ಅಲ್ಲಿ ನೋಡು ಶೇಷಣ್ಣ..!!

ಅಂಬರದಿ ಹಾರುತಿದೆ ರಾಷ್ಟ್ರಧ್ವಜ ನೋಡಿದಿರಾ?

suchith kotian

 

 

 

 

 

 

 

ಸುಚಿತ್ ಕೋಟ್ಯಾನ್ ಕುರ್ಕಾಲು

1942… ಅದು ಸ್ವಾತಂತ್ರ್ಯ ಹೋರಾಟ ಪರಾಕಾಷ್ಠೆಗೆ ತಲುಪಿದ್ದ ಕಾಲ. ಕ್ವಿಟ್ ಇಂಡಿಯಾ ಚಳುವಳಿ ನಡೆದ ಸಮಯದಲ್ಲಿ ರಾಷ್ಟ್ರದಾದ್ಯಂತ ಹೋರಾಟ ತೀವ್ರಗೊಂಡಿತ್ತು. ಗಾಂಧೀಜಿಯವರ ತತ್ವ ಚಿಂತನೆಗಳಿಗೆ ಬದ್ಧರಾಗಿ ಕರಾವಳಿಯ ದಕ್ಷಿಣ ಕನ್ನಡದಲ್ಲಿ ಕಾರ್ನಾಡ್ ಸದಾಶಿವರಾಯರು, ಉಡುಪಿಯಲ್ಲಿ ಎಸ್.ಯು.ಪಣಿಯಾಡಿ, ಸಾಂತ್ಯಾರು ಅನಂತ ಪದ್ಮನಾಭ ಭಟ್ಟ, ಪಾಂಗಾಳ ಮಂಜುನಾಥ ನಾಯಕ್ ಮುಂತಾದವರು ನಾಯಕತ್ವ ವಹಿಸಿಕೊಂಡಿದ್ದರು. ಉತ್ಸಾಹಿ ಯುವಕರನ್ನು ಒಗ್ಗೂಡಿಸಿ ಸ್ವಾತಂತ್ರ್ಯವೆಂಬ ಪರಮೋಚ್ಚ ಗುರಿಯಾಗಿ ಹೋರಾಡಿದ, ಸಂಘಟಿಸಿದ ಖ್ಯಾತಿ ಇವರದ್ದು.

tundu hykluಅಂತಹ ಎಸ್.ಯು.ಪಣಿಯಾಡಿಯವರ ಶಿಷ್ಯರಲ್ಲೊಬ್ಬರು ಯು.ಶೇಷಣ್ಣ. ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದ ಶೇಷ ಅವರು ಪಂಚೆ ಸುತ್ತಿಕೊಂಡು, ಬೂದು ಬಣ್ಣದ ಶರ್ಟು ತೊಟ್ಟು ಅಲೆದಾಡುತ್ತಿದ್ದ ತೆಳ್ಳಗಿನ ವ್ಯಕ್ತಿ. ಅವರನ್ನು ಕಂಡಾಗ ಈ ವ್ಯಕ್ತಿ ಮುಂದೇನಾದರೂ ಅದ್ವಿತೀಯ ಸಾಧನೆ ಮಾಡಬಹುದು ಎಂದು ಕಲ್ಪಿಸಲು ಸಾಧ್ಯವಿರಲಿಲ್ಲ. ಚಿತ್ರಗುರು ರಾಮಶರ್ಮರಲ್ಲಿ ಪೇಂಟಿಂಗ್ ಹಾಗೂ ಫೋಟೋಗ್ರಫಿ ಕಲಿತಿದ್ದ ಇವರು ಪ್ರೆಸ್ ಗಳಿಗೆ ಬೇಕಾದ ಪಡಿಯಚ್ಚುಗಳನ್ನು ತಯಾರಿಸಿಕೊಡುವ ಕೆಲಸ ನಿರ್ವಹಿಸುತ್ತಿದ್ದರು. ಎಸ್.ಯು.ಪಣಿಯಾಡಿಯವರ ಒಡನಾಡಿಯಾಗಿದ್ದುದರಿಂದ ಈ ಸ್ವಾಭಿಮಾನಿ ಶೇಷಣ್ಣನ ಮೇಲೆ ಅವರಿಗೂ ತುಂಬು ಆದರ, ಗೌರವ. ಅಂತಹ ಶೇಷಣ್ಣ ಯಾರೂ ನಿರೀಕ್ಷಿಸದಿದ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಅಜ್ಞಾತವಾಗಿ ತನ್ನ ಸೇವೆ ಸಲ್ಲಿಸಿ ದೇಶದ ಋಣ ತೀರಿಸಿದರು.

ತ್ರಿವರ್ಣ ಧ್ವಜ ಹಾರಿದರೆ ಅಪರಾಧವೆಂದು ಪರಿಗಣಿಸಲ್ಪಡುತ್ತಿದ್ದ ಕಾಲ ಅದು. ರಾಷ್ಟ್ರಪ್ರೇಮಿಗಳು ತಮ್ಮ ಮನೆ ಅಥವಾ ಇತರ ಸ್ಥಳಗಳಲ್ಲಿ ಧ್ವಜ ಹಾರಿಸಿದರೆ ಕೂಡಲೇ ಪೋಲೀಸರು ಅಗಮಿಸಿ ಅದನ್ನು ಕಿತ್ತೆಸೆಯುತ್ತಿದ್ದರು. ಭಾರತದ ಧ್ವಜ ಎಲ್ಲಿಯೂ ಹಾರಬಾರದು ಎಂಬುದು ಬ್ರಿಟಿಷ್ ಸರ್ಕಾರದ ಆಜ್ಞೆಯಾಗಿತ್ತು. ಆಗ ಇಲ್ಲಿನ ದೇಶಪ್ರೇಮಿಗಳ ತಲೆಯಲ್ಲಿ ಆಲೋಚನೆಯೊಂದು ಹೊಳೆಯಿತು. ಉಡುಪಿಯ ಕೃಷ್ಣಮಠದ ಅನಂತೇಶ್ವರ ದೇವಸ್ಥಾನದ ಮುಂಭಾಗದಲ್ಲಿರುವ ಅರುವತ್ತು ಅಡಿಗಿಂತಲೂ ಎತ್ತರದಲ್ಲಿರುವ ಶಿಲಾಸ್ತಂಭದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸುವುದು! ಅದನ್ನು ಏರಲು ಯಾವ ಅವಕಾಶವೂ ಇಲ್ಲ. ಹಾಗಾಗಿ ಅದನ್ನು ಸುಲಭದಲ್ಲಿ ಕಿತ್ತೆಸೆಯಲು ಸಾಧ್ಯವಿಲ್ಲ! ಆದರೆ ಈ ಯೋಜನೆಯ ಸುಳಿವು ಪೊಲೀಸರಿಗೆ ಸಿಕ್ಕಿತು. ಹಗಲು ರಾತ್ರಿ ಮಠದ ಬಳಿ ಪೊಲೀಸ್ ಸಶಸ್ತ್ರ ಕಾವಲು ಪಡೆ ಸಿದ್ಧವಾಯಿತು. ಅವರ ಕಣ್ತಪ್ಪಿಸಿ ಬಾವುಟ ಹಾರಿಸುವುದು ಅಸಾಧ್ಯವೆಂಬಂತಾಯಿತು.

ಆದರೆ ಶೇಷಣ್ಣ ಈ ಸವಾಲಿಗೆ ಸಿದ್ಧರಾದರು. ಅವರು ಇದರಲ್ಲಿ ಯಶಸ್ವಿಯಾಗಬಹುದು ಎಂಬ ನಂಬಿಕೆ ಬಹುಶಃ ಯಾರಲ್ಲೂ ಇರಲಿಲ್ಲ. ಶೇಷಣ್ಣ ಮಾತ್ರ ಕೃಷ್ಣನ ಕರುಣೆಯಿದ್ದರೆ ನಾನು ಮಾಡಿಯೇ ಸಿದ್ದ ಎಂದು ಮುಂದಡಿಯಿಟ್ಟರು. ಪಣಿಯಾಡಿಯವರು ಕೂಡಾ ಬೆಂಬಲಕ್ಕೆ ನಿಂತು, ‘ನಾನು ಜೊತೆಗಿದ್ದೇನೆ.. ನಾವು ಚರಿತ್ರೆ ನಿರ್ಮಿಸೋಣ’ ಎಂದರು.

flying manಪೊಲೀಸ್ ಕಾವಲಿರುವ ಜಾಗದಲ್ಲಿ ಹತ್ತಲಸಾಧ್ಯವಾದ 60 ಅಡಿ ಎತ್ತರದ ಕಂಬದ ಮೇಲೆ ಧ್ವಜ ಹಾರಿಸುವುದು ಸಾಹಸವೇ ಸರಿ. ಆದರೆ ಶೇಷಣ್ಣ ಅದನ್ನು ಸಾಧಿಸಿಯೇ ಬಿಟ್ಟರು.

ಆ ರಾತ್ರಿ ಪಲಿಮಾರು ಮಠದ ಎದುರಿನಲ್ಲಿ ಒಂದು ತೆಳ್ಳಗಿನ ಏಣಿ ಹೊತ್ತು ಅನಂತೇಶ್ವರ ದೇಗುಲದ ಮಾಡನ್ನು ಏರಿದರು. ಮೆಲ್ಲ ಮೆಲ್ಲನೆ ಹೆಜ್ಜೆ ಇಡುತ್ತಾ ಸದ್ದು ಮಾಡದೆ ಮುಂಭಾಗಕ್ಕೆ ಬಂದು ತಗಡಿನ ಚಪ್ಪರ ಏರಿದರು. ಚಪ್ಪರದಿಂದ ಮಾನಸ್ತಂಭಕ್ಕೆ ಏಣಿ ಇಟ್ಟು ಜೈ ಭಾರತ್ ಮಾತಾಡಿ ಎಂದು ಏಣಿಯ ಸಹಾಯದಿಂದ ಸ್ತಂಭ ಏರಲು ಪ್ರಾರಂಭಿಸಿದರು. ಸುತ್ತಲೂ ಕಡುಗತ್ತಲೆ! ಬಿದ್ದರೆ ಬದುಕುಳಿಯುವುದು ಪ್ರಶ್ನೆಯೇ ಇಲ್ಲ! ಸುತ್ತಲೂ ಪೊಲೀಸ್ ಕಾವಲು ಬೇರೆ! ಆದರೆ ಜೀವದಾಸೆಯನ್ನು ಬಿಟ್ಟು ರಾಷ್ಟ್ರ ಸೇವೆಗೆ ಸಮರ್ಪಿಸಿಕೊಂಡಾತನಿಗೆ ಇದ್ಯಾವುದರ ಅಂಜಿಕೆ ಇಲ್ಲ. ತ್ರಿವರ್ಣ ಧ್ವಜ ಮಾನಸ್ತಂಭದ ಮೇಲೆ ಹಾರಿಬಿಟ್ಟಿತು.

ಸೂರ್ಯೋದಯವಾಗುವಾಗ ಮಾನಸ್ತಂಭದ ಮೇಲೆ ಮುಗಿಲೆತ್ತರದಲ್ಲಿ ಹಾರುತ್ತಿದೆ ರಾಷ್ಟ್ರಧ್ವಜ! ಎಲ್ಲರಿಗೂ ಆಶ್ಚರ್ಯ! ಪೊಲೀಸರಿಗೆ ಕೋಪ, ಹತಾಶೆ, ಅವಮಾನ. ಯಾರು, ಹೇಗೆ ಹತ್ತಿದರು? ಎನ್ನುವುದೇ ಯಕ್ಷಪ್ರಶ್ನೆ. ಮನುಷ್ಯನಿಗೆ ಅಸಾಧ್ಯವಾದ ಈ ಕೆಲಸ ಯಾರು ಮಾಡಿರಬಹುದು? ಎಂದು ಪೊಲೀಸರು ಎಷ್ಟು ತಲೆಕೆಡಿಸಿಕೊಂಡರೂ ಕಂಡುಹಿಡಿಯಲು ಸಾಧ್ಯವಾಗಲಿಲ್ಲ.

ಮುಂದೆಯೂ ಈ ಅದ್ಭುತ ಕೆಲಸ ಮಾಡಿದ ಶೇಷಣ್ಣ ಹೆಚ್ಚೇನೂ ಸುದ್ದಿಯಾಗಲಿಲ್ಲ. 1986ರಲ್ಲಿ ಶೇಷಣ್ಣ ಇಹಲೋಕ ತ್ಯಜಿಸಿದರು. ಆದರೆ ಶೇಷಣ್ಣ ಇಂದಿಗೂ ಪ್ರತಿಯೊಬ್ಬ ದೇಶಪ್ರೇಮಿಗೂ ಆದರ್ಶ. ಅವರ ತ್ಯಾಗ, ಸಾಹಸ, ಬದ್ಧತೆ ಇಂದಿನ ಯುವಪೀಳಿಗೆಗೆ ಮಾದರಿ.

(ಆಧಾರ: 1992ರಲ್ಲಿ ಪ್ರಕಟಗೊಂಡ ಬನ್ನಂಜೆ ರಾಮಾಚಾರ್ಯರ ಲೇಖನ)

‍ಲೇಖಕರು Admin

August 15, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ 'ಮಾಸಂಗಿ' ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This