ಅವರು 'ಕುವೆಂಪು'

ಮೂರ್ತಿ ಪೂಜೆ-೧
ಪೂಜಾರಿಗಳು ಎಂಬ ಹೆಸರು ಹೊತ್ತ ಮೇಲ್ ಒಂದು ‘ಅವಧಿ’ ಇನ್ ಬಾಕ್ಸ್ ಗೆ ಬಂದು ಬಿದ್ದಾಗ ಆಶ್ಚರ್ಯವಾಯಿತು. ನಾವು ಮೂರ್ತಿ ಪೂಜೆ ಮಾಡಲು ಸಜ್ಜಾಗಿರುವ ಪೂಜಾರಿಗಳು ಎಂದು ಅದರಲ್ಲಿ ಘೋಷಿಸಲಾಗಿತ್ತು. ಮತ್ತೆ ತಡಕಾಡಿ ನೋಡಿದರೆ ಅರೆ..! ಇವರು ನಮ್ಮ ಗುರು ಮತ್ತು ದತ್ತು.
ಇಂದಿನಿಂದ ಪ್ರತೀ ಸೋಮವಾರ ಮೂರ್ತಿ ಪೂಜೆ ಕಾಣಿಸಿಕೊಳ್ಳುತ್ತದೆ. ನಾರಾಯಾಣ ಮೂರ್ತಿ , ವಿಪ್ರೋ ಮೂರ್ತಿಗಳನ್ನೇ ಆದರ್ಶವಾಗಿಸಿಕೊಂಡುಬಿಟ್ಟಿರುವ ಈ ದಿನಗಳಲ್ಲಿ ಗುರು ಮತ್ತು ದತ್ತು ನಾವು ನೆನಪಿಡಬೇಕಾದವರನ್ನು ಇಲ್ಲಿ ನೆನಪಿಸಿಕೊಡಲಿದ್ದಾರೆ. ಇನ್ನೂ ಹೆಚ್ಚಿಗೆ ಬೇಕಾದಲ್ಲಿ ಭೇಟಿ ಕೊಡಿ- ಮೂರ್ತಿ ಪೂಜೆ

ಕುವೆಂಪುರವರ ಈ ಮೂರ್ತಿ ಲಾಲ್ ಬಾಗ್ ಉದ್ಯಾನವನದ ಪಶ್ಚಿಮ ಹೆಬ್ಬಾಗಿಲು ಹತ್ತಿರವಿದೆ

ಮೂರ್ತಿ ಇರುವ ಸ್ಥಳ: ಕುವೆಂಪು ಕಲಾಕ್ಷೇತ್ರ, ಒಕ್ಕಲಿಗರ ಸಂಘದ ಆವರಣ, ಕೆಆರ್ ರಸ್ತೆ, ಬೆಂಗಳೂರು
೧೯೦೪, ೨೯ ಡಿಸೆಂಬರ್ ದಿನ ಕುಪ್ಪಳಿ ವೆಂಕಟಪ್ಪಗೌಡ ಪುಟ್ಟಪ್ಪ (ಕೆ. ವಿ. ಪುಟ್ಟಪ್ಪ – ಕುವೆಂಪು) ಜನಿಸಿದರು. ಅವರ ಜನ್ಮಸ್ಥಳ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಒಂದು ಕುಗ್ರಾಮವಾದ ಹಿರಿಕೊಡಿಗೆ- ಅದು ಅವರ ತಾಯಿಯ ತವರು. ಇಂತಹ ಪುಟ್ಟಪ್ಪನವರು ಕನ್ನಡ ನಾಡಿನಲ್ಲಿ ದೊಡ್ಡ ಕವಿಯಾಗಿ ಬೆಳೆದಿದ್ದು ನಮಗೆ ಗೊತ್ತಿರುವ ಇತಿಹಾಸ.
ಕುವೆಂಪುರವರು ಬರವಣಿಗೆ ಪ್ರಾರಂಭಿಸಿದ್ದು ಇಂಗ್ಲಿಷ್ ಕವನಗಳಿಂದ. ೧೯೨೪ನೆಯ ಜುಲೈ ೨ ನೆಯ ತಾರೀಖು ಪುಟ್ಟಪ್ಪನವರು ಐರಿಷ್ ಕವಿ ಜೇಮ್ಸ್ ಕಸಿನ್ಸ್ ಅವರನ್ನು ಭೇಟಿಯಾಗಿ, ತಮ್ಮ ಇಂಗ್ಲೀಷ್ ಕವನಗಳ ಬಗ್ಗೆ ಅಭಿಪ್ರಾಯ ಹೇಳುವಂತೆ ಕೇಳಿದರು. ಕಸಿನ್ಸ್‌ರು ಪುಟ್ಟಪ್ಪನವರ ಕವನಗಳನ್ನು ನೋಡಿದರು. ಮತ್ತೆ ತಲೆಯೆತ್ತಿ, ಸ್ವದೇಶೀ ಚಳವಳಿಯ ಪರಿಣಾಮವಾಗಿ ಖಾದಿ ತೊಟ್ಟು ಎದುರಿಗೆ ನಿಂತಿದ್ದ ಪುಟ್ಟಪ್ಪನವರನ್ನು ಆಪಾದಮಸ್ತಕ ನೋಡಿದರು. ಅಲ್ಲಿ ನಡೆದ ಸಂಭಾಷಣೆಯನ್ನು ಕುವೆಂಪು ಅವರ ಮಾತಲ್ಲೇ ಓದೋಣ:
“ಕಸಿನ್ಸ್ ಸ್ವಲ್ಪ ಅಸಮಾಧಾನದ ಧ್ವನಿಯಿಂದಲೆ ಮಾತನಾಡಿದರು: ಏನಿದೆಲ್ಲ ಕಗ್ಗ ? ನಿಮ್ಮ ಮೈಮೇಲೆ ನೋಡಿದರೆ ತಲೆಯಿಂದ ಕಾಲಿನವರೆಗೂ ಸ್ವದೇಶೀ ವಸ್ತುಗಳೆ ಕಾಣುತ್ತವೆ. ಇದು ಮಾತ್ರ ಸ್ವದೇಶಿಯಲ್ಲ. ನಿಮ್ಮ ಭಾಷೆಯಲ್ಲಿ ಏನಾದರೂ ಬರೆದಿದ್ದೀರಾ?” “ಅವರ ಆ ಧ್ವನಿಗೂ ಭಂಗಿಗೂ ನನಗಾಗಲೆ ಮುನಿಸು ಬರತೊಡಗಿತ್ತು. ನನ್ನ ಇಂಗ್ಲಿಷ್ ಕವನಗಳನ್ನು ನೋಡಿ, ನನ್ನ ಭಾರತೀಯ ಮಿತ್ರರೂ ಅಧ್ಯಾಪಕರೂ ಶ್ಲಾಘಿಸಿದ್ದಂತೆ, ಅವರೂ ಅವುಗಳನ್ನು ಮೆಚ್ಚಿ ಹೊಗಳುತ್ತಾರೆ ಎಂದು ಆಸೆಪಟ್ಟಿದ್ದ ನನಗೆ ತುಂಬಾ ತೇಜೋವಧೆಯಾದಂತಾಗಿ ನಿರಾಶೆಯಾಯಿತು. ನಾನು ಕನ್ನಡದಲ್ಲಿ ಆಗಲೆ ‘ಅಮಲನ ಕಥೆ’ಯನ್ನು ಮತ್ತು ಇತರ ಒಂದೆರಡು ಕವನ ಬರೆಯುವ ಪ್ರಯತ್ನವನ್ನೂ ಮಾಡಿದ್ದೆನಾದರೂ ಅವರ ಪ್ರಶ್ನೆಗೆ ಮರೆತವನಂತೆ ಉತ್ತರಿಸಿದೆ: “ಇಲ್ಲ. ಕನ್ನಡದಲ್ಲಿ, ಇಂಗ್ಲಿಷಿನಲ್ಲಿ ಸಾಧ್ಯವಾಗುವಂತೆ, ಉದಾತ್ತ ಭಾವಗಳನ್ನು ಉನ್ನತ ಆಲೋಚನೆಗಳನ್ನು ಹೇಳಲು ಸಾಧ್ಯವಾಗುವುದಿಲ್ಲ. ಆ ಭಾಷೆಯ ಮಟ್ಟ ಬಹಳ ಕೀಳು. ಅಲ್ಲದೆ ಅದರಲ್ಲಿರುವ ಛಂದಸ್ಸು ಹಳೆಯ ಕಂದಾಚಾರದ ಛಂದಸ್ಸು, ವೃತ್ತ, ಕಂದ ಇತ್ಯಾದಿ. ಇಂಗ್ಲಿಷಿನಲ್ಲಿರುವ ಛಂದೋ ವೈವಿಧ್ಯ ಇಲ್ಲವೆ ಇಲ್ಲ.”
“ಈಗ ನನಗೆ ಅತ್ಯಂತ ಅವಿವೇಕವಾಗಿಯೂ ಹಾಸ್ಯಾಸ್ಪದವಾಗಿಯೂ ಧೂರ್ತವಾಗಿಯೂ ತೋರುವ ನನ್ನ ಆ ಉತ್ತರವನ್ನು ಆಲಿಸಿ ಪರಿಣತ ಮನಸ್ಸಿನವರೂ ಅನುಭವಶಾಲಿಯೂ ಆಗಿದ್ದ ಅವರು ಸೌಮ್ಯ ಸಾಂತ್ವನಕರ ಧ್ವನಿಯಿಂದ ಹೇಳಿದರು: “ಹಾಗೆಲ್ಲ ಯಾವ ಭಾಷೆಯೂ ತನಗೆ ತಾನೆ ಅಸಮರ್ಥವಲ್ಲ. ಸಮರ್ಥನೊಬ್ಬನು ಬರುವತನಕ ಮಾತ್ರ ಅದು ಅಸಮರ್ಥವೆಂಬಂತೆ ತೋರಬಹುದು, ಅಸಮರ್ಥರಿಗೆ. ಸಮರ್ಥನು ಬಂದೊಡನೆ ಅವನ ಕೈಯಲ್ಲಿ ಅದು ಎಂತಹ ಅದ್ಭುತವನ್ನಾದರೂ ಸಾಧಿಸಬಲ್ಲದು. ಬಂಗಾಳಿ ಭಾಷೆ ಕೂಡ ನೀವು ನಿಮ್ಮ ಭಾಷೆಯನ್ನು ಕುರಿತು ಹೇಳಿದಂತೆಯೇ ಅದೂ ಇತ್ತು. ರವೀಂದ್ರನಾಥ ಠಾಗೂರರು ಬಂದು ಹೊಸ ಹೊಸ ರೀತಿಯಲ್ಲಿ ಬರೆದರು. ಹೊಸ ಛಂದಸ್ಸುಗಳನ್ನು ಕಂಡುಹಿಡಿದರು. ಅವರಿಗೆ ನೊಬೆಲ್ ಬಹುಮಾನವೂ ಬಂದಿತು! ಹಾಗೆಯೇ ನೀವೂ ಹೊಸ ಹೊಸ ಛಂದಸ್ಸುಗಳನ್ನು ಕಂಡುಹಿಡಿದು, ಹೊಸ ಹೊಸ ಪದಪ್ರಯೋಗಗಳನ್ನು ಸಾಧಿಸಿ, ಹೊಸ ರೀತಿಯ ಸಾಹಿತ್ಯ ಸೃಷ್ಟಿಮಾಡಬೇಕು. ನೀವು ಸೃಷ್ಟಿಸುವ ಸಾಹಿತ್ಯ ಶ್ರೇಷ್ಠವೆಂದು ತೋರಿ ಬಂದರೆ ನಾವು ಅದನ್ನು ಇಂಗ್ಲೀಷಿಗೆ ಭಾಷಾಂತರಿಸಿಕೊಳ್ಳುತ್ತೇವೆ, ರವೀಂದ್ರರ ಸಾಹಿತ್ಯ ಇಂಗ್ಲೀಷಿಗೆ ಭಾಷಾಂತರವಾಗಿರುವಂತೆ. ನೀವು ಇಂಗ್ಲೀಷಿನಲ್ಲಿ ಸೃಜನ ಸಾಹಿತ್ಯ ಸೃಷ್ಟಿ ಮಾಡಲಾರಿರಿ. ಅದು ನಿಮಗೆ ಪರಭಾಷೆ. ಹುಟ್ಟಿನೊಡನೆ ಬಂದ ಭಾಷೆಯಲ್ಲಿ ಮಾತ್ರ ಉತ್ತಮ ಸೃಜನ ಸಾಹಿತ್ಯ ಸೃಷ್ಟಿಯಾಗಬಲ್ಲದು. ಅದರಲ್ಲಿಯೂ ಕವಿತೆಯಲ್ಲಂತೂ ಉತ್ತಮ ಸೃಜನ ಸಾಹಿತ್ಯ ಯಾರಿಗೂ ಪರಭಾಷೆಯಲ್ಲಿ ಸಾಧ್ಯವಿಲ್ಲ. ಅದು ನಿಮಗೆ ಗೊತ್ತಾಗುವುದೂ ಇಲ್ಲ. ಅದನ್ನು ಓದುವ ನಮಗೆ ಗೊತ್ತಾಗುತ್ತದೆ, ಅದೆಂತಹ ನಗೆಪಾಟಲ ಸೃಷ್ಟಿ ಎಂಬುದು.” ಎಂದು ವಿವೇಕದ ಮಾತುಗಳನ್ನು ಹೇಳಿ ಬೀಳ್ಕೊಟ್ಟರು. ಕಸಿನ್ಸ್ ಅವರ ಹಿತವಚನ ಮೇಲೆ ಮೇಲಕ್ಕೆ ತಿರಸ್ಕೃತವಾಗಿದ್ದರೂ ಸುದೈವದಿಂದ ನನ್ನ ಅಂತಃಪ್ರಜ್ಞೆ ಅದನ್ನು ಒಪ್ಪಿಕೊಂಡಿತ್ತೆಂದು ತೋರುತ್ತದೆ. ಕನ್ನಡ ವಾಗ್ದೇವಿಯ ಕೃಪೆಯೂ ಆ ಸುಸಂಧಿಯನ್ನು ಉಪಯೋಗಿಸಿಕೊಂಡು ತನ್ನ ಕಂದನನ್ನು ತನ್ನ ಹಾಲೆದೆಗೆ ಎಳೆದುಕೊಂಡಳು!”
ಅಂದು ಆ ಐರಿಶ್ ಕವಿ ಹೇಳಿದ ಮಾತಿನಲ್ಲಿ ನಮಗೂ ಒಂದು ಪಾಠವಿದೆಯಲ್ಲವೇ ? ಕುವೆಂಪುರಿಗೆ ಎಂಟು ದಶಕಗಳ ಹಿಂದೆಯೇ ಮನವರಿಕೆಯಾದ ಸತ್ಯ, ನಮಗೆ ಇನ್ನಾದರೂ ಅರ್ಥವಾದೀತೆ ?
:

‍ಲೇಖಕರು avadhi

February 1, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: