ಡಾ ಸಿ ರವೀಂದ್ರನಾಥ್ ಕಾಡುವ ಹಾಯ್ಕುಗಳನ್ನು ಬರೆದಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಈ ಸಂಕಲನದಿಂದ ಆಯ್ದ ಕವಿತೆಗಳು ನಿಮಗಾಗಿ ಇಲ್ಲಿವೆ.
ಈ ಹಾಯ್ಕುಗಳ ವೈಶಿಷ್ಟ್ಯವನ್ನು ಬೆನ್ನುಡಿಯಲ್ಲಿ ವಿ ಎಂ ಮಂಜುನಾಥ್ ಪರಿಚಯಿಸಿದ್ದಾರೆ. ಅದೂ ಇಲ್ಲಿದೆ
ಅವಳ ಕಣ್ಣೀರಿನಿಂದ
ನನ್ನ ಮನ ಒದ್ದೆಯಾಗಿದೆ
ಚಿಗುರೊಡೆಯಬಹುದು.
–
ಕಾಲದ ಹಾದಿಯಲ್ಲಿ ನಡೆದಿದ್ದೇನೆ
ನನ್ನಲ್ಲಿರುವ ಪುಟ್ಟ
ಪುಟ್ಟ ಮಗುವನ್ನು ಕರೆದುಕೊಂಡು…
–
ನನ್ನ ದುಗುಡ ಮನಕ್ಕೆ
ಪರಿಚಯಿಸಿದ್ದೇನೆ ಸದಾ ಖುಷಿಯ
ಬುಲ್ ಬುಲ್ ಹಕ್ಕಿ ಹಾಡು.
–
ಸ್ಮಶಾನದಲ್ಲಿ
ಹೂವರಳಿದೆ
ಸಾವಿನ ನಿರೀಕ್ಷೆಯಲ್ಲಿ….
–
ಹೊತ್ತೊಯ್ಯುತಿದೆ ದೋಣಿ
ಆ ದಡಕೆ
ಈ ದಡದ ಕನಸು.
–
ಈ ಬೆಟ್ಟದಲ್ಲಿ ದಾರಿ
ಏರುತ್ತಿದೆಯೋ?
ಇಳಿಯುತ್ತಿದೆಯೋ?
–
ನನ್ನ ಜೊತೆ ಬೆಳೆದ
ಬೈಕ್ ಹಳೆಯದಾಗಿದೆ
ಮಾರಬೇಕು.
–
ಇಬ್ಬರ ಸವೆದ ಬಿಡಿ
ಭಾಗಗಳು ಪರಸ್ಪರ
ವಿದಾಯ ಹೇಳಿದವು.
–
ರಾಧೆಯನ್ನು ಬಳಸಿವೆ
ಕೊಳಲ ಸ್ವರಗಳು
ರುಕ್ಮಿಣಿಯ ಮೈ ತುಂಬ ಗಾಯ.
ಆಯಾ ಕ್ಷಣದ ಉಲ್ಲಾಸ, ತುಂಟತನ ಮತ್ತು ದುಗುಡ ಹೇಗೆ ಚಾರಿತ್ರಿಕವಾಗಿ ಉಳಿಯಬಹುದು ಎನ್ನುವುದಕ್ಕೆ ಈ ಕವಿ ಕಂಡುಕೊಂಡ ಮಾರ್ಗ ಇದು. ಇವು ಸಮಾಜಕ್ಕೆ ಒಳಪಡುವ ಒಳ್ಳೆಯತನದ ಬಗ್ಗೆ ಸ್ಪಷ್ಟ ಕಾರಣಗಳನ್ನು ಇಟ್ಟುಕೊಂಡೇ ಇಲ್ಲಿನ ಸಾಲುಗಳು ಮರಗಳಂತೆ ಹಾಯ್ಕುಗಳು ರೂಪ ಬದಲಾಯಿಸಿ, ಸಹಜವಾಗಿ ಬೆಳೆದು ನಿಂತಿವೆ.
ಬೌದ್ಧಿಕತೆಯನ್ನು ಬೃಹತ್ ಗ್ರಂಥಗಳ ಮೂಲಕ ಹೇಳಿ, ಓದುಗನನ್ನು ದಾರಿ ತಪ್ಪಿಸುವ ಇಂಥ ಹೊತ್ತಿನಲ್ಲಿ ಈ ಕವಿ ಮೂರು ಸಾಲುಗಳಲ್ಲಿ ಅತ್ಯಂತ ಆಪ್ತವಾಗಿ ಹೇಳಿದ್ದಾರೆ. ಜಪಾನೀ ಮನಸ್ಸು ಮತ್ತು ಕನ್ನಡದ ಮನಸ್ಸು ಹೇಗೆ ಪರಸ್ಪರ ಸಂವಾದಿಯಾಗಿ ಚಲಿಸಿವೆ ಎಂಬುದು ಇಲ್ಲಿನ ಹಾಯ್ಕುಗಳನ್ನು ಓದಿದಾಗ ಗೊತ್ತಾಗುತ್ತದೆ. ಆದ ಕಾರಣ ಅಲ್ಲಿನ ಹಾಯ್ಕು ಇಲ್ಲಿ ಈ ಕವಿಯ ಕೈಚಳಕದಲ್ಲಿ ‘ಮೂರು ಸಾಲು ಮರ’ವಾಗಿದೆ.
Congratulations Ravindranath
Guruprasad
ಸೂಪರ್,
waiting to buy
– ಕೇಶವ