ಅವರು ಅತ್ರಿ, ಅದು ಅತ್ರಿ ಬುಕ್ ಸೆಂಟರ್

ಜರ್ಮನಿಯಿಂದ ಬಿ ಎ ವಿವೇಕ ರೈ ನಿನ್ನೆ ,ಶುಕ್ರವಾರ ಜನವರಿ ೨೦ , ನಮ್ಮ ಇಂಡಾಲಜಿ ವಿಭಾಗದಲ್ಲಿ ಕೆಲಸ ಮುಗಿಸಿ ಹೊರಡುವ ಮೊದಲು ಸಂಜೆ ಐದೂವರೆಗೆ (ಜರ್ಮನ್ ಸಮಯ ) ನನ್ನ ಇಮೈಲ್ ತೆರೆದು ನೋಡಿದಾಗ ಕಂಡದ್ದು ಅಶೋಕವರ್ಧನರ ಸಂದೇಶ ಮತ್ತು ‘ಅತ್ರಿ ಬುಕ್ ಸೆಂಟರ್ ‘ಬ್ಲಾಗ್ ಕೊಂಡಿ.ಜನವರಿ ೧೪ರ ಅವರ ಬ್ಲಾಗ್ ಬರಹದಲ್ಲಿ ದೇಶಕಾಲದ ಬಗ್ಗೆ ಬರೆಯುತ್ತಾ ಕೊನೆಯಲ್ಲಿ ಒಂದು ಸೂಚನೆ ದೊರೆತಿತ್ತು.ಮತ್ತೆ ಅವರ ಮಗ ಅಭಯಸಿಂಹ ‘ಫೆಸ್ ಬುಕ್ ‘ನಲ್ಲಿ ‘ಹಿಂದೂ ‘ಪತ್ರಿಕೆಯ ಬರಹ ಹಾಕಿದ್ದನ್ನು ಗಮನಿಸಿದ್ದೆ.ಆದರೆ ಅಲ್ಲಿ ‘ಲೈಕ್’ ಎಂದು ಗುಂಡಿ ಒತ್ತಿದರೆ ಯಾವುದಕ್ಕೆ ಎಂಬ ಗೊಂದಲ ಇರುತ್ತದೆ ಎಂದು ಸುಮ್ಮನಿದ್ದೆ.ಆದರೆ ಈಗ ನಿನ್ನೆಯ ಅಶೋಕವರ್ಧನ ಅವರ ಬ್ಲಾಗ್ ಬರಹ ‘ ಅತ್ರಿ ಬುಕ್ ಸೆಂಟರ್ ಮುಚ್ಚಿ, ವಾನಪ್ರಸ್ಥಕ್ಕೆ !’ ಎಲ್ಲವನ್ನು ಸ್ಫಟಿಕ ಸತ್ಯವನ್ನಾಗಿಸಿತು. ‘ಅತ್ರಿ ಬುಕ್ ಸೆಂಟರ್ ‘ ಇದೇ ಮಾರ್ಚ್ ೩೧ ಕ್ಕೆ ಮುಚ್ಚುತ್ತದೆ.ಇದಕ್ಕೆ ತತ್ ಕ್ಷಣ ಪ್ರತಿಕ್ರಿಯೆ ಕೊಡುವುದು ಬಹಳ ಕಷ್ಟ. ಅವರ ಬ್ಲಾಗ್ ಬರಹದ ಒಂದು ಮಾತು ನನ್ನನ್ನು ಬಹಳವಾಗಿ ಕಲಕಿದ್ದು ಮತ್ತು ಅನುಭವವೇದ್ಯವಾದದ್ದು : ” ಬ್ರಹ್ಮಕಪಾಲದ ನೋವು ಅನುಭವಿಸಿ ಈಶ್ವರನಂತೆ ನಟಿಸುವ ಮೇಳದ ಯಜಮಾನನಿಗೆ ( ಕೆರೆಮನೆ ಶಂಭು ಹೆಗಡೆಯವರನ್ನು ಸ್ಮರಿಸಿ ) ಸ್ಫೂರ್ತಿ ಭಾವುಕ ಪ್ರೇಕ್ಷಕ ಎಸೆದ ನಾಣ್ಯಕ್ಕೆ ಹುಡಿಯಾದ ಹ್ಯಾಲೋಜನ್ ಲೈಟ್ ಎಂಬಂತಿದೆ ನನ್ನ ಸ್ಥಿತಿ .” ಬ್ರಹ್ಮಕಪಾಲದ ನೋವನ್ನು ಸಾಕಷ್ಟು ಅನುಭವಿಸಿದ ನನಗೆ ,ಅಶೋಕವರ್ಧನರ ಈ ನಿರ್ಧಾರ ಕೇವಲ ವ್ಯಾವಹಾರಿಕ ಅಲ್ಲ,ಅದು ತಾತ್ವಿಕ ಹಾಗೂ ವ್ಯವಸ್ಥೆಯೊಡನೆ ರಾಜಿ ಮಾಡಿಕೊಳ್ಳದ ಆತ್ಮವಿಶ್ವಾಸದ ನಿಲುವು ಎನ್ನುವುದು ಸರಿಯಾಗಿ ಮನವರಿಕೆಯಾಗುತ್ತದೆ.ನಮಗೆ ಬೇಕಾದಾಗ ಬಿಡುವಾದಾಗ ಪುಸ್ತಕವೊಂದನ್ನು ಪಡೆಯಲು ವಾರದ ಆರು ದಿನಗಳಲ್ಲಿ ಪ್ರತೀ ದಿನ ಹನ್ನೆರಡು ಗಂಟೆಗಳ ಕಾಲ ೩೬ ವರ್ಷ ಕಾಲ ಅದನ್ನು ಮಾಡುತ್ತಾ ಬಂದವರು ಇನ್ನೂ ಹಾಗೆಯೇ ದೊರೆಯಬೇಕು ಎಂದು ಬಯಸುವುದು ‘ಗ್ರಾಹಕತನ ‘ದ ಕೇವಲ ಸಂಬಂಧ ಅಥವಾ ಕೇವಲ ಭಾವುಕತನದ ಅನುಬಂಧ ಮಾತ್ರ ಆಗುತ್ತದೆ.ತಮ್ಮ ಬ್ಲಾಗ್ ಬರಹದ ಕೊನೆಯ ಭಾಗದಲ್ಲಿ ಅಶೋಕವರ್ಧನರು ತಮ್ಮ ಅತೃಪ್ತಿಯ ಮತ್ತು ಸಂತೃಪ್ತಿಯ ಕಾರಣಗಳನ್ನು ಸ್ಪಷ್ಟಮಾಡಿದ್ದಾರೆ.ಅವನ್ನು ಅರ್ಥಮಾಡಿಕೊಳ್ಳುವುದು ಮತ್ತು ಅವರ ಭಾವನೆಗಳನ್ನು ಗೌರವಿಸುವುದು ಅವರನ್ನು ಸರಿಯಾಗಿ ಬಲ್ಲವರಿಗೆ ಕಷ್ಟದ ಕೆಲಸ ಅಲ್ಲ. ಇಷ್ಟೆಲ್ಲಾ ನಮ್ಮ ನಮ್ಮ ಮನವನ್ನು ಸಂತೈಸಿಕೊಳ್ಳುವ ಮಾತುಗಳನ್ನು ಹೇಳಿಕೊಂಡರೂ ,ಮಂಗಳೂರಲ್ಲಿ ‘ಅತ್ರಿ ಬುಕ್ ಸೆಂಟರ್ ‘ ನಮ್ಮೆಲ್ಲರ ಬದುಕಿನ ಬೇರೆ ಬೇರೆ ಘಟ್ಟಗಳಲ್ಲಿ ನಮ್ಮ ಬೆಳವಣಿಗೆಯ ಭಾಗವಾಗಿ ನಮ್ಮನ್ನು ರೂಪಿಸಿದ್ದನ್ನು ಮರೆಯಲು ಸಾಧ್ಯ ಇಲ್ಲ.ಮೈಸೂರು ವಿಶ್ವವಿದ್ಯಾನಿಲಯದ ಮಂಗಳೂರು ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದಲ್ಲಿ ೧೯೭೦ರಲ್ಲಿ ಉಪನ್ಯಾಸಕನಾಗಿ ನಾನು ಸೇರಿದಾಗ ,ಮಂಗಳೂರಿನಲ್ಲಿ ಕನ್ನಡ ಪುಸ್ತಕಗಳ ಸರಿಯಾದ ಮಳಿಗೆ ಇರಲಿಲ್ಲ.’ಪ್ರಭಾತ ಬುಕ್ ಸ್ಟಾಲ್’ ಎಂಬ ಅಂಗಡಿ ಇತ್ತು.ಆದರೆ ನನಗೆ ಬೇಕಾದ ಪುಸ್ತಕಗಳು ಅಲ್ಲಿ ಸಿಗುತ್ತಿರಲಿಲ್ಲ.ಆಗ ನಾನು ನನಗೆ ಮತ್ತು ನಮ್ಮ ಕನ್ನಡ ವಿಭಾಗದ ಗ್ರಂಥಾಲಯಕ್ಕೆ ಬೇಕಾದ ಪುಸ್ತಕಗಳಿಗಾಗಿ ಅವಲಂಬಿಸುತ್ತಿದ್ದದ್ದು ಮೈಸೂರಿನ ಗೀತಾ ಬುಕ್ ಹೌಸ್ ನ್ನು.ಯಾವಾಗಲಾದರೊಮ್ಮೆ ಮೈಸೂರಿಗೆ ಹೋದಾಗ ಗೀತಾ ಹೌಸಿಗೆ ಹೋಗಿ ಅಲ್ಲಿ ಸಿಗುತ್ತಿದ್ದ ಪುಸ್ತಕಗಳನ್ನು ತರುತ್ತಿದ್ದೆ.ಕೆಲವೊಮ್ಮೆ ಅವರಿಗೆ ಪತ್ರ ಬರೆದು , ಅಂಚೆಯಲ್ಲಿ ವಿಪಿಪಿ ಮೂಲಕ ತರಿಸುತ್ತಿದ್ದೆ.ಆಗ ನನ್ನ ವೈಯಕ್ತಿಕ ಅಗತ್ಯ ಮತ್ತು ವಿಭಾಗದ ಅವಶ್ಯಕತೆ -ಎರಡಕ್ಕೂ ದೂರದ ಮೈಸೂರೇ ನಮ್ಮ ಸರಸ್ವತಿ ಭಂಡಾರ ಆಗಿತ್ತು.ಅನೇಕ ಬಾರಿ ನಾವು ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪುಸ್ತಕಗಳು ಇಲ್ಲದೆ ಕಷ್ಟಪಟ್ಟ ದಿನಗಳು ನೆನಪಿಗೆ ಬರುತ್ತವೆ. ಪುಸ್ತಕ ಬಡತನದ ಇಂತಹ ಅರಿವಿನ ಅರಕೆಯ ದಿನಗಳಲ್ಲಿ ಮಂಗಳೂರಿಗೆ ಮೈಸೂರಿನಿಂದ ಬಂದು ಮುಟ್ಟಿದ ಸಂಭ್ರಮದ ಸುದ್ದಿ ಎಂದರೆ ಮಂಗಳೂರಲ್ಲಿ ಒಂದು ಪುಸ್ತಕ ಮಳಿಗೆ ತೆರೆಯುತ್ತದಂತೆ ಎಂದು.ವಿಜ್ಞಾನ ಬರಹಗಾರ ,ಗ್ರಹ-ನಕ್ಷತ್ರಗಳ ನಿಜವಾದ ಗ್ರಹಗತಿ ತೋರಿಸಬಲ್ಲ ಪ್ರೊ.ಜಿಟಿ ನಾರಾಯಣ ರಾಯರು (ಜಿಟಿಎನ್ ) ಈ ಸಾಹಿತ್ಯಕ ಸಾಹಸ ಮಾಡುತ್ತಾರಂತೆ ,ಇಂಗ್ಲಿಶ್ ಎಂ ಎ ಮಾಡಿದ ಅವರ ಮಗ ( ಹೆಸರು ಆಗ ಗೊತ್ತಿರಲಿಲ್ಲ ) ನಿಗೆ ಅದರ ಹೊಣೆಗಾರಿಕೆ ಕೊಡುತ್ತಾರಂತೆ ,ಮೈಸೂರು ಬೆಂಗಳೂರು ಕಡೆ ಸಿಗುವ ಎಲ್ಲ ಪುಸ್ತಕಗಳು ಈ ಅಂಗಡಿಯಲ್ಲಿ ದೊರೆಯುತ್ತವಂತೆ , ಬಲ್ಮಟದಲ್ಲಿ ಜ್ಯೋತಿ ಸರ್ಕಲ್ ಹತ್ತಿರ ಈ ಪುಸ್ತಕದ ಅಂಗಡಿ ಇರುತ್ತದಂತೆ -ಹೀಗೆ ಸಾಹಿತ್ಯಕ ಶೈಕ್ಷಣಿಕ ವಲಯದಲ್ಲಿ ಈ ಸುದ್ದಿ ಮಿಂಚಿನಂತೆ ಹರಡಿತು.ಜಿಟಿಎನ್ ಅವರನ್ನು ಹಿಂದೆ ಕಂಡಿದ್ದೆ,ಅವರ ಉಪನ್ಯಾಸಗಳನ್ನು ಕೇಳಿದ್ದೆ.ಮಹಡಿಗಳ ತಾರಸಿಗೆ ಕರೆದುಕೊಂಡು ಹೋಗಿ , ತಮ್ಮ ಮಕ್ಕಳೋ ಎಂಬಂತೆ ನಕ್ಷತ್ರಗಳನ್ನು ಅವರು ಗುರುತಿಸಿ ಪರಿಚಯಿಸುತ್ತಿದ್ದರು. ಇಸವಿ ತಿಂಗಳು ದಿನಾಂಕ ನೆನಪಿಲ್ಲ.೧೯೭೫ ಇರಬೇಕು.ಮಂಗಳೂರಿನ ಬಲ್ಮಟದಲ್ಲಿ ‘ಅತ್ರಿ ಬುಕ್ ಸೆಂಟರ್ ‘ ಹೆಸರಿನ ಪುಸ್ತಕದ ಅಂಗಡಿ ತೆರೆಯಿತು.ನಾನು ಮೊದಲಬಾರಿ ಒಳಗೆ ಹೋದೆ.ಜಿಟಿಎನ್ ಅಂಗಡಿಯಲ್ಲಿ ಕುಳಿತಿದ್ದರು.ನನ್ನ ಪರಿಚಯ ಹೇಳಿಕೊಂಡೆ.” ಓಹೋ ,ಚೆನ್ನಾಗಿ ಗೊತ್ತು.ಪರಮೇಶ್ವರ ಭಟ್ಟರ ಶಿಷ್ಯ .ಮಂಗಳಗಂಗೊತ್ರಿಯ ಕನ್ನಡವಿಭಾಗದ ‘ಪಲಚಂವಿ’ಯ ವಿವೇಕ ರೈ.( ನಾವು ಆಗ ಕನ್ನಡವಿಭಾಗದ ನಾಲ್ಕು ಮಂದಿ ಅಧ್ಯಾಪಕರು ನಮ್ಮ ಹೆಸರುಗಳ ಮೊದಲ ಅಕ್ಷರಗಳನ್ನು -ಪರಮೇಶ್ವರ ಭಟ್ಟ, ಲಕ್ಕಪ್ಪ ಗೌಡ,ಚಂದ್ರಶೇಖರ ಐತಾಳ,ವಿವೇಕ ರೈ -ಸೇರಿಸಿ ನಮ್ಮದೇ ಒಂದು ಪ್ರಕಾಶನ-’ಪಲಚಂವಿ’- ಆರಂಭಿಸಿದ್ದೆವು.)ನಿಮ್ಮ ಲೇಖನ ಓದಿದ್ದೇನೆ. ಬನ್ನಿ ಬನ್ನಿ ,ನಿಮ್ಮದೇ ಪುಸ್ತಕದ ಅಂಗಡಿ.ಇಲ್ಲಿ ಪುಸ್ತಕ ಕೊಳ್ಳಲು ಮಾತ್ರ ಅಲ್ಲ, ಪುಸ್ತಕ ನೋಡಲು ಕೂಡ ನೀವೆಲ್ಲ ಬರಬೇಕು.ಇದು ಸಾಹಿತ್ಯಾಸಕ್ತರ ಮನೆ ” ಹಿರಿಯರಾದ ಜಿಟಿಎನ್ ಮುಂದೆ ಸಂಕೋಚದಿಂದ ಏನು ಹೇಳಿದೆ ಎಂದು ಈಗ ನೆನಪಿಲ್ಲ. ಮುಂದಿನ ಬಾರಿ ‘ಅತ್ರಿ ಬುಕ್ ಸೆಂಟರ್’ ಗೆ ಹೋದಾಗ ಅಲ್ಲಿ ಒಬ್ಬ ತರುಣ ಕುಳಿತಿದ್ದರು.ಜಿಟಿಎನ್ ಮಗ ಇರಬಹುದು ಅಂದುಕೊಂಡೆ.ಅವರೇ ಮಾತಾಡಿದರು :”ನಾನು ಅಶೋಕವರ್ಧನ .ಬನ್ನಿ ,ಏನು ಬೇಕು ಹೇಳಿ.” ಕೆಲವೇ ಪದಗಳು ,ನೇರ ಮಾತು.ಆ ದಿನ ಅಂಗಡಿಯ ಒಳಗೆ ಹೋಗಿ ಸ್ವಲ್ಪ ಹೊತ್ತು ಪುಸ್ತಕಗಳನ್ನು ನೋಡಿದೆ.ಯಾವ ಪುಸ್ತಕ ತೆಗೆದುಕೊಂಡೆ ಎಂದು ನೆನಪಿಲ್ಲ.ಮುಂದೆ ಅತ್ರಿಗೆ ಹೋಗುವುದು ಒಂದು ಅಭ್ಯಾಸ ಆಯಿತು.ಪುಸ್ತಕಗಳನ್ನು ನೋಡಲು ಹೋಗುವುದು ಒಂದು ಹವ್ಯಾಸ ಆಯಿತು.ನನ್ನ ವೈಯಕ್ತಿಕ ಓದಿನ ಹವ್ಯಾಸವನ್ನು ತಣಿಸಿದ್ದು, ನನ್ನ ಬೌದ್ಧಿಕ ಬೆಳವಣಿಗೆಯನ್ನು ಸಾಧ್ಯವಾಗಿಸಿದ್ದು,ಅದ್ಯಾಪಕನಾಗಿ ಸರಿಯಾದ ಪುಸ್ತಕಗಳನ್ನು ಓದಿಕೊಂಡು ಆತ್ಮತೃಪ್ತಿ ಮತ್ತು ವಿದ್ಯಾರ್ಥಿಗಳ ಮೆಚ್ಚುಗೆ ಪಡೆದದ್ದು -ಇದರ ಮುಖ್ಯ ಪಾಲು ‘ಅತ್ರಿ’ ಒದಗಿಸಿದ ಪುಸ್ತಕಗಳಿಗೆ ಸಲ್ಲುತ್ತದೆ.ನಾನು ಅನೇಕ ಬಾರಿ ಯೋಚಿಸುತ್ತೇನೆ -ಒಂದು ವೇಳೆ ಅತ್ರಿಯಂತಹ ಪುಸ್ತಕ ಮಳಿಗೆ ಮಂಗಳೂರಲ್ಲಿ ಇರದಿರುತ್ತಿದ್ದರೆ ,ವಿಶ್ವವಿದ್ಯಾನಿಲಯದಲ್ಲಿ ಇದ್ದೂ ನಾನು ಏನಾಗುತ್ತಿದ್ದೆ ಎಂದು.ಯಾಕೆಂದರೆ ನನ್ನ ಗಮನಕ್ಕೆ ಬಂದಹಾಗೆ ಮಂಗಳೂರು ಕಳೆದ ೩೬ ವರ್ಷಗಳಲ್ಲಿ ಅತ್ರಿಯ ಸಮೀಪ ಬರುವ ಇನ್ನೊಂದು ಪುಸ್ತಕ ಅಂಗಡಿಯನ್ನು ಹೊಂದಿಲ್ಲ.ಜೊತೆಗೆ ಮಂಗಳೂರು ವೈಚಾರಿಕವಾಗಿ ಕೂಡಾ ಬಡವಾಗುತ್ತಿದೆ .ಅತ್ರಿಯ ಮುಚ್ಚುವಿಕೆ ಒಂದು ಅರ್ಥದಲ್ಲಿ ಸಾಂಕೇತಿಕವಾಗಿ ಮಂಗಳೂರಿನ ‘ಸಾಂಸ್ಕೃತಿಕ ಬಡತನ’ದ ಅಭಿವ್ಯಕ್ತಿ ಕೂಡಾ ಹೌದು. ಅತ್ರಿ ಬುಕ್ ಸೆಂಟರ್ ಮತ್ತು ಅಶೋಕವರ್ಧನ ಸಂಬಂಧ ಅವಿನಾಭಾವದ್ದು.ವ್ಯವಹಾರ /ವ್ಯಾಪಾರ ಎಂಬ ಉದ್ಯಮದ ಜಗತ್ತಿನಲ್ಲಿ ೩೬ ವರ್ಷಗಳ ಕಾಲ ಇದ್ದುಕೊಂಡು ,ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಪ್ರಾಮಾಣಿಕತೆ ,ಬದ್ಧತೆ ಮತ್ತು ವೈಚಾರಿಕತೆಯನ್ನು ಪೂರ್ಣಪ್ರಮಾಣದಲ್ಲಿ ಉಳಿಸಿಕೊಂಡುಬಂದ ಅಶೋಕವರ್ಧನರ ಜೊತೆಗೆ ಇನ್ನೊಂದು ಹೆಸರನ್ನು ಹೇಳಲು ನನಗೆ ಸಾಧ್ಯ ಆಗುತ್ತಿಲ್ಲ. ತಮ್ಮ ಅಂಗಡಿಯಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಪುಸ್ತಕಗಳನ್ನು ಕೊಡುವುದನ್ನು ನಿಲ್ಲಿಸುವುದರಿಂದ ತೊಡಗಿ ,ಸ್ಟೇಷನರಿ ಜ್ಯೋತಿಷ್ಯ ಗೈಡ್ ಗಳಂತಹ ‘ಅಸಾಹಿತ್ಯ ‘ಗಳನ್ನು ಒಳಗೆ ಸೇರಿಸಿಕೊಳ್ಳದಿರುವ ನಿಲುವಿನ ಸಹಿತ ,ಸಗಟು ಖರೀದಿ ವ್ಯವಹಾರದಿಂದ ದೂರ ಉಳಿಯುವುದರ ಜೊತೆಗೆ ಇನ್ನು ಅನೇಕ ಗಟ್ಟಿತನಗಳಿಂದ , ಮಾತುಗಳ ಡಂಗುರ ಸಾರಿಕೊಳ್ಳದೆ , ಸ್ನೇಹಜೀವಿಯಾಗಿ ಸಹಜ ಮನುಷ್ಯರಂತೆ ಕಾಣಿಸಿಕೊಂಡವರು ಅಶೋಕವರ್ಧನ. ನಾನು ಮಂಗಳೂರಿನಲ್ಲಿ ಇದ್ದ ಅವಧಿಯಲ್ಲಿ ,೨೦೦೦ ದವರೆಗೆ ಮಂಗಳೂರು ವಿವಿಯ ಆವರಣ ಮಂಗಳಗಂಗೋತ್ರಿ ಇರುವ ಕೊಣಾಜೆಗೆ ಸಿಟಿಬಸ್ಸಿನಲ್ಲಿ ಹೋಗುತ್ತಿದ್ದೆ.ಆಗ ಜ್ಯೋತಿ ಸರ್ಕಲ್ ಗೆ ಬಂದು ಬಸ್ ಹಿಡಿಯಲು ಬಂದಾಗ ಅತ್ರಿ ಬುಕ್ ಸೆಂಟರ್ ನನ್ನ ಕಾಯುವ ತಾಣ ಆಗಿತ್ತು.ಸುಮ್ಮನೆ ಪುಸ್ತಕ ನೋಡುತ್ತಾ ಕಾಲ ಕಳೆಯುತ್ತಿದ್ದೆ.ಮಳೆ ಬಂದರಂತೂ ಅತ್ರಿಯೇ ನನಗೆ ಆಶ್ರಯ .ನಾನು ಬರೆದು ನಾನೇ ಪ್ರಕಟಿಸಿದ ಆರಂಭದ ಕೆಲವು ಪುಸ್ತಕಗಳನ್ನು ಅತ್ರಿ ಬುಕ್ ಸೆಂಟರ್ ಗೆ ಕೊಂಡುಹೋಗಿ ಕೊಟ್ಟಾಗ ಅಶೋಕವರ್ಧನ ಅವರು ಹತ್ತು ಪುಸ್ತಕಗಳನ್ನು ಕೊಂಡುಕೊಂಡು ಆಗಲೇ ಪುಸ್ತಕಗಳ ಹಣ ಕೊಟ್ಟಾಗ ಆಶ್ಚರ್ಯ ಮತ್ತು ಗಾಬರಿ.ಪುಸ್ತಕ ಮಾರಾಟ ಆಗುವ ಮೊದಲು ಹಣ ಕೊಡುವುದನ್ನು ನಾನು ಆವರೆಗೆ ನೋಡಿರಲಿಲ್ಲ.ಬೆಂಗಳೂರಿನ ಕೆಲವು ದೊಡ್ಡ ಮಳಿಗೆಯವರು ನನ್ನ ಪುಸ್ತಕ ಮಾರಾಟ ಆದ ಬಳಿಕವೂ ಹಣ ಕೊಡದ ನಿದರ್ಶನಗಳು ಸಾಕಷ್ಟು ಇವೆ.ಅಶೋಕವರ್ಧನರು ನಿಗದಿತವಾಗಿ ತಮ್ಮ ಅಂಗಡಿಯಲ್ಲಿ ಪುಸ್ತಕ ಕೊಳ್ಳುವವರಿಗೆ ಹತ್ತು ಶೇಕಡಾ ರಿಯಾಯತಿ ಕೊಡುತ್ತಿದ್ದರು.ಅದು ‘ದರ ಕಡಿತ’ ಅಲ್ಲ, ವ್ಯಾಪಾರದ ದೃಷ್ಟಿಯೂ ಅಲ್ಲ.ಅದು ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಬಗೆ. ೨೦೦೪ರಲ್ಲಿ ನಾನು ಮಂಗಳೂರು ಬಿಟ್ಟು ಹಂಪಿ ,ಮೈಸೂರು ಕಡೆಗೆ ಹೋದ ಮೇಲೆ ಅತ್ರಿ ಭೇಟಿ ಕಡಮೆ ಆಯಿತು.ಮಂಗಳೂರಿಗೆ ಬಂದಾಗಲೆಲ್ಲ ಒಮ್ಮೆಯಾದರೂ ಅತ್ರಿಗೆ ಹೋಗುತ್ತಿದ್ದೆ.ಪುಸ್ತಕ ಕೊಂಡದ್ದು ಹೆಚ್ಚು ಇಲ್ಲ.ಆದರೆ ಆ ಸ್ಥಳ ನನ್ನ ಬದುಕಿನ ಭಾಗವಾಗಿತ್ತು.ನಾನು ಹಂಪಿ ಮತ್ತು ಮೈಸೂರಿನಲ್ಲಿ ಕುಲಪತಿ ಆದಾಗಲೂ ನನ್ನ ಮತ್ತು ಅಶೋಕವರ್ಧನರ ಸಂಬಂಧ ಬದಲಾಗಲಿಲ್ಲ.ಅಶೋಕವರ್ಧನರು ಮನುಷ್ಯರನ್ನು ಸ್ನೇಹದಿಂದ ಕಾಣುತ್ತಾರೆಯೇ ಹೊರತು ಹುದ್ದೆ ಅಧಿಕಾರಗಳ ಬಲದ ಕಾರಣಕ್ಕೆ ಅಲ್ಲ.ನಾನು ಕುಲಪತಿ ಆಗುವ ಮೊದಲು ,ಆಗಿದ್ದಾಗ ಮತ್ತು ನಿವೃತ್ತಿ ಹೊಂದಿದ ಬಳಿಕ -ಈ ಮೂರೂ ನೆಲೆಗಳಲ್ಲೂ ನನ್ನನ್ನು ಒಂದೇ ರೀತಿಯಾಗಿ ಕಂಡಿದ್ದಾರೆ : ಅತಿಯಾಗಿಯೂ ಕಂಡಿಲ್ಲ, ಮಿತಿಯಾಗಿಯೂ ಕಂಡಿಲ್ಲ.ಈ ರೀತಿಯ ಸಮಾನತೆಯ ಸಮಚಿತ್ತದ ಮನೋಧರ್ಮದವರು ಯಾವುದೇ ಕ್ಷೇತ್ರದಲ್ಲಾದರೂ ಇವತ್ತು ವಿರಳ.ಅಧಿಕಾರದಲ್ಲಿ ಇದ್ದಾಗ ಅತಿಯಾಗಿ ಮೆಚ್ಚಿಸುವ ,ಅಧಿಕಾರ ಇಲ್ಲದಾಗ ಅತಿಯಾಗಿ ಮರೆಯುವ ಬಗೆಬಗೆಯ ಜನರನ್ನು ಕಂಡ ನನಗೆ ಅಶೋಕವರ್ಧನ ಒಂದು ಆದರ್ಶವಾಗಿ ಕಾಣಿಸುತ್ತಾರೆ. ಅಶೋಕವರ್ಧನರಿಗೆ ಅನೇಕ ಒಳ್ಳೆಯ ಹವ್ಯಾಸಗಳಿವೆ.ಅವರನ್ನು ಬಲ್ಲವರಿಗೆ ,ಅವರ ಬ್ಲಾಗ್ ಬರಹಗಳನ್ನು ಓದಿದವರಿಗೆ ನಾನು ಹೇಳಬೇಕಾಗಿಲ್ಲ.ಅವರ ವಾನಪ್ರಸ್ಥದ ಒಂದು ವನವನ್ನು ನಾನು ಕಂಡಿದ್ದೇನೆ.ಕೊಣಾಜೆಯ ಸಮೀಪ ಇರುವ ಆ ವನದ ಒಂದು ಅದ್ಬುತ ಕಾರ್ಯಕ್ರಮದಲ್ಲಿ ,ಜಿಟಿಎನ್ ಇದ್ದಾಗ ನಾನು ಭಾಗವಹಿಸಿದ್ದೆ.ಇನ್ನೊಂದು ವನವನ್ನು ನೋಡಬೇಕೆಂಬ ಬಯಕೆ ಇದೆ.ಚಾರಣ ,ಯಕ್ಷಗಾನ ಅವರ ಪಾಲಿನ ಜಯವಿಜಯರು. ಅವರು ಮತ್ತು ಅವರ ಎಲ್ಲ ಸಾಹಸಗಳ ಜೊತೆಗಾರ್ತಿ ದೇವಕಿ ‘ವಾನಪ್ರಸ್ಥ ‘ದಲ್ಲಿ ತಮ್ಮ ನಿಸರ್ಗದ ಬದುಕನ್ನು ಚಂದವಾಗಿ ಕಳೆಯಲು ನಮ್ಮ ಎಲ್ಲರ ಪ್ರೀತಿಯ ಹಾರೈಕೆ ಇದೆ. ಅತ್ರಿ ಬುಕ್ ಸೆಂಟರ್ ನಲ್ಲಿ ಅಶೋಕವರ್ಧನರನ್ನು ಕಾಣುವ ಅವಕಾಶ ನನಗೆ ಇನ್ನೂ ಇದೆ:ಫೆಬ್ರವರಿ ಎರಡನೆಯ ವಾರದಿಂದ ಮಾರ್ಚ್ ಕೊನೆಯವರೆಗೆ ಅತ್ರಿಯ ಆಶ್ರಮದಲ್ಲಿ ,ಮತ್ತೆ ಅವರ ವಾನಪ್ರಸ್ಥದಲ್ಲಿ . ಭೌತಿಕ ಸ್ಥಳ ಬೇರೆ ,ಬೌದ್ದಿಕ ತಳ ಅದೇ  ]]>

‍ಲೇಖಕರು G

January 22, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಜರ್ಮನಿಯಲ್ಲಿ ಹೀಗೊಂದು ಕನ್ನಡ ಶಿಬಿರ

ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ಪ್ರೊ ಬಿ ಎ ವಿವೇಕ ರೈ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ...

ತುಳು ’ಸಿರಿ’ಯನ್ನು ದಾಖಲಿಸಿದ ಪ್ರೊ .ಲೌರಿ ಹಾಂಕೊ – ಪ್ರೊ ಬಿ ಎ ವಿವೇಕ ರೈ

ಪ್ರೊ ಬಿ ಎ ವಿವೇಕ್ ರೈ ಪ್ರೊ .ಲೌರಿ ಹಾಂಕೊ (1932 -2002 ) ಫಿನ್ ಲೆಂಡ್ ದೇಶದ ತುರ್ಕು ವಿಶ್ವವಿದ್ಯಾಲಯದಲ್ಲಿ ಜಾನಪದ ವಿಜ್ಞಾನ ಮತ್ತು...

2 ಪ್ರತಿಕ್ರಿಯೆಗಳು

 1. prasad raxidi

  ಅತ್ರಿ ಬುಕ್ ಸೆಂಟರ್ ಮಂಗಳೂರಿನ ಒಂದು ತಲೆಮಾರಿನ ಬಾಂದವ್ಯ- ಇತಿಹಾಸದ ಒಂದು ಭಾಗ, ಅದನ್ನು ಮುಚ್ಚುವ ಸುದ್ದಿ ಕೇಳಿ ,ಏಕೋ ಗೊತ್ತಿಲ್ಲ ಮನಸು ಭಾರವಾಯಿತು…

  ಪ್ರತಿಕ್ರಿಯೆ
 2. Shama, Nandibetta

  “ಅವರ ವಾನಪ್ರಸ್ಥದಲ್ಲಿ . ಭೌತಿಕ ಸ್ಥಳ ಬೇರೆ ,ಬೌದ್ದಿಕ ತಳ ಅದೇ”
  Great Lines….

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: