`ಅಹರ್ನಿಶಿ' ತುಂಬಾ ಪ್ರಿಯವಾದ ಶಬ್ದ…

ಅಕ್ಷತಾ ಅವರಿಗೆ,

2005030902080401ಹೇಗಿದ್ದೀರಿ? ಎಂದು ಪ್ರಾರಂಭಿಸುತ್ತಿರುವೆ. ಮನುಷ್ಯನೊಬ್ಬನ ಸೌಜನ್ಯದ ಮಾತು ಮೊದಲು ಇದಾಗಿರಲಿ ಎಂಬ ಕಾರಣಕ್ಕಾಗಿ. ಇದರ ಜೊತೆಗೆ ನಾವು ಅದನ್ನು ನಾಗರೀಕ ಸಮಾಜದ ರೂಪಕವನ್ನಾಗಿಯೇ ಬೆನ್ನಿಗೆ ಅಂಟಿಸಿಕೊಂಡು ಬಂದಿದ್ದೇವೆ. ಇಷ್ಟಾದರೂ ಅದನ್ನು ಕ್ಲೀಷೆಯೆನ್ನದೆ ನಾನು ಗೌರವಿಸುವ ಶಬ್ದ. ಇರಲಿ, ಕಿ.ರಂ ರವರ ಮನೆಯಲ್ಲಿ ನಿಮ್ಮ ಅಹರ್ನಿಶಿ ಪ್ರಕಾಶನದ `ಮತ್ತೆ ಮತ್ತೆ ಬ್ರೆಕ್ಟ್’ ತಂದು ಓದಿದೆ. ಬ್ರೆಕ್ಟ್ ನನಗೆ ತುಂಬಾ ಪ್ರಿಯನಾದ ಚಿಂತಕ. ನಾಟಕಕಾರ ಹಾಗೂ ಕವಿ. ಅವನ ಕವನಗಳನ್ನು ಮೇಷ್ಟ್ರು ಅನಂತಮೂರ್ತಿಯವರು ಎಷ್ಟು ಚೆನ್ನಾಗಿ ಭಾವಾನುವಾದ ಮಾಡಿದ್ದಾರೆ. ಅದರಲ್ಲೂ ಗೊತ್ತು ಪಡಿಸಿದ ಕಾಲಕ್ಕೆ ಸಂಕಲನ ತರಲೇಬೇಕು ಎಂದು ಮೇಷ್ಟ್ರ ಕೈಯಲ್ಲಿ ಅನುವಾದಿಸಿರುವುದು ಒಳ್ಳೆಯದಾಯಿತು. ಅವರು ತಮ್ಮ ದೈಹಿಕ ಹಿಂಸೆಯನ್ನು ಮರೆತು ಅಥವಾ ಮರೆಯಲು ಬರೆಯುವುದಿದೆಯಲ್ಲ ಅಥವಾ ಮಾತಾಡುವುದಿದೆಯಲ್ಲ ಅದು ಎಲ್ಲರಿಂದಲೂ ಸಾಧ್ಯವಿಲ್ಲ. ಅನಂತಮೂರ್ತಿಯವರಂಥ ವಿಲ್ ಪವರ್ ಇರುವಂಥವರಿಗೆ ಮಾತ್ರ ಅದು ಸಾಧ್ಯ. ಇಂಥ ವಿಲ್ ಪವರ್ ಅನ್ನು ನಾನು ಲಂಕೇಶರವರಲ್ಲಿ ಕಂಡಿದ್ದೆ.
brecht-cover-copy21
ಮೇಷ್ಟ್ರು ಕಳೆದ ಎರಡು ಮೂರು ವರ್ಷಗಳಿಂದ ಎಷ್ಟೊಂದು ಮಾತಾಡುತ್ತಾ ಬಂದಿದ್ದಾರೆ. ಆ ಮಾತುಗಳೆಲ್ಲ ರಾಜಕೀಯವಾಗಿ, ಸಾಹಿತ್ಯಕವಾಗಿ ಹಾಗೂ ಸಾಂಸ್ಕೃತಿಕವಾಗಿ ಲಯವನ್ನು ಕಳೆದುಕೊಳ್ಳದೆ; `ಇವರು ಅನಂತಮೂರ್ತಿಯವರು’ ಎನ್ನುವ ರೀತಿಯಲ್ಲಿ ಒಂದು ಅಮೋಘ `ರೂಪಕ’ವನ್ನು ನಮ್ಮ ಮುಂದಿಟ್ಟಿದ್ದಾರೆ. ಈ ದೃಷ್ಟಿಯಿಂದ ಅವರ `ರುಜುವಾತು’ ಮತ್ತು `ಸದ್ಯ ಮತ್ತು ಶಾಶ್ವತ’ ಕೃತಿಗಳು ನನಗೆ ತುಂಬಾ ಪ್ರಿಯವಾದ ಕೃತಿಗಳಾಗಿವೆ. ಅವರು ತಮ್ಮನ್ನು ತೆರೆದಿಟ್ಟುಕೊಳ್ಳುವುದರ ಜೊತೆಗೆ ಒಟ್ಟು ಸಮಾಜವನ್ನು ಎಷ್ಟು ಚೆನ್ನಾಗಿ ತೆರೆದು ಓದುತ್ತಾರೆ. ಇದರ ಜೊತೆಗೆ ಜಗತ್ತಿನ ಎಷ್ಟೊಂದು ಮಂದಿ ಚಿಂತಕರನ್ನು ,ಕವಿಗಳನ್ನು, ಹಾಗೂ ಲೇಖಕರನ್ನು ನಮ್ಮ ಮುಂದೆ ನಿಲ್ಲಿಸುತ್ತಾರೆ. `ಸಾಧ್ಯವಾದರೆ ಇವರನ್ನೆಲ್ಲ ಓದ್ರಯ್ಯಾ’ ಎಂದು ಇತ್ತೀಚೆಗೆ ಅವರ ಏಟ್ಸ್ ನ ಭಾವಾನುವಾದದ ಕವಿತೆಗಳ ಸಂಕಲನವನ್ನು ಎರಡು ಮೂರು ಬಾರಿ ಓದಿಕೊಂಡು ಆನಂದಿಸಿರುವೆ. ಅನಂತಮೂರ್ತಿಯವರು ಇಂಥ ದಟ್ಟ ಮನಃಸ್ಥಿತಿಯನ್ನು ಹೊಂದಿರುವುದರಿಂದಲೇ ಬ್ರೆಕ್ಟ್ ನಂತಹ ಮಾರ್ಕ್ಸ್ ವಾದಿಯ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಭಾವಕೋಶವನ್ನು ಅತ್ಯಂತ ಅನನ್ಯ ಭಾವದಿಂದ ನೊಡಲು ಸಾಧ್ಯವಾಗಿರುವುದು. ನಿಮ್ಮ ಮೇಲಿನ ಮಮತೆಯಿಂದ ಗೊತ್ತು ಮಾಡಿದ ಕಾಲಕ್ಕೆ ಕೊಟ್ಟಿರುವುದು. ಹಾಗೆಯೇ ನಾನು ಮೇಷ್ಟ್ರು ಬ್ರೆಕ್ಟ್ನನ್ನು ಕುರಿತು ಬರೆದಿರುವ ಮಾತುಗಳನ್ನು ಹಾಗೂ ಏಟ್ಸ್ ನನ್ನು ಕುರಿತು ಬರೆದಿರುವ ಮಾತುಗಳನ್ನು ಅಕ್ಕಪಕ್ಕ ಇಟ್ಟು ಓದುತ್ತಾ ಬಂದಿರುವೆ. ನಮ್ಮೆಲ್ಲ ಸಾಹಿತ್ಯಿಕ ಹಾಗೂ ರಾಜಕೀಯ ಪ್ರಜ್ಞೆಗಳಿಗೆ ಎಂಥ `ಅಭಿಜಾತ ಪ್ರಜ್ಞೆ’ಯನ್ನು ಕಸಿ ಮಾಡುತ್ತಾ ಬಂದಿರುವರು. ನೀವು ನಿಮ್ಮ ಮಾತುಗಳಲ್ಲಿ `ಕಳೆದ 20 ದಿನಗಳಿಂದ ಇದನ್ನೆಲ್ಲ ಗ್ರಹಿಸುತ್ತಾ ನಾನು ಸಹ ಬ್ರೆಕ್ಟ್ ಕವಿತೆಗಳೊಡನೆ ಸಾಕಷ್ಟು ಒಡನಾಡಿದ್ದೇನೆ ಮತ್ತು ಕವಿತೆಯ ಸಖ್ಯ ಪಡೆದಿದ್ದೇನೆ’ ಎನ್ನುವ ಮಾತು ಕೇವಲ ನಿಮಗೆ ಮಾತ್ರ ಅನ್ವಯಿಸುವುದಿಲ್ಲ; ಅದನ್ನು ಸುಮಾರು ಅರ್ಧ ಶತಮಾನದಿಂದ ನಮ್ಮ ಸಾಂಸ್ಕೃತಿಕ ಸಂದರ್ಭಕ್ಕೆ ಧಾರೆಯೆರೆದಿದ್ದಾರೆಂಬುದೇ ಸಂತೋಷದ ಸಂಗತಿ.
ನಿಮ್ಮ ಉಮೇದು ಇಲ್ಲದಿದ್ದರೆ `ಪಾರಮಾರ್ಥಿಕವಾದ ಶಾಶ್ವತ ಅನ್ನುತ್ತೇವಲ್ಲ ಅದರಲ್ಲಿ ಬ್ರೆಕ್ಟ್ ನಂಬಿಕೆ ಉಳ್ಳವನಾಗಿದ್ದರೆ, ಅಷ್ಟು ಸಂಕಟವನ್ನು ಪಡಲೇಬೇಕಾಗಿರಲಿಲ್ಲ. ಅದೆಲ್ಲವನ್ನು ಈ ಕಾಲದ ಮಾಯೆ ಎಂದು ಸುಮ್ಮನಿದ್ದು ಬಿಡಬಹುದಿತ್ತು. ಆದರೆ ಬ್ರೆಕ್ಟ್ ಮಾರ್ಕ್ಸಿಸ್ಟ್ ಆದ್ದರಿಂದ `ಎಲ್ಲವೂ ಸಂಭವಿಸುವುದು ಇಲ್ಲಿ, ಈ ಕಾಲದಲ್ಲಿ, ನಮ್ಮ ಕಾಲದಲ್ಲಿ? ಇಲ್ಲಿ ಸಲ್ಲುವವರು ಅಲ್ಲಿಯೂ ಸಲ್ಲುವರಯ್ಯ ಎಂಬಂತೆ ಇಲ್ಲಿ ಮೊದಲು ಸಲ್ಲಬೇಕು ಅನ್ನುವ ರೀತಿಯವನು’ ಎಂಬ ವಾಕ್ಯಗಳು ನಮಗೆ ಸಿಗುತ್ತಿರಲಿಲ್ಲ. ಈ ದೃಷ್ಟಿಯಿಂದ ನಿಮಗೆ ಹಾಗೂ ನಿಮ್ಮ ಅಹರ್ನಿಶಿ ಪ್ರಕಾಶನಕ್ಕೆ ಋಣಿಯಾಗಿರಲೇಬೇಕು.
ಒಂದು ದೃಷ್ಟಿಯಿಂದ ನನಗೆ `ಅಹರ್ನಿಶಿ’ ತುಂಬಾ ಪ್ರಿಯವಾದ ಶಬ್ದ. ಬೆಳಕು ಮತ್ತು ಕತ್ತಲನ್ನು ಹೊತ್ತು ತಿರುಗುವಾಗ ಮನುಷ್ಯ ಲೋಕದ ಎಷ್ಟೊಂದು ರೀತಿಯ `ಅವಘಡ’ಗಳನ್ನು ಸಹಿಸಿಕೊಳ್ಳಬೇಕು.
ಈ ಪತ್ರವನ್ನು ಬರೆಯಲು ಪ್ರೇರೇಪಿಸಿದ ನಿಮ್ಮ ಉಮೇದಿನ `ಅಹರ್ನಿಶಿ’ ಪ್ರಕಾಶನ ಹೊಸ ಹೊಸ ಚಿಂತನೆಗಳನ್ನು ಹೊರಗೆ ತೆಗೆಯುವ ಕೆಲಸವನ್ನು ನಿರಂತರ ಮಾಡಲಿ ಎಂದು ಆಶಿಸುವೆ.
ನಿಮ್ಮ
ಶೂದ್ರ ಶ್ರೀನಿವಾಸ

‍ಲೇಖಕರು avadhi

November 3, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

2 ಪ್ರತಿಕ್ರಿಯೆಗಳು

 1. ಅಹರ್ನಿಶಿ

  ಅಹರ್ನಿಶಿ ಹೆಸರು ನ೦ಗೂ ತು೦ಬಾನೇ ಇಷ್ಟ,ಅದಕ್ಕೇ ನನ್ನ ಬ್ಲಾಗ್ ನಾಮವನ್ನು ಅಹರ್ನಿಶಿ ಎ೦ದಿರಿಸಿಕೊ೦ಡಿಹೆ.

  ಪ್ರತಿಕ್ರಿಯೆ
 2. Berlinder

  ಪ್ರಿಯ ಶೂದ್ರ ಶ್ರೀನಿವಾಸ,
  ನಿಮ್ಮ ಗಮನಕ್ಕೊಂದು ವಿಷಯವನ್ನು ತರಲು ಇಚ್ಛಿಸುತ್ತೇನೆ.
  ನಿಮ್ಮ ಗಮನ ಸೆಳೆದಿರುವ ಜೆರ್ಮನ್ ಮಹಾಸಾಹಿತಿಯ ನಾಮ: ಬೆರ್ತೋಳ್ಡ್ ಬ್ರೆಶ್ಟ್ ಅಥವ ಬ್ರೆಷ್ಟ್.
  ಜೆರ್ಮನ್ ಭಾಷೆಯಲ್ಲಿ ’’c, ch, j’’ ಇನ್ನಿತರ ಕೆಲವು ವ್ಯಂಜನಗಳನ್ನು ತಮ್ಮದೇ ವೈವಿಧ್ಯ ವೈಕರಿಯಲ್ಲಿ ಉಚ್ಚರಿಸುತ್ತಾರೆ.
  ಸಾಮಾನ್ಯವಾಗಿ ಹೆಸರುಗಳನ್ನು ಹೇಗೆ ನುಡಿದರೂ ನಡೆಯುತ್ತೆ.
  ಮಹಾಕವಿ ಶೇಕ್ಸ್ಪಿಯರ್ ನ ಜಾಣನುಡಿಯಂತೆ: “”Call a rose by any name, it smells the same”!
  ಆದರೆ ಎಲ್ಲಾ ಕಡೆ ಕೆಲವು ವಿನಾಯತಿಯ ವಿಂಗಡವಿರುತ್ತದೆ.
  ತಪ್ಪುಗ್ರಹಿಸಿಕೊಳ್ಳಲಾಗದ ಗುಲಾಭಿಯ ಪರಿಮಳದಂತೆ ’ಬ್ರೆಷ್ಟ್’ ನಾಮ ಎಲ್ಲೆಡೆ ನಿಖರವಾಗಿ ಪ್ರಸಿದ್ಧವಾಗಿದೆ.
  ಅನಂತಮೂರ್ತಿಯವರು ಪುಸ್ತಕ ಪ್ರಕಟಿಸುವ ಮುನ್ನ ಬೆಂಗಳೂರಿನ ಜೆರ್ಮನಿಯ ’ಗೋಯೆತೆ ಸಾಂಸ್ಕೃತಿಕ ಸಂಸ್ಥೆ’ಯಲ್ಲಿ ಅಧ್ಯಾಪಕರೊಬ್ಬರನ್ನು ವಿಚಾರಿಸಬಹುದಾಗಿತ್ತು.
  ಜೆರ್ಮನ್ ಭಾಷೆಯ ಸಂಬಧವಿರುವ ವಿಶ್ವವಿಡೀ ಎಲ್ಲೆಡೆ ’ಬ್ರೆಕ್ಟ್’ ಅಪರಿಚಿತವಾಗುವುದು. ಜೆರ್ಮನಿಯಲ್ಲಂತೂ ಕೂಡಲೆ ತಿದ್ದಿಬಿಡುವರು. ಜೆರ್ಮನ್ ಭಾಷೆಯಿಂದ ಭಾವಾನುವಾದ ಮಾಡಿದ ಪ್ರಗಲ್ಭ ಪಾಂಡಿತ್ಯರಿಗೆ ಅದು ತಿಳಿದಿರುತ್ತಿತ್ತು.
  ಆ. ಮೂರ್ತಿಯವರ ಮೇಲೆ ’ಮಹಾಸಾಹಿತಿ’ ಎಂಬ ನನ್ನ ಅಪಾರ ಗೌರವಿದೆ.
  ವಿಶ್ವಾಸದಿಂದ,
  ಬರ್ಲಿನ್ ಕನ್ನಡಿಗ, ಮಹೇಂದ್ರ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: