ಅಷ್ಟಕ್ಕೆಲ್ಲ ಸಲಿಂಗ ಸಂಬಂಧ ಎಂದು ತಿಳಕೊಂಡರೆ ಹೇಗೆ?

ಐ ಲವ್ ಯು, ಮ್ಯಾನ್
-ಗುರುಪ್ರಸಾದ್ ಕಾಗಿನೆಲೆ
ಸಮಶೀತೋಷ್ಣ
ಕೆಲವು ದಿನಗಳ ಹಿಂದೆ ವಿಮಾನದಲ್ಲಿ ಪ್ರಯಾಣಮಾಡುತ್ತಿದ್ದಾಗ ಒಂದು ಸಿನೆಮಾ ನೋಡಿದೆ. ಹೆಸರು ‘ಐ ಲವ್ ಯು, ಮ್ಯಾನ್.’ ಹಾಲಿವುಡ್ಡಿನ ರೊಮ್ಯಾಂಟಿಕ್ ಕಾಮಿಡಿಯೆಂದು ಕರೆಸಿಕೊಳ್ಳುವ ಈ ಸಿನೆಮಾದ ಪಾತ್ರಗಳು, ಅವುಗಳ ನಟನೆ ಮತ್ತು ಇಡೀ ಚಿತ್ರದ ಪ್ಲಾಟ್ ಕೂಡ ಬರೇ ಹಸಿಹಸಿಯಾಗಿತ್ತೆಂದು ಹೇಳಿ ಆ ಚಿತ್ರವನ್ನು ಬದಿಗಿಡಬಹುದಾಗಿತ್ತು. ಆದರೆ, ನಾಗರಿಕತೆಯ ಹೊಡೆತಕ್ಕೆ ಸಿಕ್ಕಿ ಗೊಂದಲದ ಗೂಡಾಗಿರುವ ನಮ್ಮ ಸಂಬಂಧಗಳ ಮತ್ತೊಂದು ಆಯಾಮವನ್ನು ಇಂಥ ಬಿ ಗ್ರೇಡ್ ಹಾಲಿವುಡ್ ಚಿತ್ರವೂ ಹೇಗೆ ಒರೆಗೆ ಹಚ್ಚುತ್ತದೆ ಎಂದು ಚಿತ್ರವನ್ನು ನೋಡಿದ ಮಲೆ ಕೊಂಚ ಸೋಜಿಗವಾಯಿತು.

ಮೊದಲೇ ಹೇಳಿದ ಹಾಗ ಇದೊಂದು ಹಾಲಿವುಡ್ಡಿನ ರೊಮ್ಯಾಂಟಿಕ್ ಕಾಮಿಡಿ. ವಿಮಾನದಲ್ಲಿ ಕಾಲಿರಿಕಿಸಿಕೊಂಡು ಕೂರಲಾಗದ ಕುರ್ಚಿಯಲ್ಲಿ ಕೂತು, ಐಫೋನಿನ ಸ್ಕ್ರೀನಿಗಿಂತಾ ಕೆಲವೊಂದು ಇಂಚು ದೊಡ್ದದಾಗಿರುವ ಮಾನಿಟರ‍್ನಲ್ಲಿ, ಇಯರ‍್ಫೋನುಗಳ ಮೂಲಕ ಯಾವ ಚಿತ್ರವನ್ನು ಆಸ್ವಾದಿಸುವುದಕ್ಕಂತೂ ಸಾಧ್ಯವಿಲ್ಲ. ನೋಡಬಹುದಷ್ಟೆ. ಹಾಗೆ ನೋಡಿದಾಗಲೂ ಈ ಚಿತ್ರ ಗಮನ ಸೆಳೆಯಲು ಕಾರಣವೇನು? ಗಮನಸೆಳೆಯುವುದು ಅನ್ನುವುದಕ್ಕಿಂತಾ ಹೀಗೆ ಒಂದು ಲೇಖನ ಬರೆಯುವುದಕ್ಕೆ ವಸ್ತುವನ್ನು ಕೊಡುವಂತಹ ಚಿತ್ರವಾ ಇದು ಎಂದು ಹಲವು ಅನುಮಾನಗಳ ನಡುವೆಯೇ ಬರೆಯುತ್ತಿದ್ದೇನೆ.
ಚಿತ್ರದ ಕತೆ ಬಹಳ ಸರಳ. ನಾಯಕ, ನಾಯಕಿಗೆ ಮದುವೆ ನಿಶ್ಚಯವಾಗಿರುತ್ತದೆ. ನಾಯಕಿ ತನ್ನ ಸಂತೋಷವನ್ನು ತನ್ನ ಗೆಳತಿಯರೊಡನೆ ಹೇಳಿಕೊಂಡು ತಿರುಗುತ್ತಾಳೆ ಮದುವೆಯಲ್ಲಿ, ಬ್ರೈಡ್ಸ್‌ಮೈಡ್ ಯಾರು, ರಿಂಗ್ ಬೇರರ್ ಯಾರು, ಮತ್ತಿನ್ಯಾರ‍್ಯಾರು ಇನ್ನೇನು ಕೆಲಸ ಮಾಡಬೇಕೆಂದು ಎಲ್ಲ ವಹಿಸಿಕೊಟ್ಟು ಸಂಭ್ರಮಿಸುತ್ತಾ ಇರುತ್ತಾಳೆ.
ಆದರೆ ಸಮಸ್ಯೆಯಿರುವುದು ನಮ್ಮ ನಾಯಕನಿಗೆ. ಆತನಿಗೆ ಒಬ್ಬನೇ ಒಬ್ಬನೂ ಸ್ನೇಹಿತನಿಲ್ಲ. ತನ್ನ ಮದುವೆಯ ಸಂಭ್ರಮವನ್ನು ಹೇಳಿಕೊಂಡು ಖುಷಿಪಡಲು ಯಾರೂ ಜತೆಗಿಲ್ಲ. ಕಡೆಯಪಕ್ಷ ತನ್ನ ಮದುವೆಗೆ ಬೆಸ್ಟ್‌ಮ್ಯಾನ್ ಆಗಲೂ ಆತನಿಗೆ ಯಾರೂ ಗೆಳೆಯರಿಲ್ಲ. ಆದರೆ ತನಗೆ ಯಾರೂ ಸ್ನೇಹಿತರೇ ಇಲ್ಲವೆಂಬ ಅರಿವು ಕೂಡ ಆಗುವುದು ಅವನ ಮದುವೆ ಗೊತ್ತಾದ ಮೇಲೆಯೇ. ಮದುವೆಯ ದಿನದ ಮುಂಚೆ ಯಾರಾದರೂ ಒಬ್ಬನನ್ನಾದರೂ ಗಂಡಸನ್ನು ಸ್ನೇಹಿತನನ್ನಾಗಿ ಜತೆಮಾಡಿಕೊಳ್ಳಬೇಕು ಎನ್ನುವ ಹಠಕ್ಕೆ ಬಿದ್ದು ತನ್ನ ತಮ್ಮನ ಸಹಾಯ ಪಡಕೊಂಡು ತನಗೆ ಸ್ನೇಹಿತನೊಬ್ಬನನ್ನು ಹುಡುಕುತ್ತಾ ಹೋಗುತ್ತಾನೆ.
ಹೀಗೆ ಒಬ್ಬ ಗಂಡು ಇನ್ನೊಬ್ಬ ಗಂಡನ್ನು ಬರೇ ಸ್ನೇಹಿತನಾಗಿ ಪಡೆಯುವುದು ಈ ನಾಗರಿಕ ಸಮಾಜದಲ್ಲಿ ಎಷ್ಟು ಕಷ್ಟ ಎಂಬುದೇ ಚಿತ್ರದ ಕಥೆ. ನಾಯಕಿಯೂ ನಾಯಕನಿಗೆ ಹೋಗಿ ಒಬ್ಬ ಗಂಡು ಗೆಳೆಯನನ್ನು ಗುರುತುಮಾಡಿಕೊ ಎಂದು ದುಂಬಾಲುಬಿದ್ದನಂತರ ಮುಂದೆ ನಡೆಯುವುದೆಲ್ಲ ಪ್ರಹಸನಗಳು. ಮೊದಲು ಈತ ಯಾರೋ ಒಬ್ಬನನ್ನು ಭೇಟಿಮಾಡಿ ಆತನನ್ನು ರಾತ್ರಿ ಡಿನ್ನರಿಗೆಂದು ಕರಕೊಂಡು ಹೋಗುತ್ತಾನೆ. ವೈನು, ಡೈನಿನ ನಂತರ ಆ ಹೊಸ ಗೆಳೆಯ ಈ ತಮ್ಮ ಗೆಳೆತನಕ್ಕೆ ಬೇರೇನೋ ಆಯಾಮವನ್ನೇ ಹುಡುಕುತ್ತಾನೆ. ಗೆಳೆಯ ಪ್ರಿಯತಮನಾಗುತ್ತಾನೆ. ಮ್ಯಾನ್ ಡೇಟ್ ಅಲ್ಲಿಗೆ ಮುರಿದುಬೀಳುತ್ತದೆ.
ನಂತರ ಕೆಲವೊಂದು ಕ್ಲೀಶೆ ಎನ್ನುವ ನಿಯಮಗಳನ್ನು ಹಾಕಿಕೊಂಡು ತನ್ನ ಮೇಲೆ ಯಾವ ಲೈಂಗಿಕಾಕರ್ಷಣೆಯಿಲ್ಲದೇ ಬರೇ ಗೆಳೆಯನಾಗಿ ಉಳಿಯಬಲ್ಲ ಗೆಳೆಯನನ್ನು ಮಾತ್ರ ಹುಡುಕಲೆಂದು ಆತ ಪ್ರಯತ್ನ ಮಾಡುತ್ತಾನೆ. ಹಾಗೆ ಹುಡಕೊಂಡ ಗೆಳೆಯನನ್ನು ‘ಐ ಲವ್ ಯು, ಮ್ಯಾನ್’ ಎಂದು ಸಂಭೋದಿಸುವ ಧೈರ್ಯ ಮಾಡುತ್ತಾನೆ.
* * *
ನನ್ನ ಕೆಲಸದಲ್ಲಿ ನಾನು ಹೆಣ್ಣು ಗಂಡಿನ ಬೇಧವಿಲ್ಲದೇ ವೈದ್ಯಕೀಯ ಕಾರಣಕ್ಕಾಗಿ ರೋಗಿಗಳನ್ನು ಮೇಲಿಂದ ಕೆಳಗೆ ಬಟ್ಟೆ ಬಿಚ್ಚಿಸಿ ಪರೀಕ್ಷೆ ಮಾಡುತ್ತೇವೆ. ಹತ್ತುವರ್ಷಗಳ ಹಿಂದೆ ನಾನು ರೆಸಿಡೆನ್ಸಿ ಮಾಡುತ್ತಿರಬೇಕಾದರೆ ‘ಒಬ್ಬ ಗಂಡು ಡಾಕ್ಟರು ಹೆಣ್ಣು ರೋಗಿಯನ್ನು ಪರೀಕ್ಷೆ ಮಾಡಬೇಕಾದರೆ ಪರೀಕ್ಷಾ ಕೊಠಡಿಯಲ್ಲಿ ಇನ್ನೊಬ್ಬ ಹೆಂಗಸು ಇರುವುದು ಆ ಹೆಣ್ಣು ರೋಗಿಗೆ ಸಾಂತ್ವನವನ್ನು ಕೊಡುತ್ತದೆ ಮತ್ತೆ ಪರೀಕ್ಷೆ ಮಾಡುವ ಗಂಡು ವೈದ್ಯನಿಗೂ ಕೊಂಚ ಮುಜುಗರ ಕಡಿಮೆಯಾಗುತ್ತದೆ’ ಎಂಬ ನಂಬಿಕೆಯಿಂದ ಹೆಣ್ಣು ರೋಗಿಗಳಿಗೆ ಹೆಣ್ಣು ನರ್ಸನ್ನು ಶ್ಯಾಪರೋನ್ ಆಗಿ ಬಳಸುತ್ತಿದ್ದೆವು. ಇದು ಒಂದು ರೀತಿಯ ವೈದ್ಯಕೀಯ ರಂಗದಲ್ಲಿ ಇನ್ನೂ ನಡೆದುಬಂದಿರುವ ಸಂಪ್ರದಾಯ. ಆದರೆ, ಈಗ ಕಳೆದ ಒಂದೈದು ವರ್ಷಗಳಲ್ಲಿ ನನಗೆ ಗೊತ್ತಿಲ್ಲದೇ ಆಗಿರುವ ಬೆಳವಣಿಗೆಯೆಂದರೆ ಗಂಡಸರು ರೋಗಿಗಳಿಗೂ ನಾನು ಹರ್ನಿಯಾ ಪರೀಕ್ಷೆ ಮಾಡಬೇಕಾದರೆ ಅಥವಾ ಯಾವುದೇ ಗುಪ್ತಾಂಗಗಳ ಪರೀಕ್ಷೆ ಮಾಡಬೇಕಾದರೂ ಪರೀಕ್ಷಾ ಕೊಠಡಿಯಲ್ಲಿ ಇನ್ನೊಬ್ಬ ವ್ಯಕ್ತಿ ಇದ್ದೇ ಇರುತ್ತದೆ. ಈ ವ್ಯಕ್ತಿ ಗಂಡಸೂ ಆಗಿರಬಹುದು, ಹೆಂಗಸೂ ಆಗಿರಬಹುದು. ಸಂಕೋಚ ಅಥವಾ ಖಾಸಗೀತನಗಳು ಲಿಂಗ ಪರಿಧಿಗಳನ್ನು ಮೀರಿದೆ. ಗಂಡು ಗಂಡನ್ನು ಪರೀಕ್ಷೆ ಮಾಡಲಿ, ಹೆಣ್ಣು ಹೆಣ್ಣನ್ನು ಪರೀಕ್ಷೆ ಮಾಡಲಿ ಯಾವಾಗ ಪ್ರೈವೆಸಿಯ ಲಗ್ಗೆ ಮೀರುತ್ತದೋ ಅಲ್ಲಿ ಇನ್ನೊಬ್ಬ ವ್ಯಕ್ತಿ- ರೋಗಿಗೂ ವೈದ್ಯನಿಗೂ ಸಾಕ್ಷಿಯಾಗಿ ನಿಲ್ಲಬೇಕಾಗುತ್ತದೆ.
ಆದರೆ, ಇಲ್ಲಿ ನಾವು ನಮಗೆ ಸಾಕ್ಷಿಗಳನ್ನು, ಶ್ಯಾಪರೋನ್‌ಗಳನ್ನು ಬಳಸುವುದು ಯಾರು ಯಾರಿಗೂ ಸಾಂತ್ವನ ಕೊಡಬೇಕಾಗುವ ಕಾರಣಕ್ಕಲ್ಲ ಎನ್ನುವುದು ವಿಷಾದದ ಸಂಗತಿ. ಇಲ್ಲಿ ಈ ವ್ಯಕ್ತಿ ನಾನು ನನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದೀನಾ ಇಲ್ಲವಾ ಎನ್ನುವುದನು ಗಮನಿಸಲು ಮಾತ್ರ ಕಾವಲು ನಿಂತಿರುತ್ತಾನೆ. ಇನ್ನೂ ಸರಿಯಾಗಿ ಹೇಳಬೇಕೆಂದರೆ ನಾನು ಪರೀಕ್ಷೆ ಮಾಡುವ ರೋಗಿ ನಾಳೆ ಈ ವೈದ್ಯ ಅನವಶ್ಯಕವಾಗಿ ನನ್ನ ಮೇಲೆ ಕೈಯಾಡಿಸಿದ ಎಂದು ಕೋರ್ಟಿನಲ್ಲಿ ಕೇಸುಹಾಕಿದಲ್ಲಿ ‘ಅದು ಹಾಗಲ್ಲ. ಈ ವೈದ್ಯ ಮಾಡಿದ್ದು ಎಲ್ಲವೂ ವೈದ್ಯಕೀಯ ಪರೀಕ್ಷೆಯ ಪರಿಮಿತಿಯಿಒಳಗೇ ಇತ್ತು ಎಂದು ನನ್ನನ್ನು ಕೆಲವೊಂದು ಪುಂಡ ರೋಗಿಗಳಿಂದ ಕಾಪಾಡಲು ಮಾತ್ರ ನಿಂತಿರುತ್ತಾರೆ. ಇದು ವೈಸವರ್ಸಾ ಕೂಡ. ಕೆಲ ಪುಂಡ ಡಾಕ್ಟರುಗಳೂ ಇರುತ್ತಾರಲ್ಲವಾ?
ಹೆಂಗಸರು ‘ನನಗೆ ಲೇಡಿ ಡಾಕ್ಟರು ಬೇಕು’ ಎಂದು ಕೇಳಿದರೆ, ಆ ವಾಕ್ಯ ಅರ್ಥವನ್ನೇ ಕಳಕೊಂಡಿದೆ.
* * *
ಈ ಬಾರಿಯ ನೀನಾಸಮ್ ಶಿಬಿರದಲ್ಲಿ ತಿರುಗಾಟದ ನಾಟಕ ‘ವೆನಿಸಿನ ವ್ಯಾಪಾರ’ ದಲ್ಲಿ ಮುಖ್ಯಪಾತ್ರಗಳಾದ ಆಂಟೋನಿಯೋ ಮತ್ತು ಬೆಸಿನಿಯೋ ಮಧ್ಯೆ ಸಲಿಂಗ ಸಂಬಂಧ ಇರಬಹುದು ಎಂಬ ಒಂದು ಅಂಶವನ್ನು ನಾಟಕದಲ್ಲಿ ಸೂಚ್ಯವಾಗಿ ತೋರಿಸಿದ್ದು ಮಾರನೆಯ ದಿನ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಶೇಕ್ಸ್‌ಪಿಯರನ ಕಾಲದಲ್ಲಿ ಸಲಿಂಗ ಸ್ನೇಹ, ಕಾಮ ಶಿಕ್ಷಾರ್ಹ ಅಪರಾಧವಾಗಿದ್ದರಿಂದ ಶೇಕ್ಸ್‌ಪಿಯರಿನ ನಾಟಕದ ಪಠ್ಯವನ್ನು ಈ ರೀತಿ ಅರ್ಥೈಸುವುದು,ವಿರೂಪಗೊಳಿಸುವುದು ತಪ್ಪು ಎಂಬ ಅಭಿಪ್ರಾಯವೂ ಅಲ್ಲಿ ಬಂತು. ಇದೇ ನಾಟಕವನ್ನು ಆಧರಿಸಿ ೨೦೦೬ರಲ್ಲಿ ಬಂದ ‘ಮರ್ಚಂಟ್ ಆಫ್ ವೆನಿಸ್’ ಚಲನಚಿತ್ರದಲ್ಲಿಯೂ ಈ ಸಲಿಂಗಿ ಸಂಬಂಧದ ಎಳೆ ಇನ್ನೂ ಗಾಢವಾಗಿಯೇ ಇದೆ. (ಶೇಕ್ಸ್ಪಿಯರನ ಕಾಲದಲ್ಲಿ ಪ್ಲೆಟೊನಿಕ್ ಗಂಡು, ಗಂಡಿನ ಸಂಬಂಧ (ಲೈಂಗಿಕಾರ್ಷಣೆಯಿಲ್ಲದ) ಬೇರೆಲ್ಲ ಸಂಬಂಧಗಳಿಗಿಂತ ಪವಿತ್ರವಾದದ್ದು. ಪಾತ್ರಗಳ ಹೊರಗಡೆಯ ನಡುವಳಿಕೆಯಿಂದ ನಾವು ಏನೇನೋ ಅರ್ಥೈಸಲಿಕ್ಕೆ ಹೋಗಬಾರದು ಎಂದು ಆ ಚಿತ್ರದ ನಿರ್ದೇಶಕ ಹೇಳಿಕೊಂಡಿದ್ದ.) ಆ ವಿಷಯ ಇರಲಿ, ನೀನಾಸಮ್‌ನ ಆ ಚರ್ಚೆಯಲ್ಲಿ ಭಾಗವಹಿಸಿದ್ದ ಹಿರಿಯರೊಬ್ಬರು ‘ಈ ಪಾತ್ರಗಳ ಸಲಿಂಗ ಸಂಬಂಧದ ಬಗ್ಗೆ ಅನವಶ್ಯಕವಾದ ಚರ್ಚೆ ಆಗುತ್ತಾ ಇದೆ ಎಂದು ಕಾಣಿಸುತ್ತದೆ. ನಾವೆಲ್ಲ ಹಳಿಯಲ್ಲಿ ಬೆಳೆದವರು. ನಮ್ಮ ಗೆಳೆಯರನ್ನು ಒಬ್ಬರನ್ನೊಬ್ಬರು ಮುಟ್ಟುತ್ತಿದ್ದೆವು, ಒಬ್ಬರ ಹೆಗಲ ಮೇಲೆ ಇನ್ನೊಬ್ಬರು ಕೈ ಹಾಕುತ್ತಿದ್ದೆವು. ಅಷ್ಟಕ್ಕೆಲ್ಲ ಸಲಿಂಗ ಸಂಬಂಧ ಎಂದು ತಿಳಕೊಂಡರೆ ಹೇಗೆ?’ ಎಂದು ಹೇಳಿದರು.
ಆ ಹಿರಿಯರ ಮಾತಿಗೆ ಗೌರವಯುತವಾಗಿಯೇ ಅಸಮ್ಮತಿಯನ್ನು ಸೂಚಿಸುವ ಕಾಲವಿದು.
ನಾಗರಿಕತೆಯ ಪರಿಣಾಮವೋ, ಅಥವಾ ಇನ್ನೇನೋ ‘ಕೇವಲ ಸ್ನೇಹ’ ಎನ್ನುವುದು ಬರೇ ಇದ್ದು ತೋರಿಸಲಾಗದು, ಅದನ್ನು ಪುರಾವೆ ಸಮೇತ ತೋರಿಸಬೇಕಾದ ಸಂದರ್ಭ ನಮ್ಮ ಮುಂದೆ ಇದೆ. ಕಾಲೇಜಿನಲ್ಲಿದ್ದಾಗ ಒಂದೇ ಮಂಚದಲ್ಲಿ ಮಲಗಿಯೂ ಉಳಕೊಳ್ಳುತ್ತಿದ್ದ ‘ಕೇವಲ ಸ್ನೇಹ’ ಈಗ ಅಷ್ಟು ಸುಭವಾಗಿ ದೊರೆಯುವುದಿಲ್ಲ. ಎಲ್ಲ ಸಂಬಂಧಗಳಿಗೂ ಲೈಂಗಿಕ ಲಗತ್ತಿತ್ತು ಈ ನಾಗರೀಕತೆ ಅಪ್ಪಟ ಗೆಳೆತನವನ್ನು ಹಾಳುಮಾಡಿಹಾಕಿದೆ. ಅದಕ್ಕೆ ಲಿಂಗ ಪರಿಧಿಯಿಲ್ಲ ಎನ್ನುವುದನ್ನು ನಾವು ಜಾಗರೂಕರಾಗಿ ಗಮನಿಸಬೇಕಾಗಿದೆ. ನಾಲ್ವರು ಒಂದೇ ಕೋಣೆಯಲ್ಲಿ ಮುಜುಗರವಿಲ್ಲದೇ ಮಲಗಬಹುದೇನೋ, ಇಬ್ಬರು ಮಾತ್ರ ಒಂದು ಕೋಣೆಯಲ್ಲಿ ಮುಜುಗರವಿಲ್ಲದೇ ಮಲಗಲಾಗದ (ಒಂದೇ ಲಿಂಗದ ಅಥವಾ ವಿರುದ್ಧಲಿಂಗದ) ಕಾಲ ಬಂದಿದೆ.
* * *
ಕೆಲವು ವರ್ಷಗಳ ಹಿಂದೆ ನನ್ನ ಜತೆಗೆ ಕೆಲಸ ಮಾಡುತ್ತಿದ್ದ ನನ್ನ ಜತೆಕೆಲಸಗಾರರೊಬ್ಬರು ಕೆಲಸ ಬಿಟ್ಟು ಬೇರೊಂದು ಕೆಲಸಕ್ಕೆ ಹೋದಾಗ ನಾನು ಅವರನ್ನು ಡ್ರಿಂಕಿಗೆಂದು ಆಹ್ವಾನಿಸಿದ್ದೆ. ಬಹಳ ಮುಜುಗರದಿಂದ ಬರಲು ಒಪ್ಪಿಕೊಂಡಿದ್ದರು. ಬರೇ ಜೋಡಿಗಳಿದ್ದ ರೆಸ್ಟುರೆಂಟಿನಲ್ಲಿ ನಾವಿಬ್ಬರೇ ಗಂಡಸರು. ಎರಡು ಡ್ರಿಂಕು, ಊಟವಾದ ನಂತರ ಮನೆಗೆ ಹೋಗುವ ಮೊದಲು ಆತ ‘ತಪ್ಪು ತಿಳಿಯಬೇಡ ಗುರು, this pretty much amounts to date.’ ಎಂದು ಹೇಳಿ ಹೋಗಿದ್ದರು.
ಪೇಯ, ಊಟ ಮತ್ತು ಮೂವಿ ಯೆಂದರೆ ಅದೊಂದು ಡೇಟ್ ಎನ್ನುವ ಕ್ಲೀಶೆಯ ಕಲ್ಪನೆಯನ್ನು ನಾಗರಿಕತೆ ನಮಗೆ ಕಲಿಸಿದೆ. ಪಕ್ಕಪಕ್ಕದಲ್ಲಿ ದರ್ಶಿನಿಯಲ್ಲಿ ಕೂತು ತಿಂಡಿ ತಿನ್ನುವ ಕಾಲ ಹೊರಟು ಹೋಗುತ್ತಾ ಇದೆ. ಮೂರು ವರ್ಷದ ಗಂಡು ಮಗು ಬೊಂಬೆಯ ಜತೆ ಆಟ ಆಡಿದರೆ, ಪಿಂಕುಪಿಂಕಾದ ಬಟ್ಟೆ ಹಾಕಿದರೆ ಹೌಹಾರಿಹೋಗುವ ಅಮ್ಮಂದಿರುಗಳನ್ನು ಈ ಕಾಲ ತಯ್ಯಾರು ಮಾಡುತ್ತಲಿದೆ. ‘ಬ್ರೇವ್ ಎನಫ್ ಟು ವೇರ್ ಪಿಂಕ್’ ಎನ್ನುವ ಟಿ ಶರ್ಟುಗಳು ಲೈಂಗಿಕ ಲಿಬರೇಷನ್ನಿನ ಚಿಹ್ನೆಗಳಾಗಿ ಕಾಣುತ್ತಲಿವೆ.
ಇಲ್ಲಿ ಹೆಂಗಸರೇ ಇನ್ನೂ ಕೊಂಚ ಅದೃಷ್ಟವಂತರು. ಮದುವೆ ಮನೆಯಲ್ಲಿ ಜತೆಗೆ ಕೂತು ಮೆಹಂದಿ ಮಾಡಿಕೊಳ್ಳಬಹುದು, ಪರಸ್ಪರರ ಉಗುರಿಗೆ ಬಣ್ನ ಹಚ್ಚಿಕೊಳ್ಳಬಹುದು, ಲಿಪ್‌ಸ್ಟಿಕ್ ಶೇಡನ್ನು ಬದಲಿಸಿಕೊಳ್ಳಬದು, ಕಿಟ್ಟಿಪಾರ್ಟಿಗಳಲ್ಲಿ ಮಾರ್ಟಿನಿಯ ಗ್ಲಾಸುಗಳನ್ನು ಲಿಪ್‌ಸ್ಟಿಕ್ ಗುರುತನ್ನು ಒರೆಸಿ ಬದಲಿಸಿಕೊಳ್ಳಬಹುದು. ಈಗಲೂ ಅವೆಲ್ಲ ಸಲ್ಲುತ್ತದೆ. ಹೆಣ್ಣು ನನ್ನ ಗರ್ಲ್‌ಫ್ರೆಂಡಿನ ಜತೆ ಶಾಪಿಂಗ್ ಹೋಗಿದ್ದೆ ಎಂದು ಹೇಳಿದರೆ ಅಲ್ಲಿ ಇನ್ನೂ ಆಕೆ ಸ್ನೇಹಿತಳಿದ್ದರೂ ಇರಬಹುದು ಎಂಬ ಅನುಮಾನ ಕೊಂಚವಾದರೂ ಉಳಕೊಳ್ಳುತ್ತದೆ, ಆದರೆ ಒಬ್ಬ ಗಂಡು ಯಾರನ್ನಾದರೂ ತೋರಿಸಿ ‘ಈತ ನನ್ನ ಬಾಯ್‌ಫ್ರೆಂಡ್ ‘ ಎಂದಲ್ಲಿ ಅಲ್ಲಿ ಲೈಂಗಿಕವಲ್ಲದ ಬೇರೆ ಯಾವ ಸಂಬಂಧಕ್ಕೂ ಆಸ್ಪದವೇ ಕೊಡದೇ ಇರುವ ಕಾಲ ಬಂದಿದೆ.
ನಾಲ್ಕು ಜನ ಗಂಡಸರು ಸೇರಿದ ತಕ್ಷಣ ಬಿಯರು ಕುಡಕೊಂಡು, ಇಲ್ಲವೇ ಎಲೆಯಡಿಕೆ ಹಾಕಿಕೊಂಡು ಡರ್ರಂತ ತೇಗಿಯೋ ಹೂಸಿಯೋ ಇರದೆ, ಇಸ್ಪೀಟಾಟದ ಕಾರ್ಡುಗಳನ್ನು ತೆಗೆಯದಿದ್ದರೆ ಅದು ಗಂಡು ಪ್ರಪಂಚದ ಬಾಂಡಿಂಗೇ ಅಲ್ಲ. ಹಾಗಿರುವಾಗ ಯಾರೇ ಒಬ್ಬ ತನ್ನ ಇನ್ನೊಬ್ಬ ಗೆಳೆಯನನ್ನು ಕಂಡು ‘ಐ ಲವ್ ಯು, ಮ್ಯಾನ್’ ಎಂದು ಯಾವ ಲೈಂಗಿಕ ಲೇಬಲ್ಲಿಲ್ಲದೇ ಹೇಳುವುದು ನಿಜಕ್ಕೂ ಧಾಡಸೀ ಕೆಲಸವೇ

‍ಲೇಖಕರು avadhi

December 12, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

3 ಪ್ರತಿಕ್ರಿಯೆಗಳು

 1. Kallare

  ನಮಸ್ತೇ,
  ’ಒಬ್ಬ ಗಂಡು ಇನ್ನೊಬ್ಬ ಗಂಡಸನ್ನು ಬರೇ ಸ್ನೇಹಿತನಾಗಿ ಪಡೆಯುವುದು ಈ ನಾಗರೀಕ ಸಮಾಜದಲ್ಲಿ ಎಷ್ಟು ಕಷ್ಟ’ ಎನ್ನುವುದು ಚಿತ್ರವೊಂದರ ಕಥೆಯಾಗಬಹುದು. ಜೊತೆಗೆ, ನಮ್ಮ ಸುತ್ತ ಸಂಬಂಧಗಳ ವಿಷಯದಲ್ಲಿ ಅಲ್ಲಲ್ಲಿ ಕೆಲವು ಅಪಚಾರಗಳಾಗಬಹುದು. ಅಪಸವ್ಯಗಳಾಗಬಹುದು. ಆದರೆ ಅದನ್ನೇ ಸಮಾಜದ ಸ್ಥಿತಿಯೆಂದು ಹೇಳಬಹುದಾ?
  ನಮ್ಮಲ್ಲಿನ್ನೂ ’ಒಬ್ಬ ಗಂಡು ಮತ್ತೊಬ್ಬ ಗಂಡಸನ್ನು ಬರೇ ಬರೇ ಸ್ನೇಹಿತನಾಗಿ ನೋಡುವ, ಪಡೆಯುವ ಸಾಧ್ಯತೆ ಉಳಿದುಕೊಂಡಿದೆ’ ಅನ್ನುವುದು ನಿಜ. ಆ ಸಾಧ್ಯತೆಗಳು ಕಡಿಮೆಯಾಗುತ್ತಿದೆ ಎಂದರೂ ಸಹ ನಾನು ನಂಬುವುದಿಲ್ಲ. ಇನ್ನು ’ವಸ್ತುಸ್ಥಿತಿ’ ಎಂಬ ಮಾತು ದೂರವೇ.
  ಲೈಂಗಿಕತೆಯ ವಿಷಯದಲ್ಲಿ ಬದಲಾವಣೆಯಾಗಿದೆ ಎಂದರೆ ಒಪ್ಪಬಹುದು. ಆದರೆ, ಎಲ್ಲಾ ಸಂಬಂಧಗಳಿಗೂ ಲೈಂಗಿಕತೆಯ ಪಟ್ಟ ಕಟ್ಟಿ ಈ ’ನಾಗರೀಕತೆ’ ಅಪ್ಪಟ ಗೆಳೆತನವನ್ನೇ ನಾಶಮಾಡಿದೆ ಎಂದರೆ ಒಪ್ಪಲಾಗುವುದಿಲ್ಲ. (’ಪೇಯ , ಊಟ ಮೂವಿಯೆಂದರೆ ಅದೊಂದು ’ಡೇಟ್’ ಎನ್ನುವ ಕ್ಲೀಶೆಯ ಕಲ್ಪನೆಯನ್ನು ನಾಗರೀಕತೆ ನಮಗೆ ಕಲಿಸಿದೆ’ ಎನ್ನುವಾಗ ನಾಗರೀಕತೆಯ ಕುರಿತೇ ಪ್ರಶ್ನೆ ಹುಟ್ಟುತ್ತದೆ) ನೀವನ್ನುವ ವಿಷಯಗಳು ಅಲ್ಲಲ್ಲಿ ನಿಜವಿರಬಹುದು. ಆದರೆ ಅದು ಸಮಾಜದ ಮುಖವಲ್ಲ. ’Sample’ಗಳು ಬಹುತೇಕ ಸಮಯಗಳಲ್ಲಿ ವಸ್ತುಸ್ಥಿತಿಯ ದರ್ಶನ ಮಾಡಿಸುವುದಿಲ್ಲವಲ್ಲ? ಹಾಗೂ, ಸಂಬಂಧಗಳ ವಿಷಯದಲ್ಲಿ ಈ ’ಸ್ಯಾಂಪಲ್ಲುಗಳು’ ಬರೀ ’Sample’ಗಳೇ!!! (ಇಂಡಿಯಾ ಟುಡೇ ವರ್ಷಕ್ಕೊಮ್ಮೆ ಹೊರತರುವ SEX SURVEY ನೆನಪಿಗೆ ಬರುತ್ತದೆ ಇಲ್ಲಿ. ಡಿಸೆಂಬರ್ ಸಂಚಿಕೆ ನೋಡಿ)
  ಇನ್ನು, ’ಹೆಂಗಸರು ನನಗೆ ಲೇಡಿ ಡಾಕ್ಟರೇ ಬೇಕು ಎಂದರೆ, ಆ ವಾಕ್ಯ ಅರ್ಥವನ್ನೇ ಕಳೆದುಕೊಂಡಿದೆ, ಆ ಹಿರಿಯರ ಮಾತಿಗೆ ಗೌರವಯುತವಾಗಿ ಅಸಮ್ಮತಿ ಸೂಚಿಸುವ ಕಾಲವಿದು, ಇಬ್ಬರು ಒಂದೇ ಕೋಣೆಯಲ್ಲಿ ಮುಜುಗರವಿಲ್ಲದೇ ಮಲಗಲಾಗದು’…ಅನ್ನುವ ಮಾತನ್ನು ಯಾವ ನೆಲೆಗಟ್ಟಿನಲ್ಲಿ ಹೇಳುತ್ತಿದ್ದೀರೋ ತಿಳಿಯುತ್ತಿಲ್ಲ. ನಮ್ಮಲ್ಲಿನ್ನೂ ಹಾಗಿಲ್ಲವೆಂದೇ ನನ್ನ ಅನಿಸಿಕೆ.

  ಪ್ರತಿಕ್ರಿಯೆ
 2. Dr.D.M.Sagar

  Ya, this artile makes perfect sense in western society (For instance, USA and UK). A natural friendly bond between men is vanishing and viewed always with suspicion.
  I wanna make a quick note about the above comment. Although, they may look like mere “samples”, we shouldn’t forget that those samples are nothing but precursors to future trends. Trends are nothing but society itself.
  Indeed, in India still old buddies (chaddi dost!) do exist in a plain sense.
  Regards
  Dr.D.M.Sagar

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: