ಅವರು ನನ್ನ ಅಪ್ಪ..


ಡಿಸೆಂಬರ್ ೧೬ರ ಈ ಬೆಳಗಿಗೆ..
-ಸುಧನ್ವ ದೇರಾಜೆ
ಚಂಪಕಾವತಿ
ಆಲದ ಮರದ ಬುಡದಲ್ಲಿ ಮಣ್ಣುಂಟು,
ಒಳಗೆ ಹೊಕ್ಕಳಿನಿಂದ ನೆತ್ತಿವರೆಗೆ
ನೆಳಲಾಗಿ ಉಂಟು ಸಾವಿರ ಕಂಭದ ಬಸದಿ;
ಹೊರಗೆ ತರುವ ಪವಾಡ ಕಾದು ಕುಳಿತೆ.
ಗೋಪಾಲಕೃಷ್ಣ ಅಡಿಗರು ೧೯೭೧ರಲ್ಲಿ ಬರೆದ ‘ಅಜ್ಜ ನೆಟ್ಟಾಲ’ ಪದ್ಯದ ಈ ಕೊನೆಯ ಸಾಲುಗಳ ಹಾಗೆ, ಅಪ್ಪ ಕಾದು ಕುಳಿತಿದ್ದರೆ? ಕೊನೆಯವರೆಗೂ ಅದು ಕಾಯುವಿಕೆಯೇ ಆಯಿತೇ? ಬರೀ ಜಾಲಿ, ಕತ್ತಾಳೆ, ಈಚಲು, ಕುರುಚಲು ಬೆಳೆದವೇ? ಅಲ್ಲಾ, ಅಜ್ಜ ನೆಟ್ಟಾಲ ಮನೆ ಮುಂದೆ ತೇರಿನ ಹಾಗೆಯೇ ಉಳಿದು ಬಂತೆ?!
ನವ್ಯ ಸಾಹಿತ್ಯ ವಿಜೃಂಭಿಸುತ್ತಿದ್ದ ೧೯೭೦ರ ದಶಕ. ಕತೆ-ಕವನ ಬರೆಯುತ್ತಿದ್ದವರೆಲ್ಲ ಮೇಷ್ಟ್ರುಗಿರಿ ಮಾಡುತ್ತಿದ್ದ ಕಾಲ! ಪಿಯುಸಿಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದ ಅಪ್ಪನಿಗೆ ಲೆಕ್ಚರರ್ ಆಗುವ ಹಂಬಲ. ಆದರೇನು, ಅದೇ ಸಮಯಕ್ಕೆ ಅವರ ತಂದೆ ಅನಾರೋಗ್ಯ ಪೀಡಿತರಾದರು, ತೀರಿಕೊಂಡರು. ಸ್ವತಂತ್ರ ಬದುಕಿಗೆ ಕಾಲಿಡಬೇಕಾದ ವ್ಯಕ್ತಿಯ ಹಿಂದಿನ ಮೆಟ್ಟಿಲುಗಳೆಲ್ಲ ತೊಪತೊಪನೆ ಉದುರಿಹೋದವು. ಮುಂದೆ ಕತ್ತೆತ್ತಿದ್ದರೆ ಸಾವಿರಾರು ಮೆಟ್ಟಿಲುಗಳ ಬದುಕ ಬೆಟ್ಟ. ತೋಟಗದ್ದೆ, ಕೆಲಸದಾಳುಗಳು, ತಮ್ಮಂದಿರು ತಂಗಿಯಂದಿರು, ಮನೆತನದ ಮರ್ಯಾದೆ ಹೊಂದಿದ, ಲಕ್ಷ್ಮೀ ಭಂಡಾರ ಖಾಲಿಯೇ ಇದ್ದ ಹಳ್ಳಿ ಮನೆಯ ಜವಾಬ್ದಾರಿ ಅವರ ತಾರುಣ್ಯದ ಮೇಲೆ ಆತುಕೊಂಡಿತು. ಮತ್ತಿನ್ನೇನು? ತಮ್ಮೆಲ್ಲ ಕನಸುಗಳನ್ನು ಕಟ್ಟಿಟ್ಟು, ತಾವು ಇದ್ದಲ್ಲೇ, ತಮ್ಮ ಬಳಿಯಿದ್ದ ಸಂಪನ್ಮೂಲದಲ್ಲೇ ಬದುಕು ಕಟ್ಟುವ ನಿರ್ಧಾರ ಮಾಡಿರಬೇಕು ಅವರು. ಆದರೆ ಕೇವಲ ತೋಟಗದ್ದೆ ನೋಡಿಕೊಂಡಿರುವುದರಲ್ಲಿ ಅವರಿಗೆ ತೃಪ್ತಿಯಿರಲಿಲ್ಲ. ಹಾಗಾಗಿ ಸಾಕ್ಷಿ, ಸಂಕ್ರಮಣದಂಥ ಸಾಹಿತ್ಯಕ ಪತ್ರಿಕೆಗಳಿಗೆ- ಉದಯವಾಣಿ, ಸುಧಾ, ಪ್ರಜಾವಾಣಿಗಳಿಗೆ ಬರೆಯುತ್ತಾ ಕವಿಯಾದರು. ಕಮ್ಯುನಿಸ್ಟ್, ಜನತಾ ಪಕ್ಷಗಳ ಮೂಲಕ ರಾಜಕಾರಣಿಯಾದರು. ಯಕ್ಷಗಾನದ ಅರ್ಥಧಾರಿ-ವೇಷಧಾರಿಯಾಗಿ, ಊರಿನ ದೇವಸ್ಥಾನಗಳ ಸಮಿತಿಯ ಪದಾಧಿಕಾರಿಯಾಗಿ, ನೆರೆಹೊರೆಯವರ ಜಗಳ ಪರಿಹರಿಸುವ ಪಂಚಾಯಿತಿಕೆದಾರನಾಗಿ ಕಾಣಿಸಿಕೊಳ್ಳತೊಡಗಿದರು. ಅಮ್ಮ ಮನೆಗೆ ಬಂದಳು.

ಅಪ್ಪ ಸತ್ಯಮೂರ್ತಿ ದೇರಾಜೆ ಮತ್ತು ಅಮ್ಮ ಜಯಂತಿ ದೇರಾಜೆ ಜತೆ ಹಿಂದೆ ಹಿಂದಕ್ಕೆ ಹೋದರೆ ನೆನಪಿರುವುದು ಹೀಗೆ -ರಾತ್ರಿಯಾಗುತ್ತಿದ್ದಂತೆ ದೇವರ ಕೋಣೆಗೆ ಕರೆದು ‘ಗಣಪ ಗಣಪ ಏಕದಂತ ಪಚ್ಚೆಕಲ್ಲು ಪಾಣಿಪೀಠ…’ ಹೇಳಿಸುವ, ಮನೆ ಹಿಂದಿನ ಗುಡ್ಡಕ್ಕೆ ಹೋಗುವಾಗ ಮಗ್ಗಿ- ಕೂಡು-ಕಳೆ ಲೆಕ್ಕ ಕಲಿಸುವ, ಹಳೆ ಗಡಿಯಾರ ತಂದು ಮುಳ್ಳು ತಿರುಗಿಸುತ್ತಾ ಟೈಮು ನೋಡಲು ಹೇಳಿಕೊಡುವ, ಸಂಗೀತ ಕ್ಲಾಸಿಗೆ ಕರೆದೊಯ್ಯುವ, ಶಾಲಾ ಡ್ಯಾನ್ಸ್‌ಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುವ ಅಮ್ಮ. ಬರೀ ಮುದ್ದು ಮಾಡಿ ಲಲ್ಲೆಗರೆದು, ಮಗುವಿನೊಳಗೆ ಸ್ಪಂಜ್ ತುಂಬಿಸುವ ಕೆಲಸ ಆಕೆ ಮಾಡಿದಂತಿಲ್ಲ! ರಾತ್ರಿ ನಾನು ನಿದ್ದೆ ಹೋಗುವವರೆಗೆ ಪುರಾಣ ಕತೆಗಳನ್ನು ಹೇಳುವುದಕ್ಕೆ, ಆಗಸದಲ್ಲಿ ಲೀನವಾಗುವಂತೆ ಚೆಂಡೆಸೆದು ಅಚ್ಚರಿಗೊಳಿಸುವುದಕ್ಕೆ ಅಪ್ಪ. ಆದರೆ ನಾಲ್ಕನೇ ಕ್ಲಾಸ್ ಮುಗಿಸಿ, ಹಿಂದಿ-ಇಂಗ್ಲಿಷ್‌ಗಳು ಬಂದು ಗಣಿತ ಕಷ್ಟವಾಗತೊಡಗಿದಾಗ, ಶಾಲೆಯ ಎಲ್ಲ ಚಟುವಟಿಕೆಗಳಲ್ಲಿ ನನ್ನೊಂದಿಗೆ ತೊಡಗಿಸಿಕೊಂಡವರು ಅಪ್ಪ. ಭಾಷಣ-ಪ್ರಬಂಧ ಬರೆಯಲು ಸಹಾಯ ಮಾಡುವುದು, ಸ್ಪರ್ಧೆಗಳಿಗೆ ಕರೆದೊಯ್ಯುವುದು, ಚಪ್ಪಲಿ-ಅಂಗಿ ಕೊಡಿಸುವುದು, ಯಕ್ಷಗಾನ-ನಾಟಕಗಳಿಗೆ ಹೋಗುವುದು, ಹೀಗೆ ಎಲ್ಲದರಲ್ಲೂ ಅಪ್ಪನ ಜತೆ. ಸಮಾಜದಲ್ಲಿ ಆಗಲೇ ಒಂದಷ್ಟು ಹೆಸರು ಸಂಪಾದಿಸಿದ್ದ ಅಪ್ಪನ ಬಗ್ಗೆ ನನಗೆ ಹೆಮ್ಮೆಯಿತ್ತು, ಆತ ಮನೆಯ ಸರ್ವಸಂರಕ್ಷಕನೆಂಬ ಧೈರ್‍ಯವಿತ್ತು. ಸುಬ್ರಹ್ಮಣ್ಯ ಸ್ವಾಮಿಗಳ ಒಳಕೋಣೆಗೆ ನನ್ನ ಕರೆದೊಯ್ದ ಅಪ್ಪನಿಗೆ, ಅಲ್ಲಿಂದ ಹಿಂದಿರುಗಿ ಬರುವಾಗ ಸರ್ವೀಸ್ ಕಾರಿನ ಡ್ರೈವರ್ ಬಯ್ದಿದ್ದ. ಅದೂ ನಿಲ್ಲಿಸಲು ‘ಶೂ ಶೂ’ ಅಂದದ್ದಕ್ಕೆ ! ‘ನೀವೇನು ಕೋಳಿ ಓಡಿಸುವುದಾ? ನಿಲ್ಲಿಸಿ ಅಂತ ಹೇಳ್ಲಿಕ್ಕಾಗುವುದಿಲ್ವಾ’ ಅಂತ ಆತ ಬೈದಿದ್ದ. ಆಗ ಅಪ್ಪ ಕೈಲಾಗದವರಂತೆ ತೆಪ್ಪಗಿದ್ದದ್ದು ನನ್ನಲ್ಲಂತೂ ಆಶ್ಚರ್ಯ ಹುಟ್ಟಿಸಿತ್ತು. ಆದರೆ ಬಡವನ ಸಿಟ್ಟು ದವಡೆಗೆ ಮೂಲ ಎಂಬುದು ಅವರಿಗೆ ಸರಿಯಾಗಿ ಗೊತ್ತಿತ್ತಾ?!
೧೯೯೨ರಲ್ಲಿ ನಮ್ಮ ಗ್ರಾಮ ದೇವಸ್ಥಾನದ ಬ್ರಹ್ಮಕಲಶೋತ್ಸವ ನಡೆದಾಗ ಸಿದ್ಧಪಡಿಸಿದ ಸ್ಮರಣ ಸಂಚಿಕೆಗೆ, ಅಪ್ಪ ಬರೆದ ಸಂತುಲಿತ ಸಂಪಾದಕೀಯ ಅವರ ಧೋರಣೆಯನ್ನು ತೆರೆದಿಡುತ್ತದೆ. ಆಗ ದಕ್ಷಿಣಕನ್ನಡದ ಎಲ್ಲೆಂದರಲ್ಲಿ ಹಳೆ ದೇವಾಲಯಗಳ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿತ್ತು. “ಇಂಥ ಸಂದರ್ಭದಲ್ಲಿ ಭಾರತೀಯ ಸಂಸ್ಕೃತಿಯ ಹಾಗೂ ಅದು ಪ್ರತಿಪಾದಿಸುವ ಮೌಲ್ಯಗಳ ಪುನರ್ ಮೌಲ್ಯಮಾಪನ ಆಗಬೇಕು. ಈವರೆಗಿನ ನಮ್ಮ ಅನುಭವಗಳ ಬೆಳಕಿನಲ್ಲಿ ಚಿಂತನ ಮಂಥನ ನಡೆಯಬೇಕು…ದೇವರ ಕುರಿತಾದ ನಂಬಿಕೆ ಜೀವನದ ಒಂದು ವಿಭಾಗ ಅಲ್ಲ. ಅದು ಜೀವನವನ್ನು ಪೂರ್ತಿಯಾಗಿ ಒಳಗೊಳ್ಳಬೇಕು. ಹಾಗಾದಾಗ ಮಾತ್ರ ಆ ನಂಬಿಕೆಯು ಮಾನವನನ್ನು ಮತ್ತಷ್ಟು ಸುಸಂಸ್ಕೃತನನ್ನಾಗಿಸಿ ಉದಾತ್ತಗೊಳಿಸುತ್ತದೆ…ನಮ್ಮೆಲ್ಲ ತತ್ತ್ವಜ್ಞಾನಗಳ ಪರಮ ಲಕ್ಷ್ಯ ಮೋಕ್ಷ. ಅಂದರೆ ಬಿಡುಗಡೆ, ಯಾವುದರಿಂದ ಬಿಡುಗಡೆ? ಎಲ್ಲ ಬಗೆಯ ಬಂಧನದಿಂದ; ಎಲ್ಲ ಬಗೆಯ ಭಯದಿಂದ; ಎಲ್ಲ ಬಗೆಯ ನೀಚತನದಿಂದ; ಎಲ್ಲ ಬಗೆಯ ಪೂರ್ವಾಗ್ರಹಗಳಿಂದ. ಅದಕ್ಕೆ ಬೇಕು ಮುಕ್ತ ನಿರೀಕ್ಷಣೆ; ಮುಕ್ತ ಚಿಂತನೆ.’ ಅಂತ ಅವರು ಸಂಪಾದಕೀಯದಲ್ಲಿ ಬರೆದರು. ದೇವರೂ ಬದುಕಿನಲ್ಲಿ(ಹೆಂಡತಿ-ಮಕ್ಕಳ ಹಾಗೆ)ಒಳಗೊಳ್ಳಬೇಕೆನ್ನುವುದು ಎಷ್ಟೊಳ್ಳೆಯ ಆಸೆ !
ಒಂದೇ ಹಾದಿಯಲ್ಲಿ ನಡೆದಿದ್ದರೆ ತಾನು ಇನ್ನಷ್ಟು ಎತ್ತರಕ್ಕೆ ಏರಿಬಿಡುತ್ತಿದ್ದೆ. ಆದರೆ ತನಗೆ ನಿಜವಾಗಿ ಯಾವುದು ಬೇಕು ಎಂದು ತಿಳಿಯುವಷ್ಟರಲ್ಲೇ ತಡವಾಯಿತು. ಮೊದಲಿನಿಂದಲೇ ತಾನು ಈ ಯಕ್ಷಗಾನ ತಾಳಮದ್ದಳೆಯಲ್ಲಷ್ಟೇ ಗಮನ ಇಟ್ಟಿದ್ದರೆ ಚೆನ್ನಾಗಿತ್ತು ಅಂತ ನಲ್ವತ್ತರ ಬಳಿಕ ಅವರು ಅಂದುಕೊಳ್ಳುತ್ತಿದ್ದರು. ಆದರೆ ಯಕ್ಷಗಾನದ ಬಗೆಗಿನ ಅಭಿಪ್ರಾಯ ಮಾತ್ರ ಅವರಿಗೆ ಮೊದಲೇ ಸ್ಪಷ್ಟವಾಗಿತ್ತು. “ಯಕ್ಷಗಾನದ ರೂಪ ಹಾಗೂ ಕಥಾವಸ್ತುಗಳ ನಡುವಿನ ಬಂಧ ಎಷ್ಟೊಂದು ಅನ್ಯೋನ್ಯ ಹಾಗೂ ಬಿಗಿಯಾಗಿದೆಯೆಂದರೆ, ಯಾವುದೇ ಒಂದನ್ನು ಬದಲಾಯಿಸಿದರೂ ಅದು ಯಕ್ಷಗಾನ ಅಲ್ಲ ಎನ್ನುವ ಹಾಗಿದೆ. ಅದರಲ್ಲಿ ಕಲೋಚಿತ ಸುಧಾರಣೆಗಳನ್ನು ಮಾಡಬಹುದೇ ಹೊರತು, ಕಾಲೋಚಿತವೆನ್ನುವ ಧೋರಣೆಯಿಂದ ಬದಲಾವಣೆಗಳನ್ನು ಮಾಡಲಾಗದು. ಇಂತಹ ಕಲೆ, ಬದಲಾಗುತ್ತಿರುವ ಕಾಲಮಾನದಲ್ಲಿ ಪ್ರಸ್ತುತವೆನಿಸುವುದು ಅಥವಾ ಅರ್ಥಪೂರ್ಣವೆನಿಸುವುದು ಹೇಗೆ? ಯಕ್ಷಗಾನ ಸಾಂಕೇತಿಕವಾದ ಅಥವಾ ಪ್ರತೀಕಾತ್ಮಕವಾದ ರಂಗಭೂಮಿ. ಅದು ಕಥಾವಸ್ತುವಿಗಾಗಿ ಪ್ರತೀಕಾತ್ಮಕವಾದ ಪುರಾಣಗಳನ್ನೇ ಆಶ್ರಯಿಸಿದೆ. ಪುರಾಣಗಳಲ್ಲಿ ನಮ್ಮ ಸಂಸ್ಕೃತಿಯ ಬೇರುಗಳಿವೆ. ಅವುಗಳಲ್ಲಿ ಸಾರ್ವಕಾಲಿಕವಾದ ಮತ್ತು ಸಾರ್ವತ್ರಿಕವಾದ ಮೌಲ್ಯಗಳಿವೆ’ ಎಂಬುದು ಅವರ ಅಭಿಪ್ರಾಯ. ಅವು ಯಾವುವು, ಯಕ್ಷಗಾನದಲ್ಲಿ ಅವು ಹೇಗೆ ಬರಬೇಕು ಅನ್ನುವುದಕ್ಕೆ ಅವರು ಹೇಳುವ ಹಲವು ಉದಾಹರಣೆಗಳಲ್ಲಿ ಒಂದನ್ನು ನೀವು ಓದಬೇಕು.
‘ಊರ್ವಶಿ ಶಾಪ’ ಪ್ರಸಂಗದಲ್ಲಿ ರತಿ ಸುಖದ ಬಿಸಿಯೂಟವನ್ನು ಉಣಿಸುವುದಕ್ಕೆ ಬಂದ ಊರ್ವಶಿಯಲ್ಲಿ ಧರ್ಮಾಧರ್ಮಗಳನ್ನು ವಿಮರ್ಶಿಸುತ್ತ ಅರ್ಜುನ ಹೇಳುತ್ತಾನೆ- ನಿನಗೆ ಧರ್ಮವೆನಿಸಿದ್ದು ನನಗೆ ಧರ್ಮವಾಗಬೇಕಿಲ್ಲ. ಹಾಗೆಂದು ನನಗೆ ಅಧರ್ಮವೆನಿಸಿದ್ದು ನಿನಗೆ ಅಧರ್ಮವಾಗಬೇಕಿಲ್ಲ. ತುಲನಾತ್ಮಕವಾಗಿ, ಭೋಗದಲ್ಲಿ ಧರ್ಮ ಸೂಕ್ಷ್ಮದ ವಿವೇಚನೆಯನ್ನು ಮಾಡಿದಷ್ಟು ತ್ಯಾಗದಲ್ಲಿ ಮಾಡಬೇಕಾಗಿಲ್ಲ. ಪಿತೃವಾಕ್ಯ ಪರಿಪಾಲನೆಗಾಗಿ ಸಿಂಹಾಸನ ತ್ಯಾಗ ಮಾಡುವುದಕ್ಕೆ ಶ್ರೀರಾಮಚಂದ್ರ ಹೆಚ್ಚು ಆಲೋಚಿಸಬೇಕಾದ್ದಿಲ್ಲ. ಆದರೆ ಮಾತೆಯ ಮಾತಿನಂತೆ ಸಿಂಹಾಸನವನ್ನು ಸ್ವೀಕರಿಸಿಬೇಕಾದರೆ ಭರತ ಬಹಳವಾಗಿ ಚಿಂತಿಸಬೇಕು’.
ಇದನ್ನು ಅಪ್ಪನೇ ಅರ್ಜುನನ ಪಾತ್ರದಲ್ಲಿ ಮೊದಲು ಹೇಳಿದರೋ, ಬೇರೆಯವರು ಹೇಳಿದ್ದರೋ ಗೊತ್ತಿಲ್ಲ. ಆದರೆ ಸಂಸ್ಕೃತಿಯ ಮುಖಗಳನ್ನು ಇಂತಹ ಸಂದರ್ಭದ ಮಾತುಗಳಲ್ಲಿ ಅವರು ಗುರುತಿಸಿದ ಬಗೆ ಮಾತ್ರ ತುಂಬಾ ಘನತೆಯುಳ್ಳದ್ದಾಗಿದೆ. “ಯಕ್ಷಗಾನಕ್ಕೆ ವಸ್ತು(theme)ಎಂಬುದಿಲ್ಲ. ಅದಕ್ಕಿರುವುದು ಕಥಾ ವಸ್ತು ಮಾತ್ರ. ಅಂದರೆ ಒಂದು ಪ್ರದರ್ಶನ ಒಟ್ಟಿನಲ್ಲಿ ಹೇಳುವುದು ಅರ್ಥಾತ್ “ಅದರ ಪ್ರಬಂಧ ಧ್ವನಿ ಇದು’ ಎನ್ನುವ ಸೂತ್ರವೇ ಯಕ್ಷಗಾನಕ್ಕಿಲ್ಲ. ಕಲಾವಿದ ಸೂಕ್ಷ್ಮ ಸಂವೇದನಾಶೀಲನೂ ಸೃಜನಶೀಲನೂ ಆಗಿದ್ದರೆ-ಯಕ್ಷಗಾನ ವೈದಿಕ ಸಂಸ್ಕೃತಿಯನ್ನೇ ಪೋಷಿಸುತ್ತದೆ, ವರ್ಣ ವ್ಯವಸ್ಥೆ ಸಮರ್ಥಿಸುತ್ತದೆ, ಅದು ಪ್ರತಿಗಾಮಿ ಕಲೆ ಎಂಬ ಆರೋಪಗಳನ್ನು ಸುಳ್ಳಾಗಿಸಬಹುದು. ಆಗ ಪಾತ್ರಗಳು ಹೆಚ್ಚು ಸಂಕೀರ್ಣವಾಗುತ್ತವೆ. ಕಪ್ಪು-ಬಿಳುಪು ವಿಂಗಡಣೆ ಮಾಯವಾಗುತ್ತದೆ. ಕಥಾವಸ್ತುವಿನ ಧ್ವನಿ ಹೊಸದಾಗುತ್ತದೆ’ ಅಂತ ಅವರು ನಂಬಿದ್ದರು. ಅಪ್ಪನ ಅರ್ಥಗಾರಿಕೆಯಲ್ಲೂ ಬದುಕಿನಲ್ಲೂ ಆರೋಗ್ಯಕರ ನವಿರು ಹಾಸ್ಯ ಸದಾ ಇತ್ತು. ಹಿಡಿಂಬೆಯು ಭೀಮನಿಗೆ _”ನಿನಗೆ ಹಾಡಲು ಬರುತ್ತದೆಯೆ ಭೀಮ?’ ಎಂದು ಪ್ರಶ್ನಿಸಿದರೆ ಇವರು ಭೀಮನಾಗಿ- ‘ಇಲ್ಲ ಬಾರಿಸಲು ಬರುತ್ತದೆ’ ಅನ್ನುತ್ತಿದ್ದರು ! ಹೀಗೆ ಮಾತಿನಲ್ಲಿ ಹೃದ್ಯವಾಗುವ ಗುಣ ಅವರಿಗಿತ್ತು.
ನವ್ಯ ಸಾಹಿತ್ಯದ ಘಮಲಿನಿಂದಾಗಿ ದೇವರು, ಸಂಪ್ರದಾಯ ಎಲ್ಲವುಗಳ ಬಗ್ಗೆ ನಿರ್ಲಕ್ಷ್ಯದಿಂದಿದ್ದ ಅಪ್ಪ, ನಲುವತ್ತು ದಾಟಿದ ನಂತರ, ಅವುಗಳ ಬಗ್ಗೆಯೂ ಕುತೂಹಲಿಗರಾದರು. ಭಗವದ್ಗೀತೆ, ಉಪನಿಷತ್, ಯೋಗ ವಾಸಿಷ್ಠ, ವಿವೇಕ ಚೂಡಾಮಣಗಳನ್ನು ಓದತೊಡಗಿದರು. ಅದು ಯಕ್ಷಗಾನ ತಾಳಮದ್ದಳೆಗೆ ಪೂರಕ ಅನ್ನುವುದೂ ಕಾರಣವಾಗಿತ್ತು. ಮೊದಲೆಲ್ಲಾ ಹೊರಗೆ ಹೋಗುವಾಗ ಜನಿವಾರ ಮನೆಯಲ್ಲಿಟ್ಟು ಹೋಗುತ್ತಿದ್ದವರು, ಈಗ ಅದನ್ನು ಒಮ್ಮೆಯೂ ತೆಗೆಯುತ್ತಿರಲಿಲ್ಲ! ಮಧ್ಯಾಹ್ನ ಮನೆ ದೇವರ ಪೂಜೆಯನ್ನು ಅವರೇ ಮಾಡತೊಡಗಿದರು. ಆದರೆ ಇವ್ಯಾವುವೂ ಬದುಕಿನಲ್ಲಿ ಸೋತದ್ದರಿಂದ ಬಂದವಲ್ಲ, ಗೆಲುವಿನ ಮೆಟ್ಟಿಲುಗಳನ್ನು ಏರತೊಡಗಿದಾಗ ಬಂದಂತವು ! ಅಡಿಗರ ಪದ್ಯಗಳನ್ನು, ಲಂಕೇಶ್ ಪತ್ರಿಕೆಯನ್ನು, ಅನಂತಮೂರ್ತಿ ಕಾದಂಬರಿಗಳನ್ನು ‘ಆರಂಭದ ಓದು’ ಎಂಬಂತೆ ಓದಿದ್ದ ನಾನು, ಅಪ್ಪನಿಂದಾಗಿ ಜಿಡ್ಡು ಕೃಷ್ಣಮೂರ್ತಿಯವರ ತತ್ತ್ವವನ್ನೂ ಭಗವದ್ಗೀತೆಯನ್ನೂ ಓದುವಂತಾಯಿತು. ದೇವರು-ಸಂಪ್ರದಾಯಗಳನ್ನು ಬೇರೆ ಕೋನಗಳಲ್ಲೂ ಕಾಣುವಂತಾಯಿತು.
ಎಲ್ಲವನ್ನೂ ಸಂಭಾಳಿಸಿಕೊಂಡು ಹೋಗುವ ಕೌಶಲ್ಯ ಸಿದ್ಧಿಸಿದ ಮೇಲೆ, ಯಾವುದೇ ಕೆಲಸಗಳಲ್ಲೂ ಎಲ್ಲರ ಮಾತು ಕೇಳಿಕೊಂಡು ತನ್ನದೇ ನಿರ್ಧಾರ ತೆಗೆದುಕೊಳ್ಳುವ ಛಾತಿ ಅವರಿಗಿತ್ತು. ಎಷ್ಟೇ ಕಷ್ಟವಾದರೂ ಭರವಸೆಯೊಂದು ಬತ್ತದಿರುತ್ತಿತ್ತು. ಬಹಳಷ್ಟು ಸಾಹಿತ್ಯಕ ಪರಿಚಾರಿಕೆ ಮಾಡಿದ ಚೊಕ್ಕಾಡಿಯ “ಸುಮನಸಾ ವಿಚಾರ ವೇದಿಕೆ’ ಸದಸ್ಯರಾಗಿ, “ಕಾರ್ತಿಕೇಯ ಯಕ್ಷಗಾನ ಕಲಾಸಂಘ ನಾರ್ಣಕಜೆ’ಯ ಸದಸ್ಯರಾಗಿ, ಐವರ್ನಾಡು ಪ್ರಾಥಮಿಕ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಾಧ್ಯಕ್ಷರಾಗಿ, ಐವರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ, ಐವರ್ನಾಡು ಪಂಚಲಿಂಗೇಶ್ವರ ದೇವಸ್ಥಾನದ ಸಹ ಮೊಕ್ತೇಸರರಾಗಿ, ಚೊಕ್ಕಾಡಿಯ ಶ್ರೀರಾಮ ದೇವಸ್ಥಾನದ ಸಮಿತಿಯ ಉಪಾಧ್ಯಕ್ಷರಾಗಿ, ಜನತಾ ಪಕ್ಷದ ಪದಾಧಿಕಾರಿಯಾಗಿ, ಸುಳ್ಯ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸದಸ್ಯರಾಗಿ ದುಡಿದವರು ಅಪ್ಪ. ಆದರೆ ಸಾಹಿತ್ಯ-ಯಕ್ಷಗಾನ-ದೇವಸ್ಥಾನ-ರಾಜಕೀಯಗಳು ಎಲ್ಲೂ ಒಂದರೊಳಗೊಂದು ಸೇರಿ ಅವರಿಗಾಗಲಿ ಇತರರಿಗಾಗಲೀ ಸಮಸ್ಯೆ ಸೃಷ್ಟಿಸಲಿಲ್ಲ. ಯಕ್ಷಗಾನ ತಾಳಮದ್ದಳೆ ಚಟುವಟಿಕೆಗಾಗಿ, ೧೯೯೯ರಲ್ಲಿ ‘ದೇರಾಜೆ ಸೀತಾರಾಮಯ್ಯ ಸಂಸ್ಕೃತಿ ರಂಗ’ ಎಂಬ ಸಂಘಟನೆ ಕಟ್ಟಿದ ಅವರು, ತನ್ನ ಸಾವಿನವೆರೆಗೂ (೧೬ ಡಿಸೆಂಬರ್ ೨೦೦೫) ಅದನ್ನು ಮುನ್ನಡೆಸಿಕೊಂಡಿದ್ದರು. (ಅವರ ಬರೆಹಗಳ ಸಂಕಲನ “ಮನವೆ ತನುವಾದವನು’ ಮತ್ತು ನೆನಪಿನ ಲೇಖನಗಳ ಸಂಕಲನ “ನೆನಪಿನುಂಗುರ’ವನ್ನು ದೇಸೀ ಸಂಸ್ಕೃತಿ ರಂಗ ೨೦೦೭ರಲ್ಲಿ ಪ್ರಕಟಿಸಿದೆ)
ಅಪ್ಪ ಅಮ್ಮನದ್ದು ದೊಡ್ಡ ಆಕಾಶ. ಹಾಗಾಗಿ ಇಬ್ಬರು ಮಕ್ಕಳಿಗೂ ಅಲ್ಲಿ ಧಾರಾಳ ಅವಕಾಶ ! ಬಹಳ ವಾಸ್ತವವಾದಿ, ಸೂಕ್ಷ್ಮಗ್ರಾಹಿ, ಹೊಂದಾಣಿಕೆಯ ಮನುಷ್ಯ ಈ ಅಪ್ಪ. ಹೊರಗೆ ಏನೇ ಮಾಡಲಿ, ನೋಡಲಿ ಅದನ್ನು ಅಮ್ಮನ ಜತೆ ಹೇಳಿಕೊಳ್ಳುವುದು ಅವರ ಅಭ್ಯಾಸ. ಆ ಮಾತುಕತೆಯಲ್ಲಿ, ಸುತ್ತಲಿನ ಸಮಾಜದ ಚಟುವಟಿಕೆಗಳು, ರಾಜಕೀಯ ಚಟುವಟಿಕೆಗಳು, ನೆರೆಕರೆಯವರ ಕಚ್ಚಾಟಗಳು, ದೇವಸ್ಥಾನದ ಚಟುವಟಿಕೆಗಳು ಹೀಗೆ ನೂರೆಂಟು ಅನುಭವಗಳ ಸಂಗತಿಗಳಿರುತ್ತಿದ್ದವು. ಅಪ್ಪನ ಹೊಂದಾಣಿಕೆಯ ಸ್ವಭಾವ ಹಾಗೂ ತಾಳ್ಮೆಯ ಬಗ್ಗೆ ಹಲವರು ಹೊಗಳುವುದುಂಟು. ಅವರನ್ನು ಕಂಡರೆ ಆಗದವರು ಅಂತ ಇರಲೇ ಇಲ್ಲವೇನೋ. ಅಪ್ಪ ಯಾವತ್ತೂ ಮಕ್ಕಳ ಸಹವಾಸವನ್ನು ದೂರ ಮಾಡಿದ್ದೇ ಇಲ್ಲ. ಮೂರು ಕಿಮೀ ದೂರದ ಪ್ರೈಮರಿ ಶಾಲೆಗೆ ನಾನು ಹೊರಟಾಗ, ಪೇಟೆ ಬಳಿ ಅವರಿಗೇನಾದರೂ ಕೆಲಸವಿದ್ದರೆ ಜತೆಗೆ ಹೊರಟುಬಿಡುತ್ತಿದ್ದರು. ದಾರಿಯುದ್ದಕ್ಕೂ ಅವರಿಗೆ ಹೇಳಲು ಏನಾದರೊಂದು ವಿಷಯ. ಅಷ್ಟೇಕೆ, ಬ್ಯಾಂಕಿನ ಮಹಾಸಭೆಗಳಿಗೆ, ಅಕ್ಕಿಸಾಮಾನು ತರಲು ಸುಳ್ಯ ಪೇಟೆಗೆ, ವಿಚಾರ ಗೋಷ್ಠಿಗಳಿಗೆ ಮಗ ಸಂಗಾತಿ. ಪಂಚವಟಿ ಪ್ರಸಂಗದ ರಾಮನಾಗಿ ಅವರು ಯಾವಾಗಲೂ ಹೇಳುತ್ತಿದ್ದ ಮಾತು, ‘ಬದುಕು ಹೇಗೆ ಒದಗಿ ಬರುತ್ತದೆಯೋ ಹಾಗೆ ಸ್ವೀಕರಿಸುವವನಿಗೆ, ಬದುಕು ಭಾರವೂ ಅಲ್ಲ ಅಸಹನೀಯವೂ ಅಲ್ಲ.’ ಅಪ್ಪ ಹಾಗೆ ಎದುರುಗೊಂಡಿದ್ದರು. ಹಳ್ಳಿಯಲ್ಲೇ ಉಳಿಯಬೇಕಾದ ಅನಿವಾರ್ಯತೆಯನ್ನು ಆಯ್ಕೆ ಎಂಬಂತೆ ಪರಿವರ್ತಿಸಿಕೊಂಡರು. ಐವರ್ನಾಡು-ಚೊಕ್ಕಾಡಿಗಳಂತಹ ಊರುಗಳ ಆರೋಗ್ಯವನ್ನು ಕಾಪಾಡುವಲ್ಲಿ, ಮನಸ್ಸು ರೂಪಿಸುವಲ್ಲಿ ಅವರ ಕಾರ್ಯ ದೊಡ್ಡದು. ಮನಸ್ಸು ಬಿಗಿ ಹಿಡಿದು ಯೋಚಿಸಿದರೆ, ಎಲ್ಲ ಅವರಿಂದ ಬಂದಿದ್ದೇ ಹೆಚ್ಚು! ನನ್ನದೇನು ಅಂತ ಅರೆಕ್ಷಣ ಗಾಬರಿಯಾಗುವಷ್ಟು, ಕೊಟ್ಟೂ ಹೋದ ಬಿಟ್ಟೂ ಹೋದ ಅವರಿಗೆ…ಅರ್ಧಕ್ಕೆ ನಿಂತ ಈ ನಾಲ್ಕು ಮಾತು.

‍ಲೇಖಕರು avadhi

December 16, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

11 ಪ್ರತಿಕ್ರಿಯೆಗಳು

 1. sharadabooks

  ಮಗನಾಗಿ ಓರ್ವ ಅಪ್ಪನನ್ನು
  ಇದಕ್ಕಿಂತ ಚೆನ್ನಾಗಿ ಅರ್ತ್ಥೈಸಲು ಸಾದ್ಯವೇ ?
  ಒಳ್ಳೆ ನುಡಿ ನಮನ.

  ಪ್ರತಿಕ್ರಿಯೆ
 2. Santhosh Ananthapura

  ಹೂಂ….ಏನು ಹೇಳಬೇಕೆಂದು ತೋಚುತ್ತಿಲ್ಲ ಸುಧನ್ವ. ಒಬ್ಬ ಮಗನಾಗಿ ಅಪ್ಪ ಎಂಬ ಮರವನ್ನು ಸುಂದರವಾಗಿ ಚಿತ್ರಿಸಿದ ಬಗೆ ಮಾತ್ರ ಅಧ್ಬುತ. ಆತನ ಎಲ್ಲವೂ ನೀವಾಗಿ, ನಿಮ್ಮ ಎಲ್ಲವೂ ಆತನಾಗಿದ್ದುದರಿಂದಲೇ ಇಷ್ಟೆಲ್ಲಾ ವಿಷ್ಯಗಳನ್ನು ಪೋಣಿಸಲು ಸಾಧ್ಯವಾಯಿತು ಎಂದು ಎನ್ನಬಹುದೇ…?. ಒಟ್ಟಿನಲ್ಲಿ, ಒಬ್ಬ ಮಗನಾಗಿ ಅಪ್ಪನಿಗೆ ಸಲ್ಲಿಸುವ ಉತ್ತಮ ಋಣ ನಮನವಿದು.

  ಪ್ರತಿಕ್ರಿಯೆ
 3. d.s.ramaswamy

  ತುಂಬ ಚೆನ್ನಾಗಿ ಮೂಡಿರುವ ನುಡಿಚಿತ್ರ. ಅವರ ಒಂದೆರಡು ಕವಿತೆಗಳನ್ನೂ ಲೇಖನದ ಜೊತೆ ಅಂಟಿಸಿದ್ದರೆ ಇನ್ನಷ್ಟು ಮೆರಗು ಬರುತ್ತಿತ್ತು.

  ಪ್ರತಿಕ್ರಿಯೆ
 4. ಜಿ.ಎನ್.ಅಶೋಕವರ್ಧನ

  ಪ್ರಿಯ ಸುಧನ್ವಾ
  ನಾನು ನಿಮ್ಮಪ್ಪನನ್ನು ಕೇವಲ ಕಂಡಿದ್ದೆ, ಚೂರುಪಾರು ತಿಳಿದಿದ್ದೆ. ನಿಮ್ಮ ನುಡಿಚಿತ್ರದ ಹಿನ್ನೆಲೆಯಲ್ಲಿ ಈಗ ಸರಿಯಾಗಿ ಕಾಣುವಂತಾಗಿರುವಾಗ ಅವರಿಲ್ಲದ ಸ್ಥಿತಿಯಿಂದ ನನಗೆ ವ್ಯಥೆಯಷ್ಟೇ ಉಳಿದಿದೆ. ಮನನೀಯ ನುಡಿಗಳಿಗೆ ಅಭಿನಂದನೆಗಳು.
  ಅಶೋಕವರ್ಧನ

  ಪ್ರತಿಕ್ರಿಯೆ
 5. sudhanva

  ಥ್ಯಾಂಕ್ಸ್ . ಮೊದಲು ಅಪ್ಪನಿಗೆ, ಮತ್ತೆ ನಿಮ್ಮೆಲ್ಲರಿಗೆ , ಅವಧಿಗೆ – ಸುಧನ್ವಾ

  ಪ್ರತಿಕ್ರಿಯೆ
 6. armanikanth

  sudhanva,
  baraha odida nantara tumba hottu enooo maadalu manassu baralilla….ee barahavannu kaleda 3 dinadallli dinakke 2 baari odiddene.prati sarti odidaagalooo eno sankata aaguttade…inno maataadalu nanage padagalu holeyuttilla…

  ಪ್ರತಿಕ್ರಿಯೆ
 7. Ahalya Ballal

  ನೆನೆದಂತೆ ಪದ ಅರ್ಥಗಳ ಕರುಣಿಸುವ ಚಿಂತಾಮಣಿಯು
  ಹೊಳೆಯದೇ ಧ್ಯಾನಿಸದೆ ದೊರೆಯುವುದುಂಟೇ ?
  ಹಾಗಾಗಿಯೇ ಇರಬೇಕು
  ಪದ ಸಿಗುವುದು ಕೆಲವರಿಗೆ
  ಕೇವಲ ಕೆಲವರಿಗೆ ಪರಮಪದ
  ಅರ್ಥವ ತಿಳಿದವರಿಗಲ್ಲ
  ಮೀರಿದವರಿಗೆ .
  (ಸತ್ಯಮೂರ್ತಿ ದೇರಾಜೆ)
  ಎಂದೋ ಓದಿ ,ಪುಸ್ತಕದಲ್ಲಿ ಜೋಪಾನವಾಗಿ ಬರೆದುಕೊಂಡ , ವಾರಕ್ಕೊಮ್ಮೆಯಾದರೂ ಕಣ್ಣ ಮುಂದೆ ಹೊಳೆಯುವ ಈ ಸಾಲುಗಳು ನೆನಪಾದವು .ಸಾರ್ಥಕ ಓದು . ಧನ್ಯವಾದಗಳು .

  ಪ್ರತಿಕ್ರಿಯೆ
 8. minchulli

  sudhanvaa, mana thevagolisuva baraha..
  bahushah nammellara appandirellaradoo sumaaru ide chithra..
  ninna thandeyavarannu kandilla naanu. so odutha hoda haage kanna munde padmanaabhana appana chithra

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: