ಕೇಳು ಜನಮೇಜಯ…
ಕಥನ ಸಂಸ್ಕೃತಿಯ ಅನನ್ಯ ರೂಪಕದಂತಿದೆ ಈ ಸೊಲ್ಲು. ಪ್ರಭುತ್ವವನ್ನು ಮಣಿಸುವ, ಮೀರುವ, ತಿದ್ದುವ, ನಿರ್ದೇಶಿಸುವ ಮತ್ತು ಲೋಕಜ್ಞಾನವನ್ನು ಅದಕ್ಕೆ ಕೊಡುವ ಧ್ಯಾನ ಹಾಗೂ ಧ್ಯಾಸದಲ್ಲಿ ಕಥನದ ಪರಂಪರೆಯಿರುವುದು. ಅದಕ್ಕಿಂತಲೂ ಮಿಗಿಲಾಗಿ, ಅಬಾಧಿತ ನಿಕಟತೆಯೆಂಬಂತೆ ಸಂಸ್ಕೃತಿಯೇ ಒಂದು ಕಥನವೂ, ಕಥನವೇ ಸಂಸ್ಕೃತಿಯ ಸಂವಿಧಾನವೂ ಆಗಿದೆ.
ಒಬ್ಬ ವಾಲ್ಮೀಕಿಯ ರಾಮಾಯಣವನ್ನು ಎಷ್ಟೆಲ್ಲ ಕವಿಗಳು ಮರಳಿ ಮರಳಿ ಕಂಡುದಕ್ಕೆ, ವ್ಯಾಸ ಪ್ರಜ್ಞೆಯ ಮಹಾಭಾರತವನ್ನು ಮತ್ತೆಷ್ಟೋ ಪ್ರಜ್ಞೆಗಳು ಪ್ರವೇಶಿಸಿದುದಕ್ಕೆ ಕಥನದ ಸಾತತ್ಯವೇ ಮಾರ್ಗವಾದದ್ದು. ರಾಮಾಯಣದ, ಮಹಾಭಾರತದ ಅಷ್ಟೊಂದೂ ಆವೃತ್ತಿಗಳು ಕಾಲ, ಸ್ಥಿತಿ ಮತ್ತು ಮನೋಧರ್ಮದ ಅಂತರದಲ್ಲಿ, ಅಷ್ಟೇ ಬೇರೆ ವಿನ್ಯಾಸದಲ್ಲಿ ವ್ಯಕ್ತಗೊಂಡವು. ಆದರೆ ಅವತ್ತಿನ ಕ್ರೌಂಚ ಮಿಥುನದ ದುರಂತ ಇವತ್ತಿಗೂ ಉಳಿದಿದೆ; ಅಂದಿನ ದಾಯಾದಿ ಮತ್ಸರ ಈಗಲೂ ನಡೆದಿದೆ. ಅಲ್ಲಿಗೆ, ಸ್ಥಿತ್ಯಂತರದ ಈಚೆಗೂ ಬಿಡುವಿರದ ಜಂಗಮದ ನಡುವೆಯೂ ಕಥನದ ಮೂಲ ದ್ರವ್ಯವೊಂದು ತನ್ನನ್ನು ದಾಖಲಿಸಿಕೊಳ್ಳುತ್ತಲೇ ಇರುತ್ತದೆ ಎಂದಾಯಿತು; ಅಲ್ಲಿಗೆ, ಬೇರೆ ಬೇರೆ ರೂಪ, ಭಾವ, ಬಗೆಗಳಲ್ಲಿ ಸಿಗುವ ಕಥನದ ಬಿಂದು ತಲತಲಾಂತರಗಳಿಂದ ನಮಗೆದುರಾಗಿಯೇ ಬಂದದ್ದು, ತಲ್ಲಣ-ತನ್ಮಯತೆ ಎರಡೂ ಆಗಿ ನಮ್ಮನ್ನು ನುಡಿಸುತ್ತ-ನಡೆಸುತ್ತಲೇ ಬಂದದ್ದು ಎಂದಾಯಿತು.
ಕಾಲದ ಜತೆಗಿನ ನಿರಂತರ ಯಾನವಾದ ಕಥನವು ನಮ್ಮ ಬದುಕು, ಭಾವನೆ ಮತ್ತು ನಮ್ಮ ಜಗತ್ತಿನ ಪರಿಭಾಷೆಗಳು ಬದಲಾದಷ್ಟೂ, ಅವೆಲ್ಲವನ್ನೂ ಒಳಗೊಳ್ಳುತ್ತಲೇ ಹೋಗುತ್ತದೆ. ಕಥೆ ಶುರುವಾಗುವ “ಒಂದಾನೊಂದು ಕಾಲ” ವರ್ತಮಾನವೂ ಹೌದು; “ಒಂದಾನೊಂದು ಊರು” ಇದೇ ಪರಿವೇಷವೂ ಹೌದು.
ಕಥನವು ಏಕಕಾಲಕ್ಕೇ ಹೇಳುವ, ಕೇಳುವ ಮತ್ತು ಕಾಣುವ ಪ್ರಕ್ರಿಯೆಯಾಗಿದೆ. ಸಂಸ್ಕೃತಿಯೊಂದನ್ನು ನೆರವೇರಿಸುವ ಬಹು ಮಹತ್ವದ ಮತ್ತು ವಿಶಿಷ್ಟವಾದ ಈ ಪ್ರಕ್ರಿಯೆಗಳು ಸಾಂಗತ್ಯದಲ್ಲಿದ್ದೂ ಸಮಾನಾಂತರವನ್ನೇರ್ಪಡಿಸಿಕೊಂಡು ಜರುಗುತ್ತವೆ. ಹೇಳುವ, ಕೇಳುವ ಮತ್ತು ಕಾಣುವ ಕಥೆ ಒಂದೇ ಆದರೂ, ಅವು ಚಹರೆಯನ್ನು ಗಳಿಸುವುದು ಮನಸ್ಸಿನ ಬೇರೆ ಬೇರೆ ಪಾತಳಿಗಳಲ್ಲಿ. ಹಾಗಾಗಿ, ಯಾವುದೇ ಸಂಸ್ಕೃತಿಯ ಕಥನ ಆ ಸಂಸ್ಕೃತಿಯ ಮನಸ್ಸಿನದ್ದಾಗಿರುತ್ತದೆ. ಅಂತೆಯೇ ಮೇಲೆ ಹೇಳಿದ ಮೂರೂ ಪ್ರಕ್ರಿಯೆಗಳಲ್ಲಿ ಕಥನದ ಮಾನಸಿಕ ದಾಖಲಾತಿಯೇ ಮುಖ್ಯ; ಜರೂರಿನದ್ದೂ ಕೂಡ.
ಭಾರತೀಯ ಸಮಾಜ ರಚನೆಯ ಬಾಹ್ಯ ರೂಪವನ್ನು ಗ್ರಹಿಸಲು ನೆರವಾಗುವಂಥ ಚಿಂತನೆಗೆ ಕಾರಣರಾದ ಇತಿಹಾಸ ಸಂಶೋಧಕ ಧರ್ಮಪಾಲ್, “ಭಾರತೀಯ ಪ್ರಾಚೀನ ವಾಙ್ಮಯದಲ್ಲಿ ಕಾಣುವ ಮೌಲ್ಯಯುತ ಸಂಗತಿಗಳು ಮತ್ತು ಮೇಲಿಂದ ಮೇಲೆ ವ್ಯಕ್ತವಾಗುವ ಅಂಶಗಳು ಭಾರತೀಯ ಚಿತ್ತ-ಕಾಲಗಳ ಸಹಜ ವೃತ್ತಿಯನ್ನು ನಿರೂಪಿಸುತ್ತವೆ” ಎಂದು ಹೇಳಿರುವಲ್ಲಿ ಕೂಡ ಕಥನದ ಮಾನಸಿಕ ಸನ್ನಿಧಾನವನ್ನು ಗ್ರಹಿಸಬಹುದಾಗಿದೆ. ನಮ್ಮದಾಗಿರುವ ಒಂದು ಕಥೆ ನಮ್ಮ ಸಮಾಜದ್ದೂ ನಮ್ಮ ಪರಂಪರೆಯದ್ದೂ ಆಗಿರುತ್ತಲೇ, ಕಾಲದ ವಿವಿಧ ಘಟ್ಟ ಮತ್ತು ತಿರುವುಗಳ ಸಂಬಂಧದಲ್ಲಿ ಇನ್ನೊಬ್ಬರದ್ದೂ ಇನ್ನೊಂದು ಸಮಾಜದ್ದೂ ಇನ್ನೊಂದು ಪರಂಪರೆಯದ್ದೂ ಆಗಿರಬಹುದು. ಹಾಗಿದ್ದೂ ಕಥೆ ಹಂಚಿಹೋಗುವುದಿಲ್ಲ. ಅದು ಎರಡು ಮನಸ್ಸುಗಳ ಪರಂಪರೆಯನ್ನು ಒಂದು ಭಿತ್ತಿಯಲ್ಲಿ ಸಂವಾದಕ್ಕೆ ಸೇರಿಸುವ ಕೆಲಸ ಮಾಡುತ್ತದೆ. ನಮಗೆ ಅನ್ನಿಸಿದ್ದು ಇನ್ನೊಬ್ಬರಿಗೂ ಅನ್ನಿಸಬಹುದಾದ, ಯಾವುದೋ ಒಂದು ಕಾಲದ್ದು ಮತ್ತೊಂದು ಕಾಲದ ಭಾಗವೂ ಆಗಬಹುದಾದ ಸಾಧ್ಯತೆಯಿದೆಯಲ್ಲ, ಅಂಥ ಗೆರೆಯನ್ನು ಗ್ರಹಿಸುವ ಕ್ರಮವೇ ಕಥನದ ಕ್ರಮ.
ಕಥೆ ತಾನಿರುವಂತೆಯೇ, ಇರದಿರುವ ಕ್ರಮಕ್ಕೆ ಚಾಚಿಕೊಳ್ಳಬೇಕಿತ್ತೆಂಬ ಆಸೆಯನ್ನು ಹುಟ್ಟಿಸುತ್ತದೆ. ಸುಭದ್ರೆಯ ಗರ್ಭದಲ್ಲಿರುವಾಗ ಅಭಿಮನ್ಯು ತನ್ನ ತಾಯಿಗೆ ಕೃಷ್ಣ ಹೇಳಿದ ಚಕ್ರವ್ಯೂಹ ಭೇದಿಸುವ ಕಥೆಯನ್ನು ಕೇಳಿಸಿಕೊಳ್ಳುತ್ತಾನೆ. ಕಥೆ ಕೇಳಿಸಿಕೊಳ್ಳುತ್ತಾ ಸುಭದ್ರೆ ನಿದ್ದೆ ಹೋದಾಗ, ತನ್ನ ಕಥೆಗೆ ಹೂಂಗುಡುತ್ತಿರುವುದು ಅವಳಲ್ಲ, ಅವಳ ಗರ್ಭದಲ್ಲಿರುವ ಜೀವ ಎಂದು ತಿಳಿದು ಕೃಷ್ಣ ಕಥೆ ನಿಲ್ಲಿಸುತ್ತಾನೆ. ಚಕ್ರವ್ಯೂಹವನ್ನು ಭೇದಿಸಿದ ನಂತರ ಹೇಗೆ ಅದರಿಂದ ಹೊರಕ್ಕೆ ಬರಬೇಕು ಎಂಬುದನ್ನು ಕೇಳಿಸಿಕೊಳ್ಳುವ ಅವಕಾಶ ಅಭಿಮನ್ಯುವಿಗೆ ಒದಗಿದ್ದಲ್ಲಿ ಮಹಾಭಾರತದ ಘಟನೆಗಳ ಕೆಲವು ಎಳೆಗಳು ಬದಲಾಗುತ್ತಿದ್ದವು.
ಕಥನವೊಂದು ಹೀಗೆ, ಪ್ರಸ್ತುತ ಇರುವ ರೀತಿಯಲ್ಲೇ ತನ್ನ ಇತರ ಆಯಾಮಗಳ ಬಗ್ಗೆ ನಮ್ಮನ್ನು ಹೊರಳಿಸುತ್ತದೆ. ಹೀಗಿಲ್ಲದೇ ಹೋಗಿದ್ದರೆ…, ಹಾಗಿರುತ್ತಿದ್ದರೆ… ಎಂಬ “ಪ್ರಯಾಣ”ವೊಂದು ಅಗತ್ಯವಿದ್ದೊ ಇಲ್ಲದೆಯೊ ಸಿದ್ಧವಾಗುವುದು ಕಥನದ ಈಗಿರುವ ಎಳೆಗಳಲ್ಲೇ ಎಂಬುದನ್ನು ಗಮನಿಸುವಾಗ, ಅದರ ಸೃಜನಾತ್ಮಕ ಸಂಪರ್ಕಗಳನ್ನು ಕಲ್ಪಿಸಿಕೊಳ್ಳಬಹುದು.
ನಮ್ಮ ಕಾಲದ ಕಥನಗಳು ಎರಡು ಬಗೆಯವು. ಒಂದು, ಸಾರ್ವತ್ರಿಕ ಅನುಭವವನ್ನು ಒಟ್ಟುಗೂಡಿಸುವ “ಕ್ರಮ”ದ್ದು. ಇನ್ನೊಂದು, ವೈಯಕ್ತಿಕ ಅನುಭವವನ್ನು ತೆರೆದಿಡುವ “ಸತ್ಯ”ದ್ದು. ಒಂದರಲ್ಲಿನ “ಕ್ರಮ” ಇನ್ನೊಂದರಲ್ಲೂ ಕಂಡೀತು. ಇನ್ನೊಂದರಲ್ಲಿನ “ಸತ್ಯ” ಇದರದ್ದೂ ಆಗಿದ್ದೀತು. ಕಥನದ ಸಾಹಚರ್ಯದಲ್ಲಿ ಇದು ಸಹಜವಾಗೇ ಬರಲೂಬಹುದು. ಆದರೆ ಸತ್ಯವನ್ನು ಕಥನದ ಕ್ರಮದಲ್ಲಿ, ಕಥನದ ಕ್ರಮವನ್ನು ಸತ್ಯದ ಅಚ್ಚುಕಟ್ಟಿನಲ್ಲಿ ಒಳಗೊಳಿಸುವ ನಿರ್ವಹಣೆಯನ್ನು ಪ್ರೇರೇಪಿಸುವುದು ಕಥನದ ಪರಿಭಾಷೆಯನ್ನು ಕುರಿತ ನಿಲುವಿನ ಕೆಲಸ. ಇದು ಕಥೆಗಾರನ ಮುಂದಿರುವ ಸವಾಲು ಹೇಗೋ, ಹಾಗೇ ಅವನಿಗೊದಗುವ ಸಹಯೋಗವೂ ಹೌದು.
ಈ ಸಹಯೋಗವೆಂಬುದನ್ನು ಸ್ವಲ್ಪ ಬೇರೆ ಬಗೆಯಲ್ಲೂ ವಿವರಿಸಬಹುದು. ಮಗುವಿನ ನೋಟದಲ್ಲಿಯ ಅಸೀಮ ಆಪ್ತತೆ, ಮೀನಿನ ಚಲನೆಯಲ್ಲಿನ ತೀವ್ರ ಚುರುಕುತನ, ಹಕ್ಕಿಯ ಕಣ್ಣ ಚಂಚಲತೆಯಲ್ಲಿನ ವಿಶಿಷ್ಟ ವೇಗ ನಮ್ಮ ಮನಸ್ಸಿನಲ್ಲಿ ಕಟ್ಟುವ ಚಿತ್ರವನ್ನು ಕಲ್ಪಿಸಿಕೊಂಡರೆ, ಚಿತ್ರದಲ್ಲೂ ಒಂದು ಮಗು, ಒಂದು ಮೀನು, ಒಂದು ಹಕ್ಕಿ ಹೂಬೇಹೂಬಾಗಿ, ಜೀವಂತವಾಗಿ ಕಾಣುವುದು. ಈ “ಜೀವಂತಿಕೆ”, ಅದು ನಮಗೆ ಕಾಣುವ ಮತ್ತು ನಾವು ಅದನ್ನು ನೋಡುವ ಸಹಯೋಗದಲ್ಲಿಯದು.
ಋಗ್ವೇದದಲ್ಲಿ ಪ್ರಸ್ತಾಪವಾಗುವ ಹೋಮಾಪಕ್ಷಿ ಕಥನದ ನೆಲೆಯಲ್ಲಿ ಕುತೂಹಲಕಾರಿ ಜೀವನ ಚಕ್ರವುಳ್ಳದ್ದಾಗಿದೆ. ಅದು ಆಕಾಶದಲ್ಲಿ ತತ್ತಿಯಿಡುತ್ತದೆ. ತತ್ತಿ ನೆಲದ ಕಡೆಗೆ ಬೀಳುತ್ತ ಬೀಳುತ್ತ, ಹಾಗೆ ಬೀಳುತ್ತಿರುವಾಗಲೇ ಅದರಿಂದ ಮರಿ ಹೊರಬರುತ್ತದೆ. ಅದೂ ನೆಲದ ಕಡೆಗೆ ಬೀಳತೊಡಗುತ್ತದೆ. ಮತ್ತೆ ಹಾಗೆ ಬೀಳುತ್ತಿರುವಾಗಲೇ ರೆಕ್ಕೆ ಬಲಿತು, ತಾನು ಬೀಳುತ್ತಿದ್ದೇನೆಂಬುದು ಅದರ ಪ್ರಜ್ಞೆಯಲ್ಲಿ ದಾಖಲಾಗುತ್ತದೆ. ಗುರುತ್ವದ ಕಕ್ಷೆ ತಪ್ಪಿಸಿಕೊಂಡು ಅದು ಆಕಾಶದ ಕಡೆಗೆ ಹಾರತೊಡಗುತ್ತದೆ. ಮತ್ತೆ ಅದು ಆಕಾಶದಲ್ಲಿ ತತ್ತಿಯಿಡುವುದು, ತತ್ತಿ ಕೆಳಕ್ಕೆ ಬೀಳತೊಡಗುವುದು. ಅದರಿಂದ ಹೊರಕ್ಕೆ ಬರುವ ಮರಿ ಆಕಾಶಕ್ಕೆ ಹಾರುವುದು – ಇದು ಹೋಮಾಪಕ್ಷಿಯ ನಿರಂತರ ಜೀವನಯಾನ. ಅದು ತನ್ನ ನೆಲೆಯನ್ನು ತಾಯ್ತನದ ಪರಿಸರವನ್ನು ಕಳೆದುಕೊಳ್ಳುವುದಿಲ್ಲ ಎಂಬುದೇ ಕಥನದ ಅಂತರಂಗಕ್ಕಾಗುವ ಸಂಗತಿ.
ಇಂಥ ಹೋಮಾಪಕ್ಷಿ, ಒಜ್ಜೆಗೊಂಡಿದ್ದೂ ತನ್ನೊಜ್ಜೆ ಕೊಳ್ಳಿರೆಂದು ಕೇಳದ ಭೂಮಿ, ಎಲ್ಲ ಮೋಡಗಳನ್ನು ಮುಗಿಲಿಗೆ ಕಳಿಸಿಯೂ ಯಾವ ನಿರೀಕ್ಷೆಗಳನ್ನೂ ಮುದ್ರಿಸಿ ಕಾಯದ ಕಡಲು, ಪ್ರತಿ ಬಿಂದುವಿನ ರೋಮಾಂಚನವನ್ನೂ ಬಲ್ಲ ಕಾಲ – ಈ ಅಸಾಮಾನ್ಯ ಕಥನಗಳ ದಂಡೆಯಲ್ಲಿ ನಿಂತಿರುವ ನಮ್ಮೆಲ್ಲರ ಕಥೆಗಳು ನಮ್ಮೊಳಗೇ ಇವೆ. ಕಥೆ ನಮ್ಮನ್ನು ಸತಾಯಿಸುವ ಮರೀಚಿಕೆಯೂ ಅಲ್ಲ, ಬೆಂಬತ್ತುವ ನೆರಳೂ ಅಲ್ಲ; ಅದು ನಮ್ಮ ಒಟ್ಟು ಇರುವಿಕೆಯ ಸಾಕ್ಷಾತ್ಕಾರ. ಗೊತ್ತಿರುವುದರ ಎಳೆಯನ್ನು ಹಿಡಿದು ಗೊತ್ತಿರದಿದ್ದುದರ ಜಾಡಿನಲ್ಲಿ ನಡೆಯುವ ಬೆರಗು.
ಜಗತ್ತನ್ನು ನಿಜವಾದ ಅರ್ಥದಲ್ಲಿ ಕೂಡಿಸುವ ತುರ್ತು ಇರುವ, ಒಳ್ಳೆಯದನ್ನು ಹುಡುಕಿಕೊಂಡು ನಮ್ಮೊಳಗೇ ಇಳಿಯಬೇಕಾಗಿರುವ ಇವತ್ತಿನ ಸಂದರ್ಭದಲ್ಲಿ ಮನುಷ್ಯರು ಮನುಷ್ಯರನ್ನು ಕಾಣುವಂತಾದರೆ, ಭೂಮಿ, ಕಡಲು, ಕಾಲದಂಥ, ಹೋಮಾಪಕ್ಷಿಯಂಥ ಅಸಾಧಾರಣ ಕಥನಗಳ ದಂಡೆಯಲ್ಲಿ ನಿಂತಿರುವ ನಾವು ಕೃತಾರ್ಥರು.
good n best wishes
pailoor