ಅವರು ಎಸ್ ಎಸ್ ಹಿರೇಮಠ..

sudha chidananda gowda

ಸುಧಾ ಚಿದಾನಂದಗೌಡ 

2006 ರಲ್ಲಿ ಒಮ್ಮೆ ಹೀಗೇ ಕೊಟ್ಟೂರೇಶ್ವರ ಕಾಲೇಜಿಗೆ ಹೋಗಿದ್ದಾಗ ಪ್ರಿನ್ಸಿಪಾಲ್ ಛೇಂಬರ್ ಗೆ ಹೋಗಿನೋಡಿದರೆ.. ಎದುರಿಗೇ ಎಸ್. ಎಸ್. ಹಿರೇಮಠ್..!

ನಮ್ಮ ಭಾಗ ಅತಿಪ್ರಮುಖ ಪ್ರಗತಿಪರ, ದಲಿತಪರ ಬರಹಗಾರ.ಅವರ ಬಹುತೇಕ ಪುಸ್ತಕಗಳನ್ನು ಓದಿದ್ದೆ. ಮಾತಾಡ್ತಾ ಕೂತಿದ್ದಾಗ “ನಿಮ್ದು ಇಂಗ್ಲಿಷ್ ಅಲಾ..?” ಎಂದರು. “ಹೌದು ಸರ್” ಎಂದೆ. “ಬರ್ತೀರೇನು ನಂ ಕಾಲೇಜಿಗೆ ? ಸಂಬಳ ಚೊಲೋನೇ ಕೊಡಿಸ್ತೀನಿ, ಬರ್ರಿ ಇದೊಂದ್ ವರ್ಷ. ಜೂನ್ ಮುಗೀತಾ ಬಂತು.. ಇಂಗ್ಲಿಷ್ ಲೆಕ್ಷರರ್ ಸಿಗ್ತಿಲ್ಲ.. ಫಜೀತಿ ಪಡ್ತಿದೀನಿ..” ಎಂದರು.

pencil birdಅವರು ಅಷ್ಟು ಹೇಳಿದಾಗ ನನಗೂ ಮನಸು ಡೋಲಾಯಮಾನವಾಯ್ತು. ಒಳ್ಳೆ ಆಫರ್ರೇ. ನನಗೂ ವಿ.ವಿ. ಸಂಘದಲ್ಲಿ ಕೆಲಸ ಮಾಡುವ ಕನಸಿತ್ತಾದರೂ ಆಗ ಮಕ್ಕಳು ಇನ್ನೂ ಚಿಕ್ಕವರು. ಹೆಚ್. ಬಿ. ಹಳ್ಳಿಯಿಂದ ಕೊಟ್ಟೂರಿಗೆ ಓಡಾಡಿಕೊಂಡು ಮಾಡುವುದು.. ಕಷ್ಟವೇ.. “ನೋಡ್ತೀನಿ ಸರ್…” ಎಂದಷ್ಟೇ ಹೇಳಿಬಂದಿದ್ದೆ.
ಒಂದು ವಾರದ ನಂತರ ನಮ್ಮನೆ ಲ್ಯಾಂಡ್ ಲೈನ್ ಗೆ ಎಸ್. ಎಸ್. ಹಿರೇಮಠ್ ಫೋನ್. “ ಸೋಮವಾರದಿಂದ ಬಂದ್ಬಿಡ್ರಿ..ಒಂಭತ್ತು ಸಾವಿರ ಸಂಬಳ ಫಿಕ್ಸ್ ಮಾಡಿದೀನಿ…ನಾನಿರೋತಂಕ ಬರ್ರಿ. ಆಮ್ಯಾಲೆ ನಿಮ್ಮಿಷ್ಟ..” ಆರ್ಡರ್ ನಂತೆ ಹೇಳಿಬಿಟ್ಟರು.

ಆ ಕಾಲಕ್ಕೆ ಅಷ್ಟು ಸಂಬಳ ವಿ.ವಿ. ಸಂಘವಲ್ಲದೆ ಬೇರಿನ್ಯಾರು ಕೊಡಲು ಸಾಧ್ಯ..? ಅದಕ್ಕಿಂತ ಹೆಚ್ಚಾಗಿ ಹಿರೇಮಠ ಎಂದಮೇಲೆ ಅವರ ಸುತ್ತ ಒಂದು ಸಾಂಸ್ಕೃತಿಕ ವಲಯ, ಸಾಹಿತ್ಯಕ ವಾತಾವರಣ ಇದ್ದೇ ಇರುತ್ತದೆ…ಪ್ಲಸ್ ಪಾಯಿಂಟ್..ಹೋದೆ. ಹೋದ ದಿನವೇ ಟೈಂ ಟೇಬಲ್ ತಗೊಂಡ ನಂತರ ಎರಡು ತಾಸು ಮಾತಾಡಿದೆವು.

“ಸರ್…ಸೊರಗಿದಂಗೆ ಕಾಣ್ತೀರಿ..” ಎಂದೇಬಿಟ್ಟೆ.

“ಹೌದು ಮತ್ತೆ ವಯಸ್ಸಾಯ್ತಲ್ಲಾ ಸುಧಾವ್ರೇ…ಷುಗರ್ ಬಂದಿದೆ..ನೋಡಿ..” ಎಂದು ನಗುತ್ತಲೇ ಕನ್ನಡಕ ತೆಗೆದಾಗ ನನಗೆ ಶಾಕ್…ಕನ್ನಡಕದ ಒಂದು ಲೆನ್ಸ್ ಗೆ ಕಪ್ಪು ಪಟ್ಟಿ…! “ಒಂದು ಕಣ್ಣು ಕಾಣ್ತಿಲ್ಲ…ಅದನ್ನು ಕವರ್ ಮಾಡಿದಾರೆ. ಒಂದೇ ಕಣ್ಣು ಈಗ… ಓದಿ, ಬರೆದು ಮಾಡುವವರಿಗೆ ಈ ರೋಗ ಬರಬಾರದ್ರೀ..” ಎಂದಾಗ … ಮೂಕಳಾಗಿ ಕೂತಿದ್ದೆ.

ಆಮೇಲೆ ಗೊತ್ತಾಯ್ತು..ಎಸ್. ಎಸ್. ಹಿರೇಮಠರಿಗೆ ಕ್ಯಾನ್ಸರ್ ಇತ್ತು..! ನಾನು ಜಾಯ್ನ್ ಆದ ಒಂದು ತಿಂಗಳಿಗೆ ಆಗಸ್ಟ್ ನಲ್ಲಿ ಅವರು ಬಯಾಪ್ಸಿಗೆಂದು ಹೋದವರು ಮರಳಿ ಬಂದಾಗ….ಶಿವ್ನೇ…ಕಣ್ಣುಗಳನ್ನೇ ನಂಬಲಾಗದಷ್ಟು ಅವರ ಆರೋಗ್ಯ ಹದಗೆಟ್ಟುಹೋಗಿತ್ತು. ಕಂಗಳು ಗುಳಿಬಿದ್ದುಹೋಗಿದ್ದವು. ಮುಖ ಬಿಳಿಚಿಕೊಂಡು, ಕೂದಲುದುರಿ ಗುರುತೇ ಸಿಗದಂತಾಗಿ ಹೋಗಿದ್ದರು..! ಅಂಥಾ ಆಘಾತವನ್ನು ನಾನು ಜೀವನದಲ್ಲಿ ಅನುಭವಿಸಿದ್ದು ಅತಿ ಕಡಿಮೆಯೆನ್ನಬಹುದು. ಅವರೊಂದಿಗೆ ಮಾತಿಗೆ ಕುಳಿತುಕೊಳ್ಳಲು ಆಮೇಲೆ ನನಗೆ ಸಾಧ್ಯವೇ ಆಗಲಿಲ್ಲ.

ಹೇಗೆ ಮಾತನಾಡುವುದು..? ಹೇಗೆ ಅವರನ್ನು ದಿಟ್ಟಿಸಿ ನೋಡುವುದು..? ಅಳು ಬಂದಂತಾಗಿ “ಕ್ಲಾಸಿದೆ ಸರ್…” ಎಂದು ಎದ್ದು ಬಂದುಬಿಡುತ್ತಿದ್ದೆ. ಅವರಿಗೂ ಅರ್ಥವಾಗುತ್ತಿತ್ತೇನೋ… ಮೌನವಾಗಿ ತಲೆಯಲ್ಲಾಡಿಸುತ್ತಿದ್ದರು… ಎಷ್ಟು ಹಿಂಸೆಯೆನಿಸುತ್ತಿತ್ತೆಂದರೆ..ಇದನ್ನು ನೋಡೋಕಾಗಿ ಬಂದೆನೇ ನಾನು ಈ ಕಾಲೇಜಿಗೆ? ಎನಿಸಿ ಸ್ಟ್ಯಾಫ್ ರೂಮಿನಲ್ಲಿ ಸ್ವಲ್ಪ ಹೊತ್ತು ಕೂತಿದ್ದು, ಭಾವುಕತೆಯನ್ನು ತಹಬದಿಗೆ ತಂದುಕೊಂಡು ಹತ್ತು ನಿಮಿಷ ಲೇಟಾಗಿ ಕ್ಲಾಸಿಗೆ ಹೋದದ್ದಿದೆ…

ಒಮ್ಮೆ ನನ್ನ ಇಬ್ಬರು ಮಕ್ಕಳಿಗೂ ಒಮ್ಮೆಲೇ ಸ್ಮಾಲ್ ಪಾಕ್ಸ್ ಶುರುವಾಯ್ತು. ಅದು ಡಿಸೆಂಬರ್…ಸಿಲಬಸ್ ನ ಪೀಕ್ ಟೈಂ…ಹೋದೆ ಹಿರೆಮಠರೆದುರಿಗೆ.. “ರಜಾ ಬೇಕು ಸರ್..” ಎಂದೆ. “ತಗೊಳ್ರೀ. ಎಷ್ಟು ದಿನ..?” ಎಂದರು. “ ನಾನು ಎರಡು ದಿನ ಸರ್ “ ಎಂದು ಹೇಳಿಬಂದೆನಾದರೂ ಒಂದು ವಾರ ಹೋಗಲಾಗಲೇ ಇಲ್ಲ…

ಎಂಟನೆಯ ದಿನ ಫೋನ್ ಬಂತು. ಹೇಳಿಕೊಂಡೆ ಹೀಗ್ಹೀಗೆ ಅಂತ. “ಸಿಲಬಸ್ ಹಿಂದಿದೆ ಸರ್…” ಎಂದು ಅವರು ಕೇಳುವ ಮೊದಲೇ ಪ್ರಾಮಾಣಿಕವಾಗಿ ಹೇಳಿಬಿಟ್ಟೆ- ಬೈದರೆ ಬಯ್ಯಿಸಿಕೊಳ್ಳೋಣ ಎಂದು ತೀರ್ಮಾನಿಸಿ..! “ಸ್ಪೆಷಲ್ ಕ್ಲಾಸ್ ತಗೊಳ್ಳೋಕ್ಕಾಗುತ್ತಾ” ಎಂದರು. “ಖಂಡಿತಾ ಸರ್..” ಎಂದೆ. “ಸರಿ, ಎರಡು ದಿನ ಬಿಟ್ಟು ಬರ್ರಿ. ನಾನಿರಲ್ಲ. ಮಸ್ತಾನಪ್ಪರಿಗೆ ಹೇಳಿರ್ತೀನಿ. ಅರಾಮಾಗಿ ಸಿಲಬಸ್ ಮುಗಿಸಿ.. ಪರವಾಗಿಲ್ಲ” ಎಂದರು.

ತುಂಬ ಧೈರ್ಯ ಬಂತು ನನಗಾಗ..ಆದರೆ, ಈ ಆಂದ್ರಮೂಲದ ಮಸ್ತಾನಪ್ಪ ಇದಾರಲ್ಲ …ಕೊಟ್ಟೇರೇಶ್ವರ ಕಾಲೇಜಿನ ಸೀನಿಯರ್ ಇಂಗ್ಲಿಷ್ ಪ್ರೊಫೆಸರ್…(ಈಗಲೂ ಇರಬಹುದು ಅವರು ಕಾಲೇಜಲ್ಲಿ) ಸ್ಟ್ಯಾಫ್ ರೂಮಿನಲ್ಲೊಮ್ಮೆ ಅವರಿಗೂ ನನಗೂ ಟಗ್ ಆಫ್ ವಾರ್ ಬಿದ್ದಿತ್ತು- ಇಂಗ್ಲಿಷ್ ಆಕ್ಸೆಂಟ್ ವಿಚಾರದಲ್ಲಿ. ಅವರದು ಫ್ರೆಂಚ್ ಆಕ್ಸೆಂಟ್, ನನ್ನದು ಬ್ರಿಟಿಷ್ ಆಕ್ಸೆಂಟ್….ಅವರು ತಮ್ಮದೇ ಶ್ರೇಷ್ಟ ಎಂಬ ಅಭಿಪ್ರಾಯದಲ್ಲಿ ಮಾತಾಡಿದರು .

ನಾನೂ ಕೇಳೋತಂಕಾ ಕೇಳಿ, ಆಮೇಲೆ ಹೇಳಿದೆ… “ಸರ್, ಇಂಗ್ಲಿಷ್ ಮೂಲತಃ ಬ್ರಿಟಿಷರದು ಎಂಬುದು ಸುಳ್ಳಲ್ಲ ಅಲ್ಲವಾ…ನೀವು ಫ್ರೆಂಚ್ ಉಚ್ಛಾರಣೆ ಶ್ರೇಷ್ಟ ಅನ್ನೋದಾದರೆ ನಾನು ಇಂಡಿಯನ್ ಉಚ್ಛಾರಣೆ ಶ್ರೇಷ್ಟ ಅಂತೀನಿ ..ತಪ್ಪಾ..? ನಾವು ಇಂಗ್ಲಿಷನ್ನು ಬ್ರಿಟಿಷ್ ಶೈಲಿಯಲ್ಲೇ ಸ್ಟೂಡೆಂಟ್ಸ್ ಗೆ ಹೇಳಿಕೊಡಬೇಕು. ಆಮೇಲೆ ಅವರು ಯಾವ ರೀತಿ ಉಚ್ಛಾರಿಸ್ತಾರೆ ಅನ್ನೋದನ್ನು ಸ್ಟೂಡೆಂಟ್ಸ್ ಗೇ ಬಿಟ್ಬಿಡಬೇಕು..ನಮ್ಮ ಉಚ್ಛಾರಣೆಯನ್ನು ಹೇರಬಾರದು..” ಎಂದು ಗಟ್ಟಿಗಟ್ಟಿಯೇ ಮಾತಾಡಿದ್ದೆ…ಅವೊತ್ತಿನಿಂದ ಆಂಧ್ರ ಮಸ್ತಾನಪ್ಪ ನನ್ನ ಜೊತೆ ಸರಿಯಾಗಿ ಮಾತಾಡ್ತಿರ್ಲಿಲ್ಲ.. ಅದು ಹಿರೇಮಠರವರೆಗೂ ಹೋಗಿತ್ತು…!

ನಂತರ ಕಾಲೇಜಿಗೆ ಹೋದಾಗ ಮಸ್ತಾನಪ್ಪನವರೂ ಸ್ಪೆಷಲ್ ಕ್ಲಾಸ್ ಅರೇಂಜ್ ಮಾಡಿಕೊಟ್ಟರು. ಜನವರಿಯಷ್ಟು ಹೊತ್ತಿಗೆ ಸಿಲಬಸ್ ಸರಾಗವಾಗಿ ಮುಗಿಯಿತು. ಒಮ್ಮೆ ಬಿ.ಕಾಂ ಕ್ಲಾಸಿನಲ್ಲಿರಬೇಕು.. ಯೇಟ್ಸ್ ಕವಿಯ Easter 1916 ಕವನವನ್ನು ತನ್ಮಯಳಾಗಿ ವಿವರಿಸುತ್ತಿದ್ದೆ. ಕ್ಲಾಸ್ ಮುಗಿಯುವಾಗ ನೋಡ್ತೀನಿ…. ಹಿರೇಮಠ ಕಿಟಕಿಯ ಬಳಿಯಿಂದ ಕಾರಿಡಾರಿನಲ್ಲಿ ನಡೆದುಹೋಗುತ್ತಿದ್ದರು….

pen as swordಅನುಮಾನವಾಯ್ತು…ಕಿಟಕಿಯ ಬಳಿ ಆಗಿನಿಂದ ಯಾರೋ ನಿಂತಿಂತೆ ಅನಿಸಿತ್ತಾದರೂ…ಯೇಟ್ಸ್ ಪದ್ಯ ಪಾಠ ಮಾಡೋವಾಗ ಯಾರಾದರೂ ಆಚೀಚೆ ನೋಡ್ತಾರಾ..? ಅಷ್ಟಾಗಿ ಗಮನಿಸಿರಲಿಲ್ಲ.. ಯಥಾಪ್ರಕಾರ ಹೊರಡುವ ಮುನ್ನ ಅವರ ಛೇಂಬರಿಗೆ ಹೋದೆ… “ಯೇಟ್ಸ್ ಭಾರತಕ್ಕೆ ಬಂದಿದ್ದ ಸುಧಾವ್ರೇ..ಗೊತ್ತಾ…?” ಎಂದು ಆರಂಭಿಸಿದವರು

ಯೇಟ್ಸ್, ಟ್ಯಾಗೋರ್, ಫಿಲಾಸಫಿ, ಕನಕದಾಸರ ಸಮಾಜಧರ್ಮ, ಐರ್ಲೆಂಡ್, ಆಫ್ರಿಕಾ, ಭಾರತದ ಹೋರಾಟಗಳ ಕುರಿತು ಎಷ್ಟು ನಿರರ್ಗಳವಾಗಿ ಮಾತಾಡಿದರೆಂದರೆ ನನಗೂ ಹರಪನಹಳ್ಳಿಯ ವಿ.ವಿ.ಸಂಘದ ಎ.ಡಿ. ಬಿ. ಕಾಲೇಜಿನಲ್ಲಿ ಇವರ ಕನ್ನಡ ಕ್ಲಾಸುಗಳಲ್ಲಿ ಕುಳಿತುಕೊಳ್ಳುವ ಬಯಕೆಯುಂಟಾಗಿತ್ತು…ಅವರ ಪಾಂಡಿತ್ಯದ ಪರಿಚಯವೂ ಆಗಿತ್ತು. ಮುಂದಿನ ಬಸ್ಸಿಗೆ ಹೋದರಾಯಿತು ಎಂದು ಕೇಳುತ್ತಾ ಕುಳಿತುಬಿಟ್ಟಿದ್ದೆ…

ಅಲ್ಲಿ ಸಾಕಷ್ಟು ಜನ “ನೀವು ಹಿರೇಮಠರ ಸ್ಟೂಡೆಂಟಾ…?” ಎಂದು ಕೇಳಿದ್ದುಂಟು. ನಾನು ಹೂಂ ಎನ್ನುತ್ತಿದ್ದೆ. ಹಾಗೆ ಹೇಳುವಾಗ ಒಮ್ಮೆ ಹಿರೇಮಠ ನನ್ನ ಹಿಂದೆಯೇ ಇದ್ದರು. “ಇಲ್ಲ, ಸುಧಾ ಓದಿದ್ದು ಬೆಂಗಳೂರು, ಮೈಸೂರುಗಳಲ್ಲಿ.. ಇಲ್ಲಿ ಅಲ್ಲ….” ಎಂದು ಹೇಳಬಹುದಾಗಿತ್ತು. ಅದರೆ ಹೇಳಲಿಲ್ಲ. ಆ ಮೂಲಕ ನನ್ನನ್ನೂ ತಮ್ಮ ವಿದ್ಯಾರ್ಥಿ ಬಳಗಕ್ಕೆ ಸೇರಿಸಿಕೊಂಡಿದ್ದರು ಎಂದೇ ನಾನು ಭಾವಿಸಿದ್ದೇನೆ.

ಕೊಟ್ಟೂರೇಶ್ವರ ಕಾಲೇಜೆಂದರೆ ಈಗಲೂ ನನಗೆ ಎಸ್. ಎಸ್. ಹಿರೇಮಠ, ಮಸ್ತಾನಪ್ಪರೊಂದಿಗಿನ ವಾಗ್ಯುದ್ದ, ಆ ಕಾಲೇಜ್ ಲೈಬ್ರೆರಿಯ ಒಂದನೆಯ ಅಂತಸ್ತಿನಲ್ಲಿ ಪೇರಿಸಿಟ್ಟ (ಯಾರೂ ಮುಟ್ಟದ) ಹಳೆಯ ಇಂಗ್ಲಿಷ್ ಪುಸ್ತಕಗಳ ರಾಶಿ, ಕುರ್ಚಿಯ ಧೂಳು ಒರೆಸಿ ಕೊಟ್ಟು, ಕುತೂಹಲದಿಂದ ನೋಡುತ್ತಾ ನಿಲ್ಲುತ್ತಿದ್ದ ಅಟೆಂಡರ್…

ಏಳೆಂಟು ವಿದ್ಯಾರ್ಥಿಗಳಿರುತ್ತಿದ್ದ ಬಿ. ಎಸ್ಸಿ. ಕ್ಲಾಸು, ಅವರಲ್ಲೊಬ್ಬ ಕುಂ. ವೀ. ಮಗ ಕೂಡಾ ಇದ್ದಂತೆ ನೆನಪು. ಯಾರೆಂದು ಸರಿಯಾಗಿ ನೆನಪಿಲ್ಲ. ಒಂದೇ ವರ್ಷ ಅಲ್ಲಿ ಕೆಲಸ ಮಾಡಿದ್ದು. ಹತ್ತು ವರ್ಷಗಳಾಗಿಹೋದವು..ಮೇಲಾಗಿ ಹಿರೇಮಠರೇ ಅಲ್ಲಿ ನನಗೆ ಕೇಂದ್ರಬಿಂದು ಎನಿಸಿದ್ದರು. ಹಾಗಾಗಿ ಬೇರೇನನ್ನೂ ಹೆಚ್ಚು ಗಮನಿಸಲಿಲ್ಲ….

ಹಿರೇಮಠರ ವಿದ್ಯಾರ್ಥಿಗಳು, ಚಳುವಳಿಯ ಸಂಗಾತಿಗಳು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಆದರೆ ನನಗವರು ಮಹಿಳಾ ಸಹೋದ್ಯೋಗಿಯನ್ನು ಅತ್ಯಂತ ಗೌರವದಿಂದ, ಸಹೃದಯತೆಯಿಂದ ನಡೆಸಿಕೊಂಡ ಪ್ರಿನ್ಸಿಪಾಲ್ ಆಗಿಯೇ ನೆನಪಿನಲ್ಲುಳಿದಿದ್ದಾರೆ…ಅವರು ಕೊನೆಗಾಲದಲ್ಲಿ ಅನುಭವಿಸಿದ ನರಕಯಾತನೆಯನ್ನು ಹಂಚಿಕೊಳ್ಳಬಹುದಾಗಿದ್ದರೆ ….ಹಾಗೆ ಹಂಚಿಕೊಳ್ಳುವುದರಲ್ಲಿ ಮೊದಲಿಗರಾಗಬಯಸುವ ಸಂಗಾತಿಗಳು ಅನೇಕರಿದ್ದಾರೆ. ಅವರೆಲ್ಲರಲ್ಲಿ ಮೊದಲಿಗಳು ನಾನೇ ಆಗಿರುತ್ತಿದ್ದೆ…

ಅವರ ವೃತ್ತಿಜೀವನದ ಆ ಅಂತಿಮ ವರ್ಷ ನಾನು ಅವರೊಂದಿಗೆ ಕೆಲಸಮಾಡಿದೆ ಎಂಬುದು ಹೆಮ್ಮೆಯೂ ಹೌದು ನೋವೂ ಹೌದು…
ದಲಿತಪರ, ಶೋಷಿತರಪರ ಹೋರಾಡಿದ, ಅನೇಕ ಮೌಲಿಕ ಕೃತಿಗಳನ್ನು ರಚಿಸಿದ ಎಸ್, ಎಸ್, ಹಿರೇಮಠರ ನೆನಪಿಗ ಕಂಬನಿಗಳೇ ಕಾಣಿಕೆ.

‍ಲೇಖಕರು Admin

August 14, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

5 ಪ್ರತಿಕ್ರಿಯೆಗಳು

 1. Shyamala Madhav

  Very touching! Congrats, Sudha.for the narration and for the company of a great soul! Wish I had the chance of listening to your Englishlessons.
  – Shyamala Madhav.

  ಪ್ರತಿಕ್ರಿಯೆ
 2. ಎಚ್.ಎಸ್. ರಾಘವೇಂದ್ರ ರಾವ್

  ಪ್ರೊ. ಎಸ್.ಎಸ್. ಹಿರೇಮಠ್ ಅವರನ್ನು ಹತ್ತಿರದಿಂದ ನೋಡುವ ಅವಕಾಶ ನನಗೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಿಕ್ಕಿತ್ತು. ಅವರ ಬದ್ಧತೆ, ಪ್ರಾಮಾಣಿಕತೆ ಮತ್ತು ಸರಳತೆಗಳು ನನ್ನ ಮೇಲೆ ಪ್ರಭಾವ ಬೀರಿದ್ದವು. ಅವರನ್ನು ಅಲ್ಲಿಯೇ ಉಳಿಸಿಕೊಳ್ಳುವ ಪ್ರಯತ್ನ ಯಶಸ್ವಿಯಾಗಲಿಲ್ಲ. ಕರ್ನಾಟಕದ ಸಂಸ್ಕೃತಿಯ ಬಗ್ಗೆ ಅವರು ಮಾಡಿರುವ ಕೆಲಸ ಬಹಳ ಮುಖ್ಯವಾದುದು. ವೈಯಕ್ತಿಕ ದುರಂತಗಳನ್ನು ಪದೇಪದೇ ಎದುರಿಸಬೇಕಾಗಿ ಬಂದರೂ ಅವರು ಎದೆಗುಂದಲಿಲ್ಲ. ಎರಡರಿಯದ ಈ ಮಾರ್ಕ್ಸ್ ವಾದಿ/ದಲಿತಪರವಾದಿ ಚಂತಕನ ನೆನಪುಗಳು ನನ್ನಲ್ಲಿ ಎಂದಿಗೂ ಉಳಿಯುತ್ತವೆ. ಈ ಲೇಖನಕ್ಕಾಗಿ ಸುಧಾ ಚಿದಾನಂದ ಗೌಡ ಅವರಿಗೆ ವಂದನೆಗಳು.

  ಪ್ರತಿಕ್ರಿಯೆ
 3. Sudha ChidanandGowd

  Thanq Avadhi

  @ HSR sir, thanq very much. am honoured.

  @ Prabhakar sir,….u can go to my facebook acount for some photographs.

  @ Shamala Madhav- thanx

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: