ಅವರೊಳಗಿನ ‘ಅವ್ವ’ನನ್ನೂ ಕಾಪಿಟ್ಟುಕೊಳ್ಳೋಣ!

 lankeshcolourthumbnail.jpg

 ನೀಲುವಿನ ಅಂತಃಕರಣ
 ಶಶಿ ಸಂಪಳ್ಳಿ
ದೂರದ ಗುಲ್ಬರ್ಗಾದ ಯಾವುದೋ ಹಳ್ಳಿಯಲ್ಲಿ ಉರಿಬಿಸಿಲು, ನಿರ್ದಯಿ ಬದುಕಿಗೆ ಹೆಗಲುಕೊಟ್ಟ ಒಂಟಿ ಮಹಿಳೆಯೊಬ್ಬಳು ಕಸುವಾದ ತೆನೆಯನ್ನೂ ಬಿಡಲಾಗದ ನಿಸ್ತೇಜ ಹೊಲದಲ್ಲಿ ದುಡಿಯುತ್ತಿದ್ದಾಗ, ಮೃಗೀಯ ಗಂಡಸೊಬ್ಬನಿಂದ ಅಚ್ಯಾಚಾರಕ್ಕೊಳಗಾದ ಸುದ್ದಿ ಬರುತ್ತದೆ. ಇಲ್ಲಿ, ಬೆಂಗಳೂರಿನ ಗಾಂಧಿ ಬಜಾರಿನ ಕಚೇರಿಯಲ್ಲಿ ಕೂಡ ‘ಅವ್ವ’ನಂಥ ಸಂಪಾದಕರ ಎದೆಯಲ್ಲಿ ಸಣ್ಣ ಚಳುಕು ಶುರುವಾಗುತ್ತದೆ, ಚಡಪಡಿಕೆ, ಎದುರಿಗೆ ಕೂತ ಪರಮಾಪ್ತರಿಗೂ ಬೈಗುಳ, ಏರುವ ಬಿಪಿ,… ಅಂತಃಕರಣದ ತಲ್ಲಣ…….- ಇದು ನಮ್ಮ ಮತ್ತು ನಮಗಿಂತ ಹಿಂದಿನ ಒಂದು ತಲೆಮಾರಿಗೆ ಸಂವೇದನೆಯಿಂದ ಬದುಕನ್ನು ಕಾಣುವ ಬಗೆಯನ್ನು ಕಲಿಸಿಕೊಟ್ಟ ಲಂಕೇಶ್ ಮೇಸ್ಟ್ರು ತಮ್ಮ ಸುತ್ತಲಿನ ಆಗು-ಹೋಗುಗಳಿಗೆ ಪ್ರತಿಕ್ರಿಯಿಸುತ್ತಿದ್ದ ಬಗೆ. ಈ ಘಟನೆಯನ್ನು ಹೇಳಿದವರು ಮೇಸ್ಟ್ರಿಗೆ ಆಪ್ತರಾಗಿದ್ದ ಕಥೆಗಾರ ತಿಪಟೂರಿನ ಎಸ್. ಗಂಗಾಧರಯ್ಯ. ಅಂತಹ ಸೂಕ್ಷ್ಮತೆಯನ್ನೂ, ಅಷ್ಟೇ ಕೋಪವನ್ನೂ ಹೊಂದಿದ್ದ ಲಂಕೇಶ್ ಅವರು ಅಂತರಾಷ್ಟ್ರೀಯ ಮಹಿಳೆಯರ ದಿನಾಚರಣೆಯಂದೇ ಹುಟ್ಟಿದ್ದು ಎಂಬುದು ಎಷ್ಟು ಕಾಕತಾಳೀಯ ಅಲ್ಲವೇ?

ಬರೋಬ್ಬರಿ ಹತ್ತು ವರ್ಷ ಕಾಲ ಲಂಕೇಶ್ ಪತ್ರಿಕೆಯನ್ನು ಓದಿಕೊಂಡು ಬೆಳೆದವನು ನಾನು. ಹಾಗೇ ಭ್ರಷ್ಟ, ನಿರ್ಲಜ್ಜ ಮತ್ತು ಅದೆಲ್ಲಕ್ಕಿಂತ ಹೆಚ್ಚಾಗಿ ದಾಸ್ಯ ಮತ್ತು ದೌರ್ಜನ್ಯಗಳ ಕೂಪವಾಗಿರುವ ವ್ಯವಸ್ಥೆಯ ವಿರುದ್ಧ ಸಿಟ್ಟು ಮತ್ತು ಕನಿಕರವನ್ನೂ ಕೂಡ ಅವರಿಂದ ಅಷ್ಟಿಷ್ಟಾದರೂ ಕಲಿತಿದ್ದೇನೆ ಎಂದುಕೊಂಡಿರುವೆ. ಹಾಗೆ ನೋಡಿದರೆ, ಈ ಮಾತು ಕನ್ನಡದಲ್ಲಿ ಸಂವೇದನಾಶೀಲರಾಗಿ ಬರೆಯುತ್ತಿರುವ ಮತ್ತು ವಿವಿಧ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಎರಡು- ಮೂರು ತಲೆಮಾರಿಗೇ ಅನ್ವಯಿಸುತ್ತದೆ.

ಈಗಲೂ, ಎಲ್ಲೋ ಬುಂದೇಲಖಂಡದಲ್ಲಿ ಹಸಿವಿನಿಂದ ಜೀವ ಬಿಡುವ ಮಣ್ಣಿನ ಮಕ್ಕಳು, ದೂರದ ಒರಿಸ್ಸಾದಲ್ಲೋ, ಬಿಹಾರದಲ್ಲೋ ನಡೆಯುವ ದೌರ್ಜನ್ಯದಿಂದ ಹಿಡಿದು, ಇಲ್ಲೇ ನಮ್ಮ ನಡುವೆಯೇ ನಿತ್ಯ ನಡೆಯುವ ಶೋಷಣೆ, ಅವಮಾನ, ದಬ್ಬಾಳಿಕೆಗಳನ್ನು ಕಂಡಾಗ ಮನಸ್ಸು ಮುದುಡಿಹೋಗುತ್ತದೆ. ನಿತ್ಯದ ಜಂಜಾಟಗಳ ನಡುವೆ, ಯಾಂತ್ರಿಕ ಬದುಕಿನಲ್ಲಿ ಮೂಲೆಗೆ ಸೇರಿದ್ದ ನಮ್ಮೊಳಗಿನ ಮಗು ರಚ್ಚೆ ಹಿಡಿದಂತೆ ಆಡತೊಡಗುತ್ತದೆ. ಕಣ್ಣಾಲಿಗಳ ತೇವವಾಗುತ್ತವೆ. ನಡುರಾತ್ರಿಯಲಿ ಬುಂದೇಲಖಂಡದ ಆ ವೃದ್ಧ ರೈತನ ಹಸಿವಿನ ನರಳುವಿಕೆ ದುತ್ತೆಂದು ಎದೆಮೇಲೆ ಕೂತು ಗುದ್ದಾಟಕ್ಕೆ ತೊಡಗುತ್ತದೆ….

ಇಂತಹ ಸೂಕ್ಷ್ಮತೆ ನಮ್ಮೊಳಗೆ ಮೂಡಿದ್ದಕ್ಕೆ ನನ್ನ ಕನ್ನಡದ ಎಲ್ಲ ಒಳ್ಳೆಯ ಮನಸ್ಸುಗಳ ಬರವಣಿಗೆ ಮತ್ತು ಕಾರ್ಯಗಳು ಎಂಬುದು ಒಂದು ತೂಕವಾದರೆ, ಲಂಕೇಶ್ ಅವರ ಬರವಣಿಗೆ ಮತ್ತೊಂದು ತೂಕಕ್ಕೆ ಸರಿದೂಗುತ್ತದೆ.

ಅಂತಹ ಅಪ್ಪಟ ‘ಹುಳಿ ಮಾವಿನ ಮರ’ದ ಒಗರು, ಮೋಹಕ ಸಿಹಿ, ಆಕರ್ಷಣೆ ಮತ್ತು ಹುಳಿಯ ಪಾಕದಂತಿರುವ ನೀಲು ಪದ್ಯಗಳು ನಮ್ಮನ್ನು ಮನುಷ್ಯನನ್ನು ಮುಖವಾಡಗಳಿಲ್ಲದೆ ಅರ್ಥಮಾಡಿಕೊಳ್ಳುವಂತೆ ಪ್ರೇರೇಪಿಸುತ್ತವೆ ಎಂದು ನಾನು ನಂಬಿದ್ದೇನೆ.

ಲಂಕೇಶರ ಹುಟ್ಟುಹಬ್ಬದ ಈ ದಿನ ಕೆಲವು ‘ನೀಲುಗಳು’ ನಿಮಗಾಗಿ… ಹಾಗೇ ಸುಮ್ಮನೇ ಆ ಕ್ಷಣಕ್ಕೆ ಕಣ್ಣಿಗೆ ಬಿದ್ದು ಖುಷಿ ಕೊಟ್ಟವು ಇವು…

neelu_mukhaputa_0.jpg

* ಪೋಲಿ ಹೆಂಗಸರು ಏನೇ ಹೇಳಿದರೂ

   ಪತಿವ್ರತೆಯ ನಿಷ್ಠೆ ಇದೆಯಲ್ಲ

   ಅದರಲ್ಲಿ ಭೀಕರ ಅರ್ಥಗಳಿವೆ.

* ಪ್ರಖ್ಯಾತ ಮಹಾತ್ಮ ಕೂಡ

   ಹೆಣ್ಣಿನ ಎದೆಯ ಮೇಲೆ

   ಅಸಹಾಯಕ ಹಸುಗೂಸು

* ಕಗ್ಗಾಡಿನ ಬೇಡರ ಮೋನಿ

  ತೀರಿಕೊಂಡಾಗ

  ಪತ್ರಿಕೆಗಳ ವಿಷಾದಕ್ಕೆ ಬದಲು

  ಸೇವಂತಿ ದುಃಖದಿಂದ ದಳ

  ಉದುರಿಸಿತು.

* ನಾನು ನಿನ್ನನ್ನು ಪ್ರೀತಿಸುವೆ

ಎನ್ನುವಾಗಲೇ

ಅರ್ಧ ಪ್ರೇಮ ಸೋರಿಹೋಗುವುದು

ಮನುಷ್ಯನ

ಮಾತಿಗಿರುವ ಶಾಪ.

* ನನ್ನ ಇನಿಯನ ನಲ್ಲೆಯಾದ

  ನಾನು

  ಅವನ ತಾಯಿ ಕೂಡ

  ಎಂಬುದು

  ಅವನು ಒಪ್ಪದಿದ್ದರೂ ನಿಜ.

ವಾ! ಅಲ್ವಾ…? ಇವತ್ತಿಗೆ ಇಷ್ಟು ಸಾಕು,… ನೀಲುವಿನೊಂದಿಗೆ ಮೇಷ್ಟ್ರ ನೆನಪು ಮತ್ತು ಅವರ ವಿವೇಚನೆಯ ಎಚ್ಚರಿಕೆಯನ್ನು ಜತನಮಾಡಿಕೊಳ್ಳಲು ಪ್ರಯತ್ನಿಸೋಣ, ಎಲ್ಲ ಪ್ರಲೋಭನೆ, ಆಕ್ರಮಣಗಳ ನಡುವೆಯೂ! ನೀಲು ಮೌನವಾಗಿ ಎಂಟು ವರ್ಷಗಳ ಬಳಿಕ ಹೀಗೆ ಮೇಷ್ಟ್ರರನ್ನೂ, ಅವರೊಳಗಿನ ‘ಅವ್ವ’ನನ್ನೂ ಕಾಪಿಟ್ಟುಕೊಳ್ಳೋಣ!

‍ಲೇಖಕರು avadhi

March 8, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಈಗ ‘ಅಮ್ಮ’ ಪ್ರಶಸ್ತಿ ಸ್ವೀಕರಿಸಬೇಕಿದ್ದ ‘ದೇಶಾಂಶ’ರು ಇನ್ನಿಲ್ಲ

ಇಂದು ಸಂಜೆ ಜರುಗುವ 'ಅಮ್ಮ ಪ್ರಶಸ್ತಿ' ಕಾರ್ಯಕ್ರಮದಲ್ಲಿ ಗೌರವ ಪ್ರಶಸ್ತಿ ಸ್ವೀಕರಿಸಬೇಕಾಗಿದ್ದ ಬೀದರ್ ನ ದೇಶಾಂಶ ಹುಡುಗಿ ಅವರು ಇನ್ನಿಲ್ಲ.....

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This