ಅಸಂಗತ

ರಮೇಶ ಗುಲ್ವಾಡಿ

ನನಗೆ ಮೊದಲು ನೀರು ಕುಡಿಯಬೇಕೆನಿಸಿತು.  ಗಂಟಲ ದ್ರವವೆಲ್ಲಾ ಆರಿ ಹೋದಂತಾಗಿ ಮಾತನಾಡುವ ಶಕ್ತಿಯನ್ನೇ ಕಳೆದುಕೊಂಡೆನೇನೋ  ಅನ್ನಿಸುವಂತೆ , ಕಣ್ಣುಗಳೂ ಮಂಜು ಮಂಜಾದಂತೆ ಎಲ್ಲವೂ ಅಸ್ಪಷ್ಟ. ಈಗಷ್ಟೇ ಆರು ಅಡಿ ಅಂತರದಲ್ಲಿ ಕುಳಿತಿದ್ದವರೆಲ್ಲಾ ಮೈಲುಗಳಷ್ಟು ದೂರವಾದಂತೆ ಎಲ್ಲವೂ ಅಯೋಮಯ ! ಏನಾಗುತ್ತಿದೆ ನನಗೆ  ಎಂದೂ ಅರ್ಥವಾಗದ ನಿಗೂಢ ! ಮೈಯೆಲ್ಲಾ ಹುಣ್ಣಾದವರಂತೆ  ಅಂಗಾಂಗಳಲ್ಲಿ ಅದುಮಿಟ್ಟ ನೋವೆಲ್ಲಾ ಹೊರನುಗ್ಗಿ  ತುಟಿಯಂಚಿಗೆ ಬಂದು ಅತ್ತೇ ಬಿಡೋಣ ಅನ್ನುವ ಹಾಗೆ…. ಏಕೆ ಹೀಗಾಗುತ್ತಿದೆ !

ನಿನ್ನೆ ದೊಡ್ಡಮ್ಮನ ಮಗ ಸೈಕಲ್ಲು ಕಲಿಸುತ್ತೇನೆ ಎಂದು ಜೊತೆಯಾಗಿ ಉತ್ಸಾಹಕ್ಕೆ ರೆಕ್ಕೆ ಕಟ್ಟಿದ್ದ! ಈ ವರ್ಷ ಶಾಲೆ ಆರಂಭವಾದೊಡನೇ ಸೈಕಲ್ ಸಿಗಬಹುದು,  ಮೊದಲೇ  ಕಲಿತಿದ್ದರೆ  ಸಲೀಸು  ಎಂದು ಪುಸಲಾಯಿಸಿದ್ದೂ ಅವನೇ.

ಪೆಡಲುಗಳನ್ನು ತುಳಿಯುವುದೋ  ಹ್ಯಾಂಡಲ್ಲನ್ನು ನಿಯಂತ್ರಿಸುವುದೋ ಎಂಬ ಗೊಂದಲವಾದಾಗ ಅವನು ಬೆನ್ನ ಹಿಂದಿನಿಂದ ಕೈಗಳನ್ನು ತಂದು ಧೈರ್ಯ ತುಂಬಿ ಎಷ್ಟೊಂದು ಸಹಕರಿಸಿದ್ದ!  ಕೆಲವೊಮ್ಮೆ ಅಗತ್ಯಕ್ಕಿಂತ ಹೆಚ್ಚಾಗಿ ಒತ್ತಿ ಹಿಡಿದುಕೊಂಡದ್ದಕ್ಕೋ ಏನೋ ಕಸಿವಿಸಿ ಎನಿಸಿದರೂ ಕಲಿಯುವ ಉತ್ಸಾಹದಲ್ಲಿ ಯಾವುದೂ ದೊಡ್ಡದೆನಿಸಲಿಲ್ಲ. 

ಹತ್ತನೇ ಕ್ಲಾಸಿನ ಹುಡುಗ ನನಗಿಂತ ಎರಡು ವರ್ಷ ದೊಡ್ಡವನಲ್ವೇ ? ಅವನ ಕೈಗಳಲ್ಲಿ ಶಕ್ತಿಯೂ ಹೆಚ್ಚೇ. ಹಾಗಾಗಿ ಅವನು ಹಿಡಿದುಕೊಂಡಾಗಲೆಲ್ಲಾ ನೋವಾಗುತಿತ್ತೋ ಏನೋ . ಆದರೆ ಪದೇ ಪದೇ ಆತ ಮುಖವನ್ನು ನನ್ನ ಮುಖಕ್ಕೆ ಉಜ್ಜುವಂತೆ ಹತ್ತಿರ ತರುತಿದ್ದುದು  ಇಷ್ಟವಾಗುತ್ತಿರಲಿಲ್ಲ.

“ಕಲಿಯುವುದನ್ನು ನಿಲ್ಲಿಸಬಾರದು, ನಾಳೆಯೂ ಬಾ..” ಎಂದಿದ್ದ. ಮೈದಾನವೇನೂ ದೂರವಿರಲಿಲ್ಲ. ಕಲಿಯುವ  ಆಶೆಯೂ  ಬಹಳವಿತ್ತು. ಆದರೆ ಇಂದೇಕೆ  ಹೀಗಾಯಿತು !

ಶಾಲೆಗಳು ಮುಚ್ಚಲ್ಪಟ್ಟು “ವಠಾರ ಶಾಲೆ” ಗಳು ಆರಂಭವಾದಾಗ ಮನೆ ಪಕ್ಕದ ದೇವಸ್ಥಾನದ ಜಗುಲಿಯ  ಆ ತುದಿಯಲ್ಲೊಂದು  ಈ ತುದಿಯಲ್ಲೊಂದು  ತರಗತಿಗಳನ್ನು ನಡೆಸಲು ಶುರುವಾಗಿ,  ಅಕ್ಕ ಪಕ್ಕದ ಹತ್ತಿಪ್ಪತ್ತು  ಮಕ್ಕಳು  ಮತ್ತೆ ಒಟ್ಟಾಗುವಂತಾಗಿತ್ತು. ಆದರೆ ನನ್ನಿಂದಾಗಿ ಎಲ್ಲವೂ ಹಾಳಾಗಿ ಹೋಯ್ತು ಎನ್ನುವಂತೆ ಸರಸ್ವತಿ  ಟೀಚರು ಹೆಡ್ ಟೀಚರಿಗೆ ಫೋನಲ್ಲಿ ಹೇಳುತ್ತಿರುವುದು ಅಸ್ಪಷ್ಟವಾಗಿ ಕೇಳುತಿತ್ತು.

“ಹೌದು ಮೇಡಂ….., ರಕ್ತ ನೆಲದ ಮೇಲೆಲ್ಲಾ ಬಿದ್ದು ಹೋಗಿದೆ. ಆ ಕುಳ್ಳು ಹುಡುಗಿ ರಶ್ಮೀ ಕಂಡು ಹೇಳಿದ್ಳು….. ಈಗ ಏನು ಮಾಡುವುದು ಮೇಡಂ ?”

ಆ ಕಡೆಯಿಂದ ಹೆಡ್ ಟೀಚರು ಏನು ಹೇಳಿದರೋ ಗೊತ್ತಾಗಲಿಲ್ಲ. ಹಾಂ….ಹೂಂ….ಅಂದವರೇ ಮತ್ತೆ ಮಾತು ಸೇರಿಸಿದರು, “ಇಲ್ಲ ಮೇಡಂ, ಶಂಕರ ಮಾಸ್ಟ್ರಿಗೆ ವಿಷಯ ಗೊತ್ತಾಗಿಲ್ಲ. ಅವರು ಆ ಕಡೆ ಕ್ಲಾಸ್ ಮಾಡ್ತಿದ್ದಾರಲ್ಲಾ….. ಗಲಾಟೆ ಜಾಸ್ತಿ….ಅವರಿಗೆ ಗೊತ್ತಾದರೆ ಕಥೆ ಅಷ್ಟೇ ! ಅರ್ಚಕರಿಗೆ ಕ್ಲೋಸಲ್ವೇ….. !

ರಂಪ ಎಬ್ಬಿಸಿ ಬಿಡ್ತಾರೆ….. ಅಂದ ಹಾಗೆ ಪೋಷಕ ಸಂಘದ ಅಧ್ಯಕ್ಷರಿಗೆ ಒಂದು ಮಾತು ತಿಳಿಸಿಬಿಡಿ ಮೇಡಂ. ಆ ಮೇಲೆ ಅವರ ರಗಳೆ ಯಾರಿಗೆ ಬೇಕು !  ಹೂಂ….ಮೇಡಂ…. ನಿಮ್ಮ ಫೋನಿಗೆ ಕಾಯ್ತೇನೆ….”

ಸರಸ್ವತೀ ಟೀಚರ್  ಪಾಪದವರೇನೋ ಹೌದು. ಆದರೆ ಶಂಕರ ಮಾಸ್ಟ್ರನ್ನು ಕಂಡರೇ ಅವರಿಗಾಗದು !  ಈಗ “ಹೀಗೀಗೆ ಆಯ್ತು” ಅಂತ ಅವರಿಗೆ ಗೊತ್ತಾದರೆ ದೇವಸ್ಥಾನದ ಅರ್ಚಕ ರಾಮ ಜೋಯಿಸರಿಗೆ ಹೇಳದೆ ಬಿಡುವವರಲ್ಲ!  ದೇವಸ್ಥಾನದ ಆಡಳಿತದ ವಿಚಾರದಲ್ಲಿ ಜೋಯಿಸರಿಗೂ ಪಂಚಾಯತ್  ಅಧ್ಯಕ್ಷ  ಸೀತಾರಾಮ  ಶೆಟ್ಟರಿಗೂ  ಕಟಿಪಿಟಿ ಇಂದು ನಿನ್ನೆಯದಲ್ಲ ! “ಅಪಚಾರವಾಯಿತು ” ಎಂದು ಗುಲ್ಲೆಬ್ಬಿಸಿ ಊರು ಒಂದು ಮಾಡಲು ಇಬ್ಬರೂ ಹಿಂದೆ ಬೀಳುವುದಿಲ್ಲ!

ಟೀಚರ್ ಫೋನ್ ಮತ್ತೆ ರಿಂಗಾಯಿತು. ಆ ಕಡೆಯಿಂದ ಪೋಷಕ ಸಂಘದ ಅಧ್ಯಕ್ಷರೇ ಮಾತನಾಡುತಿರುವಂತಿತ್ತು.    “……. ಹೌದು, ಹೌದು….. ಈಗಷ್ಟೇ….ಹತ್ತಿಪ್ಪತ್ತು ನಿಮಿಷ ಆಯಿತಷ್ಷೇ….ಹೂಂ….ಇಲ್ಲ ಇಲ್ಲ….ಯಾರಿಗೂ  ಗೊತ್ತಾಗಿಲ್ಲ. …ಅದೇ ….ದೇವಸ್ಥಾನದ ಪೌಳಿಯಲ್ವಾ…. ? ಏನ್ ಮಾಡೋಣಂತೀರಿ ಸರ್….”

ಈ ಸರಸ್ವತೀ  ಟೀಚರೂ  ಪೋಷಕ  ಸಂಘದ  ಅಧ್ಯಕ್ಷರೂ ಒಟ್ಟಾಗಿ ಹೆಡ್ ಟೀಚರ್ ಮೇಲೆ ಯಾವಾಗಲೂ ಕೆಂಡ ಕಾರುತಿದ್ದರು !  ಸೇವಾ ಹಿರಿತನವಿದ್ದರೂ ಮುಖ್ಯೋಪಾಧ್ಯಾಯಿನಿ ಆಗದಂತೆ ತಡೆ ಗೋಡೆಯಂತಿರುವ  ಇಂದಿರಾ ಮೇಡಂ  ಸರ್ವಾಧಿಕಾರಿಯಂತೆ  ವರ್ತಿಸುತ್ತಾರೆ  ಎಂದು  ಅಧ್ಯಕ್ಷರ ಕಿವಿಯನ್ನು ಆಗಾಗ ಊದುತ್ತಾ, ಕೆಲವೊಮ್ಮೆ ವಿದ್ಯಾರ್ಥಿಗಳ ಮುಂದೆಯೇ ಕಚ್ಚಾಡುತ್ತಾ ಬಂದಿದ್ದರೂ ಈ ದಿನ ಏಕೋ ಶಾಂತವಾಗಿ ಮಾತುಕತೆ ನಡೆಯುತ್ತಿದೆ ಎಂದರೆ ಗಂಭೀರ ವಿಷಯವೇ ಇರಬೇಕು ಎಂದು ನನಗೂ ಅನಿಸತೊಡಗಿತು.

ಸಹಪಾಠಿಗಳೆಲ್ಲಾ ತಮ್ಮ ತಮ್ಮಲ್ಲೇ ಗುಸು ಗುಸು ಎನ್ನುತ್ತಿರುವುದು ಸ್ಪಷ್ಟವಾಗಿ ಕೇಳತೊಡಗಿತು. ಮುಸಿ ಮುಸಿ ನಗುತಿರುವರೇ ಎಂದೂ ಅನಿಸಿತು‌.

ಸರಸ್ವತೀ  ಟೀಚರ್  ಕೈಯಲ್ಲಿದ್ದ ಪಾಠ ಪುಸ್ತಕವನ್ನು ಎಡಗೈಗೂ ಬಲಗೈಗೂ ವರ್ಗಾಯಿಸುತ್ತಾ ಅತ್ತಿಂದಿತ್ತ ಇತ್ತಿಂದತ್ತ ತಿರುಗುತ್ತಾ ಪದೇ ಪದೇ ನನ್ನತ್ತ ಕರುಣಾಪೂರ್ಣವೋ,  ಸಿಟ್ಟೋ ಎಂದೂ ಗೊತ್ತಾಗದ ರೀತಿಯಲ್ಲಿ ನೋಡುತ್ತಾ ಇರುವುದನ್ನು ಗಮನಿಸಿದೆ.

ಕುಳಿತಲ್ಲಿಂದ ಎದ್ದು ನಿಲ್ಲಬೇಕು ಎಂದು ಅನಿಸುತಿದ್ದರೂ ತಗ್ಗಿಸಿದ ತಲೆಯನ್ನು ಎತ್ತಲಾಗುತಿಲ್ಲವೇನೋ ಎಂದು ಭಾವಿಸುತಿರುವಾಗ ಟೀಚರ್ ಮೊಬೈಲ್  ಮತ್ತೆ ಸದ್ದು ಮಾಡಿತು.

” ಹಲೋ….ನಮಸ್ತೇ  ನಮಸ್ತೇ….! ಓ…. ಅಹಲ್ಯಾದೇವಿಯವರೇ…..!!! ಗೊತ್ತೇ ಆಗ್ಲಿಲ್ಲ ! ಹೇಳಿ ಮೇಡಂ…..”

ಅಹಲ್ಯಾದೇವಿಯೆಂದರೆ  ಮಹಿಳಾ ಮಂಡಳಿಯ  ಅಧ್ಯಕ್ಷೆಯೇ ಇರಬೇಕು.  ತುಂಬಾ  ಹೆಸರುವಾಸಿ. “ಸಮಾಜ ಸೇವಕಿ” ಎಂದು ಶಾಲೆಯ  ದಶಮಾನೋತ್ಸವ  ಸಂದರ್ಭದಲ್ಲಿ ಸನ್ಮಾನ ಕೂಡಾ ಮಾಡಿದ್ದರು. ಅಬ್ಬಾ….!  ಆ ದಿನ ಅವರು ಉಟ್ಟ ಸೀರೆಗೆ  ಮೂವತ್ತು ಸಾವಿರ ರೂಪಾಯಿಯಂತೆ ! ಆಗಾಗ  ಪತ್ರಿಕೆಗಳಲ್ಲಿ ಅವರ ಫೋಟೋ ಬರುತ್ತಾ ಇರುತ್ತವೆ.

ಟೀಚರು ಅವರು ಹೇಳಿದ್ದಕ್ಕೆಲ್ಲಾ ಹೂಂ, ಹೂಂ ಎನ್ನುತ್ತಾ ಸೀರೆಯ ಸೆರಗಿನಲ್ಲೇ ಪದೇ ಪದೇ ಬೆವರೊರೆಸಿಕೊಳ್ಳುತ್ತಾ ಇರುವುದನ್ನು ನೋಡಿದರೆ  ದೊಡ್ಡ ಗಂಡಾಂತರವೊಂದು ಮುಂದಿದೆಯೇನೋ ಎಂಬಂತೆ  ಭಾಸವಾಗತೊಡಗಿತು !

ಬಹುಶಃ ಕರೆ ಮುಕ್ತಾಯದ ಹಂತದಲ್ಲಿತ್ತು.

“ಆಯಿತು ಮೇಡಂ….

ಎಲ್ಲಾ ಕ್ಲೀಯರ್ ಮಾಡಿಸ್ತೇನೆ…..ಥ್ಯಾಂಕ್ಸ್ ಮೇಡಂ…….ಥ್ಯಾಂಕ್ಸ್ ಮೇಡಂ…..”

ನೀರಿನ ಬಾಟಲಿ ಬ್ಯಾಗಿನೊಳಗಿತ್ತು. ನಿಧಾನವಾಗಿ ಬ್ಯಾಗ್ ಸರಿಸಿ ಹತ್ತಿರ ಎಳೆದುಕೊಂಡೆ. ಬಾಟಲಿಯನ್ನು ಕೈಗೆತ್ತಿಕೊಳ್ಳಬೇಕೆಂದುಕೊಂಡಾಗ ಸರಸ್ವತೀ ಟೀಚರ್ ಕಾಲ ಹತ್ತಿರವೇ ನಿಂತಿದ್ದರು !

” ಸ್ವಲ್ಪ ಎದ್ದು ನಿಲ್ತೀಯಾ ….”

ಅವರ ಧ್ವನಿಯಲ್ಲಿ ಭಯವಿದ್ದಂತೆನಿಸಿತು.  ನನಗೂ ಈ ಅವಕಾಶವೇ ಬೇಕಾಗಿತ್ತು. ಕಾಲುಗಳೆರಡೂ ಒಂದಕ್ಕೊಂದು ಅಂಟಿಕೊಂಡಂತೇ ಇದ್ದವು !

ಪಕ್ಕದಲ್ಲಿದ್ದ ಗೋಡೆಗೆ ಕೈ ಕೊಟ್ಟು ನಿಧಾನವಾಗಿ ಎದ್ದೆ.

“ನೀನು ಮನೆಗೆ ಹೋಗು….ಎಲ್ಲಾ ಸರಿಯಾಗುವವರೆಗೆ ಕ್ಲಾಸಿಗೆ ಬರುವುದು ಬೇಡ. ಹೋಗ್ಬಹುದಲ್ವಾ….?”

ಮಾತು  ಆದೇಶದಂತೇ  ಇದ್ದುದರಿಂದ ನಿಧಾನವಾಗಿ ತಲೆ ಅಲ್ಲಾಡಿಸಿದೆ.  ಪುಸ್ತಕದ  ಬ್ಯಾಗನ್ನು ಅವರೇ ಹೆಗಲಿಗೆ ನೇಲಿಸಿಬಿಟ್ಟರು.  ಮೆಲ್ಲನೆ ಹೆಜ್ಜೆ ಎತ್ತಿಟ್ಟೆ.

ಕಿಬ್ಬೊಟ್ಟೆಯ ಕೆಳಗೆ ಏನೋ ಮುಳ ಮುಳ ಎನ್ನುವಂತೆ ಭಾಸವಾಗತೊಡಗಿತು. ಅಂಟು ಅಂಟಾಗಿ ಏನೋ ಹರಿದಾಡಿದಂತಾಯಿತು.  ಒಂದು ಥರಾ ಹಗುರವಾದ ಭಾವ.  ದೇವಸ್ಥಾನದ ಪೌಳಿಯ ಮೆಟ್ಟಲಿಳಿದೆ….

“ನೋಡು ನೋಡು…ಹೇಗೆ ಒದ್ದೆಯಾಗಿದೆ ! ಭಾರತದ ಭೂಪಟ ಬಿಡಿಸಿದ ಹಾಗಿಲ್ವೇ…..” ಕಿಸಕ್ಕೆಂದರು ಯಾರೋ …!

“ಕ್ಲಿಕ್” ಎಂದ ಹಾಗಾಯಿತು ! ಯಾರೋ ಮೊಬೈಲಲ್ಲಿ ಫೋಟೋ ತೆಗೆದಿರಬೇಕು !

ಹೆಜ್ಜೆ ಮೇಲೆ ಹೆಜ್ಜೆ ಜೋಡಿಸುತ್ತಾ ಮನೆಯ ದಾರಿ ಹಿಡಿದೆ. ಹತ್ತೇ ನಿಮಿಷದ ದೂರ. ಏಕೋ ಏನೋ ಸ್ವಲ್ಪ ಎತ್ತರವಾಗಿದ್ದೇನೆ ಅನಿಸಿತು !

ರಸ್ತೆಯ ತಿರುವಿನಲ್ಲಿ ದೊಡ್ಡಮ್ಮನ ಮಗನ ಸೈಕಲ್ ಕಂಡಿತು. ವೇಗವಾಗಿ ಬಂದವನೇ ಗುದ್ದಿಯೇ ಬಿಡುತ್ತಾನೇನೋ ಅನ್ನುವಂತೆ ಬ್ರೇಕ್ ಒತ್ತಿದ. ಮುಗ್ಗರಿಸಿದಂತಾಗಿ ಸೈಕಲ್ ಹ್ಯಾಂಡಲ್ ಹಿಡಿದುಕೊಂಡೆ.

” ಹೇ…..ಸಂಜೆ ಬರ್ತಿಯಲ್ಲಾ……”

ಅವನ ಧ್ವನಿಯಲ್ಲಿ ಉತ್ಸಾಹ ತುಳುಕುತಿತ್ತು. ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ.

ತಲೆ ತಗ್ಗಿಸಿ  “ಮುಟ್ಟು ”  ಎಂದೆ !

ಅವನು ಹೌಹಾರಿ ” “ಏ…..ಏ….ಏನು ಹೇಳ್ತಿದ್ದೀಯಾ…..?! ಇಲ್ಲಿ ಬೇಡಾ…..ಆ ಮೇಲೆ…..ನಾಲ್ಕು ಗಂಟೆಗೆ ಅಲ್ಲೇ ಬಾ…..”

ದಡಬಡಾಯಿಸಿ ಸೈಕಲ್ ಪೆಡಲನ್ನು ಜೋರಾಗಿ ತುಳಿದ.

ಹ್ಯಾಂಡಲ್ ಆಧಾರ ತಪ್ಪಿ ಹೋದದಕ್ಕೋ ಏನೋ ದೇಹದ ನಿಯಂತ್ರಣ ತಪ್ಪಿ ಹೋಗಿ ತಲೆ ಸುತ್ತು ಬಂದಂತಾಗಿ ಆಕಾಶವೆಲ್ಲಾ ಕೆಂಪು ಕೆಂಪಾಗಿ ಕೆಂಡದ ಮಳೆ ಸುರಿಯುತ್ತದೇನೋ ಎಂಬಂತಾಗಿ “ಅಮ್ಮಾ” ಎಂದು ಕೂಗಿ ಕೊಳ್ಳಲು  ಪ್ರಯತ್ನಿಸಿದೆ.

ನಾಲಗೆಯನ್ನೇ ಯಾರೋ  ಕತ್ತರಿಸಿಬಿಟ್ಟಿದ್ದಾರೆ  ಎನಿಸಿ  ಎಂಜಲು  ನುಂಗುತ್ತಾ ಸಾವರಿಸಿಕೊಳ್ಳಲು ಆರಂಭಿಸಿದೆ.

ರಮೇಶ ಗುಲ್ವಾಡಿ – ಕಟ್ಟಡ ಕಾರ್ಮಿಕರು, ಕಥೆಗಾರರು. ಜನಪರ ಚಳುವಳಿಗಳಲ್ಲಿ ಆಸಕ್ತಿ.

‍ಲೇಖಕರು Avadhi

October 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ರಗಳೆಗಳು ಬೇಕು..

ರಗಳೆಗಳು ಬೇಕು..

ಅನುಷ್ ಶೆಟ್ಟಿ ಯಾರೂ ಇರದ, ಯಾವ ಕೆಲಸವೂ ಇರದ, ಯಾವ ಜಂಜಾಟಗಳು, ರಗಳೆಗಳು, ಒತ್ತಡವೂ ಇರದ, ಸದ್ದಿರದ, ಏನೂ ಮಾಡದೆ ಎಲ್ಲರಿಂದ ದೂರವಿರುವ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This