ಅವಳಿಗೊಂದು ಮದುವೆಯಾಯಿತು…

chetana4.jpg 

“ಭಾಮಿನಿ ಷಟ್ಪದಿ”

ಚೇತನಾ ತೀರ್ಥಹಳ್ಳಿ

“ಏಯ್, ನಿನ್ ಗಂಡ ಬಂದಾ ನೋಡೇ!” ಛೇಡಿಸಿದಾಗ ಹುಡುಗಿ ಓಡಿ ಬಂದು ಅವನನ್ನ ತಬ್ಬಿದ್ದಳು. “ಮಾಮಾ ಚಾಕ್ಲೇಟು…” ಅನ್ನುತ್ತ ಜೇಬು ತಡಕಿದ್ದಳು. ಅವಳನ್ನ ಸೊಂಟಕ್ಕೇರಿಸ್ಕೊಂಡು ಅಂವ ಅಂಗಡಿ ಅಂಗಡಿ ಸುತ್ತಾಡಿಸಿದ್ದ.
ಆರರ ಬಾಲೆಗೆ ಹದಿನೆಂಟರ ಮಾಮ. ಮಾಮ, ಅಮ್ಮನ ತಮ್ಮ.

ಅವಳಿಗೆ ಮಾಮ ಅಂದರಾಯ್ತು. ಊಟಕ್ಕೆ, ಆಟಕ್ಕೆ, ಪಾಠಕ್ಕೂ ಅವನೇ ಸಾಥಿ. ಅವನೂ ಅಷ್ಟೆ. ಅವಳಿಗೆ ಜಡೆ ಹೆಣೆಯುತ್ತ, ಮೆಹೆಂದಿ ಹಾಕುತ್ತ, ಕಣ್ಣೊಳಗೆ ದೀಪ ಹಚ್ಚಿಕೊಂಡು ಕುಂತುಬಿಡುತ್ತಿದ್ದ.
ಅವರೊಡನಾಟ ಕಂಡ ಮನೆಮಂದಿ, “ಗಂಡ- ಹೆಂಡತಿಯಾಗೋರು ಈಗ್ಲಿಂದಲೇ ಹೇಗಿದಾರೆ ನೋಡು!” ಅಂತ ಸಂಭ್ರಮಿಸ್ತಿದ್ದರು. ಮೈನೆರೆದ ಹುಡುಗಿ ಅವರ ಮಾತಿಗೆ ಮುಖ ಕೆಂಪಾಗಿಸ್ಕೊಂಡರೆ, “ನಾಚಿಕೆ ಮುಂಡೇದಕ್ಕೆ!” ಅಂದುಕೊಂಡು ನಗಾಡಿದರು.

ಹದಿಹರೆಯ ಮುಗಿಯಿತಂದ್ರೆ ಸಾಕು, ಹೆಣ್ಣು ಹೆತ್ತವರ ತಲಾಶೆ ಶುರು. ಆದರೆ ಆ ಮನೆಯಲ್ಲಿ ಅಂಥದೇನೂ ಧಾವಂತವಿಲ್ಲ. ಅಕ್ಕನ ಮದುವೆಯಾದಾಗಿನಿಂದ ಅಲ್ಲೇ ಇರುವ ತಮ್ಮ ಇದಾನೆ. ಕೈಯ್ಯಾರ ಹುಡುಗಿಯನ್ನ ಎತ್ತಿ ಆಡಿಸಿದಾನೆ. ಒಳ್ಳೆ ಹುಡುಗ, ಚೆಂದವಿದಾನೆ. ತುಂಬು ಸಂಬಳದ ಕೆಲಸವೂ ಇದೆ. “ಆಹಾ, ಭಾಗ್ಯವೇ ಭಾಗ್ಯ!” ಆಚೀಚೆಯವರು ಕಣ್ಣು ಹಾಕಿದ್ದಿದೆ.

ಯಾಕೋ ಇತ್ತೀಚೆಗೆ ಆ ಮನೆಯಲ್ಲಿ ಎಲ್ಲವೂ ಸರಿಯಿಲ್ಲ. ಮಾವ- ಸೊಸೆಯ ಮದುವೆ ದಿನ ಗೊತ್ತು ಮಾಡುವ ಹೊತ್ತಿಗೇ ಅವನಿಗೆ ದೂರದೂರಿಗೆ ವರ್ಗವಾಗಿದೆ. ಹಾಗೆ ಅಂವ ಹೋದಾಗಿನಿಂದ ಅವಳ ದುಗುಡ ಹೆಚ್ಚಾಗಿದೆ.
“ಅದು ಅವನಿಲ್ಲದ ದುಃಖ” ಅಂತ ಮೊದಮೊದಲು ಅಪ್ಪ ಅಮ್ಮ ಸುಮ್ಮನುಳಿದರು. ಮದುವೆಗೆ ತಿಂಗಳಿದ್ದಾಗ “ಮಾಮನ ಜತೆ ಮದುವೆ ಬೇಡ” ಹುಡುಗಿ ಅತ್ತಳು.
ಮನೆ ಮಂದಿಗೆ ತಲೆಬುಡ ಅರ್ಥವಾಗಲಿಲ್ಲ. ಅವಳಿಗೆಲ್ಲೋ “ಗಾಳಿ” ಸೋಂಕಿರಬೇಕೆಂದು ಚೀಟಿ ಬೂದಿ ಹಾಕಿಸಿದರು. ಊಹೂಂ… ಅವಳ ಅಳು ನಿಲ್ಲಲಿಲ್ಲ. ಅಕ್ಕಿ- ತಾಯಿತ ದಿಂಬಡಿ ಇಟ್ಟು ಮಲಗಿಸಿದರು. ಇಲ್ಲ… ಹುಡುಗಿ ಆಗಲೂ “ಬೇಡ ಬೇಡ”ವೆನ್ನುತ್ತಲೆ ಉಳಿದಳು.
ಅವಳ ನಿರಾಕರಣೆಯ ಕಾರಣ ಏನೆಂದೇ ಯಾರಿಗೂ ತೋಚಲಿಲ್ಲ. ಬೇರೆ ಯಾರನ್ನಾದರೂ…?
ಸದ್ಯ! ಅವಳು “ಹಾಗೇನೂ ಇಲ್ಲವೇ ಇಲ್ಲ” ಅಂತ ತನ್ನ ಪ್ರೀತಿಯ ಮಾಮನ ಮೇಲೆ ಆಣೆ ಮಾಡಿ ಹೇಳಿದಾಗ ಅವರಿಗೆಲ್ಲ ಜೇನು ತಿಂದಷ್ಟು ಖುಶಿ!
“ಹುಚ್ಚು ಹುಡುಗಿ, ದೂರದ ಊರಂತ ಹೆದರ್ತಿದೆ…” ಮೊಮ್ಮಗಳ ಅಳುವಿಗೆ ಅವಳಜ್ಜಿ ವ್ಯಾಖ್ಯೆ ಬರೆದಳು. ಅಷ್ಟೇ ಸಾಕೆನ್ನುವ ಹಾಗೆ ಉಳಿದವರೆಲ್ಲ ತಮ್ಮ ಪಾಲಿನ ಸಿದ್ಧತೆ ಮುಂದುವರೆಸಿದರು.
ಮನೆ ಮಂದಿ ಸಿದ್ಧವಾದರು. ಮಂಟಪ ಸಿದ್ಧವಾಯ್ತು. ಊರ ಜನ ಸಿದ್ಧವಾದರು. ಹುಡುಗನಂತೂ ಸಿದ್ಧವೇ ಇದ್ದ. ಇನ್ನು ಹುಡುಗಿಯದೇನು ಮಾತು? ಅವಳನ್ನೂ ಸಿದ್ಧ ಮಾಡಿದರು!
ಹಸೆ ಮೇಲೆ ಹೊಸ ಮದುಮಕ್ಕಳು ಬಾಸಿಂಗ ತೊಟ್ಟು ಕುಂತರು. ಅಂತೂ ಮದುವೆ ಮುಗಿಯಿತು.

ಪ್ರಸ್ತದ ಕೋಣೆಯಲ್ಲಿ ಮಲೆನಾಡು ಮುಖದ ಹುಡುಗಿ “ಧೋ…” ಅಂತ ಸುರಿಯುತ್ತಿದ್ದಳು. ಕಣ್ಣಲ್ಲಿ ಸಿಡಿಲು- ಮಿಂಚು. ಅವಳ ಮೊಂಡಾಟದ ಅರಿವಿದ್ದ ಅಂವ ಬಳಿ ಕೂರಲು ಹೆದರಿದ. ಅವಳ ಪಾಡಿಗೆ ಅತ್ತುಕೊಳ್ಳಲು ಬಿಟ್ಟು ಒಬ್ಬನೇ ಮಲಗಿದ. “ಮೊದಲಾಗಿದ್ದರೆ ಚಾಕಲೇಟು ಕೊಟ್ಟು ಸುಮ್ಮನಿರಿಸಬಹುದಿತ್ತು. ಈಗೇನು ಕೊಡಲಿ?” ಹೊರಳಾಡಿದ.
ಪಾಪದ ಹುಡುಗ. ಅವನಿಗೆ ಅಕ್ಕನ ಮಮತೆಯ ಋಣ. ಭಾವನ ಮನೆ ಉಪ್ಪಿನ ಋಣ. ನಿದ್ದೆ ಬರದೆ ಅಂತೂ ಸಾವರಿಸಿಕೊಂಡು ಪಕ್ಕ ಹೋಗಿ ಕುಂತ. ಎಂದಿನ ಹಾಗೆ ತಲೆ ನೇವರಿಸ್ತ, “ಎಂತದೇ ಮುನ್ನಿ?” ಅಂದ.

ಅವನು…
ಲಂಗ ಎತ್ತಿಕೊಂಡು ಸಿಂಬಳ ಸುರಿಸುತ್ತ ತಾನು ಯಾರ ತೊಡೆಯೇರಿ ಕುಳಿತುಕೊಳ್ತಿದ್ದಳೋ ಅದೇ ಅವನು!
ಜ್ವರ ಬಂದಾಗ ರಾತ್ರಿಯಿಡೀ ಬಗಲಲ್ಲಿ ಇದ್ದು ನೆತ್ತಿಗೆ ಒದ್ದೆ ಬಟ್ಟೆ ತಟ್ಟುತಿದ್ದವನು.
ಶಾಲೆಗೆ ಕೈ ಹಿಡಿದು ಕರೆದೊಯ್ತಿದ್ದವನು.
ಗೆಳತಿ ಜತೆಯ ಜಗಳ ಬಿಡಿಸಿದವನು.
ಹೊಸ ಪೆನ್ಸಿಲ್ಲು ರಬ್ಬರ್ರು ಕೊಡಿಸಿದವನು.
ತಾನು ಬರಿ ಕಾಲಲ್ಲಿ ನಡೆದು ಅವಳಿಗೆ ಚಪ್ಪಲಿ ತೆಗೆಸಿಕೊಟ್ಟವನು.
ಕೃಷ್ಣನ ಡ್ರೆಸ್ಸು ಮಾಡಿ, ಸೈಕಲ್ಲಿನ ಬಾರ್ ಮೇಲೆ ಕುಳ್ಳಿರಿಸಿಕೊಂಡು ಹೋಗಿ ಫೋಟೋ ತೆಗೆಸಿದ್ದನಲ್ಲಾ, ಅದೇ ಅವನು!
ತನ್ನ ಮುದ್ದಿಗೂ ಮುನಿಸಿಗೂ ಸೊಪ್ಪು ಹಾಕುತ್ತ ತಾಳಕ್ಕೆ ಕುಣಿದ ಅಪ್ಪನಂಥವನು!!
ಮಾಮನ ಮುಖ ನೋಡುತ್ತ ಮುದ್ದುಗರೆಯುತ್ತ ಅಳುತ್ತಿದ್ದಾಳೆ ಹುಡುಗಿ…
ಕೇಳುತ್ತಿದ್ದಾಳೆ ಹಾಗೇ, “ಅಪ್ಪನಂಥವನ ಜತೆ ನಾ ಹೇಗೆ ಸಂಸಾರ ಮಾಡಲಿ?”

‍ಲೇಖಕರು avadhi

February 18, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೇತನಾ ಎಂಬ ‘ಗಾನಾ ಜೋಯ್ಸ್

ಚೇತನಾ ಎಂಬ ‘ಗಾನಾ ಜೋಯ್ಸ್

' ಕನಸುಗಾರ ವೆಂಕಟ್ರಮಣ ಗೌಡರು 'ಹಂಗಾಮ' ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ...

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ...

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ...

10 ಪ್ರತಿಕ್ರಿಯೆಗಳು

 1. ತೇಜಸ್ವಿನಿ ಹೆಗಡೆ

  “ಅಪ್ಪನಂಥವನ ಜತೆ ನಾ ಹೇಗೆ ಸಂಸಾರ ಮಾಡಲಿ?”
  ಉತ್ತರ ಆ ಹುಡುಗನಿಗೂ ಗೊತ್ತಿರಲಿಕ್ಕಿಲ್ಲ. ಇಷ್ಟವಾಯಿತು ಕತೆ. ಆ ಹುಡುಗಿಯ ಮನಃಸ್ಥಿತಿ ನೆನೆದು ಸಂಕಟವಾಯಿತು ಕೂಡ.

  ಪ್ರತಿಕ್ರಿಯೆ
 2. ಚಿರವಿರಹ

  ಲಂಗ ಎತ್ತಿಕೊಂಡು ಸಿಂಬಳ ಸುರಿಸುತ್ತ ತಾನು ಯಾರ ತೊಡೆಯೇರಿ ಕುಳಿತುಕೊಳ್ತಿದ್ದಳೋ ಅದೇ ಅವನು!
  ಜ್ವರ ಬಂದಾಗ ರಾತ್ರಿಯಿಡೀ ಬಗಲಲ್ಲಿ ಇದ್ದು ನೆತ್ತಿಗೆ ಒದ್ದೆ ಬಟ್ಟೆ ತಟ್ಟುತಿದ್ದವನು.
  ಶಾಲೆಗೆ ಕೈ ಹಿಡಿದು ಕರೆದೊಯ್ತಿದ್ದವನು.
  ಗೆಳತಿ ಜತೆಯ ಜಗಳ ಬಿಡಿಸಿದವನು.
  ಹೊಸ ಪೆನ್ಸಿಲ್ಲು ರಬ್ಬರ್ರು ಕೊಡಿಸಿದವನು.
  ತಾನು ಬರಿ ಕಾಲಲ್ಲಿ ನಡೆದು ಅವಳಿಗೆ ಚಪ್ಪಲಿ ತೆಗೆಸಿಕೊಟ್ಟವನು.
  ಕೃಷ್ಣನ ಡ್ರೆಸ್ಸು ಮಾಡಿ, ಸೈಕಲ್ಲಿನ ಬಾರ್ ಮೇಲೆ ಕುಳ್ಳಿರಿಸಿಕೊಂಡು ಹೋಗಿ ಫೋಟೋ ತೆಗೆಸಿದ್ದನಲ್ಲಾ, ಅದೇ ಅವನು!
  ಎಷ್ಟು ಚೆನ್ನಾಗಿದೆ ಈ ಸಾಲುಗಳು. ಎಲ್ಲವನ್ನೂ ಹೇಳುತ್ತವೆ, ಏನೂ ಹೇಳದೇ. ಥ್ಯಾಂಕ್ಯೂ ಚೇತೂ.

  ಪ್ರತಿಕ್ರಿಯೆ
 3. malathi S

  lekin avanu appanantavanu hEgaaguttaane?? friend or brother ok. But then in earlier times a girl’s opinion hardly mattered to anyone. ask me. i got married at 17. 🙂 Nice one Chetana. Way to go.

  ಪ್ರತಿಕ್ರಿಯೆ
 4. ಅರೇಹಳ್ಳಿ ರವೀ

  ಹೆಂಗಪ್ಪಾ ಅಂದ್ರೆ ಹೆಂಗಾಗುತ್ತೆ ಪುಟ್ಟಿ…? ನಿನ್ನಂತ ಮಾಮ-ಪುಟ್ಟಿ-ಮದುವೆ-ಗಂಡ-ಹೆಂಡತಿಯಾಗದಿರುವಿಕೆ ಇತ್ಯಾದಿಗಳು ನಮ್ಮ ಸುತ್ತಲಿನ ವಾಸ್ತವದ ಅಣಕು. ಹೇಗಿದ್ದರೂ ಮಕ್ಕಳಾಗುತ್ತವೆ ಎಂಬ ವಾಸ್ತವವಾದವೂ, ಮಕ್ಕಳಾದ ನಂತರ ಸರಿಹೋಗುತ್ತೆ ಎಂಬ ಅಶರೀರ ವಾದವೂ ನಮಗೆ ಸದಾ ಕೇಳಿಸುವ ಸವಕಲುಕ್ತಿಗಳು.
  ನಿನ್ನ ಮಾಮನ ತರದ ಸಂಬಂಧಗಳು ಹಿಂದಿನ ಕಾಲದಲ್ಲಿ ಅನಿವಾರ್ಯ ಎನಿಸುತ್ತಿದ್ದವು. ಆದರೆ ಇಂದು ನೀನು, ನಿನ್ನಂತವರು ಜಗತ್ತಿಗೆ ತೆರೆದುಕೊಂಡಿದ್ದೀರಿ. ಅಪ್ಪನಂತವರು ನಿಮಗೆ ಕಾನೂನು ಸಲಹೆಗಾರರಾದರೆ ಮಾತ್ರ ಸಾಕೆನಿಸುತ್ತೆ. ಗಂಡ ಗಂಡಾಂತರವೂ ಆಗಿರಬಹುದು. ಆದ್ರೆ ಪುಟ್ಟಿ ಅಪ್ಪನಂತವನು ಅನ್ನಿಸಿಕೊಳ್ಳೋದು ತುಂಬ ಕಷ್ಟ-ನೀವು ಅಮ್ಮಂದಿರಾಗುವುದಕ್ಕಿಂತಲೂ.
  (ವಿಶೇಷ ಎಚ್ಚರಿಕೆ: ಸಂಬಂಧಗಳಲ್ಲಿನ ಮದುವೆ ಭವಿಷ್ಯದ ಕೂಸುಗಳ ಆರೋಗ್ಯಕ್ಕೆ ನೇರ ದುಷ್ಪರಿಣಾಮಿ).

  ಪ್ರತಿಕ್ರಿಯೆ
 5. ನಾ.ಸೋಮೇಶ್ವರ

  ಹುಡುಗಿ ಮಾನಸಿಕವಾಗಿ ಬೆಳೆದಿದ್ದಾಳೆ. ಹುಡುಗ ಹಾಗೂ ಹುಡುಗಿಯ ಮನೆಯವರು
  ಮಾನಸಿಕವಾಗಿ ಸ್ಥಾವರವಾಗಿಬಿಟ್ಟಿದ್ದಾರೆ. ಆ ಹುಡುಗಿಗೆ ಹೀಗಾಗಬಾರದಿತ್ತು!

  ಪ್ರತಿಕ್ರಿಯೆ
 6. ಅರೇಹಳ್ಳಿ ರವೀ

  ಡಾಕ್ಟ್ರೆ,
  ಮನಸು ಜಂಗಮ ಅಂತ ನಾನನ್ನುತ್ತೀನಿ. ಸ್ಥಾವರವಾಗಿರುವುದು ಕೇವಲ ಹುಡುಗಿಯ ತಂದೆ ತಾಯಿಗಳಲ್ಲ-ಅವಳನ್ನು ವರಿಸುವಾತನೂ. ಆದರೂ ಈ ಕಾಲದ ಮನಸ್ಸುಗಳನ್ನು ಸ್ಥಾವರಗಳೆಂದು ಕರೆಯುವುದು ಕೋಳಿ ಜ್ವರವನ್ನು ಪಶ್ಚಿಮ ಬಂಗಾಳಕ್ಕೆ ಸ್ಥಾವರವೆಂದಂತೆ. ಮನಸುಗಳ ಚಲನೆ ಅರ್ಥಾತ್ ಪರಿವರ್ಥನೆ ಬಹಳ ನಿಧಾನ. ಗಾಲಿಗಳ ಮೇಲೆ ಅರಮನೆಯಂತೆ. ಕೆಲವರೂ ಅದಕ್ಕೂ ಸ್ಪೀಡ್ ಗವರ್ನರ್ ಅಳವಡಿಸುವ ಆಸೆ ತೋರುತ್ತಾರೆ. ಅದೇ ನೀವು ಹೇಳಿದಂತ ಸ್ಥಾವರದಂತವರು.

  ಪ್ರತಿಕ್ರಿಯೆ
 7. ನಾ.ಸೋಮೇಶ್ವರ

  ರವಿಯವರೆ, ಮನಸ್ಸು ಎಂದೆಂದಿಗೂ ಜಂಗಮ. ನಿಜ. ಆದರೆ ವಿಚಾರ
  ಸ್ಥಾವರವಾದ ಹೇಗೆ? ಕಥೆಯಲ್ಲಿ ಬಹುಶಃ ಹುಡುಗಿಯನ್ನು ಬಿಟ್ಟು ಉಳಿದವರು
  ಬೆಳದೇ ಇಲ್ಲ ಅಲ್ಲವೆ?!

  ಪ್ರತಿಕ್ರಿಯೆ
 8. Manu

  ಚೇತನಾ ತೀರ್ಥಹಳ್ಳಿ… the story was good enough hold the Theme with it.. but can not happen in real.. if it has happened then could have happened to one of the writers relative.. 😉

  ಪ್ರತಿಕ್ರಿಯೆ
 9. chetanachaitanya

  ನಮಸ್ತೇ ಮನು ಅವರಿಗೆ,
  ಕಥೆ ಮತ್ತು ನಡೆಯಲು ಸಾಧ್ಯವಿಲ್ಲ… ನಿಮ್ಮ ಕಮೆಂಟಿನ ಈ ಎರಡು ಪದಗಳನ್ನೇ ಇಟ್ಟುಕೊಂಡು ಯೋಚಿಸಿ ನೋಡಿ.
  -ಇದು ಈ ಕಥೆಯ ಮಟ್ಟಿಗಿನ ಪ್ರತಿಕ್ರಿಯೆ. ಉಳಿದಂತೆ, ನೀವು ನಮ್ಮ ಸಮಾಜವನ್ನ ಸರಿಯಾಗಿ ನೋಡಿಲ್ಲವೇನು? ಸಂಬಂಧಗಳೊಳಗಿನ ಮದುವೆ, ಬಾಲ್ಯ ವಿವಾಹ- ಇವೆಲ್ಲ ರಾಜಾರೋಷವಾಗೇ ನಡೀತಿವೆಯಲ್ಲ? ತೀರಾ ವರ್ಷಕ್ಕೆರಡು ಸಾರ್ತಿ ಪುಟಾಣಿ ಹುಡುಗಿಯರಿಗೆ ನಾಯಿ ಜೊತೆ ಮದುವೆ ಮಾಡಿದ ರಿಪೋರ್ಟ್ ಗಳನ್ನೂ ನೋಡ್ತಲೇ ಇದೀವಲ್ಲ?

  ವಂದೇ,
  ಚೇತನಾ

  ಪ್ರತಿಕ್ರಿಯೆ
 10. ಅರೇಹಳ್ಳಿ ರವೀ

  ಚೇತನಾ,
  ಸಂಬಂಧಗಳೊಳಗಿನ ಮದುವೆಗಳಿಗೆ ಕೆಲವೊಮ್ಮೆ ಉದ್ದೇಶಗಳಿರುತ್ತಾವಾದರೂ ಅವು ಬಹಳ ಸನ್ನಿವೇಷಗಳಲ್ಲಿ ಬಡತನವನ್ನು ಸಂಭಾಳಿಸುವ ಮತ್ತು ಸಿರಿವಂತಿಕೆಯನ್ನು ತಮ್ಮೊಳಗೇ ಉಳಿಸಿಕೊಳ್ಳುವ ಅನಿವಾರ್ಯತೆಗೊಳಪಟ್ಟಿರುತ್ತವೆ. ಅದೂ ಅಲ್ಲದೆ ವೈಜ್ಞಾನಿಕವಾಗಿ ಇದು ಅನಾರೋಗ್ಯಕಾರಿ ಎಂದು ಸಮಾಜಕ್ಕೆ ಗೊತ್ತಾಗುವವರೆಗೂ ಸರ್ವಸಮ್ಮತವೂ, ನ್ಯಾಯಸಮ್ಮತವೂ ಆಗಿತ್ತು. ಬದಲಾದ ವೈಜ್ಞಾನಿಕ ಮತ್ತು ಸಾಮಾಜಿಕ ಸಾಧ್ಯತೆ-ಅಭಿಪ್ರಾಯಗಳಿಗನುಗುಣವಾಗಿ ನಮ್ಮ ಆಲೋಚನೆಗಳೂ ಬದಲಾಗತೊಡಗುತ್ತವೆ ಮತ್ತು ಅದು ಆಗಲೇಬೇಕು.
  ಆದರೆ ಸಾಂಬಂಧಿಕ ಸುರಕ್ಷತೆಗಳನ್ನು ಒದಗಿಸುತ್ತಿದ್ದ ಇಂಥಹ ಒಳವಿವಾಹಗಳನ್ನು ಬದಲಾದ ಸನ್ನಿವೇಷದ ಅನಿವಾರ್ಯತೆಯಲ್ಲೂ ಟೀಕಿಸುವಾಗ ಎಚ್ಚರಿಕೆಯಿಂದಿರಬೇಕು. ತೀರಾ ನಾಯಿ-ನರಿಗಳೊಂದಿಗೆ ನಡೆಸುವ ತಾತ್ಕಾಲಿಕ ಆಚರಣೆಗಳಿಗೂ, ಪ್ರಸ್ತಾಪಿಸಿದ ಮದುವೆಗಳಿಗೂ ಯಾವುದೇ ಸಾಮ್ಯಗಳಿಲ್ಲ. ಹಾಗೆ ಸಾಮ್ಯತೆಯನ್ನು ಕಲ್ಪಿಸುವುದೂ ಕ್ಷಮ್ಯತೆಯ ಎಲ್ಲೆಯೊಳಗೇ ಇರಬೇಕು. ಏನಾದರಾಗಲಿ ಕಥೆಯ ಕೊನೆ ವಾಕ್ಯ “ಅಪ್ಪನಂಥವನ ಜತೆ ನಾ ಹೇಗೆ ಸಂಸಾರ ಮಾಡಲಿ?” ಹಿಡಿಸಿತು.
  ನಾನು ಅವಳ ಅವ್ವನಾಗಿದ್ದರೆ ಉತ್ತರ ಹೀಗಿರುತ್ತಿತ್ತು-“ಸ್ವಲ್ಪ ದಿನ ಸುಮ್ಕಿರು ಮಗಳೇ ಎಲ್ಲಾ ಸರಿಹೋಗುತ್ತೆ, ಹೊಸದರಲ್ಲಿ ನಂಗೂ ಹೀಗೇ ಅನ್ನಿಸ್ತಿತ್ತು”!.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: