ಅವಳು ನೆನಪಾಗುತ್ತಾಳೆ

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ


ಅವರ ಮಧ್ಯ ಪ್ರೇಮ ಅಂಕುರಿಸಿದೆ ಎಂಬ ವಿಷಯವನ್ನು ಅವಳು ಪತ್ರಿಕೆಯಲ್ಲಿ ಓದಿ ಸುಮಾರು ದಿನಗಳೇ ಆಗಿವೆ. ಅದ್ಯಾವುದೋ  ಒಂದು ಪತ್ರಿಕೆ ಮೊಟ್ಟ ಮೊದಲ ಬಾರಿಗೆ ಅವರಿಬ್ಬರು ಊರಿನಿಂದ ದೂರು ಇರುವ ಹೊಟೆಲ್ ವೊಂದರಲ್ಲಿ ತೀರಾ ಪರ್ಸನಲ್ ಆಗಿ ಇರುವ ಭಾವಚಿತ್ರಗಳನ್ನು ಪ್ರಕಟಿಸುವ ಮೂಲಕ ಎಕ್ಸ್ ಪ್ಲೋಸಿವ್ ಸುದ್ದಿ ನೀಡುತ್ತದೆ..

ಮೊದಲ ಬಾರಿ ಆ ಸುದ್ದಿ ಓದಿ ಹೇಳಿಕೊಳ್ಳಲಾರದ ಸಂಕಟಕ್ಕೆ ಸಿಲುಕಿ ಅವಳು ನರಳುತ್ತಾಳೆ. ಎಲ್ಲ ಭಾವಚಿತ್ರದಲ್ಲೂ ಅವರಿಬ್ಬರು ಗರಬಡಿದಂತಿದ್ದರು. ಒಂದರಲ್ಲಿ ಅವರಿಬ್ಬರು ಹೊಟೆಲ್ ನಿಂದ ಹೊರಬರುತ್ತಿರುವ ದೃಶ್ಯ.ತಾವು ಫೋಟೊಗ್ರಾಫರ್ ಕೈಯ್ಯಲ್ಲಿ ಸಿಕ್ಕಿಬಿದ್ದ ಭಯ ಇಬ್ಬರ ಮುಖದಲ್ಲೂ ಇದೆ. ಮತ್ತೊಂದು ಕಡೆಗೆ ಫೋಟೊ ತೆಗೆಯಬೇಡಿ ಎಂದು ಅವಳು ಗೋಗರೆಯುತ್ತಿರುವುದು. ಇನ್ನೊಂದರಲ್ಲಿ ಫೊಟೊಗ್ರಾಪರ್ ಮೇಲೆ ಸಿಟ್ಟಿನಿಂದ ಕೈಯೆತ್ತಿರುವ ಚಿತ್ರ…

ಫೋಟೊಗಳನ್ನು ಒಂದೊಂದಾಗಿ ತಿರುವಿ ಹಾಕುತ್ತ ಅವಳು ಹಾಗೆ ಒಂದು ಕಡೆ  ಕುಸಿಯುತ್ತಾಳೆ. ಅಂದು ಅವಳಲ್ಲಿ ಒಂದು ರೀತಿಯ ಹತಾಶೆ ಬಿಟ್ಟರೆ  ಅವರಿಬ್ಬರ ಬಗ್ಗೆ ಯಾವುದೇ ಅಂಥ ಬೇಸರ ಸಿಟ್ಟು ಬರುವುದಿಲ್ಲ. ಅವನಿದ್ದ ಜಾಗದಲ್ಲಿ ತನ್ನನ್ನೇ ಕಲ್ಪಿಸಿಕೊಂಡು ಅವನು ಮಾಡಿದ್ದು ಸರಿ ಎಂದು ಅವಳಿಗೆ ಅನಿಸತೊಡಗಿತ್ತು. ಸುಮ್ಮನೆ ಹಾಗೆ ಕುಳಿತವಳಿಗೆ ಅವನೊಂದಿಗೆ ತಾನು ಕಳೆದ ದಿನಗಳು ನೆನಪಾಗತೊಡಗುತ್ತವೆ.

asd

ಅಂದು ಅವಳು ಕೂಡ ಹಾಟ್ ಐಟಂ. ಅವಳ ಸ್ನಿಗ್ಧ ಸೌಂದರ್ಯ ಎಂಥವರನ್ನು ಮೋಡಿಮಾಡುವಂಥದ್ದು. ಅವಳ ಹತ್ತಿರ ಬಂದವರು ಬೆಂಕಿಯಲ್ಲಿ ಕೈಸುಟ್ಟುಕೊಂಡವರಂತೆ ವಾಪಸಾಗುತ್ತಿದ್ದರು. ಆದರೆ ಅವನೋ ಏನೇ ಆದರೂ ಅವಳನ್ನು ಪಡೆದೇ ತೀರುತ್ತೇನೆ ಎಂಬ ಹಂಬಲದವನು. ಅವಳು ಹೋದಲ್ಲಿ ಹೋಗುತ್ತಾನೆ. ಬಂದಲ್ಲಿ ಬರುತ್ತಾನೆ.. ಅವಳ ಮನೆಯ ಮುಂದೆ ಮಳೆಯಲ್ಲಿ ನಿಂತು ಒಬ್ಬನೇ ಕುಣಿಯುತ್ತಾನೆ. ಹಾಡುತ್ತಾನೆ. ಅವಳ ಮನಸ್ಸು ಕ್ಯಾರೇ ಎನ್ನದು. ಅವಳ ನೆರಳಾಗುತ್ತಾನೆ. ಅವಳ  ಉಸಿರಾಗುತ್ತಾನೆ. ಹೀಗೊಂದು ದಿನ ನೇರವಾಗಿ ಅವಳ ಮುಂದೆ ಬಂದು ಅವಳ ಕೂದಲನ್ನೆಳೆದು ಕೇಳುತ್ತಾನೆ. ನನ್ನ ಮದ್ವೆ ಮಾಡ್ಕೋ..ಇಲ್ಲದಿದ್ದರೆ ನಿನ್ನನ್ನು ಸಾಯಿಸ್ತೀನಿ. ನಾನೂ ಸಾಯ್ತೀನಿ..

ನಾನು ನಿನಗಿಂತ ತುಂಬಾ ದೊಡ್ಡವಳು.
ನನಗೇನೂ ತೊಂದರೆಯಿಲ್ಲ. ನೀನು ಹೇಳಿದಂತೆ ಕೇಳ್ತೀನಿ.

ಅದೇ ನನಗೆ ಇಷ್ಟವಾಗಲಿಕ್ಕಿಲ್ಲ.

ಹಾಗಾದ್ರೆ ನಾನು ಹೇಳಿದ ಹಾಗೆ ಕೊನೆಯವರೆಗೂ ಕೇಳ್ಬೇಕು. ಬೆಳ್ಗಗ್ಗೆದ್ದು ಟೀ ಕಾಯ್ಸಿಕೊಡ್ಬೇಕು. ಒಳ್ಳೇ ಅಡಿಗೆ ಮಾಡ್ಬೇಕು. ನನ್ನ ಮಕ್ಕಳನ್ನು ಸಂಭಾಳಿಸ್ಬೇಕು.

ಅವಳು ನಗುತ್ತಾಳೆ. ಮೊದಲ ಪ್ರೀತಿಯ ಸ್ಪರ್ಶಕ್ಕೆ ಅವಳು ಕಂಪಿಸುತ್ತಾಳೆ. ಅವಳ ಕಣ್ತುಂಬಿ ಬರುತ್ತದೆ.
ಮದುವೆ ನಡೆದುಹೋಗುತ್ತದೆ.
ಅವನ ಪ್ರೀತಿಯಲ್ಲಿ ಮುಳುಗೇಳುತ್ತಾಳೆ. ಅವರು ನೋಡದ ಸ್ಥಳಗಳಿಲ್ಲ. ಅವರಿದ್ದ ಕೋಣೆಯ ಗೋಡೆಗಳಲ್ಲೆಲ್ಲಾ ಅವರ ಪ್ರೇಮದ್ದೇ ಕನವರಿಕೆ.ಎಲ್ಲೆಡೆ ಪ್ರೀತಿಯ ಪಿಸುಮಾತುಗಳದ್ದೇ ಪ್ರತಿಧ್ವನಿ. ಹೇಗೆ ದಿನಗಳು ಕಳೆದು ಹೋಗತೊಡಗಿವೆ ಗೊತ್ತಾಗಲ್ಲ. ಅವನೋ ಒಂದು ಕ್ಷಣವೂ ಅವಳನ್ನು ಬಿಟ್ಟಿರಲಾರ. ಅವಳ ಕಾಲು ಒತ್ತುತ್ತಾನೆ. ಮಗುವಿನಂತೆ ಸ್ನಾನ ಮಾಡಿಸುತ್ತಾನೆ. ತನ್ನ ಕೈಯ್ಯಾರೆ ತುತ್ತುಣಿಸಿ ಅವಳ ಕಣ್ಣಲ್ಲಿ ತನ್ನನ್ನು ಕಂಡು ತಾನೇ  ನಗುತ್ತಾನೆ.ಪ್ರೀತಿ ಉತ್ತುಂಗದಲ್ಲಿರುವ ಹೊತ್ತು. ಅವಳು ತಾಯಿಯಾಗುವ ಸುದ್ದಿ ಮತ್ತೆ ಸ್ವರ್ಗಕ್ಕೆ ಕಿಚ್ಚು ಹತ್ತಿಸುತ್ತದೆ. ಮತ್ತೆ ತಾನಿಷ್ಟೊಂದು ಅದೃಷ್ಟಶಾಲಿನಾ ಅನ್ನಿಸುತ್ತೆ.

ಮುದ್ದು ಮಗು ಅವಳ ಬಾಳಿನಲ್ಲಿ ಮತ್ತಷ್ಟು ಸಂತೋಷ ತರುತ್ತದೆ. ಅವನೋ ಮಗುವಿನ ಜೊತೆಗೆ ಮಗುವಿನಂತಾಗುತ್ತಾನೆ. ಚಿಕ್ಕ ಮಗುವಿಗಿಂತ ದೊಡ್ಡ ಮಗುವೇ ಕೀಟಲೆ ಎಂದು ಅವಳು ಹುಸಿಮುನಿಸು  ತೋರುತ್ತಾಳೆ. ತಾಯಿಯಾಗುತ್ತಿದ್ದಂತೆ ಅವಳು ಮತ್ತಷ್ಟು ಸೌಂದರ್ಯವತಿಯಾಗುತ್ತಾಳೆ. ಅವನು ಮತ್ತಷ್ಟು ಹುಚ್ಚನಾಗುತ್ತಾನೆ. ಹೀರಿದರೂ ಮುಗಿಯದ ಸೌಂದರ್ಯ ವರ್ಷಕ್ಕೊಂದರಂತೆ ಮೂರು ಮಕ್ಕಳಾಗುತ್ತವೆ. ಒಟ್ಟು ಐದು ಮಂದಿಯ ಸಂಸಾರ. ಪತ್ರಿಕೆಯಲ್ಲೂ ಅವರಿಬ್ಬರ ಅವರ ಮಕ್ಕಳ ಫೋಟೋ ಬರುತ್ತದೆ. ಒಳ್ಳೊಳ್ಳೇ ಫೋಟೋಗಳನ್ನೇ ಹಾಕುತ್ತಾರೆ. ಆದರೆ ಎಲ್ಲೋ ಒಂದು ಕಡೆ ಪ್ರತಿ ಬಾರಿ ಪತ್ರಿಕೆಯಲ್ಲಿ ಅವರಿಬ್ಬರ ಬಗ್ಗೆ ಬಂದಾಗ ಅವಳು  ವಯಸ್ಸಿನಲ್ಲಿ ದೊಡ್ಡವಳು ಎಂಬ  ಅಂಶ ಹೆಚ್ಚು ಪ್ರಾಮುಖ್ಯತೆ ಪಡೆದುಕೊಳ್ಳುವುದು ಅವಳಲ್ಲಿ ಕಸಿವಿಸಿ ಉಂಟುಮಾಡುತ್ತದೆ. ಆದರೆ ತನ್ನ ವಯಸ್ಸಿಗೆ ತಲೆಕೆಡಿಸಿಕೊಳ್ಳದೆ ತನ್ನನ್ನು ಅಗಾಧವಾಗಿ ಪ್ರೀತಿಸುವ ಅವನ ಮುಂದೆ ಪತ್ರಿಕೆಗಳನ್ನು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬಾರದು  ಎಂದು ಅವಳು ನಿರ್ಧರಿಸುತ್ತಾಳೆ. ಒಂದು ಕ್ಷಣ ಒಮ್ಮೊಮ್ಮೆ ಅವಳಿಗೆ ಎಲ್ಲವೂ ಕನಸಿನಂತೆ ಭಾಸವಾಗತೊಡಗುತ್ತದೆ. ಯಾರಾದರೂ ಇಷ್ಟೊಂದು ಪ್ರೀತಿಸೋಕೆ ಸಾಧ್ಯನಾ ಎಂದು ಅವಳು ತಲೆಕೆಡಿಸಿಕೊಳ್ಳುತ್ತಾಳೆ.

ಈ ಖುಷಿಯ ಮೇಲೆ  ಯಾರದಾದರೂ ದೃಷ್ಟಿ ಬಿದ್ದರೆ ಅವಳು ಹೆದರುತ್ತಾಳೆ. ದೇವರೇ ಹಾಗಾಗದಿರಲಿ ಎಂದು ಕೈಮುಗಿಯುತ್ತಾಳೆ.ದಿನಗಳು ಕಳೆಯತೊಡಗುತ್ತವೆ. ಎಲ್ಲರಿಗೂ ವಯಸ್ಸಾಗುವಂತೆ ಅವಳಿಗೂ ವಯಸ್ಸಾಗತೊಡಗುತ್ತದೆ. ಅವಳೀಗ ಎಲ್ಲ ಕರ್ತವ್ಯವನ್ನು ತುಂಬಾ ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಾಳೆ. ತನ್ನ ವೃತ್ತಿಯಲ್ಲಿ ಅವಳು ಕೂಡ ಉತ್ತುಂಗದಲ್ಲಿದ್ದ ಕಾಲ. ಪ್ರೀತಿಗಾಗಿ ಎಲ್ಲವನ್ನೂ ಬಿಟ್ಟು ಮನೆ ಸಂಸಾರಕ್ಕೆ ನೆಚ್ಚಿಕೊಂಡಿರುವ ಅವಳಿಗೆ ಹಿಂತಿರುಗಿ ನೋಡಿದಾಗ
ಯಾವುದೇ ಬೇಜಾರಾಗುವುದಿಲ್ಲ.

ಪತ್ನಿಯಾಗಿ,ತಾಯಿಯಾಗಿ ತನ್ನ ಕರ್ತವ್ಯ ನಿರ್ವಹಿಸಿದ್ದರ ಬಗ್ಗೆ ಅವಳಿಗೆ ಖುಷಿಯಿದೆ. ಆದರೆ ದಿನಗಳೆದಂತೆ ಅವಳಲ್ಲಿ  ಹೆಚ್ಚುತ್ತಿರುವ ವಯಸ್ಸು ಆತಂಕ ಸೃಷ್ಟಿಸಿದೆ. ತನ್ನ ಸೌಂದರ್ಯ ಈಗ ಮೊದಲಿನಂತಿಲ್ಲ. ಆದರೆ ಆತ ದಿನಗಳೆದಂತೆ ಮತ್ತಷ್ಟು ಸುಂದರನಾಗುತ್ತಾನೆ. ಅದು ಅವಳಿಗೆ ಖುಷಿ ನೀಡಿದರೂ ಎಲ್ಲೋ ಒಂದು ಕಡೆ ಕೀಳರಿಮೆ ಕಾಡತೊಡಗಿದೆ. ತಲೆಯಲ್ಲಿ ಬಿಳಿಕೂದಲುಗಳು ಹೆಚ್ಚಾಗುತ್ತಿವೆ.

ಅವನು ಕೂಡ ಮೊದಲಿನಂತಿಲ್ಲ. ಮಕ್ಕಳ ಮೇಲೆ ತನ್ನ ಮೇಲೆ ಪ್ರೀತಿಗೇನೂ ಕಡಿಮೆ ಆಗದಿದ್ದರೂ ಅಂದಿನ ಆಕರ್ಷಣೆ ಇದ್ದಂತಿಲ್ಲ. ಹೆಚ್ಚಿನ ಸಮಯ ತನ್ನವರೊಂದಿಗೆ ಕಾಲ ಕಳೆಯುವ ಅವನು ಕ್ರಮೇಣ ಅದನ್ನು ಕಡಿಮೆ ಮಾಡಿದ್ದಾನೆ. ಯಾಕೆ ಎಂದು ಅವಳು ತಿಳಿದುಕೊಳ್ಳುವ ಪ್ರಯತ್ನ ಮಾಡುವುದಿಲ್ಲ. ಅವನಿದ್ದ ಸ್ಥಿತಿಯನ್ನು ಅವಳು ಅರ್ಥಮಾಡಿಕೊಳ್ಳುತ್ತಾಳೆ. ಅವನಿಗಿನ್ನೂ ಯೌವನವಿದೆ. ಅವನ ಹಕ್ಕುಗಳನ್ನು ಕಸಿಯಲು ಅವಳಿಷ್ಟ ಪಡುವುದಿಲ್ಲ. ಹೀಗಿದ್ದಾಗೊಮ್ಮೆ ಅವಳು ಆ ಪತ್ರಿಕೆ ನೋಡುತ್ತಾಳೆ. ಹೃದಯದ ಮೂಲೆಯಲ್ಲಿದ್ದ  ಸಂಶಯವೊಂದು ನಿಜವಾಗುತ್ತದೆ.

ಅಂದು ಮನೆಗೆ ಬಂದವನಿಗೆ ನಗುನಗುತ್ತಲೇ ಊಟ ಬಡಿಸುತ್ತಾಳೆ. ತನಗೇನೂ ಗೊತ್ತಿಲ್ಲ ಎನ್ನುವಂತೆ. ಅವನೋ ಗಾಬರಿಯಿಂದ ಮನೆಗೆ ಬಂದವನು ಅವಳು ಪ್ರಸನ್ನವದನಳಾಗಿರುವುದನ್ನು ಕಂಡು ನೆಮ್ಮದಿಯ ನಿಟ್ಟುಸಿರು ಬಿಡುತ್ತಾನೆ. ಖುಷಿಯಿಂದಲೇ ಮಕ್ಕಳೊಂದಿಗೆ ಊಟ ಮಾಡುತ್ತಾನೆ. ಅವರಿಬ್ಬರ ಪ್ರೀತಿಯ ಮಹಾಪೂರವನ್ನೇ ಕಂಡ ಮಂಚಕ್ಕೂ  ಅಂದು ಬೇಸರವಾಗುತ್ತದೆ. ಅವನು ಸೂರು ದಿಟ್ಟಿಸುತ್ತಾನೆ. ಅವಳು ಮಗ್ಗುಲು ಬದಲಿಸಿ ಮಲಗಿದವಳಂತೆ
ನಟಿಸುತ್ತಾಳೆ. ರಾತ್ರಿಯಿಡೀ ಅವಳಿಗೆ ಗೊತ್ತಿಲ್ಲದಂತೆ ಕಣ್ಣೀರು ಹಾಗೆಯೇ ಸುರಿಯತೊಡಗುತ್ತದೆ. ಮಾರನೆಯ ದಿನ ಮತ್ತೆ ಎಂದಿನಂತೆ ದಿನಚರಿ ಸಾಗುತ್ತದೆ.

ಆದರೆ  ಅವೇ ಭಾವಚಿತ್ರಗಳನ್ನು ಮತ್ತಷ್ಟು ಪತ್ರಿಕೆಗಳು ಮುದ್ರಿಸಿರುವುದನ್ನು ಕಂಡು ಅವಳು ಬೆಚ್ಚಿಬೀಳುತ್ತಾಳೆ. ಓದುತ್ತಲೇ ಹೋಗುತ್ತಾಳೆ. ಅವರಿಬ್ಬರ ಸಂಸಾರದಲ್ಲಿ ಬಿರುಕು ಬಿಟ್ಟಿರುವ ಬಗ್ಗೆ ಅವರಿಬ್ಬರೂ ದೂರವಾಗುತ್ತಿರುವ ಬಗ್ಗೆ ಹೀಗೆ ಎನೇನೋ..ಅವಳು ಗಟ್ಟಿ ಮನಸ್ಸು ಮಾಡಿಕೊಂಡಿದ್ದಾಳೆ.  ಗೆಳೆತನ ಇರಬಹುದೇನೋ. ತನ್ನನ್ನು ತೊರೆಯುವಷ್ಟರ ಮಟ್ಟಿಗೆ ಇರಲಿಕ್ಕಿಲ್ಲ ಎಂದು ಸಮಾಧಾನ ಪಟ್ಟುಕೊಳ್ಳುತ್ತಾಳೆ. ಇದಾದ ಕೆಲವೇ ದಿನಗಳಲ್ಲಿ ಬೇರೆ ಪತ್ರಿಕೆಗಳಲ್ಲಿ ಅವರಿಬ್ಬರ ಮತ್ತಷ್ಟು ಹೊಸಪೋಟೋಗಳು ಅವಳನ್ನು ದಂಗುಬಡಿಸುತ್ತವೆ. ಅದರಲ್ಲಿ ಅವರಿಬ್ಬರು ಅತ್ಯಂತ ಹತ್ತಿರದಲ್ಲಿ ಸಾಕಷ್ಟು ಪ್ರೀತಿಯಿಂದ ಇರುವ ದೃಶ್ಯ, ಒಮ್ಮೆ ಅವನು ಅವಳ ಸೊಂಟ ಬಳಸಿ ಮತ್ತೊಮ್ಮೆ ಅವಳು ಅವನಿಗೆ ಕಿವಿಹಿಂಡುವ ದೃಶ್ಯ ನೋಡಿ ಕುಸಿದು  ಕುಳಿತುಕೊಳ್ಳುತ್ತಾಳೆ.

ಆದರೆ ಅವನಿಗೆ ಪ್ರಶ್ನೆ ಮಾಡುವುದಿಲ್ಲ. ಅವನಲ್ಲಾಗುತ್ತಿರುವ ಬದಲಾವಣೆಗಳು ಅವಳಿಗೆ ಸಾಕಷ್ಟು ಕಸಿವಿಸಿ ಉಂಟು ಮಾಡುತ್ತವೆ.. ಸ್ವಾಭಿಮಾನ ಬಿಡುವುದಿಲ್ಲ. ಯಾವ ಮುಖವಿಟ್ಟು ಕೇಳಲಿ..ಮಕ್ಕಳ ಸಲುವಾಗಿಯಾದರೂ ಇರು ಅಂತ ಹೇಳಲೇ…ಅವಳು ಗೊಂದಲಕ್ಕೊಳಗಾಗುತ್ತಾಳೆ. ಮುಂದೆ ಇದು ಅವಳಿಗೆ ರೂಡಿಯಾಗಿಬಿಡುತ್ತದೆ. ಎಂದೂ ಬಾಯಿ ಬಿಡದ ಅವಳ ವರ್ತನೆ ಕಂಡು ಅವನಿಗೂ ಕಸಿವಿಸಿ. ಕನಿಷ್ಟ ಪಕ್ಷ ತನ್ನನ್ನು ಕೇಳುವಳೇನೋ ಜಗಳ ಆಡುವಳೇನೋ ಎಂದು  ಕಾಯುವ ಅವನಿಗೆ  ನಿರಾಸೆಯಾಗುತ್ತದೆ.ತಾನೇ ಮುಂದುವರಿದು ಒಮ್ಮೆ ಧೈರ್ಯದಿಂದ ಹೇಳುತ್ತಾನೆ. ತಾನು ಮತ್ತೊಬ್ಬಳನ್ನು ಪ್ರೀತಿಸುವ ವಿಷಯ. ಆಗಲೂ ಅವಳು ಕಲ್ಲಾಗಿ ನಿಲ್ಲುತ್ತಾಳೆ. ನನ್ನ ಪಾಲಿನದನ್ನು ನಾನು ಅನುಭವಿಸಿದ್ದೇನೆ. ನಿನ್ನ ಜೀವನವನ್ನು ನಿನಗಿಷ್ಟ ಬಂದ ರೀತಿಯಲ್ಲಿ ಬದುಕುವ ಹಕ್ಕನ್ನು ನಾನು ಕಸಿದುಕೊಳ್ಳಲಾರೆ. ಅವಳ ಮನಸ್ಸು ಹೇಳುತ್ತದೆ. ಅಲ್ಲಿಂದ ಹಾಗೆ ಮತ್ತೊಂದು ಕೋಣೆಗೆ ಹೋಗುತ್ತಾಳೆ. ಅಂದಿನಿಂದ ಅವರ ಮಂಚವೂ ಬೇರೆ. ಯಾವುದೋ ಪತ್ರಿಕೆಯಲ್ಲಿ  ಅವರಿಬ್ಬರು ಶೀಘ್ರ ಮದುವೆಯಾಗುವ ಬಗ್ಗೆನೂ ಪ್ರಸ್ತಾಪವಾಗಿರುತ್ತದೆ.

ಐ ಲವ್ ಮೈ ವೈಪ್…ಬಟ್ ಐ ಎಮ್ ನಾಟ್ ಇನ್ ಲವ್ ವಿಥ್ ಹರ್…ಅವನು ಸಂದರ್ಶನವೊಂದರಲ್ಲಿ ಹೇಳಿದ್ದನ್ನು ಆ ಪತ್ರಿಕೆ ಪ್ರಕಟಿಸುತ್ತದೆ.
ಎಷ್ಟೋ ದಿನಗಳಾಗಿವೆ. ಮನೆಗಳೂ ಬೇರೆಯಾಗಿವೆ. ಪತ್ರಿಕೆಗಳಲ್ಲಿ ಅವರ ಫೋಟೊಗಳು ಸಾಮಾನ್ಯವಾಗತೊಡಗಿವೆ. ಅವನನ್ನು ತನ್ನ ವಶಕ್ಕೆ ತೆಗೆದುಕೊಂಡ ಆ ಹುಡುಗಿಯನ್ನು ಈಕೆ ಎವೆಯಿಕ್ಕದೇ ನೋಡುತ್ತಾಳೆ, ಇನ್ನು ಚಿಕ್ಕ ವಯಸ್ಸು, ಸೊಂಟ ಚಿಕ್ಕದು. ಎದೆಯಲ್ಲಿ ಉಕ್ಕುತ್ತಿರುವ ಸೌಂದರ್ಯ. ಅವಳು ನಗುತ್ತಾಳೆ. ಅಂದು ತನ್ನನ್ನು ಕಂಡು ಹೀಗೆ ಆಡಿದ್ದನಲ್ಲಾ…ಮತ್ತೆ ಅವಳು ಮೌನಿಯಾಗುತ್ತಾಳೆ. ಅವನನ್ನು ಕಳೆದುಕೊಂಡ ನೋವು ಕಾಡತೊಡಗುತ್ತದೆ. ತಾನು ದೊಡ್ಡವಳಾಗಿದ್ದಿದ್ದರೆ ಅದರಲ್ಲಿ ನನ್ನ ತಪ್ಪೇನು ಅವನಿಗೆ ಅಂದು ಇದರ ಕಲ್ಪನೆ ಇರಲಿಲ್ಲವಾ…ಪ್ರೀತಿ ಹುಚ್ಚು ಅಷ್ಟೇ. ಅಷ್ಟಕ್ಕೂ ಪ್ರೀತಿ ಎಂದರೆ ಬರೀ ದೈಹಿಕ ಸೌಂದರ್ಯ ಸುಖ ಅಷ್ಟೇ ಅಲ್ಲ ತಾನೆ…ನಾನೆಲ್ಲಿ ಅವನಿಗೆ ಪ್ರೀತಿಯಲ್ಲಿ ಕಡಿಮೆ ಮಾಡಿದ್ದೆ.,.ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲ.. ಎಲ್ಲವೂ ಅವಳಿಗೆ ರೂಢಿಯಾಗಿಬಿಟ್ಟಿದೆ.

ಕಾಲ ಎಷ್ಟು ವಿಚಿತ್ರ…. ಆ  ದಿನಗಳು ಮತ್ತೆ ಬರಲಾರವೇ ಅವಳ ಕಣ್ಣಲ್ಲಿ ಮತ್ತೆ ನೀರು.ಅಂದು ತನ್ನ ಹಿಂದೆಹಿಂದೆನೇ ಸುತ್ತುತ್ತಿದ್ದ ಅವನಿಂದು ಅವಳ ಹಿಂದೆ ಸುತ್ತುತ್ತಿದ್ದಾನಲ್ಲಾ.. ಪಾತ್ರ ಅದೇ..ಮುಖಗಳು ಬೇರೆ..ಆದರೂ ಎಲ್ಲೋ  ಒಂದು ಕಡೆ ಅವಳಿಗೆ  ಅಧಿಕಾರಯುಕ್ತವಾಗಿ ಅವನಿಗೆ ಪ್ರಶ್ನೆ ಮಾಡಲಿಲ್ಲವಲ್ಲಾ ಎಂಬ ಕೊರಗು ಕಾಡುತ್ತದೆ. ಕೇಳಿದ್ದರೂ ಏನಾಗುತ್ತಿತ್ತು…ಪ್ರೀತಿ ಎಂದು ಎಲ್ಲಿ ಹೇಗೆ ಜನ್ಮ ತಳೆಯುತ್ತೋ…ಅಂದು ಆ ಹುಡುಗಿಯ ಜಾಗದಲ್ಲಿ ನಾನಿದ್ದೆ…ಆದರೂ ತಾನು ತೀರಾ ಧೈರ್ಯವಂತೆ ಉದಾರಿ ಎಂದು ಅವಳಿಗೆ ಎನಿಸುತ್ತದೆ. ಹೇಡಿ ಎಂದು ಮತ್ತೊಂದು ಕಡೆ ಮನಸ್ಸು ಜರಿಯುತ್ತದೆ. ಆದದ್ದು ಆಗಿಹೋಯ್ತು..ಮಕ್ಕಳಿದ್ದಾರೆ ಕಣ್ಣ ಮುಂದೆ…ಎಷ್ಟೇ ಸಮಾಧಾನ ಮಾಡಿಕೊಂಡರೂ ಆ ದಿನಗಳು ಮತ್ತೆ ಮತ್ತೆ ಅವಳ ಕಣ್ಣ ಮುಂದೆ ಬರುತ್ತವೆ. ಅವನು ಅಂದು ತನ್ನ ಕೂದಲೆಳೆದು ಕೇಳಿದ ಮಾತುಗಳು ನೆನಪಾಗುತ್ತವೆ.  ಪ್ರೀತಿಯ ಆ ಮೊದಲ ಆಲಿಂಗನ ನೆನಪಾಗಿ ಅವಳು ಮೈಮರೆಯುತ್ತಾಳೆ. ಬದುಕೋಕೆ ಇಷ್ಟು ಸಾಕು ಎಂಬ ನಿರ್ಧಾರಕ್ಕೆ ಬರುತ್ತಾಳೆ.

ನನಗೆ ಕರೀನಾ, ಸೈಫ್ ಅವರನ್ನೆಲ್ಲ ನೋಡಿದಾಗ ಯಾಕೋ ಮತ್ತೆ ಮತ್ತೆ ಅಮೃತಾಸಿಂಗ್ ನೆನಪಾಗುತ್ತಾಳೆ.

‍ಲೇಖಕರು avadhi

November 7, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

4 ಪ್ರತಿಕ್ರಿಯೆಗಳು

 1. priya kervashe

  ಓದುತ್ತಿರುವಂತೆ ಹೌದಲ್ಲಾ ಅನ್ನಿಸಿತು. ನಿಮ್ಮ ಸೂಕ್ಷ್ಮ ತಟ್ಟುವಂತಿದೆ

  ಪ್ರತಿಕ್ರಿಯೆ
 2. ಸುಬ್ಪಮಣಿ

  ಕೂಲ್ ಹುಡುಗಿ ನವೋಮಿ ಬಹಳ ದಿನಗಳ ನಂತರ ಮತ್ತೆ ಮಾತನಾಡಿರುವುದು ಖುಷಿ ಆಗಿದೆ.
  Very nice…

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: