‘ಅಳಗರಸಾಮಿಯಿನ್ ಕುದುರೈ’ ಕಥೆ

ಮೌಢ್ಯಗಳ ನಡುವೆ ನಲುಗುವ ಬದುಕು

– ಕುಮಾರ ರೈತ

ವರದಿಗಾರ

ಅರಳುತ್ತಿರುವ ಬದುಕು ಮೌಢ್ಯಗಳೆಂಬ ರಕ್ಕಸ ಪಾದಗಳ ಅಡಿಯಲ್ಲಿ ಮುರುಟಿ ಹೋಗಬಹುದು. ಇಂಥ ಹಿನ್ನಡೆಗಳನ್ನು ಅದರ ಸೂಕ್ಷ್ಮಗಳ ಸಮೇತ ಸಮರ್ಥವಾಗಿ ಕಟ್ಟಿಕೊಡುತ್ತದೆ ತಮಿಳು ಸಿನಿಮಾ ‘ಅಳಗರಸಾಮಿಯಿನ್ ಕುದುರೈ’ ಹೀಗೆಂದರೆ ಚೆಲುವರಾಯಸ್ವಾಮಿಯ ಕುದುರೆ ಎಂದರ್ಥ. ಇಲ್ಲಿ ಚೆಲುವರಾಯ ದೇವರೂ ಹೌದು…ಅದೇ ಕಾಲಕ್ಕೆ ಮನುಷ್ಯನೂ ಹೌದು. ಅವನು ಸವಾರಿ ಮಾಡುವ ಕುದುರೆ ಕಳುವಾದಾಗ ಘಟಿಸುತ್ತಾ ಹೋಗುವ ಘಟನೆಗಳ ಸರಮಾಲೆ ತಲ್ಲಣ ಮೂಡಿಸುತ್ತದೆ.

ತಮಿಳುನಾಡಿನ ಥೇಣಿ ಸಮೀಪವಿರುವ ಮಲ್ಲಯ್ಯಪುರಮ್ ಗ್ರಾಮದಲ್ಲಿ ಇಡೀ ಘಟನಾವಳಿ ಸಾಗುತ್ತದೆ. ಭಾರತದ ಹಳ್ಳಿಗಳ ಸಮರ್ಥ ಪ್ರತಿನಿಧಿಯಂಥ ಊರಿದು. ಜಾತಿ ವ್ಯವಸ್ಥೆ ಮಡುಗಟ್ಟಿ ಮಲೆತು ನಾರುತ್ತಿದೆ. ಕೊಂಚ ಅದನ್ನು ಕೆದಕಿದರೂ ಸಾಕು ಬೂದಿ ಮುಚ್ಚಿದ ಕೆಂಡದಂಥ ವಾತಾವರಣದಲ್ಲಿ ಬೆಂಕಿಯೇಳುತ್ತದೆ. ಇಲ್ಲಿ ಸ್ಥಳೀಯ ದ್ವೇಷದ ರಾಜಕಾರಣವೂ ಇದೆ.

ಆರಂಭದಲ್ಲಿಯೇ ಚೆಲುವರಾಯ ಸ್ವಾಮಿಯ ಉತ್ಸವ ತೆರೆದುಕೊಳ್ಳುತ್ತದೆ. ಹಬ್ಬ-ಹರಿದಿನಗಳಷ್ಟೆ ಮನರಂಜನೆಯಾಗಿಂಥ ತುಂಬ ಹಿಂದುಳಿದ ಹಳ್ಳಿಗರ ಸಡಗರವೂ ಇಲ್ಲಿ ಚಿತ್ರಿತವಾಗಿದೆ. ಉತ್ಸವ ನಡೆಯುತ್ತಿದ್ದ ರಾತ್ರಿಯೇ ಜಮೀನ್ದಾರಿಕೆಯ ಪ್ರತೀಕದಂತಿರುವ ಮರಿ ಪುಢಾರಿಯಿಂದ ವ್ಯಕ್ತಿಯೊಬ್ಬನ ಕಗ್ಗೊಲೆ ನಡೆಯುತ್ತದೆ. ಇಡೀ ಹಳ್ಳಿ ಗರಬಡಿದಂತಾಗುತ್ತದೆ. ಇದಾದ ನಂತರ ಮೂರು ವರ್ಷದವರೆಗೆ ಮಳೆ ನಾಪತ್ತೆ. ಒಂದಾದ ಮೇಲೋಂದರಂತೆ ಅಹಿತಕಾರಿ ಬೆಳವಣಿಗೆ. ಈ ಅವಧಿಯಲ್ಲಿ ಉತ್ಸವ-ಉತ್ಸಾಹ ನಾಪತ್ತೆ. ಇಂಥ ಸಮಯದಲ್ಲಿ ಊರ ಪಂಚಾಯತಿ ಅಧ್ಯಕ್ಷ ಹಳ್ಳಿಗೆ ಒದಗಿದ ಅನಿಷ್ಟ ಅಳಿಸಲು ಚೆಲುವರಾಯಸ್ವಾಮಿ ಉತ್ಸವ ನಡೆಸಲು ನಿರ್ಧರಿಸುತ್ತಾನೆ. ಪಂಚಾಯತಿಯವರೊಂದಿಗೆ ಈತ ದೇಣಿಗೆ ಕೇಳಲು ಹೋದಾಗ ಹಳ್ಳಿಗರಲ್ಲಿರುವ ಬಡತನ ಕಣ್ಣಿಗೆ ರಾಚುತ್ತದೆ. ಇಂಥ ದುಸ್ಥಿತಿಯಲ್ಲಿಯೂ ಹಳ್ಳಿಗರು ಕೈಲಾದಷ್ಟು ದೇಣಿಗೆ ನೀಡುತ್ತಾರೆ. ಎಲ್ಲರಲ್ಲಿಯೂ ‘ ದೇವರ ಉತ್ಸವ ನಡೆಯಲಿ, ಊರಿಗೆ ಬಂದ ಕಷ್ಟ ಕರಗಲಿ, ಮಳೆ ಸುರಿಯಲಿ ಎಂಬ ಭಾವನೆ’

ಗ್ರಾಮ ದೇವತೆಯ ಅರ್ಚಕ ಕೆಳ ಜಾತಿ. ಈತನಲ್ಲಿ ದೈವದ ಅಪ್ಪಣೆ ಕೇಳುತ್ತಾರೆ. ದೈವ ಮೈಮೇಲೆ ಬಂದಾಗ ಈತ ಮೇಲ್ಜಾತಿಯ ಪಂಚಾಯತಿ ಪ್ರೆಸಿಡೆಂಟು ಮತ್ತು ಸದಸ್ಯರನ್ನು ಹೆಸರಿಡಿದು ಏಕವಚನದಲ್ಲಿ ಕರೆಯುತ್ತಾನೆ. ಇದರಿಂದ ಸದಸ್ಯರು ಸಿಡಿಮಿಡಿಗೊಂಡರೂ ಪ್ರತಿಕ್ರಿಯಿಸುವುದಿಲ್ಲ. ಏಕೆಂದರೆ ವ್ಯಕ್ತಿ ಮಾತನಾಡುತ್ತಿಲ್ಲ, ದೈವ ಮಾತನಾಡುತ್ತಿದೆ ಎಂಬ ಭಾವ.

ಇಂಥ ಸಂದರ್ಭಗಳನ್ನು ಬಳಸಿಕೊಳ್ಳುವ ದಮನಿತರು ತಮ್ಮ ಆಕ್ರೋಶಗಳನ್ನು ಹೇಗೆ ಹೊರ ಹಾಕುತ್ತಾರೆ ಎಂಬುದನ್ನು ನಿರ್ದೇಶಕ ಬಹಳ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಊರ ದೈವದಿಂದ ಉತ್ಸವ ನಡೆಸಲು ಅಪ್ಪಣೆಯಾಗುತ್ತದೆ. ಮುಂದಿನ ಸಿದ್ಧತೆಗಾಗಿ ಮುಖಂಡರು ಊರ ಹೊರ ವಲಯದಲ್ಲಿರುವ ದೇಗುಲಕ್ಕೆ ತೆರಳುತ್ತಾರೆ. ಅಲ್ಲಿ ದೊಡ್ಡ ಆಘಾತ ಕಾದಿರುತ್ತದೆ.

ಚೆಲುವರಾಯಸ್ವಾಮಿಯ ವಾಹನ ಕುದುರೆಯ ಮರದ ಪ್ರತಿಮೆ ಕಾಣೆಯಾಗಿರುತ್ತದೆ. ಕುದುರೆ ಮೂರ್ತಿಯಿಲ್ಲದೆ ದೇವರ ಮೆರವಣಿಗೆ ಸಾಗುವುದಾದರೂ ಹೇಗೆ. ಊರಿನವರಿಗೆ ಶಾಕ್. ಮುಂದೇನು ಮಾಡಬೇಕೆಂದು ತಿರ್ಮಾನಿಸಲು ಸಭೆ ಸೇರುತ್ತಾರೆ. ಮಲೆಯಾಳಿ ಮಾಂತ್ರಿಕನನ್ನು ಕರೆಯಿಸಬೇಕು; ಪೊಲೀಸರಿಗೂ ದೂರು ನೀಡಬೇಕು ಎಂದು ತಿರ್ಮಾನವಾಗುತ್ತದೆ. ಮಲೆಯಾಳಿ ಮಾಂತ್ರಿಕರನ್ನು ಕರೆಯಿಸುವುದರಿಂದ ತನಗೆ ಅವಮಾನ ಎಂದು ಗ್ರಾಮ ದೇವತೆಯ ಪೂಜಾರಿ ತೀವ್ರ ಸಿಡಿಮಿಡಿಗೊಂಡು ಅಲ್ಲಿಂದ ತೆರಳುತ್ತಾನೆ.

ಜಾತಿಯತೆಯ ವಿಷಮ ವಾತಾವರಣವಿರುವ ಊರಿನಲ್ಲೂ ಪ್ರೀತಿಯೊಂದು ಮೆಲ್ಲನೆ ಅರಳಿರುತ್ತದೆ. ಪಂಚಾಯತಿಯ ಅಧ್ಯಕ್ಷ ಮತ್ತು ಬಲಾಢ್ಯ ಮೇಲ್ಜಾತಿಗೆ ಸೇರಿದ ಮುಖಂಡನ ಮಗ ರಾಮಕೃಷ್ಣನಿಗೂ, ಗ್ರಾಮ ದೇವತೆಯ ಪೂಜೆ ಮಾಡುವ ದಮನಿತ ಜಾತಿಯ ಪೂಜಾರಿಯ ಮಗಳು ದೇವಿ ನಡುವೆ ಪ್ರೇಮ ಪಲ್ಲವಿಸಿರುತ್ತದೆ. ಇದು ಭವಿಷ್ಯದ ಭರವಸೆ ಸಂಕೇತವಾಗಿಯೂ ಕಾಣುತ್ತದೆ.

ಊರ ಮುಖಂಡರು ಪಟ್ಟಣದಲ್ಲಿರುವ ಪೊಲೀಸ್ ಠಾಣೆಗೆ ದೂರು ನೀಡಲು ತೆರಳುತ್ತಾರೆ. ಅಲ್ಲಿನ ಸಬ್ ಇನ್ಸ್ಪೆಕ್ಟರ್ ಗ್ರಾಮದ ಮುಖ-ವ್ಯವಸ್ಥೆ ಅರಿತವನು. ಹಿಂದೆ ಆದ ಕಗ್ಗೊಲೆಯಿಂದ ಹಿಂದೆ ಇದ್ದ ಠಾಣಾಧಿಕಾರಿ ಮೇಲೆ ಶಿಸ್ತುಕ್ರಮ ಜರುಗಿರುವುದರಿಂದ ಮಲ್ಲಯ್ಯಪುರಮ್ ಗ್ರಾಮದವರು ಪುಂಡಾಟಿಕೆ ಸ್ವಭಾವದವರು ಎಂಬ ಗ್ರಹಿಕೆ. ಇದೇ ಕಾರಣದಿಂದ ಜಾತ್ರೆ ಮುಗಿಯುವವರೆಗೂ ಈ ಗ್ರಾಮದಲ್ಲಿದ್ದು ಶಾಂತಿ-ಸುವ್ಯವಸ್ಥೆ ಕಾಪಾಡಬೇಕೆಂದು ಇಬ್ಬರು ಪೇದೆಗಳನ್ನು ನಿಯೋಜಿಸುತ್ತಾನೆ. ಇವರನ್ನು ಕಳುಹಿಸುವಾಗ ನೀವೇ ಸಮಸ್ಯೆಯಾಗಬೇಡಿ ಎಂದೂ ಕಿವಿಮಾತು ಹೇಳುತ್ತಾನೆ. ಕಾಣೆಯಾಗಿದ್ದ ಕುದುರೆ ಪತ್ತೆ ಮಾಡುವ ಸಲುವಾಗಿ ಆ ಪ್ರದೇಶಕ್ಕೆ ಹೊಸಬನಾದ ಪೇದೆಯೊಬ್ಬನನ್ನು ಗುಪ್ತಚರನಾಗಿ ನೇಮಿಸುತ್ತಾನೆ. ಹೀಗೆ ಗುಪ್ತಚರನಾಗಿ ಬಂದ ವ್ಯಕ್ತಿಯನ್ನು ಅಲ್ಲಿದ್ದ ಮೌಢ್ಯ ಮತ್ತು ಅದರ ಸುತ್ತಲಿನ ಆಕರ್ಷಣೆ ಬಲವಾಗಿ ಸೆಳೆದುಕೊಂಡು ಈತನೇ ಮಂತ್ರವಾದಿಯಾಗಿ ಬಿಡುವ ಘಟನೆಯೂ ಅಲ್ಲಿ ನಡೆಯುತ್ತದೆ !!

ಇಷ್ಟೆಲ್ಲ ಸಾಲದು ಎಂಬಂತೆ ಪಂಚಾಯತಿ ಪ್ರೆಸಿಡೆಂಟ್ ಮಗ ರಾಮಕೃಷ್ಣ ಮತ್ತು ಆತನ ಸ್ನೇಹಿತರನ್ನು ಕುದುರೆ ಪ್ರತಿಮೆ ಕಳವು ಮಾಡಿದವರನ್ನು ಪತ್ತೆ ಹಚ್ಚಲು ಸಹಾಯ ಮಾಡಬೇಕೆಂದು ಕೇಳಿಕೊಳ್ಳುತ್ತಾನೆ. ಈ ಕೆಲಸದ ಮೇಲೆ ರಾತ್ರಿ ಪಹರೆ ತಿರುಗಲು ಹೊರಟ ಇವರಿಗೆ ಊರಿನ ಬಡತನದ ಬವಣೆಗಳ ಕಟು ಅನಾವರಣ-ಪೂಜಾರಿಯ ಹೂರಣ.. ನಂತರ ಮುಂದೆ ಕುದುರೆ ಪ್ರತಿಮೆ ನಾಪತ್ತೆಯಾಗಿದ್ದ ಹಿನ್ನೆಲೆ ಎಲ್ಲವೂ ತಿಳಿಯುತ್ತದೆ.

ಈ ಮಧ್ಯೆ ಮಲೆಯಾಳಿ ಮಾಂತ್ರಿಕನನ್ನು ಕರೆಯಿಸುವ ಮುಖಂಡರು ಅವನಿಂದ ಭವಿಷ್ಯ ವಾಣಿ ಕೇಳುತ್ತಾರೆ. ಆತ ಕುದುರೆ ಸಿಕ್ಕೇ ಸಿಗುತ್ತದೆ ಎಂದು ಹೇಳಿ ನಿಂಬೆ ಹಣ್ಣು ಎಸೆದು ಅದು ಉರುಳಿದ ದಿಕ್ಕಿನಲ್ಲಿ ಕುದರೆ ಪ್ರತಿಮೆ ಇದೆ ಎಂದು ಹೇಳುತ್ತಾನೆ. ಈತ ಹೇಳಿದ ದಿಕ್ಕಿನಲ್ಲಿ ಪ್ರತಿಮೆ ಹುಡುಕ ಹೊರಟವರಿಗೆ ಜೀವಂತ ಕುದುರೆಯೇ ಸಿಗುತ್ತದೆ. ಇದೇ ಕಳುವಾಗಿದ್ದ ಕುದುರೆ. ಈಗ ಜೀವಂತವಾಗಿದೆ. ಇದನ್ನಿಟ್ಟುಕೊಂಡೆ ಚೆಲುವರಾಯನ ಉತ್ಸವ ಮಾಡಿ ಎಂದು ಮಲೆಯಾಳಿ ಮಾಂತ್ರಿಕ ನಂಬಿಸುತ್ತಾನೆ.

ಕುದುರೆಯನ್ನು ಊರ ಮಧ್ಯದ ಮಂಟಪಕ್ಕೆ ಕಟ್ಟಿ ಹಾಕುತ್ತಾರೆ. ಇದರ ಮಾಲೀಕ ನಾಪತ್ತೆಯಾಗಿದ್ದ ಕುದುರೆಯನ್ನು ಹುಡುಕುತ್ತಾ ಬಂದವನು ಅದು ಈ ಊರಿನಲ್ಲಿರುವುದು ನೋಡಿ ಸಂಭ್ರಮಿಸುತ್ತಾನೆ. ಆದರೆ ಈತನ ಸಂಭ್ರಮ ಕೆಲಕ್ಷಣಗಳಲ್ಲಿಯೇ ನುಚ್ಚುನೂರಾಗುತ್ತದೆ. ಕುದುರೆಗೆ ಕಟ್ಟಿದ್ದ ಹಗ್ಗ ಬಿಚ್ಚಲು ಮುಂದಾದ ಈತನನ್ನು ನೋಡಿ ಕಳ್ಳನೆಮದು ತಿಳಿಯುವ ಊರವರು ಹಿಗ್ಗಾಮುಗ್ಗಾ ಹೊಡೆಯುತ್ತಾರೆ. ಇದು ದೇವರ ಕುದುರೆ. ಪ್ರತಿಮೆಯಾಗಿದ್ದು ಜೀವಂತವಾಗಿದೆ ಎಂಬುದು ಅವರ ಪ್ರತಿಪಾದನೆ.

ಪೊಲೀಸ್ ಠಾಣೆಗೆ ದೂರು ಹೋಗುತ್ತದೆ. ಕುದುರೆ ಕೊಡಿಸಲು ಬಂದ ಠಾಣಾಧಿಕಾರಿ ಕೂಡ ಊರವರ ಹಠದ ಮುಂದೆ ನಿಸ್ಸಾಹಯಕ. ಗ್ರಾಮದ ಉತ್ಸವ ಮುಗಿಯುವವರೆಗೂ ಇಲ್ಲಿದ್ದು ನಂತರ ಕುದುರೆ ತೆಗೆದುಕೊಂಡು ಹೋಗು ಎಂದು ಕುದರೆ ಸಾಕಣೆದಾರನನ್ನು , ಮುಖಂಡರನ್ನು ಒಪ್ಪಿಸುವುದರಲ್ಲಿ ಆತ ಸುಸ್ತು.

ಇಲ್ಲಿ ಮತ್ತೂ ಆಶ್ಚರ್ಯವಿರುತ್ತದೆ. ಕುದುರೆ ಸಾಕಣೆದಾರನ ಹೆಸರು ಅಳಗರಸ್ವಾಮಿ … ಊರ ದೇವರ ಹೆಸರು ಅಳಗರ ಸ್ವಾಮಿ. ಆದರೆ ಕುದುರೆ ಸಾಕಣೆದಾರ ತನ್ನ ಹೆಸರಿಗೆ ತದ್ವಿರುದ್ಧದ ರೂಪುಳ್ಳವನು. ನೀಲಗಿರಿ ಬೆಟ್ಟದ ಶ್ರೇಣಿಯವನಾದ ಈತನನ್ನು ಮೆಚ್ಚಿ ಮದುವೆಯಾಗಲು ರೂಪು ಮುಖ್ಯ ಅಲ್ಲ; ಮನಸು ಎಂಬ ನಿಲುವಿನ ಚೆಂದುಳ್ಳಿ ಚೆಲುವೆ. ಕುದುರೆ ಇದ್ದರೆ ದುಡಿಮೆ ಎಂಬ ಸ್ಥಿತಿಯ ಅಳಗರಸ್ವಾಮಿ. ಕುದುರೆ ಪತ್ತೆಹಚ್ಚಿ ಕರೆತರದಿದ್ದರೆ ಎಂದು ಎಚ್ಚರಿಸಿರುವ ಚೆಲುವೆಯ ಅಪ್ಪ. ನೀನು ಪೂರ್ಣಿಮೆಯೊಳಗೆ ಬಾರದಿದ್ದರೆ ಸಾಯುತ್ತೇನೆ ಎಂದ ಹುಡುಗಿ. ಕುದುರೆ ಕೊಡಲೊಪ್ಪದ ಊರವರು. ನೀನು ಮದುವೆಯಾಗದಿದ್ದರೆ ಸಾಯುತ್ತೇನೆಂದು ಬೆದರಿಸುವ ಪೂಜಾರಿ ಮಗಳು ದೇವಿ. ಉತ್ಸವ ಜರುಗಿದ ತಕ್ಷಣವೇ ನಿನಗೆ ತಾಳಿ ಕಟ್ಟುತ್ತೇನೆ ಎಂದ ರಾಮಕೃಷ್ಣ. ಕೆಳಜಾತಿಯವರಿಗೂ ಮೇಲ್ಞಾತಿಯವರಿಗೂ ಮದುವೆಯಾದರೆ ಮಳೆಯಾಗದು.. ಆಗಲೂಬಾರದು ಎಂಬ ನಂಬಿಕೆಯ ಮುಖಂಡ. ಮುಂದೆ ಏನಾಗುತ್ತದೆ ಎಂದು ಸಿನಿಮಾ ನೋಡಿ ತಿಳಿಯುವುದೇ ಸೂಕ್ತ. ಮಾರುಕಟ್ಟೆಯಲ್ಲಿ ಇದರ ಅಸಲಿ ಡಿವಿಡಿಗಳೂ ದೊರೆಯುತ್ತವೆ.

ಇಂಥ ಸುಳಿಗಳ ವರ್ತುಲಗಳ ಒಳಗೆ ಸಾಗುವ ಚಿತ್ರವನ್ನು ಅತ್ಯುತ್ತಮವಾಗಿ ನಿರ್ದೇಶನ ಮಾಡಿದ್ದಾರೆ ಸುಸೀಂದ್ರನ್. ಕೊಂಚ ಯಾಮಾರಿದ್ದರೂ ಪೇಲವ ಡಾಕ್ಯುಮೆಂಟರಿ ಆಗಬಹುದಾಗಿದ್ದ ಚಿತ್ರವನ್ನು ಚಿತ್ರಕಥೆ ಹೊಣೆಗಾರಿಕೆಯನ್ನೂ ನಿಭಾಯಿಸಿ ಆ ಅಪಾಯದಿಂದ ಪಾರು ಮಾಡಿರುವ ಶ್ರೇಯಸ್ಸು ಇವರಿಗೆ ಸಲ್ಲಬೇಕು. ಕ್ಯಾಮರಾಮನ್ ಥೇಣಿ ಈಶ್ವರ್, ಸಂಕಲನಕಾರ ಕಾಸಿ ವಿಶ್ವನಾಥನ್ ಕೆಲಸವೂ ತುಂಬ ಅಚ್ಚುಕಟ್ಟು.

ಕನ್ನಡದ ಹುಡುಗಿ ಅದ್ವೈತ (ಕೃತಿ ಶೆಟ್ಟಿ) ಗ್ರಾಮ ದೇವತೆ ಪೂಜಾರಿ ಮಗಳಾಗಿ, ಪ್ರೇಮಿಯಾಗಿ ಬಹು ಸೊಗಸಾಗಿ ಅಭಿನಯಿಸಿದ್ದಾರೆ. 2011ರ ಮೇ ತಿಂಗಳಿನಲ್ಲಿ ತೆರೆಕಂಡ ಈ ಚಿತ್ರ ಸಾಕಷ್ಟು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಚಿತ್ರದ ಕುರಿತ ಸಂವಾದ 2012ರ ಜುಲೈ 29ರಂದು ರಾಜಾಜಿನಗರದಲ್ಲಿ ನಡೆಯಿತು. ವೀಕ್ಷಕರಿಂದ ಪ್ರಶಂಸೆಗೂ ಪಾತ್ರವಾಯಿತು.

‍ಲೇಖಕರು G

August 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

೧ ಪ್ರತಿಕ್ರಿಯೆ

  1. D.RAVI VARMA

    sir thank you for sharring, iigiga nanage cinema andre alarji aagide, ekendre haage noduvantaa, nodidare kaaduvantaa cinemagalu baruttiruvudu tumbaa kadime, kelavu cinemagala bagge gottaguvude illa, ii nittinalli nimagu avadigu naanu abhinandisuttene

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: