ಅವನು, ಅವಳು ಮತ್ತು ನಿರೂಪಕ

ಹುಡುಗ, ಹುಡುಗಿ – ನಿರೂಪಕ

– ಹೇಮ

ಹೇಮಾಂತರಂಗ ಹುಡುಗಿ: ಎಲ್ಲವೂ ನಾಟಕ! ನನಗೆ ನಿಜವಾಗಿ ನಿನ್ನ ಹತ್ತಿರ ತೋಡಿಕೊಳ್ಳುತ್ತಿದ್ದಷ್ಟು ತೀವ್ರವಾಗಿ ನೋವಾಗುತ್ತಿರಲಿಲ್ಲ, ನಿನ್ನ ಕನಿಕರ, ಕರುಣೆಯಿಂದ ತುಂಬಿದ ಪ್ರೀತಿಯಲ್ಲಿ ನನ್ನನ್ನು ನೀನು ಸಮಾಧಾನಿಸುತ್ತಿದ್ದ ರೀತಿ ನನಗೆ ಇನ್ನಷ್ಟು ಮತ್ತಷ್ಟು ಬೇಕೆನಿಸುತ್ತಿತ್ತು. ಅದಕ್ಕೆ ನನ್ನೆಲ್ಲಾ ಕಷ್ಟಗಳನ್ನು ನಿನ್ನ ಕಣ್ಣು ತುಂಬಿ ಬರುವಂತೆ ವರ್ಣಿಸುತ್ತಿದ್ದೆ. ಮತ್ತೆ ಮತ್ತೆ ನಿನ್ನ ಕನಿಕರದ ಎಂಜಲಿಗೆ ಆಸೆ ಪಡುತ್ತಿದ್ದೆ. ಇಷ್ಟು ಅಂದು ಸುಮ್ಮನಾದವಳು ಆಚೀಚೆ ಒಮ್ಮೆ ಕಣ್ಣಾಡಿಸಿ ಪರ್ಸಿನಿಂದ ಸಿಗರೇಟೊಂದನ್ನು ತೆಗೆದು ಹೊತ್ತಿಸಿ, ಬೆನ್ನನ್ನು ಕುರ್ಚಿಗಾನಿಸಿ ಮೈ ಸಡಿಲಿಸಿ ಆರಾಮಾಗಿ ಎಂಬಂತೆ ಕೂತಳು. ತಾನು ಸಿಗರೇಟು ಹಚ್ಚಿದ್ದು ಅವನಿಗೆ ಶಾಕ್ ಆಗಿದೆ ತೋರಿಸಿಕೊಳ್ಳುತ್ತಿಲ್ಲ ಇವನು ಎಂದುಕೊಂಡವಳ ಮುಖದಲ್ಲಿ ಅಣಕದ ಕಿರು ನಗೆಯು ಮೂಡಿತು. ಮುದ್ದು ಮುದ್ದು ಮಗುವಿನಂತೆ ಮಾತಾಡುತ್ತಾ ನನ್ನನ್ನು ಮರುಳು ಮಾಡುತ್ತಿದ್ದವಳು. ದುಃಖ ಹೆಚ್ಚಾಗಿ ಮಾತಡಲು ಆಗದಂತೆ ಗಂಟಲು ಕಟ್ಟಿ ಬಿಕ್ಕಿ ತನ್ನೆದೆಗೆ ಒರಗುತ್ತಿದ್ದವಳು, ಪುಟ್ಟ ಬೊಟ್ಟಿನ, ಮುತ್ತಿನ ಮೂಗುತಿಯ ಪಾಪು ಪಾಪು ಮುಖದ ಹುಡುಗಿಯೇ ಹೀಗೆ ಜಗತ್ತಿನ ಕ್ರೌರ್ಯವೆಲ್ಲ ತುಂಬಿಕೊಂಡ ಕಣ್ಣುಗಳಿಂದ, ಒಂದೊಂದೇ ಸತ್ಯವನ್ನು ಬಿಚ್ಚಿಟ್ಟು ತನ್ನ ಮುಂದೆ ಬೆತ್ತಲಾಗುತ್ತಿರುವುದು? ಎಂದುಕೊಳ್ಳುತ್ತಿರುತ್ತಾನೆ ತನಗೆ ಗೊತ್ತು. ಹೀಗೆಲ್ಲ ಯಾಕೆ ಮಾಡಿದೆ ಎಂದು ಕಪಾಳಕ್ಕೆ ಹೊಡೆದು ಕೇಳಬೇಕೆನಿಸುತ್ತದಲ್ಲ? ಜಗತ್ತಿನಲ್ಲಿರುವ ಎಲ್ಲ ಕೆಟ್ಟ ಬೈಗುಳಗಳನ್ನು ಬಳಸಿ ­­­­­­­­­ನನ್ನನ್ನು ಬೈಯ್ಯಬೇಕೆನಿಸುತ್ತದೆ ನಿನಗೆ, ಆದರೆ ನೀನು ಹಾಗೆ ಮಾಡೋಲ್ಲ. ನನಗೆ ಗೊತ್ತು ನಿನಗೆ ಉದಾತ್ತನಾಗುವ ಬಯಕೆ. ನನ್ನೆದುರು ನೀನು ಕೆಳಗಿಳಿಯಲಾರೆ. ಉದಾತ್ತತೆಯ ಪೀಠವೇರಿ ಕೂತಿರ್ತೀಯ. ನೀನು ಏನೆಂದರು, ಏನು ಮಾಡಿದರು ನನಗೇನಾಗದು ನಾನಿನ್ನೂ ನಿನ್ನ ಬಯಸ್ತೀನಿ ಎಂಬ ಮತ್ತದೇ ಕೊಳೆತ ಕನಿಕರ. ಅಲ್ಲವೇ? ಸಿಗರೇಟನ್ನ ದೀರ್ಘವಾಗೊಮ್ಮೆ ಸೇದಿ ಎರೆಡು ಕ್ಷಣ ತಡೆದು ಉಸಿರು ಬಿಟ್ಟಳು. ಇದ್ದಕ್ಕಿದ್ದಂತೆ ಏಕೆ ಹೋದೆ ಆರು ತಿಂಗಳು ಏನು ಮಾಡಿದೆ ಯಾರ ಕೈಗೂ ಸಿಗದೆ ಭೂಗತವಾಗಿದ್ದೇಕೆ? ನಿನಗೋಸ್ಕರ ಎಷ್ಟು ಹುಡುಕಿದೆ ಗೊತ್ತಾ? ನನ್ನ ಪ್ರೀತಿ ಅಷ್ಟು ಹಿಂಸಿಸುತ್ತಿತ್ತ ನಿನ್ನ? ಎಂದೆಲ್ಲ ಕೇಳುತ್ತಾನಾ, ಕೇಳುಬಹುದು ಎನಿಸಿತು. ಆ ದೊಡ್ಡ ಕಾಫಿ ಕಪ್ಪನ್ನೆತ್ತಿ ಮತ್ತೊಂದು ಗುಟುಕು ಹೀರಿದಳು. ಏನನ್ನೂ ಹೇಳದ ಅವನ ನಿರ್ಭಾವುಕ ಮುಖ ಇವಳನ್ನು ಉರಿಸುತ್ತಿತ್ತು. ಕೆಲವರಿಗೆ ಖುಷಿಯಾಗಿರುವುದು ಸಂಕಟವಾಗುತ್ತೆ. ನಿನಗೆ ಕೇಳಿದರೆ ವಿಚಿತ್ರವೆನಿಸಬಹುದು. ಆದರೆ ಅದು ಹಾಗೆ. ಎಲ್ಲ ಸರಿ ಇದ್ದರೆ ಅವರು ಸಹಿಸಲಾರರು ಜೀವನದ ತುಂಬ ಗೋಳಿರಬೇಕು ಅದನ್ನು ವಿಧ ವಿಧವಾಗಿ ವರ್ಣಿಸಿ ಗೋಳಾಡಿ ಅಳಬೇಕು, ಇನ್ನೊಬ್ಬರು ಅದನ್ನು ಕೇಳಿ ಕನಿಕರಿಸಬೇಕು. ಅದೇ ಅವರಿಗೆ ಸಂತೋಷ. ಕನಿಕರದ ಕಸವೇ ಬೇಕೆನಿಸುವ ಜಾಯಮಾನ. ನಾನು ಹಾಗೆ ಇದ್ದೇ. ಯಾವತ್ತೂ ಬೇಸರವೆನಿಸದ ಅಪ್ಪನ ಕುಡಿತ, ಅಮ್ಮನ ಬೈಗುಳ, ಅಕ್ಕನ ಸ್ವಾರ್ಥ ನಿನ್ನ ಮುಂದೆ ವರ್ಣಿಸುವಾಗ ರೆಕ್ಕೆ ಪುಕ್ಕ ಪಡೆದ ಹಕ್ಕಿಯಾಗುತ್ತಿತ್ತು. ನೀ ಕೇಳುತ್ತೀ ಕನಿಕರದಿಂದ ಕೇಳುತ್ತೀ ಎಂಬ ಒಂದೇ ಕಾರಣಕ್ಕೆ ಜಗತ್ತಿನ ಅತಿ ಪಾಪದ ವ್ಯಕ್ತಿ ನಾನು ಎಂದು ಕಥೆ ಕಟ್ಟಿ ಹೇಳುತ್ತಿದ್ದೆ. ಈಗಿಷ್ಟು ದಿನ ಆದಮೇಲೆ ನಿನ್ನ ಮುಂದೆ ಬಂದು ಎಲ್ಲವನ್ನು ಹೀಗೆ ಹೇಳಿಕೊಳ್ಳುತ್ತಿದ್ದೇನಲ್ಲ, ಹೀಗಾಗಲೆಂದೇ ನಿನ್ನನ್ನು ಒದ್ದುಕೊಂಡು ಹೋಗಿದ್ದು. ನೀನಿರುವಷ್ಟು ದಿನ ಗೋಳಿಡುತ್ತಲೇ ಇರುತ್ತಿದ್ದೆ. ಕೊನೇ ಇಲ್ಲದ ಕತೆ ನನ್ನದು, ಪದೇ ಪದೇ ಕೇಳುತ್ತಿದ್ದ ನಿನಗೆ ಬೇಜಾರಾಗಲು ಶುರುವಾಗಿರೋದು, ನೀ ಒದ್ದು ಹೊರಡುತ್ತಿದ್ದೆ. ಹಾಗಾಗುವುದಕ್ಕೂ ಮೊದಲೇ ನಾನೇ ಹೊರಟೆ. ನನಗೆ ಗೊತ್ತು ಈಗಿನ ನನ್ನನ್ನು ನೀನು ಜೀರ್ಣಿಸಿಕೊಳ್ಳಲಾರೆ ಎಂದು ನನಗೆ ಅದರ ಭಯವಿಲ್ಲ. ನೀನು ಸಿಕ್ಕರೂ ಸಿಗದಿದ್ದರು ಅಂತಹ ವ್ಯತ್ಯಾಸವೇನು ಆಗದು. ಹೀಗೆ ನನ್ನೆಲ್ಲ ಕ್ರಿಯೆಗಳಿಗೆ ನೀನಷ್ಟೇ ಕಾರಣವಾಗಿ ಹೋದೆ ಎಂದು ಯೊಚಿಸುತ್ತಿದ್ದೆ. ನಿನ್ನಲ್ಲಿ ಕಳೆದುಕೊಂಡ ನನ್ನನ್ನು ಹುಡುಕಿಕೊಂಡು ಹೊರಟ ನನಗೆ ವಾಪಸ್ಸು ಬಂದು ನನ್ನ ಪ್ರವರ ಹೇಳಬೇಕೆನಿಸಿದ್ದು ನಿನಗೇನೆ! ತಮಾಷೆಯಲ್ಲವ? ನಾನಿನ್ನೂ ನಿನ್ನನ್ನು ಮೀರಿ ಬೆಳೆದೇ ಇಲ್ಲ, ಯೋಚಿಸಿಯೇ ಇಲ್ಲ. ನೀನಷ್ಟೇ ಇರುವಾಗಿ ನನ್ನಿಂದ ನಾನು ಕಳೆದು ಹೋಗಿದ್ದೇನೆ, ಹುಡುಕಿ ಹೊರಟು ಊರೆಲ್ಲ ಸುತ್ತಿ ಬಂದದ್ದು ನಿನ್ನ ಕಾಲ ಬುಡಕ್ಕೆ! ಕಾಫಿಯ ಕಪ್ಪನ್ನು ಎತ್ತಿಕೊಳ್ಳಲು ಹೋದ ಅವಳ ಕೈ ಸೂಕ್ಷ್ಮವಾಗಿ ಕಂಪಿಸಿ, ಪಿಂಗಾಣಿ ಕಪ್ಪು ಕಟಕಟಿಸಿತು. ಅವನು ಏನಾದರೂ ಮಾತನಾಡುತ್ತಾನೇನೋ ಎಂದು ಕಾದಳು, ಅವನು ನಿರ್ಲಿಪ್ತನಾಗಿ ಕೂತೆ ಇದ್ದ ರೀತಿಯಿಂದ ಅವಳಿಗೆ ಕಿರಿಕಿರಿಯಾಯಿತು. ಹುಡುಗ: ಹಾಗೆ ಮಾತಾಡುತ್ತಿದ್ದವಳ ಕಣ್ಣೊಳಗೆ ಇಳಿಯುತ್ತಿದ್ದೇನೇನೋ ಎಂದೆನ್ನುವಂತೆ ಅವಳ ಕಣ್ಣುಗಳನ್ನೇ ನೋಡುತ್ತಿದ್ದ. ಹುಡುಗರು ಒಬ್ಬೊರಿಗೊಬ್ಬರು ಇಷ್ಟು ಕಾಂಪ್ಲಿಕೇಟೆಡ್ ಅಲ್ಲವೇ ಅಲ್ಲ, ಹುಡುಗಿಯರದು ಸಿಕ್ಕಾಪಟ್ಟೆ ಸಿಕ್ಕಲು ವ್ಯಕ್ತಿತ್ವ, ಹೇಗೆಂದರೆ ಹೀಗೆ ಕಾಂಪ್ಲಿಕೇಟೆಡ್ ಅನ್ನುವ ಶಬ್ದದಿಂದಲೂ ಅವರನ್ನು ಅಳೆಯಲು ಹೋಗಬಾರದು. ಇಷ್ಟೇ ಎಂದು ಹೇಳಿಬಿಡಲು ಕರಾರುವಾಕ್ ಆಗಿ ಅವರನ್ನು ತೀರ್ಮಾನಿಸಲು ಅವಕಾಶವೇ ಕೊಡುವುದಿಲ್ಲ. ಇನ್ನೇನು ತಿಳಿದುಕೊಳ್ಳುತ್ತಿದ್ದೇನೆ ಎಂದುಕೊಳ್ಳುವಷ್ಟರಲ್ಲಿ ಪೂರ್ತಿ ಯು ಟರ್ನ್ ಮಾಡಿಟ್ಟು ಬಿಡುತ್ತಾರೆ. ಇವಳ ತರಹ. ಇವಳು ಆಗೆಲ್ಲ ಅವಳ ಮನೆಯ ಕಥೆಯನ್ನು ಅಷ್ಟು ಇಂಟೆನ್ಸ್ ಆಗಿ ಹೇಳಿಕೊಳ್ಳುತ್ತಿರಬೇಕಾದರೆ ಒಮ್ಮೊಮ್ಮೆ ಕನಿಕರ ಉಕ್ಕುತ್ತಿದ್ದರೂ ಈಕೆ ಸಣ್ಣದ್ದಕ್ಕೆಲ್ಲಾ ಯಾಕೆ ಹೀಗೆ ತಲೆ ಕೆಡಿಸಿಕೊಳ್ಳುತ್ತಾಳೆ ಎಂದು ಕಿರಿಕಿರಿಯಾಗುತ್ತಿದ್ದೆ. ಮಕ್ಕಳ ಹಾಗೆ ಹಠ ಮಾಡಿ ಗಮನ ತನ್ನೆಡೆಗೆ ಎಳೆದುಕೊಂಡು ಮುದ್ದು ಬರಿಸೋಳು. ಸಮಧಾನ ಮಾಡುವಂತೆ ನಾನೂ ಕೈಲಾದಷ್ಟು ಪ್ರಯತ್ನ ಪಡುತ್ತಿದ್ದೆ. ಅಳುತ್ತಿದ್ದಳು, ಇದು ನಿತ್ಯದ ಗೋಳು ಬಿಡು ಎಂದು ತನಗೆ ತಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದಳು. ಆಕೆಯ ಮನೆಯವರಂತೂ ನನ್ನ ಪಾಲಿಗೆ ಯಾವತ್ತಿಗೂ ವಿಲನ್ ಗಳೇ ಆಕೆ ಕೊಟ್ಟ ಪರಿಕಲ್ಪನೆ ಇಂದ ಹೊರಗಿಟ್ಟು ನನಗೆ ಯಾರನ್ನು ನೋಡಲಿಕ್ಕೆ ಆಗಲಿಲ್ಲ. ಇವತ್ತಿಗೂ ಅವಳ ಮನೆಯವರು ನನಗೆ ಅಪರಿಚಿತರೇ ಅದಕ್ಕಾಗಿಯೇ ಇವಳು ಹೇಳಿದಷ್ಟೇ ತೀವ್ರತೆಯಿಂದ ಎಲ್ಲವನ್ನು ಒಳಕ್ಕೆ ತೆಗೆದುಕೊಳ್ಳಲು ಆಗದೆ ಒದ್ದಾಡುತ್ತಿದ್ದೆ. ಅವಳು ಮತ್ತೆ ಬಂದಳೆಂಬ ಖುಷಿಯೊಂದಿಗೆ ಆಶ್ಚರ್ಯ ಕೋಪ ಎಲ್ಲವೂ ಒಟ್ಟೊಟ್ಟಾಗಿ ಆಗಿ ಮತ್ತೆಲ್ಲೂ ಅವಳು ಹೋಗಲು ಬಿಡಬಾರದೆಂದುಕೊಳ್ಳುತ್ತ ತನ್ನ ಸೆಲ್ಫ್ ಈಗೊ ವನ್ನು ಬಿಟ್ಟು ನೀನಿಲ್ಲದೇ ಬದುಕಲು ಕಷ್ಟ ಪಡುತ್ತಿದ್ದೇನೆ ಎಂದು ಹೇಳುತ್ತಾ ತಾನು ಅವಳ ಮುಂದೆ ಅತ್ತಂತೆ ಭಾಸವಾಯಿತು. ಸಂಜೆಯಾಗುವುದನ್ನೇ ಜಾತಕ ಪಕ್ಷಿಯಂತೆ ಕಾಯುತ್ತಾ ಇದ್ದವನಿಗೆ ಸಮಯ ನಿಧಾನಕ್ಕೆ ಸರಿದಂತೆ ಅನಿಸುತ್ತಿತ್ತು. ಕಾಫಿ ಬಾರಿನಲ್ಲಿ ಬಂದು ಕೂತವನು ಅವಳ ಮಾತುಗಳನ್ನು ಕೇಳುತ್ತಾ ತಾನಂದುಕೊಂಡದ್ದನ್ನು ಇವಳಿಗೆ ಹೇಳಲಾರೆ, ಸಡಿಲಾಗಲಾರೆ ಅನ್ನಿಸಿ ಚಡಪಡಿಸಲಾರಂಭಿಸಿದ. ಇವಳು ಯಾವಾಗಲೂ ಹೀಗೆಯೇ ನನ್ನದೇ ತಪ್ಪೆನಿಸಿ ನನ್ನ ಕೈಯಲ್ಲೇ ಮಂಡಿ ಊರಿಸುತ್ತಾಳೆ. ಅಲ್ಲಿಂದೆದ್ದು ಹೊರಟು ಬಿಡಬೇಕೆನಿಸಿತವನಿಗೆ. ಏನೋ ಕಟ್ಟು ಹಾಕಿದಂತೆ ಕೂತೆ ಇದ್ದ. ತಾನು ಸೋತಿದ್ದು ಎಲ್ಲಿ? ತಾನು ಸೋತಿದ್ದಾದರೂ ಹೌದಾ? ಅವಳದೇ ಆಟ, ಎರಡೂ ಕಡೆಯ ಆಟಗಾರ್ತಿಯೂ ಅವಳೇ, ನಾ ಬರಿಯ ವೀಕ್ಷಕನಾಗಿದ್ದೆ, ಈಗೆಲ್ಲ ನನ್ನದೇ ತಪ್ಪಂತೆ. ಥೂ ತಲೆನೋವಿನ ಸಂಗತಿಗಳು ಇವೆಲ್ಲ. ಯಾವುದಕ್ಕು ಅಂಟದಂತೆ ಇದ್ದು ಬಿಡಬೇಕು. ಹಾಗಿರುವುದು ಹೇಗೆ, ತಾನು ಹಾಗೇ ಇದ್ದದ್ದಲ್ಲವೇ? ಈ ಸುಳಿಗೆ ಸಿಕ್ಕಿದ್ದಾದರೂ ಹೇಗೆ? ತಾನಷ್ಟು ದಿನ ಅವಳಿಲ್ಲದೇ ಪಟ್ಟ ಸಂಕಟ ಏನಾಗಿ ಹೋಯಿತೋ; ಎಲ್ಲಿ ಕಷ್ಟ ಪಡುತ್ತಿದ್ದಾಳೋ ಎಂದು ನಿದ್ದೆಗೆಟ್ಟ ರಾತ್ರಿಗಳು, ಪ್ರತಿ ವಾರಕ್ಕೊಂದರಂತೆ ಮರೆಯದೇ ಆಕೆಗೆಂದು ಬರೆದು ಎತ್ತಿಟ್ಟುಕೊಳ್ಳುತ್ತಿದ್ದ ಪತ್ರಗಳು. ಎಲ್ಲವನ್ನು ಸಿಗರೇಟಿನ ಬೂದಿಯ ಹಾಗೆ ಒದರಿಬಿಡುತ್ತಿದಾಳೇನೋ ಎಂದವನಿಗೆ ಒಂದು ಕ್ಷಣ ಅನಿಸಿಯೂ. ಕಾಫಿಯ ಕಪ್ಪನ್ನು ತಿರುಗಿ ಟೇಬಲ್ ಮೇಲೆ ಇಟ್ಟ ಅವಳ ಕೈಯನ್ನೊಮ್ಮೆ ಹಿಡಿದ. ಅವಳ ಬಾಯಲ್ಲಿ ಉರಿಯುತ್ತಿದ್ದ ಸಿಗರೇಟಿನ ತುಂಡನ್ನು ತೆಗೆದು ಆರಿಸಿದ. ಕಡೆಯ ಬಾರಿಯ ಸಿಗರೇಟಿನ ಹೊಗೆ ಅವಳ ಬಾಯಿಂದ ಹೊರ ಬಂತು. ಕಣ್ಣಲ್ಲಿ ಕಟ್ಟಿದ್ದ ಕಂಬನಿ ಕಟ್ಟೆಯಲ್ಲಿ ಸಿಗರೇಟಿನ ಹೊಗೆ ಹೊಳೆದಿತ್ತು. ನಿರೂಪಕ:   ಪಾತ್ರಗಳನ್ನು ಸೃಷ್ಟಿಸಿದ ನಿರೂಪಕನ ಕೈಯಿಂದ ನಿರೂಪಣೆಯನ್ನು ಬಿಡಿಸಿ ಪಾತ್ರಗಳೇ ಬೆಳೆದುಬಿಡುವಂತಿದ್ದರೆ ಈ ಕತೆಗೆ ಒಂದು ಅಂತ್ಯವಾದರೂ ಸಿಕ್ಕುತ್ತಿತ್ತು. ಆದರೆ ಹಾಗಾಗದೆ ಸೃಷ್ಟಿಸಿದವನ ಬೆನ್ನಿಗೆ ಅವಕ್ಕೊಂದು ಕೊನೆಯನ್ನು ಕೊಡುವ ಹೊಣೆಯೂ ಅಂಟಿರುತ್ತದೆ. ಇಲ್ಲಿರುವ ಎರೆಡು ಪಾತ್ರದ ಸುತ್ತಲಿರುವ ಕತೆ ಮತ್ತದರಿಂದ ನಿರ್ಗಮಿಸುವ ರೀತಿಯೂ ಅವು ಸೃಷ್ಟಿಯಾದಷ್ಟೇ ವಿಚಿತ್ರ. ಕತೆಯನ್ನು ಕತೆಯಾಗಿ ಬರೆದಿದ್ದರೆ, ಅವರಿಬ್ಬರು ದೂರದಾಗಿನಿಂದ ಶುರುಮಾಡಿ ಇಲ್ಲಿಯವರೆಗೆ ತಂದು ಇಬ್ಬರನ್ನು ಒಂದು ಮಾಡಿ ಮುಗಿಸಬಹುದಿತ್ತು. ಇದರ ಶುರುವಿಗೇ ಕೊನೆಯು ಅಂಟಿಕೊಂಡಿದೆ. ಅವನಿಂದ ದೂರಾಗ ಬಯಸಿ ಹೋದ ಅವಳಿಗೆ ಅವನನ್ನು ಬಿಟ್ಟು ದೂರಾಗಬಲ್ಲೆನೆಂಬ ಹೆಮ್ಮೆಗೆ ಜಂಭಕ್ಕೆ ಮತ್ತೆ ಅವನದೇ ಅಂಗೀಕಾರ ಬೇಕಾಯಿತು. ಆಕೆಯ ಭಾವನೆಗಳನ್ನು ಅಳೆದು ಸುರಿದು ನಂಬಲು ಹೆಣಗುತ್ತಿದ್ದ ಅವನಿಗೆ ಅವನೆಲ್ಲಾ ಊಹೆಗಳು ನಿಜವಾದೆಂತೆ ಅವಳೇ ಬಂದು ಹೇಳುತ್ತಾ ಕುಳಿತಿದ್ದಾಳೆ. ಒಬ್ಬರಲ್ಲೊಬ್ಬರು ಬೆರೆತು ಹೋದ, ಒದ್ದುಕೊಳ್ಳಲು ಹೆಣಗುತ್ತಿರುವ, ಬಿಟ್ಟು ಹೊರಡಲೂ ಆಗದ, ಬಾಗಿ ಹೊರಲೂ ಆಗದ, ತಮ್ಮ ತಮ್ಮ ಹೆಣವನ್ನು ಇನ್ನೊಬ್ಬರ ಬೆನ್ನ ಮೇಲೆ ಹೊರಿಸುತ್ತಾ ಬದುಕುತ್ತವೆ. ಬೆಳೆಯಲು ಪಾತ್ರಗಳಿಗೂ ಇಷ್ಟವಿಲ್ಲ, ಬೆಳೆಸಲು ನಿರೂಪಕನಿಗೂ ಅವಕಾಶವಿಲ್ಲ. ಕತೆಯು ಅಪೂರ್ಣವೆನಿಸಿದರೆ ಇದಕ್ಕೆ ಮೂವರೂ ಜವಬ್ದಾರರಲ್ಲ.]]>

‍ಲೇಖಕರು G

April 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅವಳು ನದಿ

ಅವಳು ನದಿ

ಅಂಜನಾ ಗಾಂವ್ಕರ್ ಜುಳುಜುಳು ಸಂಗೀತ ಹಾಡುತ್ತ ಬೆಳ್ಳಿಯ ಕರಗಿಸಿ ಹರಿಸಿದಂತೆ ಹರಿಯುತ್ತಿರುವ ಹೊಳೆಯುತ್ತಿರುವ ಹಳ್ಳದಲ್ಲಿ ನಟ್ಟ ನಡುವಿನ ಬಂಡೆಯ...

ಕಡಲಂತರಾಳವ ಬಲ್ಲವರಾರು?

ಕಡಲಂತರಾಳವ ಬಲ್ಲವರಾರು?

ಶಿವಲೀಲಾ ಹುಣಸಗಿ ಯಲ್ಲಾಪುರ ಪ್ರತಿ ದಿನವೂ ಪ್ರೀತಿಯ ಹುಚ್ಚ ಹಿಡಿಸಿದವ ಒಮ್ಮಿಂದೊ ಮ್ಮೆಲೆ ಮೌನವಾಗಿದ್ದು, ಕೊನೆಗವನು ನನಗರಿವಿಲ್ಲದೆ ಮಂಪರು...

ಆರನೇ ಬೆರಳು

ಆರನೇ ಬೆರಳು

ಬಸವಣ್ಣೆಪ್ಪ ಕಂಬಾರ ಸುಂಕದ ಕಟ್ಟೇಲಿ ಚಿನ್ನವ್ವ ತುಂಬ ಅದೃಷ್ಟದ ಹೆಂಗಸು ಎಂದು ಮನೆಮಾತಾಗಿದ್ದಳು. ಮನೆ ಗುದ್ದಲಿ ಪೂಜೆ, ಬಾಣಂತನಕ್ಕೆ, ಮಗಳನ್ನು...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: