ಅಲೆಪ್ಪಿಯ ಸೊಬಗಿನ ನಡುವೆ …. – ಶೂದ್ರ ಶ್ರೀನಿವಾಸ್ ಬರೆಯುತ್ತಾರೆ

ಅಲೆಪ್ಪಿಯ  ಸೊಬಗಿನ ನಡುವೆ ಇ.ಎಂ.ಎಸ್. ಅವರ ಮಾತು

– ಶೂದ್ರ ಶ್ರೀನಿವಾಸ್

‘ತುರ್ತು ಪರಿಸ್ಥಿತಿ ವಿರೋಧಿ ಲೇಖಕರ ಸಮಾವೇಶ’ ನಾನಾ ಕಾರಣಗಳಿಗಾಗಿ ಒಂದು ಸ್ಮರಣೀಯವಾದಂಥದ್ದು. ಕಾರಂತರ ಮತ್ತು ಭಾರತದ ಮೂಲೆ ಮೂಲೆಯಿಂದ ಬಂದ ಲೇಖಕರ ಮಾತು; ಸಾಂಸ್ಕೃತಿಕವಾಗಿ ಶ್ರೀಮಂತ ಅನುಭವವಾಗಿದೆ. ಒಂದು ಸಮಾಜ ಚಿಂತನಶೀಲತೆಗೆ ಸಂಬಂಧಿಸಿದಂತೆ ಎಂತೆಂಥ ಅನನ್ಯ ದಿಕ್ಕುಗಳನ್ನು ತೋರಿಸುತ್ತದೆ ಅನ್ನಿಸುತ್ತದೆ. ನಾವು ವಿ.ಜಿ.ಕೆ. ನಾಯರ್ ಜೊತೆ ಇದನ್ನು ಕುರಿತಂತೆ ಸಾಕಷ್ಟು ಚರ್ಚಿಸಿದ್ದೇವೆ. ವಿ.ಜಿ.ಕೆ. ನಾಯರ್‌ರು ಅತ್ಯಂತ ನಿಷ್ಠಾವಂತ ಮಾರ್ಕ್ಸ್‌ವಾದಿ ಕಾರ್ಯಕರ್ತರಾಗಿ ಎಷ್ಟೋ ವರ್ಷಗಳಿಂದ ಕರ್ನಾಟಕದಲ್ಲಿ ಕಾರ್ಮಿಕರು ಮತ್ತು ರೈತರ ನಡುವೆ ದುಡಿಯುತ್ತ ಬಂದಿರುವಂಥವರು. ಅವರು ನಮಗೆ ಮೊದಲೇ ತಿಳಿಸಿದಂತೆ ಕಾಮ್ರೆಡ್ ಇ.ಎಂ.ಎಸ್.ರ ಜೊತೆ ಮೂರು ದಿವಸ ಸಂಜೆ ಮಾತುಕತೆಯನ್ನು ವ್ಯವಸ್ಥೆ ಮಾಡಿದ್ದರು.ಇ.ಎಂ.ಎಸ್. ಅವರು ಹೇಗೆ ದೊಡ್ಡ ಪ್ರಮಾಣದ ರಾಜಕೀಯ ಮುತ್ಸದ್ದಿಯೋ ಹಾಗೆಯೇ ಮಲಯಾಳಂ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಗಂಭೀರವಾಗಿ ಅಧ್ಯಯನ ಮಾಡಿದವರು. ಮತ್ತು ಬಹುಮುಖ್ಯ ಲೇಖಕರೂ ಕೂಡ.ಅವರ ಬದುಕಿನುದ್ದಕ್ಕೂ ಯಾವುದೇ ಆತಂಕದ ಸ್ಥಿತಿಯನ್ನು ಕುರಿತು ಮಾತಾಡುತ್ತಾರೆ ಅಥವಾ ಬರೆಯುತ್ತಾರೆಂದರೆ ಎಲ್ಲ ‘ಸ್ಕೂಲ್ ಆಫ್ ಥಾಟ್’ಗಳ ಚಿಂತಕರು ಕೇಳುತ್ತಿದ್ದರು ಮತ್ತು ಓದುತ್ತಿದ್ದರು. ಕಾಮ್ರೆಡ್ ಇ.ಎಂ.ಎಸ್. ಅವರನ್ನು ಭೇಟಿಯಾಗುವುದಕ್ಕೆ ಮುಂಚೆಯೇ ಅವರು ನಿರಂಜನರ ‘ಚಿರಸ್ಮರಣೆ’ ಕಾದಂಬರಿಯನ್ನು ಕುರಿತು ದೇಶಾಭಿಮಾನಿ ಪತ್ರಿಕೆಯಲ್ಲಿ ಬರೆದ ಲೇಖನವನ್ನು ಅನು ವಾದಿಸಿ ‘ಶೂದ್ರ’ದಲ್ಲಿ ಪ್ರಕಟಸಿದ್ದೆ. ಹಾಗೆಯೇ ಈ ಅಂಕಣದ ಲೇಖನವನ್ನು ಸಿದ್ಧಪಡಿಸುವ ಸಮಯಕ್ಕೆ ಅವರು ಮೈಸೂರಿನಲ್ಲಿ ಯು.ಆರ್.ಅನಂತಮೂರ್ತಿಯವರ ಮಹತ್ವಪೂರ್ಣ ಕಾದಂಬರಿಯಾದ ‘ಭಾರತೀಪುರ’ವನ್ನು ಕುರಿತಂತೆ ಆಡಿದ ಮಾತುಗಳು ಈಗಲೂ ಧ್ವನಿಸುತ್ತಿದೆ. ಹಾಗೆಯೇ ಬೆಂಗಳೂರಿನಲ್ಲಿ ಸೆಂಟ್ರಲ್ ಕಾಲೇಜ್ ಸೆನೆಟ್‌ಭವನದಲ್ಲಿ ಇ.ಎಂ.ಎಸ್.ರ ಒಂದು ವಿಶೇಷ ಉಪನ್ಯಾಸವಿತ್ತು. ಆಗ ದೇವರಾಜ ಅರಸು ಅವರಂಥ ಸೂಕ್ಷ್ಮ ಸಂವೇದನೆಯ ರಾಜಕಾರಣಿ ಕೆಲವು ಕುತಂತ್ರದ ಕಾರಣಗಳಿಗಾಗಿ ಅಧಿಕಾರದಿಂದ ಕೆಳಕ್ಕಿಳಿದಿದ್ದರು. ಅದು ನಡೆದು ಎರಡು ಮೂರು ದಿನಗಳೂ ಕೂಡ ಆಗಿರಲಿಲ್ಲ. ಅಂಥ ವಿಷಾದದ ಕ್ಷಣಗಳಲ್ಲಿ ಇ.ಎಂ.ಎಸ್‌ರ ಮಾತನ್ನು ಕೇಳಿಸಿಕೊಳ್ಳಲು ಎಲ್.ಜಿ. ಹಾವನೂರರು ಜೊತೆಯಲ್ಲಿ ಬಂದರು. ಬಂದಾಗ ಕೆಲವು ಮಂದಿ ತುಂಬ ಕೆಟ್ಟದಾಗಿ ಲೊಚಗುಟ್ಟಿದರು. ಮತ್ತು ಇ.ಎಂ.ಎಸ್.ರ ಉಪನ್ಯಾಸ ಮುಗಿಸಿಕೊಂಡು ಸಂವಾದಕ್ಕೆ ಮೊದಲೇ ಅವರಿಗೆ ನಮಸ್ಕರಿಸಿ ಅರಸು ನಿರ್ಗಮಿಸಿದರು. ನಿರ್ಗಮಿಸುವಾಗಲೂ ತುಂಬ ಅಸಹ್ಯವಾಗಿ ಲೊಚಗುಟ್ಟಿದರು. ಆಗ ಇದೆಲ್ಲ ಸ್ವಾಭಾವಿಕವೆನ್ನುವ ರೀತಿಯಲ್ಲಿ ಅರಸು ಆನೆಯಂತೆ ಹೊರಟರು. ಆದರೆ ಈ ಲೊಚಗುಟ್ಟು ವಿಕೆಯನ್ನು ಗಮನಿಸಿದ ಕಾಮ್ರೆಡ್ ಇ.ಎಂ.ಎಸ್. ಅರ್ಥಪೂರ್ಣವಾಗಿ ಅರಸು ಅವರ ಪರವಾಗಿ ಪ್ರತಿಕ್ರಿಯಿಸಿದ್ದರು. ಮತ್ತು ಅವರ ಹಾವನೂರು ವರದಿಗೆ ಸಂಬಂಧಿಸಿದಂತೆ ಒಳ್ಳೆಯ ಮಾತನ್ನಾಡಿದ್ದರು. ಇದನ್ನು ಬೇರೆ ಬೇರೆ ಕಡೆ ದಾಖಲಿಸಿದ್ದರೂ; ಈ ಘಟನೆ ಒಂದು ಚಾರಿತ್ರಿಕ ಸತ್ಯವೆನ್ನುವ ಕಾರಣಕ್ಕಾಗಿ ಮತ್ತೊಮ್ಮೆ ದಾಖಲಿಸುತ್ತಿ ರುವೆ. ಒಂದು ದೊಡ್ಡ ಬಹುಮುಖಿ ಸಮಾಜದಲ್ಲಿ ಏನೇನೋ ನಡೆಯುತ್ತಿರುತ್ತದೆ.   ಕೇರಳ ಎಂಥ ಸೊಬಗಿನಿಂದ ಕೂಡಿರುವ ನಾಡು. ನಮ್ಮ ದಕ್ಷಿಣ ಕನ್ನಡದ ರೀತಿಯಲ್ಲಿ. ಕಾಮ್ರೆಡ್ ವಿ.ಜಿ.ಕೆ. ನಾಯರ್‌ರು ಬೆಳಗ್ಗೆ ಯಿಂದ ಸಂಜೆಯವರೆಗೆ ಬೋಟುಗಳಲ್ಲಿ ಸುತ್ತಾಡಿ ಸುತ್ತಿದ್ದರು.ತರಾವರಿ ಮೀನನ್ನು ತಿನ್ನಿಸುತ್ತಿದ್ದರು. ಯಾರ್ಯಾರನ್ನೋ ಭೇಟಿ ಮಾಡಿಸುತ್ತಿದ್ದರು.ಎಲ್ಲ ಕಡೆ ಕವಿ ಸಿದ್ದಲಿಂಗಯ್ಯನವರು ಒಂದು ದೊಡ್ಡ ಆಕರ್ಷಣೆಯಾಗಿದ್ದರು. ಈ ಚೋಟುದ್ದದ ಹುಡುಗ ಹೀಗೆ ಬೆಳೆದಿದ್ದಾನಾ? ಎಂದು. ಅದರಲ್ಲೂ ಸಿದ್ದಲಿಂಗಯ್ಯನವರು ತಮ್ಮ ಪದ್ಯ ಓದುವ ರೀತಿಯೇ ಆಕರ್ಷಕವಾಗಿತ್ತು. ಆ ಪದ್ಯಗಳನ್ನು ಅಷ್ಟೇ ಆಕರ್ಷಕವಾಗಿ ಡಿ.ಆರ್.ನಾಗರಾಜ್ ವಿವರಿಸಿ ಹೇಳುತ್ತಿದ್ದರು. ಅದರಲ್ಲೂ ನಾವು ಅಲಪ್ಪಿಗೆ ಹೋದಾಗ ಬೋಟಿನಲ್ಲಿ ಎಂತೆಂಥ ಅನುಭವ. ಹಾಗೆ ನೋಡಿದರೆ ಕೇರಳದಲ್ಲಿ ಅಲಪ್ಪಿಗೆ ಪ್ರತ್ಯೇಕವಾದ ಸೌಂದರ್ಯವಿದೆ.   ಕಾಮ್ರೆಡ್ ನಾಯರ್ ಅಲಪ್ಪಿ ಪ್ರದೇಶದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ಮುಖ್ಯಸ್ಥ ಗೋವಿಂದ ಮೆನನ್‌ರ ಮನೆಗೆ ಕರೆದು ಕೊಂಡು ಹೋದರು. ವಿಶಾಲವಾದ ನೀರಿನ ಪ್ರದೇಶ. ಅದರ ಮಧ್ಯೆ ತೆಂಗು ಮತ್ತು ಅಡಿಕೆ ಮರಗಳ ಜೊತೆಗೆ ಕೇರಳದ ವೈವಿಧ್ಯಮಯವಾದ ಮರಗಳು.ಆ ಹಸಿರು ಮತ್ತು ನೀರಿನ ಸೊಬಗಿ ನಲ್ಲಿ ಸೌಂದರ್ಯವನ್ನು ಬಚ್ಚಿಟ್ಟುಕೊಂಡಂತೆ ಇದ್ದ ಗೋವಿಂದ ಮೆನನ್‌ರ ಮನೆ.ತುಂಬ ವಿಶಾಲವಾಗಿರುವಂಥದ್ದು. ಮನೆಯವರಿಗಾಗಿಯೇ ಇದ್ದ ಮೂರು ನಾಲ್ಕು ಬೋಟುಗಳನ್ನು ನಿಲ್ಲಿಸಿದ್ದರು.   ನಾವು ಹೋದಾಗ ನಮ್ಮ ಬೋಟಿನ ಬಳಿಗೆ ಬಂದು ಹೂ ಗುಚ್ಛ ನೀಡಿ ಮೆನನ್ ಅವರು ಸ್ವಾಗತಿಸಿದರು. ಮನೆ ತುಂಬ ಮಂದಿ. ಮನೆ ಯವರನ್ನೆಲ್ಲ ಪರಿಚಯ ಮಾಡಿಕೊಟ್ಟರು. ಕೇರಳದ ಸಂಸ್ಕೃತಿಯನ್ನು ಬಿಂಬಿಸುವ ಚಿನ್ನದ ಬಣ್ಣದ ಬಾರ್ಡರನ್ನು ಹೊಂದಿದ್ದ ಬಿಳಿಯ ಸೀರೆ ಗಳನ್ನುಟ್ಟ ಮಹಿಳೆಯರು, ಹಣೆ ತುಂಬ ಮನ ಮೋಹಕವಾದ ತಿಲಕ. ಇದರ ಜೊತೆಗೆ ಒಟ್ಟು ಮನೆಯ ಮೂಲೆ ಮೂಲೆಯಲ್ಲೂ ದೇಸಿ ಸಂಸ್ಕೃತಿಯನ್ನು ಪ್ರತಿನಿಧಿಸುವ ಕಲಾತ್ಮಕ ಚಿತ್ರಗಳು. ಅದರಲ್ಲೂ ಆನೆಗಳ ದಂತವೈಭವ. ಇಂಥದರ ನಡುವೆ ಗೋವಿಂದ ಮೆನನ್ ಅತ್ಯಂತ ನಿರಾಡಂಬರ ವ್ಯಕ್ತಿಯಾಗಿ ನಮಗೆ ಆಕರ್ಷಿತರಾ ದರು. ಅವರು ಇಂಥ ಕಡೆ ಇರುವುದೇ ಒಂದು ಸಂಭ್ರಮದ ವಿಷಯ.   ನಾವು ಅದಕ್ಕೇ ಸಂಬಂಧಿ ಸಿಯೇ ಕೆಲವು ಪ್ರಶ್ನೆಗಳನ್ನು ಕೇಳಿದಾಗ; ತಮ್ಮ ಕುಟುಂಬ ಬೆಳೆದು ಬಂದ ಕ್ರಮ ಮತ್ತು ನೀರಿನ ನಡುವೆ ಕಂಗೊಳಿಸುವ ಮನೆ ಕುರಿತು ಹೇಳಿದರು. ಮನೆಯ ಜೊತೆಗೆ ಹತ್ತಾರು ಎಕರೆ ಪ್ರದೇಶದ ಕೃಷಿಗೆ ಸಂಬಂಧಿಸಿದಂತೆ ಹೇಳಿದರು. ಇಷ್ಟೆಲ್ಲಾ ವೈಭವವಿದ್ದರೂ ಮಾರ್ಕ್ಸ್‌ವಾದ ತಮ್ಮನ್ನು ಹೇಗೆ ಆಕರ್ಷಿಸಿತು ಎಂದು ಹೇಳಿದರು. ಹಾಗೆಯೇ ಕಾಮ್ರೆಡ್ ಇ.ಎಂ.ಎಸ್. ಮತ್ತು ಕಾಮ್ರೆಡ್ ಎ.ಕೆ. ಗೋಪಲನ್ ಹೇಗೆ ತಮಗೆ ಮುಖ್ಯ ಎನ್ನುವುದನ್ನು ಕುರಿತು ವಿವರಿಸಿದರು. ಆಗ ಅವರು ಒಂದು ಅಮೂಲ್ಯವಾದ ಮಾತನ್ನು ದಾಖಲಿಸಿದರು. ಅದೇನೆಂದರೆ: ಹೇಗೆ ಮಾರ್ಕ್ಸ್‌ವಾದಿ ಚಿಂತನೆ ಪ್ರತಿಯೊಬ್ಬ ಮನುಷ್ಯನಿಗೆ ಸರಳತೆಯನ್ನು ಕಲಿಸುತ್ತದೆ.   ಆ ಸರಳತೆಯೇ ಜನಸಾಮಾ ನ್ಯರ ನಡುವೆ ಒಂದು ಅದ್ಭುತ ಥಿಯರಿ ಯಾಗಿ ಕೆಲಸ ಮಾಡುತ್ತದೆಂದು. ನಾವು ಈ ಮಾತಿನಿಂದ ಪುಳಕಿತರಾಗಿ ತಕ್ಷಣ ನಮ್ಮ ಜೇಬುಗಳಲ್ಲಿದ್ದ ಚೀಟಿಗಳಲ್ಲಿ ಗುರ್ತು ಮಾಡಿಕೊಂಡೆವು. ಅವರ ಆ ಮಾತಿ ನಿಂದ ಮನೆಯವರೆಲ್ಲರೂ ನಿರಾಡಂಬರ ಸೌಂದ ರ್ಯದ ಪ್ರತಿನಿಧಿಗಳಂತೆ ಗೋಚರಿಸಿದರು. ಈಗಲೂ ಆ ಮನೆಯನ್ನು ಕಲ್ಪಿಸಿಕೊಂಡಾಗ ಮಲೆಯಾಳಂ ಸಾಹಿತ್ಯದ ಅತ್ಯುತ್ತಮ ಕೃತಿಗಳಂತೆ ನೆನಪಾಗುತ್ತದೆ.ಗೋವಿಂದ ಮೆನನ್ ನಮಗೆ ಊಟಕ್ಕೆ ಕೇರಳದ ತುಂಬ ಪ್ರಿಯವಾದ ತಿಂಡಿಗಳನ್ನು ಮಾಡಿಸಿದ್ದರು. ನಾಲ್ಕೈದು ವಿಧದ ಮೀನುಗಳು. ಅದರ ಜೊತೆಗೆ ರುಚಿರುಚಿ ಯಾದ ಫ್ರಾನ್ ಐಟಮ್‌ಗಳು.   ಮಿಕ್ಕ ತಿಂಡಿಗಳನ್ನು ವಿವರಿಸವುದೇ ಬೇಡ. ಆದರೆ ನಮ್ಮನ್ನು ಎಲ್ಲವನ್ನು ನಿಧಾನವಾಗಿ ಸವಿಯಿರಿ ಎಂದು ಹೇಳುತ್ತಲೇ ತಮ್ಮ ಮನೆಯ ಮತ್ತು ಮಲೆಯಾಳಂ ಸಂಸ್ಕೃತಿಯ ಕೆಲವು ತಿಂಡಿ ಯಾಕೆ ಪ್ರಿಯ ಎಂದು ವಿವರಿಸುತ್ತಿದ್ದರು. ನಮಗೆ ಬಡಿಸಲು ನಿಂತಿದ್ದ ಇಬ್ಬರು ಮೂವರು ಮಹಿಳೆಯರು ನಾವು ತಿನ್ನುವು ದನ್ನು ನೋಡುತ್ತ ಗೋಡೆಗಂಟಿಕೊಂಡ ಗೊಂಬೆಗಳಂತೆ ನಿಂತಿದ್ದರು. ಅವರ ಆ ಭಾವಚಿತ್ರವನ್ನು ತೆಗೆದಿದ್ದರೆ; ಮನೆತುಂಬ ಡಿಸ್‌ಪ್ಲೇ ಮಾಡಿದ್ದ ಚಿತ್ರಗಳಲ್ಲಿ ಅವರೂ ಮರ್ಜ್ ಆಗಿಬಿಡುತ್ತಿದ್ದರು.   ಊಟವಾದ ಮೇಲೆ ಗೋವಿಂದ ಮೆನನ್ ಅವರು ಕವಿ ಸಿದ್ದಂಗಯ್ಯನವರ ಕಾವ್ಯವನ್ನು ಕೇಳಲು ಬಯಸಿದ್ದರು. ಸಿದ್ದಲಿಂಗಯ್ಯನವರು ತಮ್ಮ ಬಟ್ಟೆಯ ಚೀಲದಿಂದ ‘ಹೊಲೆಮಾದಿಗರ ಹಾಡು’ ಸಂಕಲನ ತೆಗೆದರು. ಸಾಕಷ್ಟು ಕವನಗಳನ್ನು ಓದಿದರು.ಅವುಗಳನ್ನು ವಿವರಿಸಲು ಡಿ.ಆರ್.ನಾಗರಾಜ್ ಇದ್ದೇ ಇದ್ದ. ವಿವರಣೆಯ ಜೊತೆಗೆ ಸಿದ್ದಲಿಂಗಯ್ಯನವರ ಓದಿನ ಕ್ರಮವೇ ಒಂದು ರೀತಿಯಲ್ಲಿ ಕಮ್ಯುನಿಕೇಟ್ ಮಾಡುತ್ತಿತ್ತು. ಈ ಪುಟ್ಟ ಹುಡುಗ ಇಷ್ಟು ಚೆನ್ನಾಗಿ ಓದುತ್ತಿದ್ದಾನಲ್ಲ ಎಂದು ಮನೆಯವರೆಲ್ಲ ಅಲ್ಲಲ್ಲಿ ನಿಂತು ನೋಡುತ್ತಿದ್ದರು.ಹಾಗೆಯೇ ಕೆಲವು ಕೆಲಸಗಾರರು ಕಿಟಕಿಗಳಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದರು. ಅವರಿಗೆಲ್ಲ ಯಾರೋ ದೂರದಿಂದ ದೊಡ್ಡವರು ಬರೆದಿದ್ದಾರೆಂದು ಕುತೂಹಲ ತುಂಬಿಕೊಂಡಿತ್ತು.ಸಿದ್ದಲಿಂಗಯ್ಯ ಅಲ್ಲೇನು ಕರ್ನಾಟಕದಲ್ಲೂ ಕೂಡ ಸಾಕಷ್ಟು ಕುತೂಹಲವನ್ನು ಬೆಳೆಸಿದ್ದವರು. ಅತ್ಯಂತ ಆತ್ಮೀಯವಾದ ಕೆಲವು ಗಂಟೆಗಳನ್ನು ಗೋವಿಂದಮೆನನ್ ಅವರ ಮನೆಯಲ್ಲಿ ಕಳೆದೆವು. ಬೋಟಿನಲ್ಲಿ ಕೂತು ಆ ಮನೆಯನ್ನು ಬಿಡುವಾಗ; ಎಲ್ಲರೂಮತ್ತೊಮ್ಮೆ ಬರಲು ಹೇಳಿದರು. ಬೆಂಗಳೂರಿಗೆ ಹೋಗುವ ಮುನ್ನ ಕರೆದುಕೊಂಡು ಬರಲು ವಿ.ಜಿ.ಕೆ.ನಾಯರ್‌ರಿಗೆ ಮೆನನ್ ಅವರು ಹೇಳಿದರು. ನಾವು ನಮಸ್ಕರಿಸಿ ಹೊರಟೆವು. ಅವರೆಲ್ಲ ನಮ್ಮನ್ನು ಬೀಳ್ಕೊಡಲು ನಮಸ್ಕರಿಸುತ್ತ ನಿಂತಿದ್ದರು.ಅದೊಂದು ಭಾವನಾತ್ಮಕ ನೋಟ. ಬೋಟ್‌ನ ಎಂಜಿನ್ನು ಶಬ್ದ ಮಾಡುತ್ತ ಹೊರಟಿತು. ಬಹುದೂರದವರೆಗೂ ಅವರು ನಿಂತೇ ಇದ್ದರು.ಕಾವ್ಯಕ್ಕೆ ಹೇಳಿ ಮಾಡಿಸಿದ ದೃಶ್ಯ. ಬೋಟಂತೂ ನೀರನ್ನು ಸೀಳಿಕೊಂಡು ನೂರಾರು ಮಂದಿಯನ್ನು ಕರೆದುಕೊಂಡು ಹೋದಂತೆ ಮತ್ತೊಂದು ದಡಕ್ಕೆ ತಂದುಬಿಟ್ಟಿತು. ಅಲ್ಲಿ ನಮ್ಮನ್ನು ಬರಮಾಡಿಕೊಳ್ಳಲು ಹತ್ತಾರು ಮಂದಿ ಮಹಿಳಾ ಕಾರ್ಯಕರ್ತೆಯರು ಕೆಂಪು ಬಾವುಟವನ್ನು ಹಿಡಿದು ನಿಂತಿದ್ದರು. ಕಾಮ್ರೆಡ್ ನಾಯರ್ ಅವರು ಅಲ್ಲಿ ಒಂದು ಕಾರ್ಯಕ್ರಮ ವ್ಯವಸ್ಥೆ ಮಾಡಿದ್ದರು. ಒಂದು ಸಾಮಾನ್ಯ ಸಭಾಂಗಣ. ಸುಮಾರು ನೂರಕ್ಕೂ ಮೇಲ್ಪಟ್ಟು ಮಹಿಳಾ ಕಾರ್ಯಕರ್ತೆಯರು ನೆರೆದಿದ್ದರು.ಅವರೆಲ್ಲ ಪಕ್ಷಕ್ಕಾಗಿ ವಿವಿಧ ಜನರೊಡನೆ ದುಡಿಯುತ್ತಿರುವಂಥವರು.ನಮ್ಮನ್ನೆಲ್ಲ ಕಾಮ್ರೆಡ್ ನಾಯರ್ ಅವರು ಪರಿಚಯ ಮಾಡಿಕೊಟ್ಟರು.ನಾವೆಲ್ಲ ಮಾತಾಡಿದೆವು. ಅದನ್ನು ತಮ್ಮ ಭಾಷೆಯ ಜನಕ್ಕೆ ತರ್ಜುಮೆ ಮಾಡಿ ಹೇಳಿದರು. ಅಲ್ಲಿಯೂ ತಮ್ಮ ಕಾವ್ಯ ಮತ್ತು ಆಕರ್ಷಕ ಮಾತಿನಿಂದ ಎದ್ದು ಕಾಣುತ್ತಿದ್ದರು.ಸುಮಾರು ಒಂದೂವರೆ ಗಂಟೆ ನಾವು ಅಲ್ಲಿದ್ದು, ನಂತರ ಮೆನನ್ ಅವರ ಮನೆಯಿಂದ ಬಂದಿದ್ದ ಬೋಟಿನಲ್ಲಿಯೇ ಕೊಚ್ಚಿನ್ ತಲುಪಿದೆವು.ಸಂಜೆ ಆರುಗಂಟೆಯಾಗಿತ್ತು. ಆರೂವರೆಗೆ ನಾವು ಇ.ಎಂ.ಎಸ್. ಅವರನ್ನು ಭೇಟಿಯಾಗಬೇಕಾಗಿತ್ತು ಸಂವಾದಕ್ಕೆ. ನಾವು ಕಾಮ್ರೆಡ್ ಇ.ಎಂ.ಎಸ್. ಅವರನ್ನು ಭೇಟಿಯಾಗಲು ಹೋದಾಗ; ಅವರ ಸುತ್ತಲೂ ಯಾರ್ಯಾರೋ ನೆರೆದಿದ್ದರು. ಅವರಲ್ಲಿ ಕೆಲವರು ಬೇರೆ ರಾಜ್ಯಗಳಿಂದ ಸಮಾವೇಶಕ್ಕೆ ಬಂದವರೂ ಆಗಿದ್ದರು. ಸ್ವಲ್ಪ ಸಮಯದ ನಂತರ ನಮಗೋಸ್ಕರ ವ್ಯವಸ್ಥೆ ಮಾಡಿದ್ದ ಕೊಠಡಿಗೆ ಇ.ಎಂ.ಎಸ್. ಬಂದರು. ನಮ್ಮನ್ನೆಲ್ಲ ಮತ್ತೊಮ್ಮೆ ನಾಯರ್ ಪರಿಚಯ ಮಾಡಿಕೊಟ್ಟರು. ಮೊದಲು ಸಮಾವೇಶದ ಬಗ್ಗೆ ನಮ್ಮ ಅಭಿಪ್ರಾಯ ಕೇಳಿದರು. ನಾವು ಖುಷಿಯಿಂದ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದೆವು. ಇ.ಎಂ.ಎಸ್. ತಮ್ಮ ಮಾತಿಗೆ ಮುನ್ನ ಮತ್ತೊಮ್ಮೆ ಶಿವರಾಮ ಕಾರಂತರ ಉದ್ಘಾಟನಾ ಭಾಷಣದ ಮಾತುಗಳನ್ನು ಉಲ್ಲೇಖಿಸಿ ಮಾತಾಡಿದರು.   ಅದಕ್ಕೆ ಪೂರಕವಾಗಿ ಡಿ.ಆರ್.ನಾಗರಾಜ್, ಕಾರಂತರ ವಿವಿಧ ಮುಖಗಳಿಗೆ ಸಂಬಂಧಿಸಿದಂತೆ ವಿವರಿಸಿದ. ಕಾರಂತರು ಮೊದಲಿನಿಂದಲೂ ಸಾಹಿತ್ಯದಷ್ಟೇ ಸಾಮಾಜಿಕ ಮತ್ತು ರಾಜಕೀಯ ವಿಷಯಗಳಿಗೆ ಅನ್ವಯಿಸಿ ತಮ್ಮ ಧೋರಣೆಗಳ ತೀಕ್ಷ್ಣತೆಯನ್ನು ಹೇಗೆ ಉಳಿಸಿಕೊಂಡು ಬಂದಿದ್ದಾರೆಂಬುದನ್ನು ವಿವರಿಸಿದ ಮತ್ತು ಅತ್ಯಂತ ಶಿಸ್ತುಬದ್ಧ ಲೇಖಕರು ಎಂಬುದನ್ನು ನಾಗರಾಜ್ ತನ್ನ ಮಾಮೂಲಿ ವಿವರಣಾತ್ಮಕ ನುಡಿಗಳಿಂದ ಕಾರಂತರ ಪ್ರಾಮಾಣಿಕ ಚಿತ್ರವನ್ನು ಎ.ಎಂ.ಎಸ್ ಅವರ ಮುಂದಿಟ್ಟ. ಅದರ ಜೊತೆಗೆ ಒಟ್ಟು ಅವರ ಬರವಣಿಗೆಯ ಧೋರಣೆಯ ಬಗ್ಗೆ ಒಂದು ವಾಸ್ತವ ಚಿತ್ರಣವನ್ನು ಮುಂದಿಟ್ಟ.   ಒಂದು ದೃಷ್ಟಿಯಿಂದ ಡಿ.ಆರ್.ನ ಮಾತುಗಳಿಂದ ಇ.ಎಂ.ಎಸ್. ಅವರು ಸಂತೋಷಗೊಂಡಿದ್ದರು. ಇದಾದ ಮೂರು ದಿನ ಸಂಜೆ ಸುಮಾರು ಒಂದೂವರೆ ಗಂಟೆಗೂ ಮೇಲ್ಪಟ್ಟು ನಮ್ಮಿಡನೆ ಮಾತುಕತೆಗೆ ಕೂರುತ್ತಿದ್ದರು. ಮೊದಲನೆಯ ದಿನ ಚೀನಾ ಮತ್ತು ರಷ್ಯಾದ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಯ ಬಗ್ಗೆ ಮಾತಾಡಿದರು. ನಂತರ ಸ್ವಾತಂತ್ರ ಚಳವಳಿ, ಅದರಲ್ಲಿ ಎಡಪಂಥೀಯರ ಪಾಲ್ಗೊಳ್ಳುವಿಕೆ ಹಾಗೂ ನಂತರದ ದಿನಗಳಲ್ಲಿ ಎರಡು ಕಮ್ಯುನಿಸ್ಟ್ ಪಕ್ಷಗಳ ಭಿನ್ನಾಭಿಪ್ರಾಯಕ್ಕೆ ಸಂಬಂಧಿಸಿದಂತೆ ಮಾತಾಡಿದರು.   ಮೂರನೆಯ ದಿನ ಗಾಂಧೀಜಿ, ನೆಹರೂ ಹಾಗೂ ತುರ್ತು ಪರಿಸ್ಥಿತಿಯ ರಾಜಕಾರಣದವರೆಗೂ ತಮ್ಮ ಅಭಿಪ್ರಾಯಗಳನ್ನು ಒಬ್ಬ ಪ್ರಾಮಾಣಿಕ ಅಧ್ಯಾಪಕ ಮಂಡಿಸುವ ರೀತಿಯಲ್ಲಿ ಹೇಳುತ್ತ ಹೋದರು. ನಂತರ ಡಿ.ಆರ್.ನಾಗರಾಜ್ ಸಾಕಷ್ಟು ದೀರ್ಘವಾಗಿ ಅವರ ಜೊತೆ ಸಂವಾದಕ್ಕೆ ತೊಡಗಿದ್ದ. ಆಗೆಲ್ಲ ಅತ್ಯಂತ ಪ್ರೀತಿಯಿಂದ ಕೇಳಿಸಿಕೊಳ್ಳುತ್ತ ಮಧ್ಯೆ ಮಧ್ಯೆ ತಮ್ಮ ಮಾತಿನ ಉಗ್ಗುವಿಕೆಯ ನಡುವೆಯೂ ರಾಜಕೀಯ ಮತ್ತು ಇತಿಹಾಸವನ್ನು ಹೀಗೆಯೇ ನೋಡಬೇಕು ಎಂದು ಅತ್ಯಂತ ವಿನಯದಿಂದ ಹೇಳುತ್ತಾ ಹೋದರು. ಒಂದು ದೃಷ್ಟಿಯಿಂದ ಹೇಳುತ್ತ ಹೋದರು ಎನ್ನುವುದಕ್ಕಿಂತ ನಾನು ಹೀಗೆ ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಬದುಕಿದ್ದೇನೆ ಎಂಬುದನ್ನು ನಮ್ರತೆಯಿಂದ ವಿವರಿಸಿದಂತಿತ್ತು. ನಾವಂತೂ ತಲೆತುಂಬ ಏನೇನೋ ತುಂಬಿಕೊಂಡು ಆನಂದದಿಂದ ಬೆಂಗಳೂರು ತಲುಪಿದೆವು.  
–  ಕೃಪೆ : ವಾರ್ತಾಭಾರತಿ
 ]]>

‍ಲೇಖಕರು G

April 12, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಹಾರಾಜಾ ಕಾಲೇಜು: ಒಂದು ನಾಸ್ಟಾಲ್ಜಿಯಾ

ಮಹಾರಾಜಾ ಕಾಲೇಜು: ಒಂದು ನಾಸ್ಟಾಲ್ಜಿಯಾ

ಹೆಚ್ ಎಸ್ ಈಶ್ವರ್ ಯಾವೊಬ್ಬ ವ್ಯಕ್ತಿಯ ಶಾಲಾಕಾಲೇಜು ದಿನಗಳು ಬಹುಪಾಲು ಸ್ಮರಣೀಯವಾಗಿರುತ್ತವೆ ಮತ್ತು ನಂತರದ ಬದುಕಿಗೆ ಅವಶ್ಯಕ ಬುನಾದಿಯನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This