ಅವರಿಬ್ಬರೂ ಒಟ್ಟಿಗೆ 'ಜಾನೆ ತು' ಸಿನಿಮಾ ನೋಡಿದ್ರು, ಚಾಟ್ ತಿಂದ್ರು ..

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ..
 
ಇದ್ದಕ್ಕಿದ್ದಂತೆ ಒಂದು ದಿನ ಆತ ಅನೇಕರ ಹೃದಯಕ್ಕೆ ಲಗ್ಗೆ ಹಾಕಿದ್ದ…..ಕುರುಚಲು ಗಡ್ಡದ ಅವನ ನಗು ನೋಡೇ ಎಳೆಯ ಹುಡುಗಿಯರು ಬೆಸ್ತು ಬೀಳುತೊಡಗಿದರು. ಸುಮ್ಮಸುಮ್ಮನೆ ಮಳೆಯಲ್ಲಿ ನೆನೆಯತೊಡಗಿದರು. ಅವನ ಆಟೋಗ್ರಾಫ್ ಗಾಗಿ  ದುಂಬಾಲು ಬೀಳುತ್ತಿದ್ದರು. ನೀನಿಷ್ಟ ಕಣೋ… ಅಂತ ಹಾಡೋಕೆ ಶುರುಮಾಡಿದ್ರು.ಇದ್ದಕ್ಕಿದ್ದಂತೆ ಎಲ್ಲ ನಟರು ಮದುವೆಯಾಗುವಂತೆ ಆತನೂ ಗಪ್ ಚುಪ್ ಆಗಿ ಮದುವೆನೂ ಆಗಿಬಿಟ್ಟ. ನಮ್ಮನ್ನೆಲ್ಲ ನಗಿಸೋನು, ಖುಷಿಪಡಿಸೋ ವ್ಯಕ್ತಿಯೊಬ್ಬ  ಚತುರ್ಭುಜನಾದ ಅಂತ ಖುಷಿಪಡೋದನ್ನು ಬಿಟ್ಟು, ನನ್ನ ಓರಗೆಯ ಪತ್ರಕರ್ತ ಮಿತ್ರರೆಲ್ಲ ಅವನ ಮದುವೆಯ ಬಗ್ಗೆ ಸ್ಕೂಪ್ ಸುದ್ದಿಯನ್ನು ಹುಡುಕತೊಡಗಿದರು.

ಒಂದಿಷ್ಟು ಮಂದಿ ಅವಳಿಗೆ ಮೊದಲೇ ಒಂದು ಮಗು ಇದೆ ಅಂತ ಅರ್ಧ ಬೆಂದ ಬ್ರೇಕಿಂಗ್ ನ್ಯೂಸ್ ನೀಡಿ ಖುಷಿಪಟ್ಟರು…. ಹಿಂಗಿರುವಾಗ ಒಂದು ದಿನ ಆ ಕಣ್ಮಣಿಯ ಹೃದಯ ಸಾಮ್ರಾಜ್ಞಿ ನನ್ನ ಗೆಳತಿಗೆ ತುಂಬಾ ಆತ್ಮೀಯ ಸ್ನೇಹಿತೆ ಎನ್ನೋದು ನನ್ನ ಗಮನಕ್ಕೆ ಬಂತು. ಅವಳೊಂದಿಗೆ ದೂರವಾಣಿಯಲ್ಲಿ ಮಾತನಾಡುವ ಯೋಗವೂ ನನ್ನದಾಯ್ತು. ಹೇಳಿ ಕೇಳಿ ನಾನೂ ಪತ್ರಕರ್ತೆ ತಾನೇ.. ಅಯ್ಯೋ ಇವರಿಬ್ಬರು ಇಷ್ಟೊಂದು ಕ್ಲೋಜಾ ಅಂತ ನಾನೂ ಬಾಯಿಬಾಯಿ ಬಿಟ್ಟೆ.
 
ಅಷ್ಟೊತ್ತಿಗಾಗಲೇ ನನ್ನ ಗೆಳತಿಯಿಂದ ಫರ್ಮಾನು ಹೊರಟಿತ್ತು. ನಿನ್ನಷ್ಟೇ ಅವಳು ಕೂಡ ನನಗೆ ಆತ್ಮೀಯಳು. ಆ ಕಾರಣ ಅವಳನ್ನು ನೋಡುವಾಗ, ಮಾತನಾಡುವಾಗ  ನಿನ್ನ ಪತ್ರಕರ್ತ ಬುದ್ಧಿಯನ್ನು ಬಿಡಬೇಕು. ಜೀ ಹುಜೂರ್ ಎಂದೆ. ಅಲ್ಲಿಗೆ ನಾನು ಆ ನಟ, ಅವನ ಮುದ್ದಿನ ಮಡದಿಗೆ ಸಂಬಂಧಿಸಿದ ವಿಷಯಕ್ಕೂ ನನ್ನ ಹುದ್ದೆಗೂ ಯಾವುದೇ ಸಂಬಂಧ ಇಲ್ಲ ಎಂದೂ ಇದ್ದು ಬಿಟ್ಟೆ.
 
ಹಿಂಗಿರುವಾಗ ಮತ್ತೊಂದು ದಿನ ನನ್ನ ಗೆಳತಿ….
ಅವಳು ವಾಂತಿ ಮಾಡ್ತಾ ಇದ್ದಾಳೆ ಕಣೆ ಎಂದು ಬಿಟ್ಟಳು.ನನಗೆ ಗೊತ್ತಾಗಿ ಬಿಡ್ತು. ಸುದ್ದಿ ಕೇಳಿದ್ದೇ ತಡ. ನನ್ನೊಳಗಿನ ಜರ್ನಲಿಸ್ಟ ಜಾಗೃತ.ಆದರೆ ಕೇಳೋದು ಹೇಗೆ. ನಾನ್ಯಾನಾದ್ರೂ ಸುದ್ದಿ ಮಾಡ್ತೀನಿ ಎಂದ್ರೆ ನನಗೆ ಏಟು ಬೀಳೋದು ಖಚಿತ. ಆದ್ರೂ ಬಿಡಬೇಕಲ್ಲ.ಸುದ್ದಿ ಮಾಡ್ಬಹುದಾ ನಾನು ಕೀಟಲೆ ಮಾಡ್ದೆ. ಥೂ ನಿನ್ನ..ನನ್ನ ಗೆಳತಿ ನನ್ನ ಮೇಲೆ ಕೆಂಡಾಮಂಡಲವಾಗಿದ್ದಳು. ಸಾರಿ ಕಣೆ…ತಮಾಷೆ ಮಾಡ್ದೆ.ನನಗೂ ಜವಾಬ್ದಾರಿ ಇದೆ ಎಂದು ಸಮಾಧಾನ ಪಡಿಸಿದೆ.
ಮನೆಗೆ ಬಂದು ಉಸ್ಸಪ್ಪಾ ಎಂದು ಮಂಚಕ್ಕೆ ಒರಗಿದವಳಿಗೆ ಅವಳು ವಾಂತಿ ಮಾಡುತ್ತಿರುವ ವಿಷಯದ ಸುತ್ತ ನನ್ನ ಮಿದುಳು ಗಿರಕಿ ಹೊಡೆಯತೊಡಗಿತು.ಲಕ್ಷ ಲಕ್ಷ ಜನರ ಮನಸ್ಸನ್ನು ಕದ್ದವನು ಅಪ್ಪ ಆಗ್ತಾ ಇದ್ದಾನೆ ಅನ್ನೋದು ಸುದ್ದಿ ಅಲ್ವಾ..ಅವನ ಬಗ್ಗೆ ಹೆಚ್ಚು ಹೆಚ್ಚು ತಿಳಿದುಕೊಳ್ಳೋಕೆ ಆಸೆ ಇದ್ದವರಿಗೆ ಅದು ಸುದ್ದಿನೇ. ಹಾಗಾಗಿದ್ದರೆ ನಾನು ಈ ಸುದ್ದಿ ಕೊಡಬೇಕಾ ಬೇಡವಾ…ಸುಮಾರು ಹೊತ್ತು ನನ್ನಲ್ಲಿ ನಾನು ಮಂಥನ ಮಾಡಿಕೊಂಡ ಮೇಲೆ ಒಂದು ನಿರ್ಧಾರಕ್ಕೆ ಬಂದೆ. ಬೇಡ. ವಾಂತಿ ಯಾರೂ ಮಾಡಲ್ಲ. ಅಂಥದ್ರಲ್ಲಿ ಅವಳೇನೂ ಘನಕಾರ್ಯ ಮಾಡಿದ್ದಾಳೆ. ಅವಳ ಈ ಸಂತೋಷವನ್ನು ಅವಳು ಅನುಭವಿಸಲಿ. ನಾವ್ಯಾಕೆ ಅದನ್ನು ಹಾಳು ಮಾಡ್ಬೇಕು ಎಷ್ಟೋ ಮನೆಗಳಲ್ಲಿ ವರ್ಷಕ್ಕೊಂದು ಸಾರಿ ವಾಂತಿ ಮಾಡೋದೇ ಕೆಲ ಹೆಂಗಸರಿಗೆ ಕೆಲಸ ಆಗಿಬಿಟ್ಟಿರುತ್ತೆ. ಇನ್ನು ಕೆಲವು ಮನೆಯಲ್ಲಿ ಅತ್ತೆನೂ ವಾಂತಿ  ಸೊಸೆನೂ ವಾಂತಿ.. ಕಳೆದ ಅನೇಕ ದಿನಗಳಿಂದ  ಈ ವಿಷಯ ನನ್ನನ್ನು ಹಾಗೇಯೆ ಕಾಡತೊಡಗಿದೆ. ಕಾರಣ ಏನು ಎಂದು ಹುಡುಕುತ್ತಲೇ ಇದ್ದೇನೆ.
 
ನಾವೇ ಮಾಡಿಕೊಂಡ ತಪ್ಪುಗಳು ಇಂದು ನಮ್ಮನ್ನು ಬಾಧಿಸುತ್ತಿರುವುದು ನಿಜ. ಆದರೆ ಎಲ್ಲೋ ಒಂದು ಕಡೆ ಸರಿಪಡಿಸುವ ಜವಾಬ್ದಾರಿಯೂ ನಮ್ಮ ಮೇಲಿದೆ ಎಂಬುದು ಮನದಟ್ಟಾದಾಗ ವಾಂತಿಗೆ ಬ್ರೇಕ್ ಹಾಕಿದೆ.ಆದರೆ ನಮ್ಮನ್ನು ನಾವು ತಿದ್ದಿಕೊಳ್ಳುವುದು ಹೇಗೆ. ಬೆಟ್ಟದಷ್ಟು ತಪ್ಪುಗಳು ನಮ್ಮ ಮುಂದಿವೆ. ಒಮ್ಮೆ ಹಿಂತಿರುಗಿ ನೋಡುತ್ತೇನೆ.ನಾವು ದಿನಾ ಎದ್ದು ಮಾಡುತ್ತಿರುವ ಕೆಲಸದ ಬಗ್ಗೆ ನನಗೆ ಗಾಬರಿಯಾಗುತ್ತದೆ. ಬೆಳಿಗ್ಗೆ ಆಯ್ತಾ ಅಂತ ಕಾಯುತ್ತಲೇ ಇರುವ ನಾವು ಬೆಳಕಾಗುತ್ತಲೇ ರಾಜಕಾರಣಿಗಳ ಮನೆ ಕಾವಲು ಕಾಯತೊಡಗುತ್ತೇವೆ. ಅವನೋ..ತನಗೆ  ಬೇಕಾದಾಗ ತಕ್ಷಣವೇ ಹೊರಬರುತ್ತಾನೆ.. ಅವನಿಗೆ ಬೇಡ ಎನಿಸಿದಾಗ ನಾವು ಗಂಟೆಗಟ್ಟಲೆ ಕಾವಲು ನಾಯಿ ಥರ ಹೊರಗಡೆ ಕಾಯಬೇಕು. ಅವನೆಷ್ಟೇ ಕಾಯಿಸಿದರೂ ನಾವಂತೂ ಅವರಿಗೆ ಮೈಕ್ ಹಿಡಿಯಲೇಬೇಕೆಂದು ತೀರ್ಮಾನ ಮಾಡಿಯೇ ಬಿಟ್ಟಿರುತ್ತೇವೆ. ನಮಗೆ ಗೊತ್ತು ಆ ರಾಜಕಾರಣಿ ಎಷ್ಟು ಭ್ರಷ್ಟ, ಎಷ್ಟು ನಿಕೃಷ್ಠ ಅಂತ. ಹೀಗಿದ್ದರೂ ನಾವು ಅವನ ಮುಂದೆ ಹಲ್ಲುಗಿಂಜುತ್ತೇವೆ. ಅವನು ನಮಗೆ ಕಾಫಿ ಕೊಡುತ್ತಾನೆ ತನ್ನ ಕೈಯ್ಯಾರೆ. ಅವನಿಗೆ ನಮಗಿಂತ ಹೆಚ್ಚು ಪ್ರಿಯ ನಮ್ಮ ಕೈಯ್ಯಲ್ಲಿರೋ ಕ್ಯಾಮರಾ. ಅದಕ್ಕೆ ಅವನು ಆಗಾಗ ತನ್ನ ಮುಖದ ಮೇಲೇ ಮಂದಹಾಸವೆಂಬ ಹೊನಲು ಬೆಳಕಿನ ಆಟ ಆಡ್ತಾ ಇರ್ತಾನೆ. ಬರೀ
ಸುಳ್ಳು ಬೊಗಳುವ ಆತ ಬೆಳಿಗ್ಗೆಯಿಂದ ರಾತ್ರಿವರೆಗೆ ಹಂಗೆ ಮಿಂಚ್ತಾ ಇರ್ತಾನೆ. ನಂತರ ಈ ರಾಜಕಾರಣಿಗಳು ಎಲ್ಲಿಗೆ ಹೋದ್ರು, ಯಾರ ಮನೆಯಲ್ಲಿ ಊಟ ಮಾಡಿದ್ರು, ಎಲ್ಲಿ ಮಲಕ್ಕೊಂಡ್ರು, ಯಾರಿಗೆ ಇಬ್ಬರು ಹೆಂಡಂದಿರು, ಹೀಗೆ ಇಂಥ ಗಾಸಿಪ್ ಗಳನ್ನು ಸುದ್ದಿ ಮಾಡೋದ್ರಲ್ಲಿ ನಮ್ಮ ಕಾಲ ಕಳೆದುಬಿಟ್ಟಿರುತ್ತೆ.
 
 
ಈ ಮಧ್ಯೆ ಅವರನ್ನು ಬೆತ್ತಲೆ ಮಾಡುವಂಥ ಒಳ್ಳೇ ಸುದ್ದಿಗಳನ್ನು ಕೂಡ ವರದಿಗಾರರು ಕೊಡ್ತಾರೆ. ವರದಿಗಾರನ  ಹಣೆಬರಹ ಚೆನ್ನಾಗಿದ್ದರೆ ಒಮ್ಮೊಮ್ಮೆ ಇಂಥ ಸುದ್ದಿಗಳು ಸಾಕಷ್ಟು ಹೈಲೈಟ್ ಆಗಿ ವೇವ್ಸ್ ಕ್ರಿಯೆಟ್ ಮಾಡುತ್ತವೆ.ಅವನೇನಾದರು ಸಿನಿಯರ್ಸ್  ಜೊತೆ ಕಿರಿಕ್ ಮಾಡ್ಕಂಡ್ನೋ ಅವನ ಕಥೆ ಮುಗಿದಂತೆ.ಆ ಸುದ್ದಿ ಕ್ಲಾಸಿಫೈಡ್ಸ್  ಥರ ಬಂದು ಇನ್ನೇನು ವರದಿಗಾರ ಮತ್ತೊಮ್ಮೆ ಇಂಥ ಸುದ್ದಿ ಮಾಡಬಾರದು ಎನ್ನುವಷ್ಟು ಮಟ್ಟಿಗೆ ಹತಾಶೆ ತಲುಪುತ್ತಾನೆ.ಇನ್ನು ಕೆಲವೊಮ್ಮೆ ಇಂಥಹ ಸುದ್ದಿಗಳು  ಪ್ರಸಾರ ಸಂಖ್ಯೆ, ಟಿ ಆರ್ ಪಿ ಎಂಬ ವ್ಯವಸ್ಥೆಯ ಮಧ್ಯೆ ಸತ್ತು ಸ್ವರ್ಗ ಸೇರುತ್ತವೆ. ನಾವೇ ದಿನಾ ನೋಡುತ್ತಿರುವಂತೆ  ಸ್ಕೂಪ ಸ್ಟೋರಿಗಳಿಗೆ ಹೆಚ್ಚು ಪ್ರಾಶಸ್ತ್ಯ ಸಿಗುತ್ತಿರೋದು ಗಮನಕ್ಕೆ ಬರುತ್ತದೆ. ಅವು ಎಂಥಹ ಸ್ಕೂಪು.
 
ಭಂಡ  ಗಂಡನ ವಿರುದ್ಧ ಸೆಟೆದೆದ್ದು ತನ್ನದೆಂಬ ಗೂಡು ಕಟ್ಟಿಕೊಳ್ಳೋಕೆ ಹೊರಟವಳ ಚಾರಿತ್ರ್ಯ, ಆತ್ಮವಿಶ್ವಾಸ ಎಲ್ಲವನ್ನೂ ಸಾಯಿಸಿ ಹೆಡೆಮೂರಿ ಕಟ್ಟುವಂಥ ಸ್ಕೂಪು. ಅವಳು ಚಟ್ಚ ಏರಿದ ಮೇಲೆ ನಮಗೆ ಖುಷಿಯಾಗಿಬಿಡುತ್ತದೆ. ಮುಂದೆ ಅದಕ್ಕೊಂದು ಪಾಲೋಅಫ್ ಶುರುವಾಗುತ್ತದೆ. ಆವಳು ಹಾಗೆ ಅವಳು ಹೀಗೆ. ಇಂಥ ಸುದ್ದಿ ಕೊಡುವ ಮೂಲಕ  ನಾವು ಇದೇ ಸುದ್ದಿ ಅಂಥ ಜನರಿಗೆ ಮನದಟ್ಟು ಮಾಡುತ್ತೇವೆ. ಇಂಡೈರೆಕ್ಟ್ ಲಿ  ನಾವು ಜನರಿಗೆ ಮೊಸ ಮಾಡ್ತಾ ಇರ್ತೇವೆ. ನಾವು ಎಂದಾದರೂ ಯೋಚನೆ ಮಾಡಿದ್ದೀವಾ?  ನಾವ್ಯಾಕೆ ಜನಜಾಗೃತಿ ಮೂಡಿಸುವಂಥ ಸುದ್ದಿ ಮಾಡುತ್ತಿಲ್ಲ. ನಾವ್ಯಾಕೆ ನಮ್ಮ ಹೆಣ್ಣುಮಕ್ಕಳು ತಮ್ಮ ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಳ್ಳುವುದರ ವಿರುದ್ಧ ಧ್ವನಿ ಎತ್ತಿ ಅವರನ್ನು ಬದುಕಿಸುವ ಕೆಲಸ ಮಾಡುತ್ತಿಲ್ಲ.. ನಮಗೇಕೆ ರೈತರ ಆತ್ಮಹತ್ಯೆ ಕಾಣುತ್ತಿಲ್ಲ. ನಮಗೇಕೆ ಲೇಬರ್ ವರ್ಗ ಕಂಡು ಬರುತ್ತಿಲ್ಲ. ಪಿ.ಸಾಯಿನಾಥ್ ಒಮ್ಮೆ ಭಾಷಣದಲ್ಲಿ ಹೇಳಿದ್ದು ನೆನಪಾಗಿ ನಮ್ಮ ಬಗ್ಗೆ ನಾವು ದಿನನಿತ್ಯ ಯಾವುದು ಸುದ್ದಿ ಅಂತ ತುಂಬುತ್ತಿದ್ದೆವೋ ಅವುಗಳ ಬಗ್ಗೆನೆ ಜಿಗುಪ್ಸೆ ಹುಟ್ಟುತ್ತದೆ. ಎಲ್ಲಾ  ಪತ್ರಿಕೆ,ಟಿ.ವಿ.ಗಳಲ್ಲಿ ವಿವಿಧ
ರಾಜಕೀಯ ಪಕ್ಷಗಳು, ಸಿನೇಮಾ,ಪ್ಯಾಶನ್, ನೈಟ್ ಪಾರ್ಟಿ ಹೀಗೆ ಎಲ್ಲದಕ್ಕೂ  ಬೀಟ್ ರಿಪೋರ್ಟರ್ ಗಳಿರುತ್ತಾರೆ. ರೈತ, ಕೃಷಿ.ಕಾರ್ಮಿಕ ಇವೆಲ್ಲಾ ರಿಪೋರ್ಟರ್ ರಹಿತ ಬೀಟ್ ಗಳಾಗಿ ಬಿಟ್ಟಿವೆ ಎಂಬುದನ್ನು ಅವರು ನಮಗೆ ಮನದಟ್ಟು ಮಾಡುತ್ತಾರೆ.ಅಂದರೆ ಈ ವರ್ಗಗಳು ಮಾಧ್ಯಮದವರ ಪಾಲಿಗೆ ಖಾತೆರಹಿತ ಮಂತ್ರಿಗಳು ಇದ್ದ ಹಾಗೆ.
 
ಅಂದು ಅವರು ಹೇಳಿದ ಮಾತುಗಳು ನನ್ನನ್ನು ಇನ್ನಿಲ್ಲದಂತೆ ಕಾಡಿದೆ. ಊಟ ಬಡಿಸಿಬಿಟ್ಟಿದ್ದೇವೆ. ಇದೇ ಊಟ ಅಂತ ಜನರಿಗೆ ಹೇಳಿಬಿಟ್ಟಾಗಿದೆ. ಜನರು ಕೂಡ ಇದೇ ಊಟ ಅಂತ ಊಟ ಮಾಡ್ತಾನೇ ಇದ್ದಾರೆ.  ಊಟ ಅಂದ್ರೆ ಇದೆ ಅಂತ ನಾವೇ ಕಲಿಸಿರುವಾಗ ಹಸಿವಾದಾಗ ಅದನ್ನೇ ತಾನೇ ಅವರು ಕೇಳೋದು. ಅವರಿಗೆ ಕೆಟ್ಟಕೆಟ್ಟ ಊಟ ಕೊಟ್ಟು ಅವರ ಅಪಟೈಟ್ ಹಾಳು ಮಾಡ್ತಾ ಇದ್ದೇವೆ ಅಂದುಕೊಂಡು ಭಯವಾಯ್ತು. ಏನೇ ಆಗಲಿ ಮೆನು ಚೆಂಜ್ ಆಗಲೇಬೇಕು. ಪರಿವರ್ತನೆಗೆ ಎಷ್ಟು ಕಾಲ ಬೇಕೋ ಗೊತ್ತಿಲ್ಲ. ಆದರೆ ಸದ್ಯದ ಮಟ್ಟಿಗೆ ಯಾವುದೇ ಕಾರಣಕ್ಕೂ ಬಸುರಿ ಬಾಣಂತನದ ಸುದ್ದಿ ಕೊಟ್ಟು
 ಜನರ ಟೇಸ್ಟ್ ಹಾಳುಮಾಡಬಾರದು ಎಂದು ನಿರ್ಧರಿಸಿದಾಗ ಸ್ವಲ್ಪ ನಿರಾಳ ಎನಿಸಿತು.
 
ಸುಮ್ಮನೆ ಕುಳಿತವಳು ಚಾನೆಲ್  ಚೆಂಜ್ಮಾಡತೊಡಗಿದೆ. ದೂರದರ್ಶನದಲ್ಲಿ ಅದೇ ಬ್ಯಾಲನ್ಸ್ಡ್ ಸುದ್ದಿಗಳು ಬರುತ್ತಿದ್ದವು.ಅದೇ ಹಳೇ ಮುಖ.ಸುದ್ದಿ ಓದುತ್ತಿರುವ ಹೆಂಗಸು ಮನೆಯಲೀ ಅದಾಗ ತಾನೆ ಗಂಡ, ಅತ್ತೆ ಜೊತೆ ಚೆನ್ನಾಗಿ ಜಗಳ ಮಾಡಿ ಸ್ಟುಡಿಯೋದಲ್ಲಿ ಬಂದು ಕುಳಿತುಕೊಂಡಂತಿತ್ತು. ಮತ್ತೊಂದು ಚಾನೆಲ್  ಹಳೇಹಳೇ ಸುದ್ದಿಗಳನ್ನು ಈಗ್ಗೆ ಆಗುವ ರೀತಿಯಲ್ಲಿ ಪ್ರಸಾರ ಮಾಡುತ್ತಿತ್ತು. ಇನ್ನೊಂದು  ಚಾನೆಲ್ ನಲ್ಲಿ ಒಬ್ಬರ ಲವ್ ಅಫೇರ್ ಬ್ರೇಕ್ ಆಗಿರೋ ಸುದ್ದಿ ಸ್ಕೂಪ್ ರೀತಿಯಲ್ಲಿ ಹಂಗೆ ಬರ್ತಾ ಇತ್ತು. ಮೋಸ ಹೋದವಳು  ಸ್ಟುಡಿಯೋದಲ್ಲಿ ಕೂತು ಒಂದೇ ಸಮ ಸಿಕ್ಕಿದ್ದೇ ಚಾನ್ಸು ಅಂತ ಬಿಟ್ಟು ಹೋದ ಪ್ರಿಯತಮನಿಗೆ ಶಾಪ ಹಾಕ್ತಾ ಇದ್ದಾಳೆ.ಒಂದು ಸಾರಿ ಕೇರ್ ಪುಲ್ ಆಗಿ ನೋಡಿದಾಗ ಈ ವಿಷಯವನ್ನಂತೂ ಆ ಚಾನೆಲ್ ರಾಷ್ಟ್ರೀಯ ವಿಕೋಪದ ರೀತಿಯಲ್ಲಿಯೇ ಪರಿಗಣಿಸಿ ಸಮರೋಪಾದಿಯಲ್ಲಿ ತನ್ನ ಕೆಲಸ ಆರಂಭಿಸಿದೆ ಅನ್ನಿಸಿತು. ಆಂಕರ್ ಪ್ರಶ್ನೆ ಕೇಳುತ್ತಿದ್ದಾನೆ- ನಿನ್ನ ಪ್ರಿಯಕರ ಬಿಟ್ಟು ಹೋದಾಗ ನಿಂಗೇನನ್ನಿಸ್ತು? . ಅವಳಿನ್ನೇನು ಹೇಳ್ಬೇಕು ನೋವಾಯ್ತು ಸರ್  ಅನ್ನುತ್ತಾಳೆ. ಸ್ವಲ್ಪ ಮುಂದಕ್ಕೆ ಹೋಗಿ ಅವ್ನು ಇನ್ನೊಂದು ಮದ್ವೆ ಹೆಂಗೆ ಆಗ್ತಾನೆ ಅಂತ ನಾನು ನೋಡ್ತೀನಿ ( ಸದ್ಯ ಅವಳ ಮುಡಿ ಬಿಗಿಯಾಗಿದೆ) ಅಂತಾಳೆ. ಅಲ್ಲಿಂದ ಆಂಕರ್ ಡಿಸ್ಟ್ರೀಕ್ಟ್ ರಿಪೋರ್ಟರ್ ಗೆ ಕನೆಕ್ಟ್ ಮಾಡ್ತಾನೆ. ಅವಳ ಪ್ರಿಯಕರ ಇದ್ದ ಊರದು. ಇನ್ ಪ್ಯಾಕ್ಟ್ ಅಲ್ಲಿಯ ರಿಪೋರ್ಟರ್  ಬ್ರೇಕ್ ಆಗಿರೋ ಸುದ್ದಿಗೂ ತನಗೂ ಏನೂ ಸಂಬಂಧ ಇಲ್ಲದವರ ಥರ ಇದ್ದಾನೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದಿದ್ದರೂ ನಿಮ್ಮಲ್ಲಿ ಹೇಚ್ಚಿನ ಮಾಹಿತಿ ಏನಿದೆ ಎಂದು ಆಂಕರ್  ಕೇಳಿದಾಗ ಏನಾದರೂ ಹೇಳಿಯೇ ತೀರಬೇಕು ಎಂದು ನಿರ್ಧರಿಸಿದ್ದಾನೆ.
 
ಹುಡುಗ-ಹುಡುಗಿಗೆ ತುಂಬಾ ದಿನದಿಂದ ಸ್ನೇಹ ಇತ್ತು. ಅದು ಮುಂದೆ ಪ್ರೀತಿಗೆ ತಿರಗ್ತು. ಅವರಿಬ್ಬರೂ ಒಟ್ಟಿಗೆ ಜಾನೆ ತು ಯಾ ಜಾನೆನಾ ಸಿನೇಮಾ ನೋಡಿದ್ರು, ಚಾಟ್ ತಿಂದ್ರು ಹೀಗೆ ಸಾಗುತ್ತದೆ ಅವನ ಲೈವ್ ರಿಪೋರ್ಟಿಂಗ್. ಚಾನೆಲ್ ಚೆಂಜ್ ಮಾಡಿದೆ. ಯಾವುದೋ ಒಂದು ಸಿನೇಮಾ ಬಿಡುಗಡೆಯಾಗಿದೆ. ಅದು ಹೆಡ್ ಲೈನ್ ಐಟಮ್ ಆಗಿ ಪ್ರಸಾರವಾಗುತ್ತಿದೆ. ಕೊನೆಗೆ  ಸ್ವಿಚ್ ಆಫ್ ಮಾಡಿ ಮೂರ್ನಾಲ್ಕು  ಪತ್ರಿಕೆಗಳನ್ನು ತಿರುವಿ ಹಾಕತೊಡಗಿದೆ.ನೆಮ್ಮದಿ ಎನಿಸಿತು. ಎಲ್ಲೋ ಒಂದು ಕಡೆ ಜೀವಂತಿಕೆಯನ್ನು  ಉಳಿಸಿಕೊಂಡಿರುವ  ಆ  ಪತ್ರಿಕೆಗಳ ಬಗ್ಗೆ ಖುಶಿಯಾಯ್ತು.  24 ಘಂಟೆ ಏನಾದ್ರೂ  ತುಂಬಲೇಬೇಕು ಎನ್ನುವ ಕಾರಣಕ್ಕೆ  ಪಕ್ಕದ ಮನೆ ಹುಡುಗಿ ಓಡಿಹೋಗುವಾಗ, ಅವಳಿ ಜವಳಿ ಮಕ್ಕಳು ಹುಟ್ಟಿದ್ರೆ ಅದನ್ನು ಟೆಲಿಕಾಸ್ಟ್ ಮಾಡಬೇಕಾದ ಅನಿವಾರ್ಯತೆ ಎದುರಾಗಿರುವುದು ಸತ್ಯ. ಆದರೆ ಎಲ್ಲಿಯವರೆಗೆ? ಜನರನ್ನು ತಲುಪಬೇಕಾ ನಾವು ಜನರನ್ನು ಎಜ್ಯುಕೇಟ್ ಮಾಡೋ ಬದಲು ಅವರ ಟೇಸ್ಟ್ ಹಾಳುಮಾಡುತ್ತಿದ್ದೇವೆ ಅನ್ನಿಸಿಯೇ ಭಯವಾಯ್ತು. ಸರಕಾರದ ವೈಪಲ್ಯಗಳನ್ನು ಬಯಲು ಮಾಡುವ ಮೂಲಕ ,ಜನರ ಹಕ್ಕುಗಳನ್ನು ಸ್ಪಷ್ಟವಾಗಿ ಮನದಟ್ಟು ಮಾಡಿಕೊಡಬೇಕಾದ  ನಾವುಗಳು ಹೋಗುತ್ತಿರುವುದೆಲ್ಲಿಗೆ? ಈ ಶತಮಾನದ ನೀತಿಗಳು, ವಿಚಾರಧಾರೆಗಳನ್ನಿಟ್ಟುಕೊಂಡು  ಮುಂದಿನ ಶತಮಾನ ಎದುರಿಸೋದು ಕಷ್ಟ ಎಂದು  ಬರಾಕ್ ಒಬಾಮ ಹೇಳುವಾಗ ಖುಷಿ ಎನಿಸುತ್ತದೆ. ನಮ್ಮ ರಾಜಕಾರಣಿಗಳಿಂದ ಇಂಥದ್ದನ್ನು ನಿರೀಕ್ಷಿಸೋದು ಕಷ್ಟ.  ಆದರೆ ಜವಾಬ್ದಾರಿಯುತ ಸ್ಥಾನದಲ್ಲಿರೋ ಪತ್ರಕರ್ತರ ಮೇಲೆ ಬೆಟ್ಟದಷ್ಟು ಹೊಣೆಗಾರಿಕೆ ಇದೆ.ಅದರಲ್ಲೂ ಸಾಕಷ್ಟು ಉತ್ಸಾಹ, ಆತ್ಮವಿಶ್ವಾಸ, ಬುದ್ಧಿಮತ್ತೆ ಮೇಳೈಸಿರುವ ಯುವ ಪೀಳಿಗೆಯ ಪತ್ರಕರ್ತರು ಸಿನಿಕರಾಗದೆ ಹೆಚ್ಹು ಸೆನ್ಸಿಟಿವ್ ಆಗೋದು ಒಳ್ಳೆದೇನೋ.ನನ್ನನ್ನು ಸೇರಿ ನಾವೆಲ್ಲರೂ ಒಮ್ಮೆ ಈ ಬಗ್ಗೆ ಗಂಭಿರವಾಗಿ ಚಿಂತಿಸೋಣ ಆಲ್ವ?..

‍ಲೇಖಕರು avadhi

September 4, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

7 ಪ್ರತಿಕ್ರಿಯೆಗಳು

 1. sunaath

  ದುಡ್ಡು ಮಾಡಿಕೊಳ್ಳಬೇಕಲ್ವಾ? ಜನರ ತಟ್ಟೇಲಿ ಸಗಣಿ ಇಟ್ಟು ಇದೇ ಮೃಷ್ಟಾನ್ನ ಅಂತ ಹೇಳೋದೇ ಈಗ ಚಾಲ್ತಿಯಲ್ಲಿರೋದು. ಆದರೆ ಕೆಲವಾದರೂ ಒಳ್ಳೇ ಪತ್ರಿಕೆಗಳಿವೆ ಅನ್ನೋದೆ ಒಂದು ಸಮಾಧಾನ.

  ಪ್ರತಿಕ್ರಿಯೆ
 2. Rajesh

  ನಿಮ್ಮ ಬರವಣಿಗೆ ತುಂಬಾ ಇಷ್ಟ ಆಯಿತು . ದಟ್ಸ್ ಕನ್ನಡದಲ್ಲಿ ಬಂದ “ಗಗನಸಖಿ” ನೀವೇನಾ?

  ಪ್ರತಿಕ್ರಿಯೆ
 3. ಹೇಮಶ್ರೀ

  ಇನ್ನೂ ಹತ್ತಾರು ಚಾನೆಲ್ ಗಳು ಬಂದು ಎಲ್ಲಾ ಇದೇ ರೀತಿಯ ಹಳಸಲು ತಿನ್ನಲು ನೀಡೋವಾಗ ಜನರು ತನ್ನಿಂದ ತಾನೇ ಹೊಸತನ್ನು ಇಷ್ಟಪಟ್ಟೇ ಪಡುತ್ತಾರೆ.
  ಹೊಸತನ್ನು ನೀಡೋದಕ್ಕೆ ಇದು ಸರಿಯಾದ ಸಮಯ ಅಂತೇನು ಕಾಲ ಹೇಳಿಬರೋದಿಲ್ಲ.we should make it happen.we,the people and also the media.

  ಪ್ರತಿಕ್ರಿಯೆ
 4. ಶ್ರೀನಿವಾಸಗೌಡ

  ಈಗಿರುವ ಚಾನಲ್ ಗಳ ಬಗ್ಗೆ ನೆನೆಸಿಕೊಂಡ್ರೇನೆ ಭಯ ಆಗುತ್ತಪ್ಪಾ… ಎಲ್ಲಿ ಯಾವಾಗ
  ನನ್ನ ಮನೆಯ ಖಾಸಗಿ ವಿಷಯ ನಮ್ಮ ಚಾನಲ್್ಗಳ ಭಾಯಲ್ಲಿ ರಾಷ್ಠ್ರೀಯ
  ಪ್ರಾಮುಖ್ಯತೆಯ ಸುದ್ದಿ ಆಗಿಬಿಡುತ್ತೋ ಅಂತ,
  ಯಾವುದಕ್ಕೂ ನಾವೆಲ್ಲ ಎಚ್ಚರಿಕೆಯಿಂದ ಇರೋದು ಒಳ್ಳೇದು.

  ಪ್ರತಿಕ್ರಿಯೆ
 5. subramani

  ನವೋಮಿ ನೀವು ಕೊನೆಗೆ ಬರಾಕ್ ಒಬಮಾನ ಭಾಷಣ ತುಣಕುವೊಂದನ್ನು ಕೋಟ್
  ಮಾಡಿರುವುದು ಲೇಖನದ ವ್ಯಾಲೂ ಪಾಯಿಂಟ್.
  ಪ್ರಬುದ್ಧರಾಗಿ,ಸೂಕ್ಷ್ಮವಾಗಿ,ಒಮ್ಮೊಮ್ಮೆ ಎಳೆಸಾಗಿ ಹೇಳೋ ನಿಮ್ಮ ಸೈಲ್
  ಮೊದಲಿಂದಲೂ ಚೆನ್ನಾಗಿದೆ.
  ಇದು ಅರ್ಥವಾದ ಅಮೇಲೆ ನಿಮ್ಮ ಬಗ್ಗೆ ನನ್ನ ಗ್ರಹಿಕೆ ಬೇರೆ ಆಗಿದೆ.

  ಪ್ರತಿಕ್ರಿಯೆ
 6. jodidar

  Nimma praamaanikathe nange thumba ishta.Aathmaavalokana ondu aarogyakara kriye.Keep it up miss bangalore campbell

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: