ಅವರು ಮನೋಹರ ಮಳಗಾಂವಕರ್..

ಮನೋಹರ ಮಳಗಾಂವಕರ್ ಆಪ್ತ ಭೇಟಿಗಳ ನೆನಪು

lakshmikanth-itnal-1ಲಕ್ಷ್ಮೀಕಾಂತ ಇಟ್ನಾಳ

ಆರು ಅಡಿಗಳಿಗಿಂತ ಹೆಚ್ಚು ಎತ್ತರ,  ಬ್ರಿಟಿಷ್ ಹಾಗೂ ಇಂಡಿಯನ್ ಆರ್ಮಿಗಳ ಎರಡೂ ಸರಕಾರಗಳಲ್ಲಿ  ಕರ್ನಲ್ ಹುದ್ದೆ, ರಾಜ ಗಾಂಭೀರ್ಯ- ಅವರೇ ಮನೋಹರ ಮಳಗಾಂವಕರ್.

ವಿಶ್ರಾಂತ ಜೀವನಕ್ಕೆ ಆಯ್ದುಕೊಂಡದ್ದು ಮಾತ್ರ ಪಶ್ಚಿಮ ಘಟ್ಟವನ್ನು. ಕಾಡಿನ ಮಧ್ಯೆ  ಬಹುತೇಕ ವರ್ಷಗಳನ್ನು ಋಷಿಯಂತೆ ಏಕಾಂತದಲ್ಲಿ ಕಳೆದವರು.

manohar-malgaonkarಅಂತರರಾಷ್ಟ್ರೀಯ  ಖ್ಯಾತಿಯ ಇಂಗ್ಲಿಷ್ ಕಾದಂಬರಿಕಾರ ಮನೋಹರ ಮಳಗಾಂವಕರ್.  ಪ್ರಖ್ಯಾತ ಇಂಗ್ಲೀಷ್ ಅಂಕಣಕಾರರು.

 

ಅವರ ಖ್ಯಾತಿ ಎಷ್ಟೆಂದರೆ ಯಾವುದೇ ದೇಶದ ಪ್ರವಾಸಿ ಭಾರತಕ್ಕೆ ಪ್ರವಾಸ ಹೊರಡಬೇಕಾದರೆ, ಭಾರತದ ರಾಜರು, ಯುವರಾಜರು, ಸಂಸ್ಥಾನಗಳ, ಒಂದೊಂದು ಕೋಟೆಯ ಆತ್ಮದೊಳಗೆ ಸಂಭವಿಸಿದ ಇತಿಹಾಸ ತಿಳಿಯಬೇಕೆನಿಸಿದವರು ಮೊದಲು  ಕೈಗೆತ್ತಿಕೊಳ್ಳುತ್ತಿದ್ದುದೇ ಮನೋಹರ ಮಳಗಾಂವಕರ್ ಪುಸ್ತಕಗಳನ್ನು.

ಒಡಲ ತುಂಬೆಲ್ಲ ಪಶ್ಚಿಮ ಘಟ್ಟಗಳ ದಟ್ಟ ಕಾಡಿನ ಹಸಿರು ಹೊದ್ದ, ವನ್ಯ ಪ್ರಾಣಿಗಳ ಬೀಡುಗಳ ಮಧ್ಯೆ, ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಜಗಲಬೇಟ್ ಎಂಬ ಹಳ್ಳಿಯಿಂದ ಕೇವಲ ಎರಡು ಮೂರು ಕಿಮೀನಷ್ಟು ದೂರ ಸಾಗಿದರೆ ಸಿಗುವುದು ಬರ್ಬೂಸಾ ಎಂಬ ಪುಟ್ಟ ಗ್ರಾಮ ಇಲ್ಲಿದ್ದರು ಮಳಗಾಂವಕರ್.

ಮುಖ್ಯ ರಸ್ತೆಯಿಂದ ಹೆಚ್ಚೇನು ದೂರವಿಲ್ಲ. ಕೇವಲ ಎರಡು ನೂರು ಹೆಜ್ಜೆಗಳು ಮಾತ್ರ. ಆದರೆ ಜನ ತಮ್ಮ ಕಡೆಗೆ ಬಾರದಿರಲಿ ಎಂದು ಅವರ ನಿವಾಸದ ಕಡೆಗೆ ತಿರುಗುವ ರಸ್ತೆಗೆ ಆಗಾಗ ಮಣ್ಣು ಎತ್ತರವಾಗಿ ಸುರಿದು, ವಾಹನಗಳು ಬರದಂತೆ ಮಾಡಿಸುತ್ತಿದ್ದರೋ ಏನೋ, ಯಾವಾಗ ಅವರ ಹತ್ತಿರ ಹೋದರೂ ಒಂದೆರಡು ಮಣ್ಣು ಗುಂಪಿಗಳಲ್ಲಿ ದಾರಿಮಾಡಿಕೊಂಡೇ ಹೋಗಬೇಕಾಗುತ್ತಿತ್ತು.

ಮನೋಹರ ಮಳಗಾಂವಕರ್ ರೊಂದಿಗಿನ ಭೇಟಿಗಳ ಕೆಲ ಗಳಿಗೆಗಳು ಜೀವನದ ಅತೀ ಮಹತ್ವದ ಕ್ಷಣಗಳಾಗಿ ನನ್ನಲ್ಲಿ ಉಳಿದುಕೊಂಡಿವೆ.

ಅವರ ಕಾದಂಬರಿಗಳಲ್ಲದೇ, ಅವರ ಕಾಲಂಗಳಿಂದಲೂ ಪ್ರಭಾವಿತನಾದವನು ನಾನು. ಅವರಲ್ಲೊಬ್ಬ ದೂರದರ್ಶಿತ್ವವುಳ್ಳ ಪತ್ರಕರ್ತನೂ ಇದ್ದ. ಸೋವಿಯತ್ ಪತನದ ನಂತರ ಆಗಬಹುದಾದ ಬದಲಾವಣೆಗಳ ಕುರಿತು ಅವರು ಸುಮಾರು ವರ್ಷಗಳ ಹಿಂದೆ ಬರೆದ ವಿಚಾರ ನನ್ನನ್ನು ಹೆಚ್ಚು ಅವರತ್ತ ಆಕರ್ಷಿಸಿತ್ತು. ಅವರು ವಿಶ್ಲೇಷಿಸಿದಂತೆ  ಉಣ್ಣೆಯ ರಗ್ಗು ಶಾಲುಗಳಿಗೆ ಇಂದು ಸೈಬೀರಿಯಾ ಪ್ರಸಿದ್ಧಿ ಪಡೆದಿದೆ ಹಾಗೂ ಅದರಿಂದ ಅದರ ಆರ್ಥಿಕತೆ ವೃದ್ಧಿಯಾಗುತ್ತಲಿದೆ.

ಪಕ್ಷಿ ವೀಕ್ಷಣೆಗೆಂದೋ,  ‘ವಾಂಡರಿಂಗ್ ಇನ್ ದಿ ವುಡ್ಸ್’ ಗೆಳೆಯರೊಂದಿಗೆಗೋ, ಕಾರಿನ ಪ್ರಯಾಣದೊಂದಿಗೇ ಉಪನ್ಯಾಸಕ್ಕಾಗಿ ನಾವು ಕಾಡು ಹೊಕ್ಕುಬಿಡುತ್ತಿದ್ದೆವು. ನಾವು ಎಂದರೆ ನಿವೃತ್ತ ಶಿಕ್ಷಣಾಧಿಕಾರಿ ಪ್ರೊ  ಎಸ್. ಜಿ. ಸಬರದ, ಉದ್ಯಮಿ ಮಹದೇವ ಕರಮರಿ, ಪತ್ರಿಕಾ ಸಂಪಾದಕ ಜಿ. ರಾಮಚಂದ್ರ, ಪರ್ಸನಾಲಿಟಿ ಡೆವಲಪ್ಮೆಂಟ್ ಹಾಗೂ ಕರಿಯರ್ ಗೈಡೆನ್ಸ್ ನ ರಾಮಕೃಷ್ಣ ವನಹಳ್ಳಿ, ಲೈಫ್ ಕೋಚ್ ಕ್ಯಾಪ್ಟನ್ ಸಿ ಎಸ್ ಆನಂದರೊಂದಿಗೆ ಒಂದಷ್ಟು ಬಾರಿ ಪಕ್ಷಿ ತಜ್ಞ ಆರ್. ಬಿ. ತಿಮ್ಮಾಪೂರರ ತಂಡದೊಂದಿಗೆ ಮಗದೊಮ್ಮೆ, ಕಚೇರಿಯ ಗೆಳೆಯರಾದ ಅಂದಾನಿಗೌಡ ಹಳೇಮನಿ, ಬಾಬು ಹೊನಖಂಡೆ, ಖಾನ್ ಮುಂತಾದವರು ಯಾವುದೋ ಕೆಲಸಕ್ಕೆ ಕಾರವಾರದ ಕಡೆಗೆ ಹೋಗಿ, ಧಾರವಾಡಕ್ಕೆ ಮರಳುವಾಗ ಸಾಧ್ಯವಾದರೊಮ್ಮೆ ಅಥವಾ ಮುದ್ದಾಂ ಮಳಗಾಂವಕರ್ ಅವರನ್ನು ಭೇಟಿಯಾಗಲೆಂದೇ ಧಾರವಾಡದಿಂದ ನಾವು ಸಾಹಿತ್ಯಾಭಿರುಚಿಯ ಗೆಳೆಯರು ಅವರಲ್ಲಿಗೆ  ಹೋಗಿ ಬಂದದ್ದು ಉಂಟು.win_20160916_140444-manohar-malagaonkar-autograph

ಆ ಕಾಡಿನ ಮನೆಯೆಂಬ ಅರಮನೆಯ ಹತ್ತಿರ ಹೋಗುತ್ತಲೇ ದೊಡ್ಡದೊಂದು ಕಂಪೌಂಡು ಇತ್ತು. ಕೂಗಳತೆಯ ದೂರ ನಿಂತು ಒಳಗೆ ಅವರ ಸೇವಕನನ್ನು ಕೂಗುತ್ತಿದ್ದೆವು, ಅಷ್ಟು ದೂರವಿತ್ತು ನಿವಾಸ. ಅವರ ಸೇವಕ ಹೆಸರು ನೆನಪಾಗುತ್ತಿಲ್ಲ. ಅವರು ನಮ್ಮನ್ನು ನೋಡುತ್ತಲೇ ಗುರುತು ಹಿಡಿದು,  ‘ಧಾರವಾಡ ಕೆ ವೋ ಆದ್ಮೀ …’ ಎನ್ನುವಂತೆ ಒಳಗೆ ಹೋಗಿ ಅನುಮತಿಗೆ ಕೇಳುತ್ತಿದ್ದನೆಂದು ಕಾಣುತ್ತದೆ.

ಅನುಮತಿಯಾದ ಮೇಲೆ ನಮಗೆಲ್ಲ ಕಂಪೌಂಡನ ಗೇಟ್ ತೆರೆದುಕೊಳ್ಳುತ್ತಿತ್ತು.  ದೊಡ್ಡ ನಾಯಿಗಳಿದ್ದುವಲ್ಲ. ಹೀಗಾಗಿ ಅವನ ಜೊತೆಗಷ್ಟೆ ಒಳ ಪ್ರವೇಶಿಸಲು ಸಾಧ್ಯವಿತ್ತು. ನಮಗೆ ಒಂದು ಹಜಾರದಲ್ಲಿ ಕೂಡಲು ಹೇಳುತ್ತಿದ್ದರು. ಅದು ಸುಮಾರು ನಾಲ್ಕು ದೊಡ್ಡ ದೊಡ್ಡ ಬೆಡ್ ರೂಮ್ ಗಳ, ಒಂದು ವಿಶಾಲ ಲೈಬ್ರರಿ, ಹಜಾರಗಳನ್ನು  ಒಳಗೊಂಡ ಬಂಗಲೆ.

ಪ್ರತಿಯೊಂದನ್ನು ಎಷ್ಟೊಂದು ಒಪ್ಪ ಓರಣವಾಗಿ ಜೋಡಿಸಿಟ್ಟಿರುತ್ತಿದ್ದರೆಂದರೆ ಒಂದು ಅರ್ಥದಲ್ಲಿ ಮ್ಯೂಜಿಯಂನ ಹಾಗೆ ಜೋಡಿಸಲ್ಪಟ್ಟಿತ್ತು, ಯಾವ ಹೆಣ್ಣು ಮಗಳೂ ಈಗ ಅಲ್ಲಿ ಆ ಮನೆಯಲ್ಲಿಲ್ಲ. ಆದರೂ ಅದರ ಒಪ್ಪ ಓರಣ ಮೆಚ್ಚುವ ಹಾಗೆ ಇಡಲ್ಪಟ್ಟಿತ್ತು. ಮಳಗಾಂವಕರ್ ರು ತಮ್ಮ ನಿವಾಸದ ಸುತ್ತ ಕೆಲವು ಸಹಾಯಕರಿಗಾಗಿ ಸಣ್ಣ ಸಣ್ಣ ಔಟ್ ಹೌಸ್ ಗಳನ್ನು ನಿರ್ಮಿಸಿದ್ದರು, ಈ ಸಹಾಯಕರಿಂದಲೇ ಇದು ಇಷ್ಟು ಒಪ್ಪ ಓರಣವಾಗಿರುತ್ತಿತ್ತು.

ಅವರ ಸೇವಕ ಸಿಬ್ಬಂದಿಗಳು ಹುಲಿ, ಆನೆ, ಚಿರತೆ, ಕಾಡುಕೋಣಗಳ ಹಿಂಡು ಅಲ್ಲೆಲ್ಲ ಬರುತ್ತವೆ ಎಂದಾಗ ಗಾಬರಿಯಾಗುತ್ತಿತ್ತು. ಯಾವಾಗ ಹೋದರೂ, ನಿನ್ನೆ ರಾತ್ರಿ ಕಾಡು ಕೋಣಗಳ ಹಿಂಡು ಬಂದಿತ್ತು, ಚಿರತೆ ದನಗಳ ಕೊಟ್ಟಿಗೆ ಹತ್ತಿರ ಬಂದು ಹೋಗಿದೆ, ಕರಡಿ ಕಂಡಿತ್ತು, ಆನೆ ಹೆಜ್ಜೆಗಳು ಇಲ್ಲಿವೆ ನೋಡಿ ಎನ್ನುತ್ತಿದ್ದ ಅಶೋಕ. ಆ ಕಾಡಿನ ಪರಿಸರವೇ ಹಾಗಿತ್ತು. ನಮ್ಮಂಥವರಿಗೆ ಬಲು ಭೀಭತ್ಸವೆನಿಸುತ್ತಿತ್ತು.

ಸ್ವಲ್ಪ ಹೊತ್ತಿನ ನಂತರ ತಮ್ಮ ಬೆಡ್ ರೂಮ್ ನಿಂದ ಬಂದು ಮಳಗಾಂವಕರ್ ಹಜಾರದ ಕುರ್ಚಿಯ ಮೇಲೆ ಕೂಡುತ್ತಿದ್ದರು, ಅವರ ಸೇವಕ ಅವರಿಗೆ ಕೂಡಲು ಸಹಾಯ ಮಾಡುತ್ತಿದ್ದ. ನಾನು ಅವರನ್ನು ಕಂಡೊಡನೇ ಅವರ ಕಾಲಿಗೆ ನಮಿಸಲು ತೊಡಗುತ್ತಿದ್ದಂತೆಯೇ, ಅವರು ‘ಪ್ಲೀಸ್ ಡೋಂಟ್ ಡು ದಾಟ್, ಐ ಆಮ್ ಟೂ ಸ್ಮಾಲ್ ಎ ಪರ್ಸನ್, ಫಾರ್ ಸಚ್ ಥಿಂಗ್ಸ್’ ಅನ್ನುತ್ತಿದ್ದರು. ನಾನು ನಿಮಗಿಂತ ಕೊಂಚ ಮೊದಲೇ ಹುಟ್ಟಿರುವೆ ಅಷ್ಟೆ. ನೀವು ನಂತರ ಹುಟ್ಟಿದವರು. ನನ್ನಂತೆ ನಿಮಗೂ ವಯಸ್ಸಾಗುತ್ತದೆ. ಹೀಗೆಯೇ ಒಂದು ದಿನ ಗುಡ್ ಬೈ ಹೇಳುವುದು ಎಂದು ನಗುತ್ತ, ಅದಕ್ಕೆ ನನಗೇನೂ ನಮಸ್ಕರಿಸುವುದು ಬೇಡ. ಅಂತಹ ದೊಡ್ಡವನು ನಾನಲ್ಲ ಎನ್ನುತ್ತಿದ್ದರು. ದಾರ್ಶನಿಕತೆಯ ಮಾತುಗಳಿಂದ ನಮ್ಮಲ್ಲಿ ಇನ್ನಷ್ಟು ಅಗಾಧತೆ ತುಂಬುತ್ತಿದ್ದರು. ಅದು ಅವರ ಸಜ್ಜನಿಕೆ. ನಿಗರ್ವತೆ.

win_20160916_141206-the-men-who-killed-gandhiಕೆಲ  ಹೊತ್ತು ನಮ್ಮೊಂದಿಗೆ ಸಮಯ ಕಳೆದು ಕಾಫಿ ಸೇವಿಸುತ್ತಿದ್ದರು. ನಾವೆಲ್ಲ  ಬಂದ ಉದ್ದೇಶ, ತಮ್ಮ ಪುಸ್ತಕಗಳನ್ನು ಓದಿಕೊಂಡ ಬಗ್ಗೆ ತಿಳಿದುಕೊಳ್ಳುತ್ತಿದ್ದರು. ಅವರ ಮೂರು ನಾಲ್ಕು  ಪುಸ್ತಕಗಳನ್ನು ಓದಿದ ಅನುಭವ ನನ್ನ ಚರ್ಚೆಗೆ ಸಾಥಿಯಾಗುತ್ತಿತ್ತು.

ಸುಮ್ಮನೆ ಅವರನ್ನು ಮೆಚ್ಚಿಸಲು ಎಲ್ಲವನ್ನು ಓದಿದ್ದೇನೆ ಎಂದು ಹೇಳುತ್ತಿರಲಿಲ್ಲ. ಅವರ ಕ್ಷಣದ ಒಟನಾಟದ ಭಾಗ್ಯವೇ ನಮಗೆ ಅಗಾಧವಾಗಿತ್ತು. ಅದು ಅವರಿಗೂ ತಿಳಿದು, ನಮ್ಮೊಡನೆ ಇತರೆ ವಿಷಯಗಳನ್ನು ಚರ್ಚಿಸುತ್ತಿದ್ದರು. ಯಾರ್ಯಾರು ಬಂದಿದ್ದೀರಿ, ಎಂದೆಲ್ಲ ವಿಚಾರಿಸುತ್ತ, ಬಂದವರೆಲ್ಲ ಯಾವ ಯಾವ ವೃತ್ತಿಗಳಿಗೆ ಸಂಬಂಧಿಸಿದವರು ಎಂದೆಲ್ಲ ಕೇಳಿ ತಿಳಿದುಕೊಂಡು, ಅವರ ಕೆಲಸಗಳ ಬಗ್ಗೆ ಚರ್ಚಿಸುತ್ತಿದ್ದರು.

ಪ್ರತಿಸಾರಿ ಬೇರೆ ಬೇರೆಯವರೇ ಇರುತ್ತಾರಲ್ಲ ನಿಮ್ಮ ಸಂಗಡ. ನೀವು ಮಾತ್ರ ಎಲ್ಲರಿಗೂ ಕಾಮನ್ ಎಂದು ನಗುತ್ತಿದ್ದರು. ಅವರ ಪುಸ್ತಕಗಳ ಕುರಿತು ವಿದ್ವತ್ಪೂರ್ಣವಾಗಿ ಪ್ರೊ. ಸಬರದ ಚರ್ಚಿಸುತ್ತಿದ್ದರು, ಬೆಂಡ್ ಇನ್ ದಿ ಗ್ಯಾಂಜಿಸ್, ಎ ಸ್ಪಾಯ್ ಇನ್ ಅಂಬರ್, ದಿ ಪ್ರಿನ್ಸ್ ವಿವರಗಳನ್ನು ಪ್ರೊ ಸಬರದರವರ ಮಾತುಗಳಲ್ಲಿ ಅವರು ಹೇಳುವ ಹಾವಭಾವಗಳಿಂದ ಕೇಳುವುದೇ ಒಂದು ಆನಂದ ! ತಮ್ಮ ಇತರೇ ಪುಸ್ತಕಗಳ ಕುರಿತು ಹೇಳುತ್ತ, ಮುಂದಿನ ಸಾರಿ ಬರುವುದಕ್ಕೆ ಮುಂಚೆ ಅವುಗಳನ್ನು ಓದಿದರೆ ನನಗೂ ಒಂದಿಷ್ಟು ಖುಷಿಯಾಗುತ್ತದೆ ಎಂದು ಮುಗುಳ್ನಗುತ್ತಿದ್ದರು.

timthumbಅವರೆಷ್ಟು ಸರಳವಾಗಿದ್ದರೆಂದರೆ ಅಷ್ಟೆಲ್ಲ ಖ್ಯಾತನಾಮರಾಗಿದ್ದರೂ, ವ್ಯಾವಹಾರಿಕ ಬದುಕಿಗೆ ಬಲು ನಿರ್ಲಿಪ್ತರಾಗಿದ್ದರು, ತುಂಬಾ ವಯಸ್ಸಾಗಿದ್ದುದರಿಂದ ಮಾತಿನ ಮಧ್ಯದಲ್ಲಿಯೇ ಅಂತರ್ಮುಖಿಯಾಗಿ ಬಿಡುತ್ತಿದ್ದರು. ಜಂಜಡದ ಜಗತ್ತಿನಿಂದ ಅಕ್ಷರಶಃ ದೂರವಾಗಿದ್ದವರು. ಜನಾವಾಸದಿಂದ ದೂರವಾಗಿ ಕಾಡನ್ನೇ ಅಪ್ಪಿಕೊಂಡವರು. ಆದಾಗ್ಯೂ ಜಗಲ್ಬೇಟ್ ಸುತ್ತಮುತ್ತಲೆಲ್ಲ   ಜನ ಅವರ ಬಗ್ಗೆ ಇನ್ನಿಲ್ಲದ ಗೌರವ, ಅಭಿಮಾನ ಇಟ್ಟುಕೊಂಡಿದ್ದರು.

ಒಂದು ಸಾರಿ, ನಮ್ಮ ತಂಡದಲ್ಲೊಬ್ಬರು ಬೀಡಾ ಶಾಪಿನವನ ಹತ್ತಿರ ಏನೋ ಖರೀದಿಸುತ್ತ ಮನೋಹರ ಮಳಗಾಂವಕರ್ ಹೆಸರು ಹಿಡಿದು ಏನೋ ಕೇಳಿದ. ಬೀಡಾಶಾಪಿನವ ಅಸಮಾಧಾನದಲ್ಲೇ ಹೇಳಿದ್ದ, ಇಲ್ಲಿ ಅವರಿಗೆ ಎಲ್ಲರೂ, ‘ಅಣ್ಣಾಸಾಬ್’ ಎನ್ನುವರು ಎಂದಿದ್ದ. ಹೆಸರು ಹಿಡಿದು ಮಾತಾಡಿದ್ದು ಅವನಿಗೆ ಇಷ್ಟವಾಗಿದ್ದಿಲ್ಲ ಎನ್ನುವುದು ಅವನ ಮುಖಭಾವದಿಂದಲೇ ಗುರುತಿಸಬಹುದಿತ್ತು.

ಹೀಗೊಮ್ಮೆ ಭೇಟಿಯ ಸಂದರ್ಭದಲ್ಲಿ ನನ್ನೊಂದಿಗೆ ಕೂಡಲೇ ಏನೋ ನೆನಪಾದವರಂತೆ , ‘ಡು ಯು ನೋ, ರವಿ ಬೆಳಗೆರೆ ಇನ್ ಕನ್ನಡ ?’ ಎಂದು ಕೇಳಿದರು…

ಮಾತಿನ ಮಧ್ಯೆ ಒಮ್ಮೆಲೇ ನನ್ನನ್ನು ಉದ್ದೇಶಿಸಿ, ಕ್ಯಾನ್ ಗಿವ್ ಹಿಮ್ ರೈಟ್ಸ್ ಟು ಟ್ರಾನ್ಸ್ಲೇಟ್ ಮೈ ಬುಕ್ಸ್ ಇನ್ ಕನ್ನಡ?’ ಎಂದು ಕೇಳಿದರು. ನಾನು ಆವಾಕ್ಕಾದೆ. ಈ ಪ್ರಶ್ನೆ ನಾನು ನಿರೀಕ್ಷಿಸಿರಲಿಲ್ಲ. ನನ್ನಲ್ಲಿ ಅಪಾರ ವಿಶ್ವಾಸವಿಟ್ಟು ಕೇಳಿದ್ದರು. ಇಂತಹ ವಿಷಯವನ್ನು ನಿಷ್ಕರ್ಷಿಸಿ ಹೇಳುವಂತಹ ಪ್ರಬುದ್ಧ ನಾನಾಗಿರಲಿಲ್ಲ. ಒಂದು ಕ್ಷಣ ಖಂಡಿತ ಯೋಚಿಸಿದೆ. ‘ಖಂಡಿತ ಕೊಡಬಹುದು ಸರ್’ಎಂದೆ.

manohar-malagaonkar-photo-370x315ಅವರ ಶ್ರೀಮತಿಯವರು ಗತಿಸಿ ಆಗಲೇ 40 ವರ್ಷಗಳಾಗಿದ್ದವು. ಹಾಗೂ ಇದ್ದ ಒಬ್ಬ ಮಗಳು ಸುನೀತಾ ಕೂಡ 1998 ರಲ್ಲಿ ತೀರಿಕೊಂಡರೆಂದು ಅಶೋಕ ಹೇಳುತ್ತಲಿದ್ದ. ಹೀಗಾಗಿ ಅವರದು ಒಂಟಿ ಜೀವ. ಆಗ ಅವರಿಗೆ 90+ ಇದ್ದಿರಬಹುದು. ಅಶೋಕ ತಂದಿತ್ತ ಕಾಫಿ ಕುಡಿದು ಅವರ ಆಶೀರ್ವಾದ ಪಡೆದು ನಾವು ಅವರ ಅನುಮತಿ ಪಡೆದು ಹೊರಡುತ್ತಲಿದ್ದೆವು. ಅವರಿಗೆ ಬಹಳ ಹೊತ್ತು ಕೂತುಕೊಳ್ಳಲು ಅಗುತ್ತಿರಲಿಲ್ಲವೆನ್ನುವುದೂ, ನಾವು ಆದಷ್ಟು ಬೇಗ ಹೊರಡಲು ಇರುತ್ತಿದ್ದ ಕಾರಣಗಳಲ್ಲೊಂದಾಗಿತ್ತು. ವಯೋಕಾರಣದಿಂದ ಅವರು ಮನೆಯಲ್ಲಿ ಹೆಚ್ಚಾಗಿ ಮಲಗಿಯೇ ಇರುತ್ತಿದ್ದರು.

ಮತ್ತೊಮ್ಮೆ 2008 ಇರಬಹುದು, ಅವರಲ್ಲಿಗೆ ಗೆಳೆಯರೊಂದಿಗೆ ಹೋದಾಗ ನನಗೊಂದು ಪುಸ್ತಕ ಕೊಟ್ಟು ಅದರ ಮೇಲೆ ಹಸ್ತಾಕ್ಷರ ಹಾಕಿ ಕೊಟ್ಟರು. ನನಗೆ ತುಂಬಾ ಖುಷಿಯಾಯಿತು. ತೆರೆದು ನೋಡಿದರೆ ಅದು ರವಿ ಬೆಳಗೆರೆಯವರು ಅನುವಾದಿಸಿದ ‘ದಿ ಡೆವಿಲ್ಸ್ ವಿಂಡ್’ನ ಕನ್ನಡ ಅನುವಾದ, ‘ದಂಗೆಯ ದಿನಗಳು’. ಮೂಲ ಇಂಗ್ಲಿಷ್ ಕಾದಂಬರಿಯನ್ನು ಓದಿದ್ದ ನನಗೆ, ಬೆಳಗೆರೆಯವರಿಂದ ಅನುವಾದಿಸಲ್ಪಟ್ಟ ‘ದಂಗೆಯ ದಿನಗಳು’ ಹಿಡಿಸಿತು. ಈ ರೀತಿ ಮನೋಹರ ಮಳಗಾಂವಕರ್ ಅವರ ಜೀವಿತ ಕಾಲದಲ್ಲಿಯೇ ಕನ್ನಡಕ್ಕೆ ಪಾದಾರ್ಪಣೆ ಮಾಡುವಂತಾದುದು ನನಗೆ ಅತೀವ ಸಂತೋಷವನ್ನು ಉಂಟು ಮಾಡಿತು.

ಅವರು ಅನಾರೋಗ್ಯ ಪೀಡಿತರಾದುದು ಪತ್ರಿಕೆಗಳಲ್ಲಿ ಪ್ರಕಟವಾಗಿ ನೋಡಲು ಹೋಗಬೇಕೆಂದುಕೊಳ್ಳುತ್ತಿರುವಾಗಲೇ 14 ಜೂನ್, 2010 ರಂದು ಅಜ್ಜ ನಮ್ಮನ್ನಗಲಿದರು. (ಜನನ: 12, ಜುಲೈ, 1913).  ಅವರು ಇಂದು ನವ್ಮೊಂದಿಗಿಲ್ಲವಾದರೂ, ಅವರ ಸಾಹಿತ್ಯ, ಕಾದಂಬರಿಗಳ ಮುಖೇನ ಜೀವಂತವಾಗಿದ್ದಾರೆ.

 

‍ಲೇಖಕರು Admin

September 23, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

೧ ಪ್ರತಿಕ್ರಿಯೆ

 1. Dr. Prabhakar M. Nimbargi

  ಪ್ರೊ. ಲಕ್ಷ್ಮಿಕಾಂತ ಇಟ್ನಾಳರವರೇ,
  ತುಂಬ ಚೆನ್ನಾಗಿ ಮನೋಹರ್‍ ಮಾಳಗಾಂವಕರ್‍ರನ್ನು ಪರಿಚಯಿಸಿದ್ದೀರಿ.
  ಅವರ ಮರಣಾನಂತರ ಅವರ ಕೃತಿಗಳ ಹಕ್ಕುಸ್ವಾಮ್ಯ ಯಾರ ಬಳಿ ಇವೆಯೆಂದು ದಯವಿಟ್ಟು ತಿಳಿಸುವಿರಾ?
  ಅವರ ಕೃತಿಗಳನ್ನು ಅನುವಾದಿಸುವ ಇಚ್ಛೆ ನನ್ನದು. ನನ್ನ ಇ-ಮೇಲ್‍ ವಿಳಾಸ ಹೀಗಿದೆ, [email protected].
  ದಯವಿಟ್ಟು ಉತ್ತರಿಸಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: