ಅವಳು ನದಿ

ಅಂಜನಾ ಗಾಂವ್ಕರ್

ಜುಳುಜುಳು ಸಂಗೀತ ಹಾಡುತ್ತ ಬೆಳ್ಳಿಯ ಕರಗಿಸಿ ಹರಿಸಿದಂತೆ ಹರಿಯುತ್ತಿರುವ ಹೊಳೆಯುತ್ತಿರುವ ಹಳ್ಳದಲ್ಲಿ ನಟ್ಟ ನಡುವಿನ ಬಂಡೆಯ ಮೇಲೆ ಕುಳಿತು ಯೋಚನಾ ಲಹರಿಯಲಿ ಮುಳುಗಿದ್ದೆ. ಹರಿಯುವ ನೀರಿನಂತೆ  ಹೊರಟು ಕೇವಲ ಕಡಲ ಸೇರಿದರೇನು ಬಂತು? ಸಿಹಿ ನೀರು ಉಪ್ಪಾಗಿ ಮತ್ತೆ ಆವಿಯಾಗಿ ಜಲಚಕ್ರದ ಪುನರಾವರ್ತನೆ ಆಗುವುದು. ಎಲ್ಲಿದ್ದರೂ ಆವಿಯಾಗಲೇ ಬೇಕು. ಇಲ್ಲಿಯೇ ನಿಂತು ಸಿಹಿಯಾಗಿಯೇ ಇಂಗುವ ಆಸೆ. ಹಾಗಾದರೆ ಕಡಲು..?

ಕಡಲಿಗೆ ನಿಂತಲ್ಲಿಯೇ ಆರ್ಭಟಿಸುವ, ಭೋರ್ಗರೆವ ಅವಸರ. ತನ್ನೊಳಗೇ ನದಿಯು ಬಂದು ಸೇರಲಿ ಎಂಬ ಅಹಂ. ಅಲೆಗಳ ಹೊಡೆತದಿ ಎಲ್ಲವ ನುಚ್ಚುನೂರಾಗಿಸುವ ಆತುರ. ಯಾವ ಬಂಧನವಿಲ್ಲ. ನದಿ ಹಳ್ಳ ಕೊಳ್ಳಗಳಿಗೋ ಸಿಹಿ ನೀರಾಗಿ ಹರಿದು ತಮ್ಮ ಹರಿವ ಸಾರ್ಥಕಗೊಳಿಸಿ ಕಂಡ ನೆಲವೆಲ್ಲ ಹಚ್ಚಹಸಿರಾಗಿಸಿ ಅದೆಲ್ಲೋ ಕುಡಿಯುವ ನೀರಾಗಿ, ಯಾವುದೋ ರೈತನ ಉಳುಮೆಯ ಉಸಿರಾಗಿ, ಹಸಿರಾಗಿ, ದೊಡ್ಡ ದೊಡ್ಡ ಅಣೆಕಟ್ಟುಗಳಲಿ ಬಂಧಿಯಾಗಿ ಕಡಲ ಸೇರುವ ಹೊತ್ತಿಗೆ ಅದೆಷ್ಟೋ ಜವಾಬ್ದಾರಿಗಳು.

ಹಳ್ಳದಲ್ಲಿ ಸೂರ್ಯ ಕಿರಣ ಮರಗಳ ಸಂಧಿಯಿಂದ ನನ್ನ ಇಣುಕಿ ನೋಡುತ್ತಿತ್ತು. ಪುಟ್ಟ ಮೀನುಗಳು ಚರ್ಮವೆದ್ದ ಪಾದಗಳ ಶುಚಿಗೊಳಿಸಿ ಬೇಜಾರಾಗಿ ನನ್ನತ್ತ ಸುಳಿಯುವುದೇ ಬಿಟ್ಟಿದ್ದರು. ಊಹೂಂ! ಯೋಚನೆಗಳಿಗೆಲ್ಲಿ ಮುಕ್ತಿ?…. ‘ಜಾಂಕಿ’ ಎನ್ನುವ ಆಯಿಯ ಕರೆ ಮನೆಯಿಂದ ಕೇಳಿಸುತ್ತಿತ್ತು. ಆದರೂ ಮನೆಗೆ ಹೋಗುವ ಮನಸ್ಸಿಲ್ಲ.

‘ತಿಂಗಳು ತುಂಬುತ್ತಿರುವ ಬಸುರಿ, ಅದೇನು ನೀರಲ್ಲಿ ಪುಟ್ಟ ಮಕ್ಕಳಾಟ? ತಲೆ ತಿರುಗಿ ಬಿದ್ದರೆ ನೋಡುವವರಾರು?’ ಎನ್ನುತ್ತಲೇ ಬಂದ ಆಯಿ ಕೈ ನೀಡಿದಾಗ ಆಸರೆ ಪಡೆದು ಮೇಲೆದ್ದು ಬಂದೆ. ತೋಟದ ತುದಿಯಿಂದ ಮನೆ ತಲುಪುವಷ್ಟರಲ್ಲಿ ನೆತ್ತಿ ಸುಡುತ್ತಿತ್ತು. ಸ್ನಾನ ಮುಗಿಸಿ ಊಟಕ್ಕೆ ಕುಳಿತರೆ ಒಂದೆಲಗದ ತಂಬುಳಿ ಜೊತೆಗೆ ಆನ್ಬಾಳೆಕಾಯಿ ಹುಳಿ ನನಗಾಗಿ ಕಾಯುತ್ತಿತ್ತು. ‘ಜಾನಕಿ ಸುಸ್ತಾದರೆ ಕುರ್ಚಿ ತರ್ತೀನಿ ಇರು’. ಎಂದರೂ ಕೇಳದೆ ನೆಲಕ್ಕೆ ಕೈ ಊರುತ್ತಲೇ ಕುಳಿತೆ.

ಅಷ್ಟೆಲ್ಲಾ ಶಾಸ್ತ್ರಗಳಿದ್ದ ಆಯಿ ನನಗಾಗಿ ಬದಲಾಗುತ್ತಿದ್ದ ರೀತಿಗೆ ಆಶ್ಚರ್ಯವಾಗಿತ್ತು. ‘ಬೇಡಾ ಆಯಿ. ನಿನಗೆ ಮತ್ತೆ ಖುರ್ಚಿ ತೊಳೆಯುವ ಕೆಲಸ. ಅಷ್ಟೇನೂ ಕಷ್ಟವಾಗುತ್ತಿಲ್ಲ ಬಿಡು. ಇನ್ನೂ ಒಂಭತ್ತು ಬಂದಿಲ್ಲ’ ಎನ್ನುತ್ತಲೇ ಊಟ ಮುಗಿಸಿದ್ದೆ. ಪುಟ್ಟ ನಿದ್ದೆಯೊಂದ ಮುಗಿಸಿ ಮತ್ತೆ ಕೊಟ್ಟಿಗೆಯ ಸುತ್ತು ಹೊಡೆದು ತೋಟದ ಕಡೆ ಮುಖ ಮಾಡಿದೆ.

ಸುಖದ ಸುಪ್ಪತ್ತಿಗೆಯಿಂದ ಅಪ್ಪಟ ಬಡತನದ ಉಡುಗೆ ತೊಟ್ಟು ಗಂಡನ ಜೊತೆಗೆ ವನವಾಸಕ್ಕೆ ಹೊರಟ ಸೀತೆ ಅದೇ ಶೌರ್ಯದ ಪ್ರತೀಕವಾದ ಭೋರ್ಗರೆವ ಕಡಲ ಸೇರಲು ಶಾಂತವಾಗಿ ಹರಿವ ನದಿಯಂತೆ ಕಾಡಿಗೆ ಹೊರಟಳು. ಯುದ್ಧವೆಲ್ಲ ಮುಗಿಸಿ ಪುನಃ ವಾಪಸು ಬಂದರೂ ತುಂಬು ಗರ್ಭಿಣಿಯಾಗಿ ಸೇರಿದ್ದು ಮಾತ್ರ ಕಾಡಿನ ಆಶ್ರಮವೇ. ನಾನೂ ಜಾನಕಿಯೇ. ಆದರೆ ಅವನು ತೊರೆಯಲಿಲ್ಲ. ನಾನೇ ಇಲ್ಲಿ ನೆಲೆಸಿದ್ದೆ. ಅದೂ ನನ್ನ ಹಾಗೆಯೇ ಉದರ ತುಂಬಿ ನಿಂತ ನೂರಾರು ಜೀವಗಳ ಆರೈಕೆಗೆ…

‘ಜಾನಕಿ ನೀನು ತ್ರಾಸಾದರೆ ಅಪ್ಪ ಅಮ್ಮನಿಗೆ ಕರೆ ಮಾಡು, ನಿಮ್ಮ ಪೇಟೆಯಲ್ಲಿ ಬೇಕಾದಷ್ಟು ಆಸ್ಪತ್ರೆ ಇದೆ. ಇಲ್ಲಿ ಕರೆಂಟಿದ್ದರೆ ನೆಟ್ವರ್ಕು ಇಲ್ಲಾಂದ್ರೆ ಅದೂ ಇಲ್ಲಾ. ಅವನಿಗೆ ವಾಪಸು ಬರಲು ಹೇಳು, ಇಲ್ಲಾ ನೀನೇ ಹೋಗು. ಇಲ್ಲಿ ಹೀಗೆ ಬೇಜಾರು ಮಾಡಿಕೊಂಡು ಕುಳಿತರೆ ನಂಗೂ ಏನೂ ಮಾತನಾಡಲು ತೋಚದು.

ಈ ಮುದಕಿ ಜೊತೆ ಅದೇನ್ ಕಂಡು ಸಂಸಾರ ಶುರು ಮಾಡಿದ್ಯೋ? ತಿಂಗಳು ತುಂಬುತ್ತಾ ಇದ್ದಂಗೆ ನೀ ಹೊರಟ್ಬಿಡು. ಇಷ್ಟು ದಿನ ಇದ್ದಂಗೆ ನನ್ನ ಪಾಡು ನಡೀತು. ನೀನು ಇದನ್ನೆಲ್ಲಾ ಈಗ ನೋಡ್ತಾ ಇದ್ದೀಯಾ. ಈ ತೋಟ ಎಲ್ಲಾ ಹೆಂಗಸರ ಕೈಯ್ಯಲ್ಲಿ ಅಪ್ಪುದು ಅಲ್ಲಾ. ಬೇಕಾದವನೆ ಬಿಟ್ಟು ಹೋದಾಗ ನಿಂದೆಂತದು?’ ಎನ್ನುತ್ತಿದ್ದ ಆಯಿಯ ಮಾತಿಗೆ ಹೇಗೆ ತಿಳಿಯಪಡಿಸಲಿ ನನ್ನೊಳಗಿನ ಲಹರಿ ಚಿಂತೆಯಲ್ಲ, ಅದು ಚಿಂತನೆಯೆಂದು…

‘ನೀನೇನು ಹೆದರಬೇಡ. ಹೊಟ್ಟೆಯಲ್ಲಿರುವ ಮಗುವಿಗೆ ತಿಳಿ ಹೇಳ್ತಾ ಇದ್ದೆ. ಮೌನದಲಿದ್ದಾಗಲೆಲ್ಲ ಬರೀ ಚಿಂತೆಲೆ ಇರ್ತಾರೆ ಅಂತಲ್ಲ. ಅದು ಮುಂದಾಲೋಚನೆಗಳ ವಿಶ್ಲೇಷಣೆ. ನಿಂಗದೆಲ್ಲಾ ಅರ್ಥವಾಗದು,’ ಎನ್ನುತ್ತಲೇ ಆಯಿಯ ಸಾಗಹಾಕಿದೆ. ಏಳನೆಯ ತಿಂಗಳು ತುಂಬುತ್ತಿದ್ದಂತೆ ನಿದ್ದೆಯೂ ಕಡಿಮೆಯಾಗುವುದು. ಖಾಲಿ ಮನದ ಅಲೋಚನೆಗಳಿಗೂ ಅದೇ ಬೇಕಾಗಿತ್ತು. ನನ್ನ ಮೌನದೊಳಗೆ ಜೊತೆಯಾಗುವುದು…

‘ಕಂಗ್ರಾಟ್ಸ್ ಜಾನು… ನೀನ್ ಸೆಲೆಕ್ಟ್ ಆಗ್ಬಿಟ್ಟೆ. ನಾನೇ ನಿಂಗೆ ಹೇಳಿದ್ದೆ ಇಂತಾದ್ದೊಂದು ಆಡಿಷನ್ ಇದೆ ಎಂದು. ನಾನೇ  ಸೆಲೆಕ್ಟ್ ಆಗಿಲ್ಲ ಅಂತ ಸ್ವಲ್ಪ ಬೇಜಾರು’ ಎನ್ನುತ್ತಿದ್ದ ಸುಶಿಯ ಮಾತಿಗೆ ನಕ್ಕಿದ್ದೆ ಅಷ್ಟೇ. ಹೌದು..! ಅದು ನನ್ನ ಕನಸು. ಒಮ್ಮೆಯಾದರೂ ಹಳ್ಳಿಯ ನೋಡಬೇಕೆಂಬ ಕುತೂಹಲ. ಪಾನಿಪುರಿ, ಗೋಬಿ, ಏನೂ ಸಿಗದೇ ಪ್ರತಿಯೊಂದಕ್ಕೂ ಅದೆಷ್ಟೋ ದೂರ ಪೇಟೆಗೆ ಹೋಗಬೇಕು. ಅದ್ಹೇಗೆ ಬದುಕುತ್ತಾರೆ ಅಲ್ಲಿನ ಜನ ಎಂಬ ಕೌತುಕ. ನನ್ನ ಕ್ಲಾಸ್ಮೇಟ್ ಒಬ್ಬಳು ಈ ನಗರದಲ್ಲಿ ವಾಸವಿದ್ದರೂ ತನ್ನ ಪೂರ್ವಜರು ಮಲೆನಾಡಿನವರು, ಅಲ್ಲಿನ ವಾತಾವರಣದ ಕುರಿತು ಹೇಳುತ್ತಿದ್ದರೆ ಒಮ್ಮೆ ನೋಡುವ ತವಕ.

ಡಿಗ್ರಿಯ ಅರ್ಧದಲ್ಲೇ ಪರೀಕ್ಷೆ ಬರೆಯದೇ ಅಂತೂ ನಮ್ಮ ತಂಡದ ಜೊತೆಗೆ ಮಲೆನಾಡಿನ ಒಂದು ಗ್ರಾಮ ತಲುಪಿದ್ದೆವು. ಅತ್ತ ಕುಗ್ರಾಮವೂ ಅಲ್ಲ, ಇತ್ತ ಆಧುನಿಕವೂ ಅಲ್ಲ, ತಮ್ಮದೇ ಸಂಪ್ರದಾಯದೊಂದಿಗೆ ನೆಮ್ಮದಿಯಿಂದಿದ್ದ ಊರಿನ ಜನಕ್ಕೆ ನಮ್ಮೆಲ್ಲರ ಕಂಡು ಯಾವುದೋ ಅನ್ಯಗ್ರಹದ ಜೀವಿಯನ್ನು ನೋಡಿದಂತೆ ನೋಡುತ್ತಿದ್ದರು.

ಅದೇ ಊರಿನ ಸುದರ್ಶನ ನಮ್ಮ ತಂಡಕ್ಕೆ ಬೇಕಾದ ಎಲ್ಲಾ ಸೌಕರ್ಯ ಕಲ್ಪಿಸಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದ. ನಾನು ಮತ್ತು ಇನ್ನೊಂದಿಬ್ಬರು ಹುಡುಗಿಯರು ಉಳಿದದ್ದು ಸುದರ್ಶನನ ಮನೆಯಲ್ಲಿ. ಅವನ ತಾಯಿ ಮೊದಮೊದಲು ಒಪ್ಪಲಿಲ್ಲ. ಶಾಸ್ತ್ರ ಸಂಪ್ರದಾಯ ಬೇರೆ. ಕೊನೆಗೆ ನಾನೂ ಮಾಧ್ವ ಬ್ರಾಹ್ಮಣ ಜಾತಿ ಎಂದು ತಿಳಿದಾಗ ಅವರ ಮನೆಯಲ್ಲಿ ಉಳಿಸಿಕೊಂಡರು.

ಒಂದು ದಿನ ಊರಲ್ಲಿ ತರಕಾರಿ ಮಾರುವುದು, ಇನ್ನೊಂದು ದಿನ ರಾಡಿಯಾದ ಗದ್ದೆಯಲ್ಲಿ ಕಬ್ಬಡಿಯಾಟ, ಇನ್ನೊಂದು ದಿನ ಹಾಲು ಹಿಂಡುವುದು ಇತರ ಚಟುವಟಿಕೆಗಳಿದ್ದವು. ಯಾಕೋ ಇವೆಲ್ಲ ನೀರಸವೆನ್ನಿಸುತ್ತಿತ್ತು . ನಾನೇನೂ ಕೆಲವೇ ದಿನಗಳಲ್ಲೇ ಇದೆಲ್ಲಾ ಚಟುವಟಿಕೆಗಳಲ್ಲಿ ಸೋತೆ. ಆದರೂ ಮನೆಗೆ ಹೊರಡದೇ ಊರೆಲ್ಲ ಸುತ್ತುವ ಆಸೆಗೆ ಬಿದ್ದೆ. ಆಗ ಜೊತೆಯಾದವನೆ ಸುದಿ.

ಆಗಿನ್ನೂ ದೀಪಾವಳಿ ಮುಗಿದಿತ್ತು. ಆ ಊರಿನಲ್ಲಿ ಚಳಿ ಬೇರೆ ಜಾಸ್ತಿ. ಎತ್ತರದ ಗುಡ್ಡವ ಹತ್ತಿ ಕಾಡುನೆಲ್ಲಿಕಾಯಿ ಕೊಯ್ದು ಸುದಿಯ ಜೊತೆಗೆ ಸುತ್ತಿದೆ. ಹೊಳೆಗಿಂತ ಸ್ವಲ್ಪ ಚಿಕ್ಕದಾದ ಹಳ್ಳದಲ್ಲಿ ಅವನು ಮೀನಿನಂತೆ ಈಜುತ್ತಿದ್ದರೆ ನಾ ಬಂಡೆಯ ಮೇಲೆ ಕುಳಿತು ನೋಡುತ್ತಿದ್ದೆ. ಅವನ ಅಡಿಕೆ ತೋಟ, ಅವನ ಊರು, ಅಲ್ಲಿದ್ದ ಪುಟ್ಟ ಗಣೇಶನ ಗುಡಿ ಎಲ್ಲವನ್ನೂ ತೋರಿಸಿದ್ದ.

‘ಗಣೇಶಾ ಈ ಸ್ವರ್ಗದಲ್ಲಿ ನನ್ನ ಯಾವಾಗಲೂ ಇರುವಂತೆ ಮಾಡು’ ಎಂದು ಬೇಡಿಕೊಂಡರೆ ಅವನು ಊರು ಬಿಡುವ ಯೋಚನೆಯಲ್ಲಿದ್ದ. ಅಂತೂ ನಾನು ಹೊರಡುವ ದಿನ ಹತ್ತಿರವಿತ್ತು. ಸುದರ್ಶನ್ ಒಬ್ಬ ಉತ್ತಮ ಸ್ನೇಹಿತನಾದ. ಮನೆಗೆ ತಲುಪಿ ತೀರಾ ಆಲಸಿಯಂತೆ ಮಲಗಿಯೇ ಇದ್ದೆ. ಸುಂದರ ಸ್ವಪ್ನವೊಂದು ನೋಡಿದಂತಾಗಿ ಮತ್ತೆ ಮತ್ತೆ ಮಲಗಿ ಅದೇ ಕನಸ ಕಾಣುವ ಬಯಕೆ. ಸುದಿಯ ಸಂದೇಶವೊಂದು ಬಂದಿತ್ತು. ಯಾಕೋ ಪದವಿಯ ಪೂರ್ಣಗೊಳಿಸಲು ಬೇಜಾರು. ಆದರೂ ಅಪ್ಪ ಅಮ್ಮನ ನೋಯಿಸಬಾರದೆಂದು ಓದುತ್ತಿದ್ದೆ.

ಸಂದೇಶಗಳು ಕರೆಗಳಾಗಿ, ಮಾತುಗಳು ಮೌನವಾಗಿ, ಮನದಾಳಕ್ಕಿಳಿದು ಮೌನವನ್ನೂ ಅರ್ಥೈಸಿಕೊಳ್ಳುವಷ್ಟರ ಮಟ್ಟಿಗೆ ಆತ್ಮಸಖನಾದ ಸುದಿಯ ಬಿಟ್ಟಿರಲಾರದಷ್ಟು ಹತ್ತಿರವಾದೆ. ಕೊನೆಗೂ ಅಪ್ಪನಿಗೆ ಹೇಳಿ ಅವನಿಗಾಗಿ ಒಂದು ಕೆಲಸವನ್ನೂ ಕೊಡಿಸಿದೆ. ಮಹಾಸಮುದ್ರಕ್ಕೆ ಮೊದಲು ಜಿಗಿಯುವ ಧೈರ್ಯ ಬೇಕು. ನಂತರ ಈಜಿ  ಮುನ್ನಡೆಯಲೂಬಹುದು ಅಥವಾ ಮುಳುಗಲೂಬಹುದು.

ಸುದರ್ಶನ್ ಒಂದೇ ಕೆಲಸಕ್ಕೆ ಅಂಟಿಕೊಂಡಿರದೆ ಅಲ್ಲಿ ಇಲ್ಲಿ ಬೇರೆ ಕೆಲಸ ಹುಡುಕುತ್ತಿದ್ದ. ಕೊನೆಗೆ ಅವನ ಪರಿಚಯಸ್ಥರಿಂದ ದೇವಸ್ಥಾನದ ಅರ್ಚಕನಾದ. ಸಂಜೆಯಾದರೆ ಸಾಕು ನಮ್ಮ ಭೇಟಿ. ಪಾರ್ಕು, ಗಿಡ ಮರ ಬಳ್ಳಿಸುತ್ತಿ ಕೊನೆಗೆ ಮದುವೆಯ ನಿರ್ಧಾರಕ್ಕೆ ಬಂದೆವು. ನಮ್ಮ ಮನೆಯಲ್ಲಿ ಒಪ್ಪುವ ಮಾತೇ ಇರಲಿಲ್ಲ. ಇನ್ನು ಅವನ ಅಮ್ಮ ಇದ್ದೊಬ್ಬ ಮಗನ ನಿರ್ಧಾರಕ್ಕೆ ಅಡ್ಡಿ ಬರಲಿಲ್ಲ. ಅದೇ ಗುಡಿಯ ಬಳಿಯಿದ್ದ ಪುಟ್ಟ ರೂಮಲ್ಲಿ ಸಂಸಾರ ಸಾಗಿತ್ತು. ಆದರೂ ನಮ್ಮ ಖರ್ಚು ಹೆಚ್ಚಾಗತೊಡಗಿತ್ತು.

ಆದಾಯದ ಮಿತಿ ಕಡಿಮೆ. ನಾನೋ ಕೆಲಸಕ್ಕೆ ಸೇರಲು ಸುದಿ ಒಪ್ಪಲಿಲ್ಲ ಇನ್ನು ಈ ದೇವಸ್ಥಾನ ಬಿಟ್ಟು ಬೇರೆ ಕೆಲಸ ಹುಡುಕಿದರೆ ಮನೆ ಬಾಡಿಗೆ, ಕರೆಂಟ್ ಬಿಲ್, ವಾಟರ್ ಬಿಲ್ ಎಲ್ಲಾದಕ್ಕೂ ಹಣ. ‘ನಿಮ್ಮ ಊರು ಅದೆಷ್ಟು ಚೆನ್ನಾಗಿದೆ, ಅಲ್ಲೇ ಇರಬಹುದಲ್ಲವಾ, ಪಾಪ ಅಮ್ಮ ಒಬ್ಬಳೇ ಹೇಗೆ ಇರುತ್ತಾಳೆ?’ ಎಂದರೆ ‘ನೋಡು ಜಾನು, ಈ ತೋಟದ ಕೆಲಸ, ಆಳುಗಳ ಹುಡುಕೋದು ಎಲ್ಲಾ ಎಷ್ಟು ಕಷ್ಟ ಗೊತ್ತಾ? ಅಪ್ಪ ತೀರಿ ಹೋಗಿ ಎರಡು ವರ್ಷ ಆಗಿದೆ. ಎಲ್ಲಾ ವ್ಯವಹಾರ ಅಮ್ಮನೇ ನೋಡಿಕೊಳ್ಳೋದು. ನನ್ನದೂ ಅಂತ ಐಡೆಂಟಿಟಿ ಬೇಡವಾ?, ಹೇಗಾದರೂ ಅಮ್ಮನ ಒಪ್ಪಿಸಿ ಆಸ್ತಿಯನ್ನೆಲ್ಲ ಮಾರಿ ಇಲ್ಲೇ ಏನಾದರೂ ಮಾಡೋಣ ಬಿಡು’ ಎಂದಿದ್ದ.

ಅದಾಗಲೇ ಪುಟ್ಟ ಕಂದನ ನೀರೀಕ್ಷೆಯಲ್ಲಿದ್ದೆವು. ಆದರೆ ಅಡುಗೆ ಮಾಡುವಾಗ ಸ್ಟೂಲ್ ಮೇಲೆ ನಿಂತಿದ್ದೆ. ಅದು ಟೈಲ್ಸ್ ಮೇಲೆ ಜಾರಿ ನನ್ನ ಹೊಟ್ಟೆ ಅಡುಗೆ ಕಟ್ಟೆಗೆ  ತಗುಲಿದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯ ಖರ್ಚಿಗೆ ನಾವು ಸಾಲಮಾಡಬೇಕಾಗಿ ಬಂತು. ಇವೆಲ್ಲದರಿಂದ ಸುಧಾರಿಸಿಕೊಳ್ಳುವಷ್ಟರಲ್ಲೇ ಕೊರೊನಾದ ಲಾಕ್ ಡೌನ್ ಶುರುವಾಗಿತ್ತು.

ನಿಜವಾದ ಸಂಕಷ್ಟದ ಅರಿವು ಆದದ್ದೇ ಇಂತಹ ಸ್ಥಿತಿಯಲ್ಲಿ. ದೇವಸ್ಥಾನದ ಬಾಗಿಲು ಮುಚ್ಚಲ್ಪಟ್ಟಿತ್ತು. ಆರ್ಥಿಕವಾಗಿ ನಮ್ಮ ಬಳಿ ಏನೂ ಇರಲಿಲ್ಲ. ಜೊತೆಗೆ ಒಂದಿಷ್ಟು ಸಾಲ. ನನಗೋ ತವರಿಗೆ ಮರಳುವ ಮನಸ್ಸಿಲ್ಲ. ಅಂತೂ ಒಂದಿನ ಒಂದಿಷ್ಟು ಬಟ್ಟೆ ತುರುಕಿದ ಬ್ಯಾಗನ್ನು ಹೆಗಲಿಗೆ ಏರಿಸಿ ಸಿಕ್ಕ ಲಾರಿಯನ್ನೇರಿ ಊರಿನ ಹಾದಿ ಹಿಡಿದಿದ್ದೆವು.

ಸುದರ್ಶನನಿಗೆ ಊರಿನಲ್ಲಿ ಯಾಕೋ ಸಂತಸವಿರಲಿಲ್ಲ. ಈ ಇಳಿವಯಸ್ಸಿನಲ್ಲಿಯೂ ಅತ್ತೆ ಅವರಿವರ ಮನೆಗೆ ಹೋಗಿ ಚಾಲೀ ಅಡಿಕೆ ಸುಲಿದು ಅದೇನೋ ಮುರಿ ಆಳಿನ ಪದ್ಧತಿಯಂತೆ. ‘ಯಾಕೆ ಆಯಿ ಇಲ್ಲದ ಉಸಾಬರಿ ನಿನಗೆ, ಈ ಜಮೀನೆಲ್ಲಾ ಮಾರಿ ಯಾವುದಾದರೂ ಬಾಡಿಗೆ ಮನೆ ತಗೊಳೋಣ. ಬಡ್ಡಿ ಹಣದ ಜೊತೆಗೆ ನನ್ನ ಆದಾಯವೂ ಇರುತ್ತೆ. ನನಗಂತೂ ಇದ್ಯಾವ ಕೆಲಸಕ್ಕೂ ಕರೀಬೇಡ. ಇನ್ನು ಸ್ವಲ್ಪ ದಿನ ಇದ್ದು ನಾನೂ ಹೊರಡಬೇಕು,’ ಎನ್ನುತ್ತಿದ್ದ.

ಮೊದಮೊದಲು ಮುಸುರೆ ಮಡಿ, ಹೊರಗೆ ಕೂರುವುದು, ಮನೆಯಿಂದ ತೀರಾ ದೂರದಲ್ಲಿ ಇರುವ ಪಾಯಿಖಾನೆ ಎಲ್ಲಾ ಬೇಸರ ತರಿಸಿತ್ತು. ಮೇ ತಿಂಗಳು ಮುಗಿದು ಮಳೆಗಾಲ ಶುರುವಾದಾಗ ಇಷ್ಟು ದಿನ ತಿಳಿಯದ ಮುಂಗಾರಿನ ಮಳೆಯಲಿ ನೆನೆದ ಮಣ್ಣಿನ ಕಂಪು ನನ್ನ ಸೆಳೆದಿತ್ತು. ಆಗಲೇ ಮನದಿ ಮೂಡಿದ ಉಲ್ಲಾಸಕ್ಕೆ ಹೊಸ ಚೈತನ್ಯವೂ ಲಭಿಸಿತ್ತು. ಮತ್ತೊಮ್ಮೆ ತಾಯಿಯಾಗುವ ಬಯಕೆ ಈಡೇರಿತ್ತು. ಅತ್ತೆ ಮಾತ್ರ ಈ ಬಾರಿ ಕೊಂಚ ಬದಲಾದಂತೆ ಕಂಡಿತ್ತು. ನನ್ನೆಡೆಗೆ ಅದೇನೊ ವಿಶೇಷ ಮಮತೆ. ಬಹುಶಃ ಒಂಟಿ ಜೀವನ ಅವರಿಗೂ ಬೇಜಾರು ತರಿಸಿರಬೇಕು. ಮಲೆನಾಡಿನ ಸೊಬಗಿಗೆ ಬೆರಗಾಗಿದ್ದೆ. ಸುದಿ ಅದ್ಯಾಕೆ ಈ ಊರು ತೊರೆವ ಯೋಚನೆ ಮಾಡಿದನೋ ಎಂದು ಮನದಲ್ಲೇ ಮರುಗಿದ್ದೆ.

ಮಣ್ಣಿನ ಗೋಡೆಯಾದರೂ ನೆಲಕ್ಕೆ ಪಾಟಿಕಲ್ಲು ಹಾಕಲಾಗಿತ್ತು. ದೇವರ ಕೋಣೆ ಹಾಗೂ ಊಟದ ಕೋಣೆಗೆ ಮಾತ್ರ ಸಿಮೆಂಟ್. ಜಗುಲಿಗೆ ಹಸಿರು ಹಾಗೂ ಕೆಂಪು ಬಣ್ಣ ಬಳೆದಿರುವ ಗೂಟಗಳು. ಮನೆಯ ಮುಂದಿನ ಅಂಗಳಕ್ಕೆ ಸೆಗಣಿ ಸಾರಿಸಲಾಗಿತ್ತು. ಸುತ್ತಲೆಲ್ಲ ಬಣ್ಣ ಬಣ್ಣದ ಹೂವಿನ ಗಿಡಗಳು. ಹಿತ್ತಲಲ್ಲಿ ದೊಡ್ಡಪತ್ರೆ, ಒಂದೆಲಗ, ಮೂಲಂಗಿ, ಹರಿವೆಸೊಪ್ಪು, ಬಸಲೆಸೊಪ್ಪು, ಬದನೆಕಾಯಿ, ಟೊಮೇಟೊ ತರಕಾರಿ. ಬಹುಶಃ ಪೇಟೆಯ ತರಕಾರಿ ಬಳಸಿಯೇ ಇಲ್ಲವೇನೋ. ಸದಾ ಒಂದಿಲ್ಲೊಂದು ಚಟುವಟಿಕೆಯಲ್ಲಿ ಮೈ ಮರೆಯುವ ಅತ್ತೆಗೆ ಇಪ್ಪತ್ನಾಲ್ಕು ಗಂಟೆಗಳೂ ಸಾಲದು ಕೆಲಸಕ್ಕೆ. ಮಳೆಗಾಲದಲ್ಲಿ ಹೊರ ಹೋಗಲು ಉಂಬಳದ ಭಯ. ಲಾಕ್ ಡೌನ್ ಮುಗಿಸಿ ಸುದರ್ಶನ್ ಮಹಾನಗರಿಯ ಕಡೆ ಮುಖ ಮಾಡಿದ್ದ. ಈ ಬಾರಿ ನಾನು ಊರಲ್ಲೇ ಉಳಿದೆ.

ಅತ್ತೆಯಿಂದ ‘ಆಯಿ’ಯ ಪಟ್ಟ ದೊರೆಯಿತು. ಅತ್ತ ಅಪ್ಪ ಅಮ್ಮನಿಗೆ ವಿಷಯ ತಿಳಿದು ಎಲ್ಲವೂ ತಹಂಬದಿಗೆ ಬಂದಿತ್ತು. ‘ಜಾನೂ ಅದ್ಯಾವ ಕಾಡಲ್ಲಿ ಸೇರಿಕೊಂಡೆ? ಇಲ್ಲೇ ಬಂದಿರಬಾರದಾ? ಹೇಗೂ ನನಗೂ ರಿಟೈರ್ಡ್ಮೆಂಟ್. ಮೊಮ್ಮಗುವಿನ ಜೊತೆಗಿರಬಹುದು.’ ಎನ್ನುವ ಅಪ್ಪನ ಮಾತಿಗೆ’ ಪಪ್ಪಾ, ಐ ಹ್ಯಾವ್ ಸಂ ರೆಸ್ಪಾಂಸಿಬಿಲಿಟಿ. ಅದನ್ನೆಲ್ಲ ಸಮರ್ಥವಾಗಿ ನಿಭಾಯಿಸೋದಿದೆ. ಅದಾದ ಮೇಲೆ ಖಂಡಿತ ಬರ್ತೀನಿ,’ ಎಂದಿದ್ದೆ.

ಮಳೆಗಾಲ ಮುಗಿಯುತ್ತಿದ್ದಂತೆ ಬಂದ ಸುದಿ ಜೊತೆಗೆ ಬರುವಂತೆ ತಿಳಿಸಿದ್ದ. ಯಾಕೋ ಮನಸ್ಸು ಒಪ್ಪಲಿಲ್ಲ. ಅವನಿಗೇ ಇಲ್ಲಿ ಉಳಿಯುವಂತೆ ಹೇಳಿದೆ. ‘ಅಮ್ಮನಂತೆ ನೀನೂ… ಒಂದು ಒಳ್ಳೆಯ ಮನೆ ನೋಡಿದ್ದೇನೆ. ಒಂದು ಆರು ಲಕ್ಷ ಲೀಸ್ಗೆ. ಬೇಗ ಅರೇಂಜ್ ಮಾಡಬೇಕು. ಸೊಸೈಟಿಯಲ್ಲಿ ಒಂದಿಷ್ಟು ಸಾಲ ತೆಗೆದು ಅಡಿಕೆ ಕೊಯ್ಲು ಮುಗಿದ ಕೂಡಲೇ ಜಮೀನು ಮಾರಿಬಿಡಬೇಕು. ಹೇಗಾದರೂ ಆಯಿಯ ಹೆದ್ರಿಸಿ ಈ ಕೆಲಸ ಮುಗಿಸಬೇಕು.’

ಮನೆಯಲ್ಲಿ ಒಂದಿಷ್ಟು ಗಲಾಟೆ ಜೋರಿನ ಮಾತು, ಅತ್ತೆ ಮತ್ತು ಗಂಡನ ಜಗಳದಲ್ಲಿ ಗಂಡನ ಪರ ವಹಿಸಿ ನಡೆವ ನಿರ್ಧಾರಕ್ಕೆ ಬಂದು ಬಟ್ಟೆಗಳ ಪ್ಯಾಕ್ ಮಾಡಿಟ್ಟು ಸುಮ್ಮನೆ ತೋಟದ ಕಡೆ ನಡೆದೆ. ನದಿ ಕಡಲಿನ ಕಥೆಯೊಂದು ಮನದಲ್ಲಿ ಮೂಡಿದ್ದೆ ಆಗ. ಕೆಲವು ಕೆಂಪಾದ, ಇನ್ನೂ ಕೆಲವು ಹಸಿರು ಅಡಿಕೆಗೊನೆ ಬಿಟ್ಟಿತ್ತು. ಸರಿಯಾಗಿ ಪೋಷಣೆಯಿಲ್ಲದೆ ಬೇರುಗಳು ಮೇಲೆ ಬರುತ್ತಿದ್ದ ಅಡಿಕೆ ಮರಗಳು ಅದಾಗಲೇ ಮುಂದಿನ ವರ್ಷದ ಫಲ ನೀಡಲು ಹಾಳೆಯ ಮುಚ್ಚಿಕೊಂಡರೂ ಉಬ್ಬಾಗಿ ಕಾಣುತ್ತಿದ್ದ ಉದರ. ಅವೂ ನನ್ನಂತೆಯೇ ಗರ್ಭಿಣಿಯಂತೆ ಭಾಸವಾಯಿತು. ನನ್ನಂತೆ ಅವಕ್ಕೂ ಸರಿಯಾಗಿ ನೀರು ಗೊಬ್ಬರದ ಅವಶ್ಯಕತೆ ಇತ್ತು. ಇವನ್ನೆಲ್ಲ ಹೀಗೆಯೇ ಬಿಟ್ಟು ಹೋದರೆ??? ಯಾರದೋ ಕೈಗೆ ಇವನ್ನೆಲ್ಲ ಮಾರಬೇಕಾ?

ಅಪ್ಪ ಮಾಡಿಟ್ಟ ಜಮೀನನ್ನು ಮಾರಿ ತನ್ನ ಯಶಸ್ಸು ಗಳಿಸುವ ಯೋಚನೆಯಲ್ಲಿರುವ ಸುದರ್ಶನ್ ಒಂದು ಕ್ಷಣ ನನ್ನ ಮನದಿಂದ ದೂರಾದ ಅನುಭವ. ‘ಇಷ್ಟು ವರ್ಷ ದುಡಿದು ಆಯಿ ಮಾಡಿದ ಪರಿಶ್ರಮಕ್ಕೆ ಬೆಲೆ ಎಲ್ಲಿ? ಇಲ್ಲಿಯೇ ಇದ್ದು ಸಾಧಿಸಲು ಬೇಕಾದಷ್ಟು ಅವಕಾಶವಿದೆ. ಇರುವುದ ಬಿಟ್ಟು ದಿನಗೂಲಿಯ ಲೆಕ್ಕದಲ್ಲಿ ದುಡಿದು ಅತ್ತ ಆರಕ್ಕೇರದ ಮೂರಕ್ಕಿಳಿಯದ ಸಂಸಾರಕ್ಕಿಂತ ಇಲ್ಲೆಯೇ ಬದುಕಿನ ಪಾಠ ಕಲಿಯಬಹುದು.

ಆದರೂ ಸುದಿಗೆ ಪೇಟೆಯ ಬದುಕಲ್ಲಿ ಅದೇನು ಮೋಜು? ಈಗಾಗಲೇ ಐದಾರು ಕಡೆ ಕೆಲಸ ಬದಲಾಯಿಸಿ ದೇವಸ್ಥಾನ ಸೇರಿದ್ದಾನೆ. ಅದು ಎಷ್ಟು ದಿನವೋ? ಜಮೀನನ್ನು ಮಾರಿದ ಹಣವನ್ನೂ ಹೀಗೆ ಯಾವುದರಲ್ಲಾದರೂ ಕಳೆದರೆ? ಮುಂದಿನ ಬದುಕು ಕಷ್ಟವಾಗಬಹುದು. ’ಮನೆಗೆ ಮರಳಿದವಳೇ ಆಯಿಯ ಕೈ ಹಿಡಿದು ಕಣ್ಣಿನಲ್ಲಿ ಭರವಸೆ ನೀಡಿದೆ. ಜಗುಲಿಗೆ ಬ್ಯಾಗ್ ತಂದು ಕೇವಲ ಸುದಿಯ ಬಟ್ಟೆ ಮಾತ್ರ ತುಂಬಿದೆ. 

‘ನೀನು ನನ್ನ ವಿರುದ್ಧವಾ? ಜಾನು ನಿಂಗೆ ಈ ಹಳ್ಳಿ ಒಗ್ಗಿ ಬರಲ್ಲ. ಅಂಥಾ ದೊಡ್ಡ ನಗರದಲ್ಲಿ ಇದ್ದವಳು. ಎಷ್ಟು ದಿನ ಇಲ್ಲಿರ್ತಿಯಾ? ನೋಡ್ತಿರು. ನನ್ನಿಂದೆ ಬಂದೇ ಬರ್ತಿಯಾ. ಈ ಹಳ್ಳಿ, ತೋಟ ಎಲ್ಲಾ ಏನ್ ಗೊತ್ತು ನಿನಗೆ? ಒಂದಿನ ಬಿದ್ದ ಅಡಿಕೆ ಎಲ್ಲಾ ಹೆಕ್ಕಿನೋಡು. ’ಅವನ ಮಾತೆಲ್ಲ ನನಗೆ ಸವಾಲೆಸೆದಂತಿತ್ತು. ಮೌನದಲ್ಲೇ ಒಳ ನಡೆದೆ.

ಇಷ್ಟು ದಿನ ಬದುಕಿಗೆ ಈ ಕೊರೊನಾದ ಸಮಯ ಅರ್ಥವೊಂದ ಕಲ್ಪಿಸಿತ್ತು. ಅಮ್ಮ ಮಗನ ನಡುವೆ ಇರುವ ಕಂದಕಕ್ಕೆ ಸೇತುವೆಯಾಗಬೇಕೆ ಹೊರತು ಇನ್ನಷ್ಟು ಆಳವಾಗಬಾರದೆಂದು ಬಯಸಿದೆ. ಅದಕ್ಕೆ ಒಂದಿಷ್ಟು ಸಮಯದ ಆವಶ್ಯಕತೆ ಇತ್ತು. ಅವನು ಹೊರಡುವ ದಿನ ಅದೇ ಹಳ್ಳದ ಮಧ್ಯದ ಬಂಡೆಯ ಮೇಲೆ ಕುಳಿತು ಅತ್ತಾಗ ಸಮಾಧಾನಿಸಿದ್ದು ಅದೇ ಬೆಳ್ಳಿಯ ಸೂರ್ಯ ಕಿರಣಗಳು.. ಕೆಲವು ದಿನ ಇದ್ದ ಚಿಂತೆಯ ಚಿಂತನೆಯಾಗಿಸಿದ್ದೆ. ಗಂಡನ ತೊರೆದು ತನ್ನ ಜೊತೆಗೆ ಇರುವ ಸೊಸೆಯ ಮೇಲೆ ಆಯಿಗೆ ಹೆಮ್ಮೆಯ ಜೊತೆಗೆ ಮಗಳಷ್ಟೇ ಕಾಳಜಿ.

ಸುದಿಗೆ ಬಾಲ್ಯದಿಂದಲೇ ತಾವು ಸಾಧಿಸಲು ಸಾಧ್ಯವಾಗದ ಕನಸುಗಳ ತುಂಬಿದ್ದರು. ‘ಮಗನೇ ಈ ಹಳ್ಳಿಯಲ್ಲಿ ಆರಕ್ಕೇರದ ಮೂರಕ್ಕಿಳಿಯದ ಜೀವನ. ದೊಡ್ಡ ನೌಕರಿ ಮಾಡಿ ನಮ್ಮನ್ನೆಲ್ಲ ಪೇಟೆಗೆ ಕರ್ಕೊಂಡು ಹೋಗ್ತೀಯಾ ಅಲ್ಲವಾ?’ ಎನ್ನುತ್ತಲೇ ಬೆಳೆಸಿದ ಅಪ್ಪನ ಪ್ರೀತಿ ತುಸು ಹೆಚ್ಚೇ ಇತ್ತು. ವಿದ್ಯೆಯೂ ಒಲಿಯದೇ ಅತ್ತ ಕೃಷಿಯ ಕಡೆಗೂ ಮುಖ ಹಾಕದ ಸುದಿಯ ಕನಸುಗಳಿಗೆ ಮಾತ್ರ ಬರವಿರಲಿಲ್ಲ.

ಬದುಕಿನ ಮಗ್ಗುಲಿನ ಸುಂದರವಾದ ಕನಸುಗಳಲ್ಲೇ ಇದ್ದನೇ ಹೊರತು ಭವಿಷ್ಯದ ದೂರದೃಷ್ಟಿ ಇರಲಿಲ್ಲ. ಅಂತವನ ಯಾವ ಅವಗುಣಗಳೂ ಕಂಡೂ ಕಾಣದಂತೆ ಪ್ರೀತಿಯ ಹೊನಲಿನಲ್ಲಿ ಕಡೆಗಣಿಸಿಬಿಟ್ಟಿದ್ದೆ. ಹೆತ್ತವರ ಪ್ರೀತಿಯ ಕಡೆಗಣಿಸಿ ಹೊರ ಬಂದರೂ ಕೊನೆಗೆ ತವರಿನ ಜೊತೆಗೆ ನನ್ನ ಮನೆಯ ಬಂಧವನ್ನೂ ಬೆಸೆಯಬೇಕೆಂದಿದ್ದೆ. ಜೊತೆಗೆ ನಾನೇನು ಮಾಡಬಲ್ಲೆ ಎಂಬ ಸುದಿಯ ಮನಸ್ಥಿತಿಗೆ ಸವಾಲೆಸೆಯಬೇಕಿತ್ತು.

‘ಆಯಿ ಈ ವರ್ಷ ಫಲ ಗುತ್ತಿಗೆ ಕೊಡೋದು ಬೇಡ. ನಿಮ್ಮ ಹೆಸರಲ್ಲೇ ಖಾತೆಯೊಂದ ಮಾಡಿ ಅಡಿಕೆ ಹಾಕೋಣ. ಹಾಗೆ ಸಾಲ, ಠೇವು, ಖಾತೆಯಲ್ಲಿರುವ ಹಣ ಎಲ್ಲದರ ಮಾಹಿತಿ ಬೇಕು, ಆಚೆಮನೆಯ ರಾಮಣ್ಣನಿಗೆ ಎಲ್ಲಾ ಪಾಸ್ಬುಕ್ಕು ಕೊಡಲು ಹೇಳ್ಬಿಡಿ. ಪಾಪ ಅವರಿಗೂ ಅವರದ್ದೇ ತಾಪತ್ರಯ’ ಎಂದೆ. ‘ನೀನ್ಯಾಕೆ ಇಷ್ಟೆಲ್ಲಾ ಚಿಂತೆ ಮಾಡ್ತೆ? ಹೆಂಗೋ ನಡೀತು ಬಿಡು. ಆ ರಾಮ ಗರ್ಭಿಣಿ ಸೀತೆಯ ಕಾಡಿಗೆ ಬಿಟ್ಟಂತೆ ನೀ ಜಾನಕಿಯಾಗಿ ಈ ಹಳ್ಳಿಯಲ್ಲಿ ಉಳಿದೆ. ಈ ಮುದುಕಿ ಜೊತೆಗೆ ಅದೆಂತಾ ಇರ್ತ್ಯನ.’ ಎನ್ನುತ್ತಾ ಅಂಗಳದಲ್ಲಿ ಕಳೆ ತೆಗೆಯುತ್ತಿದ್ದರು.

ವಯಸ್ಸು ಅರವತ್ತಕ್ಕೆ ಬಂದು ವಯೋಸಹಜ ಖಾಯಿಲೆಗಳು ಆವರಿಸಿದ್ದರು ಮೂರು ಹೊತ್ತು ಪುರುಸೊತ್ತಿಲ್ಲದೇ ದುಡಿಯುವ ಆಯಿಯ ನಿಸ್ವಾರ್ಥ ಸೇವೆಗೆ ಬಹುಶಃ ಯಾವ ಪ್ರಶಸ್ತಿ ಬಂದಿರಲಾರದು. ಮಗ ಪೇಟೆ ಸೇರಿದ್ದರೂ ಕೊಟ್ಟಿಗೆಯ ಲಕ್ಷ್ಮೀ, ಒಲೆಯ ಮೇಲೆ ಮಲಗುವ ಕಪ್ಪು ಬಿಳುಪಿನ ಬಿಲ್ಲಾ, ಕೆಂಪು ಬಣ್ಣದ ಬೊಗಳುವ ಪಾಂಡುಗಳೇ ಮಗನಿಗಿಂತ ಹೆಚ್ಚು ಇಷ್ಟವಾಗುತ್ತವೆನೋ… ಈ ಏಳೆಂಟು ತಿಂಗಳ ಜೀವನ ಬದುಕಿನ ಪಾಠದ ಜೊತೆಗೆ ಸಾರ್ಥಕತೆ ಅರ್ಥ ತಿಳಿಸಿತ್ತು.

ನಾನೇನೋ ಥಟ್ಟನೆ ಬದಲಾದೆ. ಕಾರಣ ನಾನು ನದಿ. ಅವನು ಕಡಲು. ಕಡಲು ಭೋರ್ಗರೆತವ ಬಿಟ್ಟು ಆವಿಯಾಗಿ ಈ ಶಾಂತ ನದಿಯ ಸೇರಲು ಮತ್ತೆ ಮಳೆಯಾಗಿ ಸೇರಲು ಬಂದೇ ಬರುವುದು. ಇಲ್ಲದಿದ್ದರೂ ನನ್ನ ನಿರ್ಧಾರವಂತೂ ಅಚಲ. ಅವನೋ ಯಾವ ನಿರ್ಧಾರಕ್ಕೂ ಆಚಲವಾಗಿ ನಿಲ್ಲಲಾರ.

ಅದಾಗಲೇ ಅವನ ಮಿಸ್ಕಾಲೊಂದು ದೂರವಾಣಿಯ ಸ್ಕ್ರೀನ್ ಮೇಲಿತ್ತು. ಬೇಕೆಂದೇ ಆಯಿಯಿಂದ ಅವನಿಗೆ ಕರೆ ಮಾಡಿಸಿದ್ದೆ. ‘ಸುದಿ ಜಾಂಕಿಗೆ ಸಂಕಟ ಆಗ್ತಾ ಇದೆ ಕಣೋ. ನನ್ನ ಜೊತೆಗೂ ಯಾರೂ ಇಲ್ಲೇ.’ ‘ ನಿಮ್ಮ್ ಸೊಕ್ಕು ನಿಂಗಳ ತಿಂತು. ಈಗ ನಾನೇ ಬೇಕಾತ’ ಎಂದು ಗೊಣಗುತ್ತಿದ್ದ. ಇತ್ತ ನಮ್ಮಿಬ್ಬರ ಮಸಾಲೆ ದೋಸೆ ಪಾರ್ಟಿ ಮುಂದುವರಿದಿತ್ತು…

‍ಲೇಖಕರು Avadhi

December 3, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!

ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: