'ಅವಳು ಏನು ಹೇಳಹೊರಟಿದ್ದಳು?' – ಜಯಶ್ರೀ ಕಾಸರವಳ್ಳಿ

ಅವಳು ಏನು ಹೇಳಹೊರಟಿದ್ದಳು? – ಜಯಶ್ರೀ ಕಾಸರವಳ್ಳಿ   ಘಟನೆಗಳಿಗೆ ನಿಜಕ್ಕೂ ಅರ್ಥವಿರುತ್ತದೋ ಅಥವಾ ಘಟನೆಗಳಿಗೆ ಅರ್ಥ ಹಚ್ಚುವುದರಲ್ಲಿ ನಾವು ನಿಸ್ಸೀಮರೋ ಕೆಲವೊಮ್ಮೆ ನಮಗೇ ಅರ್ಥವಾಗುವುದಿಲ್ಲ. ಇಪ್ಪತ್ತಮೂರು ವರುಷದ ಹಿಂದಿನ ಒಂದು ಘಟನೆ ಸ್ಥಿರವಾಗಿ ನನ್ನ ಸೃತಿಪಟಲದಲ್ಲಿ ಉಳಿದು ಆಗಾಗ ನೆನಪಾಗಿ ಹೇಗೆ ಕಾಡುತ್ತೆ ಎಂದರೆ……. ಅದನ್ನು ಒಂದು ಘಟನೆ ಎನ್ನಬೇಕೇ ಅಥವಾ ಸರಿರಾತ್ರಿಯಲ್ಲಿ ಅಕಸ್ಮಾತ್ತಾಗಿ ಎದುರಾದ ಒಬ್ಬ ಹೆಣ್ಣು ಮಗಳ ಮಾಸದ ಆ ಪ್ರತಿಮೆಯೇ ತನ್ನ ಸುತ್ತ ಅಗತ್ಯಕ್ಕಿಂತ ಹೆಚ್ಚು ಅನುಕಂಪವನ್ನು ಹೊದ್ದುಕೊಂಡು ಒಂದು ಮಹತ್ವದ ಘಟನೆಯೆಂಬಂತೆ ಸುರುಳಿ ಸುತ್ತಿಕೊಂಡು ಹೊತ್ತಲ್ಲದ ಹೊತ್ತಿನಲ್ಲಿ ನನ್ನನ್ನು ಕೆರಳಿಸುವುದಕ್ಕಾಗಿಯೇ ಮರೆಯಲು ಅಸಾಧ್ಯವೆಂಬಂತೆ ಮನದ ಮೂಲೆಯಲ್ಲಿ ಪಟ್ಟುಹಿಡಿದು ಕುಳಿತು ಇಂದು ನನ್ನ ಕೈಯಲ್ಲಿ ಇದನ್ನು ಬರೆಸುತ್ತಿದೆಯೇ – ಹೇಳಲಾರೆ. ಅದಿನ್ನೂ ನಾವು ಚೆನ್ನೈಗೆ ಹೋದ ಹೊಸತು. ಊರು, ಭಾಷೆ, ಜನ ಎಲ್ಲವೂ ಹೊಸತು. ಉರಿಯುವ ಸೂರ್ಯ ಹೊಸತು. ಸುರಿಯುವ ಬೆವರು ಹೊಸತು. ಉಸಿರಾಡುವ ಗಾಳಿ ಹೊಸತು. ಗಾಳಿಯೇ ಇಲ್ಲದೇ ಬಿಸಿಗಾಳಿಯಲ್ಲಿ ತತ್ತರಿಸುತ್ತಾ ಗಾಳಿಯನ್ನ ಎದುರು ನೋಡುತ್ತಾ ಕಾಲ ಕಳೆಯುತ್ತಿದ್ದದ್ದೂ ಹೊಸತು. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದವರಿಗೆ ತಮಿಳು ಅಪರೂಪದ ಭಾಷೆ ಅಲ್ಲದ್ದಿದ್ದರೂ ಮಲೆನಾಡಿನವಳಾದ ನನಗೆ ಅದು ಅಪರೂಪ. ಆ ಭಾಷೆಯ ಗಂಧವನ್ನೇ ಅರಿಯದವಳು. ನಾಲ್ಕು ವರುಷದ ಮಗಳು, ಎರಡು ವರುಷದ ಮಗನೊಡನೆ ತಮಿಳರ ನೆಲೆಯಲ್ಲಿ ಸಂಪೂರ್ಣ ಅಪರಿಚಿತಳಾಗಿ ಕಾಲಿಟ್ಟವಳು ನಾನು. ವಾ, ಪೋ ಎರಡು ಪದ ಬಿಟ್ಟು, ತಮಿಳರು ಕೊಚ್ಚಿಕೊಳ್ಳುವ ಅವರ ಸಮೃದ್ಧ ಭಾಷೆಯ ಅಗಾಧತೆಯ ಸಣ್ಣ ಪರಿಚಯವೂ ಆಗ ನನಗಿರಲಿಲ್ಲ್ಲ. ನಾನು ಹುಟ್ಟಿ ಬೆಳೆದ ಮಲೆನಾಡಿನ ಕಗ್ಗಾಡಿಗೆ ದ್ರಾವಿಡರಿನ್ನೂ ದಾಳಿಯಿಟ್ಟಿರಲಿಲ್ಲ. ಎಲ್ಲಾ ಕನ್ನಡಿಗರಂತೆ ನಮಗೂ ತಮಿಳರ ನಡುವೆ ನಮ್ಮವರ ಸಂಪರ್ಕವಿಲ್ಲದೆ ಬದುಕುವುದು ದುಸ್ಸಾಧ್ಯವೆನ್ನಿಸುತ್ತಿದ್ದ ಕ್ಷಣ. ಕನ್ನಡ ಸಂಘಗಳನ್ನ, ಕನ್ನಡಿಗರನ್ನ ನಾವು, ನಮ್ಮಂತೆ ಹಲವರು ಹುಡುಕುತ್ತಿದ್ದಂತಹ ಸಂದರ್ಭ. ಬೆಸೆಂಟ್ನಗರದಲ್ಲಿ ಇದ್ದ ನಮಗೆ ಕನ್ನಡಿಗರ ಸಂಪರ್ಕವೇನೋ ಬೇಗನೇ ಸಿಕ್ಕಿತು. ಕನ್ನಡಿಗರ ಹಲವು ಕುಟುಂಬಗಳು ಅಲ್ಲಿದ್ದುವು. ಹಾಗೆಯೇ ಮೊಳಕೆಯೊಡೆಯುತ್ತಿದ್ದ ಹತ್ತು ಹಲವು ಚಿಳ್ಳೆಪಿಳ್ಳೆ ಕನ್ನಡ ಸಂಘಗಳದ್ದೂ ಕೂಡ… ನಾವು ಹೋಗಿ ಇನ್ನೂ ಒಂದೆರಡು ವರುಷಗಳಾಗಿದ್ದವಷ್ಟೆ. ಹೋದ ಹೊಸತರಲ್ಲಿ ಎಲ್ಲರಂತೆ ನಮಗೂ ನಮ್ಮ ಭಾಷೆಯೆಂದರೆ ಎಂತಹದೋ ಹುರುಪು. ಕನ್ನಡ ಸಂಘಗಳು ನಡೆಸುವ ಯಾವುದೇ ಕಾರ್ಯಕ್ರಮಗಳನ್ನ, ಅವು ಹೇಗೇ ಇರಲಿ, ಕಟ್ಟಾ ಕನ್ನಡಾಭಿಮಾನಿಗಳಾದ ನಾವು ತಪ್ಪಿಸಿಕೊಳ್ಳುತ್ತಿರಲಿಲ್ಲ. ಹಾಗೆ ಒಂದು ವರುಷ ರಾಜ್ಯೋತ್ಸವದ ಒಂದು ಕಾರ್ಯಕ್ರಮಕ್ಕೆ ಹೋಗಿ ನಾವು ಹಿಂತಿರುಗುವಾಗ ಬಹಳ ತಡವಾಗಿ ಘಂಟೆ ಹನ್ನೊಂದನ್ನೂ ಮೀರಿಬಿಟ್ಟಿತ್ತು. ನಮ್ಮ ಪ್ರಯಾಣವೇನಿದ್ದರೂ ಸ್ಕೂಟರ್ನಲ್ಲೆ – ಆಗಿನ್ನೂ. ನಾನು, ನನ್ನ ಗಂಡ, ನಮ್ಮೆರಡು ಚಿಕ್ಕ ಮಕ್ಕಳು ಎಂದು ಹಮರಾ ಬಜಾಜ್ನಲ್ಲಿ ಸರ್ಕಸ್ ಮಾಡುತ್ತಿದ್ದ ಕಾಲ. ಮುಖ್ಯ ರಸ್ತೆಗಳನ್ನ ತಪ್ಪಿಸಿ ಸಂದಿಗೊಂದಿ ಹಾದು ಬೆಸೆಂಟ್ನಗರ್ದ ಎಲಿಯಟ್ ಬೀಚ್ಗೆ ಬರುವಾಗ ಘಂಟೆ ಹನ್ನೊಂದೂವರೆಯೂ ಆಗಿಹೋಗಿತ್ತು. ಮೊದಲೇ ಕುಡುಕರ ಪಾಳ್ಯವದು. ಅವೇಳೆ, ಜನನಿಬಿಡ ರಸ್ತೆ, ಅಲ್ಲೊಂದು ಇಲ್ಲೊಂದು ಬೀದಿದೀಪಗಳು ಬಿಟ್ಟರೆ ಅರೆಗತ್ತಲ ನಿರ್ಜನ ರಸ್ತೆ…ಸ್ಕೂಟರ್ನಲ್ಲಿ ಮುಂದೆ ನಿಂತು ತೂಕಡಿಸುತ್ತಿರುವ ನನ್ನ ಮಗಳು, ಹಿಂದೆ ಕುಳಿತು ನನ್ನ ಕೈ ಮೇಲೆ ತಲೆಯಿಟ್ಟು ಯಾವುದೋ ಲೋಕಕ್ಕೆ ತೇಲಿಹೋಗುತ್ತಿರುವ ನನ್ನ ಮಗ, ನಾಲ್ಕು ಜನರನ್ನು ಸಂಭಾಳಿಸಿಕೊಂಡು ಕತ್ತಲಲ್ಲಿ ದಾರಿ ಹುಡುಕುತ್ತಾ ಸಾಗುತ್ತಿರುವ ನನ್ನ ಗಂಡ, ನಮ್ಮದಲ್ಲದ ಒಂದು ಊರಿನಲ್ಲಿ ನಮ್ಮವರನ್ನು ಅರಸುತ್ತಾ ಸರಿರಾತ್ರಿಯಲ್ಲಿ ಎಲ್ಲೋ ಹಳಿ ತಪ್ಪಿ ಹೋದ ನಾವು….. ವೆಲಾಂಗಣ್ಣಿ ಚರ್ಚ್ ಹತ್ತಿರವಾಗುತ್ತಿದ್ದಂತೆ ರಸ್ತೆಯಲ್ಲಿ ಜನರ ಒಂದು ಸಣ್ಣ ಗುಂಪು ಕಾಣಿಸಿತು. ಚಿಕ್ಕ ತಿರುಕಾಸಿನಲ್ಲಿ ಸ್ಕೂಟರ್ ಕೂಡ ತೆಗೆದುಕೊಂಡು ಹೋಗಲಾರದಂತೆ ಅಲ್ಲಿದ್ದ ಏಳೆಂಟು ಜನರೂ ಅಡ್ಡಾದಿಡ್ಡಿಯಾಗಿ ನಿಂತಿದ್ದರು. ಅವರು ಕುಡುಕರೋ, ಕುಡಿದ ಪೋಲಿ ಯುವಕರೋ, ತಲೆಹಿಡುಕರೋ ಅಥವಾ ಇಂತಹ ವಹಿವಾಟಿನಲ್ಲಿರುವ ನುರಿತ ಜನರೋ ಆ ಕತ್ತಲಲ್ಲಿ ಹೇಳುವುದು ಹೇಗೆ? ಸ್ಕೂಟರ್ ನಿಧಾನಗೊಳಿಸಿ ಹತ್ತಿರ ಸರಿಯುತ್ತಿದ್ದಂತೆ ಆ ಜನಗಳ ನಡುವೆ ಒಬ್ಬ ಒಂಟಿ ಹೆಂಗಸು ನಿಂತಿರುವುದು ನಮಗೆ ಗೋಚರಿಸಿತು. ಕೈಯಲ್ಲಿ ಬೆಳ್ಳಗೆ ಏನೋ ಹಿಡಿದು ನಿಂತಿದ್ದ ಆಕೆ, ಸುಮಾರು ಇಪ್ಪತ್ತೆ೦ಟು_ಮೂವತ್ತರ ಪ್ರಾಯದ ಹೆಣ್ಣು. ನೀಟಾಗಿ ಸೀರೆಯುಟ್ಟು ಲಕ್ಷಣವಾಗಿದ್ದ ಹೆಂಗಸು. ಆ ಅರೆಗತ್ತಲ್ಲಲ್ಲೂ ಭಯದಿಂದ ಕಂಗಾಲಾಗಿ, ಕಳಾಹೀನಳಾಗಿ ನಿಂತ ಆ ಹೆಣ್ಣಿನ ಮುಖ ಸ್ವಷ್ಟವಾಗಿ ಕಾಣಿಸುತ್ತಿತ್ತ್ತು. ಬೆಳ್ಳಗೆ ಎಲ್ಲರಿಗೂ ಕಾಣುವ ಹಾಗೆ ಅವಳು ಕೈಯಲ್ಲಿ ಗಂಡಸಿನ ಒಂದು ಚಡ್ಡಿಯನ್ನ ಹಿಡಿದುಕೊಂಡಿದ್ದಳು. ಬೆಳ್ಳಗೆ ಶುಭ್ರವಾಗಿದ್ದ ಆ ಚಡ್ಡಿಯ ಒಂದು ಮೂಲೆಯಲ್ಲಿ ಕಂದು ಬಣ್ಣದ ಎಂತದೋ ಕಲೆ _ ಆ ಕತ್ತಲಲ್ಲಿ ಅಸ್ವಷ್ಟವಾಗಿ ಕಂಡ ಅದು ಪ್ರಾಯಶಃ ರಕ್ತದ್ದಾಗಿರಬೇಕೆಂಬುದು ಈಗಿನ ನನ್ನ ಯೋಚನೆ…. ಅವಳು ಆ ಚಡ್ಡಿ ತೋರಿ ಏನೋ ಹೇಳುತ್ತಿದ್ದಳು. ಹೇಳಿದ್ದನ್ನೇ ಹೇಳಿ ಹೇಳಿ ಅವಳ ಗಂಟಲು ಗೊರಗೊರವೆನ್ನುತ್ತಿತ್ತು. ಆ ಅವೇಳೆಯಲ್ಲಿ ಇದ್ದ ಅಲ್ಪ ಜನರು ಅವಳನ್ನು ನೋಡಿ ಕೇಕೇ ಹಾಕಿದ್ದಾಗಲೀ, ಲೇವಡಿ ಮಾಡಿದ್ದಾಗಲೀ, ಕೆಟ್ಟದಾಗಿ ವರ್ತಿಸಿದ್ದಾಗಲೀ ಅಥವಾ ಕುತೂಹಲದಿಂದ ನಿಟ್ಟಿಸಿದ್ದಾಗಲೀ ಕಂಡಂತೆ ಈಗ ನೆನಪಿಲ್ಲ. ಅವಳು ಆ ಕತ್ತಲಲ್ಲಿ ಬಂದ ನಮ್ಮನ್ನ ಆಪದ್ಭಾಂದವರೆಂಬಂತೆ ಕೈ ಅಡ್ಡ ಹಾಕಿ ಸ್ಕೂಟರ್ ನಿಲ್ಲಿಸಲು ನೋಡಿದಳು. ಗಾಳಿಗೆ ಹಾರುತ್ತಿದ್ದ ಆ ಚಡ್ಡಿಯನ್ನು ತೋರುತ್ತಾ ಅಳುಬುರುಕು ಧ್ವನಿಯಲ್ಲಿ ಏನನ್ನೋ ಒಂದೇ ಸಮನೆ ನಿವೇದಿಸಿಕೊಳ್ಳುತ್ತಿದ್ದಳು. ಅವಳು ಹೇಳುತ್ತಿದ್ದದ್ದು ಒಂದೂ ನಮಗೆ ಅರ್ಥವಾಗುತ್ತಿರಲಿಲ್ಲ. ಆದರೆ ರಾತ್ರಿಯ ಕತ್ತಲಲ್ಲಿ ವಿಚಿತ್ರವಾಗಿ ಕಂಡ ಆ ಚಡ್ಡಿ ತನ್ನದೇ ಒಂದು ಕತೆಯನ್ನ ಬಿಚ್ಚಿಕೊಳ್ಳಲು ಹಾತೊರೆಯುತ್ತಿದ್ದಂತೆ ಕಾಣಿಸುತ್ತಿತ್ತು. ಮುಂದೆ ಹೋಗದಂತೆ ದಾರಿಗೆ ಅಡ್ಡ ಬರುತ್ತಿದ್ದ ಅವಳನ್ನು ಹೇಗೋ ತಪ್ಪಿಸಿಕೊಳ್ಳುತ್ತಿದ್ದ ನಮಗೆ ಆ ಸರಿರಾತ್ರಿಯಲ್ಲಿ ಇದ್ದದ್ದು ನಮ್ಮ ಚಿಂತೆ ಮಾತ್ರ. ಅವಳು ಹೇಳುತ್ತಿದ್ದದ್ದು ಏನು ಎಂದು ಅರ್ಥೈಸಿಕೊಳ್ಳುವ ಗೋಜಿಗೂ ನಾವು ಹೋಗಲಿಲ್ಲ. ಮತ್ತೆ ಮತ್ತೆ ಆ ಚಡ್ಡಿಯನ್ನು ನಮ್ಮ ಮುಂದೆ ಹಿಡಿದು ಅವಳು ಏನನ್ನೋ ಹೇಳುತ್ತಲೇ ಇದ್ದಳು. ಆವೇಳೆಯಲ್ಲಿ ಒಂದು ಹೆಣ್ಣು ರಸ್ತೆಯಲ್ಲಿ ಒಂಟಿಯಾಗಿ ನಿಂತಿದ್ದಾಳೆ ಅಂದರೆ ಅವಳು ಅಂಥವಳೇ ಎಂಬ ಎಂದಿನಿಂದಲೂ ರೂಢಿಗತವಾದ ಭಾವನೆ ಮೆಲ್ಲನೆ ನಮ್ಮನ್ನು ಜಾಗೃತಗೊಳಿಸುತ್ತಿದ್ದಂತಹ ಸಮಯ _ ಅದೂ ಕೈಯಲ್ಲಿ ಒಂದು ಗಂಡಿನ ಚಡ್ಡಿ ಹಿಡಿದು….. ತಿಳಿಯದ ಊರು, ತಿಳಿಯದ ಭಾಷೆಯ ನಡುವೆ ತಿಳಿಯದ ವ್ಯವಹಾರಕ್ಕೆ ಕುಮ್ಮಕ್ಕು ಕೊಡದೆ ಶೀಘ್ರ ಅಲ್ಲಿಂದ ಜಾರಿಕೊಳ್ಳಬೇಕು _ ಅಷ್ಟೇ ಆ ಕ್ಷಣಕ್ಕೆ ಹೊಳೆದ ವಿಷಯ… ಒಂದು ಅನಾಮಧೇಯ ಹೆಣ್ಣು ಮಧ್ಯರಾತ್ರಿಯಲ್ಲಿ ನಮ್ಮ ಸಹಾಯ ಯಾಚಿಸುತ್ತಿದ್ದಾಳೆ ಎಂಬುದೂ ಅಮುಖ್ಯವಾಗುವಂತಹ ಗಳಿಗೆಯದು…. ಅಲ್ಲಿಂದ ಹೇಗೋ ಪರಾರಿಯಾಗಬೇಕು – ಅಷ್ಟೇ ಆ ಕ್ಷಣಕ್ಕೆ ನಮಗೆ ಅನ್ನಿಸಿದ್ದು. ಬಂದ ದಾರಿಗೆ ಸುಂಕವಿಲ್ಲವೆಂದು ಸಟ್ಟನೆ ಸ್ಕೂಟರ್ ಹಿಂತಿರುಗಿಸಿ, ಅವಳಿಂದ ಬಿಡಿಸಿಕೊಂಡು, ಆ ಜನರ ಗುಂಪು ಹಾದು ರಭಸದಲ್ಲಿ ಮುಂದೆ ಹೋಗುವ ಮುಂಚೆ ಕಡೆಯದಾಗಿ ಕಂಡ ಆ ದೃಶ್ಯ ಮಾತ್ರ, ನಾನು ನಂಬಿದಂತಹ ಕತೆಗಿಂತ ವಿಭಿನ್ನವಾದದ್ದೇನನ್ನೋ ಆ ನಿಗೂಢ ಚಡ್ಡಿ ಹೇಳಹೊರಟಿತ್ತು ಮತ್ತು ಆ ಹೆಣ್ಣು ನಿಜಕ್ಕೂ ನಾನೆಂದುಕೊಂಡಂತೆ ಬದುಕಿನಲ್ಲಿ ಹಾದಿ ತಪ್ಪಿದ ಹೆಣ್ಣಾಗಿರದೆ ಆ ಕತ್ತಲ ರಾತ್ರಿಯಲ್ಲಿ ನಿಜಕ್ಕೂ ದಾರಿ ತಪ್ಪಿ, ಸರಿಹೊತ್ತಿನಲ್ಲಿ ತಾನು ಹೋಗಲೇಬೇಕಾದ ಒಂದು ಸರಿರಸ್ತೆಗಾಗಿ ಹಾದಿ ಯಾಚಿಸುತ್ತಾ ನಿಂತಿದ್ದಳೆಂಬ ಒಂದು ಭ್ರಮೆ ಈಗಲೂ ನನ್ನ ಮನಸ್ಸಿನಿಂದ ನಶಿಸಿಲ್ಲ…. ಪ್ರತ್ಯಕ್ಷವಾಗಿ ಅಲ್ಲದ್ದಿದ್ದರೂ ಪರೋಕ್ಷವಾಗಿ, ಅಗೋಚರವಾಗಿ ಅಂತಹ ಹಲವಾರು ಹೆಣ್ಣುಗಳು ಹಾದಿ ತಪ್ಪಲು ನಾವೇ ಕಾರಣವಾಗಿರುತ್ತೇವೇಯೇ….? ಏಕೆಂದರೆ ನನ್ನ ಕಣ್ಣ ಮುಂದೆ ಕಂಡ ಆ ಕಟ್ಟ ಕಡೇ ದೃಶ್ಯವೇ ಹಾಗಿತ್ತು! ಕೈಯಲ್ಲಿ ಚಡ್ಡಿ ಹಿಡಿದು ‘ಅಣ್ಣಾ! ಅಣ್ಣಾ!’ ಎಂದು ಅರಚುತ್ತಾ, ಎರಡೂ ಕೈ ಚಾಚಿ, ನಮ್ಮ ಹಿಂದೆ ಹಿಂದೆ ಓಡೋಡಿ ಬರುತ್ತಿದ್ದ ಆಕೆ ಕೊನೆಗೊಮ್ಮೆ ಹತಾಶಳಾಗಿ, ಬಿಕ್ಕಿಬಿಕ್ಕಿ ಅಳುತ್ತಾ ರಸ್ತೆಯಲ್ಲಿ ಕುಸಿದು ಬಿದ್ದು ಹೊರಳಾಡುತ್ತಾ ಗೋಕರೆಯುತ್ತಿದ್ದ ಆ ದೃಶ್ಯ….. ಯಾರವಳು? ಕೈಯಲ್ಲಿ ಚಡ್ಡಿ ಹಿಡಿದು ಅವಳು ಏನು ಹೇಳಹೊರಟಿದ್ದಳು? ತಾನು ಕಳೆದ ಬದುಕಿನ ಮಧುರ ಕ್ಷಣದ ತುಣುಕನ್ನೇ ಅಥವಾ ತಾನು ಕಡೆಗೂ ಕಳೆಯಲಾಗದ ಮಧುರ ಕ್ಷಣದ ನೋವನ್ನೇ? ನಡುಬೀದಿಯಲ್ಲಿ ನಿಂತು ನಡುರಾತ್ರಿಯಲ್ಲಿ ಮಲಗಿದ್ದ ಒಂದು ಪ್ರಪಂಚಕ್ಕೆ ಹೇಳಲೇಬೇಕಾದಂತಹ ಎಂತಹ ಬದುಕಿನ ಅವಶ್ಯ ಸಂದರ್ಭದಲ್ಲಿ ಅವಳಿದ್ದಳು? ಅವಳು ಹಿಡಿದಿದ್ದ ಚಡ್ಡಿಯಾದರೂ ಯಾರದಿರಬಹುದು? ಕಳೆದುಕೊಂಡ ಅವಳ ತಂದೆಯದೇ…. ಗಂಡನದೇ… ಪ್ರಿಯಕರನದೇ… ಮಗನದೇ….ಅಥವಾ ಅವಳ ಬಾಳು ಕೆಡಿಸಿದವನದ್ದೇ…. ಒಬ್ಬ ಒಂಟಿ ಹೆಣ್ಣು ಹೊತ್ತಲ್ಲದ ಹೊತ್ತಿನಲ್ಲಿ ಹಿಡಿದ ಆ ಒಂದು ರಕ್ತಸಿಕ್ತ ಚಡ್ಡಿ _ ಯಾವ ದುರಂತದ, ಯಾವ ದುರ್ಘಟನೆಯ ಮತ್ತೊಂದು ಮಗ್ಗುಲನ್ನು ಬಿಚ್ಚುವ ಹಾತೊರಿಕೆಯಲ್ಲಿ ರಸ್ತೆಯ ಅಂಚಿಗೆ ಅನಿವಾರ್ಯವಾಗಿ ಎಳೆದು ತಂದು ಅವಳನ್ನು ಅಸಹಾಯಕಳನ್ನಾಗಿ ನಿಲ್ಲಿಸಿತ್ತು? ಅಷ್ಟೊಂದು ಜನರ ನಡುವೆಯೂ ನಮ್ಮನ್ನು ಯಾಕೆ ಅವಳು ಅಪದ್ಭಾಂದವರಂತೆ ಹಿಡಿಯಲು ಬಂದಿದ್ದಳು? ಆ ಅವೇಳೆಯಲ್ಲಿ ಯಾರಾದರೂ ಏನು ಮಾಡಲು ಸಾಧ್ಯವಿತ್ತು? ಅಥವಾ ನಮ್ಮಂತಹ ಮುಗ್ಧರನ್ನು ಹಾದಿ ತಪ್ಪಿಸಲು ಅನೇಕರು ಕೈಗೊಳ್ಳುವ ಕುತಂತ್ರದಲ್ಲಿ ಇದೂ ಕೂಡ ಒಂದಾಗಿತ್ತೇ? ಇವತ್ತಿಗೂ ನನಗಿದು ತಿಳಿಯದ ವಿಷಯ. ಇವಕ್ಕೆಲ್ಲಾ ಉತ್ತರವಿದೆಯೇ? ಇದ್ದರೆ ಎಲ್ಲಿ? ಹುಡುಕಲು ಹೋದಷ್ಟೂ ಗೋಜಲಾಗುತ್ತಾ ಸಾಗುವ ಈ ಬದುಕಿನಲ್ಲ್ಲಿ ಕಡೆಗೂ ನಾವಿರುವುದು ಹೀಗೆ ಅರ್ಥವಾಗದ ಹಲವಾರು ಗೋಜಲುಗಳ ನಡುವಿನ ಒಂದು ಜಗತ್ತಿನಲ್ಲಿಯೇ ಅಲ್ಲವೇ?….]]>

‍ಲೇಖಕರು G

August 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This