ಅವಳ ಮೈಮೇಲೆ ನೋಟುಗಳ ಮಳೆ ಸುರಿದಿತ್ತು

P For…

-ಲೀಲಾ ಸಂಪಿಗೆ

ಇತ್ತೀಚಿಗೆ ಕನ್ನಡ ಕಟ್ಟಾಳುಗಳ ಪಡೆಯೊಂದು ಲೈವ್ ಬ್ಯಾಂಡ್ ಗಳ ಮುಂದೆ ಘೋಷಣೆ ಕೂಗ್ತು. ಇಲ್ಲೆಲ್ಲಾ  ಬೇರೆ ರಾಜ್ಯದ ಹುಡುಗಿಯರಿಗೆ ಡ್ಯಾನ್ಸ್ ಮಾಡೋಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧಿಕ್ಕಾರ; ನಮ್ಮವರಿಗೇ ಅವಕಾಶ ಕೊಡ್ಬೇಕು ಅಂತ, ತಳಬುಡದ ಅರಿವಿಲ್ಲದ ಇಂತಹ ಹೋರಾಟಗಳಿಂದ ಅಭಾಸಗಳೇ ಹೆಚ್ಚು.
ಒಳಗೊಂದು ಪುಟ್ಟ ಕೊಠಡಿ. ಮೂಲೆಯಲ್ಲೊಂದು ಸ್ಟೂಲ್. ಸ್ಟೂಲ್ ಮೇಲೊಂದು ಶೈನಿಂಗ್ ಕಳೆದುಕೊಂಡ ಎರಡು ಅಡಿ ಎತ್ತರದ ಸ್ಟೀಲ್ ಕೊಳಗ. ಅದರ ತುಂಬ ಕಲೆಸಿದ ಅನ್ನ-ಸಾರು. ಅದನ್ನು ಕಲೆಸಿಟ್ಟು ತುಂಬಾ ಹೊತ್ತಾಗಿದೆ ಎಂದು ಸಾಬೀತುಪಡಿಸಲು ಅದರ ಮೇಲೊಂದು ಕೆನೆಗಟ್ಟಿದ ಲೇಯರ್, ಪಕ್ಕದಲ್ಲೊಂದು ಸೌಟು. ಅದಕ್ಕೆ ತಾಗಿಯೇ ಒಂದು ಪ್ಲಾಸ್ಟಿಕ್ ಡ್ರಮ್ಮಿನಲ್ಲಿ ತುಂಬಿಟ್ಟ ನೀರು. ಅದಕ್ಕೊಂದು ಪ್ಲಾಸ್ಟಿಕ್ನದ್ದೇ ಚೊಂಬು. ಆ ಕೊಠಡಿಯಲ್ಲಿ ಹಾಕಿದ್ದ ನೆಲಹಾಸು ಆಂಟಿಕ್ ಪೀಸ್ ಇದ್ದಂಗೆ. ಅದನ್ನೇನಾದ್ರೂ ಕೊಡವಿದ್ರೆ ಕೊಡವಿದವರು ಮೂರು ದಿನಾ ಅದ್ರೂ ಎದ್ದೇಳ್ಬಾರ್ದು. ಅದಕ್ಕೇ ಅವು ಆ ಸಾಹಸ ಮಾಡೋಕೆ ಹೋಗಿಲ್ಲ.

ಏದುಸ್ರು ಬಿಟ್ಕೊಂಡು ಬಂದ ಸ್ವಾತಿ ಆ ಸೌಟು ತೊಗೊಂಡ್ಲು. ಮೇಲೆ ಕಟ್ಟಿದ್ದ ಲೇಯರ್ ನ ಸರಿಸಿದ್ಲು. ಒಂದೆರಡು ಸೌಟು ಸಾರನ್ನ ಹಾಕ್ಕೊಂಡ್ಲು. ಗಬಗಬಾಂತ ಬಾಯಿಗೆ ತುಂಬ್ಕೊಳ್ತಾ ಇದ್ಲು. ಹೊಟ್ಟೆ ಹಸಿದಿತ್ತು. ಏನು ತಿಂತಾ ಇದ್ದೀನಿ. ಅದ್ರ ರುಚಿ ಏನು ಯಾವುದೂ ಪರಿವೆಯೇ ಅವಳಿಗಿರಲಿಲ್ಲ. ಹಸಿದು ಸಂಕಟ ಆಗಿ ಓಡಿ ಬಂದಿದ್ಲು. ಅಷ್ಟರಲ್ಲಿ ಹುಡುಗನೊಬ್ಬ ಬಂದ ‘ಸ್ವಾತಿ ಬೇಗ ಹೋಗ್ಬೇಕಂತೆ’ ಅಂತ ಅವಳನು ಅವಸರಿಸ್ತಾ ಇದ್ದ. ಚೊಂಬು ನೀರು ಗಟಗಟನೆ ಕುಡ್ದು ಹೊರ ಓಡಿದ್ಲು. ಹಾಕಿದ್ದ ಸಾಂಗ್ ಹೆಳವರನ್ನೂ ನಿಂತಲ್ಲೇ ಕುಣಿಸೊಂಗಿತ್ತು. ಸ್ವಾತಿಯ ಹೆಜ್ಜೆಗಳು ಸ್ಟೆಪ್ ಹಾಕ್ತಾ ಹಾಕ್ತಾ ಸ್ಪೀಡ್ ಜಾಸ್ತಿ ಮಾಡ್ಕೊಂಡ್ಲು. ಎಲ್ಲ ಟೇಬಲ್ಲುಗಳನ್ನೂ ಟಚ್ ಮಾಡ್ತಾ ಅಲ್ಲಿ ಕುಂತೋರ್ಗೆ ಅಮಲು ಜಾಸ್ತಿ ಮಾಡ್ತಾ. ಕೈಗೆ ಸಿಕ್ರೂ ಸಿಗದ ಹಾಗೇ ಜೋಪಾನ ಮಾಡ್ತಾ ಆ ದಿನದ ದಿನಚರಿಯಲ್ಲಿ ಮುಕ್ಕಾಲು ದಿನ ಕಳೆದಿದ್ಲು. ತಾಳದ ಬೇಗ ಕಡಿಮೆಯಾದ್ರೇನು. ಅವಳ ಮೈಮೇಲೆ ನೋಟುಗಳ ಮಳೆ ಸುರಿದಿತ್ತಲ್ಲ- ಅವನ್ನೆಲ್ಲಾ ಎಣಿಸೋಕೆ ಕುಳ್ಳಿರಿಸಿದ್ದ ಯಜಮಾನ. ಹತ್ತು ರೂಪಾಯಿಗಳ ನೂರಾರು ನೋಟುಗಳನ್ನು ಎಸೆದು ಹೋಗಿದ್ದರು. ಅವರ ದವಲತ್ತುಗಳನ್ನೆಲ್ಲ ಸ್ವಾತಿ ಜೋಡಿಸ್ತಾ ಹೋದ್ಲು. ಮತ್ತೆ ಹತ್ತರ ಕಟ್ಟನ್ನು ಒಟ್ಟಾಗಿಸುವ ವೇಳೆಗೆ ಗಂಟೆ ರಾತ್ರಿ ಎರಡಾಗಿತ್ತು. ಮಧ್ಯರಾತ್ರಿ ಮೀರಿದರೂ ಕುಣಿಯೋ ಕಾಲ್ಗಳು ಕೂತಾಗ ಪದ ಹೇಳೋಕೆ ಶುರು ಮಾಡ್ಬಿಟ್ವು.
ಗೋಲ್ಡನ್ ಲೈವ್ ಬ್ಯಾಂಡ್ ನ ಹದಿನೆಂಟು ಹುಡ್ಗೀರಲ್ಲಿ ಸ್ವಾತಿನೂ ಒಬ್ಳು, ಸಿಕ್ಕಾಪಟ್ಟೆ ದುಡ್ಡಿರೋ ಲೈವ್ ಬ್ಯಾಂಡ್ ಗಳು ಅಲ್ಲಿದ್ರೂ ಸುಮಾರಾದ ಜನಕ್ಕೆ ಈ ಗೋಲ್ಡನ್ ಲೈವ್ ಬ್ಯಾಂಡೆ ಗತಿ. ಸ್ವಾತಿಯ ಜೊತೆಗಿನ ಐದಾರು ಹುಡ್ಗಿಯರನ್ನ ಗಿರಾಕಿಗಳು ಬುಕ್ ಮಾಡ್ಕೊಂಡು ಹೋಗಿದ್ರಿಂದ ಅವತ್ತಿನ ಹೆಚ್ಚಿನ ಕೆಲಸ ಅವಳದ್ದೇ!
ಇದೊಂದು ಲೋ ಮಿಡ್ಲ್ ಕ್ಲಾಸ್ ಲೈವ್ ಬ್ಯಾಂಡ್ಗೆ ಉದಾಹರಣೆ ಕೊಟ್ಟೆ ಅಷ್ಟೇ. ಲೈವ್ ಬ್ಯಾಂಡ್ ಅಥವಾ ಲೈವ್ ಬಾರ್ಸ್ ಅನ್ನೋದೇ ಒಂದು ದೊಡ್ಡ ಲೋಕ. ಅಲ್ಲಿರುವ ವೈವಿಧ್ಯತೆಗಳು. ಅದರೊಂದಿಗೆ ತಳುಕು ಹಾಕಿಕೊಂಡಿರುವ ಸೆಕ್ಸ್ ಉದ್ಯಮ, ಮನರಂಜನೆ, ಮತ್ತಿನ ಗಮ್ಮತ್ತು. ಕಾಂಜಾಣದ ಝಲಕು…. ವೈಶ್ಯಾವಾಟಿಕೆಯ ಒಂದು ಉಪ ಅಧ್ಯಾಯವಾಗಿ ನಾನು ಲೈವ್ ಬ್ಯಾಂಡ್ ಅನ್ನು ನೋಡಿಬಿಟ್ಟೆ ಅದೇ ಸೆಕ್ಸ್, ಅದೇ ದುಡ್ಡು, ಅದೇ ತಲೆಹಿಡುಕತನ, ಅದೇ ಹೆಣ್ಣು, ಅದೇ ಸುಂದರಿ!
ಇತ್ತೀಚಿಗೆ ಕನ್ನಡ ಕಟ್ಟಾಳುಗಳ ಪಡೆಯೊಂದು ಲೈವ್ ಬ್ಯಾಂಡ್ಗಳ ಮುಂದೆ ಘೋಷಣೆ ಕೂಗ್ತು. ಇಲ್ಲೆಲ್ಲಾ ಬೇರೆ ರಾಜ್ಯದ ಹುಡುಗಿಯರಿಗೆ ಡ್ಯಾನ್ಸ್ ಮಾಡೋಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧಿಕ್ಕಾರ, ನಮ್ಮವರಿಗೇ ಅವಕಾಶ ಕೊಡ್ಬೇಕು ಅಂತ. ತಳಬುಡದ ಅರಿವಿಲ್ಲದ ಇಂತಹ ಹೋರಾಟಗಳಿಂದ ಅಭಾಸಗಳೇ ಹೆಚ್ಚು. ಲೈವ್ ಬ್ಯಾಂಡ್ ಗಳಲ್ಲಿ ಡ್ಯಾನ್ಸ್ ಮಾಡೋ ಹುಡುಗೀರ ಸಾಮಾಜಿಕ, ಸಾಂಸ್ಕೃತಿಕ ಹಿನ್ನಲೆಯ ಪರಿಚಯವೇ ಇಲ್ಲದೆ ಮಾಡುವ ಇಂತಹ ಹೋರಾಟಗಳ ಹಿಂದೆ ಮಂಥ್ಲಿ ವಸೂಲಿಯ ಕಾಳಜಿಯ ಹೊರತಾದ ಯಾವ ಸಾಮಾಜಿಕ ಕಳಕಳಿಯೂ ಕಂಡುಬಂದಿಲ್ಲ.
ಗೋಲ್ಡನ್ ಲೈವ್ ಬ್ಯಾಂಡ್ ನ ಸ್ವಾತಿಯಂತಹ ಲಕ್ಷಾಂತರ ಹೆಣ್ಣುಗಳು ಲೈವ್ ಬ್ಯಾಂಡ್ ಗಾಗಿಯೇ  ಮಾರಾಟವಾಗ್ತಾರೆ. ಹಾಗೇಯೇ ಸ್ವಯಂ ಅವರೇ ಬಂದು ಸೇರ್ತಾರೆ. ಮತ್ತದೇ ಬಡತನ, ನಿರುದ್ಯೋಗ, ಅದಕ್ಕಿಂತಲೂ ಅನಕ್ಷರತೆಯೇ ಹೆಚ್ಚಿಸಿರುವ ಈ ಹುಡ್ಗೀರ್ಗೆ ನೃತ್ಯ ಮಾತ್ರ ಕರಗತ ಆಗಿರುತ್ತದೆ. ಇಲ್ಲಿಯೂ ವಂಚನೆ, ದೌರ್ಜನ್ಯ, ಲೈಂಗಿಕ ಕಿರುಕುಳಗಳಿಗೇನು ಕಡಿಮೆಯಿಲ್ಲ. ಸುಮಾರು ೧೨ ರಿಂದ ೨೫ ರ ವಯೋಮಾನದ ಬಳುಕುವ ತರುಣಿಯರು ಸ್ಪರ್ಶಿಸಿದ ಮದ್ಯ ಹೀರುತ್ತಾ, ಕಣ್ಣುಗಳಿಗೂ ಸುಖ ನೀಡುತ್ತಾ ಹಣದೆರಚಾಟದ ನಡುವೆ ತೆವಲು ತೀರಿಸಿಕೊಳ್ಳುವ ಈ ವ್ಯವಸ್ಥೆಯ ಪ್ರಾಧಾನ್ಯತೆಗೆ ಈ ಹೆಣ್ಣುಗಳು ಸರಕಾಗುತ್ತದೆ. ಸರ್ಕಾರ ಬಾರ್ ಗಳಲ್ಲಿ ಮಹಿಳೆಯರು ಮದ್ಯ ಪೂರೈಸುವುದನ್ನು ನಿಷೇಧಿಸಿತು. ಆ ಮೂಲಕ ಬಾರ್ ನೃತ್ಯ ಕೊನೆಗೊಂಡಿತು. ಇದನ್ನೇ ನಂಬಿದ್ದ ಸುಮಾರು ೭೫  ಸಾವಿರ ಮಹಿಳೆಯರು ಉದ್ಯೋಗ ಕಳೆದುಕೊಂಡರು. ಟಾಟಾ ಸಮಾಜ ವಿಜ್ಞಾನ ಸಂಸ್ಥೆ ನಡೆಸಿದ ಅಧ್ಯಯನವು ಡ್ಯಾನ್ಸ್ ಬಾರ್ ಗಳನ್ನು   ನಿಷೇಧಿಸುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿದೆ. ಬಾರ್ ಗಳಲ್ಲಿ ನೃತ್ಯ ಮಾಡಲು ಸರಬರಾಜಾಗುವ ಯುವತಿಯರು ಮಾನದ ಸಾಗಾಟದ ದಂಧೆಗೆ ಬಲಿಬಿದ್ದೇ ಬಂದವರಾಗಿರುತ್ತಾರೆ. ಎನ್ನುವುದು ಆ ಅಧ್ಯಯನದ ತಿರುಳು. ಬಾರ್ ಗಳಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯನ್ನು ಕೇಳಿದಾಗಲೂ ಅವರು ತಮ್ಮ ಸ್ವಂತ ನಿರ್ಧಾರದಿಂದ ಬಂದಿರುವುದಾಗಿ ಒಪ್ಪಿಕೊಳ್ಳಲಿಲ್ಲ ಮಧ್ಯವರ್ತಿಗಳ ಮೂಲಕ ಇಲ್ಲಿಗೆ ಬಂದಿರುವುದಾಗಿ ಹೇಳಿದರು.
ಡ್ಯಾನ್ಸ್ ಬಾರ್ ಗಳನ್ನು ನಿಷೇಧಿಸುವ ಮಹಾರಾಷ್ಟ್ರದ ನಿರ್ಧಾರ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇದನ್ನೇ ನಂಬಿ ಬದುಕುತ್ತಿದ್ದ ಸಾವಿರಾರು ಯುವತಿಯರ ಬದುಕಿನ ಪ್ರಶ್ನೆ ಎದುರಾಯಿತು. ಪರ-ವಿರುದ್ಧ ಅಭಿಪ್ರಾಯಗಳು ಬಂದವು. ನಿಷೇಧ ವಿರೋಧಿಸುವವರು ಮಹಿಳೆಯರು ಜೀವಿಸುವ ಹಕ್ಕು. ವೃತ್ತಿಯ ಹಕ್ಕನ್ನು ಮುಂದುವರಿಸಿದರೆ, ನಿಷೇಧ ಪರವಾದವರು ಬಾರ್ ಗಳಲ್ಲಿ ನಡೆಯುತ್ತಿದ್ದ ಮಹಿಳೆಯರ ಶೋಷಣೆ ಹಾಗೂ ಬಲವಂತದ ದುಡಿಮೆ ಬಗ್ಗೆ ಗಮನ ಸೆಳೆದರು. ಆದರೆ ವಾಸ್ತವವಾಗಿ ಡ್ಯಾನ್ಸ್ ಬಾರ್ಗಳಲ್ಲಿ ನೃತ್ಯ ಮಾಡುತ್ತಿದ್ದ ಯುವತಿಯರು ಉದ್ಯೋಗ ಕಳೆದುಕೊಂಡ ಬಳಿಕ ವೇಶ್ಯೆಯವರಾಗಿ ರೂಪಾಂತರಗೊಂಡರು. ನೂರಾರು ಮಂದಿ ವ್ಯಾಪಾರಿಗಳ ಒಡನಾಡಿಗಳಾಗಿ ಹಾಗೂ ಬಾಡಿಕೆ ಹೆಂಡಂದಿರಾಗಿ ದುಡಿಯಲಾರಂಭಿಸಿದರು. ಈಗಲೂ ಆ ಡ್ಯಾನ್ಸ್ ಬಾರ್ ನ ಹುಡುಗಿಯರು, ಅವರ ಗಿರಾಕಿಗಳು ಹಾಗೇ ಇದ್ದಾರೆ. ಭೇಟಿಯ ಸಂಪರ್ಕದ ಸ್ಥಳ ಬದಲಾವಣೆಯಾಗಿದೆ ಅಷ್ಟೆ. ಬಾರ್ ಗಳನ್ನು ಮುಚ್ಚಿದ ನಂತರ ನಮಗೆ ವೇಶ್ಯಾವೃತ್ತಿ ಬಿಟ್ಟರೆ ಅನ್ಯ ಮಾರ್ಗವಿರಲಿಲ್ಲ. ಸರ್ಕಾರದ ನಿರ್ಧಾರ ನಮ್ಮನ್ನು ನಿರುದ್ಯೋಗಿಗಳನ್ನಾಗಿಸಿದ್ದೇ ಅಲ್ಲದೆ ವಸತಿಹೀನರಾನ್ನಾಗಿಸಿದೆ’ ಅಂತಾಳೆ ರಾಜಸ್ಥಾನದ ಪೂನಂ. ಒಟ್ಟಾರೆಯಾಗಿ ಮನರಂಜನಾ ಲೈಂಗಿಕತೆಯಿಂದ ವೇಶ್ಯಾವಾಟಿಯೆಡೆಗೆ ಹೋಗೋದೊಂದೆ ಪರ್ಯಾಯ ವಾಗಿಬಿಟ್ಟಿತ್ತು ಅವರಿಗೆ. ಇತ್ತೀಚಿಗೆ ಕರ್ಣಾಟಕದ ಪೋಲೀಸ್ ಇಲಾಖೆ ಇಲ್ಲಿ ಲೈವ್ ಬ್ಯಾಂಡ್ ಗಳನ್ನು ನಿಷೇದಿಸಿತ್ತು. ಲೈವ್ ಬ್ಯಾಂಡ್ ಮಾಲೀಕರ ಸಂಘ ರಾಜ್ಯ ಹೈಕೋರ್ಟ್ ಗೆ ಮೊರೆಹೋಯಿತು. ಆದ್ರೂ ಹೈಕೋರ್ಟ್ ಗೆ  ಪೊಲೀಸ್ ಇಲಾಖೆಯ ಕ್ರಮವನ್ನೇ ಎತ್ತಿಹಿಡಿಯಿತು. ಅಷ್ಟಕ್ಕೇ ಸುಮ್ಮನಾಗದ ಮಾಲೀಕರ ಸಂಘ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈಗ ಸುಪ್ರೀಂ ಕೋರ್ಟ್ ಮಾಲೀಕರ ಪರವಾಗಿ ತೀರ್ಪು ನೀಡಿದ್ದು ಇಲ್ಲಿ ಲೈವ್ ಬ್ಯಾಂಡ್ ಗಳು ನಿಷೇದದ  ಬಿಸಿಯಿಂದ ತತ್ತರಿಸಿರುವ ಅಲ್ಲಿನ ಲೈವ್ ಬ್ಯಾಂಡ್ ಹುಡುಗಿಯರು ಬೆಂಗಳೂರಿನತ್ತ ಮುಖ ಮಾಡಿದ್ದಾರೆ! ಹಾಗೆಯೇ ಪೊಲೀಸರಿಗೆ, ರೌಡಿಗಳಿಗೆ, ತಲೆಹಿಡುಕರಿಗೆ, ವಸೂಲಿಬಾಜಿಗಳಿಗೆ ವಸೂಲಿಯ ತವರಾದ ಲೈವ್ ಬ್ಯಾಂಡ್ ಮತ್ತೆ ಶೃಂಗಾರಗೊಂಡಿರುವುದು ಅತ್ಯಂತ ಸಂತಸ ತಂದಿದೆ.
ಇದು ವಾಸ್ತವ!
ಲೈವ್ ಬ್ಯಾಂಡ್ ನೃತ್ಯಗಾರ್ತಿಯರು, ಬಾರ್ ಗರ್ಲ್ಸ್, ಜ್ಯುಸಿ ಗರ್ಲ್ಸ್… ಹೀಗೆ ತರಾವರಿ ಹೆಸರಿನಲ್ಲಿ ಕರೆದರೂ ಅವರೆಲ್ಲರ ಕೆಲಸ ಒಂದೇ, ಅದು ಬಾರ್, ಕ್ಲಬ್ ಗಳಲ್ಲಿ ಗಿರಾಕಿಗಳಿಗೆ ಮದ್ಯ ಪೂರೈಸುವುದು ಅಥವಾ ಅಲ್ಲಿ ನರ್ತಿಸುವುದು. ‘ಸೈ’ ಎನಿಸಿದರೆ ಗಿರಾಕಿಯೊಂದಿಗೆ ರಾತ್ರಿ ಕಳೆಯಲು ತೆರಳುವುದು.
ಜಗತ್ತಿನ ಎಲ್ಲೆಡೆ ಕೋಟ್ಯಾಂತರ ಯುವತಿಯರಿಗೆ ಇದು ಜೀವನದ ಹಾದಿ. ಮುಂಬೈ ನಗರ ಒಂದರಲ್ಲೇ ಡ್ಯಾನ್ಸ್ ಬಾರ್ ಗಳ ನಿಷೇಧದಿಂದ 50 ಸಾವಿರ ಬಾರ್ ಗರ್ಲ್ಸ್ ಗಳು ನಿರುದ್ಯೋಗಿಗಳಾದರು ಎಂದರೆ ಉಳಿದ ಮಹಾನಗರಗಳಲ್ಲಿ ಈ ವೃತ್ತಿಯಲ್ಲಿ ಇರುವವರ ಸಂಖ್ಯೆಯನ್ನು ಊಹಿಸಬಹುದು.
ಋಷಿ ಮುನಿಗಳ ತಪೋಭಂಗಕ್ಕೆ ಮೇನಕೆ, ಊರ್ವಶಿಯರು ಯತ್ನಿಸಿದ ಕಥೆಗಳನ್ನು ಪುರಾಣಗಳಲ್ಲಿ ಓದುತ್ತೇವೆ. ಮುಜರಾ ನೃತ್ಯವೂ ಇದೇ ಮಾದರಿಯ ಮತ್ತೊಂದು ಪ್ರಕಾರ. 1858ರಲ್ಲಿ ಗುಜರಾತಿನ ಭಾವನಗರದಲ್ಲಿ ಕ್ಯಾಬರೇ ನೃತ್ಯವನ್ನು ಸ್ವತಃ ತಾನು ವೀಕ್ಷಿಸಿರುವುದಾಗಿ 19ನೇ ಶತಮಾನದ ಹೆಸರಾಂತ ಕವಿ ಹಾಗೂ ಸಮಾಜ ಸುಧಾರಕ ದಳಪತ್ರಾಂ ಬರೆದಿದ್ದಾರೆ. ಡ್ಯಾನ್ಸ್ ಬಾರ್ ಗಳಲ್ಲಿ ನರ್ತಿಸುವ ಬಹುಮಂದಿ ಮಾನವಸಾಗಾಟದ ಬಲಿಗಳಾಗಿದ್ದು, ಇವರಲ್ಲಿ ಶೇ.90ರಷ್ಟು ಮಂದಿ ತೀರಾ ನಿರ್ಗತಿಕ ಕುಟುಂಬದ ಹಿನ್ನಲೆಯವರಾಗಿದ್ದು, ಅನಕ್ಷರಸ್ಥರಾಗಿದ್ದಾರೆ. ಶೇ.10ರಷ್ಟು ಮಂದಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಸಂಪಾದಿಸುವ ಮಂದಿಯೂ ಇದ್ದಾರೆ.
ನೀರ, ನೀರೆ ಎಂಬಂತೆ ಮದ್ಯ ಮತ್ತು ಮಾನಿನಿ ಬಾರ್ ಗಳಲ್ಲಿ ವ್ಯಾಪಾರದ ಕೇಂದ್ರ ಆಕರ್ಷಣೆ, ಮುಂಬೈನಲ್ಲಿ ಡ್ಯಾನ್ಸ್ ಗರ್ಲ್ಸ್ ಗಳನ್ನು ಬಾರ್ ಗಳಲ್ಲಿ ನಿಷೇಧಿಸಿದೊಡನೆಯೇ ಬಾರ್ ಗಳೂ ಸಹಾ ವ್ಯಾಪಾರವಿಲ್ಲದೆ ಬಾಗಿಲು ಮುಚ್ಚಿದವು. ಬೆಂಗಳೂರಿನಲ್ಲಿ ಲೈವ್ ಬ್ಯಾಂಡ್ ಮೇಲೆ ನಿಷೇಧ ಹೇರಿದಾಗ ಬಾರ್ ಗಳು ಕಂಗಾಲಾದವು. ಯುವತಿಯರ ಬದಲು 2000 ಹಿಜಡಾಗಳನ್ನು ನೇಮಿಸಿ ನೃತ್ಯ ಮಾಡಿಸಲು ಪ್ರಯತ್ನಿಸಿದವು.

‍ಲೇಖಕರು avadhi

September 24, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅದೊಂದು ಕಾಂಡೂಮ್ ಸುಟ್ಟ ಘಟನೆ…

P For... ಡಾ ಲೀಲಾ ಸಂಪಿಗೆ ಅದೊಂದು ಕಾಂಡೂಮ್ ಸುಟ್ಟ ಘಟನೆ. ದಿಢೀರ್ ಅಂತ ಹಾಸನಕ್ಕೆ ಹೋದೆ. ರಾಜಿ ಕಾಯ್ತಾ ಇದ್ಲು ಅವಳನ್ನ ಕರ್ಕ್ಕೊಂಡು ನೇರ...

13 ಪ್ರತಿಕ್ರಿಯೆಗಳು

 1. ಮಿಲನ್

  ಇತ್ತೀಚಿಗೆ ಕನ್ನಡ ಕಟ್ಟಾಳುಗಳ ಪಡೆಯೊಂದು ಲೈವ್ ಬ್ಯಾಂಡ್ ಗಳ ಮುಂದೆ ಘೋಷಣೆ ಕೂಗ್ತು. ಇಲ್ಲೆಲ್ಲಾ ಬೇರೆ ರಾಜ್ಯದ ಹುಡುಗಿಯರಿಗೆ ಡ್ಯಾನ್ಸ್ ಮಾಡೋಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಧಿಕ್ಕಾರ; ನಮ್ಮವರಿಗೇ ಅವಕಾಶ ಕೊಡ್ಬೇಕು ಅಂತ,
  ಇದರ ಬಗ್ಗೆ ಸ್ವಲ್ಪ ವಿವರಣೆ ಕೊಡ್ತೀರಾ? ಅದ್ಯಾವಾಗ ಎಲ್ಲಿ ಯಾರು ಘೋಷಣೆ ಕೂಗಿದ್ರು ಹೀಗೆ ಅಂತ. ಯಾಕಂದ್ರೆ ಸುಮ್ ಸುಮ್ನೆ ’ಕನ್ನಡ ಕಟ್ಟಾಳು’ಗಳು ಅನ್ನೋದು ವ್ಯಂಗ್ಯ ಆಗ್ಬಾರ್ದು ನೋಡಿ. ಅವರು ಅದೇ ಉದ್ದೇಶಕ್ಕೇ ಕೂಗಿದ್ರಾ ಅನ್ನೋದಕ್ಕೂ ಕನ್ಫರ್ಮೇಷನ್ ಇದ್ರೆ ಒಳ್ಳೇದು.

  ಪ್ರತಿಕ್ರಿಯೆ
 2. leelasampige

  ಕುಮಾರ್ ನೇತೃತ್ವದ ಕನ್ನಡ ಸೇನೆಯವರು ಇತ್ತೀಚಿಗೆ [ಮೂರ್ನಾಲ್ಕು ತಿಂಗಳುಗಳ ಹಿಂದೆ] ಬೆಂಗಳೂರಿನ ಹೊರವಲಯದ ಲೈವ್ಬ್ಯಾಂಡ್ ಒಂದರ ಮೇಲೆ ದಾಳಿ ನಡೆಸಿ ಈ ಮೇಲಿನ ಹೇಳಿಕೆ ನೀಡಿದ್ದರು.
  -ಲೀಲಾ ಸಂಪಿಗೆ

  ಪ್ರತಿಕ್ರಿಯೆ
 3. ರಾಜಗೋಪಾಲ್ ಬಿ.ವಿ

  ಲೀಲಾ ಮೇಂಡಂ,
  ಎಲ್ಲ ಬರೆದಿರಿ, ಲೈವ್‌ಬ್ಯಾಂಡ್ ಬೇಕೋ ಬೇಡವೋ, ಬೇಕು ಅನ್ನೋದಾದ್ರೆ ಅದು ಯಾವ ಸ್ವರೂಪದಲ್ಲಿರಬೇಕು, ಬೇಡ ಅನ್ನೋದಾದ್ರೆ ಈ ಉದ್ಯಮ ನಂಬಿಕೊಂಡ ಹೆಣ್ಣುಮಕ್ಕಳಿಗೆ ಪರ್ಯಾಯ ಉದ್ಯೋಗ ಹೇಗೆ ಸೃಷ್ಟಿ ಮಾಡಬೇಕು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯ ಹೇಳಲೇ ಇಲ್ಲವಲ್ಲ?
  -ರಾಜಗೋಪಾಲ್ ಬಿ.ವಿ.

  ಪ್ರತಿಕ್ರಿಯೆ
 4. lokesh mosale

  ಲೈವ್‌ಬ್ಯಾಂಡ್ ಬೇಕೋ ಬೇಡವೋ ಅನ್ನೋದು lelasampige avara barahada vudesha alla .saamagika honegaarike bari lela aavaradu maathra
  vaagabaradu . b v rajagopaal avara helike hindina dani nooto suriyouva manasinaddaagide . idu ketathanaddu

  ಪ್ರತಿಕ್ರಿಯೆ
 5. kumar sringeri

  ಕನ್ನಡ ಹೋರಾಟಗಳು ಇತ್ತೀಚೆಗೆ ಇದರಿಂದ ಸ್ಪಟವಾಗಿ ದಾರಿ ತಪ್ಪುತಿರುವುದು ನಮಗೆ ಕಾಣುತ್ತಿದೆ. ಯಾವುದೇ ಸಾಂಸ್ಕೃತಿಕ ಹಿನ್ನಲೆಯನ್ನು ತಿಳಿಯದೆ, ಇತಿಹಾಸವನ್ನು ತಿಳಿಯದೇ ಅಲೋಚನಾ ರಹಿತ ಹೋರಾಟಗಳು ಹೆಚ್ಚುತ್ತಿವೆ ಇವನ್ನು ಹೋರಾಟ ಅನ್ನುವುದಕ್ಕಿಂದ ನನಗೆ ದೌರ್ಜನ್ಯ ಎನ್ನಬಹುದೇನೋ ಅನಿಸುತ್ತಿದೆ. ನಾವು ಹಲವಾರು ಹೋರಾಟಗಳನ್ನು ಕನ್ನಡ ನೆಲದಲ್ಲಿ ಕಂಡಿದ್ದೇವೆ ಮತ್ತು ಕಾಣುತ್ತಿದ್ದೇವೆ ಅದರೇ ಈ ರೀತಿಯ ವಿಕೃತವಾದಂತಹ ಚಳುವಳಿಗಳು ಹೆಚ್ಚು ಹೆಚ್ಚು ಪ್ರಚಲಿತವಾಗುತ್ತಿರುವುದು ಶೋಚನೀಯ ಸಂಗತಿ ಸಂಘಟನೆಗಳ ಕೆಲ ಮುಖಂಡರು ಏಕಾಎಕಿ ದಾಳಿಮಾಡಲು ಸೂಚಿಸುತ್ತಿರುವುದು ಒಂದು ಹೋರಾಟದ ನಿಲುವನ್ನು ಸೂಚಿಸುತ್ತಿದೆ ಇದೇ ನಿಜವಾದ ಹೋರಾಟವೆಂದು ಅವರು ಬೀಗುತಿರುವುದು ಉಂಟು ಇನ್ನೂ ಮುಂದಾದರೂ ಹೋರಾಟವೆಂದರೆ ಏನು? ಹೋರಾಟದ ಗುರಿಗಳೇನು ನಮ್ಮ ತೆಗೆದು ಕೊಳ್ಳುವ ತೀಮರ್ಾನ ಹೇಗಿಬೇಕೆಂದು ಅಲೋಚನವಾಗಿ, ಹತ್ತಾರು ಬುದ್ದಿಜೀವಿಗಳ ಜೊತೆ ವಿಮಶರ್ಿಸಿ ತಿಮರ್ಾನವನ್ನು ತೆಗೆದುಕೊಂಡು ಹೋರಾಟಗಳು ಒಳ್ಳೆಯ ಮಾರ್ಗದಲ್ಲಿ ನಡೆದರೆ ನಮ್ಮ ನಾಡಿನ ಏಳಿಗೆಯನ್ನು ನಾವು ನೋಡಬಹದು ಕುವೆಂಪುರವರ ಈ ಸಾಲು ಪ್ರಸ್ತುತವೆನಿಸುತ್ತದೆ ಕತ್ತಿ ಪರದೇಶಿಯದಾದರೇನು ನೋವೆ ನಮ್ಮವರೇ ಹದಹಾಕಿ ತಿವಿದರೆ ಅದು ಹೂವೇ?.
  ಕುಂ.ಶೃ
  ಬೆಂಗಳೂರು

  ಪ್ರತಿಕ್ರಿಯೆ
 6. ರಾಜಗೋಪಾಲ್ ಬಿ.ವಿ

  ಒಂದು ಸರಳವಾದ, ಸಹಜವಾದ ಪ್ರಶ್ನೆಯನ್ನು ಲೋಕೇಶ್ ಮೊಸಳೆಯಂಥವರು ಹೇಗೆ ಅಪಾರ್ಥ ಮಾಡಿಕೊಳ್ಳುತ್ತಾರೆ ನೋಡಿ.
  ಲೀಲಾ ಅವರು ಲೈಂಗಿಕ ಕಾರ್ಯಕರ್ತೆಯವರ ವಿಷಯದಲ್ಲಿ ನಡೆಸಿರುವ ಹೋರಾಟಗಳೆಲ್ಲ ಗೊತ್ತಿರುವುದರಿಂದ ಅವರಿಂದ ಪ್ರಾಮಾಣಿಕವಾಗಿಯೇ ಈ ವಿವಾದಕ್ಕೆ ಪರಿಹಾರ ಬಯಸಿದ್ದೆ. ಆದರೆ ಮೊಸಳೆ ಕಣ್ಣಿಗೆ ನಾನು ನೋಟು ಎರಚುವವನ ಹಾಗೆ ಕಂಡರೆ ಏನು ಮಾಡೋದು? ನೋಟು ಎರಚುವವರ ಮನಸ್ಥಿತಿ ಮೊಸಳೆಯವರಿಗೆ ಚೆನ್ನಾಗಿ ಗೊತ್ತಿರುವಂತಿದೆ ಎಂದು ನಾನೂ ಹಂಗಿಸಬಹುದಲ್ಲವೆ?
  ಒಂದು ಆರೋಗ್ಯಕರ ಚರ್ಚೆಯನ್ನು ಅನಗತ್ಯವಾಗಿ ಹಾದಿ ತಪ್ಪಿಸುವ ಅವಶ್ಯಕತೆಯಿಲ್ಲ. ಲೀಲಾ ಅವರು ನನ್ನ ಪ್ರಶ್ನೆಗೆ ಉತ್ತರಿಸಬೇಕು ಎನಿಸಿದರೆ ಉತ್ತರಿಸುತ್ತಾರೆ, ಇಲ್ಲವಾದರೆ ಇಲ್ಲ. ಒಂದು ಸಹಜ ಪ್ರಶ್ನೆ ಮುಂದಿಟ್ಟ ಮಾತ್ರಕ್ಕೆ ಲೀಲಾ ಅವರ ಕಾಳಜಿ, ಬದ್ಧತೆಗಳನ್ನು ನಾನು ಅನುಮಾನಿಸಿದೆ ಎಂದು ಯಾರೂ ಭಾವಿಸಬೇಕಾಗಿಲ್ಲ. ಆ ಅನುಮಾನ ನನಗಂತೂ ಇಲ್ಲ.

  ಪ್ರತಿಕ್ರಿಯೆ
 7. leelasampige

  ರಾಜಗೋಪಾಲ್ ರವರೆ, ಮೊಸಳೆಯವರ ಅಭಿಪ್ರಾಯದ ಬಗ್ಗೆ ಮುನಿಸು ಬೇಡ. ಅವರ ಅಭಿಪ್ರಾಯ ಸರಿಯಾಗಿದೆ. ಅಂದ ಮಾತ್ರಕ್ಕೆ ನಿಮ್ಮ ಕಾಳಜಿಯ ಪ್ರಶ್ನೆ ತಳ್ಳಿ ಹಾಕುವನ್ತಹುದೆನು ಅಲ್ಲ. ಆ ಚರ್ಚೆಯೇ ಬಹಳ ಆಳವಾದದ್ದು. ಇಲ್ಲಿ ಅಮಾಯಕ ಹೆಣ್ಣುಗಳನ್ನು ಈ ವ್ಯವಸ್ಥೆ ನಡೆಸಿಕೊಳ್ಳುವ ರೀತಿಯ ಬಗ್ಗೆ ಗಂಭೀರವಾದ ಮಂಥನದ ಅಗತ್ಯವಿದೆ.
  -ಲೀಲಾ ಸಂಪಿಗೆ

  ಪ್ರತಿಕ್ರಿಯೆ
 8. ರಾಜಗೋಪಾಲ್ ಬಿ.ವಿ

  ಲೀಲಾ ಮೇಡಂ,
  ನಿಮ್ಮ ಮಾತನ್ನು ಒಪ್ಪುತ್ತೇನೆ. ಆದರೆ ಒಂದು ಸಹಜ ಪ್ರಶ್ನೆ ಕೇಳಿದ ಮಾತ್ರಕ್ಕೆ ‘ನೋಟು ಎರಚುವ ಮನಸ್ಥಿತಿಯವನು’ ಎಂದು ಬ್ರಾಂಡ್ ಮಾಡಿದರೆ ಹೇಗೆ? ಇದು ಅಭಿವ್ಯಕ್ತಿಯ ಪ್ರಶ್ನೆ ಅಲ್ಲವೆ? ಮೊಸಳೆಯವರು ತಾಳ್ಮೆ ಕಳೆದುಕೊಂಡು ಹೀಗೆ ಮೈಮೇಲೆ ಬಿದ್ದರೆ ನಾನೂ ಸಹ ಅವರನ್ನು ಚರ್ಚ್ ಮೇಲೆ ದಾಳಿ ನಡೆಸಿದವರ ಮನಸ್ಥಿತಿಯವರು ಎಂದು ಹೀಗೆಳೆಯಬಹುದಲ್ಲವೆ?
  ಹಾಗೆ ಹೇಳಿದರೆ ಅವರಿಗೆ ಬೇಸರವಾಗುವುದಿಲ್ಲವೆ?

  ಪ್ರತಿಕ್ರಿಯೆ
 9. ಚಂದಿನ

  ಮನುಕುಲ ಇರುವವರೆಗೂ ಈ ದಂಧೆ ಜೀವಂತವಾಗಿರುತ್ತದೆ.
  ವಾಸ್ತವವನ್ನು ಒಪ್ಪಿ, ಅದನ್ನು ಲೀಗಲೈಸ್ ಮಾಡುವುದರಿಂದ, ತಲೆಹಿಡುಕರು, ಮದ್ಯವರ್ತಿಗಳು ಹಾಗು ಸಂಬಂಧಪಟ್ಟ ಅಧಿಕಾರಿಗಳು ಮಹಿಳೆಯರ ಅನಗತ್ಯ ಶೋಷಣೆ ಹಾಗು ಬಲವಂತವಾಗಿ ದುಡಿಸುತ್ತಾ ಎಸಗುವ ದೌರ್ಜನ್ಯವನ್ನು ಸಾಕಷ್ಟು ಮಟ್ಟಿಗೆ ತಡೆಗಟ್ಟಬಹುದು, ಜೊತೆ ಜೊತೆಗೆ ಅದರಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸುವ ಸತತ ಪ್ರಾಮಾಣಿಕ ಯತ್ನ ಅತ್ಯವಶ್ಯಕ. ಇದರಲ್ಲಿ ದುಡಿಯುವ ಎಲ್ಲ ಮಹಿಳೆಯರಿಗೆ ಸರ್ಕಾರದಿಂದ ಹಾಗು ಮಾಲೀಕರಿಂದ ಅಗತ್ಯ ಕಾನೂನು, ರಕ್ಷಣೆ ನೀಡಬೇಕು. ಇದರಿಂದ, ಈ ದಂಧೆ ಆರೋಗ್ಯಕರ ಉದ್ಯಮವಾಗಿ ಉಳಿಯುತ್ತದೆ ಎಂಬುದು ನನ್ನ ಅನಿಸಿಕೆ.
  ಇನ್ನೊಂದು ಅಂಶ, ಮಹಿಳೆಯರ ಶೋಷಣೆ ಸಮಾಜದ ಎಲ್ಲ ಸ್ತರದಲ್ಲಿ, ಸ್ಥಳದಲ್ಲಿ ನಿರಾಯಾಸವಾಗಿ ಆಗುತ್ತಿದೆ.
  ಎಲ್ಲಿಯವರೆಗೆ ಮಹಿಳೆಯರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಬಲರಾಗಿ ಸ್ವತಂತ್ರ ನಿರ್ಧಾರಗಳ ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಸಿಕೊಳ್ಳುವವರೆಗೆ, ಹಾಗೆಯೇ ಶೋಷಣೆಯ ವಿರುದ್ಧ ಧನಿ ಎತ್ತುವವರೆಗೆ ಇದು ಹೀಗೆಯೇ ಮುಂದುವರೆಯುತ್ತದೆ.
  – ಚಂದಿನ

  ಪ್ರತಿಕ್ರಿಯೆ
 10. leelasampige

  ರಾಜಗೋಪಾಲರವರೆ, ಮೊಸಳೆಯವರ ‘ಸಾಮಾಜಿಕ ಹೊಣೆ ಎಲ್ಲರದ್ದು ‘ ಎಂಬ ಅಭಿಪ್ರಾಯ ಸರಿಯಾಗಿದೆ. ಆದರೆ ನಿಮ್ಮ ಅತ್ಯಂತ ಕಾಳಜಿಯ, ಸಹಜವಾದ ಪ್ರಶ್ನೆಗಳನ್ನು ಅವರೇಕೆ ಹಾಗೆ ಭಾವಿಸಿದರೋ ತಿಳಿಯದು. ನನಗಂತೂ ನಿಮ್ಮ ಪ್ರಶ್ನೆಯ ಹಿಂದೆ ಯಾವ ಅಸಹಜತೆಯು ಕಾಣಲಿಲ್ಲ. ಇಷ್ಟೊಂದು ಹಗುರಾಗಿ ಈ ಪ್ರಶ್ನೆಗಳನ್ನು ಪರಿಗಣಿಸುವುದರಲ್ಲೇ ತಪ್ಪಿದೆ ಎನ್ನುವುದು ನನ್ನ ಅಭಿಪ್ರಾಯ.
  ನೆನ್ನೆಯಷ್ಟೇ ಬಾರ್ ಮಾಲೀಕರುಗಳು ಕೋರ್ಟಿನಲ್ಲಿ ಗೆದ್ದಿದ್ದಾರೆ. ಕೋರ್ಟ್ ಆವರಣದಲ್ಲೇ ಸಿಹಿ ಹಂಚಿ ಸಂಭ್ರಮಿಸಿದರು. ಆ ಸಂಭ್ರಮದ ಹಿಂದೆ ಅದೆಷ್ಟು ಲಾಭಬಡುಕತನದ ಮನಸ್ಸುಗಳಲ್ಲಿ ತಮ್ಮ ಮುಂದಿನ ಸಂಪತ್ತಿನ ಕನಸಿದ್ದವು. ಆದರೆ ಅದರ ಹಿಂದಿರುವ ಹದಿಹರೆಯದ ಇನ್ನೆಷ್ಟು ಅಮಾಯಕ ಹೆಣ್ಣುಗಳ ಬಲಿಯಿದೆಯೋ, ಇನ್ನೆಷ್ಟು ಹೆಣ್ಣುಗಳು ಈ ಭೋಗದ ಜಾಲಕ್ಕೆ ಬಂದು ಬೀಳ್ತಾರೋ, ಉದ್ಯೋಗ, ಸಂಪಾದನೆಯ ಸೂಡೋ ಕಳಕಳಿಯ ನೆರಳಲ್ಲಿ ಅದೆಷ್ಟು ಹೆಣ್ಣುಗಳು, ಮಕ್ಕಳು ರಕ್ಷಣೆಯೇ ಇಲ್ಲದ ಈ ಅಮಾನವೀಯವಾದ ಕುಪದೊಳಕ್ಕೆ ಜಾರಿ ಬಿಡ್ತಾರೋ ಅನ್ನೋ ಪ್ರಶ್ನೆಗಳು ನಮ್ಮನ್ನು ಕಾಡಬೇಕಾಗಿದೆ

  ಪ್ರತಿಕ್ರಿಯೆ
 11. sunaath

  ಯಾವ ಉದ್ಯೋಗದಲ್ಲಿ ವ್ಯಕ್ತಿಯ ಶೋಷಣೆ ಅಥವಾ ಗೌರವ ಹಾಳಾಗುತ್ತದೆಯೊ, ಅಂಥಾ ಉದ್ಯೋಗವನ್ನು ನಿಷೇಧಿಸಲೇ ಬೇಕು. ಯಾವ ಉದ್ಯೋಗದಿಂದ ಸಮಾಜದ ಆರೋಗ್ಯ (that also includes ಲೈಂಗಿಕ ಆರೋಗ್ಯ) ಹಾಳಾಗುವದೋ, ಆ ಉದ್ಯೋಗವನ್ನು ನಿಷೇಧಿಸಲೇ ಬೇಕು.
  ಕಳ್ಳತನವನ್ನು ನಿಷೇಧಿಸುವದರಿಂದ, ಸಾವಿರಾರು ಕಳ್ಳರು ನಿರುದ್ಯೋಗಿಗಳಾಗುತ್ತಾರೆ, ಅವರಿಗೆ alternate job ಕೊಡದೇ, ನಿಷೇಧ ಹೆರಬೇಡಿರಿ ಎಂದು ಹೇಳುವದು ಸರಿಯಾದೀತೆ?

  ಪ್ರತಿಕ್ರಿಯೆ
 12. sunaath

  ಮೇಡಮ್,
  ’ದಳಪತ ರಾಮ’ ಅನ್ನುವ ಹೆಸರನ್ನು ನೀವು ’ದಳಪತ್ರಾಂ’ ಅಂತ ಬರೆದಿದ್ದೀರಿ ಎಂದು ನನ್ನ ಭಾವನೆ.

  ಪ್ರತಿಕ್ರಿಯೆ
 13. ಚಂದಿನ

  ನನಗೆ ತಿಳಿದ ಮಟ್ಟಿಗೆ ಪ್ರತಿಯೊಂದು ಉದ್ಯೋಗದಲ್ಲೂ ವ್ಯಕ್ತಿಯ ಶೋಷಣೆ ಹಾಗು ಗೌರವಕ್ಕೆ ಚ್ಯುತಿ ತರುವ ಸನ್ನಿವೇಶಗಳು ಹಲವಾರು / ಸತತವಾಗಿ ಸಹಿಸಬೇಕಾಗುತ್ತದೆ, ಕೇವಲ ಅದರ ಪ್ರಮಾಣದಲ್ಲಿ ಏರುಪೇರಿರಬಹುದು ಉದ್ಯಮದಿಂದ ಉದ್ಯಮಕ್ಕೆ.
  ಉದಾಹರಣೆಗೆ ಸಿನಿಮಾ, ಕಿರುತೆರೆ, ಹೋಟೆಲ್ ಉದ್ಯಮಗಳೆಡೆಗೆ ನೋಟ ಬೀರಿದರೆ, ಅಲ್ಲಿ ಶೂಟಿಂಗ್ ಮಾಡುವಾಗ ಸ್ಪಾಟ್ ಬಾಯ್ಸ್, ಮಹಿಳಾ ಜೂನಿಯರ್ಸ್ ಹಾಗು ಸಹಾಯಕರಿಗೆ ಹಾಗೇ ಹೋಟೆಲ್ ಸಹಾಯಕರಿಗೆ ಸಿಗುವ ಗೌರವ ಹಾಗು ಅವರ ಶೋಷಣೆ ಎಲ್ಲರಿಗು ತಿಳಿದಿರುವುದೆ.
  ಇಷ್ಟಾಗಿ, ಅವರು ಮಾಡುವ ಸಿನಿಮಾ, ಸೀರಿಯಲ್, ಕಾರ್ಯಕ್ರಮ ಹಾಗೇ ಹೋಟೆಲ್ ತಿಂಡಿ, ಊಟ ನಮ್ಮ ಆರೋಗ್ಯಕ್ಕೆ ಹಾಗೇ ಸಮಾಜದ ಆರೋಗ್ಯಕ್ಕೆ ಎಷ್ಟರ ಮಟ್ಟಿಗೆ ಒಳ್ಳೆಯದು ಅನ್ನುವುದು ಸಹ ಎಲ್ಲರಿಗು ತಿಳಿದಿರುವ ವಿಷಯವೆ.
  ಇಷ್ಟಾಗಿ, ಒಂದು ವೇಳೆ ಇದನ್ನೇ ಅಂದರೆ ಯಾವ ಉದ್ಯೋಗದಲ್ಲಿ ವ್ಯಕ್ತಿಯ ಶೋಷಣೆ ಅಥವಾ ಗೌರವ ಹಾಳಾಗುತ್ತದೆಯೋ ಅಂಥಹ ಉದ್ಯೋಗವನ್ನು ನಿಷೇಧಿಸಲೇ ಬೇಕು ಎನ್ನುವುದನ್ನು ಮಾನದಂಡವಾಗಿರಿಕೊಂಡರೆ, ನಾವು ಎಲ್ಲ ಉದ್ಯಮಗಳನ್ನೂ ನಿಷೇಧಿಸಲೇ ಬೇಕಾಗುವ ಸನ್ನಿವೇಶ
  ಬರಬಹುದು. ಇದರ ಪರಿಣಾಮ ಬಾರ್ ಗರ್ಲ್ಸ್ ಜೊತೆಗೆ ಬೇರೆ ಉದ್ಯಮದ ನಿರುದ್ಯೋಗಿಗಳು ಈ ಕಡೆಗೆ ವಲಸೆ ಬರುವ ಸಾಧ್ಯತೆಗಳು ಹೆಚ್ಚಾಗಬಹುದು.
  ಎರಡನೆಯದಾಗಿ, ನನಗೆ ತಿಳಿದಂತೆ ಉದ್ಯೋಗ ಅಂದರೆ ಅಲ್ಲಿ ದುಡಿಯುವವನ ಹಾಗು ದುಡಿಸಿ ಕೊಳ್ಳುವವನ ನಡುವೆ ಒಪ್ಪಂದ ಅಥವಾ ಒಪ್ಪಿಗೆ ಇರುತ್ತದೆ ಹಾಗೇ ಕಾನೂನುಬದ್ಧವಾಗಿರುತ್ತದೆ.
  ಕಳ್ಳನಿಗೆ ಒಪ್ಪಿಗೆಯಿದ್ದರೂ, ಕಳ್ಳರಿಗೆ ಕಳ್ಳತನಕ್ಕೆ ಒಪ್ಪಿ ಸಹಕರಿಸುವ ಮಾಲೀಕರು ಖಂಡಿತ ಇರಲಿಕ್ಕಿಲ್ಲ ಅಥವಾ ನನಗೆ ಅಂಥಹ ಉದಾರಿಗಳು ಇಲ್ಲಿಯವರೆಗೂ ಕಾಣಿಸಿಲ್ಲ.
  -ಚಂದಿನ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: