ಅಸ್ಸಾಮಿನಿಂದ ಬಂದ ಕವಿತೆಗಳು

ಮೂಲ ಅಸ್ಸಾಮಿ: ಕಮಲ್ ಕುಮಾರ ತಂತಿ
ಇಂಗ್ಲೀಷಿಗೆ: ದಿವ್ಯಜ್ಯೋತಿ ಶರ್ಮಾ

ಕನ್ನಡಕ್ಕೆ: ಉದಯ ಇಟಗಿ

ನೆನಪುಗಳ ದೀರ್ಘ ನೆರಳುಗಳು 1

ಮುಂಗಾರು ಹನಿಗಳ ಮೊದಲ ಸಿಂಚನ
ಭೂಮಿ ಮತ್ತು ಆಗಸ ಪರಿಶುದ್ಧಗೊಂಡಿವೆ
ನೆರೆಯುಕ್ಕಿ ಬಂದಿದೆ, ಎಲ್ಲೆಡೆ ಹಸಿರು
ನಾನೂ ಹಸಿರು, ನನ್ನ ಲೋಕವೂ ಹಸಿರು
ನನ್ನ ಜನರೂ ಹಸಿರು .

ನಾನ್ಯಾರು? ನಾವ್ಯಾರು?
ನನ್ನನ್ನು ಗುರುತಿಸಬಲ್ಲಿರಾ?
ನಾನು ಚಹಾ ಪೈರುಗಳ ಬೇರಿನಿಂದ ಬಂದವನು
ಹಸಿರು ಹಸಿರಾದ ಚಹಾ ಪೈರುಗಳು, ಈಗಲೂ ಹಸಿರೇ!
ಅವುಗಳ ಬೇರುಗಳಲ್ಲಿ
ನಮ್ಮ ದೇಹ ಮತ್ತು ಆತ್ಮಗಳೆರೆಡೂ ಬೆರೆತುಹೋಗಿವೆ

ನನಗೆ ಗೊತ್ತಿಲ್ಲ
ಯಾವ ಕಾಡಿನಲ್ಲಿ ಮೊದಲು ಬೇರುಗಳು ಬಿಟ್ಟುಕೊಂಡವೆಂದು?
ಅದ್ಹೇಗೆ ಆ ಒಣಭೂಮಿ, ಆ ಬೋಳು ಗುಡ್ಡಗಳು,
ಆ ಮರಗಳು, ನದಿಗಳು, ಝರಿಗಳನ್ನು ಬಿಟ್ಟುಬಂದೆ?
ಮಾತ್ರವಲ್ಲ ಕಾಡು ಮತ್ತು ಕಾಡಿನ ತುಂಬಾ ಪ್ರತಿಧ್ವನಿಸುವ ಹಾಡುಗಳನ್ನು,
ಜೊತೆಗೆ ನನ್ನ ಪ್ರೇಯಸಿಯನ್ನು ಸಹ.

*ಕರಂನ ರಾತ್ರಿಯಂದು ನಾವು ಎಲ್ಲವನ್ನೂ ಬಿಟ್ಟೆವು
ಆ ನಿರ್ಗತಿಕ ರಾತ್ರಿಯು ಮದ್ದಳೆಯ ಹೊಡೆತಕ್ಕೆ ಸಿಕ್ಕಿ
ನರಳುತ್ತಿರುವಾಗ ನಾವು ಎಲ್ಲವನ್ನೂ ಬಿಟ್ಟೆವು
ಕರಂನ ನಸುಕಿನ ಜಾವ
ಕೊನೆಯದಾಗಿ ನಾವು ನಮ್ಮ ಮನೆಯನ್ನು,
ಮನೆಯ ಒಲೆಗೂಡನ್ನು ನೋಡಿದೆವು
ಮನೆಯನ್ನು ತ್ಯಜಿಸುತ್ತಾ ನನ್ನ ಅಜ್ಜ ಹೇಳಿದ
’ಎಲ್ಲವೂ ಅದೃಷ್ಟದ ಆಟ
ಎಲ್ಲವೂ ಈಗ ನೆನಪು, ಬರೀ ನೆನಪು,
ನೆನಪುಗಳ ದೀರ್ಘ ನೆರಳುಗಳು ಮಾತ್ರ.’

 • ಕರಂ: ಕರಂ ಎನ್ನುವದು ಒಂದು ಕೃಷಿ ಹಬ್ಬವಾಗಿದ್ದು ಅಸ್ಸಾಂನ ಆದಿವಾಸಿಗಳು ಇದನ್ನು ಭಾದ್ರಪದ ಮಾಸದಲ್ಲಿ ಆಚರಿಸುತ್ತಾರೆ. ಕರಂ ಶಕ್ತಿ ದೇವತೆಯೂ ಹೌದು. ತಾರುಣ್ಯ ದೇವತೆಯೂ ಹೌದು. ಈ ಸಂದರ್ಭದಲ್ಲಿ ತರುಣ ಹಳ್ಳಿ ಹೈದರು ಕಾಡಿಗೆ ಹೋಗಿ ಹೂ, ಹಣ್ಣು, ಕಟ್ಟಿಗೆಗಳನ್ನು ತಂದು ಈ ದೇವತೆಯನ್ನು ಪೂಜಿಸುವದು ವಾಡಿಕೆ.

ನೆನಪುಗಳ ದೀರ್ಘ ನೆರಳುಗಳು 2

ನಾನು ನನ್ನ ಬೇರುಗಳನ್ನು ಎಲ್ಲಿ ಬಿಟ್ಟುಬಂದೆ
ನನ್ನ ಮನೆ, ನನ್ನ ಒಲೆಗೂಡು, ನನ್ನ ಹಳ್ಳಿ, ಮತ್ತು ನನ್ನ ಕಾಡನ್ನು?
ಮೇದಿನಿಪುರದಲ್ಲಿ ಅಥವಾ ಬರಾಕೂಡಿನಲ್ಲಿ ಅಥವಾ ಕಲಂಡಿಯಲ್ಲಿ?
ಎಲ್ಲಿ? ಎಲ್ಲಿ?

ಅಲ್ಲೀಗ ನಮ್ಮ ಮೆಲುಗಾಳಿ ಹೇಗೆ ಬೀಸುತಿದೆ?
ನಮ್ಮ ಬಿಸಿಲು ಹೇಗೆ ಬೀಳುತ್ತಿದೆ?
ನಮ್ಮ ಮಳೆ ಹೇಗೆ ಸುರಿಯುತ್ತಿದೆ?
ನಮ್ಮ ಗಿಡ-ಮರಗಳು ಹೇಗಿವೆ? ಪಕ್ಷಿಗಳು ಹೇಗಿವೆ?
ಬೆಟ್ಟ-ಗುಡ್ಡಗಳು ಹೇಗಿವೆ?

ನಮ್ಮ ಮಣ್ಣಿನ ಬಣ್ಣ ಯಾವುದಾಗಿತ್ತು?
ನಮ್ಮ ಗಿಡ-ಮರದ ಎಲೆಗಳ ಬಣ್ಣ ಯಾವುದಾಗಿತ್ತು?
ನಮ್ಮ ಚರ್ಮದ ಬಣ್ಣ ಯಾವುದಾಗಿತ್ತು?
ನಮ್ಮ ಆಗಸ ಮತ್ತು ಮೋಡಗಳ ಬಣ್ಣ ಯಾವುದಾಗಿತ್ತು?
ನಮ್ಮ ಚಿಟ್ಟೆಗಳ, ಮೀನುಗಳ ಬಣ್ಣ ಯಾವುದಾಗಿತ್ತು?

ನನ್ನ ನೆನಪಿನ ಭಾಗವಾದ ಪ್ರತಿಯೊಂದು ಮರವನ್ನು ನನಗೆ ಮರಳಿಸು
ನನ್ನ ನೆನಪಿನಲ್ಲಿರುವ ಪ್ರತಿಯೊಂದು ಹಕ್ಕಿಯನ್ನು ನನಗೆ ಮರಳಿಸು
ನನ್ನ ನೆನಪಿನಲ್ಲುಳಿದ ಪ್ರತಿಯೊಂದು ಎಲೆಯನ್ನು ನನಗೆ ಮರಳಿಸು

ನನ್ನ ನೆನಪುಗಳೆಲ್ಲವನ್ನು ನನಗೆ ಮರಳಿಸು
ಅಷ್ಟೇ ಅಲ್ಲ ಅವುಗಳ ದೀರ್ಘ ನೆರಳುಗಳನ್ನು ಸಹ.

ನೆನಪುಗಳ ದೀರ್ಘ ನೆರಳುಗಳು 3

ನೆನಪುಗಳ ಹಸಿರಿನ ತೋಟ
ಆಗಷ್ಟೇ ಮೊಳಕೆಯೊಡೆದ ಚಹಾ ಎಲೆಗಳ ಪರಿಮಳ-
ಹೇಗೆ ತಾನೆ ಮರೆಯಲಿ ನಾನು ಆ ದಿನಗಳನ್ನು?

ಹಾವಿನಂತೆ ಹರಿಯುವ ನದಿಯನ್ನು
ಸಣ್ಣ ಸಣ್ಣ ಸಮೆಗಲ್ಲುಗಳನ್ನು-
ಹೇಗೆ ತಾನೆ ಮರೆಯಲಿ ನಾನು ಆ ದಿನಗಳನ್ನು?

ನೆನಪಿನಲ್ಲುಳಿದ ಪ್ರತಿಯೊಂದು ಮರಗಳನ್ನು
ಸುಂದರ ಪಕ್ಷಿಗಳನ್ನು-
ಮತ್ತು ಆ ಬಿಸಿಲ ದಿನಗಳನ್ನು?

ರಕ್ತಸಿಕ್ತ ದೇಹದ ನೆನಪನ್ನು
ಮತ್ತು ಗೂಬೆಗಳ ಘೂಕರಿಕೆಗಳನ್ನು-
ಹೇಗೆ ತಾನೆ ಮರೆಯಲಿ ನಾನು ಆ ಕತ್ತಲ ರಾತ್ರಿಗಳನ್ನು?

ನನ್ನ ನೆನಪುಗಳ ಪ್ರತಿಯೊಂದು ಪುಟವನ್ನು ನನಗೆ ಮರಳಿಸು
ಮಾತ್ರವಲ್ಲ ಅವುಗಳ ನೆರಳುಗಳನ್ನು ಸಹ.

ಪ್ರೀತಿಯ ಹಾಡು 1


 1. ನಾನು ಬಿಟ್ಟು ಬಂದ ಬೇರುಗಳನ್ನು ಮುಟ್ಟಿದೆ;
  ಅವು ಫಲವತ್ತಾದ ಈ ಮಣ್ಣಿನಲ್ಲೂ ಚಿಗುರಲಿಲ್ಲ.
  ಮರೆತುಹೋದ ಪ್ರೀತಿಯ ಪೆಟ್ಟಿಗೆಯನ್ನು ತೆರೆದೆ
  ಕಾಲನ ಕರೆಗೆ ಓಗೊಟ್ಟು ದೂರ ಹೋಗಿದ್ದ
  ಪದಗಳು ಮತ್ತೆ ಕಿವಿಯಲ್ಲಿ ರಿಂಗಣಿಸಿದವು
  ನದಿಯ ತಿರುವಿನಲ್ಲಿ ಮಳೆಗಾಲದ ಒಂದು ರಾತ್ರಿ
  ನಾವಿಬ್ಬರೂ ವಿದಾಯ ಹೇಳಿದ್ದೆವು
  ನಾವು ವಿದಾಯ ಹೇಳಿದಾಗಲೇ
  ಈ ವಿದಾಯಕ್ಕೊಂದು ವಿದಾಯ ಹೇಳಬೇಕೆಂದಿದ್ದೆ
  ಆದರೆ ಕಾಲ ತಡೆದು ನಿಲ್ಲಿಸಿತು.
  ನೀನೂ ಗುಡ್ ಬೈ ಹೇಳಲಿಲ್ಲ
  ನಾನೂ ಹೇಳಲಿಲ್ಲ
  ನಾವು ನಮ್ಮನಮ್ಮ ದಾರಿಗಳನ್ನು ಆಯ್ದುಕೊಂಡಿದ್ದೆವು
  ಆದರೆ ಕಾಲ ಇನ್ನೂ ನಮ್ಮನ್ನು ಅದೇ ತಿರುವಿನಲ್ಲೇ ಹಿಡಿದು ನಿಲ್ಲಿಸಿತ್ತು
  ಒಂದು ಘಂಟೆ ಹಾಗೆಯೇ ನಿಂತಿದ್ದವು
  ಪ್ರೀತಿಯೂ ಹಾಗೆ ಉಳಿದಿತ್ತು
  ಅಲ್ಲಿ ಮತ್ತೆ ನಮ್ಮನ್ನು ನಾವು ಕಂಡುಕೊಂಡೆವು.
  ಮತ್ತೆ ಬೇರೆಯಾದೆವು
  ನಮ್ಮ ತಲೆಯಲ್ಲಿದ್ದ ಬೇರುಗಳು ಸತ್ತುಹೋದವು.

 2. ಒಂದು ಚಳಿಗಾಲ ನಾನೊಂದು ತೋಟವನ್ನು ಬೆಳೆಸಿದೆ
  ಮತ್ತು ಗುಲಾಬಿ ಮೊಗ್ಗುಗಳನ್ನು ಎಣಿಸಿದೆ-
  ಹರೆಯದ ಹುಡುಗಿಗೊಂದು ಉಡುಗೊರೆ ಕೊಡಲು
  ಆದರೆ ಮುಂದಿನ ಚಳಿಗಾಲದಷ್ಟೊತ್ತಿಗೆ
  ಆ ಗುಲಾಬಿಗಳೆಲ್ಲಾ ಆ ಹರೆಯದ ಹುಡುಗಿಯ ಗೋರಿಯ ಮೇಲಿದ್ದವು
  ಅದರ ಮುಂದಿನ ಚಳಿಗಾಲದಷ್ಟೊತ್ತಿಗೆ ನನ್ನ ತೋಟದಲ್ಲಿ
  ನನ್ನನ್ನು ಹೂತಿದ್ದರು.
  3.
  ಪ್ರತಿಸಾರಿ ನಾನು ಹಿಂದಿರುಗಿ ನೋಡಿದಾಗಲೆಲ್ಲಾ
  ದಾಸವಾಳ ಹೂಗಳ ರಾಶಿಯನ್ನು ನೋಡುತ್ತೇನೆ.
  ಪ್ರತಿಬಾರಿ ಆ ದಾಸವಾಳ ಗಿಡ
  ನನ್ನತ್ತ ಕೈ ಬೀಸುತ್ತದೆ
  ಒಂದೊಂದು ಸಾರಿ ಅನಿಸುತ್ತೆ
  ಈ ಹೂಗಳು ಸದಾ ಕಣ್ಣೀರು ಸುರಿಸುವ
  ನನ್ನ ಕಣ್ಣುರೆಪ್ಪೆಗಳಾಗಿ ಬದಲಾಗಿವೆಯೇ ಎಂದು.

‍ಲೇಖಕರು Avadhi

October 15, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾವೆಂದರೆ ಹೀಗೆಯೇ..

ಸಾವೆಂದರೆ ಹೀಗೆಯೇ..

ಚಂದ್ರಶೇಖರ ಹೆಗಡೆ ಎಲ್ಲ ಇದ್ದೂ ಇಲ್ಲವಾಗುವುದೆ ? ಇಲ್ಲದಿರುವುದಕ್ಕೆ ಬೆನ್ನುಬಿದ್ದು  ಖಾಲಿಯಾಗುವುದೆ ? ಹಸಿರು ತುಂಬಿದ್ದರೂ...

ಆನಾ ಆಹ್ಮತೋವಾ ನೆನೆದು

ಆನಾ ಆಹ್ಮತೋವಾ ನೆನೆದು

    ಜಿ.ಪಿ.ಬಸವರಾಜು ನಡುಗುವ ಕೈಗಳಿಂದ ನಿನ್ನ ಎದೆಯ ಪದಗಳನು ಎತ್ತಿಕೊಂಡೆ: ಸೆರೆಮನೆಯ ಮಹಾ ಗೋಡೆಯ ಈಚೆ ನೀನೊಂದು...

ಪಟದ ಪಾಡು

ಪಟದ ಪಾಡು

ಡಾ ಪಿ ಬಿ ಪ್ರಸನ್ನ ಮೊನ್ನೆ ಎಲ್ಲರಂತೆ ನನಗೂ ಪಟ ಹೊಡೆಸಿಕೊಳ್ಳುವ ಉಮೇದು ಬಂದದ್ದೇ ನಡೆದೆ ಹುಬ್ಬನ್ನೇ ಪ್ರಶ್ನಾರ್ಥಕಗೊಳಿಸಿದಾತನ ಬಳಿ ನುಡಿದೆ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: