ದೀಪ್ತಿ ಭದ್ರಾವತಿ
ಇರುಳು ಹೀಗೆ ಪಿಸುಗುಟ್ಟಿ
ಗಟ್ಟಿಯಾಗುವಾಗ
ಅವಳ ಒಂಟಿ ನಕ್ಷತ್ರವ
ಭೇಟಿಯಾಗುತ್ತಾಳೆ.
ಕಿಟಕಿ ಸರಳಿನ
ನೇರ ಆಚೆಗೆ ಆಗಸದ
ನಡು ಮಧ್ಯದಲ್ಲಿ
ಅದು ಕೆಲವೊಮ್ಮೆ ಮಿನುಗುತ್ತದೆ
ಮತ್ತೊಮ್ಮೆ ಮಸಕಾಗುತ್ತದೆ
ಹಾಕಿದ ಹೂ ಬುಟ್ಟಿಯಲಿ
ಕಟ್ಟದ ಉಳಿದ
ಪಕಳೆಯೊಂದು ಜಾರುತ್ತ
ಜಾರಿಣಿಯ ಹಾಡು ಹಾಡುವಾಗಲೆಲ್ಲ
ತಾರೆಯ ಸಂಕಟದ
ತೇರು
ಎದೆಯ ಬೀದಿ ಹಾದು ಹೋಗುತ್ತದೆ..
ಒಂದು ಸ್ಪರ್ಶ, ಸಣ್ಣ ಬಿಸುಪು
ಒಂದೆರಡೇ ಪಿಸುಮಾತಿನ ಸಲುವಾಗಿ
ಶತಾಯುಷ್ಯ ಕಳೆದದ್ದು
ಇತಿಹಾಸ ಕಣೇ ಎನ್ನುತ್ತ
ನಿಡುಗಣ್ಣ ನಕ್ಷತ್ರ ಅವಳ
ಕೋಣೆಯತ್ತಲೆ ನೋಡುತ್ತದೆ.

ಕರೆಗಟ್ಟಿದ ದಿಂಬು
ಎಂದೋ ಅಂಟಿಸಿಟ್ಟ
ಹಳೆಯ ಬಿಂದಿ
ನಿದ್ರೆ ತಪ್ಪದ ರಾತ್ರಿ
ಬೀದಿ ಅಲೆಯುವಾಗ
“ಸುಖವೆಂದರೆ ನಿನ್ನದೆ”
ತುಟಿಹೊರಳಿಸಿ ನಗುತ್ತದೆ..
ಸಡಿಲವಾಗದ ನಿರಿಗೆ, ಒಡೆಯದೆ ಉಳಿದ
ಬಳೆ..ಆಚೀಚೆಯಾಗದ ಮುಂಗುರುಳು
ಕಳೆದೇ ಹೋಗದ ರಬ್ಬರ್ಬ್ಯಾಂಡುಗಳ
ನೋಡುತ್ತ ಆಕೆ,
“ಈ ಸುಖದ ಮೂಟೆಯನ್ನು
ನೀನು ಕೊಂಡೊಯ್ದು ಬಿಡು
ಮಹರಾಯತಿ” ಎನ್ನುತ್ತಾಳೆ
ಅದು ಬೆಚ್ಚಿ ಬಿದ್ದಂತೆ ರಿಂಗಣಿಸಿ
“ಹಾಗನ್ನೆಬೇಡವೆ,
ಅವರವರ ಸತೀಧರ್ಮ
ಅನುಭಸಬೇಕಷ್ಟೆ”
ಎನ್ನುತ್ತ ಎತ್ತಲೋ ಓಡುತ್ತದೆ..
ದೀಪ್ತಿ…ಸೂಪರ್