ಅವಳು ಅಲ್ಲಿಂದ ನಡೆದಿದ್ದಳು…

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ
ನಿಮ್ಮನ್ನು ಆ ರೀತಿ ಕರೆಯೋ,ನಿಮ್ಮ ಬಗ್ಗೆ ಎಲ್ಲರ ಮುಂದೆ ಹೇಳಿಕೊಳ್ಳುವ ಭಾಗ್ಯ ನಂಗಿಲ್ಲಾರಿ.. ಅವನ ಒಂದು ಮಾತು ಅವಳ ಮನಕಲುಕಿತ್ತು. ಅವನನ್ನು ನಡೆಸಿಕೊಂಡ ರೀತಿಗೆ ತನ್ನನ್ನು ತಾನು ದ್ವೇಷಿಸಿಕೊಳ್ಳಬೇಕು. ಮನಸ್ಸು ಹಂಗಿಸಿತು. ಪ್ರಶ್ನೆಗಳ ಮೇಲೆ ಪ್ರಶ್ನೆ. .ಸುಸ್ತಾಗುತ್ತಾಳೆ.
ಮಂಚದಲ್ಲಿ ಅಂಗಾತ ಬಿದ್ದವಳಿಗೆ ಎದ್ದು ಓಡಬೇಕೆನಿಸುತ್ತದೆ. ಹಣೆ ಹಣೆ ಚಚ್ಚಿಕೊಳ್ಳಲೇ. ಅಪರಾಧಿ ನಾನು. ನನ್ನನ್ನು ಕ್ಷಮಿಸು.ಅವಳು ಮನಸ್ಸಿನಲ್ಲೇ ಅವನಿಗೆ ಮೊರೆಯಿಡುತ್ತಾಳೆ.ನನ್ನನ್ಯಾಕೆ ಯಾರೂ ಅರ್ಥ ಮಾಡಿಕೊಳ್ಳುತ್ತಿಲ್ಲ. ಸಾಕು ಎನಿಸುವವರೆಗೂ ಅಳುತ್ತಾಳೆ. ಮತ್ತೆ ಕುಳಿತು ಹಾಗೆ ಯೋಚಿಸತೊಡಗುತ್ತಾಳೆ.

ಮನಸ್ಸು ಕೇಳತೊಡಗಿತ್ತು. ನೀನು ಒಂದೇ ಒಂದು ದಿನ ಅವನ ಮನಸ್ಸನ್ನು ಹೊಕ್ಕಿ ನೋಡುವ ಪ್ರಯತ್ನ ಮಾಡಲಿಲ್ಲ. ಎಳೆಯ ಮನಸ್ಸು. ಹೊರಪ್ರಪಂಚಕ್ಕೆ ಇದೀಗ ತೆರೆದುಕೊಂಡಿದೆ. ಎಳೆಯ ಹೃದಯ. ಅಲ್ಲೊಂದು ಪ್ರಪಂಚ. ಹಸಿಹಸಿ ಪ್ರೀತಿ ಹುಟ್ಟಿಕೊಂಡು ಬಿಟ್ಟಿದೆ. ನಿನಗದು ಅರ್ಥವಾಗಲಿಲ್ಲ. ನಿನ್ನ ಬದುಕನ್ನು ನೀನು ಅನುಭವಿಸಿದೆ. ಎಲ್ಲೋ ಒಂದು ಕಡೆಗೆ ಜಂಜಾಟಗಳೆಲ್ಲ ಸಾಕು ಎನಿಸುವಾಗ ಬೇರೆ ಪ್ರಪಂಚಕ್ಕೆ ನೀನು ತೆರೆದುಕೊಂಡೆ. ಅದೇ ಸಮಯಕ್ಕೆ ಸರಿಯಾಗಿ ಸಿಕ್ಕವನು ಅವನು.
ನಿನಗಿಂತ ಚಿಕ್ಕವನು. ಹೋಗೋ ಬಾರೋ ಎಂಬ ಸಲುಗೆ ಅವನನ್ನೆಲ್ಲಿ ತಂದು ಬಿಟ್ಟಿತು ನೋಡಿದ್ಯಾ. ನಿನ್ನ ನೆನಪು ಮಾಡಿಕೊಳ್ಳದೆ ನಿನ್ನ ಬಿಟ್ಟು ಒಂದು ಕ್ಷಣವಾದರೂ ಬಿಟ್ಟಿರದ ಅವನ ಭಾವನೆಗಳನ್ನು ಎಂದಾದರೂ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆಯಾ. ನಿನಗೆ ಆ ಕ್ಷಣಕ್ಕೆ ಕಣ್ಣೀರೊರೆಸುವ ವ್ಯಕ್ತಿ ಬೇಕಿತ್ತು. ನಿನ್ನ ನೋವು ಕೇಳುಕೇಳುತ್ತ ಅವನು ನೀನೇ ತುಂಬಿರುವ ಪ್ರಪಾತದಲ್ಲಿ ಬಿದ್ದು ಬಿಟ್ಟಿದ್ದಾನೆ. ಅಲ್ಲಿಂದ ಎದ್ದು ಬರಲಾರ.
ಅವನ ಕೈಹಿಡಿದು ಎತ್ತುವ ಧೈರ್ಯ ನಿನಗಿದೆಯಾ. ಅನ್ಯಾಯವಾಗಿ ಒಬ್ಬನನ್ನು ಕೊಂದು ಬಿಡಲು ಹೊರಟಿರುವೆ. ಅವನಿಗೆ ಸಿಕ್ಕಿದ್ದೇನು. ಅತ್ತ ನಿನ್ನ ಪ್ರೀತಿಯೂ ಇಲ್ಲ. ಇತ್ತ ನಿನ್ನ ಬಿಟ್ಟು ಬದುಕುವ ಧೈರ್ಯ ಇಲ್ಲ. ಅವನಿಲ್ಲದಿದ್ದರೆ ನೀನು ಬದುಕಬಲ್ಲೆ. ಪ್ರಪಂಚದ ಅರಿವು ನಿನಗಿದೆ. ಒಮ್ಮೆ ಅವನ ಬಗ್ಗೆ ಯೋಚಿಸು. ಪ್ರಶ್ನೆಗಳ ಮೇಲೆ ಪ್ರಶ್ನೆ.  ಅವಳ ಬಳಿ ಯಾವುದೇ ಉತ್ತರವಿಲ್ಲ.
ನಿಜ ನಾನು ಮಾಡಿದ್ದು ತಪ್ಪು. ಇಂದು ಅವನು ಆ ರೀತಿ ಹೇಳುವಾಗ ಧ್ವನಿಯಲ್ಲಿ ನಿರಾಸೆ,ಚಡಪಡಿಕೆ ಇತ್ತು. ತಾನು ಅನುಭವಿಸುತ್ತಿರುವ ಖುಷಿಯನ್ನು ತನ್ನದು ಎಂದು ಹೇಳಿಕೊಳ್ಳಲಾರದ ನೋವು ಅಲ್ಲಿ ತುಂಬಿಕೊಡಿತ್ತು. ಮಂಚದಿಂದೆದ್ದು ನೆಲಕ್ಕೆ ಕುಸಿದಳು. ಹಾಗೆ ಅವನು ನೆನಪಾಗತೊಡಗಿದ.
ಅವಳು ಆ ಕಂಪನಿಗೆ ಸಿಇಓ. ಚಿಕ್ಕ ವಯಸ್ಸಿನಲ್ಲಿ ಅಂಥಹ ಹುದ್ದೇಗೇರಿದ ಶ್ರೇಯಸ್ಸು. ನೂರಾರು ಸಾಫ್ಟ್ ವೇರ್ ಎಂಜಿನಿಯರುಗಳನ್ನು ಸಂಭಾಳಿಸುವ ಜವಾಬ್ದಾರಿ. ಅವಳದು ವಯಸ್ಸನ್ನು ಮರೆಮಾಚುವ ಸೌಂದರ್ಯ. ಗಾಂಭೀರ್ಯವೇ ಮೈವೆತ್ತಿದಂತೆ ತೋರುವ ಅವಳನ್ನು ಒಮ್ಮೆ ನೋಡಿದವರು ಮತ್ತೊಮ್ಮೆ ತಿರುಗಿ ನೋಡಲೇಬೇಕು. ಗಂಭೀರ ಸೆಶನ್ ಗಳಲ್ಲಿ ತನ್ನನ್ನೇ ಗಮನವಿಟ್ಟು ನೋಡುವ ಹುಡುಗರ ಬಗ್ಗೆ ಅವಳೆಂದೂ ತಲೆಕೆಡಿಸಿಕೊಳ್ಳುವುದಿಲ್ಲ. ತಾನಾಯಿತು ತನ್ನ ಕೆಲಸ ವಾಯಿತು ಎಂದಿರುವ ಅವಳಿಗೆ ಅವಳದೇ ಆದ ನೋವುಗಳಿವೆ.
ಶ್ರೀಮಂತ ಕುಟುಂಬ. ಇದ್ದು ಇಲ್ಲದಂತಿರುವ ಗಂಡ. ಒಂಟಿತನ ಅವಳನ್ನು ಕಾಡಿದೆ. ಎಷ್ಟೋ ಸಾರಿ ಮನೆ ತೊರೆದು ಹೋಗಬೇಕೆನಿಸಿದ್ದಿದೆ. ಒಬ್ಬಳೇ ಮಗಳು. ಅಪ್ಪ ಅಮ್ಮ ಇಬ್ಬರೂ ಬೇಕು ಎಂದು ಪದೇ ಪದೇ ಹೇಳುವ ಮಗಳ ಮಾತನ್ನೂ ಕೇಳಿ ಅವಳು ಭಯಪಡುತ್ತಾಳೆ.. ತಂದೆ ತಾಯಿಯನ್ನು ಕಳೆದುಕೊಳ್ಳುವ ನೋವು ಮಗಳಿಗೆ ಕಾಡುತ್ತಿರುವುದು ಅವಳಿಗೆ ಸ್ಪಷ್ಚವಾಗಿ ಅನಿಸತೊಡಗುತ್ತದೆ. ಮಗಳನ್ನು ಅಪ್ಪಿಕೊಳ್ಳುತ್ತಾಳೆ. ಏನೇ ಆಗಲಿ. ಅವಳಿಗಾಗಿ ಸಾಯುವವರೆಗೆ ಇಲ್ಲೇ ಇರಬೇಕು ಎಂದು ನಿರ್ಧರಿಸುತ್ತಾಳೆ.
ಎಲ್ಲೋ ಒಂದು ಕಡೆಗೆ ಹೇಗಾದರೂ ನೆಮ್ಮದಿಯನ್ನು ಕಂಡುಕೊಳ್ಳಬೇಕು ಎಂಬ ಚಡಪಡಿಕೆ ಅವಳಲ್ಲಿದೆ. ಸಂಜೆ ಹೊತ್ತು ತಮ್ಮದೇ ಕ್ಯಾಂಪಸ್ಸಿನಲ್ಲಿ ಹುಡುಗ ಹುಡುಗಿಯರು ಕೈಕೈ ಹಿಡಿದುಕೊಂಡು ಓಡಾಡುವಾಗ ಅವಳ ಮನಸ್ಸು ಪುಳಕಗೊಳ್ಳುತ್ತದೆ. ಗೆಳೆಯ ಗೆಳತಿಯರು ತಮಾಷೆ ಮಾಡಿ ನಗುವಾಗ ಅವರಂತೆ ತಾನೂ ನಗಬೇಕು ಹಾಸ್ಯ ಮಾಡಬೇಕು. ಚಿಕ್ಕವರೊಂದಿಗೆ ತಾನು ಚಿಕ್ಕವಳಾಗಬೇಕು ಎಂದು ಅವಳಿಗೆ ಅನಿಸುತ್ತದೆ. ಸಿನೇಮಾ ಹಾಲಿನಲ್ಲಿ, ಕಾಫಿ ಸ್ಟಾಲಿನಲ್ಲಿ.ರಸ್ತೆಯಲ್ಲಿ ಹೀಗೆ ಎಲ್ಲೆಂದರಲ್ಲಿ ಪ್ರೀತಿ ಹೂಗಳು ಸ್ವಚ್ಛಂದವಾಗಿ ಓಡಾಡುವಾಗ ಅವಳಿಗೆ ಖುಷಿಖುಷಿಯಾಗುತ್ತದೆ. ನನಗೂ ಒಬ್ಬ ಸ್ನೇಹಿತ ಬೇಕು ಎಂದು ಅವಳ ಮನಸ್ಸು ಕೂಗಿ ಹೇಳುತ್ತದೆ.
ಮನಸ್ಸಿನಲ್ಲಿ ಇಂಥಹ ವಿಚಾರಗಳು ಗರಿಗೆದರಿದಾಗ ಅವಳು ಒಮ್ಮೊಮ್ಮೆ ಭಯಭೀತಳಾಗುತ್ತಾಳೆ. ಮತ್ತೆ ಅವಳ ಮನಸ್ಸು ಅದನ್ನೇ ಕೇಳುತ್ತದೆ. ಇಂಥ ಚಡಪಡಿಕೆಯಲ್ಲಿದ್ದಾಗ ಅವನ ಪರಿಚಯವಾಗುತ್ತದೆ. ಮುಖದಲ್ಲಿನ ತೇಜಸ್ಸೇ ಅವಳು ಮತ್ತೆಮತ್ತೆ ಅವನನ್ನು ನೋಡುವಂತೆ ಮಾಡುತ್ತದೆ. ಚುರುಕು ಬುದ್ಧಿ. ಸ್ವಲ್ಪ ತುಂಟನೂ ಹೌದು. ಆಗಾಗ ತನ್ನನ್ನು ಎವೆಯಿಕ್ಕದೆ ನೋಡುವುದನ್ನು ಅವಳು ಗಮನಿಸುತ್ತಾಳೆ. ಕ್ರಶ್ ಅಥವಾ ಪ್ಲರ್ಟಿಂಗ್ ನೇಚರ್ ಅಂದು ಕೊಂಡು ಸುಮ್ಮನಾಗುತ್ತಾಳೆ.
ಸೆಶನ್ಸ್ ನಂತರ ನೇರವಾಗಿ ತನ್ನ ಛೇಂಬರ್ ಗೆ ಬರುವ ಅವನ ಧೈರ್ಯ ಕಂಡು ಮೆಚ್ಚುತ್ತಾಳೆ. ನಿಮ್ಮ ಪ್ರೊಫೆಶನಲಿಸಂ ನನಗೆ ಇಷ್ಟವಾಗುತ್ತದೆ. ನಾನು ತುಂಬಾ ಮಹತ್ವಾಕಾಂಕ್ಷಿ. ನನಗೆ ತುಂಬಾ ಕಲಿಯಬೇಕಿದೆ. ನನಗೆ ನೀವು ಗೈಡ್ ಮಾಡಬೇಕು. ಅವಳಿಗೆ ಖುಷಿ ಎನಿಸುತ್ತದೆ.ಆಯ್ತು ಎಂದು ಒಪ್ಪಿಗೆ ಸೂಚಿಸುತ್ತಾಳೆ. ಅವನ ಸ್ನೇಹ ಅವಳಲ್ಲಿ ನೂರು ಕನಸುಗಳನ್ನು ಬಿತ್ತುತ್ತದೆ .
ಅವಳಿಗೆ ಇತ್ತಿತ್ತಲಾಗಿ ಎಲ್ಲವೂ ಖುಷಿ ನೀಡತೊಡಗಿದೆ. ತನ್ನೆಲ್ಲ ಕೆಲಸಗಳನ್ನು ಖುಷಿಯಿಂದ ಅವಳು ಮುಗಿಸುತ್ತಾಳೆ . ಮೊದಲಿನ ನಿರಾಸಕ್ತಿ ಅವಳಲ್ಲಿಲ್ಲ. ಎಫ್ ಎಂ ನಲ್ಲಿ ಹಾಡು ಕೇಳುತ್ತಾಳೆ ತಾನೂ ಗುನುಗುನಿಸುತ್ತಾಳೆ . ಮೊದಲಿಗಿಂತಲೂ ಹೆಚ್ಹು ಅಂದವಾಗಿ ತನ್ನನ್ನು ಅಲಂಕರಿಸಿಕೊಳ್ಳುತ್ತಾಳೆ. ಮೊದಲೇ ಸುಂದರಿ. ಅವನ ಸ್ನೇಹದಲ್ಲಿ ಅವಳು ಮತ್ತಷ್ಟು ಸುಂದರಿಯಾಗುತ್ತಾಳೆ. ಬೆಳಗ್ಗೆದ್ದು ಕಿಟಕಿ ತೆರೆದರೆ ಎದುರಿಗೆ ಕಾಣುವ ಹೂ ಗಿಡ ಎಲ್ಲವು ಹೊಸತು. ಮೈಗೆ ಸೋಕುವ ತಂಗಾಳಿ ಹಿತ ನೀಡುತ್ತದೆ.
ವೃತ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅವಳು ಅವನಿಗೆ ಮನಸಾರೆ ಮಾರ್ಗದರ್ಶನ ನೀಡುತ್ತಾಳೆ. ಅವನೋ ಆಸಕ್ತಿಯಿಂದ ಕೇಳುತ್ತಾನೆ. ಅವನಲ್ಲಿ ಕಲಿಯೋ ಆಸಕ್ತಿ, ಇವಳಿಗೆ ತಾನು ಕಲಿತ ಎಲ್ಲವನ್ನೂ ಧಾರೆ ಎರೆಯುವ ಬಯಕೆ. ಗೆಳೆತನ ಸಾಗುತ್ತದೆ. ಅವನಿಗೂ ಅವಳು ಇತ್ತಿತ್ತಲಾಗಿ ತುಂಬಾ ಇಷ್ಟವಾಗುತ್ತಿದ್ದಾಳೆ ಧೈರ್ಯ ಮಾಡಿ ಕಾಫಿಗೆ ಕರೆಯುತ್ತಾನೆ.ಅವಳು ಒಪ್ಪಿಕೊಂಡಿದ್ದು ನೋಡಿ ಅವನು ಕಂಪಿಸುತ್ತಾನೆ ಅವಳು ತನ್ನ ಜೊತೆಗೆ ಕಾಫಿ ಕುಡಿಯುವಾಗ ನೂರೆಂಟು ಕಣ್ಣುಗಳು ಅವರನ್ನು ಗಮನಿಸುತ್ತವೆ.
ಬಕೆಟ್ ಹಿಡಿತಾನೆ ಮಗ. ಕೊಂಕು ಮಾತುಗಳು ಅವನ ಹೃದಯ ಘಾಸಿಗೊಳಿಸುತ್ತವೆ. ಅವಳಿಗಾಗಿ ಸುಮ್ಮನಿರುತ್ತಾನೆ. ಅಲ್ಲಿಂದೊಂದು ದಿನ ಅವಳೇ ಊಟಕ್ಕೆ ಕರೆಯುತ್ತಾಳೆ. ಅವನಿಗೆ ಖುಷಿಯೋ ಖುಷಿ. ಆಫೀಸ್ ಕ್ಯಾಂಟೀನ್ ನಲ್ಲಿ ಎಲ್ಲ ಕಣ್ಣುಗಳು ಅವರಿಬ್ಬರನ್ನು ಹಿಂಬಾಲಿಸುತ್ತವೆ. ಅವಳೆದುರು ಬರುವ , ಮಾತನಾಡುವ ಧೈರ್ಯವಿಲ್ಲ. ಆದರೆ ಮೀಸೆ ಚಿಗುರದವರನ್ನೆಲ್ಲ ಬುಟ್ಟಿಗೆ ಹಾಕಿಕೊಳ್ಳುತ್ತಾಳೆ ನೋಡಪ್ಪೋ ಅನ್ನುವುದು ಮಾತ್ರ ಅವನ ಕಿವಿಗೆ ಕಾದ ಸೀಸದಂತೆ ಬೀಳುತ್ತದೆ. ಅವಳಿಗಾಗಿ ಮತ್ತೆ ಸುಮ್ಮನಾಗುತ್ತಾನೆ.
ಅವನಿಗೆ ತಿಳಿದಮಟ್ಟಿಗೆ ಮನಸ್ಸಿನ ಮೂಲೆಯೊಂದರಲ್ಲಿ ಸ್ವಲ್ಪಸ್ವಲ್ಪವೇ ಅವಳು ತನ್ನ ಜಾಗ ಗುರುತಿಸಿಕೊಳ್ಳುತ್ತಿದ್ದಾಳೆ, ಅದು ಅವನಿಗೆ ಖುಶಿನೀಡಿದೆ. ತನ್ನ ಗೆಳೆಯರ ಮುಂದೆ ತನ್ನ ಮನೆ,ತನ್ನಿಷ್ಟ ಕಷ್ಟ, ತಂದೆ ತಾಯಿ,ಅಕ್ಕತಂಗಿಯರು ಗೆಳೆಯ ಗೆಳತಿಯರ ಬಗ್ಗೆ ಹೇಳಿಕೊಳ್ಳುತ್ತಿದ್ದ ಅವನಿಗೀಗ ಯಾರ ಮುಂದೆಯಾದರೂ ಅವಳ ಬಗ್ಗೆ ಹೇಳಿಕೊಳ್ಳುವ ಆಸೆ.ಅವಳ ಬುದ್ಧಿವಂತಿಕೆಯನ್ನು, ಅವಳ ಸೌಂದರ್ಯವನ್ನು ವರ್ಣಿಸುವ ಆಸೆ. ಆದರೆ ಬಾಯವರೆಗೆ ಬಂದ ಮಾತುಗಳನ್ನು ಹಾಗೆ ಒಳನುಂಗುತ್ತಾನೆ, ತನ್ನ ಸಂಸ್ಥೆಯಲ್ಲಿ ಇಂಥವರೊಬ್ಬರಿದ್ದಾರೆ. ಅವರ ಬಗ್ಗೆ ತುಂಬಾ ಗೌರವ. ನನಗೆ ತುಂಬಾ ಸಹಾಯ ಮಾಡುತ್ತಾರೆ. ಎಂದಷ್ಟೇ ಹೇಳಿ ಮಾತು ಮುಗಿಸುತ್ತಾನೆ.
ಅವಳ ಕಾಣದೇ ಚಡಪಡಿಸುವ ಮನ ಅವಳನ್ನು ಕಂಡಾಗ ಹಿರಿಹಿರಿ ಹಿಗ್ಗುತ್ತದೆ. ತನಗೇಕೆ ಹೀಗಾಗುತ್ತಿದೆ ಎಂದು ಏಕಾಂತದಲ್ಲಿ ಪ್ರಶ್ನಿಸಿಕೊಳ್ಳುವ ಅವನಿಗೆ ಕೆಲವೊಮ್ಮೆ ಗೊಂದಲ ವುಂಟಾಗುತ್ತದೆ. ನನಗೇನಾಗಿದೆ…ಹಾಗೇನೂ ಆಗಿಲ್ಲ ತಾನೆ. ಛೇ..ಆ ರೀತಿ ನಾನು ಅವರ ಬಗ್ಗೆ ವಿಚಾರ ಮಾಡುವುದು ಸರಿಯಲ್ಲ.ತನ್ನನ್ನೇ ತಾನು ದಂಡಿಸಲು ಪ್ರಯತ್ನಿಸುತ್ತಾನೆ. ಮನಸ್ಸು ಕೇಳದು. ನಿನಗೆ ನೀನು ಮೋಸಮಾಡಿಕೊಳ್ಳಬೇಡ ಎನ್ನುತ್ತದೆ. ದಿನಗಳು ಹಾಗೆ ಸಾಗುತ್ತವೆ. ಅವನ ಸ್ನೇಹದಲ್ಲಿ ಅವಳು ಖುಷಿಯಾಗಿದ್ದಾಳೆ. ತನಗೊಬ್ಬ ಗೆಳೆಯ ಸಿಕ್ಕ ಸಂತೋಷದಲ್ಲಿ ಅವಳು ಮತ್ತೆ ಚಿಗುರಿದ್ದಾಳೆ.
ಸಂಸ್ಥೆಯ ಕ್ಯಾಂಪಸ್ ಬಿಟ್ಟು ಒಳ್ಳೆಯ ರೆಸ್ಟೊರೆಂಟ್ ನಲ್ಲಿ ಕಾಫಿ, ತಿಂಡಿ ತಿಂದಿದ್ದಾಳೆ.. ದೂರದೂರದವರೆಗೆ ಅವನೊಂದಿಗೆ ಹೆಜ್ಜೆ ಹಾಕಿದ್ದಾಳೆ. ಹುರಿದ ಶೇಂಗಾ, ಸೀಬೆಕಾಯಿ, ಬೇಯಿಸಿದ ಜೋಳ ಅವನಿಗೆ ತಿನ್ನಿಸಿದ್ದಾಳೆ. ಆದರೆ ಅವನ ಹೃದಯ ಹೊಕ್ಕ ಪ್ರೀತಿಯ ಹುಳ ಮಾತ್ರ ದಿನಗಳೆದಂತೆ ಅವನನ್ನು ಇನಿಲ್ಲದೆ ಕಾಡತೊಡಗಿರುವುದು ಅವಳಿಗೆ ಕಂಡುಬರುತ್ತಿಲ್ಲ. ಅವನಿಗೀಗ ಯಾವುದೂ ಖುಷಿ ನೀಡುತ್ತಿಲ್ಲ. ಅವಳ ಸಾಂಗತ್ಯಕ್ಕಾಗಿ ಹಾತೊರೆಯುವ ಅವನು ಅವಳ ಕಣ್ಣಲ್ಲಿ ಪ್ರೀತಿಗಾಗಿ ಹುಡುಕಾಟ ನಡೆಸುತ್ತಾನೆ. ಅಲ್ಲಿ ಪ್ರೀತಿಯ ಬದಲಿಗೆ ಅವನಿಗೆ ಮಮತೆ ಕಾಣುತ್ತದೆ. ನಡುಗುತ್ತಾನೆ.
ಅವಳ ಪ್ರೀತಿಗಾಗಿ ಹಪಹಪಿಸುತ್ತಾನೆ. ಅವಳಿಗೆ ಹೇಳಲೇ… ಇದ್ದ ಗೆಳೆತನವನ್ನು ಕಳೆದುಕೊಂಡರೆ….? ಇಬ್ಬರ ಮಧ್ಯೆ ಸಲಿಗೆಯೂ ಹೆಚ್ಚಿದೆ. ಹೋಗೋ ಬಾರೋ ಎನ್ನುವ ಅವಳಿಗೆ ಒಂದು ದಿನ ಒಳ್ಳೇ ಕಿರಾತಕಿ ಥರ ಇದ್ದೀರಾ ಎಂದು ರೇಗಿಸುತ್ತಾನೆ. ಹಂಗಂತ ಬೇರೆಯವರ ಮುಂದೆಯೂ ಹೇಳ್ತಿಯೇನೋ….ಅವಳು ರೇಗಿಸುತ್ತಾಳೆ. ಆ ಭಾಗ್ಯ ನಂಗಿಲ್ಲಾರೀ… ಅವನ ಕಣ್ಣಲ್ಲಿ ಮೊದಲ ಬಾರಿಗೆ ಕಣ್ಣೀರು ಹಾಗೆ ಸಾಲುಸಾಲು ಹರಿಯುವುದನ್ನು ನೋಡುತ್ತಾಳೆ. ಬೆಚ್ಚಿಬೀಳುತ್ತಾಳೆ. ಅವನು ಮುಂದುವರೆಯುತ್ತಾನೆ. ನಿಮ್ಮ ಬಗ್ಗೆ ನನ್ನ ಫ್ರೆಂಡ್ಸ್ ಮುಂದೆ ಹೇಳಿಕೊಳ್ಳಬೇಕೆನಿಸುತ್ತದೆ. ಏಕವಚನದಲ್ಲಿ ನಿಮ್ಮ ಹೆಸರಿಡಿದು ಕರೆಯಬೇಕೆನ್ನಿಸುತ್ತೆ. ಸಿಟ್ಟಿನಿಂದ ಗದರಬೇಕು ಎನ್ನಿಸುತ್ತದೆ. ದೇವರು ನನಗೆ ಮಾತ್ರ ಯಾಕೆ ಈ ರೀತಿ ಮಾಡ್ದ..ನನಗೆ ಅರ್ಥ ಆಗ್ತಿಲ್ಲ. ನಿಮ್ಮನ್ನು ಹಚ್ಚಿಕೊಂಡುಬಿಟ್ಟಿದ್ದೀನಿ…ನನ್ನ ಬದುಕಿಸಿ. ಅವನು ಗೋಗರೆಯುತ್ತಿದ್ದ.
ಅವಳು ಅಲ್ಲಿಂದ ನಡೆದಿದ್ದಳು.

‍ಲೇಖಕರು avadhi

October 22, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. uniquesupri

  ನವೋಮಿಯವರೇ, ಬರಹದ ಶೈಲಿ ತುಂಬಾ ಮೆಚ್ಚಿಗೆಯಾಯ್ತು…
  ಸುಪ್ರೀತ್

  ಪ್ರತಿಕ್ರಿಯೆ
 2. eshakumar h n

  manasina naviru bhavanegalu swachhandavaagi chigurodedu haradive nimma barahadali danyavaadagalu………

  ಪ್ರತಿಕ್ರಿಯೆ
 3. ಶಮ, ನಂದಿಬೆಟ್ಟ

  ಅವಳ ಕಣ್ಣಲ್ಲಿ ಪ್ರೀತಿಗಾಗಿ ಹುಡುಕಾಟ ನಡೆಸುತ್ತಾನೆ. ಅಲ್ಲಿ ಪ್ರೀತಿಯ ಬದಲಿಗೆ ಅವನಿಗೆ ಮಮತೆ ಕಾಣುತ್ತದೆ. ನಡುಗುತ್ತಾನೆ.
  Sooooooper

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: