ಅವಳೊಬ್ಬಳಿದ್ದಳು ದೇವಯಾನಿ ಚೌಬಾಲ್ – ಉಮಾ ರಾವ್

ಫ್ಲ್ಯಾಶ್ ಬಲ್ಬ್‌ಗಳ ನಡುವೆ ಒಂದು ಕೆಂಪು ಗುಲಾಬಿ

ಉಮಾ ರಾವ್

ನನ್ನ ಜಗತ್ತು

ಬೂದು ಬಣ್ಣದ ಆಕಾಶ. ಎಡೆಬಿಡದೆ ಸುರಿಯುವ ಮಳೆ. ತೆವಳುತ್ತಾ ಸಾಗುವ ರೈಲುಗಳು. ಸೀಟೆಲ್ಲಾ ಒದ್ದೊದ್ದೆ. ರೈಲು ಹತ್ತಿ ಮುದುಡಿ ಹೋಗಿದ್ದ ‘ಆಫ್ಟರ್ ನೂನ್’ ತೆಗೆದಾಗ ಕಣ್ಣಿಗೆ ಬಿದ್ದಿದ್ದು ದೇವಿಯ ಚಿತ್ರ. ದೇವಯಾನಿ ಚೌಬಳ್ ಇನ್ನಿಲ್ಲ.

ಮುಂಬೈಯಲ್ಲಿರದಿದ್ದರೆ, ದೇವಯಾನಿ ಚೌಬಳ್ ಬಹುಶಃ ದೇವಿಯಾಗುತ್ತಿರಲಿಲ್ಲ. ಸಿರಿವಂತ ರೇಸಿಂಗ್ ಕುಟುಂಬ ಒಂದರಲ್ಲಿ ಹುಟ್ಟಿದ ಈ ಹುಡುಗಿಗೆ ಚಿಕ್ಕಂದಿನಿಂದಲೇ ಸಿನಿಮಾ ಹುಚ್ಚು. ಗೆಳತಿಯರೊಡನೆಯೂ ಅದೇ ಹರಟೆ. ಸ್ಕೂಲು ತಪ್ಪಿಸಿ ಸಿನಿಮಾಗೆ ಹೋಗುವ ಅಭ್ಯಾಸ. ದಿನಾ ಎದುರಿಗೇ ಸಿಗುತ್ತಿದ್ದರೂ ಮುಚ್ಚಿದ ಗೇಟು ತೆರೆದು ಒಳಗೆ ಹೋಗುವ ಧೈರ್ಯ ಮಾಡದ ದೇವಿ, ಕೊನೆಗೊಂದು ದಿನ ಗೆಳತಿಯ ಜೊತೆ ಮೀನಾಕುಮಾರಿಯ ಮನೆಯ ಒಳಗೆ ಹೊಕ್ಕಗಳಿಗೆ ಅವಳ ಬದುಕು ಹೊಸ ತಿರುವು ಪಡೆದಿತ್ತು. ಈ ಹಾಲು-ಕೇಸರಿ ಕೆನ್ನೆಯ, ಹದಿಹರೆಯದ, ಸ್ಕರ್ಟಿನ ಚೆಲುವೆಯನ್ನು ಮೀನಾಕುಮಾರಿ ಆದರದಿಂದ ಬರಮಾಡಿಕೊಂಡಿದ್ದರಂತೆ. ಅವಳ ಸುಂದರ ನೀಳ ಬೆರಳುಗಳಿಗೆ ತಾವೇ ಮೆಹಂದಿ ಹಚ್ಚಿದ್ದರಂತೆ. ತಮಗಾಗಿ ತರಿಸಿಕೊಂಡಿದ್ದ ಗಜರಾ ಅವಳ ಉದ್ದನೆಯ ಎರಡು ಜಡೆಗಳಿಗೆ ಮುಡಿಸಿ ಕಳಿಸಿದ್ದರಂತೆ. ನಂತರ ದೇವಿ ಆಗಾಗ ಅವರ ಮನೆಗೆ ಹೋಗುತ್ತಿದ್ದಳು.

ಆಗ ಮೀನಾಕುಮಾರಿ ಏನೇನೋ ಹರಟುತ್ತಿದ್ದರಂತೆ. ಅವಳಿಗೆ ಅರ್ಥವಾಗದ ತಮ್ಮ ಕವಿತೆಗಳನ್ನು ಓದುತ್ತಿದ್ದರಂತೆ. ಹುಡುಗರನ್ನು ಆಕರ್ಷಿಸಬೇಕಾದರೆ ಅವರತ್ತ ಹೇಗೆ ನೋಡಬೇಕು- “ಸೀದಾ ದಿಟ್ಟಿಸಬಾರದು. ತಗ್ಗಿಸಿದ ಕಣ್ಣುಗಳನ್ನು ಛಕ್ಕನೆ ಎತ್ತಿ ಒಂದೆರಡು ಬಾರಿ ಪಟಪಟನೆ ರೆಪ್ಪೆ ಮಿಟುಕಿಸಿ, ಮತ್ತೆ ಕೆಳಗಿಳಿಸಬೇಕು. ಅವನು ಸೆರೆಯಾದಂತೆಯೇ” ಎಂದೆಲ್ಲಾ ಹೇಳಿಕೊಡುತ್ತಿದ್ದರಂತೆ. ದೇವಿ ಅದನ್ನು ಅಭ್ಯಾಸ ಮಾಡಲು ಹೋಗಿ, ಸಾಧ್ಯವಾಗದೆ ಬಿದ್ದುಬಿದ್ದು ನಗುತ್ತಿದ್ದಳಂತೆ!
ಒಂದು ದಿನ ಮಹಾಲಕ್ಷ್ಮಿ ರೇಸ್‌ಕೋರ್ಸಿನಲ್ಲಿ ರಾಜ್‌ಕಪೂರ್ ದೇವಿಯನ್ನು ಕಂಡಾಗ, “ಹೂ ಈಸ್ ದಟ್ ಲವ್ಲೀ ಗರ್ಲ್?” ಎಂದು ಉದ್ಗರಿಸಿದ್ದರಂತೆ. ಅಂಥಾ ಆಕರ್ಷಕ ವ್ಯಕ್ತಿತ್ವ ಹೊಂದಿದ್ದ ದೇವಿ ಬೆಳ್ಳಿತೆರೆಯ ಮೇಲೂ ತಾರೆಯಾಗಿ ಮಿಂಚಬಹುದಿತ್ತು. ಆದರೆ ಅವಳು ಹಾಗೆ ಮಾಡಲಿಲ್ಲ. ಬದಲು, ಸಿನಿಮಾ ತಾರೆಯರ ಹೊಗಳಿಕೆಗೇ ಮೀಸಲಾಗಿದ್ದ ಪತ್ರಿಕೆಗಳು ತುಂಬಿಹೋಗಿದ್ದ ಆ ಕಾಲದಲ್ಲಿ, ಮೊದಲ ಬಾರಿ ಕತ್ತಿ ಅಲಗಿನಂತಹ “ಗಾಸಿಪ್ ಕಾಲಂ” ಪ್ರಾರಂಭ ಮಾಡಿದ್ದಳು. “ಸ್ಟಾರ್ ಅಂಡ್ ಸ್ಟೈಲ್” ಮತ್ತು “ಈವ್ಸ್ ವೀಕ್ಲಿ”ಗಳಲ್ಲಿ ಭರಾಟೆಯಿಂದ ಬರತೊಡಗಿದ ಅವಳ “ಫ್ರಾಂಕ್ಲೀ ಸ್ಪೀಕಿಂಗ್” ಎಷ್ಟು ಜನಪ್ರಿಯವಾಯಿತೆಂದರೆ, ಅದರ ಆಧಾರದ ಮೇಲೆ “ಸ್ಟಾರ್ ಅಂಡ್ ಸ್ಟೈಲ್” ನಡೆಯುತ್ತಿತ್ತು. ಸಿನಿಮಾ ತಾರೆಯರ ವೈಯಕ್ತಿಕ ಬದುಕು, ಚಿತ್ರರಂಗದಲ್ಲಿ ಅವರ ಭವಿಷ್ಯ, ಅವರ ಯಶಸ್ಸು-ಅಪಯಶಸ್ಸುಗಳ ಗುಟ್ಟುಗಳು, ಅವರ ಪ್ರೀತಿ-ದ್ವೇಷ-ಸ್ನೇಹ-ಸಣ್ಣತನಗಳು, ಪ್ರೇಮ ಪ್ರಕರಣಗಳು-ಎಲ್ಲದರ ಬಗ್ಗೆ ಬಿಚ್ಚುಮನಸ್ಸಿನಿಂದ ಬರೆಯುತ್ತಿದ್ದಳು. ಅವಳ ಬರವಣಿಗೆಯಲ್ಲಿ ಸ್ವಾರಸ್ಯವಿತ್ತು. ತೀಕ್ಷ್ಣತೆಯಿತ್ತು. ಚಾತುರ್ಯವಿತ್ತು. ನಿಷ್ಕರುಣೆಯಿತ್ತು. ಮಾರ್ದವವಿತ್ತು. ಈ ಎಲ್ಲದರ ಮಧ್ಯೆ, ಈ ಒಳಿತು-ಕೆಡಕು-ಪ್ರೇಮ-ಮತ್ಸರಗಳನ್ನು ಮೀರಿದ ಚಿತ್ರರಂಗದವರೆಲ್ಲಾ ಒಂದೇ ಕುಟುಂಬದವರೆಂಬ ಅನುಭೂತಿಯಿತ್ತು. ಹಾಗಾಗಿ ಅವಳ ಕಾಲಮ್ಮಿಗೆ ಗೃಹಣಿಯರು, ವಿದ್ಯಾರ್ಥಿಗಳು, ಆಫೀಸರುಗಳು, ಡಾಕ್ಟರುಗಳು, ವಿಜ್ಞಾನಿಗಳು, ನಟ-ನಟಿಯರು-ಎಲ್ಲರನ್ನೂ ಸೆಳೆಯುವ ಮಾಂತ್ರಿಕತೆಯಿತ್ತು.
ಚಿತ್ರರಂಗದಲ್ಲಿ ಅವಳನ್ನು ಪ್ರೀತಿಸುವವರಿದ್ದರು. ದ್ವೇಷಿಸುವವರಿದ್ದರು. ಹೆದರುವವರಿದ್ದರು. ಒಬ್ಬ ತಾರೆಯ ಏಳುಬೀಳುಗಳನ್ನು ನಿಯಂತ್ರಿಸುವ ಶಕ್ತಿ ಅವಳ ಲೇಖನಿಯಲ್ಲಿದ್ದುದನ್ನು ಕಂಡುಕೊಂಡಿದ್ದರು. ಧರ್ಮೇಂದ್ರನ ಮಗ ಸನ್ನಿ ಚಿತ್ರರಂಗ ಪ್ರವೇಶಿಸುವುದರಲ್ಲಿದ್ದಾಗ “ಅವನು ಬಿಂದಿಯಾ ಗೋಸ್ವಾಮಿಗೆ ಪ್ಯಾಂಟು ತೊಡಿಸಿದಂತಿದ್ದಾನೆ” ಎಂದು ಬರೆದು, ಅವನ ಬೇಡಿಕೆ ಹತ್ತು ಪಟ್ಟು ಬೀಳಲು ಕಾರಣವಾಗಿದ್ದಳು. ಒಂದು ರಾತ್ರಿ ಯಾವುದೋ ಪಾರ್ಟಿಯಿಂದ ಮರಳುವಾಗ, ಅವಳೊಡನಿದ್ದ ರಾಜ್‌ಕಪೂರ್ ಮತ್ತಿನಲ್ಲಿ “ದುದ್ದೂ, ದುದ್ದೂ…” ಎಂದು ಬಡಬಡಿಸಿದ ರೀತಿಯನ್ನು ವರ್ಣಿಸಿ ಎಲ್ಲರನ್ನೂ ಬೆಚ್ಚಿಸಿದ್ದಳು. “ರೇಖಾ ಪಡೆದಿರುವ ಹೊಸ ತೆಳು ಮೈಕಟ್ಟಿನ ಗುಟ್ಟು “ಜೇನ್ ಫಾಂಡಾ ಪೋಗ್ರಾಮ್” ಅಲ್ಲ. ಡಾ. ಪಾಂಡ್ಯಾ…” ಎಂದು ತೋರಿಸಿ ಸಾಕಷ್ಟು ಚಂಡಮಾರುತ ಎಬ್ಬಿಸಿದ್ದಳು. ಧರ್ಮೇಂದ್ರ ಕೋಪದಿಂದ ಮಹಾಲಕ್ಷ್ಮಿ ಸುತ್ತಮುತ್ತ ಅವಳನ್ನು ಅಟ್ಟಿಸಿಕೊಂಡು ಹೋಗುವಂತೆ ಮಾಡಿದ್ದಳು. ರಾಜೇಶ್ ಖನ್ನಾನ ಖ್ಯಾತಿಯ ದಿನಗಳಲ್ಲಿ ಜನಪ್ರಿಯತೆಯ ಉತ್ತುಂಗದಲ್ಲಿದ್ದಳು ದೇವಿ. ಅವರಿಬ್ಬರ ನಡುವೆ ವಿಚಿತ್ರ ಪ್ರೀತಿ-ದ್ವೇಷದ ಸಂಬಂಧವಿತ್ತು. ರಾಜೇಶ್ ಖನ್ನಾ ಯಶಸ್ಸಿಗೇ ತಾನೇ ಕಾರಣಳೆಂದು ಅವಳು ದೃಢವಾಗಿ ನಂಬಿದ್ದಳು. ಅವಳ ಖ್ಯಾತಿಗೆ ತಾನೇ ಕಾರಣನೆಂದು ಆತ ಹೇಳಿಕೊಳ್ಳುತ್ತಿದ್ದ. ಬದುಕಿನುದ್ದಕ್ಕೂ ಗಾಢ ಸ್ನೇಹದಿಂದಿದ್ದ ರಾಜ್‌ಕಪೂರ್ ಆಚರಿಸುತ್ತಿದ್ದ “ವಿಶೇಷ ಹೋಲಿ”ಗೆ ದೇವಿ ಯಾವಾಗಲೂ ಆಹ್ವಾನಿತಳಾಗಿರುತ್ತಿದ್ದಳು. ಅವಳ ಲೇಖನಿಗೆ ಹೆದರಿ, ಲೊಕೇಶನ್ ಷೂಟಿಂಗ್ ಸಮಯದಲ್ಲಿ ಅವಳು ಅಲ್ಲಿ ಇರಬಾರದೆಂದು ಕರಾರು ಮಾಡಿಕೊಳ್ಳುತ್ತಿದ್ದ ತಾರೆಯರೂ ಇದ್ದರು.
ಯಾವ ಬೆದರಿಕೆಗೆ ಬಗ್ಗದೆ, ಹೊಗಳಿಕೆಗೆ ಹಿಗ್ಗದೆ, ತಾನು ಕಂಡದ್ದನ್ನು, ಕೇಳಿದ್ದನ್ನು, ತನಗೆ ಅನ್ನಿಸಿದ್ದನ್ನು ಧೈರ್ಯವಾಗಿ ಬರೆಯುತ್ತಿದ್ದಳು ದೇವಿ. “ಗಾಸಿಪ್ ರಾಣಿ”ಯಾಗಿ ಮೆರೆಯುತ್ತಿದ್ದ ಅವಳ ಬದುಕು ಪಾರ್ಟಿಗಳಿಂದ, ಪ್ರೀಮಿಯರ್ ಷೋಗಳಿಂದ, ತಾರಾಸಮರಗಳಿಂದ, ಉಡುಗೊರೆಗಳಿಂದ, ಅವಳ ಚೆಲುವಿಗೆ ಮರುಳಾದ ಹೀರೋಗಳಿಂದ, ಅವಳ ಮೆಚ್ಚಿನ ಕೆಂಪು ಗುಲಾಬಿ ಗೊಂಚಲುಗಳನ್ನು ಹಿಡಿದು ಕಾದಿರುತ್ತಿದ್ದ ಫ್ಯಾನ್‌ಗಳಿಂದ ತುಂಬಿಹೋಗಿತ್ತು. ಯಾವಾಗಲೂ ಬಿಳಿ ಸೀರೆಯುಟ್ಟು, ಬೆರಳುಗಳ ತುಂಬಾ ವಜ್ರದುಂಗುರ ತೊಟ್ಟು, ಉತ್ಕೃಷ್ಟ ಪರ್ಫ್ಯೂಮ್‌ಗಳ ಕಂಪು ಬೀರುತ್ತಾ ತೇಲಿ ಬರುತ್ತಿದ್ದ ದೇವಯಾನಿ ತಾರೆಯರಷ್ಟೇ ಖ್ಯಾತಳಾಗಿದ್ದಳು. ಮೀನಾಕುಮಾರಿ, ಮಧುಬಾಲಾ, ನರ್ಗಿಸ್ ಮುಂತಾದವರೂ ಬಿಳಿ ಉಡುಪು ತೊಡುವ ಅನುಕರಣೆ ಮಾಡುವ ಸ್ಫೂರ್ತಿ ಹುಟ್ಟಿಸಿದ್ದಳು.
ಆದರೆ ಅವಳ ವೈಯಕ್ತಿಕ ಬದುಕು ತುಂಬಾ ದುರಂತಮಯವಾಗಿತ್ತು. ಚಿಕ್ಕಂದಿನಲ್ಲಿ ತಂದೆ, ತಾಯಿ ನಂತರ ಒಡಹುಟ್ಟಿದವರು ಒಬ್ಬೊಬ್ಬರಾಗಿ ಅಕಾಲ ಮರಣಕ್ಕೆ ತುತ್ತಾಗಿದ್ದರು. ನ್ಯಾಷನಲ್ ಸ್ಫೋರ್ಟ್ಸ್ ಕ್ಲಬ್ ಆಫ್ ಇಂಡಿಯಾದಲ್ಲಿ ರೂಮು ತೆಗೆದುಕೊಂಡು, ಹೆಚ್ಚಾಗಿ ಅಲ್ಲೇ ಇರುತ್ತಿದ್ದ ಅವಳು ಟ್ಯಾಕ್ಸಿಗಳಲ್ಲೇ ತಿರುಗಾಡುತ್ತಿದ್ದಳು. ಮನೆ, ಮದುವೆ, ಮಕ್ಕಳೆಂಬ ಯಾವುದೇ ಸ್ಥಿರತೆಯಿಂದ ದೂರವಾಗಿ ತನಗೆ ಸರಿ ಎನಿಸಿದಂತೆ ಬದುಕಿದಳು.
೧೯೮೫ರಲ್ಲಿ ಒಂದು ದಿನ ಎಂದಿನಂತೆ “ಸ್ಟಾರ್ ಅಂಡ್ ಸ್ಟೈಲ್” ಆಫೀಸಿಗೆ ಬಂದಾಗ ಇದ್ದಕ್ಕಿದ್ದಂತೆ ಕೈಕಾಲು ಸ್ವಾಧೀನ ತಪ್ಪಿ ಕುಸಿದಳು. ಮತ್ತೆ ಎದ್ದು ಏಡಾಡಲಿಲ್ಲ. ಅವಳು ಹಾಸಿಗೆ ಹಿಡಿದ ಮೇಲೂ ಅವಳ ಬರವಣಿಗೆ ನಿಲ್ಲಲಿಲ್ಲ. ಅವಳ ಜೀವನೋತ್ಸಾಹ ಕುಗ್ಗಲಿಲ್ಲ. ಆಸ್ಪತ್ರೆಯಲ್ಲಿ ಮೊದಲ ದಿನವೇ ಪೇಪರೆತ್ತಿಕೊಂಡು “ಓ, ಐ ಹ್ಯಾವ್ ಮೇಡ ದಿ ಹೆಡ್‌ಲೈನ್ಸ್!” ಎಂದು ಉದ್ಗರಿಸಿದ್ದಳು. “ದೇವಿ, ಕ್ಯಾನ್ ಯೂ ಟಾಕ್?” ಎಂದು ಆತಂಕದಿಂದ ಕೇಳಿದ ಡಾಕ್ಟರ್‌ಗೆ “ನಾನಾ ಸ್ಟಾಪ್” ಎಂದು ಹೇಳಿ ಅಚ್ಚರಿಗೊಳಿಸಿದ್ದಳು. ತನ್ನ ಸಮೃದ್ಧ ಅನುಭವಗಳನ್ನು ನೋವಿನ ನೆನಪುಗಳನ್ನು, ಹಾಸಿಗೆಯಿಂದಲೇ ಕಂಡ ಘಟನೆಗಳನ್ನು ಹೇಳಿ ಬರೆಯಿಸುತ್ತಿದ್ದಳು.
ಮೊದಲು ದೇವಿಯ ಅನಾರೋಗ್ಯದ ಬಗ್ಗೆ ಕೇಳಿದಾಗ ನೂರಾರು ಸ್ನೇಹಿತರು ಕಿಕ್ಕಿರಿಯುತ್ತಿದ್ದರು ಹೂಗಳೊಡನೆ. ಅವಳ ಪ್ರೀತಿಯ ತಿಂಡಿಗಳೊಡನೆ, ಔಷಧಿಗಳೊಡನೆ, ಹಣಸಹಾಯದೊಡನೆ. ದಿನ ಕಳೆದಂತೆ ರಾಜ್‌ಕಪೂರ್, ದಿಲೀಪ್‌ಕುಮಾರ್, ರಾಜೇಶ್‌ಖನ್ನಾ ಯುಗ ಕಳೆದು ಅಮೀರ್‌ಖಾನ್ ಯುಗ ಬಂದಿತ್ತು. ಅವಳನ್ನು ನೋಡಲು ಬರುವವರ, ಫೋನ್ ಮಾಡುವವರ ಸಂಖ್ಯೆ ಕಡಿಮೆಯಾಗಿತ್ತು. ಕೊನೆಯ ದಿನಗಳಲ್ಲಿ ಅವಳೊಂದಿಗೆ ಇದ್ದವಳು-ಅವಳನ್ನು ಹಗಲು-ರಾತ್ರಿ ನೋಡಿಕೊಳ್ಳುತ್ತಿದ್ದ ನರ್ಸ್ ಮಾತ್ರ.
ಜುಲೈ ೧೩ರ ಸಂಜೆ ೫.೪೫ಕ್ಕೆ ತನ್ನ ೫೩ನೇ ವಯಸ್ಸಿನಲ್ಲಿ ಅವಳು ಹಠಾತ್ತನೆ ಕೊನೆಯುಸಿರೆಳೆದಾಗ, ಅವಳ ಸಾವಿನ ವಿಷಯ ಯಾರಿಗೆ ತಿಳಿಸುವುದೆಂದೂ ಅರಿಯದಾಯಿತು. ದೇವಿಯ ಕೊನೆಯಾತ್ರೆ ಸಮಯದಲ್ಲಿ ಅವಳ ಒಡನಿದ್ದವರು ೫-೬ ಜನ ಮಾತ್ರ. ಅವಳ ಒಬ್ಬ ಅಕ್ಕನನ್ನು ಬಿಟ್ಟರೆ-ಚಿತ್ರರಂಗದಿಂದ ಕೃಷ್ಣಾಕಪೂರ್ ಮತ್ತು ಅನುಪಮ್ ಖೇರ್.
ದೇವಿ ಪ್ರಾರಂಭಿಸಿದ ಶೈಲಿ ಶೋಭಾ ಡೇ ಇಂದ ಹಿಡಿದು ಅನೇಕರು ಅನುಕರಿಸಿ, ಈಗ ಅದು ಪ್ರತಿ ಫಿಲ್ಮ್ ಪತ್ರಿಕೆಯಲ್ಲೂ ಕಂಡುಬರುತ್ತಿದೆ. ಅವಳು ಉಪಯೋಗಿಸಿದ ಹಿಂದಿ-ಮಿಶ್ರಿತ, ಮುಂಬೈ ಸಾಮಾನ್ಯ ಜನ ಮಾತಾಡುವ ಇಂಗ್ಲಿಷ್ ಭಾಷೆ ಈಗ ಎಲ್ಲೆಲ್ಲೂ ಜನಪ್ರಿಯವಾಗಿದೆ.
ಆದರೆ, ಝಗಝಗಿಸುವ ಬಣ್ಣಬಣ್ಣದ ಬೆಳಕಿನಲ್ಲಿ ಮಿನುಗಿ ಮಾಯವಾಗುವ ಫ್ಲ್ಯಾಶ್ ಬಲ್ಬ್‌ಗಳ ನಡುವೆ ಬದುಕಿದ ಈ ತಾರೆಯ ಕೊನೇ ಗಳಿಗೆಯ ಒಂಟಿತನ ಆ ಮಳೆಗಾಲದ ಸಂಜೆಗೆ ಮಾತ್ರ ಗೊತ್ತು.
 

‍ಲೇಖಕರು G

September 20, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ...

ಅಂಬೇಡ್ಕರ್ ಇಲ್ಲಿದ್ದಾರೆ..

ಅಂಬೇಡ್ಕರ್ ಅವರ ಬರಹಗಳ ಎಲ್ಲಾ ಸಂಪುಟವನ್ನು ಉಚಿತವಾಗಿ ಕನಡದ ಓದುಗರಿಗೆ ಸಿಗಲಿದೆ. ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಈಗಾಗಲೇ ೫ ಸಂಪುಟಗಳನ್ನು...

’ಧರ್ಮ ನಿರಪೇಕ್ಷತೆ, ಕೋಮುವಾದ ಮತ್ತು ನಮ್ಮೆದುರಿನ ಸವಾಲುಗಳು’ – ಶಶಿಧರ ಭಟ್

ಶಶಿಧರ ಭಟ್ ಕುಮ್ರಿ ಧರ್ಮ ನಿರಪೇಕ್ಷತೆ ಮತ್ತು ಕೋಮುವಾದ ಎಂಬ ಶಬ್ದ ನನ್ನ ಕಿವಿಗೆ ಬಿದ್ದುದು ಯಾವಾಗ ಎಂಬ ಪ್ರಶ್ನೆಗೆ ನನ್ನ ಬಳಿ ಸರಳ...

4 ಪ್ರತಿಕ್ರಿಯೆಗಳು

 1. malini guruprasanna

  Avala bagge ondu marelaagada ghatane ide. omme avalu yaavudo sandarshanadalli busy iddaga yaaro sweet tandu kottarante. baayige haakikonda marukshana avara maatu kivige bittante “Sweet lelo, MEENAKUMARI margayee, ab Pakeeza bahut chalegi”. Devayaani horage hogi sweet ugidu bandalante. aa vishada ondu tingalidee avalannu kaadittante. Thanks Umaji, olleya lekhanakkagi.

  ಪ್ರತಿಕ್ರಿಯೆ
 2. Uma Rao

  Thanks malini.avala vyktitvada bagge Neevu Innondu sukshma ghataneyannu tilisiddakkagi vaNdanegalu!
  What a woman!

  ಪ್ರತಿಕ್ರಿಯೆ
 3. mmshaik

  kone saalinalli idi baduka dukha hididittiri madam..mice artical…ivarella uridu bidda ‘toote’ taregaLu…!!!!! bhumigiLiyuttave..!!!!!!!!!!!!!!!!!!!!!!

  ಪ್ರತಿಕ್ರಿಯೆ
 4. Palahalli Vishwanath

  At one time I used to read many film magazines and I loved Devayani’s writing. It was witty and sharp. And everything was allowed.Mother India had similar writing(Baburao PAtel) As you said Shobha De and others are carrying forwarad her legacy

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: