ಹಾಗಂತ ಎಲ್ಲರಿಗೂ ಶಿರಿನ್ ಆಗಲು ಸಾಧ್ಯವಿಲ್ಲವಲ್ಲ?
– ಎ ಕೆ ಕುಕ್ಕಿಲ
ಭೂತಕನ್ನಡಿಶಿರಿನ್
ಈ ಜಗತ್ತಿನಲ್ಲಿ ಮಹಿಳಾ ಸಮಾನತೆಯ ಬಗ್ಗೆ ಮಾತಾಡುವ, ಮಹಿಳೆ ಹಾಗೆ, ಹೀಗೆ, ದೇವತೆ ಎಂದೆಲ್ಲಾ ಅಪಾರ ಕಕ್ಕುಲಾತಿ ತೋರುವವರನ್ನೆಲ್ಲಾ ಒಂದೇ ಏಟಿಗೆ ನಂಬಬೇಡಿ. ಅವರು ಫೆಮಿನಿಸ್ಟ್ ಗಳೋ ಅಥವಾ ಸಿನಿಮಾ ನಿರ್ದೇಶಕರು, ಹೋರಾಟಗಾರರೋ ಯಾರೇ ಆಗಿರಬಹುದು. ಅವರಲ್ಲಿ ಹೆಚ್ಚಿನವರು ಹೆಣ್ಣಿನ ಮುಖ, ಮೂಗು, ತುಟಿ, ಕಣ್ಣು, ಬಾಯಿ, ಕೆನ್ನೆ, ಕೂದಲು, ಕಾಲು, ಕೈ..ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿಯೇ ಹೆಣ್ಣಿನ ಪರ ಅಥವಾ ವಿರುದ್ಧ ನಿಲ್ಲುತ್ತಾರೆಂಬುದನ್ನು ದಯವಿಟ್ಟು ನಂಬಿ. ಆಧುನಿಕ ಮನುಷ್ಯರಲ್ಲಿ ಹೆಚ್ಚಿನವರು ಇಷ್ಟಪಡುವುದು ಹೆಣ್ಣು ಎಂಬ ಜೀವಿಯನ್ನಲ್ಲ, ಅವಳ ಸೌಂದರ್ಯವನ್ನು. ನಾನು ಇಷ್ಟು ಒತ್ತು ಕೊಟ್ಟು ಹೇಳಲು ಕಾರಣ ಏನೆಂದರೆ, ಅದು ನನ್ನ ಮುಖ. 14 ವರ್ಷಗಳ ಹಿಂದೆ ನನ್ನ ಗೆಳೆಯರ ಬಳಗದಲ್ಲಿದ್ದವರು ಮತ್ತು ನನ್ನಲ್ಲಿ ಮಾತಾಡಲು ಆಸಕ್ತಿ ತೋರುತ್ತಿದ್ದವರಲ್ಲಿ ಹೆಚ್ಚಿನವರು ಇವತ್ತು ನನ್ನ ಜೊತೆಗಿಲ್ಲ. ಯಾವಾಗ ನನ್ನ ಮುಖಕ್ಕೆ ಆಸಿಡ್ ದಾಳಿಯಾಯಿತೋ ಆಗಿನಿಂದಲೇ ಅವರೆಲ್ಲರ ನಿಜ ಬಣ್ಣವೂ ಬಯಲಾಯಿತು.. 1998 ಮೇ 28ರಂದು ಆಸಿಡ್ ದಾಳಿಗೆ ಒಳಗಾದ ಶಿರಿನ್ ಜುವಾಲೆಯ ಅನುಭವಗಳನ್ನು ಓದುವಾಗ ಹೃದಯ ಭಾರವಾಗುತ್ತದೆ. ಕಣ್ಣು ಒದ್ದೆಯಾಗುತ್ತದೆ.. ಒಂದು ದಿನ ನೀವು ಅನಿರೀಕ್ಷಿತವಾಗಿ ಆಸಿಡ್ ದಾಳಿಗೊಳಗಾಗುತ್ತೀರಿ ಮತ್ತು ಮುಖ ವಿಕಾರವಾಗಿ ಬಿಡುತ್ತದೆ ಎಂದಿಟ್ಟುಕೊಳ್ಳಿ. ಆ ಬಳಿಕವೂ ನೀವು ಈ ಹಿಂದಿನಂತೆಯೇ ಮದುವೆಗೋ ಮುಂಜಿಗೋ ಸಲೀಸಾಗಿ ಹೋಗಿ ಬಿಡಬಹುದೆಂದು ಅಂದುಕೊಂಡಿದ್ದೀರಾ? ನಿಮ್ಮ ಗೆಳತಿಯರು ಹತ್ತಿರ ಕುಳ್ಳಿರಿಸಬಹುದು, ಪಾರ್ಟಿಗೋ ಶಾಪಿಂಗ್ ಗೋ ಅಥವಾ ಇನ್ನಾವುದೇ ಕಾರ್ಯಕ್ರಮಕ್ಕೆ ಹೋಗುವಾಗ, `ಬಾರೇ ಹೋಗೋಣ’ ಎಂದು ಜೊತೆಗೆ ಕರಕೊಳ್ಳಬಹುದೆಂದು ನಂಬಿದ್ದೀರಾ? ನಿಮ್ಮ ಉಪಸ್ಥಿತಿ ಅವರಿಗೆ ಕಿರಿಕ್ ಅನ್ನಿಸದೆಂದು ಭಾವಿಸಿದ್ದೀರಾ? ನಿಜವಾಗಿ, ಒಂದು ಮುಖದ ಬೆಲೆ ಗೊತ್ತಾಗುವುದು ಅದು ವಿಕಾರಗೊಂಡಾಗಲೇ. ನಿಮ್ಮನ್ನು ವ್ಯಂಗ್ಯದ ಮಾತುಗಳು ಚುಚ್ಚುತ್ತವೆ. ತಮಾಷೆಗಳು ಕೇಳಿ ಬರುತ್ತವೆ. ಎಲ್ಲಿಗೆ ಹೋಗುವುದಿದ್ದರೂ ನಿಮ್ಮನ್ನು ಜೊತೆಗೂಡಿಸಿಕೊಂಡು ಹೋಗುತ್ತಿದ್ದವರೇ ನಿಮ್ಮಿಂದ ತಪ್ಪಿಸಿಕೊಂಡು ಹೋಗಲು ಶ್ರಮ ಪಡುತ್ತಾರೆ. ಪಾರ್ಟಿಗೆ ನೀವು ಹೋದರೆ ಪಾರ್ಟಿಯ ಸೌಂದರ್ಯ ಹಾಳಾಗುತ್ತದೆ ಎಂದು ಭಾವಿಸುತ್ತಾರೆ. ಬೇಡ, ಎಲ್ಲದಕ್ಕೂ ಅವರನ್ನೇ ಅಪರಾಧಿಗಳು ಎಂದು ಹೇಗೆ ಹೇಳುವುದು? ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ, ವಿಚಾರ ವಿನಿಮಯ ನಡೆಸುವುದಕ್ಕೆ, ತಿನ್ನಲು, ಕುಡಿಯಲು, ನೋಡಲು, ಉಸಿರಾಡಲು.. ಎಲ್ಲದಕ್ಕೂ ಮುಖ ಮುಖ್ಯವೇ ಅಲ್ಲವೇ? ಮುಖವನ್ನು ನೋಡಿ ನಾವು ವ್ಯಕ್ತಿಯನ್ನು ಅಳೆಯುತ್ತೇವಲ್ಲ. ಮುಖದಿಂದ ಸೌಂದರ್ಯವನ್ನು ಲೆಕ್ಕ ಹಾಕುತ್ತೇವಲ್ಲ. ಮುಖದ ಸೌಂದರ್ಯಕ್ಕಾಗಿ ಎಷ್ಟೆಲ್ಲ ಕಾಸ್ಮೆಟಿಕ್ಸ್ ಗಳನ್ನು ಬಳಸುತ್ತೇವೆ? ಮುಗುಳುನಗುವನ್ನು ಸದಾ ತುಟಿಯಲ್ಲಿಟ್ಟು ಬದುಕುವುದಕ್ಕೆ ಎಷ್ಟೊಂದು ಶ್ರಮ ಪಡುತ್ತೇವೆ? ದೇಹದ ಇತರೆಲ್ಲ ಭಾಗಗಳು ಮುಚ್ಚಿರುವಾಗಲೂ ತೆರೆದಿರುವ ಭಾಗವೆಂದರೆ ಮುಖವೊಂದೇ ಅಲ್ಲವೇ? ಆ ಮುಖದಲ್ಲಿರುವ ಕಣ್ಣಿಗೆ ಸಾವಿರಾರು ಮಂದಿಯ ಭಾವನೆಗಳನ್ನು ಮೀಟುವ ಸಾಮರ್ಥ್ಯ ಇರುತ್ತದಲ್ಲ. ಮೂಗು, ಕೆನ್ನೆ, ಹುಬ್ಬು, ತುಟಿಗಳ ಸುತ್ತ ಈ ಜಗತ್ತಿನಲ್ಲಿ ಎಷ್ಟೊಂದು ಕವನಗಳು ರಚನೆಯಾಗಿಲ್ಲ? ಎಷ್ಟು ಮಂದಿ ಅವುಗಳಿಗೆ ಮರುಳಾಗಿಲ್ಲ? ಆದರೆ, ಆ ಮುಖವೇ ವಿಕಾರವಾಗಿ ಬಿಟ್ಟರೆ, ನೋಡಲು ಭೀತಿ ಹುಟ್ಟಿಸುವಂತಿದ್ದರೆ.. ಮುಖ ಬದುಕಿನ ಎಷ್ಟೊಂದು ಅಮೂಲ್ಯ ಭಾಗ ಅಂತ ಗೊತ್ತಾಗುವುದು ಆಗಲೇ.. ಶಿರಿನ್ ಜುವಾಲೆ ತನ್ನಂತರಂಗವನ್ನು ನಿವೇದಿಸಿಕೊಳ್ಳುತ್ತಾ ಹೋಗುತ್ತಾಳೆ. -My Husband Changed My Life Forever – ನನ್ನ ಗಂಡ ನನ್ನ ಬದುಕನ್ನು ಸಂಪೂರ್ಣವಾಗಿ ಬದಲಿಸಿದ – ಎಂಬ ಶೀರ್ಷಿಕೆಯಲ್ಲಿ ಬ್ಲಾಗಿನಲ್ಲಿ ಬರೆಯುತ್ತಾ ಹತ್ತಿರವಾಗುತ್ತಾಳೆ.. ಬಾಲಿವುಡ್ ಇರುವ, ನಟಿಯರೆಲ್ಲಾ ಸುದ್ದಿ ಮಾಡುತ್ತಿರುವ, ಕಾಸ್ಮೆಟಿಕ್ಸ್ ಗಳು ಅತ್ಯಂತ ಹೆಚ್ಚು ಮಾರಾಟವಾಗುವ, ಸೌಂದರ್ಯದ ಬಗ್ಗೆ ಧಾರಾಳ ಚರ್ಚೆ-ಸಂವಾದಗಳು ನಡೆಯುತ್ತಿರುವ ಮುಂಬೈಯ ಹುಡುಗಿ ನಾನು. ಮದುವೆಯಾದ 2 ತಿಂಗಳೊಳಗೇ ನಾನು ವಿಚ್ಛೇದನಕ್ಕೆ ಬೇಡಿಕೆಯಿಟ್ಟೆ. ಗಂಡನೊಂದಿಗೆ ಸಂಸಾರ ಸಾಗಿಸುವುದು ಸಾಧ್ಯವಿಲ್ಲ ಅಂತ ಹೇಳಿದೆ. ಮನೆಯವರು ಒಪ್ಪಲಿಲ್ಲ. 2 ತಿಂಗಳೊಳಗೇ ದಾಂಪತ್ಯ ಸಂಬಂಧವನ್ನು ಅಳೆಯಲಾಗುತ್ತಾ? ತುಸು ಸಹನೆ ವಹಿಸು. ಕ್ಷಮಿಸುವ ಗುಣ ರೂಢಿಸಿಕೊ. 6 ತಿಂಗಳೋ ಒಂದು ವರ್ಷವೋ ಕಾದು ನೋಡಿದ ಬಳಿಕ ತೀರ್ಮಾನಿಸುವ. ಮದುವೆಯೆಂದರೇನು ಮಕ್ಕಳಾಟಿಕೆಯಾ.. ಅಂತ ಅವರೆಲ್ಲ ಗದರಿಸಿದರು. ನಾನು ಒಪ್ಪಿಕೊಂಡು ಗಂಡನ ಮನೆಗೆ ನಡೆದೆ. ಹೀಗೆ ಬದುಕು ಸಾಗುತ್ತಿದ್ದಾಗಲೇ ಒಂದು ದಿನ ಮಾಸಗಾವಿಯ ನಮ್ಮ ಫ್ಲಾಟಿನ ಕೆಳಗೆ ನನ್ನ ಗಂಡ ನನ್ನ ಮುಖದ ಮೇಲೆ ಆಸಿಡ್ ಎರಚಿದ. ಎರಚಿದ್ದು ಆಸಿಡ್ ಎಂದು ಗೊತ್ತಾದ ಕೂಡಲೇ ನಾನು ಬಾತ್ ರೂಮ್ ಗೆ ಓಡಿ ಪೈಪ್ ತಿರುಗಿಸಿದೆ. ಬಹುಶಃ ಆವತ್ತು ನಾನು ಹಾಗೆ ಮಾಡದಿರುತ್ತಿದ್ದರೆ, ಇವನ್ನೆಲ್ಲಾ ಹೇಳಿಕೊಳ್ಳುವುದಕ್ಕೆ ಇವತ್ತು ನಾನೇ ಇರುತ್ತಿರಲಿಲ್ಲವೇನೋ? ಹೊಗೆಯ ಮಧ್ಯೆ ಬಿಕ್ಕಳಿಸುವ ನನ್ನನ್ನು ನೋಡಿ ತಾಯಿ ದಿಗ್ಭ್ರಮೆಗೊಂಡರು. ನನ್ನನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿಯೇ ಮುಖವೆಲ್ಲ ಬೊಬ್ಬೆಯೆದ್ದಿದ್ದುವು. 4 ವರ್ಷಗಳಲ್ಲಿ 16 ಆಪರೇಶನ್ ಗಳಿಗೆ ಒಳಗಾದೆ. ಒಂದು ಅಮೇರಿಕದಲ್ಲಿ. ನನ್ನ ಗಂಡ ಎಷ್ಟು ಬುದ್ಧಿವಂತ ಅಂದರೆ ಆಸಿಡ್ ಎರಚಿದ ಅದೇ ದಿನ ಆತ ವಿದೇಶಕ್ಕೆ ಹಾರಿ ಹೋಗಿದ್ದ. ಇವೆಲ್ಲ ನಡೆದು 12 ವರ್ಷಗಳಾದುವು. ಆದರೆ ಆತನನ್ನು ಶಿಕ್ಷಿಸುವುದಕ್ಕೆ ನಮ್ಮ ವ್ಯವಸ್ಥೆಗೆ ಈವರೆಗೂ ಸಾಧ್ಯವಾಗಿಲ್ಲ.
mana kalakuttade..
.
ನನ್ನ ಗಂಡ ನನ್ನ ಮುಖ ಇನ್ನಾರಿಗೂ ಸಿಗದಿರಲಿ ಎಂದು ಭಾವಿಸಿದ್ದ. ವಿಕಾರ ಮುಖದೊಂದಿಗೆ ಮನೆಯೊಳಗಿರಲಿ ಅಂತ ಅಂದುಕೊಂಡಿದ್ದ. ಆದರೆ ನಾನು ಎಲ್ಲೆಲ್ಲಿಗೆ ಹೋಗುತ್ತಿದ್ದೆನೋ ಅಲ್ಲೆಲ್ಲಾ ಚರ್ಚೆಗೊಳಗಾಗುತ್ತಿದ್ದುದು ನನ್ನ ಮುಖವಲ್ಲ, ನನ್ನ ಗಂಡನ ಮುಖ. ಆತನ ಕ್ರೂರ ಮನಸ್ಸು. ನನಗೆ ಆಸಿಡ್ ಎರಚುವ ಮೂಲಕ ಆತ ನನ್ನನ್ನಲ್ಲ, ಆತನನ್ನೇ ಅಡಗಿಸಿಕೊಳ್ಳಬೇಕಾಯಿತು..
ನಿಜವಾಗಿ, ನಾನು ಈ ಪ್ರಕರಣದ ಮೂಲಕ ದೇವನನ್ನು ಅರಿತುಕೊಂಡೆ.
ನನ್ನಲ್ಲಿ ಏನು ಇದೆ ಮತ್ತು ಏನೆಲ್ಲ ಇತ್ತು ಅನ್ನುವುದನ್ನು ತಿಳಿದುಕೊಂಡದ್ದು ಈ ಘಟನೆಯ ಮೂಲಕವೇ. ನನ್ನ ಮುಖ ಮತ್ತು ಆ ಮುಖಾಂತರ ನನ್ನ ಸೌಂದರ್ಯವೂ ನಷ್ಟವಾದಾಗ, ಇವುಗಳಾಚೆಗಿನ ಸತ್ಯಗಳನ್ನು ನಾನು ತಿಳಿದುಕೊಂಡೆ. ನಿಜವಾಗಿ, ಇದು ನನ್ನ ಬದುಕಿನ ಅತ್ಯಂತ ಪ್ರಮುಖವಾದ ಅರಿವು ಎಂದೇ ನನ್ನ ಭಾವನೆ. ನಾನೆಂದೂ ಅಲ್ಲಾಹನಲ್ಲಿ ವಿಶ್ವಾಸ ಇಟ್ಟವಳು. ಅವನ ತೀರ್ಮಾನವೇ ಅತ್ಯಂತ ಸರಿಯಾದದ್ದು ಮತ್ತು ಪರಿಣಾಮಕಾರಿಯಾದದ್ದು ಎಂದು ಬಲವಾಗಿ ನಂಬಿದವಳು. ಅದು ಇವತ್ತಲ್ಲದಿದ್ದರೆ ನಾಳೆ ಬಂದೇ ಬರುತ್ತದೆ. ಈ ವಿಶ್ವಾಸವೇ ನನ್ನನ್ನು ಬದುಕುವಂತೆ ಮಾಡಿದೆ..
ಶಿರೀನ್ ಅವರ ಆತ್ಮವಿಸ್ವಾಸಕ್ಕೊಂದು hats off . ಈ ಶಿರೀನ್ ಅವರ ಆತ್ಮವಿಸ್ವಾಸ ,ದೈರ್ಯ, ಎದೆಗುಂದದ ಛಲ, ನಿಜಕ್ಕೂ ಅವರ ಬದುಕಿಗೆ ಪುನರ್ಜನ್ಮವನ್ನೇ ತಂದು ಕೊಟ್ಟಿವೆ .
ಆದರೆ ಈ ತರಹದ ಸಂಕಟಕ್ಕೆ ಒಳಗಾದ ಅದೆಸ್ಟೋ ಜೀವಿಗಳು ಕಾಲವಶವಾದ ಕ್ರೂರ ಇತಿಹಾಸ ನಮ್ಮ ಮುಂದಿದೆ …
ಒಂದು ದೊಡ್ಡ ದುರಂತವೆಂದರೆ ಶಿರೀನ್ ಅಂಥವರ ಈ ಸಂಕಟಕ್ಕೆ ಕಾರಣರಾದವರು ಶಿಕ್ಷೆ ಯಿಂದ ತಪ್ಪಿಸಿಕೊಳ್ಳುವುದು . ಅವರ ಅಮಾನವೀಯ ಕೃತ್ಯಕ್ಕೆ ಶಿಕ್ಷೆ ಆಗುವವರೆಗೂ ,ಇಂತಹ
ಕೃತ್ಯಗಳು ನಡೆಯುತ್ತಲೇ ಇರುತ್ತವೆ……
ನಿಮ್ಮ ಚಿಂತನೆ ಹಾಗು ಸ್ಪಂದನೆಗೆ ಪ್ರೀತಿಪೂರ್ವಕ ನಮಸ್ಕಾರ .
ರವಿ ವರ್ಮ ಹೊಸಪೇಟೆ
Sherin can you please share, how your ex-husband has escaped from the grasp of the law? did he flee to a country where there is no extradition possible..
You have overcome and set an example. proud of you.