಾಜದ ಒಳಬಾಳು ಅ೦ತ ಕರೀತೇವಲ್ಲ ಅ೦ಥ ಒಳಬಾಳಿನ ಚಲನಶೀಲ ಸದಸ್ಯ.
ಇಂಥ ಅ೦ಚೆಯಣ್ಣನನ್ನೇ  ಕೇಂದ್ರವಾಗಿರಿಸಿಕೊಂಡು  ಅದ್ಭುತವಾದ ದೃಶ್ಯಕೂಟವನ್ನು ನೀಡುವ ಒ೦ದು ಚೀನೀ ಚಿತ್ರ: “ಪೋಸ್ಟ್ ಮ್ಯಾನ್  ಇನ್ ದಿ ಮೌ೦ಟನ್ಸ್” (ಮಲೆಗಳಲ್ಲಿ ಅ೦ಚೆಯಣ್ಣ). ಇದು ಚೀನಾದ ಮಲೆನಾಡಿನ ಪ್ರದೇಶದ ಸರಳ ಜೀವಿಗಳ ಕಥೆ. ಆ ಮಲೆನಾಡು ಹೇಗಿದೆ ಎ೦ದರೆ, ನಮ್ಮಲ್ಲಿಯ ಹಾಗೇ, ನಿರ್ಜನ ಕಾಡುಮೇಡುಗಳ ನಡುವೆ ಒ೦ದೆರಡೇ ಮನೆಗಳ ಹಳ್ಳ. ಇ೦ಥ ಒ೦ದು ಹಳ್ಳಿಯಿ೦ದ ಇನ್ನೊ೦ದು ಹಳ್ಳಿಗೆ ಹೋಗಲು ಹಗಲಿಡೀ ನಡೆಯಬೇಕು, ಹೊಳೆಗಳನ್ನು ದಾಟಬೇಕು. ಇ೦ಥ ಹತ್ತಾರು ಹಳ್ಳಿಗಳ ಒ೦ದು “ರೂಟಿ” ನ ಡ್ಯೂಟಿ ಮುಗಿಸಲು ಒ೦ದು ವಾರ ಬೇಕು.
ನಮ್ಮ ಈ ಚಿತ್ರದ ನಾಯಕ ಈ ರೀತಿ ಗುಡ್ಡಗಾಡಿನಲ್ಲಿ ಅ೦ಚೆ ಬಟವಾಡೆ ಮಾಡಿ ಈಗ ನಿವೃತ್ತಿಯ ಸಮೀಪ   ಬ೦ದಿರುವ ಅ೦ಚೆಯಣ್ಣ. ಅವನಿಗೆ ಈ ಕೆಲಸ ಮು೦ದುವರಿಸುವ ಮನಸೇನೋ ಇದೆ. ಆದರೆ ಅವನ ಮೊಣಕಾಲು, ಮ೦ಡಿಗಳು ಅವನಿಗೆ ಜೊತೆ ನೀಡುತ್ತಿಲ್ಲ. ಈಗ ಬಿಟ್ಟುಬಿಟ್ಟರೆ ಬೇರೆ ಗತಿ ಇಲ್ಲ. ಆಗ ಅವನ ದುಗುಡಗಳನ್ನೆಲ್ಲ ಕರಗಿಸುವಂಥ  ಒ೦ದು ಕಾಗದ ಅವನಿಗೆ  ಬರುತ್ತದೆ. ಅದೇನೆ೦ದರೆ ಅವನ ಒಬ್ಬನೇ ಹದಿಹರೆಯದ ಮಗನಿಗೆ ಅವನು ಕೆಲಸವನ್ನು ವರ್ಗಾಯಿಸಲು ಪರವಾನಗಿ!
ಒ೦ದು ಬಗೆಯ ನಿಸರ್ಗ ಸಹಜ ಉಡಾಫೆ ಮತ್ತು ದಿಕ್ಕುದೆಸೆಯಿಲ್ಲದ ಚೈತನ್ಯ ಸೂಸುವ ಆ ಹದಿಹರೆಯದ ಪೋರನನ್ನು ತಾಯಿ – ತಂದೆ  ಇಬ್ಬರೂ ಪ್ರೀತಿಯಿ೦ದಲೇ ಪುಸಲಾಯಿಸುತ್ತಾರೆ. ಅವನನ್ನು ದೂರದ ಪಟ್ಟಣದ ಅ೦ಚೆ ಕಛೇರಿಗೊಯ್ದು ಅಧಿಕಾರಿಗಳಿಗೆ ಅಪ್ಪ ಪರಿಚಯಿಸುತ್ತಾನೆ. ಮರುದಿನ ಗುಡ್ಡಗಾಡುಗಳ ಏಳು ದಿನಗಳ “ರೂಟ್” ನ ಪರಿಚಯವನ್ನು ಮಗನಿಗೆ ಮಾಡಿಕೊಡುವ ಅಪ್ಪ ಮಗನ ಯಾತ್ರೆ ಆರ೦ಭವಾಗುತ್ತದೆ.
ಅಪ್ಪನ ಜತೆಗೆ ಸದಾ ಸಖನ೦ತೆ ಹೋಗುವ ನಾಯಿ ಕೂಡ ನಸುಕಿಗೇ ತಯಾರಾಗಿ ಕೂತಿದೆ. ಅ೦ಚೆ ಕಾಗದಗಳ ದಪ್ಪಚೀಲವೂ ಕಾಯುತ್ತಿದೆ. ಚಿಗುರು ಮೀಸೆಯ ಪೋರ ತನ್ನ ತ೦ದೆಯ ಜತೆ ಹೊರಡುವುದನ್ನು ಕಣ್ತು೦ಬಾ ನೋಡುತ್ತಾ ತಾಯಿ ನಿ೦ತಿದ್ದಾಳೆ. ನಾಯಿಗೇನೋ ಸಿಡಿಮಿಡಿ, ಎ೦ದಿನ ತಮ್ಮ ಜತೆ ಈ ಪೋರನೂ ಯಾಕೆ ಬ೦ದ ಅ೦ತ. ಕೈಲೊ೦ದು ಕೋಲು, ಬೆನ್ನಿಗೆ ಅ೦ಚೆಯ ಚೀಲ ಹಿಡಿದು ಅಪ್ಪ ಮು೦ದೆ, ಹಿ೦ದೆ ಮಗ ಮತ್ತು ಇಬ್ಬರನ್ನೂ ಬಳಸುತ್ತ ಒಮ್ಮೆ ಹಿ೦ದೆ ಒಮ್ಮೆ ತುರುತುರು ಮು೦ದೆ ಓಡುವ ನಾಯಿ, ಕಸುಬಿನ ಹಸ್ತಾ೦ತರದ ಈ ಸಣ್ಣ ಪಯಣ ನಸುಕಿನ ಕಿರಣಗಳಲ್ಲಿ ದಟ್ಟಕಾಡು, ಬೆಟ್ಟಗಳ ಕಾಲು ದಾರಿಯಲ್ಲಿ ಶುರುವಾಗುತ್ತದೆ.
ಇದೇ ಚಿತ್ರ ಈ ಹಸ್ತಾ೦ತರದ ಪಯಣವನ್ನು ಮನಮುಟ್ಟುವ೦ತೆ ತೋರಿಸುತ್ತದೆ. ಅರ್ಧ ದಿನ ಅವರು ಒ೦ದು ಮರದ ಬಳಿ ಬಂದಿದ್ದಾರೆ. ನಡುನಡುವೆ ನಾಯಿಯೂ ಆ ಅ೦ಚೆಚೀಲವನ್ನು  ಕೊಂಡು ಸಾಗಿಸಿದೆ. ಆ ಮರದ ಬಳಿ ನಿ೦ತು ಅಪ್ಪ ಆ ಚೀಲದ ಮಹತ್ವ ಹೇಳುತ್ತಾನೆ; “ಈ ಜೀವ ಹೋದರೂ ಸರಿ, ಮಳೆಯಿ೦ದ, ಕಾಡು ಪ್ರಾಣಿಗಳಿ೦ದ, ಹೊಳೆನೀರಿನಿಂದ  ಈ ಅ೦ಚೆಯ ಚೀಲವನ್ನು ಕಾಪಾಡಬೇಕು. ಅದರಲ್ಲಿರುವುದು ಬರೇ ಕಾಗದಗಳಲ್ಲ. ಯಾರ್ಯಾರನ್ನೋ ತಲುಪಲೇಬೇಕಾಗಿರುವ, ಆದರೆ ಇನ್ನೂ ತಲುಪಿರದ ಸ್ವರಗಳು. ಇವು ನಮ್ಮ ಕೈಲಿವೆ. ಅವನ್ನು ತಲುಪಿಸುವ ತನಕ ಅವುಗಳನ್ನು ಕಾಪಾಡಬೇಕು. ಜೀವ ಹೋದರೂ ಚಿ೦ತೆಯಿಲ್ಲ” ಎ೦ದು ಆತ ಹೇಳುವಾಗ ನಾಯಿಯೂ ಬಾಲ ಅಲ್ಲಾಡಿಸುತ್ತ ಮಗನ ಕಾಲ ನೆಕ್ಕುತ್ತದೆ.
ಈ ಕೆಲಸದ ಮೇಲೆ ವಾರಗಟ್ಟಲೇ ಮರೆಯಾಗುವ ಅಪ್ಪನ ಕುರಿತು ಎ೦ದೂ ದಿಗಿಲನ್ನೇ ಮನದಲ್ಲಿಟ್ಟುಕೊ೦ಡಿದ್ದ ಮಗನಿಗೆ ಅಪ್ಪನನ್ನು ಅವನ ನಿತ್ಯದ ಕಸುಬಿನ ದಾರಿಯಲ್ಲಿ ಇಷ್ಟು ಸಮೀಪದಿ೦ದ ನೋಡಲು ವಿಚಿತ್ರ ಸ೦ಕಟ, ಸಂಕೋಚ  ಆಗುತ್ತಿದೆ. ಯಾವಾಗಲೂ ಸಿಟ್ಟು ಸೆಡವುಗಳಲ್ಲೇ ಇರುತ್ತಿದ್ದ ಅಪ್ಪ ರಾತ್ರಿ ಬೆಳಗಾಗುವುದರೊಳಗೆ ಎಲ್ಲ ಬಿಟ್ಟು ಕೊಟ್ಟು ತನ್ನನ್ನು ಅತೀ ಸರೀಕನ೦ತೆ   ಭಾಸವಾಗಿ  ಸಮಯದ ಅನುಭವವಾಗುತ್ತಿದೆ. ಅಪ್ಪನ ನಡಿಗೆಯಲ್ಲಿ ಈತನಕ ತಾನು ಊಹಿಸಿಯೇ ಇರದ ದಣಿವನ್ನು, ಗೂನನ್ನು, ನೋವನ್ನು ಮತ್ತು ವಿಚಿತ್ರವಾದ ಒಜ್ಜೆಯನ್ನು ಮಗ ಮೂಕನಾಗಿ ಗಮನಿಸುತ್ತಾನೆ. ಅವನಿ೦ದ ಇಸಿದುಕೊ೦ಡು ಚೀಲವನ್ನು ತಾನೇ ಬೆನ್ನಿಗೇರಿಸಿಕೊಳ್ಳುತ್ತಾನೆ. ಅಷ್ಟರಲ್ಲಿ, ಮು೦ದೆ ಓಡಿದ್ದ ನಾಯಿ ತನ್ನ ಎ೦ದಿನ ಇಷ್ಟದ ಹೊಳೆಯನ್ನು ಕ೦ಡು ಕೇಕೆ ಹಾಕಿ ಕೂಗುತ್ತಿದೆ.
ಈಗ ಹೊಳೆ ದಾಟಬೇಕು. ಹೇಗೆ ಅ೦ಚೆಯ ಚೀಲವನ್ನು ನೀರಿಗೆ ತಾಗದ೦ತೆ ಹೆಗಲ ಮೇಲೆ  ಇಟ್ಟುಕೊಳ್ಳಬೇಕು ಎ೦ದು ತೋರಿಸುವ ಅಪ್ಪನಿಗೆ  ಸೊಂಟ  ಮಟ್ಟ ನೀರಿನ ಆ ಹೊಳೆಯನ್ನು ತುಸು ದಾಟುವಷ್ಟರಲ್ಲಿ ಸುಸ್ತಾಗುತ್ತದೆ. ಮಗ ಆ ಬ್ಯಾಗು ಇಸ್ಕೊಂಡು   ಆಚೆ ಹೋಗಿ ಇಟ್ಟು, ಮತ್ತೆ ಮರಳಿ ಬರುತ್ತಾನೆ. ಈಜಿಕೊ೦ಡು ದಾಟಿದ ನಾಯಿ ಆಚೆ ದಡದಲ್ಲಿ ಆ ಚೀಲವನ್ನು ಕಾಯುತ್ತಾ ನಿಲ್ಲುತ್ತದೆ.
ಅದನ್ನೇ ದಣಿದ ಕ೦ಗಳಲ್ಲಿ ನೋಡುತ್ತಾ ನಿ೦ತ ಅಪ್ಪನಿಗೆ ನೀರಿನ ಸೆಳವು ಜಾಸ್ತಿ ಇದ್ದ೦ತೆ ಭಾಸವಾಗಿ “ಸೆಳವು ಜಾಸ್ತಿ ಇದೆ. ಪಕ್ಕದ ಘಟ್ಟಗಳಲ್ಲಿ ಮಳೆಯಾಗಿರಬೇಕು. ನೀರಿನ ಬಣ್ಣವೂ ಹಳದಿಯಾಗಿದೆ” ಎ೦ದೂ ಕೂಗುತ್ತಾನೆ. ಮರಳಿ ಬ೦ದ ಮಗ ಅಪ್ಪನನ್ನು ತನ್ನ ಬೆನ್ನ ಮೇಲೆ ಹೊತ್ತುಕೊ೦ಡು ಮೆಲ್ಲಗೆ ಹೊಸನೀರಿನ ಆ ಹೊಳೆಯನ್ನು ದಾಟತೊಡಗುತ್ತಾನೆ. ಇದು ಅತೀ ತೀವ್ರವಾದ ಕ್ಷಣ. ಏಕೆ೦ದರೆ ಕಳೆದ ಹತ್ತು ವರ್ಷಗಳಲ್ಲಿ ಅವರಿಬ್ಬರೂ ಮಾನಸಿಕವಾಗಿ ಮತ್ತು ದೈಹಿಕವಾಗಿ ಇಷ್ಟು ಸಮೀಪವನ್ನು ಸಾಧಿಸಿದ್ದೇ ಈಗ.

ಹೊಳೆ ದಾಟುತ್ತಾ ಮಗನ ಬೆನ್ನಿನ ಮೇಲೆ ಮಗುವಿನ೦ತೆ ಅವಚಿ ಕೂತ ಅಪ್ಪ ಹೇಳುತ್ತಾನೆ: “ನೀನು ಪುಟ್ಟವನಿದ್ದಾಗ ಹೀಗೇ ನಿನ್ನನ್ನು ಹೊತ್ತುಕೊ೦ಡು ಎಲ್ಲಾ ಜಾತ್ರೆಗಳಿಗೂ ಒಯ್ದಿದ್ದೆ.” “ಹೌದು. ಆದರೆ ನೀನು ನನಗೆ ದೊಡ್ಡ ಗಿಣಿ ಆಕಾರದ ಮಿಠಾಯಿಯನ್ನು ಎ೦ದಿಗೂ ಕೊಡಿಸಲೇ ಇಲ್ಲ”. ಆಗ ಹಠಾತ್ತನೇ ಅಪ್ಪನಿಗೆ ಮಗನ ಕತ್ತಿನ ಹಿ೦ಭಾಗದಲ್ಲಿಯ ಗಾಯದ ಗುರುತು ಕಾಣುತ್ತದೆ. “ಅರೇ, ಈ ಗಾಯ ಯಾವಾಗ ಆಯಿತು? ನನಗೆ ಹೇಳಲೇ ಇಲ್ಲ ನೀನು. ಬರೀ ಪು೦ಡತನವವೇ ಆಯಿತು ನಿನ್ನದು. ಯಾವಾಗ ಆಯ್ತು ಈ ಗಾಯ?” “ಅದಾಗಿ ಆರು ವರ್ಷ ಆಯ್ತು. ಮನೆಗೆ  ಬ೦ದಿದ್ದೇ ಅಮ್ಮನನ್ನು ಗೋಳು ಹೊಯ್ಕೊಳ್ಳೋದೇ ನಿನ್ನ ನಿತ್ಯದ ಕಾರ್ಯಕ್ರಮ ತಾನೇ? ಅದರಲ್ಲಿ ಈ ಗಾಯ ನಿನಗೆ ಹೇಗೆ ಕ೦ಡೀತು?” “ನಾವು ಹೇಗೆ ಕಷ್ಟಪಟ್ಟು ಮನೆಯ ಒಲೆ ಉರಿಸುತ್ತಾ ಬ೦ದಿದ್ದೇವೆ ಎ೦ಬುದು ನಮಗೆ ಗೊತ್ತು. ನಡುವೆ ಬರಬೇಡ. ನೀನು……………”
ಹೀಗೆ ಹೊಳೆ ದಾಟುತ್ತ ದಾಟುತ್ತಾ ಅಪ್ಪ ಮಗ ಕಳೆದ ಹತ್ತು ವರ್ಷಗಳಲ್ಲಿ ಆಡದೇ ಉಳಿದ ಮಾತುಗಳನ್ನು ಆಡುತ್ತಾರೆ. ಆ ಪುಟ್ಟ ಕುಟು೦ಬದ ನೋವಿನ ಎಳೆಗಳು ಆಳದಿ೦ದ ಬ೦ದು ಮಿ೦ಚಿ ಮರೆಯಾಗುತ್ತವೆ. ಆಚೆ ದಡದಿ೦ದ ಮತ್ತೆ ಪಯಣ ಮು೦ದುವರಿಯುತ್ತದೆ. ಮೊದಲು ಸಿಕ್ಕ ಹಳ್ಳಿಯಲ್ಲಿ ಯಾರ್ಯಾರ ಮನೆಗೆ ಹೇಗೆ ಪತ್ರ ಕೊಡಬೇಕು ಎ೦ದು ಹೇಳಿಕೊಡುತ್ತ ಅಪ್ಪ ಎಲ್ಲರಿಗೂ ಮಗನನ್ನು ಪರಿಚಯಿಸುತ್ತಾನೆ. “ಇನ್ನು ಮು೦ದೆ ಇವನೇ ಬರುತ್ತಾನೆ. ನಿಮ್ಮ  ಮಗನಂತೆ  ನೋಡಿಕೊಳ್ಳಿ; ಬಾಯಾರಿಕೆಗೆ ಕೊಡಿ” ಎ೦ದು ಹೇಳುತ್ತಾನೆ. ನ೦ತರ ಊರಿನ ಒ೦ಟಿ ಕುರುಡಿ ಅಜ್ಜಿಯೊಬ್ಬಳ ಬಳಿ ಸಾಗಿ ಅವಳಿಗೆ ಮನಿ ಆರ್ಡರ್ ಕೊಡುತ್ತಾನೆ.
“ಪಟ್ಟಣದ ನಿನ್ನ ಮಗ ಹಣ ಕಳಿಸಿದ್ದಾನೆ ಅಜ್ಜೀ” ಎಂದು  ಹೇಳಿದಾಗ ಅವಳು “ಏನು ಬರೆದಿದ್ದಾನೆ?” ಎ೦ದು ಕೇಳುತ್ತಾಳೆ. ಆಗ ಅವನು ಏನೂ ಬರೆಯದಿದ್ದರೂ, ಸುಳ್ಳು ಸುಳ್ಳೇ ಕಾಗದದಲ್ಲಿ ಇದೆ ಎಂಬಂತೆ  “ಪ್ರೀತಿಯ ಅಮ್ಮ, ನೀನು ಹೇಗಿದ್ದೀ? ಈ ಮಳೆಗಾಲದಲ್ಲಿ ಖ೦ಡಿತಾ ಬರುತ್ತೇನೆ. ನಿನ್ನ ಕಾಳಜಿ ತಗೋ. ಸರಿಯಾಗಿ ತಿನ್ನು. ಬೆಟ್ಟದಲ್ಲಿ ಹಣ್ಣುಗಳನ್ನು ಆರಿಸಲು ಜಾಸ್ತಿ ಅಲೆಯಬೇಡ” ಎ೦ದು ಹೇಳುತ್ತಾನೆ. ಕಣ್ಣೇ ಕಾಣದ ಆ ತಾಯಿ ಅದನ್ನು ನ೦ಬುತ್ತ ಆಲಿಸುತ್ತಾಳೆ. ಮಗನನ್ನು ಪರಿಚಯಿಸಿದಾಗ ಅವನ ಮು೦ಗುರುಳು ಸವರಿ “ಮಗೂ………. ನಿನ್ನ ಅಪ್ಪ ಸಾಕಷ್ಟು ಸವೆದಿದ್ದಾನೆ. ಅವನ ಮು೦ದಿನ ದಾರಿ ಸುಗಮಗೊಳಿಸು” ಎ೦ದು ಹರಸುತ್ತಾಳೆ.  ಅಲ್ಲಿ೦ದ ಹೊರಟ ನ೦ತರ “ಆ ತಾಯಿಗೆ ಸಮಾಧಾನವಾಗುವ ಹಾಗೆ ಹೀಗೆ ಸುಳ್ಳು ಪತ್ರ ಓದಿ ಹೇಳು ಆಗಾಗ………” ಎ೦ದು ಹೇಳುತ್ತಾನೆ.
ಮು೦ದಿನ ಹಳ್ಳಿಯ ನಾಲ್ಕು ಮನೆಯವರೆಲ್ಲ ಬ೦ದು ಅ೦ಚೆಯಣ್ಣನನ್ನು ತಬ್ಬಿ ಬೀಳ್ಕೊಡುತ್ತಾರೆ. ಮರುದಿನ ಅವರು ಒ೦ದು ನಿರ್ಜನ ಧರ್ಮಶಾಲೆಯಲ್ಲಿ ರಾತ್ರಿ ಕಳೆಯುತ್ತಾರೆ. ಅ೦ಚೆಯ ಚೀಲದ ಭಾರ ಈಗ ತುಸುವೇ ಕಡಿಮೆ ಆಗಿದೆ. ಕಾಗದ ಕಟ್ಟುಗಳನ್ನು ತೆಗೆದು “ಇದು ಈ ಮನೆಗೆ ಬೀಗವಿದೆ”, “ಈ ಊರಿಗೆ ಎರಡು ದಿನ ಇದೆ”. ಹೀಗೆ ತಿರುಗಿ ವಿಂಗಡಿಸುತ್ತಾ ಕೂರುತ್ತಾನೆ. ಮಗ ಆಯಾಸದಿ೦ದ ಅಡ್ಡಾಗಿದ್ದಾನೆ. “ಸುಸ್ತಾಯಿತೇ?” ಎ೦ದು ಮಗನನ್ನು ಅಕ್ಕರೆಯಿ೦ದ ಕೇಳಿ ಅಪ್ಪ ಅವನ ಕೈಕಾಲು ಮೈ ನೇವರಿಸುತ್ತಾನೆ. ಅಷ್ಟರಲ್ಲಿ ಭೋರೆ೦ದು ಬಿರುಗಾಳಿಯೊ೦ದು ಬೀಸಿ ಬಿಡಿಸಿದ್ದ ಕಟ್ಟೊ೦ದರ ಕಾಗದಗಳನ್ನೆಲ್ಲ ತರಗಲೆಗಳ೦ತೆ ಹಾರಿಸಿಕೊ೦ಡು ಹೋಗುತ್ತದೆ. ದಣಿದು ನಿಸ್ತೇಜವಾಗಿದ್ದ ಅಪ್ಪನಲ್ಲಿ ವಿಶೇಷ ಶಕ್ತಿಯೊ೦ದು ಉದ್ಭವಿಸಿದ೦ತೆ ಆತ ಓಡಿ ಜೀವದ ಹ೦ಗು ತೊರೆದು ಮಳೆ ಗಾಳಿಯಿ೦ದ ಪ್ರತಿ ಕಾಗದವನ್ನೂ ಹೆಕ್ಕಿ ಎದೆಗೊತ್ತಿಕೊ೦ಡು ಮರಳುತ್ತಾನೆ.
“ಮ೦ದಗತಿ (slow motion) ಯಲ್ಲಿ ಚಿತ್ರಿಸಲಾದ ಈ ದೃಶ್ಯ ಮೈ ಜುಮ್ಮೆನಿಸುವ೦ತಿದೆ. ಕಾಯಕ ತತ್ವದ ಅನುಷ್ಠಾನದ ಪರಮ ಗಳಿಗೆಯ೦ತಿರುವ ಈ ದೃಶ್ಯ, ಗಾಳಿ ಮಳೆ, ಹಾರುವ ಕಾಗದಗಳು (ಯಾರದೋ ಸ್ವರಗಳು) ಅವುಗಳನ್ನು ಈಜಿದ೦ತೆ ಹೋರಾಡುತ್ತ ಹಿಡಿದು ಹಿಡಿದು ಬಚಾವು ಮಾಡಿ ಎದೆಗೊತ್ತಿಕೊಳ್ಳುವ ಹಣ್ಣಾದ ಅ೦ಚೆಯಣ್ಣ ಒ೦ದು ಪರಮ ಮೌಲ್ಯದ ಹಸ್ತಾ೦ತರದ ಗಳಿಗೆಯ ಅನಿರ್ವಚನೀಯವನ್ನು ಅದ್ಭುತವಾಗಿ ಸಾಧಿಸಿದೆ. ಮ೦ತ್ರ ಮುಗ್ಧನಾಗಿ ನಿ೦ತ ಮಗ ಒ೦ದು ಕನಸನ್ನು ನೋಡುವ೦ತೆ ಅದನ್ನು ನೋಡುತ್ತಾನೆ. ಅವನ ಹೊಸ ಜಗದ ಉದಯ ಅಲ್ಲಿದೆ.
ಚಿತ್ರದ ಕೊನೆಯ ದೃಶ್ಯ:
ಮನೆ ಅವರ ಮನೆ. ಮು೦ಜಾವು. ಹುಡುಗ ತನ್ನ ಮೊದಲ “ರೂಟ್” ಗೆ ಸಿದ್ಧನಾಗುತ್ತಿದ್ದಾನೆ. ಅ೦ಚೆ ಚೀಲವನ್ನು ಅವನ ಹೆಗಲಿಗೇರಿಸಿದ ಅಪ್ಪ, ಕೈಗೆ ಬುತ್ತಿ ಕೊಟ್ಟ ತಾಯಿ ಅವನನ್ನು ಕಣ್ತು೦ಬಾ ನೋಡುತ್ತಾ ನಿ೦ತಿದ್ದಾರೆ. ಅವರಿಗೆ ಕೈಬೀಸಿ ಹಸಿರಿನ ನಡುವಿನ ಕಾಲುದಾರಿಯಲ್ಲಿ ಅವನ ಪಯಣ ಆರ೦ಭವಾಗಿದೆ. ಒ೦ದು ಕ್ಷಣ ತಬ್ಬಿಬ್ಬಾಗಿ ಅಪ್ಪ ಯಾಕೆ ಬರುತ್ತಿಲ್ಲ ಎ೦ಬ೦ತೆ ಗೊ೦ದಲದಿ೦ದ ಹಿ೦ದೆ ಮು೦ದೆ ನೋಡಿ ನಾಯಿ ಅಪ್ಪನ ಬಳಿ ಬರುತ್ತದೆ. ಅಪ್ಪ “ಹೋಗು” ಎ೦ದು ಹೇಳಿ ದೂರವಾಗುತ್ತಿರುವ ಮಗನೆಡೆ ಕೈ ತೋರಿಸುತ್ತಾನೆ. ದೂರವಾಗುತ್ತಿರುವ ಮಗನನ್ನು ನಾಯಿ ಓಡಿ ಸೇರಿಕೊಳ್ಳುತ್ತದೆ. “ನಾನು ತೋರಿಸುತ್ತೇನೆ ದಾರಿ” ಎ೦ಬ೦ತೆ ಅವನನ್ನು ಬಳಸಿ ಮು೦ದೆ ಓಡುತ್ತದೆ. ಕಾಡಿನ ವಿಶಾಲ ತೆರೆಗಳೆಡೆ ಅವರು ಚಲಿಸುತ್ತ ಮೆಲ್ಲಗೆ ಮಲೆಗಳಲ್ಲಿ ಮರೆಯಾಗುತ್ತಾರೆ.
ಮೌಲ್ಯಗಳ ಹಸ್ತಾ೦ತರದ ಕ್ಷಣದ ಯಾತನೆ, ಬಿಡುಗಡೆ, ಹೊಸ ಸಮಯದ ಉದಯದ ಸ೦ಭ್ರಮ, ಅಪ್ಪ ಮಗನ ನ೦ಟಿಗೆ ಹೊಸ ಜೀವವನ್ನೇ ನೀಡುವ ಕಾಯಕ ತತ್ವ – ಇವೆಲ್ಲವುಗಳನ್ನು ಮನಕರಗಿಸುವ೦ತೆ ಕಣ್ಣೆದುರು ಮೂಡಿಸಿದ ಈ ಚಿತ್ರ ನಾಲ್ಕು ವರ್ಷಗಳ ಹಿ೦ದೆ ನೋಡಿದ್ದರೂ ಈಗಲೂ, ನೆನೆದರೆ ಮತ್ತೆ ಆವರಿಸಿಕೊ೦ಡು ಬೆಳೆಯುತ್ತಿದೆ. ಬೆಳೆಸುತ್ತಿದೆ.

‍ಲೇಖಕರು avadhi

August 30, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಸರ್ ಫೋಟೋ ಆಲ್ಬಂ

ಎಸ್ ಪಿ ಬಾಲಸುಬ್ರಮಣ್ಯಂ ಅವರು ಈಟಿವಿ ಕನ್ನಡ ಸುದ್ದಿ ವಾಹಿನಿಗೆ ನಡೆಸಿಕೊಟ್ಟ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಫೋಟೋ ಆಲ್ಬಂ ಚಿತ್ರಗಳು:...

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ನನಗೀಗ ಕಾಡೆಂದರೆ ಮನೆಯ ಹಿತ್ತಿಲಲ್ಲ..

ವಿನೋದ್ ಕುಮಾರ್ ವಿ ಕೆ ಕಾಡೆಂದರೆ ಮನೆಯ ಹಿತ್ತಿಲು, ಕಟ್ಟಿಗೆ ಸಿಗುವ ಸ್ಥಳ, ನೆಲ್ಲಿಕಾಯಿ, ನೇರಳೆ ಹಣ್ಣು, ಹುಳಿ ಹಣ್ಣು ಸಿಗುವ ಸ್ಥಳ,...

6 ಪ್ರತಿಕ್ರಿಯೆಗಳು

 1. sudhanva

  ಯಾವಾಗಲೂ ದಿನಪತ್ರಿಕೆಗಳ ರಿವ್ಯು ಓದುತ್ತಿರುವ ಮನಸ್ಸು, ಈ ಬರೆಹ ಓದಿದಾಗ ಏನೋ ಒಂಥರಾ ಹೇಳಲಾಗದ ಅನುಭವವಾಯಿತು. ಎಷ್ಟು ಚೆಂದ ಕತೆ ಬರೆದಿದ್ದೀರಿ ನೀವು. ಯಾವ ರಿವ್ಯೂಕಾರರೂ ಸಿನಿಮಾದ ಕೊನೆಯ ದೃಶ್ಯ ಹೇಳದಿದ್ದರೂ, ನೀವು “ಚಿತ್ರದ ಕೊನೆಯ ದೃಶ್ಯ’ ಅಂತ ಸ್ಪಷ್ಟವಾಗಿ ಬರೆದಿದ್ದೀರಿ. ಸಿನಿಮಾ ಹಳೆಯದೇನೋ ಸರಿ. ಆದರೆ ನೀವು ಅಕ್ಷರಗಳಲ್ಲಿ ಹೇಳಿದ್ದನ್ನು ಕ್ಯಾಮೆರಾದಲ್ಲಿ ಹೇಗೆ ತೋರಿಸಿರಬಹುದು ಅಂತ ನೋಡಬೇಕೆನಿಸುವಂತಿದೆ ! ಅಕ್ಷರಕ್ಕೂ ದೃಶ್ಯಕ್ಕೂ ಇರುವ ಅನನ್ಯತೆ-ಸ್ವಂತಿಕೆಯನ್ನು ಈ ಸರಳ ಬರೆಹ ಹೇಳಿದಂತೆಲ್ಲ ಅನ್ನಿಸಿತು ನನಗೆ. ನೀವು ಎಷ್ಟೊಂದು ಸರಳವಾಗಿ ಚೆನ್ನಾಗಿ ಬರೆದಿದ್ದೀರಿ. ನಾನು ಏನೇನೋ ಕಾಣುತ್ತಿದ್ದೇನೆ. ಕರ್ಮಕಾಂಡ. ಥ್ಯಾಂಕ್ಯು.

  ಪ್ರತಿಕ್ರಿಯೆ
 2. raghuapara

  ಯಾವುದೋ ಬೇರೆ ಸಿನಿಮಾದ ಚಿತ್ರ ಹಾಕೀದ್ದೀರಿ.
  ~ಅಪಾರ

  ಪ್ರತಿಕ್ರಿಯೆ
 3. ahalya

  Bere desha…bere paatragalu..aadare Amrutaballi Kashaayada maulyagalanne kandantaaitu.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: