ಅಹಲ್ಯೆ ಎಂಬ ಆತ್ಮವಂಚನೆ

chetana2.jpg“ಭಾಮಿನಿ ಷಟ್ಪದಿ”

 

 

 

 

ಚೇತನಾ ತೀರ್ಥಹಳ್ಳಿ

ಯಾಕೋ ಅಹಲ್ಯೆ ಇಷ್ಟವಾಗೋದೇ ಇಲ್ಲ!
ಇರಬಹುದು, ಪಂಚಮಹಾ ಪತಿವ್ರತೆಯರ ಲಿಸ್ಟಲ್ಲಿ ಅವಳದೊಂದು ಹೆಸರು.
ಅವಳ ಕಥೆಗೋ, ಮುಖಗಳು ಹತ್ತು ಹಲವು.

* * *

svapna2.jpg

ಅಹಲ್ಯೆಯ ಗಂಡ ಗೌತಮ, ಸ್ವರ್ಗದಲ್ಲೊಂದು ಸೀಟು ಗಿಟ್ಟಿಸಲು ತಪಸ್ಸಿಗೆ ಕುಂತಿದ್ದ.
ಲೋಕೋದ್ಧಾರದ ಕೆಲಸಕ್ಕೆ ಅಲ್ಲೊಂದು ಕುರ್ಚಿ ಪಡೆಯುವ ಜರೂರತ್ತಿತ್ತು ಅವನಿಗೆ.
ಅದರ ಹೊಣೆ ಹೊತ್ತಿದ್ದ ದೇವತೆಗಳೆಲ್ಲ ಸುರೆಯಲ್ಲಿ ಮುಳುಗಿ, ಅಪ್ಸರೆಯರ ಅಂಗೋಪಾಂಗಗಳ ಮೇಲೆ ಈಜಾಡುತ್ತಿದ್ದರು.

ಇತ್ತ ಅಹಲ್ಯೆ, ಕಾದು ಕುಂತಿದ್ದಳು.
ಘಮ್ಮನೆ ಅರಳಿದ್ದಳು. ಸುಮ್ಮನೆ ಮುದುಡಿ ಮಲಗಿದ್ದಳು, ಕಾಮನ ಗಾಳಿ ಸೋಂಕಿ.

* * *

ದೇವರಾಜ ಇಂದ್ರ, ಮುಗಿಲಿಂದಲೇ ಅವಳನ್ನ ಕಂಡ.
ಸುಮ್ಮನಿರಲಾಗಲಿಲ್ಲ ಅವನಿಂದ. ಇರುವುದಾದರೂ ಹೇಗೆ? ಅವನೊಬ್ಬ ರಾಜ. ಮಿಗಿಲಾಗಿ ದೇವತೆ ಬೇರೆ!
ರಾಜರಿಗೆ ಅಬಲೆಯರ ಮೇಲೆ ಪ್ರೀತಿ ಬಹಳ.

ಇಂದ್ರ, ಐರಾವತದ ಮೇಲೇರಿ ಬಂದ.
ಚಿಗುರು ಮೀಸೆಯ ಚಿರಜೌವನಿಗನ ಕಂಡು ಸಣ್ಣಗೆ ನರಳಿದಳು ಅಹಲ್ಯೆ. ಒಳಗೊಳಗೇ ಹಿಗ್ಗುತ್ತಿತ್ತು ಹಿಗ್ಗು!
ಇಂದ್ರ ಕುಟೀರದ ಒಳಹೊಕ್ಕ.  ಅಹಲ್ಯೆಯ ಒಳಗೂ…
ಬಯಕೆ ಚೆಲ್ಲಾಡಿತು.
ಎಷ್ಟು ದಿನ ನಡೆಯಿತೋ ಕೂಡುತ್ತ ಕಳೆಯುವಾಟ!? ಲೆಕ್ಕವಿಡಲಿಲ್ಲ ಇಬ್ಬರೂ.

* * *

ಗುಹೆಯಲ್ಲಿ ಕುಂತಿದ್ದ ಗೌತಮನ ಮೂಗಿಗೆ ಹಾದರದ ವಾಸನೆ ಸೋಕಿತು. ಅಸಲಿಗೆ ಅದು ತಾಕಿದ್ದು ಕಿವಿಯನ್ನ.
ಇರಲಿ… ಮಹಾಜ್ಞಾನಿಯಂತೆ ಗೌತಮ…ತಿಳಿಯಿತೆಂದೇ ಇರಲಿ…
ಹೆಂಡತಿಯನ್ನ ತಿಳಿಯಲಾಗದವನು ಬ್ರಹ್ಮವನ್ನೇನು ತಿಳಿದಾನು ಅನ್ನಬಾರದಲ್ಲ ಜನ? ಅಂತೂ ಎದ್ದು ಬಂದ.

ಎದ್ದು ಹೊರಟಿದ್ದ ಇಂದ್ರ.
ಅಂವ ತಡಿಕೆ ಸರಿಸುತ್ತ ಮೈಮುರಿಯುವಾಗ, ಚಾಪೆಯ ಮೇಲೆ ಅಹಲ್ಯೆ ಸುಖದುಸಿರು ಬಿಡುತ್ತಿದ್ದಳು.
ಇಂದ್ರ, ತಿರುತಿರುಗಿ ನೋಡುತ್ತ ಮುನ್ನಡೆದ.
ಗೌತಮ ಅವನನ್ನು ಬೇಲಿಯೊಳಗೇ ತಡೆದ.

ಹೊರಗೆ ಗಂಡಸರ ಜಟಾಪಟಿ.
ಇಂದ್ರ ದೇವರಾಜನಿರಬಹುದು. ಅದರೂ ಅವನ ವೀರ್ಯಕ್ಕೆ ಗೌತಮನಂಥವರು ಹೊಯ್ಯುವ ಹವಿಸ್ಸೇ ಆಹಾರ.
ತಲೆತಗ್ಗಿಸಿ ನಿಂತಿದ್ದ. ಮೈಯೆಲ್ಲ ಮಿಳ ಮಿಳ ಕಣ್ಣುಗಳು. ರೆಪ್ಪೆ ಅಲುಗದ ದೇವಕಣ್ಣುಗಳು. …
ಎಲ್ಲೆಲ್ಲೂ ಚಲ ಚಲ ಚಲ ಚಂಚಲ!
ಗೌತಮನ ಶಾಪ ಫಲಿಸಿತ್ತು. ಇಂದ್ರ ಮೈತುಂಬ ಕಣ್ಣು ಹೊತ್ತು ಕುರುಡನಂತೆ ಸ್ವರ್ಗದ ಹಾದಿ ಹಿಡಿದ.

* * *

ಅಹಲ್ಯೆ, ಮೈತುಂಬ ಸೆರಗು ಹೊದ್ದು ಗಂಡನೆದುರು ಬೆತ್ತಲಾದಳು.
“ನಿಮ್ಮಂತೆ ವೇಷ ಕಟ್ಟಿಬಂದು ಮೋಸ ಮಾಡಿದ” ಅಂತ ದೂರಿದಳು.
“ಹೋ…” ಎಂದು ಧುಮುಕಿದಳು.
ಅವಳ ವಂಚನೆಗೆ ಮಾತು ಹೊಳೆಯದೇ ಗೌತಮ ಮೂಕವಾದ. ಕಲ್ಲಿನಂತೆ ನಿಂತುಬಿಟ್ಟ.
ಜನ, “ಅಹಲ್ಯೆ ಕಲ್ಲಾದಳು” ಅಂದುಕೊಂಡರು.

ರಾಮ ನಡೆದು ಬಂದಾಗ ಕಾಲ್ತೊಡರಿದಳು ಅಹಲ್ಯೆ.
ಅಂವ ಕೂಡ ರಾಜ. ಪರರ ಹೆಂಡಿರಿಗೆ ನ್ಯಾಯ ಕೊಡಿಸುವಲ್ಲಿ ಯಾವ ರಾಜರೇನು ಕಡಿಮೆ?
ಗೌತಮನನ್ನು ಕರೆಸಿದ. “ಶುಭಮಸ್ತು” ಹರಸಿದ.

ಮತ್ತೀಗ ಅಹಲ್ಯೆ, ನದಿಯಲ್ಲಿ ಮಿಂದುಬಂದಳು.
ಗಂಡನ್ನ ಕೂಡಿಕೊಂಡು. “ನಾನೊಬ್ಬ ಪತಿವ್ರತೆ” ಅಂದಳು.
* * *

ಅಮ್ಮ ನಿತ್ಯ “ಸೀತಾ ಮಂಡೋದರೀ ಅಹಲ್ಯಾ
ತಾರಾ ದ್ರೌಪದೀ ತಥಾ….” ಶ್ಲೋಕ ಹೇಳಿ ಕೆನ್ನೆಗೆ ಕೈಕೈ ಬಡಿಯುತ್ತಾಳೆ.
ಭಾವ ಬಂದು ಕರೆದರೂ ಹೋಗದ, ಹಳೆಗೆಳೆಯನ ನೆನಪಲ್ಲಿ ಓಡಿ ಬಂದ ಅಕ್ಕನ್ನ ಬಾಯ್ತುಂಬ “ಸೂಳೆ ಮುಂಡೆ!” ಎಂದೆಲ್ಲ
ಬಯ್ಯುತ್ತಾಳೆ.

ಅಕ್ಕ, ಅಹಲ್ಯೆಯಲ್ಲ…
ಅವಳಿಗೆ ಸ್ವಾಭಿಮಾನವಿದೆ ಅನ್ನೋದು ಅಮ್ಮನಿಗೆ ಹೇಗೆ ಗೊತ್ತಾಗಬೇಕು?

‍ಲೇಖಕರು avadhi

November 29, 2007

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೇತನಾ ಎಂಬ ‘ಗಾನಾ ಜೋಯ್ಸ್

ಚೇತನಾ ಎಂಬ ‘ಗಾನಾ ಜೋಯ್ಸ್

' ಕನಸುಗಾರ ವೆಂಕಟ್ರಮಣ ಗೌಡರು 'ಹಂಗಾಮ' ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ...

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ...

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ...

7 ಪ್ರತಿಕ್ರಿಯೆಗಳು

 1. satish shile

  chalo kavana. howdu nija kalladavanu gouthama. kavanada ee twist chalo annistu. hage ee hottina bhala mandi yochne mado reetige ondu taunt ide ee kavandage

  ಪ್ರತಿಕ್ರಿಯೆ
 2. Sindhu

  ಚೇತನಾ,

  ವಿಶಿಷ್ಟ ತೀಕ್ಷ ಆಲೋಚನೆ, ನೋಟ..
  ನಂಗೆ ಅಹಲ್ಯೆಯ ಬಗ್ಗೆ ಏನನ್ನಿಸುವುದೇ ಇಲ್ಲ. ಸಿಟ್ಟು ಬರುವುದು ಅಹಲ್ಯೆಯನ್ನ ರೂಪಕವಾಗಿ ಬಳಸಿಕೊಳ್ಳುವ ಪತಿವ್ರತೆ ಭಾಷ್ಯ ಬರೆಯುವವರ ಬಗ್ಗೆ, ಅವಳನ್ನು ಗುರಾಣಿಯಾಗಿಸಿ ವಾಗ್ಯುದ್ಧ ನಡೆಸುವ ಮಹಿಳಾವಾ’ಧಿ’ಗಳ ಬಗ್ಗೆ, ಅವಳ ಪಾತ್ರದಿಂದ ಉಕ್ಕುವ ವಿಶಿಷ್ಟ ನೋಟಗಳನ್ನು ಹರಡಲು ಬಿಡದೆ ಫ್ರೇಮು ಕಟ್ಟುವ ನಮ್ಮ ಸಂಕುಚಿತ ಬುದ್ದಿಯ ಬಗ್ಗೆ..

  ಅಹಲ್ಯೆ ಮತ್ತು ಸ್ವಾಭಿಮಾನ – ಹೊಸನೋಟ ತುಂಬ ಚೆನಾಗಿ ಕ್ಲ್ಪಪ್ತವಾಗಿ ಬರೆದಿದ್ದೀರಿ.

  ಪ್ರೀತಿಯಿಂದ
  ಸಿಂಧು

  ಪ್ರತಿಕ್ರಿಯೆ
 3. ಸುಶ್ರುತ ದೊಡ್ಡೇರಿ

  ವಾರೆವ್ಹಾ! ಈ ಅಹಲ್ಯೆಯೆಂಬ ಕಲ್ಲಾದ ಹೆಣ್ಣಿನ ಕತೆಯ ಬಗ್ಗೆ ಅದೆಷ್ಟು ಹೃದಯಗಳು ಕರಗಿ ಬಿದ್ದಿವೆ.. ಪ್ರತಿ ಕವಿತೆಯಲ್ಲೂ, ಪ್ರತಿ ಬರಹದಲ್ಲೂ ಹೊಸದೇ ಒಂದು ದೃಷ್ಟಿಕೋನ, ಬೇರೆಯದೇ ಹೊಳಹು.. ಅಮೇಜಿಂಗ್!

  ಪ್ರತಿಕ್ರಿಯೆ
 4. G N Mohan

  ಕಥೆ ಬರೆಯಲು ಮಾತ್ರ ಧೈರ್ಯ ಬೇಕು ಎಂದುಕೊಂಡಿದ್ದೆ
  ಆದರೆ ಓದಲೂ ಧೈರ್ಯ ಬೇಕು ಎಂದು ಗೊತ್ತಾಗುತ್ತಿರುವುದೇ ನಿಮ್ಮ ಕಥೆಗಳನ್ನು ಓದುವಾಗ…
  ಕಥೆ ಓದುತ್ತಿದ್ದರೆ ಎಲ್ಲೋ ಅಪರಾಧೀ ಭವ ಒದ್ದುಕೊಂಡು ಬರುತ್ತದೆ
  ಹ್ಯಾಟ್ಸ್ ಆಫ್ ಚೇತನ
  – ಜಿ ಎನ್ ಮೋಹನ್

  ಪ್ರತಿಕ್ರಿಯೆ
 5. ಸಂತೋಷಕುಮಾರ

  ನೀವು ವಿಷಯಗಳನ್ನು ಮತ್ತು ಪಾತ್ರಗಳನ್ನು ಭಿನ್ನವಾಗಿ ಗ್ರಹಿಸುವ ರೀತಿ ಮತ್ತು ಅದನ್ನು ಅಷ್ಟೆ ನೇರವಾಗಿ ಮತ್ತು ಸರಳವಾಗಿ ಪ್ರಸ್ತುತಪಡಿಸುವ ದಾಟಿ ನಂಗಿಷ್ಟ.ನಂಗೆ ಮಹಿಳಾವಾದ,ಮಣ್ಣು ಮಸಿಗಳಲ್ಲೆಲ್ಲ್ಲಾ ನಂಬಿಕೆ ಇಲ್ಲಾ,ಆದರೆ ಹೀಗೂ ಚಿಂತನಕ್ಕೆ ಚಾಲನೆ ನೀಡಬಹುದಲ್ಲಾ ಅಂತ ಅನ್ನಿಸಿತು.

  ನಿಮ್ಮ ಮೇಲಿನ ನೀರಿಕ್ಷೆ ಮತ್ತಷ್ಟು ಹೆಚ್ಚುತ್ತಿದೆ..

  ಪ್ರತಿಕ್ರಿಯೆ
 6. nrjavali

  ಹಲೋ ಚೇತನಾ, ನಮಸ್ತೆ. ಇದುವರೆಗೆ ಅವಧಿಯಲ್ಲಿ ನಿಮ್ಮ ಲೇಖನ ಓದುತ್ತಿದ್ದನಾದರೂ ಇದುವರೆಗೆ ಪ್ರತಿಕ್ರಿಯೆ ಬರೆದಿರಲಿಲ್ಲ. ಇಂದು ಅಹಲ್ಯೆ ಓದಿದ ನಂತರ ಸುಮ್ಮನಿರಲಾಗುತ್ತಿಲ್ಲ. ಎಷ್ಟು ಚೆನ್ನಾಗಿ ಬರೆದಿದ್ದೀರಿ. ಸ್ವಾಬಿಮಾನದ ಕುರಿತು ನೀವು ಹೇಳಿದ ಮಾತು ತುಂಬಾ ಹಿಡಿಸಿತು.-ಜವಳಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: