ಅಸಲಿಗಿಂತ ನಕಲಿಯೇ ಜಾಸ್ತಿ…

-ಹಾಲ್ದೊಡ್ಡೆೇರಿ ಸುಧೀಂದ್ರ ಇಂದು ಪರಸ್ಪರ ಪೈಪೋಟಿ ನಡೆಸದ ಕ್ಷೇತ್ರವೇ ಇಲ್ಲದಿರುವಾಗ ಪತ್ರಿಕೋದ್ಯಮವೂ ಇದಕ್ಕೆ ಹೊರತಾಗಿರಲು ಸಾಧ್ಯವಿಲ್ಲ. ಆದರೆ ನಾವು ಪತ್ರಿಕಾ ಕ್ಷೇತ್ರದಲ್ಲಿ ಕಾಣುತ್ತಿರುವ ಪೈಪೋಟಿಯಾದರೂ ಯಾವ ರೀತಿಯದು? ಇತರ ಪತ್ರಿಕೆಗಳು ಪಡೆಯಲಾಗದ ಅಥವಾ ಪಡೆದಿರಲಾರದೆಂದು ಭಾವಿಸಲಾದ ಸುದ್ದಿಯನ್ನು ಸಂಗ್ರಹಿಸಿ ವರದಿ ಮಾಡುವ ಕಾತರ ಸ್ವಾಭಾವಿಕವಾದುದು. ಆದರೆ ಆತುರದಲ್ಲಿ ಪ್ರಕಟಿಸುವ ಮತ್ತು ಸ್ಕೂಪ್ ಎಂದು ಭಾವಿಸಲಾಗುವ ಸುದ್ದಿಗಳಲ್ಲಿ ನಿಜಕ್ಕೂ ಎಷ್ಟು ಸುದ್ದಿಗಳು ಆಯಾ ಪತ್ರಿಕೆಯ ವಿಶೇಷ ಸುದ್ದಿ ಇರಬಹುದೆಂದು ಆಳವಾಗಿ ಅಭ್ಯಾಸ ಮಾಡಿದಾಗ ಅಸಲಿಗಿಂತ ನಕಲಿಯೇ ಜಾಸ್ತಿ ಪತ್ತೆಯಾದರೆ ಆಶ್ಚರ್ಯವೇನಿಲ್ಲ. ಅಮೆರಿಕದ ವಾಟರ್‌ಗೇಟ್ ಹಗರಣದಂತಹ ಭಾರಿ ಸ್ಕೂಪ್‍ಗಳನ್ನು ನಾವು ಪತ್ತೆಮಾಡಿ ವರದಿ ಮಾಡದಿರಬಹುದು. ಮಹಾಜನ ವರದಿಯಲ್ಲಿ ಏನು ಶಿಫಾರಸು ಮಾಡಲಾಗಿದೆಯೆಂದು ಅದು ಪ್ರಕಟವಾಗುವ ಮುನ್ನ ಕಂಡುಹಿಡಿದು ವರದಿಮಾಡಿದವರು ನಮ್ಮಲ್ಲಿದ್ದಾರೆ. ಇಂತಹ ಅನೇಕ ಸ್ಕೂಪುಗಳು ಪ್ರಕಟವಾಗಿರುವುದೇನೋ ನಿಜ. ನಕಲಿ ಸ್ಕೂಪುಗಳು ಸಂಖ್ಯೆಯಲ್ಲಿ ಅವುಗಳಿಗಿಂತ ಜಾಸ್ತಿ ಎಂಬುದು ಅಷ್ಟೇ ನಿಜ.

ಸ್ಕೂಪುಗಳ ಪ್ರಧಾನ ಅನ್ವೇಷಣೆಗಾರರು ಬೆಂಗಳೂರಿನಲ್ಲಂತೂ, ಸೆಕ್ರೆಟರಿಯೇಟ್ ವರದಿಗಾರರು, ವಿಧಾನಸೌಧ ಬಿಟ್ಟು ಬೇರೆ ಕಡೆಗಳಿಂದಲೂ ವಿಶೇಷ ಸುದ್ದಿಗಳನ್ನು ಅಗೆದು ತೆಗೆಯಬಲ್ಲ ನಿಸ್ಸೀಮರೂ ಇದ್ದಾರೆ. ವಿಧಾನಸೌಧದ ಫೈಲುಗಳನ್ನು ಬಗೆದು ತೆಗೆಯಲಾಗುವ ಸುದ್ದಿಗಳನ್ನು ಉದಾಹರಣೆಗೆ ಎತ್ತಿಕೊಳ್ಳೋಣ. ಈ ಮೂಲದಿಂದ ಪಡೆದ ಅನೇಕ ಹಳಸಾದ ಸುದ್ದಿಗಳು ಹೊಸತಿನ ರೂಪ ತಾಳಿ ಪ್ರಕಟವಾಗುವುದನ್ನು ಕಂಡಿದ್ದೇವೆ. ಸೇತುವೆಗಳ ಮೂಲಕ ಹಾದು ಹೋಗುವ ವಾಹನಗಳಿಂದ ಸುಂಕ ವಸೂಲಿ, ಗ್ರಾಮಾಂತರ ಪ್ರದೇಶಗಳ ರಸ್ತೆ ನಿರ್ಮಾಣಕ್ಕೆ ಕಾರ್ಪೇರೇಷನ್ ರಚನೆ ಮುಂತಾದವುಗಳ ಬಗ್ಗೆ ಸರ್ಕಾರದ ಆಲೋಚನೆ ಈಚೆಗೆ ಪತ್ರಿಕೆಗಳಲ್ಲಿ ಮೂರು ತಿಂಗಳ ಅವಧಿಯಲ್ಲಿ ನಾಲ್ಕೈದು ಬಾರಿ ಸುದ್ದಿಯಾಗಿ ಪ್ರಕಟಗೊಂಡವು. ಒಂದು ಪತ್ರಿಕೆಯಲ್ಲಿ ಪ್ರಕಟವಾದ ವಿಶೇಷ ಸುದ್ದಿ ಎರಡು ತಿಂಗಳ ನಂತರ ಬೇರೊಂದು ಪತ್ರಿಕೆಯಲ್ಲಿ ರೂಪಾಂತರಗೊಂಡು ಬೇರೆ ವಿವರಗಳು ಪ್ರಾಧಾನ್ಯ ಪಡೆದು ಅಚ್ಚಾಗಿರುತ್ತದೆ. ಅಷ್ಟೇಕೆ, ಒಂದೇ ಪತ್ರಿಕೆಯಲ್ಲಿ ಈ ರೀತಿಯ ಪುನರಾವರ್ತನೆ ಆಗುವುದು ಅಪರೂಪವೇನಲ್ಲ. ಓದುಗರು ಇದನ್ನು ಗಮನಿಸಿರುವುದಿಲ್ಲ ಎಂದು ಭಾವಿಸಿದರೆ ತಪ್ಪಾಗುತ್ತದೆ. ಸಾಮಾನ್ಯವಾಗಿ ವಿಧಾನಮಂಡಲದ ಅಧಿವೇಶನ ಮುಗಿದ ಕೂಡಲೇ ಸ್ಕೂಪುಗಳ ಭೇಟೆ ಆರಂಭವಾಗುತ್ತದೆ. ವಿಧಾನಸೌಧದ ಮೂರು ಮಹಡಿಗಳನ್ನು ಹತ್ತಿ ಇಳಿಯುವ ವರದಿಗಾರರು, ಒಬ್ಬರಿಗೊಬ್ಬರು ಗೊತ್ತಾಗದ ರೀತಿಯಲ್ಲಿ ಯಾರಾದರೊಬ್ಬ ಮಂತ್ರಿ ಅಥವಾ ಸೆಕ್ರೆಟರಿಯ ಕಚೇರಿಯೊಳಗೆ ನುಸುಳಿಕೊಂಡು ಆ ಬಡಪಾಯಿಯನ್ನು ಸುದ್ದಿಗಾಗಿ ಪೀಡಿಸಿದಾಗಲೆಲ್ಲ ಹೊಸ ಸುದ್ದಿಯೇ ಸಿಗುವುದೆಂದು ನಿರೀಕ್ಷಿಸುವುದು ಹೇಗೆ? ಅಲ್ಲಿ ಸಿಗುವ ಸುದ್ದಿ ತನ್ನ ಪತ್ರಿಕೆಗೆ ಪ್ರತ್ಯೇಕವಾದುದೆಂಬ ಸಂಭ್ರಮದಲ್ಲಿ ವರದಿಗಾರ ಹೊರಟ ನಂತರ ಬೇರೆ ಪತ್ರಿಕೆಯ ವರದಿಗಾರ ತಿಳಿದೋ ತಿಳಿಯಿಅದೆಯೋ ಅದೇ ಕಚೇರಿಗೆ ಬಂದು ಅದೇ ಸುದ್ದಿಯನ್ನು ಪಡೆದು “ತನಗೇ ಸಿಕ್ಕಿದ್ದು” ಎಂದು ಎದೆಯುಬ್ಬಿಸಿಕೊಂಡು ಹೊರಟಾಗ ಸ್ಕೂಪು ತೋಪಾಗಿ ಬಿಡುತ್ತದೆ. ವಿಶೇಷ ಸುದ್ದಿಗಳಿಗಾಗಿ ವಿಧಾನಸೌಧವನ್ನೇ ಕೇಂದ್ರವೆಂದು ಪರಿಗಣಿಸುವುದು ತಪ್ಪಿದರೆ ಹಳಸಾದ ಸುದ್ದಿಯನ್ನು ಓದುಗರಿಗೆ ಬಡಿಸುವ ಅಥವಾ ಸ್ಕೂಪು ತೋಪಾಗುವ ಸಂಭವವೂ ತಪ್ಪುತ್ತದೆ. ಮಂತ್ರಿ ಅಥವಾ ಸರ್ಕಾರಿ ಅಧಿಕಾರಿಯಿಂದ ಆಲೋಚನೆಯಲ್ಲಿರುವ “ಯೋಜನೆ” ಬಗ್ಗೆ ವಿವರಗಳನ್ನು ಪಡೆಯುವ ಬಗ್ಗೆ ತೋರುವಷ್ಟೇ ಉತ್ಸಾಹವನ್ನು ಜನ ಸಾಮಾನ್ಯರು ಎದುರಿಸುತ್ತಿರುವ ವಿಶಿಷ್ಟ ಸಮಸ್ಯೆ ಬಗ್ಗೆ ಹಾಗೂ ಹೃದಯಂಗಮ ಘಟನೆ ಬಗ್ಗೆ ತೋರಿದರೆ ಸಿಗುವ ಸ್ಕೂಪು ಎಲ್ಲಕ್ಕಿಂತ ಮಿಗಿಲು ಆಗಬಹುದು. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 1975ರ ರಾಜ್ಯ ಸಮ್ಮೇಳನ ಮಂಡ್ಯದಲ್ಲಿ ನಡೆದಿತ್ತು. ಅಂದಿನ ದಿನಗಳಲ್ಲಿ ಸಂಘವು ಅತ್ಯುತ್ತಮ ಗುಣಮಟ್ಟದ ಸ್ಮರಣ ಸಂಚಿಕೆಯನ್ನು ಹೊರತರುತ್ತಿತ್ತು. ಈ ಸಂಚಿಕೆಯಲ್ಲಿ ವಿ.ರಘುರಾಮ ಶೆಟ್ಟಿ, ಸುರೇಂದ್ರ ದಾನಿ, ಖಾದ್ರಿ ಶಾಮಣ್ಣ, ಎಂ.ಎಸ್.ಚಂದ್ರಮೌಳಿ, `ಸುದ್ದಿಜೀವಿ’ (ಹೆಚ್.ಆರ್.ನಾಗೇಶರಾವ್), ಶ್ರೀಹರ್ಷ, ಸಿ.ವಿ.ರಾಜಗೋಪಾಲ, ಎಸ್.ವಿ.ಜಯಶೀಲರಾವ್, ಸೂ.ರಮಾಕಾಂತ, ಮ.ಶ್ರೀಧರ ಮೂರ್ತಿ, ಮಾ.ನಾ.ಚೌಡಪ್ಪ, ಐ.ಕೆ.ಜಾಗೀರದಾರ, ರಾಜಾ ಶೈಲೇಶಚಂದ್ರ ಗುಪ್ತ, ವಿ.ಟಿ.ರಾಜಶೇಖರ ಶೆಟ್ಟಿ, ಅರಕೆರೆ ಜಯರಾಮ್ ಮುಂತಾದವರೊಂದಿಗೆ ಕೆ.ಶ್ರೀಧರ ಆಚಾರ್ ಅವರ ಲೇಖನವೂ ಇದೆ. ಅವರ ಬರಹ ಶೈಲಿಗೆ ಇದೊಂದು ಸ್ಯಾಂಪಲ್.]]>

‍ಲೇಖಕರು avadhi

August 17, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This