’ಅವಳ’ ಮನೆ

ಆ ಮನೆಯನ್ನ ‘ತನ್ನ ಮನೆ’ ಅಂತ ಪಾಪ..

– ಭಾರತಿ ಬಿ ವಿ

ಅಪ್ಪ ಊರಿಂದ ಊರಿಗೆ ವರ್ಗವಾಗುವ ಕೆಲಸದಲ್ಲಿ ಇದ್ದರು. ಅವರು ಹೋದಲ್ಲೆಲ್ಲ ನಾವು ಬಾಲಂಗೋಚಿಗಳು. ಒಂದು ಊರಿಗೆ ಹೋಗಿ ಅಲ್ಲಿಗೆ ಅಡ್ಜಸ್ಟ್ ಆಗಿ, ಗೆಳತಿಯರನ್ನು ಸಂಪಾದಿಸಿಕೊಂಡು ಇನ್ನೇನು ಅವರೆಲ್ಲ ಆತ್ಮೀಯರಾದರಪ್ಪಾ ಅಂದುಕೊಳ್ಳುವಷ್ಟರಲ್ಲಿ ಮುಂದಿನ ಊರಿಗೆ ಎತ್ತಂಗಡಿ! ಮುಂದಿನ ಊರಿಗೆ ಹೋಗಿ ಅಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲಾಗದೇ, ವಿಫಲವಾದ ಮೊದಲ ಪ್ರೇಮದಲ್ಲಿನ ಹಾಗೆ ವಿರಹಕ್ಕೆ ಬಿದ್ದುಬಿಡ್ತಿದ್ದೆ. ಹಳೆ ಗೆಳತಿಯರ ಗುಂಗಲ್ಲೇ ಅತ್ತು, ಗೋಳುಕರೆದು, ಅಪ್ಪನ ಪ್ರಾಣ ತಿಂದು ಮತ್ತೆ ಹಿಂದಿನ ಊರಿಗೆ ಎರಡು ವಿಸಿಟ್ ಹಾಕುತ್ತಿದ್ದೆ. ಆಶ್ಚರ್ಯ ! ನಾನು ಈ ಕಡೆ ಹೊರಟ ಕೂಡಲೇ ಆ ಹಳೆಯ ಗೆಳತಿಯರು ನನಗೆ ವಿದಾಯ ಹೇಳಿ ಮನದ ಬಾಗಿಲು ಹಾಕಿಕೊಂಡು ಬಿಟ್ಟಿರುತ್ತಿದ್ದರು. ನಾನು ಮತ್ತೆ ಹೋದಾಗ ಯಾರೋ ಅಪರಿಚಿತರನ್ನು ಮಾತಾಡಿಸುವಂತೆ ಮಾತಾಡಿಸಿದಾಗ ನನಗೆ ತುಂಬಾ ದುಃಖವಾಗಿಹೋಗುತ್ತಿತ್ತು. ಮತ್ತಷ್ಟು ದಿನ ಅದಕ್ಕೆ ಅಳು !! ಆಮೇಲೆ ನಿಧಾನವಾಗಿ ವಿಧಿ ಇಲ್ಲದೇ ಪ್ರಿಯತಮನನ್ನು ಮರೆತು ಯಾರೋ ಅಪ್ಪ-ಅಮ್ಮ ಹುಡುಕಿದ ಗಂಡಿನ ಜೊತೆ ಮದುವೆಯಾಗೋ ಹಾಗೆ ಹೊಸ ಊರಿನ ಗೆಳತಿಯರ ಕಡೆ ನಿಧಾನಕ್ಕೆ ಮನಸ್ಸು ತಿರುಗಿಸಿಕೊಳ್ತಿದ್ದೆ …. ಅಪ್ಪ ಹೋಗುತ್ತಿದ್ದ ಎಲ್ಲ ಊರಲ್ಲೂ ಒಂದು ಸರಕಾರಿ ಕನ್ನಡ ಪ್ರಾಥಮಿಕ ಶಾಲೆ. ಅದೇ ಹಸಿರು ಸ್ಕರ್ಟ್, ಬಿಳಿ ಶರ್ಟ್ ಯೂನಿಪಾರ್ಮ್! ಶೂ ನಾವು ಕಂಡೂ ಇರಲಿಲ್ಲ, ಕೇಳೂ ಇರಲಿಲ್ಲ. ಹೀಗೆ ಈ ಊರಿಗೆ ಕಾಲಿಟ್ಟೆವಲ್ಲ ಆಗ ಬದುಕಿನಲ್ಲಿ ಸಂಭ್ರಮವೋ ಸಂಭ್ರಮ. ಯಾಕೆ ಅಂತೀರಾ? ಈ ಊರಿನಲ್ಲಿ ಎರಡು ಸ್ಕೂಲ್‌ಗಳಿದ್ದವು!! ಆದರೆ ಮುಂದೆ ಅದೇ ಒಂದು ದೊಡ್ಡ ತೊಂದರೆ ಆಗಿಹೋಯ್ತು. ಎರಡು ಸ್ಕೂಲ್‌ಗಳಲ್ಲಿ ಯಾವುದನ್ನು ಆರಿಸಿಕೊಳ್ಳುವ ಪ್ರಶ್ನೆ ಎದುರಾದಾಗ ಅಬ್ಬಾ! ಎಂಥಾ ಸಂದಿಗ್ಧ. ಒಂದು ಸ್ಕೂಲಿನಲ್ಲಿ ೭ ನೇ ಕ್ಲಾಸ್‌ನವರೆಗೆ ಮಾತ್ರ ಇತ್ತು. ಮತ್ತೊಂದರಲ್ಲಿ ಹತ್ತರವರೆಗೂ ಇತ್ತು. ಮೊದಲನೆಯ ಸ್ಕೂಲ್‌ ಹೆಣ್ಣುಮಕ್ಕಳಿಗೆ ಮಾತ್ರ . ಎರಡನೆಯದು co-education ಶಾಲೆ. ಮೊದಲನೆಯದು ಮನೆಯಿಂದ ಒಂದೂವರೆ ಕಿಲೋಮೀಟರ್ ದೂರ. ಎರಡನೆಯದನ್ನು ತಲುಪೋದಿಕ್ಕೆ ಮನೆಯಿಂದ ಸ್ವಲ್ಪ ಜೋರಾಗಿ ಎಡವಿ ಬಿದ್ದರೆ ಆಯ್ತು. ಕೊನೆಗೆ ಅಕ್ಕನನ್ನು ಮನೆ ಹತ್ತಿರದ ಸ್ಕೂಲಿಗೆ ಸೇರಿಸಿ ನನ್ನನ್ನು ದೂರದ ಸ್ಕೂಲಿಗೆ ಸೇರಿಸಿದಾಯ್ತು! ಬಹುಶಃ ನಾನೇ ಆರಿಸಿಕೊಂಡಿದ್ದಿರಬೇಕು ದೂರದ ಸ್ಕೂಲನ್ನು … ಒಂದಿಷ್ಟು ಅಲೆದಾಡುವ ಅವಕಾಶ ಸಿಗುತ್ತದೆ ಅನ್ನೋ ಆಸೆಯಿಂದ. ಸ್ಕೂಲ್‌ಗೆ ಸೇರಿದ ಮೇಲೆ ಯಥಾಪ್ರಕಾರ ಒಂಟಿಯಾಗಿ ನಡೆಯುತ್ತಿದ್ದೆ ಒಂದಿಷ್ಟು ದಿನ. ಹಾಗೆ ಹೋಗುವಾಗ ಅಕ್ಕ ಪಕ್ಕ ಕಣ್ಣಾಡಿಸುತ್ತ ಒಬ್ಬಳೇ ನಿಧಾನಕ್ಕೆ ನಡೆಯೋದು ಅಭ್ಯಾಸವಾಯ್ತು. ಮೊದಲಿಗೆ ಸಿಗ್ತಿದ್ದ PWD ಗೆ ಸೇರಿದ ಕಾಲೊನಿ, ಅದಾದ ಮೇಲೊಂದು ದೊಡ್ಡ ಮನೆ, ಅಲ್ಲಿಂದ ಮುಂದೆ ದಾಟಿ ನಡೆದರೆ ಶವರ್ ಟೆಂಟ್ (ಮಳೆಗಾಲದಲ್ಲಿ ಸಿನೆಮಾ ನೋಡೋದಿಕ್ಕೆ ಕೂತರೆ ಫ್ರೀ ಸ್ನಾನ ಆಗ್ತಿದ್ದರಿಂದ ಅದಕ್ಕೆ ಈ ಹೆಸರು), municipality ಆಫೀಸ್, ಬಸ್ ಸ್ಟ್ಯಾಂಡ್, ದಾಟಿದರೊಂದು ಕರಿ ಬೆಲ್ಲದ ಕೊಬ್ಬರಿ ಮಿಠಾಯಿ ಮಾರುತ್ತಿದ್ದ ಡಬ್ಬ ಅಂಗಡಿ, ಮುಂದೆ ಊರೊಳಗೆ ಹೋಗ್ತಿದ್ದ ಕವಲುದಾರಿ ದಾಟಿ ನಡೆದರೆ ನನ್ನ ಸ್ಕೂಲು. ಈ ದೊಡ್ಡ ಮನೆ ಆಗಿನ ಬಾಲ್ಯದ ಮನಸ್ಸಿಗಂತೂ ಅರಮನೆಯೇ ಅನ್ನಿಸುತ್ತಿತ್ತು. ಅಲ್ಲಾಡಿಕೊಂಡು ನಡೆದು ಆ ಮನೆಯ ಹತ್ತಿರ ಬರೋ ಅಷ್ಟರಲ್ಲಿ ಸಿಕ್ಕಾಪಟ್ಟೆ ಬಾಯಾರಿಕೆಯಾಗಿ ಹೋಗ್ತಿತ್ತು. ನಿಜಕ್ಕೂ ಬಾಯಾರಿಕೆ ಆಗ್ತಿತ್ತೋ ಅಥವಾ ಆ ದೊಡ್ಡಮನೆಯ ಒಳಗೆ ಹೋಗಿ ನೋಡಬೇಕು ಅನ್ನೋ ಮೋಹಕ್ಕೆ ಸುಳ್ಳೇ ಬಾಯಾರಿಕೆ ಆಯ್ತೋ ಅದೂ ಗೊತ್ತಿಲ್ಲ. ಕಾರಣ ಎಂಥದ್ದೋ ಒಂದು .. ಒಟ್ಟಿನಲ್ಲಿ ನೀರು ಕೇಳೋ ನೆಪದಲ್ಲಿ ಅವರ ಮನೆ ಒಳಗೆ ಕಾಲಿಟ್ಟೆ. ನಮ್ಮ ಸಣ್ಣಾತಿಸಣ್ಣ ಮನೆಗೆ ಹೋಲಿಸಿ ಆ ಮನೆಯ ವೈಭವಕ್ಕೆ ಬೆರಗಾಗಿ ನಿಂತು ನೋಡುವಷ್ಟರಲ್ಲಿ ನೀರು ತಂದವರನ್ನು ನೋಡಿದೆ. ಚೆಂದಕ್ಕಿದ್ದ ಹೆಂಗಸು … ಉದ್ದ ಜಡೆ .. ಸಣ್ಣ ಊರಿನ ಲೆಕ್ಕಕ್ಕೆ ತೆಗೆದುಕೊಂಡರೆ ಸುಮಾರು ಮಾಡ್ ಆಗಿದ್ದ ಆಕೆಯನ್ನೇ ಬೆರಗಾಗಿ ನೋಡಿದ್ದೆ. ನೀರು ಕೊಟ್ಟ ಅವರು ಚೆಂದಕ್ಕೆ ಮಾತಾಡಿಸಿದರು. ಮೊದಲ ದಿನವೇ ಆ ಹೆಂಗಸು ಸಿಕ್ಕಾಪಟ್ಟೆ ಇಷ್ಟವಾಗಿ ಹೋದರು. ಆಮೇಲಿನ ದಿನಗಳಲ್ಲಿ ಅದೊಂದು ಅಭ್ಯಾಸವೇ ಆಗಿ ಹೋಯ್ತು. ಮನೆಯಲ್ಲಿ ಸುಮಾರು ಜನ ಆಳು ಕಾಳುಗಳು. ಹಾಗಾಗಿ ಮನೆಯ ಜನರಿಗೆ ಹೆಚ್ಚು ಕೆಲಸವಿರಲಿಲ್ಲ ಅನ್ನಿಸುತ್ತದೆ. ದಿನವೂ ನೀರು ಕೊಡಲು ಅವರೇ ಬರುತ್ತಿದ್ದರು. ನಾನು ನಿಂತಲ್ಲೇ ಆ ಮನೆಯ ವೈಭವದ ಕಡೆ ಕಣ್ಣು ಹಾಯಿಸುತ್ತಾ ನೀರು ಕುಡಿದು ಎರಡು ಮಾತಾಡಿ ಹೊರಡುತ್ತಿದ್ದೆ. ಸಂಜೆ ಮನೆಗೆ ಹಿಂತಿರುವಾಗ ಒಂದುಸಲ ಅವರ ಮನೆಗೆ ಭೇಟಿ. ಹೀಗಿರುವಾಗ ಒಂದು ದಿನ ನೀರು ಕೇಳಲು ಹೋದರೆ ಕೊಟ್ಟವನು ಆ ಮನೆಯ ಆಳು. ನನ್ನ ಮುಖ್ಯ ಆಕರ್ಷಣೆ ಇದ್ದಿದ್ದೇ ಆಕೆಯಿಂದ ನೀರು ಪಡೆಯುವುದು. ಈ ಆಳು ನೀರು ತಂದಾಗ ಯಾಕೋ ಮನಸ್ಸು ಪಿಚ್ಚೆನಿಸಿ ಅವರ ಬಗ್ಗೆ ವಿಚಾರಿಸಿದಾಗ ಅವರಿಗೆ ಹುಷಾರಿಲ್ಲವಾದ್ದರಿಂದ ಮೈಸೂರಿಗೆ ಹೋಗಿದ್ದಾರೆ ತೋರಿಸಿಕೊಂಡು ಬರೋದಿಕ್ಕೆ ಅಂತ ಹೇಳಿದ. ಏನಾಗಿದೆ ಅಂತೆಲ್ಲ ಕೇಳುವಷ್ಟು ದೊಡ್ಡವಳೂ ಆಗಿರಲಿಲ್ಲ ಮತ್ತು ಸಲಿಗೆಯೂ ಅವನಲ್ಲಿ ಇಲ್ಲದ್ದರಿಂದ ಸುಮ್ಮನೆ ಹೊರಟುಬಿಟ್ಟೆ. ಆ ನಂತರ ಎಷ್ಟೊಂದು ದಿನಗಳು ಕಳೆದರೂ ಆಕೆ ಬರಲೇ ಇಲ್ಲ. ನನಗೆ ನೀರು ಕುಡಿಯುವ ಉಮೇದು ಕೂಡಾ ಇರಲಿಲ್ಲ ಈಗ ! ಅವತ್ತಿನ ದಿನ ನನಗೆ ಸ್ಪಷ್ಟವಾಗಿ ನೆನಪಿದೆ … ಅವರ ಮನೆಯ ಮುಂದೆ ತುಂಬ ಜನ ನಿಂತಿದ್ದರು. ನನಗೆ ಕುತೂಹಲ, ಭಯ ಎಲ್ಲ ಒಟ್ಟೊಟ್ಟಿಗೆ ನುಗ್ಗಿ ಬಂದು ಆ ಕಡೆ ಓಡಿದೆ. ಅಲ್ಲಿ ಆಕೆ ನಿಶ್ಚಲವಾಗಿ ಮಲಗಿದ್ದರು!! ಚಿಕ್ಕವಳಾಗಿದ್ದ ನನಗೆ ಅಳು ಮತ್ತು ಭಯ. ಮನೆಯ ಮುಂದೆ ಮಣ್ಣಿನ ನೆಲದಲ್ಲಿ ಆಕೆಯನ್ನು ಮಲಗಿಸಿದ್ದ ಚಟ್ಟವಿತ್ತು .. ಅದೂ ಗೇಟಿನ ಆಚೆ. ನನಗೆ ಅನಾಥಳ ಹಾಗೆ ಬೀದಿಯಲ್ಲಿ ಮಲಗಿಸಿದ್ದ ಶವವನ್ನು ಕಂಡು ತುಂಬ ಅಳು ಬಂದು ಬಿಟ್ಟಿತು. ಮನೆಯ ಒಳಗೆ ಯಾಕೆ ಇಟ್ಟಿಲ್ಲ ಅಂತ ತುಂಬ ಕೆಟ್ಟದೆನಿಸಿತು. ಅಲ್ಲಿಂದ ಹಾಗೇ ಆಕೆಯ ದೇಹ ಸ್ಮಶಾನಕ್ಕೆ ಹೊರಟಿತು .. ಬೀದಿಯಲ್ಲಿ ಬಿದ್ದಿದ್ದ ಪುರಿ, ಗುಲಾಬಿ ಹೂಗಳ ಪಕಳೆಗಳು ಬಿದ್ದಿದ್ದ ದಾರಿಗುಂಟ ನಡೆದು ಹೊರಟಾಗಲೂ ಬೀದಿಯಲ್ಲಿ ಮಲಗಿದ್ದ ಅವರ ಶವದ ಚಿತ್ರಣ ಕಣ್ಣ ಮುಂದೆ … ಆಮೇಲೆ ಗೊತ್ತಾಯಿತು ಆಕೆ ಸತ್ತ ನಕ್ಷತ್ರ ಸರಿ ಇರಲಿಲ್ಲವಂತೆ (ನಾನು ಈಗೆಲ್ಲ ತಮಾಷೆ ಮಾಡುತ್ತೇನೆ ನಕ್ಷತ್ರ ಸರಿ ಇಲ್ಲದ್ದಕ್ಕೇನೆ ಮತ್ತೆ ಮನುಷ್ಯ ಸಾಯೋದು. ಸರಿ ಇದ್ದಿದ್ದರೆ ಸಾಯ್ತಲೇ ಇರ್ಲಿಲ ಅಂತ!) ಹಾಗಾಗಿ ಮನೆ ಒಳಗೆ ‘ಹೆಣ’ ತಂದರೆ ಮನೆಯನ್ನ ಶುದ್ಧಿ ಮಾಡಿಸಿ ಬಣ್ಣ ಹೊಡೆಯಬೇಕು ಅಂತ ಯಾವನೋ ಹೇಳಿದ್ದನಂತೆ ! ಹಾಗಾಗಿ ಮನೆಯ ಒಳಗೆ ತಂದರೆ ತಾನೇ ಈ ತಾಪತ್ರಯವೆಲ್ಲ ಅಂತ ಅತೀವ ಬುದ್ಧಿವಂತಿಕೆ ಉಪಯೋಗಿಸಿ ಬೀದಿಯಲ್ಲೇ ‘ಹೆಣ’ ಇಟ್ಟಿದ್ದರಂತೆ. ಆ ಮನೆಯನ್ನ ‘ತನ್ನ ಮನೆ’ ಅಂತ ಪಾಪ ಆ ಹೆಂಗಸು ಭ್ರಮಿಸಿತ್ತು …]]>

‍ಲೇಖಕರು G

July 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ...

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಮುಂಬಯಿಯ ಕನ್ನಡ ಸಾಹಿತ್ಯ ಲೋಕ

ಡಾ. ಬಿ. ಜನಾರ್ಧನ್‌ ಭಟ್  ಮುಂಬಯಿಯ ಕನ್ನಡ ಸಾಹಿತ್ಯ ಲೋಕದ ಜತೆಗೆ ನನಗೆ ನಿಕಟ ಬಾಂಧವ್ಯ ಇರುವುದರಿಂದ ಅದರ ವೈಶಿಷ್ಟ್ಯವನ್ನು ಗ್ರಹಿಸಿ...

21 ಪ್ರತಿಕ್ರಿಯೆಗಳು

 1. D.RAVI VARMA

  ಆಮೇಲೆ ಗೊತ್ತಾಯಿತು ಆಕೆ ಸತ್ತ ನಕ್ಷತ್ರ ಸರಿ ಇರಲಿಲ್ಲವಂತೆ (ನಾನು ಈಗೆಲ್ಲ ತಮಾಷೆ ಮಾಡುತ್ತೇನೆ ನಕ್ಷತ್ರ ಸರಿ ಇಲ್ಲದ್ದಕ್ಕೇನೆ ಮತ್ತೆ ಮನುಷ್ಯ ಸಾಯೋದು. ಸರಿ ಇದ್ದಿದ್ದರೆ ಸಾಯ್ತಲೇ ಇರ್ಲಿಲ ಅಂತ!) ಹಾಗಾಗಿ ಮನೆ ಒಳಗೆ ‘ಹೆಣ’ ತಂದರೆ ಮನೆಯನ್ನ ಶುದ್ಧಿ ಮಾಡಿಸಿ ಬಣ್ಣ ಹೊಡೆಯಬೇಕು ಅಂತ ಯಾವನೋ ಹೇಳಿದ್ದನಂತೆ ! ಹಾಗಾಗಿ ಮನೆಯ ಒಳಗೆ ತಂದರೆ ತಾನೇ ಈ ತಾಪತ್ರಯವೆಲ್ಲ ಅಂತ ಅತೀವ ಬುದ್ಧಿವಂತಿಕೆ ಉಪಯೋಗಿಸಿ ಬೀದಿಯಲ್ಲೇ ‘ಹೆಣ’ ಇಟ್ಟಿದ್ದರಂತೆ.
  ಆ ಮನೆಯನ್ನ ‘ತನ್ನ ಮನೆ’ ಅಂತ ಪಾಪ ಆ ಹೆಂಗಸು ಭ್ರಮಿಸಿತ್ತು …
  ಯಾಕೋ ನಿಮ್ಮ ಲೇಖನ ಓದಿದ ಮ್ಯಾಲೆ ನನಗೆ ಕವಿ ಮಾತು ನೆನಪಿಗೆ ಬರ್ತಿದೆ “ಅಲ್ಲಿರುವುದು ನಮ್ಮನೆ ,ಇಲ್ಲಿರುವುದು ಸುಮ್ಮನೆ ”
  ಎಂಥಾ ದುರಂತ ನೋಡಿ ,ಬದುಕಿನುದ್ದಕ್ಕೂ ಆ ಮನೆ ಅದರ ಗೌರವ, ಒಪ್ಪು, ಓರಣ , ಚಿಂತೆ, ಕಷ್ಟ, ಸುಖ ಎಲ್ಲವಕ್ಕೂ ಕಾರಣಳಾದ, ಹಾಗು ಎಲ್ಲವನ್ನು ಅನುಭವಿಸಿದ, ಅದಕ್ಕಾಗಿಯೇ ಜೀವ ತೇಯ್ದ ಜೀವಿ ತನ್ನ ಕೊನೆಗಾಲದಲ್ಲಿ ,ಮನೆಯಿಂದ ಹೊರಗೆ
  ಹೆಣವಾಗಿ ಹೋಗುವುದು……..ಅಬ್ಬಾ ಮೇಡಂ, ಒಂದಿಸ್ತು ಹೊತ್ತು ಕರಳು ಹಿಂದಿಬಿಡ್ತು ನಿಮ್ಮ ಬರಹ , ಇದು ಸಾವಿನಲ್ಲಿ ಮಾತ್ರವಲ್ಲ, ಹುಟ್ಟಿನಲ್ಲು ಈ ಕ್ರೂರ ಪದ್ಧತಿ ಇದೆ.
  ಕನ್ನಡದ ಬಹು ದೊಡ್ಡ ಸಂವೇದನಾ ಶೀಲ ಬರಹಗಾರರಾದ “ಬೀ chi ” ಹುಟ್ಟಿದಾಗ ಬಹು ಕೆಟ್ಟ ನಕ್ಷತ್ರದಲ್ಲಿ ಹುಟ್ತಿದ್ದರೆಂದು ಹುಟ್ಟಿದ ಕೂಡಲೇ ತಾಯಿಯ ಸಾವಿಗೆ ಕಾರಣನಾದನೆಂದು….. ಅವರನ್ನು ಜಗುಲಿಗೆ ತಂದು ಹಾಕಿದ್ದರಂತೆ
  ಆನಂತರ ಅವರ ಅತ್ತೆ ಅವರನ್ನು ಸಾಕಿ ಸಲುಹಿದ್ದು, ಅವರ “ಭಯಾಗ್ರಫಿ “ಯಲ್ಲಿ ಬರೆದುಕೊಂಡಿದ್ದಾರೆ……
  ಆದರೆ ನನಗನ್ನಿಸೋಹಾಗೆ .ಈ ತರಹದ ಸಮಸ್ಯೆ ,ಕೆಳಜಾತಿ,ಕೆಳವರ್ಗಗಳಲ್ಲಿ ಇಲ್ಲವೇನೋ …. ಇತ್ತೀಚಿಗೆ ಬಿಳಿಮಲೆ ಅವರ ಸಾವಿನ ಹಾಡಿನ ಬಗ್ಗೆ ಲೇಖನ ಓದಿದ್ದೆ,
  ಈಗ ಈ ನಿಮ್ಮ ಲೇಖನ ನನಗೆ “ಸಾವು ಎನ್ನುವ ಮಾಯಾವಿ ” ಅದು ತಂದೊಡ್ಡುವ ಸಮಸ್ಯೆಗಳು, ಅದರ ಹಿಂದಿರುವ ಪದ್ದತಿಗಳು, ಆ ಸಾವಿನ ಮನೆಯ ಸೂತಕ,ಅಲ್ಲಿ ಉಂಟಾಗುವ ಧೀರ್ಗ ಮೌನ …ಕತ್ತಲೆ … ಎಲ್ಲವು ತುಂಬಾ ಕಾಡುತ್ತಿವೆ.,
  ಮತ್ತೆ ಮತ್ತೆ ,ಡಿವಿಜಿ ನೆನಪಾಗುತ್ತಾರೆ ….
  ಬದುಕು ಜಟಕಾಬಂಡಿ ,ವಿಧಿ ಅದರ ಸಾಹೇಭ,
  ಕುದುರೆ,ನೀನ್ ಅವ ಪೇಳ್ದಂತೆ ಪಯಣಿಗರು ,
  ಮದುವೆಗೋ, ಮಸಣಕೋ ಹೊಗೆನ್ದಕದೆಗೋಗೋ,
  ಪದಕುಸಿವ ನೆಲವಿಹುದು ಮಂಕುತಿಮ್ಮ ………
  ರವಿ ವರ್ಮ ಹೊಸಪೇಟೆ .

  ಪ್ರತಿಕ್ರಿಯೆ
   • D.RAVI VARMA

    ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯ ಅನ್ನೋ ಹಾಗೆ ಲೇಖಕರು ದೊಡ್ಡ ದೊಡ್ಡ ಲೇಖನ ಬರೆಯುತ್ತಾರೆ ,ನಾನು ಅದನ್ನು ಓದಿ ಪ್ರತಿಕ್ರಿಯೆ ಬರೆಯುತ್ತೇನೆ ಅಸ್ಟೆ,ಅಲ್ಲವೇ ನನಗನ್ನಿಸ್ಸಿದ್ದನ್ನು ಬರೆಯೋಕೆ ಸಂಕೋಚವೇಕೆ ,ಅಡಿಗರು ಹೇಳಿದ ಹಾಗೆ “ಯಾರು ಕೆಳುವಿರೆಂದು ನಾನು ಹಾಡುವುದಿಲ್ಲ ಹಾಡುವುದು ಅನಿವಾರ್ಯ ಕರ್ಮ ಎನಗೆ ” ಮೇಡಂ ನಾನು ಒಬ್ಬ ಓದುಗ ,ಓದಿದಮೇಲೆ ನನಗನಿಸೋ ಅನ್ನಿಸಿಕೆ ಬರೆಯುತ್ತೇನೆ ಅವಧಿ ಗೆ ನಾನು ಋಣಿ ಏಕೆಂದರೆ ನನ್ನ ಅಭಿಪ್ರಾಯಗಳನ್ನು ಎಡಿಟ್ ಮಾಡದೆ ಹಾಕುತಿದ್ದರೆ, ಅದು ನನ್ನಲ್ಲಿ ಒಂದಿಸ್ತು ಉತ್ಸಾಹ ತಂದಿದೆ, ಹಾಗಾಗಿ ನಾನು ಹಲವೊಮ್ಮೆ ಪ್ರತಿಕ್ರಿಯೆ ಬರೆಯುತ್ತಿದ್ದೇನೆ . ನಿಮ್ಮ ಅಭಿಪ್ರಾಯಕ್ಕೆ ಪ್ರೀತಿಗೆ ವಂದನೆಗಳು

    ಪ್ರತಿಕ್ರಿಯೆ
 2. N.viswanatha

  Nijavaagaloo hrudayasparshi lekhana.Eee tharaha nambikegalu ellaralloo ide.N.VISWANATHA

  ಪ್ರತಿಕ್ರಿಯೆ
 3. shama, nandibetta

  ಭಾರತಿ, ಕರುಳು ಹಿಂಡಿದಂತಾಯ್ತು… ಆವರೆಗೂ ಅದೇ ಜೀವವಲ್ಲವೇ ಗಂಧದ ಕೊರಡಿನಂತೆ ತೇಯ್ದುಕೊಂಡು ದೀಪ ಬೆಳಗಿದ್ದು …ಮನೆಯ ನಕ್ಷತ್ರ ಕಳಚಿ ಬಿದ್ದ ಮೇಲೆ ಆ ಮನೆಯ ನಕ್ಷತ್ರ ಸರಿಯಿಲ್ಲದೇ ಇರುವುದೇ ಹೌದು… ಮನುಷ್ಯ ಸ್ವಾರ್ಥಿಯಾಗುವ ಪರಿ ಹೆಂಗೆಲ್ಲಾ ಇರುತ್ತದೆ. ಇವೆಲ್ಲಾ ನಮ್ಮ ಒಳಗೆ ಹುಟ್ಟುನಿಂದ ಬರುತ್ತವೇನೋ..

  ಪ್ರತಿಕ್ರಿಯೆ
  • D.RAVI VARMA

   ಮೇಡಂ ಹುಟ್ಟಿನಿಂದ ಏನು ಬರಲ್ಲ, ಆದರೆ ನಮ್ಮ ಸಂಸ್ಕಾರ, ಸಂಸ್ಕೃತಿ, ನಾಗರಿಕತೆ ,ಮೌಡ್ಯ ಬದುಕಿನ ರೀತಿ ಇವೆಲ್ಲವೂ ಕಾರಣವಸ್ತೆ ನಮ್ಮ ವಿವೆಚನರಹಿತ ಬದುಕು, ಭಯ , ಇನ್ನು ಹಲವೊಮ್ಮೆ ನಾವು ನಮಗೆ ಗೊತ್ತಿಲ್ಲದೇ ಒಪ್ಪಿಕೊಂಡಿರುವ, ಅಪ್ಪಿಕೊಂಡಿರುವ, rituals ,ನಾವು ಬೇರೆಲ್ಲ ವಿಷಯದಲ್ಲಿ ನಮ್ಮ ಹಿರಿಯರ ಬದುಕಿನ ವಿಚಾರಗಳನ್ನು ಮೀರಿ ನಮ್ಮ ಅಬಿರುಚಿ, ಆಸಕ್ತಿ ಗೆ ತಲ್ಕ್ಕಂತೆ ಬದುಕು ರೂಪಿಸಿಕೊಂಡಿದ್ದರು ಈ ವಿಷಯಗಳಲ್ಲಿ ಮಾತ್ರ ಇನ್ನು ಅಲ್ಲೇ ಇದ್ದೇವೆ ಅಲ್ಲವೇ. ಹಾಗೆ ನನಗೆ ಹಿರಿಯರ ಬಗ್ಗೆ ಅಗೌರವ ಇಲ್ಲ ಅವರ ಬದುಕು ನಮ್ಮ ಬದುಕಿಗಿಂತ ಹೆಚ್ಚು ಅರ್ಥಪುರ್ಣವಾಗಿತು, ಹೆಚ್ಚು ಕುಶಿಯಾಗಿತ್ತು ,, ಆದರೆ ನಾವೇ ಎಲ್ಲೋ ತ್ರಿಶಂಕುಗಳಾಗಿ ಬದುಕುತ್ತಿದ್ದೇವೆ ಅನ್ನಿಸುತ್ತೆ ಅಲ್ಲವೇ……..
   ರವಿ ವರ್ಮ ಹೊಸಪೇಟೆ

   ಪ್ರತಿಕ್ರಿಯೆ
 4. -ರವಿ ಮೂರ್ನಾಡು, ಕ್ಯಾಮರೂನ್

  ಭಾರತಿ ಅಕ್ಕ .. ಚೆನ್ನಾಗಿದೆ ಮನಸ್ಸಿನ ಮೌನ ಸಂವಾದ.ಯಾಕೆ ಮನಸ್ಸು ಅಂತ ಉಲ್ಲೇಖಿಸಿದೆ ಅಂದರೆ, ಮಾತಿಗಿಳಿದಿದ್ದು ನೀವು. ಪ್ರತಿಮೆಗಳಾಗಿ ಕುಳಿತುಕೊಂಡಿದ್ದು ನಾವು. ಇಲ್ಲಿ ಒಂದು ಮಾತು ” ಬಾಯಾರಿಕೆ” ಅಂತ ಬಂದಿದೆ.ನಾನು ಕಂಡ ಮೊತ್ತ ಮೊದಲ ಇದರ ನಾನಾ ಮುಖಗಳು … ಇಲ್ಲಿಯೇ ಈ ಅವಧಿಯ ಅಂಗಳದಲ್ಲಿ.
  ಅವಧಿ ತುಂಬಾ ಖುಷಿ ಆಗುತ್ತಿದೆ.

  ಪ್ರತಿಕ್ರಿಯೆ
 5. D.RAVI VARMA

  ಭಾರತಿ ಮೇಡಂ ನಿಮ್ಮ ಲೇಖನ ನನ್ನನ್ನು ಮತ್ತೆ ಮತ್ತೆ ಕಾಡುತಿದೆ, ಅಕಸ್ಮಾತ್ ನಾನು ಸತ್ತಾಗ ಕೂಡ ನಕ್ಷತ್ರ ಸರಿಯಿಲ್ಲ ಎಂದು ನಾನು ಕಟ್ಟಿದ ಪ್ರೀತಿಯ ಕನಸಿನ ಮನೆಯಿಂದ ಕೂಡ ಹೊರಗೆ kalisibiduttareno ಎನ್ನುವ ಭಯ ಕಾಡ್ತಾ ಇದೆ ನನ್ನ ಬೆವರಿನ ವಾಸನೆ ಈ ಮನೆಯಲ್ಲಿ ಇದೆ, ನಾನು manekattidaaga ನಮ್ಮಮ್ಮನ ಮುಕ್ಖದ ನಲಿವು ನಂತರದ ನೋವು ಇಲ್ಲಿದೆ, ಎಸ್ತೋಬಾರಿ ಆ ಬಡ್ಡಿ ಸಾಲದ ನೋವಿನಲ್ಲಿ ಕುಂಗಿ ಕುಸಿದು ಹೋಗಿದ್ದರು ,ನನ್ನ ಮನೆಯೇ ಆ ಅಂದದ ಮುಖ ನೋಡಿ ಎಲ್ಲವನ್ನು ಕಳೆದುಕೊಂಡಿದ್ದೇನೆ , ಆ ಮನೆಯ ಎಲ್ಲ ಮೂಲೆ ಮೂಲೆ ಗಳಲ್ಲಿ ಕೂತು ಅತ್ತಿದ್ದೇನೆ ,ನನ್ನ ಸಂಭಂದಿಕರ ಮುಂದೆ ನಾನು ಮನೆ ಮಾಲೀಕ ಎಂದು ಫೋಸ್ ಕೊಟ್ಟಿದ್ದೇನೆ ,ಅಕಸ್ಮಾತ್ ನಾನು ಸತ್ತಾಗ ನನ್ನನ್ನು ಈ ಮನೆ ಒಳಗೆ ಸೇರಿಸದಿದ್ದರೆ ಎನ್ನುವ ಚಿಂತೆ ತುಂಬಾ ಕಾಡುತ್ತಿದೆ ….. ಓ ನಕ್ಷತ್ರವೇ ನಾನು ಇಲ್ಲಿವರೆಗೂ ಏನನ್ನು ಕೇಳಿಲ್ಲ, ಕೊನೆ ಪಕ್ಷ ನನ್ನ ಸಾವಿಗೆ ಮಾತ್ರ ನೀನು ನನ್ನನ್ನು ಕಾಡಬೇಡ ನನ್ನ ಹತ್ತಿರ ಬರಬೇಡ, ನಾನು ಸತ್ತನಂತರ ನಿನ್ನ choice ಎನನಾದರೂ ಮಾಡಿಕೊ ……… ನಾನು ಕುಶಿಯಾಗಿ ಸಾಯಲು ಹಾಗೆ ನನ್ನ ಮನೆಯಿಂದ ಹೊರಹೋಗಲು ನನಗೆ ಅವಕಾಶ ಮಾಡಿಕೊಡು .
  ರವಿ ವರ್ಮ ಹೊಸಪೇಟೆ

  ಪ್ರತಿಕ್ರಿಯೆ
  • bharathi

   ರವಿವರ್ಮ ಅವರೇ .. ನಿಮ್ಮ ಆಸೆ ಈಡೇರಲಿ. ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಅಂತ ನಂಬುವವಳು ನಾನು. ಆದರೂ ನಿಮ್ಮ ನೋವು ನನಗೆ ಅರ್ಥವಾಯ್ತು .. ಈಗ ಬದುಕಿನ ಬಗ್ಗೆ ಮಾತ್ರ ಯೋಚಿಸಿ. ಸಾವಿನ ಬಗ್ಗೆ ಕಾಲ ಬಂದಾಗ ಯೋಚಿಸಿದರಾಯ್ತು

   ಪ್ರತಿಕ್ರಿಯೆ
   • D.RAVI VARMA

    ಮೇಡಂ ನಿಮಗೆ ನಿಮ್ಮ ಚಿಂತನಗೆ ನಿಮ್ಮ ಬದುಕಿನ ಪ್ರೀತಿಗೆ ಹೃದಯಪೂರ್ವಕ ವಂದನೆಗಳು

    ಪ್ರತಿಕ್ರಿಯೆ
 6. Anuradha.rao

  ಅವನು ,ಅವಳು ಅನ್ತಿರ್ತೀವಿ ..ಸತ್ತ ಮೇಲೆ ಅದು ಆಗಿಹೊಗ್ತೀವಿ ..ಅವರು ಹೇಗಿದ್ದಾರೆ ಅನ್ನುವುದು ಸತ್ತ ಕೂಡಲೇ ಬಾಡಿ ಯಾವಾಗ ತರ್ತಾರಂತೆ ಅಂತಾರೆ …ನಿಮ್ಮಲ್ಲಿ ನಾನು ನನ್ನನ್ನೇ ಕಂಡುಕೊಂಡೆ …ವಾಸ್ತವ .

  ಪ್ರತಿಕ್ರಿಯೆ
 7. Kumara Raitha

  ನಿಮ್ಮ ಬರಹ ಓದಿ ಒಂಥರಾ ತಲ್ಲಣ…. ‘ಆ ಮನೆಯನ್ನ ‘ತನ್ನ ಮನೆ’ ಅಂತ ಪಾಪ ಆ ಹೆಂಗಸು ಭ್ರಮಿಸಿತ್ತು’ ಈ ಸಾಲು ಆ ತಲ್ಲಣವನ್ನು ಹೆಚ್ಚು ಮಾಡ್ತಾ ಇದೆ. ನಾವೆಲ್ಲ ಇಂಥ ಭ್ರಮೆಗಳಲ್ಲಿ ಬದುಕ್ತಾ ಇದ್ದೀವಿ ಅನಿಸುತ್ತೆ… ಇಂಥ ಭ್ರಮೆ..ಅನಿಶ್ಚಯ ಮೀರೋಕೆ ಬುದ್ಧ..ಮಹಾವೀರ..ಬಾಹುಬಲಿ…ಅಕ್ಕ..ಅಲ್ಲಮ ಅವರೆಲ್ಲ ತಮ್ಮೊಳಗೆ ಹೋರಾಟ ಮಾಡಿದರು ಅನಿಸುತ್ತೆ… ಶಕ್ತ ಬರವಣಿಗೆ ಭಾರತಿ…ಅಭಿನಂದನೆ…

  ಪ್ರತಿಕ್ರಿಯೆ
 8. anonymus

  ರವಿವರ್ಮರ ಕಮೆಂಟ್ಗಳನ್ನು ‘ಅವಧಿ’ ಎಡಿಟ್ ಮಾಡದೆ ಹಾಕಲಿ, ಸಂತೋಷ. ಆದರೆ ಶಿವರುದ್ರಪ್ಪನವರ ಸಾಲುಗಳನ್ನು ಅಡಿಗರದ್ದು ಎಂತಲೂ, ಏಣಗಿ ಬಾಳಪ್ಪನವರನ್ನು ಬಾಳಪ್ಪ ಹುಕ್ಕೇರಿಯೆಂತಲೂ.. ಹೀಗೆಲ್ಲಾ ಭಾವಿಸಿಕೊಂಡು ಬರೆದಾಗ ಓದಲು ಹಿಂಸೆಯಾಗುತ್ತದೆ. ‘ಅವಧಿ’ ಇಂಥದನ್ನು ಖಂಡಿತಾ ಎಡಿಟ್ ಮಾಡಲೇ ಬೇಕು.

  ಪ್ರತಿಕ್ರಿಯೆ
  • D.RAVI VARMA

   ನಿಮ್ಮ ಸಲಹೆ ಮತ್ತು ,ಎಚ್ಚರಿಕೆಗೆ ವಂದನೆಗಳು.

   ಪ್ರತಿಕ್ರಿಯೆ
 9. Badarinath Palavalli

  ಬಹು ಪಾಲು ಹಳ್ಳಿಗಳಲ್ಲೂ ಮತ್ತು ಈಗೀಗ ನಗರಗಳಲ್ಲೂ ತೀರಿಕೊಂಡವರನ್ನು ಹೊರಗೆ ಮಲಗಿಸಿ ಅಲ್ಲಿಂದಲೇ ಸಾಗ ಹಾಕುವುದು ಬುದ್ಧಿವಂತಿಕೆ ಪ್ರತೀಕ ಅಂತ ಆಗಿಹೋಗಿದೆ.
  ನಿಮ್ಮ ಬಾಲ್ಯದ ನೆನಪುಗಳು. ನನ್ನ ಬಾಲ್ಯದ ಸರ್ಕಾರಿ ಶಾಲೆ ಹಸಿರು ಲಂಗ ಬಿಳಿ ಶರಟಿನ ಇಂದಿರಾ, ಮೀನಾಕ್ಷಿ, ಯಾದಮ್ಮ, ಪದ್ದಿ, ಮಂಜುಳ ಮುಂತಾದ ಗೆಳತಿಯರನ್ನು ನೆನಪಿಸಿತು. ಅವರೆಲ್ಲ ಈಗ ಅವರ ಮಕ್ಕಳಿಗೂ ಮದುವೆ ಮಾಡಿ ಮೊಮ್ಮಕ್ಕಳನ್ನು ಎತ್ತಿ ಆಡಿಸುತ್ತಿರಬಹುದು.
  ನಿಮ್ಮ ಬರಹದಲ್ಲಿ ಸರಳ ಶೈಲಿಯೇ ನಮ್ಮನ್ನು ಸೆಳೆಯುತ್ತದೆ ಭಾರತಕ್ಕ.

  ಪ್ರತಿಕ್ರಿಯೆ
 10. ರವಿ ಮುರ್ನಾಡು,ಕ್ಯಾಮರೂನ್

  ಬದರಿ ಸರ್ , ಅದು ಯಾರು ಭಾರತಕ್ಕ ? ಹಹಹಹಃ.

  ಪ್ರತಿಕ್ರಿಯೆ
 11. Badarinath Palavalli

  ರವಿ ಮೂರ್ನಾಡ್ ಸಾರ್,
  ಆ ಮನೆ ’ತನ್ನ ಮನೆ’ ಅಂತ ಪಾಪ… ಬರಹದ ಲೇಖಕಿ ಭಾರತಿ ಬಿ.ವಿ.
  ನಾನು ಸಾಮಾನ್ಯವಾಗಿ ಸಾಮಾಜಿಕ ತಾಣಗಳ ಮತ್ತು ಬ್ಲಾಗಿನ ಹೆಣ್ಣು ಮಕ್ಕಳನ್ನು ಅಕ್ಕ ಎಂತಲೇ ಸಂಭೋದಿಸುತ್ತೇನೆ.
  ನನಗೆ ಭಾರತಲಕ್ಷ್ಮಮ್ಮ ಎಂದು ದೊಡ್ಡಮ್ಮನ ಮಗಳಿದ್ದಳು. ಆಕೆಯನ್ನು ನಾನು ಕರೆಯುತ್ತಿದ್ದದ್ದೇ ಭಾರತಕ್ಕ ಅಂತ. ಆಕೆ ಈವತ್ತು ಬದುಕಿಲ್ಲ.
  ಆ ಕಾರಣದಿಂದಾಗಿ ನಮ್ಮ ಭಾರತಿಯವರನ್ನೂ ಯಾಕೋ ಭಾರತಕ್ಕ ಅಂತಲೇ ಕರಿಯಬೇಕೆನಿಸಿತು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: