ಅವನಾಟವಿನ್ನಿಲ್ಲ ಎಂದು ಬರೆಯಲು ಮೂಡುತ್ತಲೇ ಇಲ್ಲ ಇಂಕು..

ಪ್ರೀತಿಯ ದಾದಾ

-ಅಪಾರ

ಬೇಗನೆ ಕತ್ತಲಾದ ಚಳಿಗಾಲದ ಸಂಜೆ ಒಲ್ಲದ ಮನಸಿಂದ ಆಟ ಮುಗಿಸಿದ್ದಾನೆ ಗಂಗೂಲಿ. ಹಠಾತ್ತನೆ ಹಿಡಿದ ಬಿರುಮಳೆಗೆ ಕರಗುತಿದೆ ಬಣ್ಣಬಣ್ಣದ ರಂಗೋಲಿ. ಅವನಾಟವಿನ್ನಿಲ್ಲ ಎಂದು ಬರೆಯಲು ಮೂಡುತ್ತಲೇ ಇಲ್ಲ ಇಂಕು. ಬಂಗಾಳದಲ್ಲಿ ದುರ್ಗಾಷ್ಟಮಿ ಸಂಭ್ರಮಕ್ಕೂ ಒಂದು ಬಗೆಯ ಮಂಕು. ಇನ್ನುಮುಂದೆ ಹಳೆಯ ವಿಡಿಯೋಗಳಲ್ಲಷ್ಟೆ ಕಾಣಬಹುದು ಕ್ರೀಸಿನಿಂದ ಮುನ್ನುಗ್ಗಿ ಬರುತ್ತಿರುವ ಬಂಗಾಳದ ಹುಲಿ; ಆಫ್‌ಸೈಡಿನಲ್ಲಿ ಎಂಟು ಜನ ಫೀಲ್ಡರುಗಳ ಕಣ್ತಪ್ಪಿಸಿ ಬೌಂಡರಿಯೆಡೆ ಸಾಗುವ ಬಾಲ್‌ಮಿಂಚು.
ಹನ್ನೆರಡು ವರ್ಷ ಆಡಿದ್ದಾನೆ, ವಯಸ್ಸಾಯ್ತು, ಮೊದಲಿನ ಸಾಮರ್ಥ್ಯ ಈಗ ಉಳಿದಿಲ್ಲ, ಅಷ್ಟಲ್ಲದೆ ಎಲ್ಲ ಒಳ್ಳೆಯ ಸಂಗತಿಗಳೂ ಕೊನೆಯಾಗಲೇಬೇಕು ಎಂಬೆಲ್ಲಾ ಅರಿವು ಇದ್ದರೂ ಬೇಸರವೇಕೊ ಕಳೆಯುತ್ತಿಲ್ಲ. ಬಹುಶ: ಅದಕ್ಕೆ ಕಾರಣ ಸೌರವ್ ಗಂಗೂಲಿ ಬರಿಯ ಅಮೋಘ ಆಟಗಾರನಾಗಿರಲಿಲ್ಲ. ಆಟದಷ್ಟೇ ಅವನ ಅಟಾಟೋಪಗಳೂ ನಮಗೆ ಇಷ್ಟವಾಗಿದ್ದವು; ಅಂಕಿ-ಅಂಶಕ್ಕಿಂತ ಅವನ ಬೆಂಕಿ-ಅಂಶವೇ ನಮಗೆ ಮುಖ್ಯ ಎನಿಸಿತ್ತು. ಅವನು ಎತ್ತಿದ ಸಿಕ್ಸರುಗಳು ನೇರ ನೋಡುತ್ತಿರುವವರ ಮನದಂಗಳಕ್ಕೇ ಬಂದು ಬೀಳುತ್ತಿದ್ದವು. ಲಾರ್ಡ್ಸ್ ಬಾಲ್ಕನಿಯಲ್ಲಿ ಅವನು ತಿರುಗಿಸಿದ ಟಿ ಷರ್ಟು ಈಗಲೂ ನಮ್ಮ ಕಣ್ಣಲ್ಲಿ ತ್ರಿವರ್ಣದಂತೆ ಫಡಫಡಿಸುತ್ತದೆ. ಮಾಕಿನ ಆಸ್ಟ್ರೇಲಿಯಾದವರನ್ನು ಅವನು ನಡುಬಿಸಿಲಲ್ಲಿ ಕಾಯಿಸಿದರೆ ನಮ್ಮ ಎದೆ ತಂಪಾಗುತ್ತದೆ. ಏಕೆಂದರೆ ನಮ್ಮ ಪಾಲಿಗೆ ಕ್ರಿಕೆಟ್ ಕೂಡ ಎಂದೂ ಬರಿಯ ಕ್ರೀಡೆ ಅಲ್ಲ. ಹಾಗಾಗೇ ನಮಗೆ ಬರ್ನಾಡ್ ಷಾ ದೊಡ್ಡ ಮೂರ್ಖ ಅನಿಸುವುದು!
ಏಕದಿನ ಪಂದ್ಯಗಳಲ್ಲಿ ೧೧,೦೦೦, ಟೆಸ್ಟ್‌ಗಳಲ್ಲಿ ೭೦೦೦ ರನ್ ಗಳಿಸಿರುವ ಗಂಗೂಲಿಯ ಆಟದ ಬಗ್ಗೆ ಈಗ ಮತ್ತೆ ಹೇಳುವಂಥದ್ದೇನೂ ಇಲ್ಲ. ಆದರೆ ಇದನ್ನೆಲ್ಲಾ ಮಾಡುವಾಗ ಆತನ ಮನದೊಳಗೆ ನಡೆದಿರಬಹುದಾದ ಆಟಗಳ ಬಗ್ಗೆ ಮಾತ್ರ ಕುತೂಹಲವೆನಿಸುತ್ತದೆ. ‘ನಾನಿರೋದು ಬ್ಯಾಟ್ ಮಾಡೋಕೆ, ಉಳಿದೋರಿಗೆ ನೀರು ತಗೊಂಡ್ ಹೋಗೋಕಲ್ಲ’ ಎಂದನಂತೆ ಮೊದಲ ಸರಣಿಯಲ್ಲಿ. ಎರಡು ತಿಂಗಳು ತಂಡದಲ್ಲಿದ್ದರೂ ಒಂದೂ ಪಂದ್ಯದಲ್ಲಿ ಆಡಿಸದಿದ್ದರಿಂದ ಉಂಟಾದ ಹತಾಶೆಯಲ್ಲಿ ಕೋಲ್ಕತಾದ ಅತ್ಯಂತ ಶ್ರೀಮಂತ ಕುಟುಂಬದಿಂದ ಬಂದ ಹತ್ತೊಂಬತ್ತರ ವಯಸ್ಸಿನ ಹುಡುಗ ಆಡಿದನೆನ್ನಲಾದ ಈ ಬುದ್ದಿ ಇಲ್ಲದ ಮಾತುಗಳನ್ನು ನಿರ್ಲಕ್ಷಿಸುವ ಔದಾರ್ಯ ಅಲ್ಲ್ಯಾರಿಗೂ ಇರಲಿಲ್ಲ. ಬದಲಿಗೆ ಅವನ ಮಹತ್ವದ ಐದು ವರ್ಷಗಳನ್ನು ನಿಷ್ಕರುಣೆಯಿಂದ ಕಸಿದುಕೊಳ್ಳಲಾಯಿತು.

ಮರಳಿ ಭಾರತ ತಂಡದಲ್ಲಿ ಸ್ಥಾನ ಪಡೆದಾಗಲೂ ಪ್ರಾದೇಶಿಕ ಕೋಟಾದಲ್ಲಿ ಆಯ್ಕೆಯಾದವನು ಎಂಬ ಕೊಂಕುಗಳಿದ್ದವು. ಇಂಗ್ಲೆಂಡ್ ಸರಣಿಯಲ್ಲಿ ಸತತ ಎರಡು ಶತಕ ಬಾರಿಸಿದ ಗಂಗೂಲಿ ಹಿಂತಿರುಗಿ ನೋಡಲಿಲ್ಲ. ಆಫ್‌ಸೈಡ್‌ನಲ್ಲಿ ಚೆಂಡನ್ನು ಬೇಕೆಂದಲ್ಲಿ ತೂರಿಸಬಲ್ಲ ಅವನ ಸಾಮರ್ಥ್ಯ ದೈವದತ್ತವಾಗಿತ್ತು. ಅದನ್ನು ಕಂಡೇ ರಾಹುಲ್ ದ್ರಾವಿಡ್ ‘ಆಫ್‌ಸೈಡಿನಲ್ಲಿ ಮೊದಲು ದೇವರಿದ್ದಾನೆ. ಬಿಟ್ಟರೆ ಗಂಗೂಲಿಯೇ’ ಎಂದಿದ್ದು. ಆದರೆ ಆ ಹೊತ್ತಿಗೆ ತೆಂಡೂಲ್ಕರ್ ಕ್ರಿಕೆಟ್‌ನ ದೇವರಾಗಿ ರೂಪುಗೊಂಡಿದ್ದ. ಆವರೆಗೆ ಬಂದ ಕ್ರಿಕೆಟ್ ಆಟಗಾರರಲ್ಲೇ ಸಚಿನ್ ಗ್ರೇಟಾ ಎಂಬ ಚರ್ಚೆಗಳು ನಡೆದಿದ್ದವು. ಅಂಥವನೊಬ್ಬ ಮಹಾನ್ ಆಟಗಾರನಿರುವ ತಂಡದಲ್ಲಿ ಆಡುವುದು ಸ್ವಾಭಿಮಾನಿಯಾದ ಯಾವುದೇ ಪ್ರತಿಭಾವಂತ ಬ್ಯಾಟ್ಸ್‌ಮನ್‌ಗಾದರೂ ಹೊಸಬಗೆಯ ಸವಾಲಾಗಿರಲೇಬೇಕು. ಬ್ಯಾಟ್ ಹಿಡಿದು ನಿಂತಾಗ ಓಡಿಬರುತ್ತಿರುವ ಎದುರಾಳಿ ಬೌಲರ್‌ನ ಜತೆಗೇ ಆ ತುದಿಯಲ್ಲಿ ನಿಂತ ಸಚಿನ್ ಕೂಡ ಗಂಗೂಲಿಯ ಒಳಗಣ್ಣಿಗೆ ಕಾಣುತ್ತಲೇ ಇದ್ದಿರಬೇಕು. ಪ್ರತಿ ಪಂದ್ಯದಲ್ಲೂ ಶತಕಕ್ಕೆ ಶತಕದಿಂದ ಉತ್ತರಿಸಿದ ಮೇಲೂ ಜನ ಹೊಸ ವಿಮರ್ಶೆಗೆ ಸಿದ್ಧರಿಲ್ಲದಾಗ ಅವನಿಗೆ ನಿರಾಸೆಯಾಗಿರಬಹುದು. ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂಥ ಮನಸ್ಥಿತಿ ಗಂಗೂಲಿಗೆ ಎಂದೂ ಇರಲಿಲ್ಲವೆಂಬುದು ನಿಮಗೆ ಗೊತ್ತು.
ಸಚಿನ್‌ನ ವಿನಯವೂ ಗಂಗೂಲಿಯ ಬಳಿ ಇರದಿದ್ದ ಅಸ್ತ್ರ. ಹಾಗಾಗಿ ಗಂಗೂಲಿಯನ್ನು ಹೊಗಳುವಾಗ ಇತರರು ಅಷ್ಟೊಂದು ಧಾರಾಳಿಯಾಗಿರಲಿಲ್ಲ. ಅವನ ವಿಶೇಷ ಕವರ್ ಡ್ರೈವ್‌ಗಳ ಬಗ್ಗೆ ಮಾತನಾಡಬಹುದಾಗಿದ್ದ ಜಾಗದಲ್ಲಿ ಅವನಿಗೆ ಪುಲ್ ಮತ್ತು ಹುಕ್ ಮಾಡಲು ಬರೊಲ್ಲ ಎಂಬುದನ್ನೇ ಹೇಳಿದರು. ಸಚಿನ್ ಜತೆಯ ಸ್ಪರ್ಧೆಯನ್ನು ಗಂಗೂಲಿ ನಂತರ ನಾಯಕತ್ವ ನಿಭಾಯಿಸುವಲ್ಲಿ ಗೆದ್ದನೆಂಬುದು ಬೇರೆ ಸಂಗತಿ. ಆದರೆ ಅದು ಒಂದು ಪುಟ್ಟ ಸಮಾಧಾನವಷ್ಟೇ.
೨೦೦೦ದ ಇಸವಿಯವರೆಗೆ ಅತ್ಯಂತ ಒಳ್ಳೆಯ ಫಾರಂನಲ್ಲಿದ್ದ ಗಂಗೂಲಿ ನಂತರ ಸ್ಪಲ್ಪ ಮಂಕಾಗತೊಡಗಿದ. ಆಗಲೇ ಓವರಿಗೆ ಒಂದು ಬೌನ್ಸರಿನ ನಿಯಮ ಬಂತು. ಶಾರ್ಟ್‌ಪಿಚ್ ಬಾಲುಗಳನ್ನು ನಿಭಾಯಿಸುವುದನ್ನು ಕಲಿಯಲು ಸ್ಪಲ್ಪ ತಡ ಮಾಡಿದ. ಆದರೂ ಅವನ ಟೆಸ್ಟ್ ಬ್ಯಾಟಿಂಗ್ ಸರಾಸರಿ ಎಂದೂ ೪೦ಕ್ಕಿಂತ ಕೆಳಗಿಳಿಯಲಿಲ್ಲ. ಬೇರಾರಿಗಿಂತಲೂ ಹೆಚ್ಚು ಟೆಸ್ಟ್‌ಗಳನ್ನು ಗೆದ್ದುಕೊಟ್ಟ. ವಿದೇಶದಲ್ಲೂ ಗೆಲುವಿನ ರುಚಿ ಹತ್ತಿಸಿದ. ಜಹೀರ್ ಖಾನ್, ಹರ್ಭಜನ್, ಯುವರಾಜ್, ಸೆಹವಾಗ್‌ರಂಥ ಅನೇಕ ಕಿರಿ ಆಟಗಾರರನ್ನು ಬೆಳೆಸಿದ. ತನ್ನ ಉದ್ಧಟತನವನ್ನು ಇಡೀ ತಂಡಕ್ಕೆ ಹರಡಿದ. ಆಯ್ಕೆ ಸಮಿತಿ ಸಭೆಗಳಲ್ಲಿ ರಾತ್ರಿ ಎರಡರವರೆಗೂ ಹಠ ಮಾಡಿ ತನಗೆ ಭರವಸೆ ಇದ್ದ ಆಟಗಾರರನ್ನು ಉಳಿಸಿಕೊಂಡ. ಒಂಡೆ ಮ್ಯಾಚಿಗೆ ಹೊಂದಲ್ಲ ಎನಿಸಿದ್ದ ದ್ರಾವಿಡ್ ಕೈಗೆ ಕೀಪರ್ ಗ್ಲೌಜು ತೊಡಿಸಿ ತಂಡದಲ್ಲಿಟ್ಟುಕೊಂಡ. ಜಾವಗಲ್ ಶ್ರೀನಾಥ್ ನಿವೃತ್ತಿ ಘೋಷಿಸಿದ ಸುದ್ದಿ ಕೇಳಿದೊಡನೆ ‘ಇಲ್ಲ, ನಾನು ಅವನ ಮನಬದಲಿಸುತ್ತೇನೆ’ ಎಂದು ಅಣ್ಣನಂತೆ ಪ್ರತಿಕ್ರಿಯಿಸಿದ. ತಾನೇ ಬೆಂಬಲಿಸಿ ತಂದ ಕೋಚ್ ಚಾಪೆಲ್‌ನ ಅಹಂಕಾರಗಳ ಎದುರು ಕಂಗಾಲಾದ. ತಂಡದಿಂದ ಹೊರಗುಳಿದು ಪೆಪ್ಸಿ ಜಾಹಿರಾತಿನಲ್ಲಿ ಕೊಟ್ಟ ಮಾತಿನಂತೆ ಮರಳಿ ಬಂದು ಒಂದೇ ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ರನ್ ಗಳಿಸಿ ಅಚ್ಚರಿಗೊಳಿಸಿದ.
ಈಗ ಹೊರಟು ನಿಂತಿದ್ದಾನೆ. ಅದನ್ನೂ ಅವನು ಪ್ರಕಟಿಸಿದ್ದು ಹೇಗೆ? ತಂಡದ ಸುದ್ದಿಗೋಷ್ಟಿಯ ಕಡೆಯಲ್ಲಿ ‘ಇನ್ನೊಂದು ವಿಷಯ, ಇದು ನನ್ನ ಕಡೆಯ ಸರಣಿ’ ಎಂದ ಅವನ ಮುಖದಲ್ಲಿ ಅಡಗಿಸಲಾಗದ ದುಗುಡವಿತ್ತು. ನಿವೃತ್ತಿ ಎಂದರೆ ಅವನಿಗೇನು ಅರವತ್ತಾಗಿಲ್ಲ. ಮೂವತ್ತಾರು ಎಂಬುದು ಮನುಷ್ಯ ತಾನು ಆರಿಸಿಕೊಂಡ ರಂಗದಲ್ಲಿ ಒಂದು ನೆಲೆ ಕಂಡುಕೊಳ್ಳುವ ವಯಸ್ಸು. ಆದರೆ ಆಟಗಾರರು ಆ ವಯಸ್ಸಿನಲ್ಲಿ ಬೇರೆಯದೇ ಇನ್ನಿಂಗ್ಸ್ ಆರಂಭಿಸಬೇಕಾಗುತ್ತದೆ. ಜನಪ್ರಿಯತೆಯಿಂದ, ಜಾಹಿರಾತಿನ ಬೆಳಕಿನಿಂದ ದೂರದಲ್ಲಿ ಬದುಕಿನ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳಬೇಕಾಗುತ್ತದೆ. ಗಂಗೂಲಿ ಏನು ಮಾಡಬಹುದು? ಕ್ರಿಕೆಟ್ ಆಕಾಡೆಮಿ, ಅಂಕಣಕಾರ, ಕಾಮೇಂಟೇಟರ್, ಆಯ್ಕೆದಾರ ಅಥವಾ ಬ್ಯುಸಿನೆಸ್?
ಆದೇನೆ ಇದ್ದರೂ, ೧೨ ವರ್ಷಗಳಿಂದ ರಂಜಿಸಿದ ಪ್ರೀತಿಯ ಆಟಗಾರ ಮನೆಗೆ ಹೋಗುತ್ತೇನೆ ಎಂದಾಗ ಹೃದಯ ಭಾರವಾಗುತ್ತದೆ. ಕಂಕುಳಲ್ಲಿ ಬ್ಯಾಟು, ಪ್ಯಾಡು, ಗ್ಲೌಜುಗಳನ್ನು ಇರಿಸಿಕೊಂಡು ಸೂರ್ಯಾಸ್ತದ ಕಡೆಗೆ ಸಾಗುತ್ತಿರುವ ಹಠಮಾರಿ ಬೆಂಗಾಲಿಯ ಚಿತ್ರ ಗಂಟಲ ಸೆರೆ ಉಬ್ಬುವಂತೆ ಮಾಡುತ್ತದೆ. ಗಂಗೂಲಿ ಎಂಬ ಗೆಳೆಯ ಆಲೋಚಿಸಿದಷ್ಟೂ ಆಪ್ತನೆನಿಸುತ್ತಾನೆ.
(ಸಾಪ್ತಾಹಿಕ ವಿಜಯದಲ್ಲಿ ಈ ಭಾನುವಾರ ಪ್ರಕಟಗೊಂಡ ಬರಹ)

‍ಲೇಖಕರು avadhi

October 25, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This