ಅವರು ಅವನನ್ನು ಅಚ್ಚ ಎಂದೇ ಕರೆಯುತ್ತಾರೆ

ತುಪ್ಪದ ಪಾಯಸ

ಮಾಧವಿ ಕುಟ್ಟಿ

ಅನುವಾದ: ಹರೀಶ್ ಕೇರ

redimage

ಸರಳವಾದ ಶವಸಂಸ್ಕಾರ ಮುಗಿಸಿಕೊಂಡು ಆತ ಮನೆಗೆ ಮರಳುತ್ತಿದ್ದ. ನಾವು ಅವನನ್ನು ಸರಳವಾಗಿ ಅಚ್ಚನ್ ಎಂದು ಕರೆಯೋಣ. ಈ ನಗರದಲ್ಲಿ ಅವನ ಬೆಲೆ ತಿಳಿದವರು ಮೂವರು ಮಕ್ಕಳು ಮಾತ್ರ. ಅವರು ಅವನನ್ನು ಅಚ್ಚ ಎಂದೇ ಕರೆಯುತ್ತಾರೆ.

ಬಸ್ಸಿನಲ್ಲಿ ಅಪರಿಚಿತರ ನಡುವೆ ಕುಳಿತಿದ್ದ ಅವನು ಅಂದಿನ ದಿನದ ಪ್ರತಿಯೊಂದು ಗಳಿಗೆಯನ್ನೂ ನೆನೆದುಕೊಳ್ಳಬಲ್ಲವನಾಗಿದ್ದ.

ಬೆಳಗ್ಗೆ ಎಚ್ಚರವಾದದ್ದೂ ಅವಳ ದನಿಗೇ. “ಉನ್ನಿ, ಹಾಗೆ ಮುಸುಕು ಹಾಕಿ ಮಲಗಬೇಡ. ಇಂದು ಸೋಮವಾರ” ಆಕೆ ಮೊದಲ ಮಗನಿಗೆ ಹೇಳುತ್ತಿದ್ದಳು. ಬಳಿಕ ಅಡುಗೆಮನೆಗೆ ನಡೆದಳು. ಅವಳ ಬಿಳಿ ಸೀರೆ ಸರಪರಗುಟ್ಟಿತು. ದೊಡ್ಡ ಲೋಟದಲ್ಲಿ ತುಂಬ ಕಾಫಿ ತಂದುಕೊಟ್ಟಳು. ಬಳಿಕ ? ಆಮೇಲೇನಾಯಿತು ? ಮರೆಯಬಾರದಂಥದು ಏನಾದರೂ ಆಕೆ ಹೇಳಿದಳೆ ?

ಎಷ್ಟು ನೆನಪಿಸಿಕೊಂಡರೂ ಅವನಿಗೆ ನೆನಪಾಗಲಿಲ್ಲ. ‘ಉನ್ನಿ, ಹಾಗೆ ಮುಸುಕು ಹಾಕಿ ಮಲಗಬೇಡ. ಇಂದು ಸೋಮವಾರ’ ಈ ಮಾತುಗಳಷ್ಟೇ ರಿಂಗಣಿಸಿದವು. ಅದೊಂದು ಪ್ರಾರ್ಥನೆ ಎಂಬಂತೆ ಗುನುಗುನಿಸಿದ. ಅವನು ಅದನ್ನು ಮರೆತರೆ ಅದು ಭರಿಸಲಸಾಧ್ಯ ನಷ್ಟವಾಗುತ್ತಿತ್ತು.

ಬೆಳಗ್ಗೆ ಅವನು ಕೆಲಸಕ್ಕೆ ಹೊರಟಾಗ ಮಕ್ಕಳೂ ಹೊರಟಿದ್ದವು. ಪುಟ್ಟ ಅಲ್ಯುಮಿನಿಯಂ ಡಬ್ಬಿಗಳಲ್ಲಿ ಮಕ್ಕಳಿಗೆ ತಿಂಡಿ ತುಂಬಿಕೊಟ್ಟಿದ್ದಳು. ಬಲಗೈಯಲ್ಲಿ ಹುಣಿಸೆಹಣ್ಣಿನ ಕಲೆಯಿತ್ತು. ಕೆಲಸದ ವೇಳೆ ಅವಳ ನೆನಪೂ ಆಗಿರಲಿಲ್ಲ.

ಒಂದೆರಡು ವರುಷಗಳ ಪ್ರೇಮ ಪ್ರಕರಣದ ಬಳಿಕ ಅವರಿಬ್ಬರೂ ಮದುವೆಯಾಗಿದ್ದರು. ಈ ಮದುವೆ ಇಬ್ಬರ ಹೆತ್ತವರಿಗೂ ಇಷ್ಟವಿರಲಿಲ್ಲ. ಅದಕ್ಕಾಗಿ ಅವರಿಗೆಂದೂ ವಿಷಾದವಾಗಲಿಲ್ಲ. ಆದರೆ ಹಣದ ಕೊರತೆ, ಮಕ್ಕಳ ಅನಾರೋಗ್ಯ- ಇಬ್ಬರನ್ನೂ ಸಾಕಷ್ಟು ಕಂಗೆಡಿಸಿದ್ದವು. ತನ್ನ ಸೌಂದರ್‍ಯದ ಬಗೆಗಿನ ಅವಳ ಕಾಳಜಿ ಕುಂದಿತ್ತು. ಅವನ ನಗುವಿನ ಸಾಮರ್ಥ್ಯವೂ ಕುಸಿದಿತ್ತು.

ಇಷ್ಟಿದ್ದೂ, ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮೂವರು ಮಕ್ಕಳೂ ತಂದೆತಾಯಿಯನ್ನು ಇಷ್ಟಪಡುತ್ತಿದ್ದರು. ಮೂವರೂ ಹುಡುಗರು- ಉನ್ನಿಗೆ ಹತ್ತು ವರ್ಷ, ಬಾಲನ್‌ಗೆ ಏಳು ಮತ್ತು ರಾಜನ್‌ಗೆ ಐದು. ಮೂವರ ಮುಖಗಳೂ ಯಾವಾಗಲೂ ಕೊಳೆಯಾಗಿರುತ್ತಿದ್ದವು. ಮೂವರಲ್ಲೂ ಅಂಥ ಚೆಲುವಾಗಲೀ ಬುದ್ಧಿವಂತಿಕೆಯಾಗಲೀ ಇರಲಿಲ್ಲ. ಆದರೆ ಅವರ ತಂದೆ ತಾಯಿ ಮಾತಾಡಿಕೊಳ್ಳುತ್ತಿದ್ದುದು ಹೀಗೆ-

“ಉನ್ನಿ ಹೊಸದೇನಾದರೂ ಮಾಡುತ್ತಲೇ ಇರುತ್ತಾನೆ. ಅವನಲ್ಲಿ ಇಂಜಿನಿಯರ್ ಆಗುವ ಲಕ್ಷಣಗಳಿವೆ”

“ಬಾಲನ್‌ನನ್ನು ಡಾಕ್ಟರ್ ಮಾಡಬೇಕು. ಅವನ ಹಣೆ ನೋಡು- ಅವನು ಬುದ್ಧಿವಂತ ಎಂದೇ ಅಷ್ಟೊಂದು ಅಗಲ”

“ರಾಜನ್ ಕತ್ತಲೆಗೆ ಹೆದರುವುದಿಲ್ಲ. ಧೈರ್‍ಯವಂತ. ಅವನು ಸೈನ್ಯ ಸೇರಬಹುದು”

ಪಟ್ಟಣದ ಕಿರಿದಾದ ಬೀದಿಯೊಂದರಲ್ಲಿ ಅವರು ವಾಸಿಸುತ್ತಿದ್ದರು. ಅಕ್ಕಪಕ್ಕದಲ್ಲಿ ಮಧ್ಯಮ ವರ್ಗದವರ ಮನೆಗಳಿದ್ದವು. ಮೊದಲ ಫ್ಲೋರ್‌ನಲ್ಲಿರುವ ಮೂರು ರೂಮು ಹಾಗೂ ಇಬ್ಬರು ನಿಲ್ಲಬಹುದಾದ ವರಾಂಡ ಹೊಂದಿರುವ ಫ್ಲ್ಯಾಟು. ಅಲ್ಲಿ ಆಕೆ ಕುಂಡದಲ್ಲಿ ಒಂದು ಪನಿನೀರ್ ಗಿಡ ಬೆಳೆಸುತ್ತಿದ್ದಳು. ಅದು ಇನ್ನೂ ಹೂಬಿಟ್ಟಿರಲಿಲ್ಲ.

ಅಡುಗೆಮನೆಯಲ್ಲಿ ಹಿತ್ತಾಳೆಯ ಸೌಟುಗಳು ಮತ್ತು ಚಮಚಗಳು ಗೋಡೆಯಿಂದ ತೂಗುಬಿದ್ದಿದ್ದವು. ಸ್ಟವ್‌ನ ಬಳಿ ಒಂದು ಮರದ ಮಣೆ. ಅವನು ಕೆಲಸದಿಂದ ಹಿಂದಿರುಗುತ್ತಿದ್ದಾಗ ಆಕೆ ಚಪಾತಿ ಮಾಡುತ್ತ ಅಲ್ಲಿ ಕುಳಿತಿರುತ್ತಿದ್ದಳು.

ಬಸ್ಸು ನಿಂತಾಗ ಅದರಿಂದ ಇಳಿದ. ಮೊಣಕಾಲಿನಲ್ಲಿ ನೋವು ಗಿರಿಗಿರಿಗುಟ್ಟಿತು. ಸಂವಾತ ಶುರುವಾಯಿತೆ ? ನಾನು ಹಾಸಿಗೆ ಹಿಡಿದರೆ ಮಕ್ಕಳನ್ನು ನೋಡಿಕೊಳ್ಳುವವರಾದರೂ ಯಾರು ? ತಕ್ಷಣ ಕಣ್ಣಿನಿಂದ ಹನಿ ಉದುರಲು ಶುರುವಾಯಿತು. ಕೊಳೆಯಾದ ಕರ್ಚೀಫಿನಿಂದ ಮುಖ ಒರೆಸಿಕೊಂಡು ಬೇಗಬೇಗನೆ ಹೆಜ್ಜೆ ಹಾಕಿದ.

ಮಕ್ಕಳು ನಿದ್ದೆ ಮಾಡಿರಬಹುದೆ ? ಹೊಟ್ಟೆಗೆ ಏನಾದರೂ ಹಾಕಿಕೊಂಡಿರಬಹುದೇ ಅಥವಾ ಹಸಿದು ಹಾಗೇ ನಿದ್ದೆ ಹೋಗಿರಬಹುದೆ ? ಇದು ಅವರಿಗೆ ಅರ್ಥಮಾಡಿಕೊಳ್ಳುವ ಪ್ರಾಯವಲ್ಲ. ನಾನು ಆಕೆಯನ್ನು ಟ್ಯಾಕ್ಸಿಗೆ ಹಾಕುವಾಗ ಉನ್ನಿ ಬಾಗಿಲಲ್ಲಿ ನಿಂತು ನೋಡುತ್ತಿದ್ದ. ಸಣ್ಣವ ಮಾತ್ರವೇ ಅತ್ತದ್ದು. ನಾನೂ ಟ್ಯಾಕ್ಸಿಗೆ ಹತ್ತಬೇಕೆಂಬ ಹಟದಿಂದಷ್ಟೇ ಆತ ಅತ್ತದ್ದು. ಸಾವಿನ ಅರ್ಥ ಅವುಗಳಿಗೆ ಗೊತ್ತಾಗದು.

ನನಗಾದರೂ ಗೊತ್ತಾಗಿದೆಯೆ ? ಒಂದು ಸಂಜೆ ಆಕೆ ದಿಢೀರನೆ ಕೆಳಗೆ ಬಿದ್ದು ಸಾಯುವಳೆಂದು ನಾನಾದರೂ ಕಲ್ಪಿಸಿದ್ದೆನೆ ? ಯಾರಿಗೂ ಒಂದು ಮಾತೂ ಹೇಳದೆ ?

ಕೆಲಸದಿಂದ ಮರಳಿ ಬಂದಾಗ ಆತ ಅಡುಗೆಮನೆಯ ಕಿಟಕಿಯಲ್ಲಿ ದೃಷ್ಟಿ ಹಾಯಿಸಿದ್ದ. ಒಳಗೆ ಆಕೆ ಕಂಡಿರಲಿಲ್ಲ. ಹೊರ ಜಗಲಿಯಲ್ಲಿ ಮಕ್ಕಳು ಆಡುತ್ತಿದ್ದವು. ‘ಫಸ್ಟ್ ಕ್ಲಾಸಾಗಿ ಹೊಡೆದೆ…’ ಎಂದು ಉನ್ನಿ ಚೀರುತ್ತಿದ್ದುದು ಕೇಳಿಸುತ್ತಿತ್ತು.

ತನ್ನ ಕೀ ತೂರಿಸಿ ಬಾಗಿಲು ತೆರೆದ. ಆಗಲೇ ಆತ ಆಕೆಯನ್ನು ನೋಡಿದ್ದು. ನೆಲದಲ್ಲಿ ಬಿದ್ದಿದ್ದಳು. ತುಟಿಗಳು ಒಡೆದಿದ್ದವು. ಜಾರಿ ಬಿದ್ದಿರಬೇಕು ಎಂದು ಊಹಿಸಿದ. ಆದರೆ ಆಸ್ಪತ್ರೆಯಲ್ಲಿ ವೈದ್ಯರು ಹೇಳಿದ್ದೇ ಬೇರೆ : “ಈಕೆ ಸತ್ತು ಒಂದೂವರೆ ಗಂಟೆಯಾಗಿದೆ. ಹೃದಯಸ್ತಂಭನ”

ಭಾವಗಳ ಹೆದ್ದೆರೆಯಲ್ಲಿ ಆತ ಕೊಚ್ಚಿಹೋದ. ನಿಷ್ಕಾರಣವಾಗಿ ಆಕೆಯ ಮೇಲೆ ಕೋಪವುಕ್ಕಿತು. ಹೇಗೆ ತಾನೆ ಹೋಗಬಹುದು ಆಕೆ- ಯಾವುದೇ ಸೂಚನೆಯಿಲ್ಲದೆ ? ಎಲ್ಲ ಹೊಣೆಗಾರಿಕೆಯನ್ನೂ ನನ್ನೊಬ್ಬನ ಮೇಲೇ ಹೊರಿಸಿ ! ಈಗ ಮಕ್ಕಳಿಗೆ ಮೀಸುವವರಾರು ? ಯಾರು ಅಟ್ಟು ಉಣ್ಣಿಸುವವರು ? ಹುಷಾರು ತಪ್ಪಿದರೆ ನೋಡಿಕೊಳ್ಳುವವರ್‍ಯಾರು ?

‘ನನ್ನ ಮಡದಿ ಸತ್ತಳು’ ಆತ ತನ್ನೊಳಗೆ ಗುಣುಗುಟ್ಟಿಕೊಂಡ, “ಇಂದು ದಿಢೀರನೆ ನನ್ನ ಪತ್ನಿ ಹಾರ್ಟ್ ಫೇಲ್ ಆಗಿ ಸತ್ತುಹೋದಳು. ನನಗೆ ಎರಡು ದಿನಗಳ ರಜೆ ಬೇಕು”

ಎಂಥ ರಜಾ ಅರ್ಜಿ ! ರಜೆ, ಪತ್ನಿಯ ಅಸ್ವಾಸ್ಥ್ಯಕ್ಕಾಗಿ ಅಲ್ಲ. ಸತ್ತದ್ದಕ್ಕಾಗಿ. ಬಾಸ್ ನನ್ನನ್ನು ಅವನ ಕೋಣೆಗೆ ಕರೆಯಬಹುದು. ಶೋಕ ವ್ಯಕ್ತಪಡಿಸಬಹುದು. ಅವನ ಅನುಕಂಪ ಯಾರಿಗೆ ಬೇಕು ? ಬಾಸ್‌ಗೆ ಅವಳ್ಯಾರೋ ಗೊತ್ತಿಲ್ಲ. ಅವಳ ಗುಂಗುರು ಮುಂಗುರುಳು, ದಣಿವಿನ ನಗು, ಮಿದು ಹೆಜ್ಜೆಗಳು ಅವನಿಗೆ ಗೊತ್ತಿಲ್ಲ. ಅದನ್ನೆಲ್ಲ ಕಳೆದುಕೊಂಡದ್ದು ನಾನು.

ಬಾಗಿಲು ತೆರೆದಾಗ ಸಣ್ಣ ಮಗ ಓಡುತ್ತ ಬಂದ. ನೋಡಿ, ‘ಅಮ್ಮ ಇನ್ನೂ ಬಂದಿಲ್ಲ’ ಎಂದ.

ಎಷ್ಟು ಬೇಗ ಮರೆತುಬಿಟ್ಟ ! ಟ್ಯಾಕ್ಸಿಯಲ್ಲಿ ಎತ್ತಿಕೊಂಡು ಹೋದ ದೇಹ ಮರಳಿ ನಡೆಯುತ್ತ ಬರುವುದೆಂದು ಆತ ತಿಳಿದಿದ್ದನೇ.

ಮಗನನ್ನು ಆತ ಅಡುಗೆಮನೆಗೆ ಕರೆದೊಯ್ದ. ‘ಉನ್ನಿ’ ಕರೆದ.

‘ಏನಚ್ಚಾ ?’ ಉನ್ನಿ ಒಳಗೆ ಬಂದ. ‘ಬಾಲನ್ ಮಲಗಿದ್ದಾನೆ.’

‘ಸರಿ. ಏನಾದರೂ ತಿಂದಿರಾ ?’

‘ಇಲ್ಲ’

ಪಾತ್ರೆಗಳನ್ನು ಮುಚ್ಚಿದ್ದ ತಟ್ಟೆಗಳನ್ನು ಆತ ಒಂದೊಂದಾಗಿ ಸರಿಸಿದ. ಚಪಾತಿ, ಅನ್ನ, ಬಟಾಟೆ ಕರಿ, ಚಿಪ್ಸ್ ಹಾಗೂ ಮೊಸರು ಅದರಲ್ಲಿದ್ದವು. ಗ್ಲಾಸ್ ಬೋಗುಣಿಯೊಂದರಲ್ಲಿ ತುಪ್ಪದ ಪಾಯಸವಿತ್ತು.

ಇಲ್ಲ, ಇದನ್ನೆಲ್ಲ ಇವರು ಉಣ್ಣಬಾರದು. ಇವಕ್ಕೆ ಸಾವಿನ ಸ್ಪರ್ಶವಾಗಿದೆ.

‘ಇವೆಲ್ಲ ತಣ್ಣಗಾಗಿವೆ. ನಾನು ಸ್ವಲ್ಪ ಉಪ್ಪಿಟ್ಟು ಮಾಡುತ್ತೇನೆ’ ಎಂದ.

‘ಅಚ್ಚಾ’ ಅದು ಉನ್ನಿಯ ದನಿ.

‘ಹೂಂ’

‘ಅಮ್ಮ ಯಾವಾಗ ಬರುತ್ತಾಳೆ ? ಅವಳಿಗೆ ಆರೋಗ್ಯವಿಲ್ಲವಾ ?’

ಸತ್ಯ ಇನ್ನೊಮ್ಮೆ ಯಾವತ್ತಾದರೂ ಗೊತ್ತಾಗಲಿ, ಆತ ಯೋಚಿಸಿದ. ಇಂದು ಮಕ್ಕಳನ್ನು ಶೋಕಕ್ಕೆ ತಳ್ಳುವುದರಲ್ಲಿ ಅರ್ಥವಿಲ್ಲ.

‘ಅಮ್ಮ ಬರುತ್ತಾಳೆ’ ಆತ ಹೇಳಿದ.

ತೊಳೆದಿಟ್ಟ ತಟ್ಟೆಗಳನ್ನು ನೆಲದ ಮೇಲಿಟ್ಟ. ಎರಡು ತಟ್ಟೆಗಳು. ‘ಬಾಲನ್ ಮಲಗಿರಲಿ’ ಎಂದ.

‘ಅಚ್ಚಾ, ತುಪ್ಪ ಪಾಯಸ’ ರಾಜನ್ ಖುಷಿಯಿಂದ ಉದ್ಗರಿಸಿದ. ತನ್ನ ಬೆರಳನ್ನು ಅದಕ್ಕೆ ಅದ್ದಿದ.

ಮಡದಿ ಕುಳಿತುಕೊಳ್ಳುತ್ತಿದ್ದ ಮರದ ಮಣೆಯ ಮೇಲೆ ಆತ ಕುಳಿತುಕೊಂಡ.

‘ಉನ್ನಿ, ನೀನು ಬಡಿಸುತ್ತೀಯ ? ಅಚ್ಚನ್‌ಗೆ ಇಂದ್ಯಾಕೋ ಹುಷಾರಿಲ್ಲ. ತಲೆನೋವು’

ಮಕ್ಕಳು ಈ ಊಟ ಮಾಡಲಿ. ಅವರು ಮುಂದೆಂದೂ ತಾಯಿಯ ಅಡುಗೆ ಉಣ್ಣಲಾರರು.

ಮಕ್ಕಳು ಪಾಯಸ ಚಪ್ಪರಿಸತೊಡಗಿದರು. ಆತ ಸ್ತಬ್ದನಾಗಿ, ಅವರನ್ನು ನೋಡುತ್ತ ಕುಳಿತಿದ್ದ.

‘ಅನ್ನ ಬೇಕೆ, ಉನ್ನಿ ?’

‘ಬೇಡ, ಪಾಯಸ ಸಾಕು. ಇದು ಬಹಳ ಸಿಹಿಯಾಗಿದೆ’

‘ಅಮ್ಮ ಎಷ್ಟೊಂದು ಸೊಗಸಾಗಿ ತುಪ್ಪದ ಪಾಯಸ ಮಾಡಿದ್ದಾಳೆ’ ಖುಷಿಯಿಂದ ರಾಜನ್ ಹೇಳಿದ.

ಅವನು ಎದ್ದು ನಿಂತು ಬಾತ್‌ರೂಮಿನೆಡೆಗೆ ಧಾವಿಸಿದ.

‍ಲೇಖಕರು avadhi

August 9, 2009

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This