
ಜ್ಯೋತಿ ಹಿಟ್ನಾಳ್ ‘ಅವಧಿ’ ಕಚೇರಿಗೆ ತಮ್ಮ ಪ್ರೀತಿಯ ಕೃತಿ ‘ಮುಟ್ಟು- ಏನಿದರ ಒಳಗುಟ್ಟು..?’ ಹಿಡಿದು ಬಂದರು. ಅವರ ಕಣ್ಣುಗಳಲ್ಲಿ ಒಂದು ವಿಶ್ವಾಸವಿತ್ತು. ಏನದು ಎಂದು ಕೇಳಿದೆ. ‘ಮುಟ್ಟಿನ ಬಗ್ಗೆ ಎಷ್ಟೊಂದು ಜನ ಮಾತನಾಡುವಂತೆ ಮಾಡಿದ್ದು, ಅದನ್ನು ಒಂದು ಸ್ಟಿಗ್ಮಾ ಅಲ್ಲ ಎನ್ನುವಂತೆ ಮಾಡಿದ್ದು ನನ್ನೊಳಗೆ ಆತ್ಮವಿಶ್ವಾಸ ಚಿಗುರಿಸಿದೆ’ ಎಂದರು.
ಮುಟ್ಟಿನ ಬಗ್ಗೆ ಒಂದು ಕೃತಿ ತರಬೇಕು ಎಂದು ಅವರು ಯೋಚನೆ ಮಾಡಿದ ಆರಂಭದಿಂದಲೂ ಅವರು ನನ್ನೊಡನೆ ಆ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಅದು ಹೇಗೆಲ್ಲ ಬೆಳೆದು ಬಂದಿತು ಎನ್ನುವುದು ನನಗೆ ಗೊತ್ತು. ಅದರ ಜೊತೆಗಿನ ದುಃಖ ದುಮ್ಮಾನಗಳೂ ಕೂಡಾ..
ಮೊದಲು ಮುಟ್ಟು ಎನ್ನುವ ಪದದೊಂದಿಗೆ ಶುರುವಾದ ಈ ಯೋಚನೆಯು ಮುತ್ತು ಗಂಡಸರನ್ನು ಹೇಗೆ ತಟ್ಟಿರಬಹುದು ಎಂಬ ಆಲೋಚನೆಯ ಕಡೆಗೆ ನನ್ನನ್ನು ಕರೆದುಕೊಂಡು ಹೋಯಿತು ಎನ್ನುವ ಜ್ಯೋತಿ ತಮ್ಮ ಮುಟ್ಟಿನ ಅನುಭವಗಳನ್ನು ಕೃತಿಯಲ್ಲಿ ವಿವರಿಸುತ್ತಾ ಹೋಗಿದ್ದಾರೆ.

ಚಿಕ್ಕಂದಿನಲ್ಲೇ ಅಮ್ಮನನ್ನು ಕಳೆದುಕೊಂಡ ಜ್ಯೋತಿ ತಾವು ಅದನ್ನು ನಿಭಾಯಿಸಿದ್ದು, ಅಕ್ಕಪಕ್ಕದ ಮನೆಯವರು ಅದನ್ನು ಹೇಳಿಕೊಡುತ್ತಿದ್ದದ್ದು, ಈ ಬಗ್ಗೆ ಕೇಳಿದಾಗ ಬೈಗುಳವೂ ಸಿಕ್ಕಿದ್ದು ಹೀಗೆ ಎಲ್ಲವನ್ನೂ ಹೇಳಿಕೊಂಡಿದ್ದಾರೆ.
ಮುಟ್ಟು ಎನ್ನುವುದು ಒಂದು ಆಂದೋಲನವಾಗುವ ನಿಟ್ಟಿನಲ್ಲಿ, ಅದು ಎಲ್ಲರೂ ಸಹಜವಾಗಿ ಮಾತನಾಡುವಂತಾಗುವ ನಿಟ್ಟಿನಲ್ಲಿ, ಎಷ್ಟೋ ಪುರುಷರು ಮುಟ್ಟಿನ ದಿನಗಳಲ್ಲಿ ತಮ್ಮ ಮನೆಯ ಹೆಣ್ಣುಮಕ್ಕಳ ಬೆನ್ನೆಲುಬಾಗಿ ನಿಲ್ಲುವಲ್ಲಿ ಜ್ಯೋತಿ ಪಾತ್ರ ದೊಡ್ಡದಿದೆ.
ಈ ಕೃತಿಯಲ್ಲಿ ೫೭ ಮಂದಿ ತಮ್ಮ ಅನಿಸಿಕೆಗಳನ್ನು ಮಂಡಿಸಿದ್ದಾರೆ. ‘ಅತಿರೇಕದ ಭಾವನೆಗಳನ್ನು ಹತ್ತಿಕ್ಕಲು ಸಾಧ್ಯವಾಗದೆ ಒಮ್ಮೊಮ್ಮೆ ಅಪರಾಧೀ ಪ್ರಜ್ಞೆಯಲ್ಲಿ ನರಳುತ್ತಾ ಮುಟ್ಟಿನ ಋಣ ತೀರಿಸಬೇಕಿದೆ’ ಎನ್ನುತ್ತಾರೆ ಪ್ರೀತಿ ನಾಗರಾಜ್.
ಮುಟ್ಟಿನ ಈ ಕೃತಿ ಪ್ರತಿಯೊಬ್ಬರೂ ಕೊಳ್ಳಬೇಕಾದ, ಓದಬೇಕಾದ ಹಾಗೂ ಮುಟ್ಟಿನ ಕುರಿತು ತಮ್ಮ ನೋಟ ಬದಲಿಸಿಕೊಳ್ಳಬೇಕಾದ ಕೃತಿ.
‘ಅವಧಿ’ಯೂ ಸಹಾ ಮುಟ್ಟಾಯಿತು ಎಂದು ಹೇಳಲು ನಮಗೆ ಹೆಮ್ಮೆ..
-ಜಿ ಎನ್ ಮೋಹನ್

0 ಪ್ರತಿಕ್ರಿಯೆಗಳು