ಅಲ್ಲಮ ಮತ್ತು ಬಸವ

ನಟರಾಜ್ ಹುಳಿಯಾರ್ 

magicvesselsborder.gif

ಲಂಕೇಶ್ ಹಾಗೂ ಡಿ.ಆರ್ ಇಬ್ಬರೂ ವಿಶಿಷ್ಟ ಐಡೆಂಟಿಟಿಯ ಹಾಗೂ ವಿಭಿನ್ನ ಮಾರ್ಗಗಳ ವ್ಯಕ್ತಿಗಳಾಗಿದ್ದರಿಂದ ಅವರಿಬ್ಬರ ನಡುವೆ ವಿಚಿತ್ರ ಟೆನ್ಷನ್ ಇರುತ್ತಿತ್ತು. ಆದರೆ ಇದೆಲ್ಲದರ ನಡುವೆ ನಡೆದ ಎರಡು ಪುಟ್ಟ ಘಟನೆಗಳು ಲಂಕೇಶ್-ಡಿ.ಆರ್ ನಡುವಣ ಸಂಬಂಧದಲ್ಲಿ ತಿಕ್ಕಾಟ ತುಂಬಿದ್ದ ಕಾಲದಲ್ಲೂ ಇದ್ದ ಪರಸ್ಪರ ಕಾಳಜಿಯನ್ನು ಸೂಚಿಸುವಂತಿವೆ. ಈ ತಿಕ್ಕಾಟ ಅತಿಗೆ ಹೋಗಿದ್ದ ಕಾಲದಲ್ಲೇ ಡಿ.ಆರ್ ದೆಹಲಿಯ ಸಭೆಯೊಂದರಲ್ಲಿ ಲಂಕೇಶರನ್ನು “ಜೀನಿಯಸ್ ಆಫ್ ದಿ ಸೆಂಚುರಿ” ಎಂದು ವರ್ಣಿಸಿದರು. ದೆಹಲಿಯ ಕಥಾ ಸಂಸ್ಥೆಯ ಗೀತಾ ಧರ್ಮರಾಜನ್ ಹೊರತಂದ ಕನ್ನಡ ಕತೆಗಳ ಇಂಗ್ಲಿಷ್ ಸಂಕಲನಕ್ಕಾಗಿ ಕತೆಯೊಂದನ್ನು ಆರಿಸಬೇಕಾಗಿ ಬಂದಾಗ, ಡಿ.ಆರ್. ಲಂಕೇಶರ “ಸಹಪಾಠಿ” ಕತೆಯನ್ನು ಆರಿಸುತ್ತಾ, ಇದು “ಶತಮಾನದ ಕತೆ” ಎಂದು ವ್ಯಾಖ್ಯಾನ ಮಾಡಿದರು. ಇದು ಲಂಕೇಶರಿಗೆ ಎಷ್ಟೋ ದಿನಗಳ ಕಾಲ ಗೊತ್ತಿರಲಿಲ್ಲ. ಇದಕ್ಕೆ ಸಂವಾದಿಯೆನ್ನಬಹುದಾದ ಘಟನೆ: ತೊಂಬತ್ತೇಳರ ಸುಮಾರಿಗೆ ಡಿ.ಆರ್. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ವೈಸ್ ಛಾನ್ಸಲರ್ ಆಗಲು ಬಯಸಿದ್ದರು. ಹಾ.ಮಾ.ನಾಯಕರು ಆ ಸಲದ ಉಪಕುಲಪತಿಗಳನ್ನು ಆರಿಸುವ ಸರ್ಚ್ ಕಮಿಟಿಯ ಸದಸ್ಯರಾಗಿದ್ದರು. ಒಂದು ರಾತ್ರಿ ಮೈಸೂರಿನ ಕೆ.ರಾಮದಾಸ್ ರ ಮನೆಗೆ ಲಂಕೇಶರ ಫೋನು ಬಂತು: “ಆ ಹಾ.ಮಾ.ನಾಯಕರ ಹತ್ತಿರ ಹೋಗಿ ಏನಾದರೂ ಮಾಡಿ ನಮ್ಮ ಅತ್ಯಂತ ಬ್ರೈಟ್ ಫೆಲೋ ಡಿ.ಆರ್. ಕನ್ನಡ ವಿಶ್ವವಿದ್ಯಾಲಯದ ವೈಸ್ ಛಾನ್ಸಲರ್ ಆಗುವಂತೆ ನೋಡಿಕೊಳ್ರೀ” ಎಂದರು ಲಂಕೇಶ್. ಇದು ಡಿ.ಆರ್ ಗೆ ಗೊತ್ತಿರಲಿಲ್ಲ. ಇದು ಅವರಿಗೆ ಕೊನೆತನಕ ಗೊತ್ತಾಗಲಿಲ್ಲವೋ ಏನೋ.

ಅದು ಡಿ.ಆರ್ ಮತ್ತು ಲಂಕೇಶರ ಜಗಳವಾಗಿ ಒಬ್ಬರ ಮುಖ ಇನ್ನೊಬ್ಬರು ಕೂಡ ನೋಡದ ಕಾಲ. ಹಾ.ಮಾ.ನಾಯಕರು ಯಾವುದೋ ವರದಿ ಕುರಿತಂತೆ ಲಂಕೇಶರ ಮೇಲೆ ಕೇಸ್ ಹಾಕಿ ರಂಪ ಮಾಡಿದ್ದರು. ರಾಮದಾಸ್ ಥರದ ನಿಷ್ಠುರ ವ್ಯಕ್ತಿ ಹಾ.ಮಾ.ನಾಯಕರ ಮನೆಗೆ ಹೋಗುವುದು ಅಪಾರ ಮುಜುಗರದ ವಿಷಯವಾಗಿತ್ತು. ಆದರೆ ಲಂಕೇಶರಿಗೆ ಡಿ.ಆರ್. ಬಗ್ಗೆ ಇದ್ದ ಮಮತೆ ಇವನ್ನೆಲ್ಲ ಮೀರುವಂತೆ ಮಾಡಿತ್ತು. ಲಂಕೇಶರು ಡಿ.ಆರ್. ಅವರ ಸಹೋದ್ಯೋಗಿಗಳ ಹೇಳಿಕೆಯ ಆಧಾರದ ಮೇಲೆ ಡಿ.ಆರ್ ವಿರುದ್ಧವಾಗಿದ್ದ ವರದಿಯನ್ನು ಪತ್ರಿಕೆಯಲ್ಲಿ ಪ್ರಕಟಿಸಿದರೂ ಅಂತಿಮವಾಗಿ ಡಿ.ಆರ್. ಏಳಿಗೆಯನ್ನೆ ಬಯಸಿದ್ದರು ಎಂಬುದನ್ನು ಈ ಘಟನೆ ಹೇಳುತ್ತದೆ.

magicvesselsborder.gif

ಇಷ್ಟೆಲ್ಲ ಈ ಕಥನದಲ್ಲಿ ಡಿ.ಆರ್. ಹಾಗೂ ಲಂಕೇಶರ ನಡುವೆ ಕೊಂಡಿಗಳನ್ನು ಕಾಣಲೆತ್ನಿಸಿದ್ದರೂ ಡಿ.ಆರ್. ಮಾರ್ಗ ಹಾಗೂ ಲಂಕೇಶ್ ಮಾರ್ಗ ನನ್ನ ತಲೆಯಲ್ಲಿ ಮಾತ್ರ ಬೆರೆಯಲೆತ್ನಿಸುತ್ತಿತ್ತೇ ಎಂಬ ಅನುಮಾನ ಹುಟ್ಟುತ್ತದೆ. ಇದಕ್ಕೆ ಕಾರಣ, ಡಿ.ಆರ್. ಹಾಗೂ ಲಂಕೇಶ್ ತಮ್ಮ ಕೊನೆಗಾಲದ ಬರವಣಿಗೆಗಳಲ್ಲಿ ಸೂಚಿಸಿರುವ ಎರಡು ಆಯ್ಕೆಗಳು: ಡಿ.ಆರ್. ತೀರಿಕೊಂಡಾಗ “ಅಲ್ಲಮ ಮತ್ತು ಶೈವ ಪ್ರತಿಭೆ” ಎಂಬ ಅವರ ಮಹತ್ವಾಕಾಂಕ್ಷೆಯ ಪುಸ್ತಕ ಹಸ್ತಪ್ರತಿಯ ಘಟ್ಟದಲ್ಲಿತ್ತು. ಅದನ್ನು ನಂತರ ಕಿ.ರಂ.ನಾಗರಾಜ್ ಅಚ್ಚಿಗೆ ಸಿದ್ಧಪಡಿಸಿದರು. ಲಂಕೇಶ್ ತೀರಿಕೊಳ್ಳುವ ಕೆಲ ವಾರಗಳ ಮೊದಲು ಸಹಸ್ರಮಾನದ ಕರ್ನಾಟಕದ ವ್ಯಕ್ತಿ ಯಾರು ಎಂದು ಆಯ್ಕೆ ಮಾಡುವಾಗ ದೇವರಾಜ ಅರಸು ಹಾಗೂ ಬಸವಣ್ಣನವರನ್ನು ಆರಿಸಲು ಯೋಚಿಸಿ, ಕೊನೆಗೆ ಸಾಮಾಜಿಕ ಪರಿಣಾಮದ ದೃಷ್ಟಿಯಿಂದ ದೇವರಾಜ ಅರಸು ಅವರನ್ನೇ ಆರಿಸಿದ ನೆನಪು. “ಬಸವಣ್ಣ ನನ್ನ ಜಾತಿಯವನಾದ್ದರಿಂದ ಅವನನ್ನು ಆರಿಸಲು ಮನಸ್ಸು ಹಿಂಜರಿಯುತ್ತದೆ” ಎಂದು ಲಂಕೇಶ್ ಅರ್ಧ ತಮಾಷೆ-ಅರ್ಧ ಗಂಭೀರವಾಗಿ ಹೇಳಿದ್ದು ನೆನಪಿದೆ. ಆದರೆ ಬಸವಣ್ಣ ಹಾಗೂ ಅಲ್ಲಮರ ಮಧ್ಯೆ ಮಾತ್ರ ಬಸವಣ್ಣನೇ ಲಂಕೇಶರ ಆಯ್ಕೆ. ಲಂಕೇಶರಿಗೆ ಅಲ್ಲಮ ಅಸ್ಪಷ್ಟ ಹಾಗೂ ಅಮೂರ್ತ; ಬಸವಣ್ಣ ಸ್ಪಷ್ಟ ಹಾಗೂ ಮೂರ್ತ. ಬಸವಣ್ಣನಲ್ಲಿ ನೇರವಾಗಿ ಕಾಣುವ ಸಾಮಾಜಿಕ ಹೊಣೆ, ಅವನ ವ್ಯಕ್ತಿತ್ವದಲ್ಲಿರುವ ಕವಿ-ಅಧಿಕಾರದ ಸಂಗಮ, ನೇರವಾಗಿ ಜನರನ್ನು ತಲುಪಬೇಕೆಂಬ ಸುಧಾರಕ ಕವಿಯ ಕಾತರ ಲಂಕೇಶರನ್ನು ಸೆಳೆದಂತಿದೆ. “ಅಲ್ಲಯ್ಯ, ಬಸವಣ್ಣ ಬರೆದ ಮೇಲೂ ಕನ್ನಡ ಗದ್ಯ ಯಾಕೆ ಕಗ್ಗದಂತಿರಬೇಕು?” ಎಂಬ ಪ್ರಶ್ನೆಯನ್ನು ಲಂಕೇಶ್ ಆಗಾಗ ಕೇಳಿಕೊಳ್ಳುತ್ತಿದ್ದರು. ಅವರು ಈ ಮಾತನ್ನು ಆಡುವಾಗ, ಬಸವಣ್ಣನ ನಂತರದ ಮಧ್ಯಕಾಲೀನ ಕವಿಗಳನ್ನು ಹಾಗೂ ಈ ಕಾಲದಲ್ಲಿ ಕೆಟ್ಟ ಕನ್ನಡ ಬಳಸುತ್ತಿರುವ ಲೇಖಕರನ್ನೂ ಮನಸ್ಸಿನಲ್ಲಿಟ್ಟುಕೊಂಡಂತಿತ್ತು. ಕಿವಿ ಶುದ್ಧವಿರದೆ ಕರ್ಕಶವಾದ ಕನ್ನಡ ಬಳಸುವ ಲೇಖಕರನ್ನು ಅವರು ಇಷ್ಟಪಡುತ್ತಿರಲಿಲ್ಲ.

ಆದರೆ ಸಿದ್ಧಾಂತ, ಕಾವ್ಯ – ಹೀಗೆ ಯಾವುದನ್ನೇ ಆಗಲಿ, ಕಷ್ಟಪಟ್ಟು ಒಲಿಸಿಕೊಳ್ಳುವುದರಲ್ಲಿ ಖುಷಿ ಪಡೆಯುತ್ತಿದ್ದ ಡಿ.ಆರ್ ಅಲ್ಲಮನ ಗುಹೆಗಳನ್ನು ಮತ್ತೆ ಮತ್ತೆ ಹೊಕ್ಕು ಅಲ್ಲಮನ ಬೆಳಕನ್ನು ಹಿಡಿಯಲೆತ್ನಿಸಿದರು. “ಅಲ್ಲಮ ಮತ್ತು ಶೈವಪ್ರತಿಭೆ” ಡಿ.ಆರ್. ಅವರ ಸುಮಾರು ಐದಾರು ವರ್ಷಗಳ ಹುಡುಕಾಟದ ಫಲದಂತಿದೆ. ಜೊತೆಗೆ, ಸಿದ್ಧ ಮಾರ್ಕ್ಸ್ ವಾದಿ ಚೌಕಟ್ಟುಗಳ ಜಡತೆಯಿಂದ ಬಿಡಿಸಿಕೊಳ್ಳುವ ಪ್ರಯತ್ನದ ಭಾಗವೂ ಆಗಿದೆ.

magicvesselsborder.gif

‍ಲೇಖಕರು avadhi

March 22, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಿನಿಮಾ ತಯಾರಿಯ ತಮಾಷೆಗಳು…

-ಕೃಷ್ಣ ಮಾಸಡಿ ನಾನು ಬಾಲ್ಯದಲ್ಲಿ ಹೊನ್ನಾಳಿ ಮತ್ತು ರಾಂಪುರ ಜಾತ್ರೆಯಲ್ಲಿ ಹಾಕುತ್ತಿದ್ದ ಟೂರಿಂಗ್ ಟಾಕೀಸುಗಳಲ್ಲಿ ನೆಲದಲ್ಲಿ ಹಾಗೂ ಆಗಾಗ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This