’ಅವಳಿಲ್ಲದ ನಾನು….’ – ಕುಂಟಿನಿ ಬರೆಯುತ್ತಾರೆ

ಅವಳಿಲ್ಲದ ನಾನು

ಕುಂಟಿನಿ

ದಟ್ಟ ಮುಗಿಲು.ಇನ್ನು ಕೆಲವೇ ಕ್ಷಣದಲ್ಲಿ ಎದೆಯನ್ನು ಅಮುಕಿ ಬರುತ್ತದೆ ಆ ನೆನಪು ಎಂದು ಖಚಿತವಾಗುತ್ತಿದೆ. ಅವಳ ನೆನಪಿನ ದಟ್ಟಣೆ ಮೈ ಸವರಿಕೊಂಡ ಹಾಗೇ. ಪ್ರೀತಿಗೆ ಬಿದ್ದರೆ ಆಯಿತು,ಬ್ರೈನ್ ಸ್ಟಾಪು ಎಂದು ಹೇಳಿದ್ದ ಗೆಳೆಯ ಬೆಂಗಳೂರಿನಿಂದ ಕಳುಹಿಸಿದ ಸಂದೇಶ ಓದಲಾರದೇ ಒದ್ದಾಡುತ್ತಿದ್ದೇನೆ ನೆನಪಿನ ತುಂಬಾ ಅವಳು. ಕಾರಿನ ಬಾಗಿಲು ಅರ್ಧ ತೆರೆದಿದ್ದಾಳೆ.ಮಳೆಯ ಹನಿ ರಭಸದಿಂದ ಬೀಳುತ್ತಿದೆ.ಅದೇ ಬಾಗಿಲ ಸಂದಿನಿಂದ ಮುಖವನ್ನು ಹೊರ ಹಾಕಿ ನಗುತ್ತಾಳೆ.ಮೈ ಮೇಲೆ ಬೀಳುವ ಹನಿಗಳನ್ನು ತಾನೇ ತಾನಾಗಿ ಧರಿಸುತ್ತಾಳೆ. ಅವಳ ಹೂನಗೆಯಲ್ಲಿ ನಾನು ಅರಳುತ್ತೇನೆ. ದಟ್ಟ ಕಾಡಿನ ತುಂಬಾ ಇರಿಂಟಿಯ ಲಯ.ಮನಸ್ಸು ಹಬೆಯಾಡುತ್ತಿದೆ.ಬಾಲ್ಯ ದೂರ ಕುಳಿತಿದೆ,ಮೊದಲಾಗಿ ಮೈನೆರೆದ ಹುಡುಗಿಯ ಹಾಗೇ ಸಂಕೋಚದಿಂದ,ಆತಂಕದಿಂದ. ಅರ್ಥವಾಗುತ್ತಿಲ್ಲ.ಯಾವ ಕಾತರವಿದು ಎಂದುಕೊಳ್ಳುತ್ತೇನೆ.ಹುಡುಕಾಟಕ್ಕೆ ಇದೇ ಒಂದು ದಾರಿ ಮಾತ್ರಾ ಇತ್ತಾ? ನಡು-ನಡುವೆ ಅವಳು ಬಳಸಿಕೊಳ್ಳುತ್ತಾಳೆ.ಆಮೇಲೆ ಹಾವಿನ ಹಾಗೇ ಸುತ್ತಿಕೊಳ್ಳುತ್ತಾಳೆ. ಭುಸ್ ಎಂದದ್ದು ಏನು?ಯಾವುದು ಅದು?ಹುತ್ತದೊಳಗೆ ಹುದುಗಿದ್ದ ಆ ರೋಷ ಉಕ್ಕೇರಿ ಸುರಿದದ್ದು ಅವಳ ಮೈಮೇಲೆ! ಕಣ್ಣುಮುಚ್ಚಿ ಕುಳಿತರೆ ಅವಳ ಅಳು. ಇಷ್ಟೇನಾ ಪ್ರೀತಿ ಅಂದರೆ.. ನಾಳೆ ಸಿಗಲಾರದ ನಿನಗೆ ನನ್ನ ಕನಸುಗಳ ಕೋಟೆಯಲ್ಲೇನು ಕೆಲಸ? ಯುದ್ಧಕ್ಕೆ ಬಂದ ಯೋಧ ಕಣೇ ನಾನು.. ಯುದ್ಧ ಗೆಲ್ಲಲಿಲ್ಲ..ಸೋತು ಹೋದೆ.ಇಷ್ಟಕ್ಕೂ ನಿನ್ನ ಜೊತೆ ಅದೇನು ಯುದ್ಧ?? ಕೆರೆಯ ನಡುವೆ ಅರಳಿದ ತಾವರೆ ನೀನು..ಈಜಲಾರೆ,ಇಳಿಯಲಾರೆ,ಹಿಡಿಯಲಾರೆ.. ಮನಸ್ಸು ಮುದುಡುತ್ತದೆ.ಸಂಜೆಯಾಯಿತು ಎನ್ನುತ್ತಾಳೆ ಅವಳು..ರಾತ್ರಿ ಹೊರಳಿ ಮತ್ತೆ ಬೆಳಗು ಬರಲಿ,ಕಾಯುತ್ತೇನೆ ಎಂದು ಬೀಳ್ಕೊಟ್ಟರೆ ಅವಳ ಧಡಸಿತನದಲ್ಲೂ ನನಗೆ ಕಾಣಿಸಿದ್ದು ಅವಳ ಪುಟ್ಟ ಪುಟ್ಟ ಪಾದಗಳು ಒತ್ತಿ ಮಡಗಿ ಹೋದ ಹೆಜ್ಜೆ ಸಾಲು.. ಅವಳ ಹಗಲು ಆ ಭೂಮಿಯಾಚೆ ಇದೆ ಎಂದು ಗೊತ್ತಿದೆ.ಭೂಮಿಯನ್ನು ಕೊರೆಯುತ್ತೇನೆ,ಎಷ್ಟು ಬೇಗ ಕೊರೆದು ಮುಗಿಸುವೆನೋ ಅಷ್ಟೂ ಬೇಗ ಅವಳು ಸಿಗುತ್ತಾಳೆ ಎಂಬ ಧಾವಂತ. ಆದರೆ ನಾನು ಕೊರೆದ ಭೂಮಿಯ ಕೊಳವೆಯಲ್ಲಿ ಸಾಗಿ ಹೋದಾಗ ಅಲ್ಲಿ ಇರುಳಾಗಿತ್ತು.ಅವಳು ಅವನ ಕೈ ಎಳೆದುಕೊಂಡು ದಿಂಬು ಮಾಡಿ ನಿದ್ದೆ ಹೋಗಿದ್ದಾಳೆ.ಅವಳ ಹಗಲಿಗೆ ಕಾಯಲಾರದೇ ಅದೇ ಕೊರೆದ ಭೂಮಿಯ ಕೊಳವೆಯಲ್ಲಿ ಮರಳಿದರೆ ಇಲ್ಲೂ ಇರುಳು! ನದಿಗೂ ಯಾವುದೋ ವಿರಹ.ತೀರಾ ನೊಂದವಳ ಹಾಗೇ ಹರಿಯುತ್ತಿದೆ.ಹಿಂದಿನ ಉಲ್ಭಣವಿಲ್ಲ,ಅವಸರದ ವೇಗವಿಲ್ಲ.ಸಾಕು, ಎಷ್ಟಾದರೂ ಸೇರುವುದು ಆ ಸಾಗರದ ಒಳಗೆ ತಾನೇ ಎಂಬ ನೀರವ ನೇವರಿಕೆ ನದಿಗೆ ಅವಳ ತೊಡೆಯ ಮೇಲೆ ನಾನು ತಲೆ ಮಡಗಿ ಬಿಕ್ಕಳಿಸುತ್ತಿದ್ದಾಗ.. ಎಷ್ಟೊಂದು ನದಿಗಳನ್ನು ತನ್ನೊಳಗೆ ಸೇರಿಸಿಕೊಂಡ ಸಾಗರ ಥೇಟ್ ಫ್ಲರ್ಟ್.ಸಾಗರಕ್ಕೆ ಭಾವನೆಗಳೇ ಇಲ್ಲ.ಆ ಬೆಟ್ಟದ ಕಿಬ್ಬಿನಿಂದ ಛಿಲ್ಲೆಂದು ಒಡೆದು ಕಿಳಿಕಿಳಿ ಸದಸು ಮಾಡುತ್ತಾ ಸುರಿದು ಸುಪ್ಪತ್ತಿಗೆಯನ್ನೂ ಮುಕ್ಕಳಿಸಿ ಬರುವ ತೊರೆ ಅವರಿವರ ಗೆಳೆತನವ ಕಟ್ಟಿಕೊಂಡು ಧುಮ್ಮಿಕ್ಕಿ ತೊನೆದಾಡಿ ಹರಹಿ ಹಗುರವಾಗಿ ಕಿಲಕಿಲನೆ ನಕ್ಕ ಹರೆಯದ ಹುಡುಗಿಯ ಹಾಗೇ ಕನಸುಗಳನ್ನೇ ಕಾತರಿಕೆಗೆ ಎಡೆ ಇಟ್ಟ ಹಾಗೇ ಸಾಗುತ್ತಿದ್ದರೆ ಆ ನದಿಯ ಒಳಗೂ ಇರುವ ಸಣ್ಣ ಸಂತೋಷ ಆ ಸಾಗರ ನನ್ನ ಅಪ್ಪಿ ಮುದ್ದಾಡಿ ರಮಿಸಿ ಕೂಡಿ ಸುಖಿಸಿ ಸಂತೈಸಿ ಅವನೊಳಗೆ ನಾನಿಲ್ಲದ ಹಾಗೇ ಮಾಡುತ್ತದೆ ಎಂಬ ಸಂಭ್ರಮ. ಆದರೆ ಸಾಗರಕ್ಕೆ ಈ ನದಿ ಎಷ್ಟನೆಯ ತೊತ್ತು! ಅಬ್ಬಾ ತೊತ್ತು..ರಮೆಯಲ್ಲ,ಜವನೆಯಲ್ಲ,ಮನದನ್ನೆಯಲ್ಲ,ಅರಸಿ ಬಂದರೂ ಅವನ ಅರಸಿಯಲ್ಲ! ಆದರೂ ಸಾಗರದೊಳಗೆ ಲೀನವಾಗುವುದೇ ನದಿಯ ಧರ್ಮ. ಇದನ್ನೂ ಪ್ರೀತಿ ಎನ್ನುತ್ತಾರಾ ಎಂದು ಕೇಳಿದೆ. ಮಾತನಾಡಲಿಲ್ಲ. ಹಮ್ ಅಂದಳು. ನನಗೆ ಎಸ್ಸೆಮ್ಮೆಸ್ ಭಾಷೆ ಬೇಡ ಕಣೇ… ಭಾವನೆ ಬೇಕು..ಎದೆಯ ಬಾಗಿಲಿಗೆ ಅಗುಳಿ ಹಾಕಿದಂಥ ಭದ್ರತೆ ಬೇಕು,ತೀವ್ರತೆ ಬೇಕು ಎಂದೆ. ನಕ್ಕಳು.. ಕಳ್ಳರು ಬರಲಾರರು ಎಂದುಕೊಂಡಿರುವೆ ಎಂದಳು. ಖಜಾನೆಯಲ್ಲಿ ಎಲ್ಲಾ ಖಾಲಿ ಖಾಲಿ..ಇನ್ನೂ ಈ ಕೋಶ ತುಂಬಿದೆ ಎಂದುಕೊಂಡ ಭ್ರಮೆ ಮಾತ್ರಾ ನನ್ನಲ್ಲಿ ಉಳಿದಿದೆ.ಇದರೊಳಗೆ ಇರೋದು ಖಾಲೀ ಥೈಲಿ..ಕುಟ್ಟಿ ಕುಡುಗಿದರೆ ಏನೂ ಸಿಗದು..ಬರೀ ಠುಸ್ಸೆಂಬ ಗಾಳಿ ಮಾತ್ರಾ.. ನಿನ್ನ ಹೃದಯಪುಟದಿಂದ ಸೈನ್‌ಔಟ್ ಆಗಿದ್ದೇನೆ ಎಂಬ ಸಂದೇಶ ಬಿಟ್ಟು ಹೊರಟಳು. ನಾನು ಜಾಲಾಡಿದರೆ ಅಲ್ಲಿ ಮತ್ತೆ ಲಾಗ್ ಆನ್ ಆಗಿ ಎಂಬ ಸೂಚನೆ ಇತ್ತು. ಈ ಬಾರಿ ಕಂಚುಕಲ್ಲು ಮುಳುಗುವುದಿಲ್ಲ ಎಂದುಕೊಂಡೆ.ಏಕೆಂದರೆ ಮಳೆ ಕಂತುಕಂತಾಗಿ ಹೊರಟು ಹೋಗಿತ್ತು.ಬೆಟ್ಟದಲ್ಲಿ ಮಳೆ ಜಡಿದು ಬಂದರೆ ನದಿ ತುಂಬುತ್ತಾಳೆ.ಮದುವೆ ಮಂಟಪದಲ್ಲಿ ತೆರೆಸೀರೆಯ ಆಚೆಗೆ ನಿಂತ ಅವಳ ಹಾಗೇ. ನಕ್ಕಳು. ಆ ನಸುನಗುವಿನಲ್ಲಿ ಅವಳನ್ನು ಹಿಡಿಯಲು ಕೆಮೆರಾಗಳು ಒದ್ದಾಡುತ್ತಿದ್ದವು.ವೀಡಿಯೋ ಎತ್ತಿ ಓಡಾಡುತ್ತಿದ್ದ ಆ ದಢೂತಿ ಕೆಮೆರಾವಾಲಾ ನನ್ನನ್ನು ನೂಕಿ ನಿಂತ.ಅವನಿಗೆ ಬೇಕಾಗಿದ್ದುದು ಅವಳ ಆ ನಗು.ಅದು ಅವನಿಗಲ್ಲ,ಅವನ ಕೆಮೆರಾಕ್ಕೆ ಮಾತ್ರಾ ಎಂದು ಸಮಾಧಾನಪಟ್ಟೆ. ಆ ರಾತ್ರಿ ಅವಳ ಎಸ್ಸೆಂಎಸ್ ಬಂದಿತ್ತು.ಓದಿರಲಿಲ್ಲ.ಗಾಢ ನಿದ್ದೆಯಲ್ಲಿದ್ದೆ.ಹೊತ್ತಾರೆ ಎದ್ದು ಓದಿದೆ. “ಸಂಗಮ ಆಗಲಿಲ್ಲ.ಕಂಚುಕಲ್ಲು ಮುಳುಗಿಸು” ಕಂಚುಕಲ್ಲು ಮುಳುಗದೇ ಸಂಗಮ ಆಗುವುದಿಲ್ಲ.ಕಂಚುಕಲ್ಲು ಮುಳುಗಿಲ್ಲ ಏಕೆಂದರೆ ಬೆಟ್ಟದ ಮೇಲೆ ಮಳೆ ಬೀಳುತ್ತಿಲ್ಲ.ಕಂಚುಕಲ್ಲಿನ ಮೇಲೆ ಮಳೆ ಬಿದ್ದರೂ ಅದು ಮುಳುಗುವುದಿಲ್ಲ.ಏಕೆಂದರೆ ಅದರ ಮುಳುಗುವಿಕೆಗೆ ಹೊರ ತೊರೆಯೇ ಬರಬೇಕು.ದೂರದಿಂದ ನದಿ ತುಂಬಿ ಬರಬೇಕು. ನಾನು ಬೆಟ್ಟದ ಮೇಲೆ ಏರಿ ಮೋಡಗಳನ್ನು ಹಿಂಡಿ ಹಿಪ್ಪೆ ಮಾಡಿ ಮಳೆ ಸುರಿಸಿ ನದಿಯ ತುಂಬಿ ಹರಿಸಿ ಕಂಚುಕಲ್ಲನ್ನು ಮುಳುಗಿಸಿ ಸಂಗಮಕ್ಕೆ ಸನ್ನದ್ಧಮಾಡುವೆ. ನೇತ್ರಾವತಿಯ ಜೊತೆಗೂಡಿ ಸಂಗಮಿಸಲು ಕುಮಾರಧಾರೆ ಹರಿದು ಬರುತ್ತಿದ್ದಾನೆ ಎಂದು ನನಗೂ ಗೊತ್ತಿದೆ.]]>

‍ಲೇಖಕರು G

August 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This