ಅಲ್ಲಿ ದೂಳು ಕೇವಲ ಹಾದಿಯಲ್ಲಿ ಮಾತ್ರ ಇರಲಿಲ್ಲ…

-ಅಮರೇಶ ನುಡಗೋಣಿ

 

kt4ಚಿತ್ರ: ಸೃಜನ್

 

ಎಚ್ಚರವಾದಾಗ ಬೆಳಿಗ್ಗೆ ಆರು ಗಂಟೆ, ರೈಲಿನಲ್ಲಿ ಗದ್ದಲ ಇರಲಿಲ್ಲ. ಕಿಡಕಿ ಮೂಲಕ ನೋಡುತ್ತಿದ್ದಂತೆ ನನ್ನ ಮನಸ್ಸು ಮುದುಡಿತು. ಮುಂಗಾರಿನ ಬಳೆ ಬಂದ ಮೇಲೆ ಭೂಮಿ ಖಾಲಿಖಾಲಿ! ಮಳೆಗೆ ಬೆಳೆಯುವ ನಾಡಿನ ಆ ಪ್ರದೇಶ ಬರೀ ಮೈಲೆ ಅನ್ನ ನೀರಿಲ್ಲದಂತೆ ಮಲಗಿತ್ತು. ನಡುನಡುವೆ ಬರುವ ನಿಲ್ದಾಣಗಳಲ್ಲೂ ಜನ ಉತ್ಸಾಹದಿಂದೇನೂ ಏರಿ ಇಳಿಯುವುದು ಕಾಣಲಿಲ್ಲ. ಶಾಲೆಗೆ ಹೋಗುವ ಮಕ್ಕಳು ಮಾತ್ರ ಉಮೇದಿನಿಂದ ಇದ್ದದ್ದು ಕಂಡಿತು. ನಾನು, ರಾಜಶೇಖರ ರೈಲಿನಿಂದ ಇಳಿದಾಗ ಸ್ಟೇಷನ್ನಿನಲ್ಲಿ ಜನ ಅಷ್ಟೇನೂ ಇರಲಿಲ್ಲ. ನಮಗಾಗಿ ನಮ್ಮ ಕ್ಲಾಸ್ಮೇಟ್ ಒಬ್ಬರು ಕಾಯುತ್ತಾ ನಿಂತಿದ್ದರು ಎಂ.ಎ.ನಲ್ಲಿ ನಾನು ಆತ ಒಂದೇ ಕಡೆ ಕುಳಿತು ಪಾಠ ಕೇಳಿದ್ದೆವು. ವಿಚಿತ್ರವೆಂದರೆ ಈಗ ಬೆಟ್ಟಿಯಾಗುತ್ತಿದ್ದುದು 20ವರ್ಷಗಳ ನಂತರ. ನಡುವೆ ಕಂಡದ್ದು, ಮಾತಾಡಿದ್ದು ಇಲ್ಲ.

ರೈಲು ನಿಲ್ದಾಣದಿಂದ ಹೊರಗೆ ಬಂದಾಗ ಊರಿನ ಜನ ವಿಚಿತ್ರ ಕುತೂಹಲದಿಂದ ಒಂದೇ ವಿಷಯ ಮಾತಾಡಿಕೊಳ್ಳುತ್ತಿದ್ದರು. ಮುಂಜಾನೆಯ ಸಮಯದಲ್ಲಿ ಅಂದು ಬಜಾರದ ಉದ್ದಕ್ಕೂ ಜನ. ದಾಳಿಗೆ ಮುನ್ನ ಆವರಿಸುವ ಭೀತಿಯನ್ನು ತುಂಬಿಕೊಂಡು ಗುಂಪುಗುಂಪಾಗಿ ಬೆಂಕಿಯ ಮೇಲೆ ನಿಂತವರಂತೆ ಚಡಪಡಿಸುತ್ತಿದ್ದರು.

ನನಗೆ ಈ ಊರಿನ ಓಣಿ, ಬಜಾರಗಳಲ್ಲಿ ನಡೆಯುತ್ತಿದ್ದರೆ ನುಣುಪಾದ ಶಹಾಬಾದ್, ತಾಂಡೂರ್, ಸೇಡಂ ವರಸೆಗಳು (ತೆಳುವಾದ ನುಣುಪಾದ ಬಂಡೆಗಳು) ಕಣ್ಣಿಗೆ ಹೊಡೆಯುತ್ತಿದ್ದವು. ಹಂಪೆಯ ಬಂಡೆ, ಕಲ್ಲುಗಳನ್ನು ನೋಡಿದ ನನಗೆ ನೆಲದಲ್ಲಿ ಸಿಗುವ ಪದರು ಪದರು ಹಾಸುಕಲ್ಲುಗಳನ್ನು ನೋಡುವುದೇ ಹಬ್ಬವಾಯಿತು. ಊರ ಮುಕ್ಕಾಲು ಪಾಲು ಮನೆಗಳು ಈ ಪರಸೆಗಳಿಂದ ಮನೆಗಳೇ, ಚರಂಡಿಗಳಿಲ್ಲ. ಇದ್ದರೂ ಸುಮ್ಮನೆ ಬಿದ್ದಿದ್ದವು. ಓಣಿಯಲ್ಲಿ ನಡೆದರೆ ಯಾವುದೋ ಪುರಾತನ ಕಾಲದ ಊರುಗಳಲ್ಲಿ ನಡೆದ ಅನುಭವ. ಸಿಮೆಂಟ್ ಉದ್ದಿಮೆಯಿಂದ ಈ ಊರಿಗೆ ಯಾವ ಲಾಭವಾದಂತೆ ಕಾಣಲಿಲ್ಲ. ಓಣಿಗಳಲ್ಲಿ ಸಿಮೆಂಟಿನ ದಾರಿಗಳು ಅವರವರ ಮನೆಯ ಮುಂದೆ ಸಿಮೆಂಟಿನ ದಾರಿಗಳ ಮೇಲೆ ಬಟ್ಟೆ ಒಗೆಯುವುದು, ಕಟ್ಟಿಗೆ ಒಣ ಹಾಕುವುದು, ಕಾಳುಕಡಿಗಳನ್ನು ಒಣಗಲು ಹಾಕಿರುವುದು ಕಂಡಿತು.

ಮಕ್ಕಳು ಮನೆ ಮುಂದಿನ ಸಿಮೆಂಟಿನ ದಾರಿಯಲ್ಲೇ ಮಂಡಿಯೂರಿಕೊಂಡು ಓದುವುದು, ಬರೆಯುವುದು, ಆಡುವುದು ನಡೆದಿತ್ತು. ಗೆಳೆಯನ ಮನೆ ಹೊಕ್ಕಾಗ ಎಂಟುಗಂಟೆ. ಅವರು ಉಪನ್ಯಾಸಕರು ಮನೆ ಅಂದರೆ ಉದ್ದಕ್ಕೆ ಮೂರು ಕೊಠಡಿಗಳು, ದೊಡ್ಡದಾದ ಅಡಿಗೆ ಮನೆಯಲ್ಲೇ ಬಚ್ಚಲು. ಮನೆಯೊಡತಿ ಒಲೆ ಮುಂದೆ ಕುಂತು ಅಡಿಗೆ ಮಾಡುತ್ತಿದ್ದಳು. ಅಲ್ಲೇ ಮಕ್ಕಳು ಹೋಂ ವರ್ಕ್ ಮಾಡುತ್ತಿದ್ದರು. ಎಲ್ಲವೂ ಅಡಿಗೇ ಮನೆಯಲ್ಲೇ. ಬಚ್ಚಲ ಎತ್ತರ ಮೂರು ಅಡಿ. ಅಲ್ಲಿ ಸ್ನಾನ ಮಾಡಲು ತೊಡಗಿದೆ. ಮನೆಯೊಡತಿ ಖಾಸಗಿ ಶಾಲೆಯಲ್ಲಿ ಮೂರಂಕಿ ದಾಟದ ಸಂಬಳಕ್ಕೆ ದುಡಿಯುವ ಶಿಕ್ಷಕಿ.

‘ನಿಮ್ಮ ಪಾಠ ಬಸಯ್ಯ ಮತ್ತು ಜೇನುಗೂಡು ನಾನೇ ಓದಿಸ್ತೀನಿ, ಅಣ್ಣೋರೆ ‘ ಅಂದಳು. ತಣ್ಣಗೆ ನಿಂತು ‘ಹೌದೇನಮ್ಮ?’ ಅಂದೆ. ‘ಪಾರ್ಗೋಳು ಪಾಠ ಕೇಳಿ ಅಳ್ತಾವ್ರೀ! ಮತ್ತೆ ಮತ್ತೆ ಅದೇ ಪಾಠ ಮಾಡ್ರೀ, ಟೀಚರ್ ಅಂತ ಗಂಟು ಬೀಳ್ತಾವ್ರೀ’ ಅಂದಳು. ನನಗೆ ಮಾತಾಡಲು ಮುಜುಗುರವಾಯ್ತು. ಅದೇ ಹೊತ್ತಿಗೆ ಆಕೆಯ ದೊಡ್ಡ ಮಗಳು ಓಡಿ ಬಂದು. ‘ಅವ್ವಾ, ಬಸಯ್ಯ ಮತ್ತು ಜೇನುಗೂಡು ಪಾಠ ಬರೆದೋರು ಇವರೇ ಅಲ್ಲೇನು?’ ಅಂತ ನಿಂತಳು. ‘ಹೂಂನೇ’ ಅಂದಳು ಖುಷಿಯಿಂದ.

ಅಲ್ಲಿಂದ ರಾವೂರು ಎಂಬ ಹಳ್ಳಿಗೆ ಹೊರಟಾಗ ಸಂಜೆಯ ಮೂರುಗಂಟೆ. ತಾಲ್ಲೂಕು ಕೇಂದ್ರದ ಬಜಾರದಲ್ಲಿ ಹೊರಟಾಗ ಇಡೀ ಊರೇ ಬಜಾರದಲ್ಲಿತ್ತು. ಬಜಾರದ ರಸ್ತೆಯ ಅಗಲೀಕರಣ ನಡೆದಿತ್ತು. ಪಾನ್ಬೀಡಾ ಅಂಗಡಿಗಳನ್ನು ಯಂತ್ರ ಎತ್ತಿ ಎತ್ತಿ ಲಾರಿಯಲ್ಲಿ ಇಡುತ್ತಿತ್ತು. ಅದರ ಮಾಲೀಕ ಕುಟುಂಬ ವರ್ಗ ನಿಂತು ತಮ್ಮ ಜೀವವನ್ನೇ ಅಲ್ಲಿಟ್ಟು ಅದಕ್ಕೊದಗಿದ ಸ್ಥಿತಿಯನ್ನು ದುಖಃದಿಂದ ನೋಡಿ ಅನುಭವಿಸುತ್ತಿದ್ದರು. ಕೆಡವಲಾದ ಅಂಗಡಿ, ಹೋಟೆಲ್ ಗಳ ಅಳಿದುಳಿದ ಸಾಮಾನುಗಳನ್ನು ಅದರದರ ಒಡೆಯರು ಸಂಗ್ರಹಿಸುತ್ತಾ ಸಾಗಿಸುತ್ತಾ ಪರದಾಡುತ್ತಿದ್ದರು.

ಬೆಳಗಿನ ಹೊತ್ತು ಆ ದಾಳಿಯ ಬಗ್ಗೆ ಜನ ಚಿಂತೆಗೀಡಾಗಿದ್ದರು. ಈಗ ದಾಳಿಗೆ ಸಿಕ್ಕು ಏದುಸಿರು ಬಿಡುತ್ತಿದ್ದರು. ಆಟೋಗಳು ಇಲ್ಲ. ಬಜಾರವೇ ಬಂದು ವಿದ್ಯುತ್ ಇಲ್ಲ. ನಾನು ನಿಂತು ನೋಡುವುದರಲ್ಲೇ ತಲ್ಲೀನನಾಗಿದ್ದೆ. ಕ್ರೇನ್ ಎಂಬ ಯಂತ್ರ ಒಂದು ಪಾನ್ಬೀಡಾ ಡಬ್ಬಿ ಅಂಗಡಿಯನ್ನು ಎತ್ತಿ ಲಾರಿಗೆ ಹಾಕುವ ಸಿದ್ದತೆಯಲ್ಲಿತ್ತು. ‘ನದಾಫ್ ಕಾ ದುಕಾನ್’ ಅಂತ ಅಲ್ಲಿದ್ದ ಗುಂಪು ಕೂಗುತ್ತಿತ್ತು. ‘ಆ ಮಾರವಾಡಿ ದುಖಾನ್ ನೋಡ್ರೀ ಮುಸುಡಿ ಒಡಕಂಡಿದೆ’ ಅಂತ ಕೂಗುತ್ತಾ ಖುಷಿಯಲ್ಲಿದ್ದ ಗುಂಪು ಕಂಡಿತು. ಊರು ಅಲ್ಲೋಲ ಕಲ್ಲೋಲ.

ತಾಲ್ಲೂಕಿನ ರಾವೂರಿಗೆ ಬಹಳ ಎಂದರೆ ಮೂವತ್ತು ಕಿಲೋಮೀಟರ್ ದೂರ ಇಲ್ಲ. ಚಿತ್ತಾಪೂರದಿಂದ ರಾವೂರಿಗೆ ಎಂಟು ಕಿಲೋಮೀಟರ್. ಚಿತ್ತಾಪುರಕ್ಕೆ ಬರುವುದರಲ್ಲೇ ನಾನು ಸುಸ್ತು. ಒಂದು ಜೀಪು ಹತ್ತಿದೆವು. ಹತ್ತು ಜನ ಕೂಡುವ ಜೀಪಿನಲ್ಲಿ 22 ಜನ ಕುಳಿತ್ತಿದ್ದರು. ಬೇಡವೆಂದರೂ ಜನ ಏರಿಬಿಡುತ್ತಿದ್ದರು.

ಆ ರಸ್ತೆಯನ್ನು ನೋಡಿದರೆ ಅದು ಒಮ್ಮೆಯೂ ರಿಪೇರಿ ಕಂಡಿಲ್ಲ. ಮನುಷ್ಯನಿಗೇ ಅದರ ಮೇಲೆ ನಡೆಯಲು ಬರುವುದಿಲ್ಲ; ಜೀಪು ಆ ರಸ್ತೆ ಮೇಲೆ ಹೇಗೆ ಹೋಗುತ್ತದೆ ಎಂದು ನನ್ನ ಆತಂಕ. ಅದೇ ತಾನೇ ನಡೆಯಲು ಕಲಿಯುತ್ತಿದ್ದ ಮಗುವಿನಂತೆ ಜೀಪು ಹೊರಟಿತ್ತು. ನಡುನಡುವೆ ಇಳಿವವರು, ಏರುವವರು. ಈ ಪ್ರಯಾಣದ ಬಗ್ಗೆ ಜನ ಹೇಗೆ ಯೋಚಿಸುತ್ತಿರಬಹುದು ಅಂತ ಗಮನಿಸಿದೆ. ಹೆಂಗಸರು, ಗಂಡಸರು ಅವರವರ ಚಿಂತೆಗಳಲ್ಲೇ ಹರಟೆ ಹೊಡೆಯುತ್ತಿದ್ದರು. ಒಂದು ಕನ್ಯೆ ನೋಡಿ ಬಂದವರ ಗುಂಪು ಜೀಪಿನಲ್ಲಿತ್ತು. ಆ ಕನ್ಯೆಯನ್ನು ಹೆಂಗಸರು, ಗಂಡಸರು ವರ್ಣಿಸುತ್ತಿದ್ದರಲ್ಲ, ಅದನ್ನು ಕೇಳುತ್ತಿದ್ದ ನನಗೆ ರೋಮಾಂಚನವಾಯಿತು! ಧರ್ಮಸಿಂಗ್, ಖರ್ಗೆ ಹಾಗೂ ಚಿತ್ತಾಪುರದ ಶಾಸಕನನ್ನು ಬಯ್ಯುತ್ತ ಕುಳಿತಿದ್ದವರ ನಡುವೆ ನನ್ನನ್ನು ಆ ಕನ್ಯೆಯ ವರ್ಣನೆ ಸೆಳೆದಿತ್ತು.

‘ಆಕೆ ಕುಡಿದ ನೀರು ಹೊಟ್ಟೆಯಲ್ಲಿ ಕಾಣ್ತದೆ’ ಅಂತ ಒಬ್ಬರು. ‘ಬೆಳದಿಂಗಳಿಗೆ ಬಾಡುತ್ತಾಳೆ’ ಅಂತ ಇನ್ನೂಬ್ಬರು! ದಾರಿಯುದ್ದಕ್ಕೂ ಶಹಬಾದ್ ಪರಸೆಗಳ ರಾಶಿ. ಗಣಿಗಳು, ಪಾಲೇಶ್ ಮಾಡುವ ಫ್ಯಾಕ್ಟರಿಗಳು. ವೇಸ್ಟ್ ಪೀಸುಗಳ ರಾಶಿ ರಾಶಿ ಅಂಗೈ ಅಗಲದ, ಗೇಣು ಉದ್ದದ ಪರಸೆಗಳು ನನ್ನನ್ನು ಮರುಳು ಮಾಡಿದವು. 8 ಕಿಲೋಮೀಟರ್ ಸಾಗುವುದಕ್ಕೆ ಒಂದೂವರೆ ತಾಸು ಸಮಯ. ರಾವೂರಿಗೆ ಇಳಿದಾಗ ಧೂಳೇ ಧೂಳು! ಅಲ್ಲಿ ಇರುವುದಕ್ಕೇ ಜನ ಸಾಧ್ಯವಿಲ್ಲ ಆದರೆ ಜನ ತಣ್ಣಗೆ ಇದ್ದರು. ಆ ರಾವೂರಿನ ತುಂಬ ಕಲ್ಲುಗಳ ಗಣಿಗಳು, ಸಿಮೆಂಟ್ ಫ್ಯಾಕ್ಟರಿಗಳು, ಪದರಿನ ಹಾಸು ಬಂಡೆಗಳನ್ನು ಪಾಲೀಸ್ ಮಾಡುವ, ಟೈಲ್ಸ್ ಗಳ ಮಾದರಿಯಲ್ಲಿ ಸಿದ್ಧ ಮಾಡುವ ಫ್ಯಾಕ್ಟರಿಗಳು. ಊರ ಜನರನ್ನು ವಿಚಾರಿಸಿದರೆ ಅವುಗಳ ಸರಿಯಾದ ಮಾಹಿತಿ ಅಥವಾ ಅವುಗಳ ಉದ್ದಿಮೆ, ವ್ಯಾಪಾರಗಳ ಬಗ್ಗೆ ಅರಿವು ಇರಲಿಲ್ಲ.

ಧೂಳು ತಡೆಯದೆ ಮನೆ ಸೇರಿದೆವು. ಶಾಹಾಬಾದಿ ಪರಸೆಗಳಿಂದ ಕಟ್ಟಿದ ಮನೆಗಳವು. ಆದುನಿಕ ತಂತ್ರಜ್ಞಾನ ಬಳಸದೇ ಕಟ್ಟಿದ ದೇಶೀ ಜ್ಞಾನ ಪರಂಪರೆಯಿಂದ ಸೃಷ್ಟಿಯಾದ ಮನೆಗಳನ್ನು ಮೂಕನಾಗಿ ನೋಡುತ್ತಾ ಬೆರಗಾದೆ. ರಾತ್ರಿ ನನ್ನ ವಿದ್ಯಾರ್ಥಿನಿಯ ಗಂಡನ ಮನೆಯಲ್ಲಿರುವುದು ಅನಿವಾರ್ಯವಾಗಿತ್ತು. ಸಿಮೆಂಟ್ ಫ್ಯಾಕ್ಟರಿಯಲ್ಲಿ ಏಳೆಂಟು ವರ್ಷ ದುಡಿದು, ಅದು ಮುಚ್ಚಿದ್ದರಿಂದ ಎಂ.ಎ. ಪಿ.ಹೆಚ್.ಡಿ ಮಾಡಿಕೊಂಡಿರುವ ಹೆಂಡತಿಗೆ ಕೆಲಸ ಸಿಗುತ್ತದೆಂದು 15 ವರ್ಷಗಳಿಂದ ದಾರಿ ಕಾಯುತ್ತಿದ್ದ ಆತ. ರಾತ್ರಿ ಮನೆಯಲ್ಲಿ ಊಟವಿಲ್ಲ. ಆ ಊರಲ್ಲಿ ಯಾವ ಖಾನಾವಳಿಯಿಂದ ಊಟ ತಂದು ತಿನ್ನುವುದು?

ರಾತ್ರಿ ಆ ಮನೆಯಲ್ಲಿ ಕುಂತು ಸುತ್ತಲೂ ನೋಡಿದೆ. ನಿಜವಾಗಿಯೂ ಭಯ ಬಂತು. ವೋಲ್ಟೇಜ್ ಕಡಿಮೆ, ಬೆಳಕು ಮಂದ, ಮುಂಬಾಗಿಲು ದಾಟಿ ಹೊರಬಂದು ಕಟ್ಟೆಗೆ ಕುಂತೆ. ಓಣಿಯಲ್ಲಿ ಜನರೇ ಇಲ್ಲ. ಮನೆಗಳಲ್ಲಿ ಜನಗಳು ಇದ್ದಾರೆಂಬ ಸುಳಿವು ಕಿವಿಗೊಟ್ಟು ಕೇಳಿದರೆ ಮಾತ್ರ ಸಿಗುತ್ತಿತ್ತು. ದೊಡ್ಡ ದೊಡ್ಡ ಮನೆಗಳ ಬಾಗಿಲು ಬಿಟ್ಟರೆ ಕಿಟಕಿಗಳನ್ನು ಹುಡುಕಿಯೇ ಪತ್ತೆ ಹಚ್ಚಬೇಕು. ಪುರಾತನ ಕಾಲದ ಊರುಗಳು. ಅಲ್ಲಿ ಕೂಡಲೂ ಭಯವಾಯ್ತು. ಎದ್ದು ಆತಂಕದಿಂದ ಸುತ್ತಲೂ ನೋಡಿದೆ. ಓಣಿಗಳು, ಕತ್ತಲ ಸಂದಿಗಳು. ದೇವರೇ ಗತಿ ಅಂದುಕೊಂಡೆ. ಊಟ ತಂದಾಗಲೇ ಮತ್ತದೇ ಗೆಳೆಯರೆಂಬ ಮನುಷ್ಯನ ಸಂಪರ್ಕ ಬಂದದ್ದು.

ಸ್ನೇಹಿತನ ಮನೆಯಲ್ಲಿ ಟಾಯ್ಲೆಟ್ ಇಲ್ಲ. ನೀರೂ ಇಲ್ಲ. ಅಡಿಗೆ ಮನೆಯಲ್ಲಿ ಗ್ಯಾಸ್ ಇಲ್ಲ. ನನ್ನ ವಿದ್ಯಾರ್ಥಿನಿ ಅಲ್ಲಿ ಜೀವನ ಮಾಡುತ್ತಿದ್ದದು ಕಂಡು ನನಗೆ ದುಃಖವಾಯಿತು. ಆಕೆಯ ಗಂಡನನ್ನು ದೈರ್ಯವಾಗಿ ಕೇಳಿದೆ- ‘ನೀವು ಈ ಮನೆಯಲ್ಲಿ ಹೇಗೆ ಇರುತ್ತೀರಿ’ ಅಂತ. ಆತ ಬ್ರಾಹ್ಮಣ. 55 ಎಕರೆ ಭೂಮಿ ಇರುವ ಭೂಮಾಲೀಕ. ಒಕ್ಕಲುತನದಿಂದ ದಿವಾಳಿ ಎದ್ದು, ಒಕ್ಕಲುತನದ ಸಹವಾಸ ಬೇಡವೆಂದು ದೂರ ಉಳಿದಿದ್ದ. ದುಡಿಯಲು ಸಾದ್ಯವಾಗದೆ, ಆಳುಗಳ ಮೇಲೆ, ದನಕರುಗಳ ಮೇಲೆ ಒಕ್ಕಲುತನ ಮಾಡಲು ಸಾದ್ಯವಿಲ್ಲವೆಂದು ಬೇಸತ್ತ, ಹೆಂಡತಿ ದುಡಿಯುವ 2500ರ ಸಂಬಳದಲ್ಲಿ ಆಕೆಯ ಜತೆಗಿದ್ದು ಬದುಕುತ್ತಿದ್ದ. ಮನೆ ಹೊಲ ದಿಂದ ಕಾಳುಕಡಿ ಒಯ್ದು ಜೀವನ ನಡೆಸುತ್ತಿದ್ದ ಆತ, ಆತನ ಹೆಂಡತಿ. ಅವರ ಜೀವನವನ್ನು ಕಣ್ಣಾರೆ ನೋಡಿ ಬೇಸರವಾಗತೊಡಗಿತು.

‍ಲೇಖಕರು avadhi

January 29, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹಿರೋಶಿಮಾದಲ್ಲಿ ಆರತಿ  

ಹಿರೋಶಿಮಾದಲ್ಲಿ ಆರತಿ  

          ಆರತಿ ಎಚ್.ಎನ್     ನ್ಯೂಕ್ಲಿಯರ್ ಬಾಂಬ್ ದಾಳಿಯಲ್ಲಿ ನಲುಗಿದ ಹಿರೋಶಿಮಾ, ತತ್ತರಿಸುವ...

… ಆಮೆನ್! 

… ಆಮೆನ್! 

ಸುಮಾರು ಹೊತ್ತು ಸುಧಾರಿಸಿಕೊಂಡ ನಂತರ ಎದ್ದು ನಮ್ಮ ನಡಿಗೆ ಮುಂದುವರೆಸುವ ತುಸು ಮಾತ್ರದ ತ್ರಾಣ ಬಂದಿತು. ಆದರೆ ಅಪ್ಪ-ಅಮ್ಮ ನಡೆಯುವ...

ಸಮಾಧಿಗಳ ಮಧ್ಯೆ ‘ಭಾರತಿ ಟೂಂಬ್’

ಸಮಾಧಿಗಳ ಮಧ್ಯೆ ‘ಭಾರತಿ ಟೂಂಬ್’

ಇಡೀ ಜಾಗದ ತುಂಬ ಓಡಾಡಿ ಫೋಟೋಗಳನ್ನು ತೆಗೆದಿದ್ದಾದ ನಂತರ ಅಲ್ಲಿಯವರೆಗೆ ನಾವು ನಡೆದಿರುವುದು ಎರಡು ಕಿಲೋಮೀಟರ್‌ ಆಸುಪಾಸು ಅಂದ ಮಹಮ್ಮದ್. ಹಾಗೆ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: