ಅವನೇ ನನ್ನ ‘ಸುರೇಶ’..

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ ತಮ್ಮನ್ನು ಯಶಸ್ವಿಯಾಗಿ ಸ್ಥಾಪಿಸಿಕೊಂಡರು.

ಮೂರನೆಯ ಸಿನೆಮಾವನ್ನು ನಿರ್ದೇಶಿಸಿ ಕೊರೊನ ಕಾರಣದಿಂದಾಗಿ ಸಿಕ್ಕ ಬಿಡುವಿನಲ್ಲಿ ‘ಅವಧಿ’ಆಹ್ವಾನದ ಮೇರೆಗೆ ನಾತಿಚರಾಮಿಯ ನೆನಪನ್ನು ಮೆಲುಕು ಹಾಕಿದ್ದಾರೆ.

ಇವರ ಮೊದಲ ಚಿತ್ರ ‘ಹರಿವು’ ನಿರ್ಮಾಣಗೊಂಡ ಕಥನವೂ ‘ಅವಧಿ’ಯಲ್ಲಿಯೇ ಪ್ರಕಟವಾಗಿತ್ತು.

ಇತ್ತೀಚೆಗಷ್ಟೇ ಏನೋ ಓದುತ್ತಿದ್ದಾಗ ನೆನಪಾಗಿದ್ದು, ಪೂರ್ಣಚಂದ್ರ ತೇಜಸ್ವಿಯವರು ಬರೆದಿರುವ ನನ್ನ ಮೆಚ್ಚಿನ ಕಾದಂಬರಿಗಳಲ್ಲೊಂದಾದ ‘ಜುಗಾರಿ ಕ್ರಾಸ್’ನ ಮುಖ್ಯ ಪಾತ್ರದ ಹೆಸರೂ ಕೂಡ ‘ಸುರೇಶ’.

ಲೇಖಕರು ತಮ್ಮ ಕಥೆ, ಕಾದಂಬರಿಗಳಲ್ಲಿ ತಮ್ಮ ವಿಚಾರ, ಸಿದ್ದಾಂತಗಳನ್ನು ಹೇಳುವುದಕ್ಕೆಂದೇ ಸೃಷ್ಟಿಸುವ ಪಾತ್ರಗಳಂತೆ ನನ್ನ ಸಿನೆಮಾ ಕಥೆಗಳಲ್ಲಿ ಹುಟ್ಟುವ ಪಾತ್ರ ‘ಸುರೇಶ’.

ಈ ‘ಸುರೇಶ’ ಎಂಬ ಪಾತ್ರದ ಕಲ್ಪನೆಗೆ ನನಗೆ ಸ್ಪೂರ್ತಿ, ನನ್ನ ಕಿರಿಯ ಸ್ನೇಹಿತ ಹಾಗೂ ಕಾಲೇಜು ಸಮಯದಲ್ಲಿ ಒಂದೂವರೆ ವರ್ಷ ನನ್ನ ರೂಮ್ ಮೇಟ್ ಆಗಿದ್ದ ಅದೇ ‘ಸುರೇಶ’.

ಕಾಲೇಜು ವ್ಯಾಸಂಗ ಮಾಡುತ್ತಿದ್ದ ಸಮಯದಲ್ಲಿ ಬಹುತೇಕ ಒಂದು ವರ್ಷದ ಮಟ್ಟಿಗೆ ನನ್ನದು ಬೈರಾಗಿಯ ಜೀವನವಾಗಿತ್ತು. ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ನಾನು ಕಾರಣಾಂತರಗಳಿಂದ ಹೊರಬಂದಿದ್ದೆ. ಸರಿ ಸುಮಾರು ಆರು ತಿಂಗಳ ಕಾಲ ಸ್ನೇಹಿತರ ರೂಮಲ್ಲಿ ಅಥವಾ ಮೆಜೆಸ್ಟಿಕ್ ನ ಫುಟ್ಪಾತ್ ಅಲ್ಲೇ ನನ್ನ ರಾತ್ರಿಗಳು ಕಳೆಯುತ್ತಿತ್ತು. ಆಗ ಇನ್ನೂ ನಿರ್ಮಾಣದ ಹಂತದಲ್ಲಿದ್ದ ಧೂಳು ತುಂಬಿದ್ದ ಕಾಲೇಜಿನ ಕಟ್ಟಡದಲ್ಲೇ ನಮ್ಮ ಚಿತ್ರಕಲಾ ತರಗತಿಗಳು ನಡೆಯುತ್ತಿತ್ತು.

ಆ ಕಟ್ಟಡಕ್ಕೆ ಒಂದು ಬಾಗಿಲೂ ಇರಲಿಲ್ಲಾ.  ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾರ್ಯದರ್ಶಿಗಳ ಅನುಮತಿ ಪಡೆದು ಅದೇ ಕಟ್ಟಡದಲ್ಲಿ ಕೆಲವು ತಿಂಗಳು ಉಳಿದುಕೊಂಡಿದ್ದೆ. ಅದು ಕೇವಲ ವಾಸಸ್ಥಾನವಷ್ಟೇ ಅಲ್ಲದೇ ನನ್ನ ವರ್ಕಿಂಗ್ ಸ್ಟುಡಿಯೂ ಕೂಡ ಅದೇ. ಹಗಲೊತ್ತಿನಲ್ಲಿ ಕಾಲೇಜು, ಸಂಜೆ ವಿದ್ಯಾರ್ಥಿಗಳೆಲ್ಲಾ ಹೋದ ನಂತರ, ನನ್ನ ವಯಕ್ತಿಕ ಕೆಲಸಗಳು ಅಂದರೆ ಬ್ಯಾನರ್ ಬರೆಯುವುದು, ಬೋರ್ಡ್ ಬರೆಯುವುದು, ಕಮೀಷನ್ಡ್ ಆರ್ಟ್ ವರ್ಕ್ ಮಾಡುವುದು ಇತ್ಯಾದಿ ನಡೆಯುತ್ತಿತ್ತು.

ಅದ್ಯಾವುದು ಇಲ್ಲವೆಂದರೆ ರಾತ್ರಿಯೆಲ್ಲಾ ಕಾಲೇಜಿನಲ್ಲಿ ಎಫ್ ಎಂ ರೇಡಿಯೋ ಆನ್ ಮಾಡ್ಕೊಂಡು, ಆರ್ಟ್ ವರ್ಕ್ ಮಾಡಿಕೊಂಡು ಬೆಳಗಿನ ಜಾವ ಮಲಗುವುದು. ಹಾಸಿಕೊಳ್ಳಲು ಇದ್ದಿದ್ದು ಪ್ಲಾಸ್ಟಿಕ್ ಶೀಟ್ಸ್ ಹಾಗೂ ಒಂದು ಹಳೇ ಬೆಡ್ ಶೀಟ್. ವಿದ್ಯಾರ್ಥಿಗಳು ಬರುವ ಮೊದಲೇ ಎದ್ದು ಕಾಲೇಜಿನ ಟಾಯ್ಲೆಟ್ಟಲ್ಲೇ ಬೆಳಗಿನ ಕಾರ್ಯ ಹಾಗೂ ಸ್ನಾನ ಮುಗಿಸಿ ಆನಂತರ ಹಾಗೇ ಕಾಲೇಜು ಮುಂದುವರೆಯುತ್ತಿತ್ತು.

ಅಂತಹ ಸಮಯದಲ್ಲೇ ಕಾಲೇಜಿಗೆ ಮೊದಲನೇ ವರ್ಷಕ್ಕೆ ಸೇರಿಕೊಂಡವನು ಸುರೇಶ. ಊರು ನಮ್ಮದೇ ಜಿಲ್ಲೆಯ ಶ್ರೀನಿವಾಸಪುರದ ಬಳಿಯ ಗಡಿಭಾಗದಲ್ಲಿದ್ದ ಒಂದು ಹಳ್ಳಿ. ಸ್ವಜಿಲ್ಲಾ ಪ್ರೀತಿ ಪರಿಚಯ ಮಾಡಿಸಿದರೂ, ಆರಂಭದಲ್ಲಿ ಅವನು ಕೆಲವೊಂದು ವಿಷಯಗಳ ಕುರಿತಂತೆ ಮಾಡುತ್ತಿದ್ದ ವಿತಂಡ ವಾದಗಳಿಂದಾಗಿ ದೂರ ಇಟ್ಟಿದ್ದೆ.

ಅದರಲ್ಲಿ ಮುಖ್ಯವಾದದ್ದು ಅವನ ಮನೆತನಕ್ಕಿದ್ದ ಉಪನಾಮದ (ಸರ್ ನೇಮ್) ಬಗ್ಗೆ ಅವನಿಗಿದ್ದ ಅತೀವವಾದ ಹೆಮ್ಮೆ. ಕಲಾವಿದರೆಲ್ಲಾ ಒಂದೇ ಜಾತಿ ಎಂದು ನಂಬುತ್ತಿದ್ದ ನನಗೆ ಅವನ ‘ಹೆಮ್ಮೆ’ಯ ಬಗ್ಗೆ ಇರಿಟೇಶನ್ ಇತ್ತು. ಕ್ರಮೇಣ ನಮ್ಮೊಂದಿಗೆ ಬೆರೆಯಲು ಆರಂಭಿಸಿ ತನ್ನ ಹೆಮ್ಮೆಯನ್ನೆಲ್ಲಾ ಬದಿಗಿರಿಸಿದರೂ ಅದು ಅವನ ತಲೆಯಲ್ಲಿ ಸುಪ್ತವಾಗಿ ಉಳಿದಿತ್ತು. ಅವನು ಕಾಲೇಜಿಗೆ ಕೆ ಆರ್ ಪುರದ ಹತ್ತಿರದಿಂದ ಬರುತ್ತಿದ್ದ.

ಬಹುತೇಕ ಸಮಯ ಟ್ರಾಫಿಕ್ನಲ್ಲಿ ಕಳೆದು ಹೋಗುತ್ತಿತ್ತು. ಒಂದು ವರ್ಷಕ್ಕೆ ಸುಸ್ತಾದವನು, ಕಾಲೇಜಿನಲ್ಲೇ ಉಳಿದುಕೊಂಡಿದ್ದ ನನ್ನ ಬಳಿ ಬಂದು ಜೊತೆಯಾಗಿ ರೂಮ್ ಮಾಡುವ ಪ್ರಸ್ತಾಪ ಇಟ್ಟ.

ಹಿಂದೊಮ್ಮೆ ಸ್ನೇಹಿತರೊಂದಿಗೆ ರೂಮ್ ಮಾಡಿ ಬಿಟ್ಟು ಬಂದಿದ್ದ ನಾನು ಜೊತೆಯಾಗಿ ರೂಮ್ ಮಾಡಲು ಒಪ್ಪಲಿಲ್ಲವಾದರೂ, ಅಂದಿನ ನನ್ನ ಆರ್ಥಿಕ ಪರಿಸ್ಥಿತಿಯ ಕಾರಣದಿಂದಾಗಿ ಒಪ್ಪಿದೆ. ಅವನೇ ರೂಮ್ ನೋಡಿ ಎಲ್ಲಾ ಮಾತಾಡಿದ್ದ. ಆ ನಂತರ ನಾನು ಆ ರೂಮಿಗೆ ಸೇರಿಕೊಂಡೆ.

ಮೊದಲ ಒಂದೆರೆಡು ತಿಂಗಳು ಅಂತಹ ಸಮಸ್ಯೆ ಏನೂ ಎದುರಾಗಲಿಲ್ಲ. ಎಲ್ಲವೂ ಸರಿಯಾಗೇ ಇತ್ತು. ನಾನು ಅವನೊಂದಿಗೆ ಜ್ಯೂನಿಯರ್ ಸೀನಿಯರ್ ಎಂಬ ಭೇದಭಾವವಿಲ್ಲದೆ ಸಮಾನ ಸ್ನೇಹಿತರಂತೆ ಇದ್ದೆವು.

ಆ ನಂತರ ಒಂದು ದಿನ ಈ ಸುರೇಶ ಊರಿನಿಂದ ಸ್ನೇಹಿತನೊಬ್ಬನನ್ನು ಕರೆದುಕೊಂಡು ಬಂದು, ಬಡವರ ಮನೆಯವನು ಹಾಸ್ಟೆಲ್ ಸಿಗುವವರೆಗೆ ನಮ್ಮೊಂದಿಗೆ ಇರ್ತಾನೆ ಎಂದು ಹೇಳಿದ. ಆದರೆ ಆ ಸ್ನೇಹಿತನಿಗೆ ನಾನು ಆ ರೂಮ್ ಬಿಟ್ಟು ಬರುವವರೆಗೂ ಹಾಸ್ಟೆಲ್ ಸಿಗಲೇ ಇಲ್ಲಾ. ಆ ಸ್ನೇಹಿತ ಬಂದ ನಂತರವೇ ಅಲ್ಲಿಯವರೆಗೂ ಕಾಣದ ಸುರೇಶನ ವಿಶ್ವರೂಪ ಕಂಡಿದ್ದು.

ಸುರೇಶ ನನಗೆ ಒಬ್ಬ ವ್ಯಕ್ತಿಯಾಗಿ ಅಷ್ಟೇ ಕಾಣಲಿಲ್ಲಾ. ಎಷ್ಟೋ ಗಂಡು ಮನಸ್ಥಿತಿಗಳ ಪ್ರತಿರೂಪದಂತೆ ಕಂಡಿದ್ದ. (ಕೆಲವೊಂದು ವಿಷಯದಲ್ಲಿ ನನ್ನೊಳಗಿನ ಸುಪ್ತ ಗಂಡು ಮನಸ್ಥಿತಿಗೆ ಕನ್ನಡಿ ಹಿಡಿದಿದ್ದ. ಇದು ಅಂದು ನನಗೆ ಅರಿವಾಗಿರಲಿಲ್ಲಾ, ಕ್ರಮೇಣ ನನ್ನ ಚಿಂತನೆಗಳು ಸುಧಾರಿಸಿದಂತೆಲ್ಲಾ ಅವೆಲ್ಲಾ ನೆನಪಾಗಿತ್ತು. ಈಗಲೂ ನೆನಪಾಗುತ್ತದೆ.)

ಇದಷ್ಟೇ ಅಲ್ಲದೇ, ಹಳ್ಳಿಯಿಂದ ನಗರಕ್ಕೆ ಬರುವ ಅದೆಷ್ಟೋ ಯುವಕರು ತಮ್ಮ ‘ಹಳಿಯವನು’ ಎಂಬ ಐಡೆಂಟಿಟಿಯನ್ನು ಕಳೆದುಕೊಳ್ಳಲು ಅವರು ನಡೆಸುವ ಹಲವು ಪ್ರಯತ್ನಗಳೆಲ್ಲವೂ ಇವನೊಬ್ಬನಲ್ಲೇ ಕಂಡಿತ್ತು. ಪ್ರೀತಿ, ಪ್ರೇಮ, ಸಂಬಂಧ, ಸೋಷಿಯಲ್ ಸ್ಟೇಟಸ್, ಕೆಲಸ, ಸಂಪಾದನೆ, ಗುರಿ ಇಂತಹ ಎಷ್ಟೋ ವಿಷಯಗಳ ಕುರಿತಂತೆ ಅವನ ದೃಷ್ಟಿಕೋನ, ನಡವಳಿಕೆ, ಅವನೊಂದಿಗೆ ಇದ್ದ ಆ ಒಂದೂವರೆ ವರ್ಷದ ನೆನಪುಗಳು ಇನ್ನೂ ಹತ್ತು ಸಿನೆಮಾಗಳಿಗೆ ಆಗುವಷ್ಟು ಕಂಟೆಂಟ್ ನ ಅನುಭವದ ರಾಶಿಯನ್ನೇ ಕೊಟ್ಟಿದ್ದ.

ಫ್ಲಾಷ್ ಬ್ಯಾಕ್ ಜಾಸ್ತಿಯಾಯಿತು, ವಾಪಸ್ ‘ನಾತಿಚರಾಮಿ’ಗೆ ಬರೋಣ,

ನನಗೆ ಇವತ್ತಿಗೂ ಯಾವುದಾದರು ಪಾತ್ರಕ್ಕೆ ಡಿಸೈನಿಂಗ್ ಯೋಚಿಸಬೇಕಾದರೆ ಶುರು ಮಾಡುವುದೇ ಸುರೇಶನಿಂದ. ಅವನ ಆಟಿಟ್ಯೂಡ್ ‘ಹರಿವು’ ಸಿನೆಮಾದ ಸುರೇಶನ ಪಾತ್ರಕ್ಕೆ ಉಪಯೋಗಕ್ಕೆ ಬಂದರೆ, ಈ ಹಳ್ಳಿಯ ಐಡಿಂಟೆಟಿ ಕಳೆದುಕೊಳ್ಳಲು ಪ್ರಯತ್ನಿಸುವ ಹಾಗೂ ಗಂಡಿನ ಮನಃಸ್ಥಿತಿ ಕೆಲವು ಅಂಶಗಳು ನಾತಿಚರಾಮಿಯ ‘ಸುರೇಶ’ನ ಪಾತ್ರಕ್ಕೆ ಸ್ಫೂರ್ತಿಯಾಯಿತು.

ನಮ್ಮ ಸಿನೆಮಾದ ಪಾತ್ರಗಳ ಡಿಸೈನಿಂಗ್ ಚರ್ಚಿಸುವಾಗ ಸುರೇಶನ ಕ್ಯಾರೆಕ್ಟರ್ ಡಿಸೈನಿಂಗ್ ಜೊತೆಗೇ ಸಂಧ್ಯಾ ಮೇಡಂಗೆ ಹೇಳಿದೆ. ಮೇಡಂ ಈ ಪಾತ್ರಕ್ಕೆ ನನ್ನ ಆಯ್ಕೆ ನಮ್ಮ ಸಂಪತ್ ಕುಮಾರ್ ಎಂದು. ಮೇಡಂಗೆ ಸಡನ್ನಾಗಿ ಯಾವ ಸಂಪತ್ ಅಂತ ಗೊತ್ತಾಗ್ಲಿಲ್ಲಾ, ನಾನು, ಅದೇ ಮೇಡಂ ಮಂಟೇಸ್ವಾಮಿ ನಾಟಕ ಹಾಗೂ ಕಿರಗೂರು ಗಯ್ಯಾಳಿಗಳು ಸಿನೆಮಾದಲ್ಲಿ ಮಾಡಿದ್ದಾರಲ್ಲಾ ಅಂತಂದಾಗ, ಓಹ್ ಅವರಾ, ಅವರು ಒಳ್ಳೆಯ ನಟ ಅವರಾಗಬಹುದು ಎಂದರು.

ಸಂಪತ್ ಹಾಗೂ ನಾನು ಮುಹೂರ್ತ ಆಗಿ ನಿಂತೋಗಿದ್ದ ಸಿನೆಮಾದಲ್ಲಿ ಜೊತೆಯಾಗಿ ಕೆಲಸ ಮಾಡಬೇಕಿತ್ತು. ಅದು ನಿಂತು ಹೋದ ನಂತರವೂ ನಾವು ಸಾಕಷ್ಟು ಕತೆ, ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಲೇ ಬಂದಿದ್ದೆವು. ಆಗೆಲ್ಲಾ ಸಂಪತ್ ಅವರನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಅವರಲ್ಲಿನ ವಿಶೇಷತೆಗಳನ್ನೆಲ್ಲಾ ಈ ಸಿನೆಮಾದ ಸುರೇಶನಿಗೆ ಬಳಸಿಕೊಳ್ಳಬಹುದು ಎಂದು ಅನಿಸಿತು. ನನ್ನ ಕಲ್ಪನೆಯ ಸುರೇಶನಿಗೆ ಒಂದು ರೂಪ ಸಂಪತ್ ಮೂಲಕ ಕೂಡಲೇ ಸಿಕ್ಕಿತು. ಕತೆಯ ಆರಂಭದ ಹಂತದಲ್ಲೇ ನನಗೆ ಸಂಪತ್ ಮೂಲಕ ಸುರೇಶ ಸಿಕ್ಕಿದ.

ಗೌರಿ ಪಾತ್ರಕ್ಕೆ ಒಂದೆರೆಡು ನಟಿಯರ ಹೆಸರು ಚರ್ಚೆಗೆ ಬಂತಾದರು ಯಾವುದು ನಿರ್ಧಾರವಾಗಲಿಲ್ಲಾ. ಸಂಧ್ಯಾ ಮೇಡಂ ಕತೆ ಬರೆಯಲು ಒಪ್ಪಿಕೊಂಡರು, ಆ ಮೊದಲ ಚರ್ಚೆಯಲ್ಲೇ ಚಿತ್ರಕತೆಗೆ ಬೇಕಾದ ಒಂದು ಬೇಸಿಕ್ ಚೌಕಟ್ಟುಗಳನ್ನು ಅವರಿಗೆ ವಿವರಿಸಿ, ಆರಾಮಾಗಿ ಯೋಚಿಸಿ ಬರೆಯಿರಿ ಮೇಡಂ ಅಂತ ಹೇಳಿದೆ. ಚರ್ಚೆ ಮುಗಿಯುವ ವೇಳೆಗೆ ಸಾಕಷ್ಟು ಸಮಯವಾಗಿತ್ತು ಮೇಡಂ ಮಾಡಿಕೊಟ್ಟ ಬಿಸಿ ಬಿಸಿ ಮೆಂತ್ಯೆ ದೋಸೆ ತಿಂದು ಸಂತೃಪ್ತಿ ಇಂದ ಮನೆಗೆ ಬಂದು ಮಲಗಿದೆ. ಆ ಸಂತೃಪ್ತಿ ನಿದ್ದೆ ಬರಿಸುವ ಬದಲು, ನನ್ನ ಮುಂದಿನ ಟಾರ್ಗೆಟ್ ನೆನಪಿಸಿತು.

ಅದು ‘ನಿರ್ಮಾಪಕರ’ ಹುಡುಕಾಟ….!???

‍ಲೇಖಕರು ಮಂಸೋರೆ

October 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಪ್ರಜಾವಾಣಿಯಲ್ಲಿ ‘ಪ್ಲೇ ಬಾಯ್’

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಬೆಚ್ಚಿ ಬಿದ್ರಾ…?

ಬೆಚ್ಚಿ ಬಿದ್ರಾ…?

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This