ಅಹವಿ ಹಾಡು : Privacy ಅನ್ನುವ ವಸ್ತ್ರ ಕಿತ್ತುಹಾಕಿ ಬೆತ್ತಲಾಗ ಹೊರಟಿರುವ ನಾವು …

ಇವತ್ತು ಮಾಗಡಿ ರಸ್ತೆಯ ಮೂಲಕ ಆಫೀಸಿಗೆ ಹೋಗುತ್ತಿರಬೇಕಾದರೆ ರಸ್ತೆಯ ಅಕ್ಕಪಕ್ಕ ನೋಡಿದರೆ ಎಷ್ಟೊಂದು ಬ್ಯಾನರ್‌ಗಳು ಮತ್ತು ಫ಼್ಲೆಕ್ಸ್‌ಗಳು ದಾರಿಯುದ್ದಕ್ಕೂ ರಾರಾಜಿಸುತ್ತಿದ್ದವು. ಯಾರದೋ ಹುಟ್ಟು ಹಬ್ಬಕ್ಕೆ, ಯಾರೋ ರಸ್ತೆ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಕ್ಕೆ, ಯಾರದೋ ಮನೆಯ ಗೃಹಪ್ರವೇಶಕ್ಕೆ, ಯಾರದ್ದೋ ಆಫೀಸ್‌ನ opening ceremony, ಮತ್ಯಾವುದೋ ಹಬ್ಬಕ್ಕೆ, ಯಾರದ್ದೋ ವೈಕುಂಠ ಸಮಾರಾಧನೆಗೆ, ಮತ್ಯಾರದ್ದೋ ಮದುವೆಯ ರಿಸೆಪ್ಷನ್‌ಗೆ ಯಾವ ಯಾವುದಕ್ಕೆಲ್ಲ ಶುಭಾಶಯಗಳು ಮತ್ತು ಶ್ರದ್ಧಾಂಜಲಿಯ ಬ್ಯಾನರ್‌ಗಳು ಸ್ವಾಮಿ! ನಾನು ಅವನ್ನೆಲ್ಲ ಓದುತ್ತಾ ಸಾಗಿದ ಹಾಗೆ ಮನಸ್ಸಿನಲ್ಲಿ ಮೂಡಿದ ಭಾವನೆಗಳಿವು …
ಮುಂಚೆ ನಮ್ಮ ನಮ್ಮ ಬದುಕು ನಮ್ಮ ಖಾಸಗಿಯದಾಗಿತ್ತು. ಹಾಗಾಗಿ ನಮ್ಮೆಲ್ಲ ಸಂತೋಷ, ದುಃಖ, ನೋವು, ನಲಿವು, ಬೇಸರ, ಆಘಾತ, ಪ್ರೀತಿ, ದ್ವೇಷ ನಮಗೆ ಮತ್ತು ನಮ್ಮ ಮನಸ್ಸಿನ ಒಳ ವೃತ್ತದಲ್ಲಿರುವ ಬೆರಳೆಣಿಕೆಯಷ್ಟು ಜನರಿಗೆ ಮಾತ್ರ ಸೇರಿದವಾಗಿದ್ದವು. ದಿನ ಪತ್ರಿಕೆಗಳಲ್ಲಿ ಆಗೀಗ ಮಕ್ಕಳು rank ಬಂದಿದ್ದಕ್ಕೆ ಮನೆಯವರು ಶುಭಾಶಯ ಹೇಳುವುದು, ಹೊಸತಾಗಿ ಮದುವೆಯಾದ ದಂಪತಿಗಳು ವಿದೇಶಕ್ಕೆ ಹೊರಟಾಗ Bon Voyage ಸಂದೇಶ ಹಾಕುವುದು, ಅತ್ಮೀಯರು ಸತ್ತ ದಿನ ಪೇಪರಿನಲ್ಲಿ ಅವರ ನೆನಪು ಮಾಡಿಕೊಳ್ಳುವುದು, ನೀನಿಲ್ಲದ ಜೀವನ ಎಷ್ಟು ಬರಡು ಅಂತ ಎಂದೋ ಸತ್ತ ಜೀವಕ್ಕೆ ಪೇಪರಿನ ಮೂಲಕ ಸಂದೇಶ ತಲುಪಿಸುವುದು ಈ ಥರ ಖಾಸಗಿ ಸಂತೋಷ-ದುಃಖಗಳನ್ನು ಸಾರ್ವಜನಿಕವಾಗಿಸುವ ಅಭ್ಯಾಸ ಸಣ್ಣ ಮಟ್ಟದಲ್ಲಿತ್ತು.
ನ್ಯೂಸ್ ಪೇಪರಿನಲ್ಲಿ ಇಂಚಿಂಚು ಜಾಗಕ್ಕೂ ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ಹಣ ತೆರಬೇಕಿದ್ದರಿಂದಲೋ, ಏನೋ ಈ ಅಭ್ಯಾಸ ಸಣ್ಣ ಮಟ್ಟದಲ್ಲಿತ್ತು. ಆದರೆ technology ತುಂಬ ಮುಂದುವರೆದು ಬ್ಯಾನರ್ ಮತ್ತು ಫ್ಲೆಕ್ಸ್‌ಗಳನ್ನು ಪ್ರಿಂಟ್ ಮಾಡಿಸುವುದಕ್ಕೆ ಕಡಿಮೆ ಹಣ ಖರ್ಚಾಗುತ್ತಿರುವುದು ಹಾಗೂ ಸಾಮಾಜಿಕ ಜಾಲ ತಾಣಗಳು ಫ್ರೀಯಾಗಿ ಬೆರಳ ತುದಿಯಲ್ಲಿ ಸಿಗುತ್ತಿರುವುದರಿಂದ ಈಗಿನ ದಿನಗಳಲ್ಲಂತೂ ಆ ಚಟ ಉತ್ತುಂಗಕ್ಕೇರಿ ಬಿಟ್ಟಿದೆ. ಪರಿಣಾಮವಾಗಿ ನಾವು ನಮ್ಮ ಖಾಸಗಿ ಬದುಕನ್ನು ಬಿಕರಿಗಿಟ್ಟಂತೆ ವರ್ತಿಸಲು ಶುರು ಮಾಡಿಬಿಟ್ಟಿದ್ದೇವೆ…
ಹಿಂದಿನ ಕಾಲದಲ್ಲಿ ಮನೆಯಲ್ಲಿ ಮಗು ಹುಟ್ಟಿದರೆ ಹತ್ತಿರದ ಸಂಬಂಧಿಗಳಿಗೆ ಕಾರ್ಡ್ ಒಂದನ್ನು ಬರೆದು ಶುಭ ಸಮಾಚಾರ ತಿಳಿಸುತ್ತಿದ್ದರು. ಹತ್ತಿರದವರೆಲ್ಲ ಹೋಗಿ ಹುಟ್ಟಿದ ಮಗುವನ್ನು ಶಕ್ತ್ಯಾನುಸಾರ, ಸಂಬಂಧಾನುಸಾರ ಹೊಗಳಿ, ದೃಷ್ಟಿ ತೆಗೆದು, ಅದರ ಕೈಲಿ ಹತ್ತೋ-ಇಪ್ಪತ್ತೋ ರೂಪಾಯಿ ಇಟ್ಟು ಸಕ್ಕರೆ ತಿಂದು ಬರುತ್ತಿದ್ದೆವು. ಯಾರಾದರೂ ಸತ್ತರೆ oval ಆಕಾರದಲ್ಲಿ ಸತ್ತಿರುವ ವ್ಯಕ್ತಿಯ ಯೌವನದ ದಿನದ ಒಂದು ಸುಂದರವಾದ (ಯೌವನದಲ್ಲಿ ಎಲ್ಲರೂ ಸುಂದರವಾಗಿಯೇ ಇರುತ್ತೇವೆ!) ಫೋಟೋ ಪ್ರಿಂಟ್ ಆದ ಕಾರ್ಡ್ ಬರುತ್ತಿತ್ತು. ಅವರೆಲ್ಲ ಹತ್ತಿರದ ಸಂಬಂಧಿಗಳೇ ಆಗಿರುತ್ತಿದ್ದರಿಂದ, ಮನೆಯವರೆಲ್ಲ ಶಕ್ತ್ಯಾನುಸಾರ, ದುಃಖಾನುಸಾರ ಅತ್ತು ವೈಕುಂಠ ಸಮಾರಾಧನೆಗೆ ಹೋಗಿ ಅವರ ಆತ್ಮವನ್ನು ಸ್ವರ್ಗ ಯಾತ್ರೆಗೆ ಕಳಿಸಿ ಬರುತ್ತಿದ್ದೆವು.
ಹತ್ತಿರದ ಸಂಬಂಧಿಗಳ ಹುಟ್ಟಿದ ದಿನದ ಕತೆಯೂ ಅಷ್ಟೇ. ಆಗೆಲ್ಲ ಯಾರೂ ಅದನ್ನೆಲ್ಲ celebrate ಕೂಡಾ ಮಾಡಿಕೊಳ್ಳುತ್ತಿರಲಿಲ್ಲ. ತುಂಬ ಕ್ಲೋಸ್ ಆದ ಮನೆಯ ಸದಸ್ಯರು ಮಾತ್ರ ವಿಷ್ ಮಾಡಿಕೊಳ್ಳುತ್ತಿದ್ದೆವು. ಆ ರೀತಿ ವಿಷ್ ಮಾಡುವ ಅಭ್ಯಾಸ ಕೂಡಾ ಸುಮಾರು 25-30 ವರ್ಷಗಳಿಂದ ಈಚೆಗೆ ಶುರುವಾಗಿದ್ದು ಅನ್ನುವ ನೆನಪು ನನಗೆ. ಅದಕ್ಕೆ ಮುಂಚೆ ಯಾರೂ ಹುಟ್ಟಿದ ದಿನಕ್ಕೆ ಯಾರಿಗೂ ವಿಷ್ ಕೂಡಾ ಮಾಡುತ್ತಿರಲಿಲ್ಲ. ಅಸಲಿಗೆ ಮನೆ ತುಂಬ ಮಕ್ಕಳಿರುತ್ತಿದ್ದರಿಂದ ಯಾರ ಹುಟ್ಟಿದ ದಿನವೂ ಯಾರಿಗೂ ನೆನಪೇ ಇರುತ್ತಿರಲಿಲ್ಲ! ಅಮ್ಮ ಅನ್ನುವವಳಿಗೆ ಮಾತ್ರ ಮಕ್ಕಳ ಹುಟ್ಟಿದ ದಿನ ನೆನಪಾಗುವ ಸಾಧ್ಯತೆ ಇರುತ್ತಿತ್ತು ಮತ್ತು ಎಲ್ಲೋ ಕೆಲವು ಮನೆಗಳಲ್ಲಿ, ಮನೆಯ ಆಗುಹೋಗುಗಳ ಭಾಗವಾಗಿರುತ್ತಿದ್ದ ನನ್ನ ಅಪ್ಪನಂತ ಅಪ್ಪಂದರಿಗೆ ಕೂಡಾ ನೆನಪಾಗುತ್ತಿತ್ತು. ಅಮ್ಮ ಅವತ್ತಿನ ದಿನ ಅವಳ ಮಕ್ಕಳಿಗೆ ಇಷ್ಟವಾದ ಯಾವುದೋ ಸಿಹಿ ಮಾಡುತ್ತಿದ್ದಳು … ಬಹುಪಾಲು ಮನೆಗಳಲ್ಲಿ ಅದು ಪಾಯಸವೇ ಆಗಿರುತ್ತಿತ್ತು! ಅಬ್ಬಬ್ಬಾ ಅಂದರೆ grand ಆಗಿ ಒಂದು ಜಾಮೂನು … ಅಲ್ಲಿಗೆ ಜನ ಗಣ ಮನ. ಹೊಸ ಬಟ್ಟೆ ಕೂಡಾ ಕೊಡಿಸುತ್ತಿದ್ದ ನೆನಪಿಲ್ಲ ನನಗೆ. ಇನ್ನು ಕೇಕ್ ಕಟ್, ಪಾರ್ಟಿ, ಹೋಟೆಲ್ ಅನ್ನುವುದೆಲ್ಲ ಕನಸಿನ ಮಾತೇ ಸರಿ.

ಇನ್ನು ಯಾರಾದರೂ ದುರ್ಮರಣಕ್ಕೀಡಾದರೆ ಇದ್ದ ಬದ್ದ ಕೆಲಸವನ್ನೆಲ್ಲ ಎಸೆದು ಅವರಿರುವಲ್ಲಿಗೆ ಓಡುತ್ತಿದ್ದೆವು. ಸಾಂತ್ವನ, ಸಹಾಯ ಎಲ್ಲಕ್ಕೂ ಸಿದ್ಧರಾಗಿರುತ್ತಿದ್ದೆವು. ಹಬ್ಬದ ದಿನ ಮನೆಯ ನೆಂಟರೆಲ್ಲ ಫೋನ್ ಮಾಡಿ ಶುಭಾಶಯ ಹೇಳಿಕೊಳ್ಳುತ್ತಿದ್ದೆವು. ಸಾಧ್ಯವಾದರೆ ಒಬ್ಬರೊಬ್ಬರ ಮನೆಗಳಿಗೆ ಭೇಟಿ ಕೊಟ್ಟುಕೊಳ್ಳುತ್ತಿದ್ದೆವು. ಒಟ್ಟಿಗೆ ಹಬ್ಬದೂಟ ತಿನ್ನುತ್ತಿದ್ದೆವು ಅನ್ನುವಲ್ಲಿಗೆ ಆ ಕತೆಯೂ ಸುಖಾಂತ್ಯವಾಗುತ್ತಿತ್ತು. ಹೀಗೆ ಎಲ್ಲವೂ ತುಂಬ ತುಂಬ ಖಾಸಗಿ ಬದುಕು.
ಈಗ ಗಮನಿಸಿದ್ದೀರಾ… ಬೀದಿಗೆ ಕಾಲಿಟ್ಟರೆ ಬ್ಯಾನರ್ ಇಲ್ಲದ ಒಂದೇ ಒಂದು ಲೈಟ್ ಕಂಬವೂ ಉಳಿದಿರುವುದಿಲ್ಲ! ಎಲ್ಲದರ ಮೇಲೂ ಯಾರದೋ ಹುಟ್ಟಿದ ದಿನದ, ತಿಥಿಯ, ಮರಣದ ಪ್ಲೆಕ್ಸ್‌ಗಳು ಕಟ್ಟಲ್ಪಟ್ಟಿರುತ್ತವೆ. ರಾಜಕೀಯ ನಾಯಕರ ಹುಟ್ಟು-ಸಾವುಗಳಿಗೆ ಆನಂದ ಭಾಷ್ಪಾಂಜಲಿ-ಶ್ರದ್ಧಾಂಜಲಿ ಅರ್ಪಿಸುವುದರ ಹಿಂದೆಯಾದರೂ ಒಂದು ಉದ್ದೇಶವಿರುತ್ತದೆ ಅಂದುಕೊಳ್ಳೋಣ. ಪಾಪ, ನಾಳೆ ಯಾವುದೋ ಅನುಕೂಲ ಬೇಕಿದ್ದಾಗ ‘ಸಾ ನಿಮ್ಮ ಹುಟ್ಟಿದಬ್ಬಕ್ಕೆ ಹತ್ತಡಿ ಬ್ಯಾನರ್ ಮಾಡ್ಸಿದ್ದೋ ಸಾ’ ಅಂತ ಹೇಳಲಿಕ್ಕಾದರೂ ಬರುತ್ತದೆ. ತಮಾಷೆಯೆಂದರೆ ಆ ಬ್ಯಾನರ್‌ಗಳಲ್ಲಿ ಆ ಹುಟ್ಟುಹಬ್ಬ ಆಚರಿಸಿಕೊಳ್ಳುವ ನಾಯಕರ ಮುಖದಷ್ಟೇ ದೊಡ್ಡದಾಗಿ ವಿಷ್ ಮಾಡುತ್ತಿರುವವರ ಮುಖವೂ ಪ್ರಿಂಟ್ ಆಗಿರುತ್ತದೆ! ಹುಟ್ಟುಹಬ್ಬ ಯಾರದ್ದು ಅಂತ ಗೊತ್ತೇ ಆಗುವುದಿಲ್ಲ. ಇನ್ನು ಕೆಲವು ಬ್ಯಾನರ್‌ಗಳಲ್ಲಿ ಸಾಮೂಹಿಕ ಮುಂಜಿ-ಮದುವೆಗಳ ಥರ ಇಡೀ ಬ್ಯಾನರ್‌ನ ತುಂಬ ಅಸಂಖ್ಯಾತ ಪುಟ್ಟಿ ಪುಟ್ಟಿ ಮುಖಗಳು ರಾರಾಜಿಸುತ್ತಿರುತ್ತವೆ. ಒಂದು ಹಿಂಡು ಜನರು ಖರ್ಚಿನ ದೃಷ್ಟಿಯಿಂದ ಒಟ್ಟಾಗಿ ಸೇರಿಸಿ ದುಡ್ಡು ಹಾಕಿ ಮಾಡಿಸಿರುತ್ತಾರೆ. ಹಾಗಾಗಿ ಪಾಪ ಇದ್ದ ಬದ್ದ ಮರಿ ನಾಯಕರದ್ದೆಲ್ಲಾ ಮುಖಗಳು ಪ್ರಿಂಟ್ ಆಗಲೇಬೇಕು. ಇನ್ನು ಕೆಲವರು ಇಬ್ಬರು ಮೂವರ ಹುಟ್ಟಿದ ಹಬ್ಬಕ್ಕೆ ಒಂದೇ ಫ್ಲೆಕ್ಸ್‌ನಲ್ಲಿ ಶುಭ ಕೋರಿ ಕೃತಾರ್ಥರಾಗುತ್ತಾರೆ.
ಹಬ್ಬಗಳ ಸಾಲು ಬಂದಾಗ ನಮ್ಮ ರಾಜಕೀಯ ನಾಯಕರು ಕೂಡಾ ಜನತೆಗೆ ಶುಭಾಶಯ ಹೇಳುವ ಫ್ಲೆಕ್ಸ್ ಹಾಕಿಸುವುದರಲ್ಲಿ ನಿರತರಾಗುತ್ತಾರೆ. ಅಲ್ಲೂ ಹಣದ ಲೆಕ್ಕಾಚಾರ ಪ್ರಮುಖ ಪಾತ್ರ ವಹಿಸಿ, ಡಿಸೆಂಬರ್ 25 ರ ಕ್ರಿಸ್‌ಮಸ್, ಜನವರಿ ಒಂದರ ಹೊಸವರ್ಷ ಮತ್ತು ಜನವರಿ 14/15 ರ ಸಂಕ್ರಾಂತಿ ಮೂರಕ್ಕೂ ಸೇರಿಸಿ ಫ್ಲೆಕ್ಸ್ ಮಾಡಿಸಿ ಬಿಡುತ್ತಾರೆ. ಮತ್ತೆ ಕೆಲವರು ದಸರಾ ಮತ್ತು ರಂಜ಼ಾನ್ ಎರಡಕ್ಕೂ ಒಂದೇ ಬ್ಯಾನರಿನಲ್ಲಿ ಶುಭಾಶಯ ಹೇಳಿ secular ಪ್ರಜ್ಞೆಯನ್ನು ಎತ್ತಿ ಹಿಡಿಯುತ್ತಾರೆ! ಸದಾ ಚಾಲ್ತಿಯಲ್ಲಿರಬೇಕಾದ ಅನಿವಾರ್ಯತೆಯಿರುವುದರಿಂದ ಈ ಥರದ ಬ್ಯಾನರ್‌ಗಳ ಹಿಂದಿನ ಮನಃಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು.
ಆದರೆ ನಮ್ಮ ಖಾಸಗಿ ಬದುಕಿನ ಆಗುಹೋಗುಗಳನ್ನು ಹೀಗೆ ಬೀದಿಗೆ ತರಲು ನಾವು ಯಾಕೆ ಪ್ರಯತ್ನಿಸುತ್ತಿದ್ದೇವೆ? ಹಿಂದೆ ಯಾವುದೋ ಸೀರೆಯಂಗಡಿ, ಒಡವೆಯಂಗಡಿ, electoronic ವಸ್ತುಗಳ ಮಳಿಗೆ, ಮತ್ತಿತರ ಗೃಹೋಪಯೋಗಿ ವಸ್ತುಗಳು, ಸಾಬೂನು, ಶಾಂಪೂ ಇಂಥ ವಸ್ತುಗಳನ್ನು ಬಿಕರಿಗಿಡಲು adevertise ಮಾಡುತ್ತಿದ್ದರು. ಅದು ದುಡ್ಡು ಹಾಕಿದವನ ಅನಿವಾರ್ಯತೆಯೂ ಹೌದು. ಆದರೆ ನಾವು ಈಗ ಭಾವನೆಗಳನ್ನು, ನಮ್ಮ ಖಾಸಗಿ ಬದುಕನ್ನು ಬಿಕರಿಗಿಟ್ಟ ವಸ್ತುಗಳನ್ನಾಗಿಸಿ ಜಗತ್ತಿಗೆ ಅದನ್ನೆಲ್ಲ ಯಾಕೆ ಸಾರಿ ಹೇಳಲು ಪ್ರಯತ್ನಿಸುತ್ತಿದ್ದೇವೆ? ನಮ್ಮ ಹೃದಯದ ಒಳಗೆ ಬಗ್ಗಿ ನೋಡಲು ಇಡೀ ಜಗತ್ತಿಗೇ ಈ ಫ್ಲೆಕ್ಸ್‌ಗಳ ಮೂಲಕ ಆಹ್ವಾನ ಪತ್ರಿಕೆ ಹಂಚುತ್ತೇವಲ್ಲ ಅದರ ಹಿಂದಿನ ಮನಃಸ್ಥಿತಿ ಏನು?
ಬರೀ ಫ್ಲೆಕ್ಸ್ ಮತ್ತು ಬ್ಯಾನರ್‌ಗಳು ಅಂತ ಮಾತ್ರವಲ್ಲ … ಫ಼ೇಸ್‌ಬುಕ್‌ನಂಥ ಸಾಮಾಜಿಕ ಜಾಲತಾಣಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೂ ಅಷ್ಟೇ ನಾವು ತುಂಬ ಪ್ರಚಾರ ಪ್ರಿಯರಾಗುತ್ತಿದ್ದೇವೆ ಅನ್ನಿಸುವುದು ಸುಳ್ಳಲ್ಲ. ಕ್ರಿಸ್ತಪೂರ್ವ ಮತ್ತು ಕ್ರಿಸ್ತಶಕ ಅನ್ನುತ್ತೇವಲ್ಲ ಹಾಗೆಯೇ ಮುಂದೆ ಫ಼ೇಸ್‌ಬುಕ್ ಪೂರ್ವ ಮತ್ತು ಫ಼ೇಸ್‌ಬುಕ್ ಉತ್ತರ ಅಂತ ಕಾಲವನ್ನು ವಿಂಗಡಿಸುವ ಸ್ಥಿತಿಯೂ ಒಂದು ದಿನ ಹುಟ್ಟಿಕೊಳ್ಳುತ್ತದೇನೋ ಅನ್ನುವ ಸಂಶಯ ನನಗೆ! ಮನೆಯಲ್ಲಿ ಪಕ್ಕದ ರೂಮಿನಲ್ಲಿರುವ ಮಕ್ಕಳಿಗೆ, ಗಂಡನಿಗೆ, ಅಪ್ಪ-ಅಮ್ಮಂದಿರಿಗೆ ವಿಷ್ ಮಾಡಿದ ಮೇಲೂ ಅದನ್ನು ಫ಼ೇಸ್‌ಬುಕ್‌ನಲ್ಲಿ ಬರೆದು ಹಾಕದಿದ್ದರೆ ಅದು ಹುಟ್ಟಿದ ಹಬ್ಬವೇ ಅಲ್ಲ ಬಿಡು ಅನ್ನುವ ಧೋರಣೆ ಈಗ. ಯಾರಾದರೂ ಹುಷಾರು ತಪ್ಪಿ ಮಲಗಿದರೆ ‘ನನ್ನ ಅಪ್ಪ/ ಅಮ್ಮ/ ಅಣ್ಣನಿಗೆ ಹೀಗೆ ಹೀಗೆ ಆಗಿದೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ’ ಅನ್ನುವ ಪೋಸ್ಟ್‌ಗಳು ಫ಼ೇಸ್‌ಬುಕ್‌ನಲ್ಲಿ ಪ್ರತ್ಯಕ್ಷವಾಗುತ್ತವೆ. ಹುಷಾರು ತಪ್ಪಿದವರ ಬಳಿ ಹೋಗಿ ಇದ್ದು ಕೈಲಾದ ಸಹಾಯ ಮಾಡುವುದರ ಬದಲು ಇಲ್ಲಿ ಕೂತು ಆ ರೀತಿಯ ಎದೆಯೊಡೆಯುವಂತ ಪೋಸ್ಟ್‌ಗಳನ್ನು ಹಾಕಿಕೊಂಡು ಕೂಡುವುದರ ಪುರುಷಾರ್ಥವೇನು?!

ಅದಕ್ಕೆ ಪರಿಚಯ ಇರುವವರ, ಎಂದೂ ಮುಖ ಮೂತಿ ಕಾಣದವರ ಲೈಕು ಮತ್ತು ಕಾಮೆಂಟ್‌ಗಳು ಬಿದ್ದಾಗ ರಾಜಶ್ರೀ ಸಿನೆಮಾ, ಕರಣ್ ಜೋಹರ್ ಸಿನೆಮಾದ ಥರ ಕಣ್ಣಂಚಲ್ಲಿರುವ ಕಂಬನಿಯನ್ನು ತೊಡೆದುಕೊಂಡು ಕೃತಾರ್ಥರಾಗುತ್ತೇವಲ್ಲ, ಯಾಕಾಗಿ? ಆ ನಂತರ ನಮಗಾಗಿ ನಮ್ಮ ಪರವಾಗಿ ಪ್ರಾರ್ಥಿಸಿದವರೆಲ್ಲರಿಗೂ thanks giving ಪ್ರಹಸನ ಶುರುವಾಗುತ್ತದೆ. ನಿಜಕ್ಕೂ ಹೇಳಿ, ನನ್ನ ಮನೆಯಲ್ಲಿ ಈ ತೊಂದರೆಯಿದೆ ಬನ್ನಿ, ಸಹಾಯ ನೀಡಿ ಅಂತ ಕರೆದಿದ್ದರೆ ಅಲ್ಲಿ ಹಾರೈಸಿದವರಲ್ಲಿ ಎಷ್ಟು ಜನ ನಮ್ಮ ಕಡೆ ಓಡಿ ಬರುತ್ತಿದ್ದರು? ಅದೇ ಹೃದಯದ ಪರಿಧಿಯೊಳಗಿನ ಬೆರಳೆಣಿಕೆಯಷ್ಟು ಜನರಷ್ಟೇ …
ಇನ್ನು ಯಾರಾದರೂ ಸತ್ತು ಹೋದರಂತೂ ಮುಗಿದೇ ಹೋಯಿತು ಹೆಣ ಎತ್ತುವುದಕ್ಕಿಂತಲೂ ಮೊದಲೇ ಆ ವಿಷಯ ಫ಼ೇಸ್‌ಬುಕ್‌ನಲ್ಲಿ ಪೋಸ್ಟ್ ಆಗುತ್ತದೆ. May his soul rest in peace ಅನ್ನುವುದಕ್ಕೂ ಸೋಮಾರಿತನ ಅಡರಿಸಿಕೊಂಡಿರುವ ನಾವು ಈಗ ಅದನ್ನು RIP ಗೆ ಇಳಿಸಿದ್ದೇವೆ. ಇದೆಲ್ಲ ನಾವು ಯಾಕಾಗಿ ಮಾಡುತ್ತಿದ್ದೇವೆ … ನನ್ನನ್ನೂ ಸೇರಿಸಿ ಈ ಪ್ರಶ್ನೆ ಕೇಳಿಕೊಳ್ಳುತ್ತಿದ್ದೇನೆ.
ಇದು ಹುಟ್ಟು-ಸಾವುಗಳ ವಿಷಯಕ್ಕಾಯಿತು. ಆದರೆ ಮನಸ್ಸಿನ ಭದ್ರ ಕೋಟೆಯೊಳಗಿನ ಸಾವಿರ ನೋವನ್ನು ಕೂಡಾ ನಾವು ಸಾರ್ವಜನಿಕವಾಗಿ ಕೂಗಿ ಹೇಳುವುದರ ಹಿಂದಿನ ಉದ್ದೇಶವೇನು? ತುಂಬ ದುಃಖವಾದಾಗ ನಮ್ಮ ಅಂತರಂಗದ ಒಬ್ಬರೋ, ಇಬ್ಬರೋ ಖಾಸಗಿ ಗೆಳೆಯ/ಗೆಳತಿಯರಿಗೆ ಮಾತ್ರ ಹೇಳಿ ಅಳುವಂತ ವಿಷಯವನ್ನು, ನಗುವಂತ ವಿಷಯವನ್ನು ಸಾರ್ವಜನಿಕವಾಗಿಸುತ್ತೇವಲ್ಲ ಯಾಕಾಗಿ? ಮಧ್ಯರಾತ್ರಿಯಲ್ಲಿ ದಿಂಬು ಒದ್ದೆಯಾಗುವಂತೆ ಅತ್ತು ಅದರೊಡನೆ ನಮ್ಮ ಸುಖ-ದುಃಖ ಹೇಳಿಕೊಳ್ಳುತ್ತಿದ್ದೆವಲ್ಲವಾ ನೆನ್ನೆ, ಮೊನ್ನೆಯಿನ್ನೂ!! ಈಗ ನಮಗೆ ದುಃಖವಾದ ಕೂಡಲೇ ಅದನ್ನು ನಾವು ನಾಲ್ಕು ಜನಕ್ಕೆ ತಿಳಿಸುವ ಉದ್ದೇಶದಿಂದ ಒಂದೆರಡು ಪದಗಳ ಪೋಸ್ಟ್ ಹಾಕಿಯೇ ತೀರಬೇಕು. ಸತ್ಯಕ್ಕೂ ಆ ಪೋಸ್ಟ್ ಓದಿದರೆ ನಮ್ಮ ಖುಷಿ, ನೋವು ಯಾವುದೂ, ಯಾರಿಗೂ ಅರ್ಥವಾಗದಷ್ಟು ನಿಗೂಢವಾಗಿರುತ್ತವೆ. ನಾವು ನಮ್ಮ ಬದುಕಿನ ಎಲ್ಲವನ್ನೂ, ಎಲ್ಲರ ಮುಂದೆಯೂ ಬೆತ್ತಲಾಗಿಸುವುದು ಅಸಾಧ್ಯ. ಹಾಗಾಗಿ ಪೂರ್ತಿ ವಿಷಯವನ್ನು ಹೇಳಿಕೊಳ್ಳದೆ ಟಿ.ಕೆ. ರಾಮರಾವ್ ಅವರ ಕಾದಂಬರಿಯಂತ suspense ಹುಟ್ಟಿಸುವಂತ ಸ್ಟೇಟಸ್ ಹಾಕುವುದು ನಮ್ಮ ಒಳಗಿನ ಯಾವ ತೆವಲನ್ನು ಶಾಂತಗೊಳಿಸುತ್ತದೋ!
ಹಾಗೆ ಹಾಕಿದ ಕೂಡಲೇ ನೂರಾರು ಜನ like ಒತ್ತಿ, ಏನಾಯ್ತು ಏನಾಯ್ತು ಅಂತ ಮುಗಿಬೀಳುತ್ತಾರೆ. ಅವರಲ್ಲಿ ಯಾರಾದರೂ ಒಬ್ಬರಿಗಾದರೂ ಅಂತರಂಗದ ಅಳಲನ್ನು ಹೇಳಿಕೊಳ್ಳುತ್ತೇವಾ ಅಂತ ಪ್ರಶ್ನೆ ಕೇಳಿ ನೋಡಿ … ಇಲ್ಲ ಅನ್ನುವುದು ಎಲ್ಲರ ಉತ್ತರವೂ ಆಗಿರುತ್ತದೆ. ನಿಜಕ್ಕೂ ಹೇಳಬೇಕೆಂದರೆ ನಮ್ಮ ಅಂತರಂಗದ ಪರಿಧಿಯಲ್ಲಿರುವ ಕೆಲವೇ ಕೆಲವರಿಗೆ ನಾವು ವಿಷಯ ಹೇಳಿಕೊಂಡು ಮತ್ತು ಅವರು ನಮಗೆ ಸಾಂತ್ವನ ನೀಡಿ ಎಲ್ಲವೂ ಮುಗಿದಿರುತ್ತದೆ. ಹಾಗಾದ ಮೇಲೂ ಈ ರೀತಿಯ ಪ್ರಚಾರಕ್ಕೆ ಬೀಳುತ್ತೇವಲ್ಲ … ಎಲ್ಲವೂ ಸುಮ್ಮನೆ ಅಭದ್ರ ಮನಸ್ಸಿನ ದೊಂಬರಾಟಗಳಷ್ಟೇ ಅನ್ನಿಸುವುದಿಲ್ಲವೇ ನಿಮಗೆ?
ನನಗೆ ಹೋದ ವರ್ಷ ಕ್ಯಾನ್ಸರ್ ಆಗಿ ನನ್ನ ಕೀಮೋ ಆಗ ತಾನೇ ಶುರುವಾಗಿತ್ತು. ಸದಾ ಬಿಜ಼ಿಯಾಗಿರುತ್ತಿದ್ದ ಬದುಕೀಗ ಪೂರಾ ಖಾಲಿ ಖಾಲಿ. ಸರಿ, ಲ್ಯಾಪ್ ಟಾಪ್ ತೆಗೆದು ಫ಼ೇಸ್‌ಬುಕ್‌ನಲ್ಲಿ ಸ್ಟೇಟಸ್ ಹಾಕುವ ಚಟ ಶುರುವಾಯ್ತು! ಮೊದಲನೆಯ ಕೀಮೋ ಮುಗಿಸಿ ಬಂದ ದಿನ ‘ಮೊದಲನೆಯ ಮೆಟ್ಟಿಲು ಹತ್ತಿದೆ’ ಅಂತ ಹಾಕಿದೆ. ಎಲ್ಲರೂ ಏನದು, ಏನದು ಅಂತ ಬೆನ್ನು ಬಿದ್ದರು. ನಾನು 🙂 ಹೀಗೊಂದು ಸ್ಮೈಲಿ ಹಾಕಿ, ಸುಮ್ಮನಾದೆ. ಅಲ್ಲಿಂದ ಮುಂದೆ ಎರಡನೆಯ ಕೀಮೋ ಆದಾಗ ‘ಎರಡನೆಯ ಮೆಟ್ಟಿಲು ಹತ್ತಿದೆ’ ಅಂತ ಹಾಕಿದೆ. ಮತ್ತೆ ಅದೇ ಅದೇ ಪ್ರಶ್ನೆಗಳು. ಅಲ್ಲಿರುವ ಯಾರಿಗೂ ನನ್ನ ಕ್ಯಾನ್ಸರ್ ಕತೆ ಹೇಳುವ ಉದ್ದೇಶ ನನಗೆ ಇರಲೇ ಇಲ್ಲ. ಸುಮ್ಮನೆ ಸಣ್ಣ ಮಕ್ಕಳು ಅತ್ತು ಗಮನ ಸೆಳೆಯುತ್ತವಲ್ಲ ಹಾಗೆ ಬರೆದುಕೊಳ್ಳುವ ಚಟಕ್ಕೆ ಬಿದ್ದಿದ್ದೆ. ಈ ಸಲ ಈ ಸ್ಟೇಟಸ್ ಹಾಕಿದಾಗ ಗೆಳೆಯನೊಬ್ಬ ಪಾಪ ನನ್ನ ಖಾಯಿಲೆಯ ಬಗ್ಗೆ ಗೊತ್ತಿಲ್ಲದವನು ‘ಹಾಗೇ ಮೆಟ್ಟಿಲು ಹತ್ತಿ ಹತ್ತಿ ಒಂದಿನ ಕೊನೆ ಮೆಟ್ಟಿಲು ಹತ್ತಿದ ಮೇಲೆ ಸಾಯ್ತೀಯಲ್ಲ, ಆಗ ಹೇಳು’ ಅಂತ ಕಾಮೆಂಟ್ ಹಾಕಿಬಿಟ್ಟ!
ನನ್ನ ಹಿಂದು ಮುಂದಿಲ್ಲದ absurd ಸ್ಟೇಟಸ್‌ಗೆ ತಕ್ಕ ಹಾಗಿನ absurd ಕಾಮೆಂಟ್ ಬಂದಿತ್ತು ಅವನಿಂದ. ಆದರೆ ನಾನಿದ್ದ ಸ್ಥಿತಿಯಲ್ಲಿ ಅದನ್ನು ಓದಿ ಅದೆಷ್ಟು ದುಃಖವಾಗಿ ಹೋಯ್ತು ಅಂದರೆ ಅವನಿಗೆ ಫೋನ್ ಮಾಡಿ ತುಂಬ ಅತ್ತುಬಿಟ್ಟಿದ್ದೆ. ಅವನು ವಿಷಯ ತಿಳಿದು ತಬ್ಬಿಬ್ಬಾಗಿ ಹೋಗಿದ್ದ. ಅಯ್ಯೋ ಮಾರಾಯ್ತಿ ನನಗೆ ಇದೆಲ್ಲ ಗೊತ್ತಿರಲಿಲ್ಲ ಕಣೇ ಅಂತ ಸಾರಿ ಸಾರಿ ‘sorry’ ಹೇಳಿದ್ದ. ನಾನು ಕೂಡಾ ಉದಾರ ಹೃದಯದವಳ ಹಾಗೆ ಅವನನ್ನು ಕ್ಷಮಿಸಿದ್ದೆ. ಆಗಲೇ ನನಗೆ ಈ ರೀತಿ ನಮ್ಮ ಖಾಸಗಿ ನೋವುಗಳನ್ನು ವಿಷಯಗಳನ್ನು ಸಾರ್ವಜನಿಕವಾಗಿಸುವುದರ ಹಿಂದಿನ ವಿಫಲತೆ ಅರ್ಥವಾಗಿದ್ದು. ನನ್ನ ಖಾಯಿಲೆಯ ಬಗ್ಗೆ ತಿಳಿದ ಕೆಲವರು ನನ್ನ ಜೊತೆ ಸದಾ ಕಾಲ contactನಲ್ಲಿದ್ದು ನನ್ನನ್ನು ಖುಷಿಯಾಗಿಡುತ್ತಿದ್ದರು, ಸಹಾಯ ಮಾಡುತ್ತಿದ್ದರು, ನಗಿಸುತ್ತಿದ್ದರು, ಸಾಂತ್ವನ ಕೊಡುತ್ತಿದ್ದರು. ಅದರಾಚೆಗೂ ಹೋಗಿ ಫೇಸ್‌ಬುಕ್‌ನಲ್ಲಿ ನನ್ನ ದುಃಖ ತೋಡಿಕೊಂಡಿದ್ದು ಯಾವ ಪುರುಷಾರ್ಥಕ್ಕೋ?!
ನಾವೆಲ್ಲರೂ ಅವಶ್ಯಕವಾಗಿ ನಮ್ಮ ಮನಸ್ಸಿಗೆ ಈ ಪ್ರಶ್ನೆಗಳನ್ನು ಕೇಳಿಕೊಳ್ಳಲೇ ಬೇಕಾದ ಮತ್ತು ಉತ್ತರ ಕಂಡುಕೊಳ್ಳಬೇಕಾದ ಸಮಯವಿದು. ಫೇಸ್‌ಬುಕ್‌ನಲ್ಲಿ ಯಾವುದೋ ಬರಹವನ್ನೋ, ಕವನವನ್ನೋ, ಊರಿಗೆ ಹೋಗಿ ಬಂದ ಫೋಟೋಗಳನ್ನೋ ಹಾಕಿಕೊಳ್ಳುವುದನ್ನಾದರೂ ಸ್ವಲ್ಪ ಮಟ್ಟಿಗೆ ಒಪ್ಪಬಹುದು. ನಾನು ನೋಡಿದ್ದನ್ನು ನಾಲ್ಕು ಜನ ನೋಡಲಿ ಮತ್ತು ನಾವು ಬರೆದಿದ್ದನ್ನು ನಾಲ್ಕು ಜನ ಓದಲಿ ಅನ್ನುವ ಒಂದು ಸಣ್ಣ ಪ್ರಮಾಣದ ಖುಷಿ ಮತ್ತು advertisement ಅನ್ನಬಹುದು. ಆದರೆ, ಖಾಸಗಿ ನೋವು-ನಲಿವುಗಳ ವಿಷಯದಲ್ಲಿ ನಾವು ಈ ರೀತಿ ಪ್ರಚಾರಪ್ರಿಯತೆಯ ಗೀಳಿಗೆ ಯಾಕೆ ಬೀಳುತ್ತೇವೆ? ಯಾಕೆ ಹೀಗೆ pseudo ಭಾವನೆಗಳ ದಾಸರಾಗುತ್ತಿದ್ದೇವೆ? ನಮ್ಮವರು ಅನ್ನಿಸಿಕೊಂಡವರು ನಮ್ಮವರಾಗಿ ನಮ್ಮನ್ನು ಅಪ್ಪಿದ ನಂತರವೂ ಈ virtual ಪ್ರಪಂಚದಲ್ಲಿ ನಮಗೆ ಎಂದೂ ಪರಿಚಯವೇ ಇಲ್ಲದಿದ್ದರೂ ನಮ್ಮ ಫ಼್ರೆಂಡ್ ಲಿಸ್ಟಿನಲ್ಲಿರುವ ಯಾವುದೋ ಅಪರಿಚಿತರ ಮಾತು ನಮಗೆ ಯಾಕೆ ಬೇಕಾಗುತ್ತದೆ?
ನಮ್ಮ ನೋವು-ನಲಿವುಗಳನ್ನು ಕೂಡಾ ಸಾರ್ವಜನಿಕವಾಗಿ ಹೇಳಿಕೊಂಡು ಬದುಕನ್ನು ಜನಜಂಗುಳಿಯ ಜಾತ್ರೆಯನ್ನಾಗಿಸಿಕೊಳುವುದೇಕೆ? ಮನಸೆಂಬ ಸಮುದ್ರದ ತಳಗಿನ ಮರಳನ್ನು ಬಗೆದು ನೋಡಿದರೆ ಅದರಡಿಯಲ್ಲಿರುವ ಉತ್ತರಗಳು ಸಿಕ್ಕೇ ಸಿಗುತ್ತವೆ. ಆದರೆ, ಬಗೆದು ನೋಡುವ ಆಸ್ಥೆಯಿರಬೇಕು ಅಷ್ಟೇ … ಆಗ ಇದೆಲ್ಲ ಪ್ರಚಾರಪ್ರಿಯ ಮನಃಸ್ಥಿತಿಯಿಂದ ನಾವು ಮಾಡುವ ಇಂಥ ಕೆಲಸಗಳ ನಿರರ್ಥಕತೆ ಅರ್ಥವಾಗುತ್ತದೆ.
ಬದುಕನ್ನು ಸಾರ್ವಜನಿಕವಾಗಿಸಲು ಹೊರಟ ನಾವು ಇಷ್ಟು ಮಾತ್ರ ನೆನಪಿಟ್ಟುಕೊಳ್ಳಬೇಕು … ಇವೆಲ್ಲ ಭ್ರಮೆಗಳ ಪರದೆಯನ್ನು ಧೈರ್ಯ ವಹಿಸಿ ಒಮ್ಮೆ ಸರಿಸಿ ನೋಡಿದರೆ ಹೃದಯದ ಬಾಗಿಲಿನಾಚೆ ನಮ್ಮ ಕಣ್ಣೀರಿಗೆ ಭುಜವಾಗುವ ಮತ್ತು ನಮ್ಮ ನಗುವಿನ ಜೊತೆ ಅವರ ನಗುವನ್ನೂ ಬೆರೆಸಿ ನಮ್ಮ ಬದುಕಿನಲ್ಲಿ ಮಿಳಿತವಾಗುವಂತ ಬೆರಳೆಣಿಕೆಯಷ್ಟು ಜನ ಮಾತ್ರ ನಮಗಾಗಿ ಕಾದು ನಿಂತಿರುತ್ತಾರೆ … ಕೊನೆಗೂ ನಮ್ಮ ಅಳಲು ಮತ್ತು ಖುಷಿಗಳ ನದಿ ಸೇರುವುದು ಅಂತ ‘ಕೆಲವು’ ಖಾಸಗಿ ಸಂಬಂಧಗಳ ಎದೆಯ ಸಮುದ್ರದಲ್ಲಿ ಮಾತ್ರ ಅನ್ನುವುದನ್ನು …
 

‍ಲೇಖಕರು avadhi

June 13, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಆಹಾ! ಎಂಥಾ ಕುಬ್ಜರಯ್ಯಾ…

ಆಹಾ! ಎಂಥಾ ಕುಬ್ಜರಯ್ಯಾ…

ಬಿ ವಿ ಭಾರತಿ ಅವರ ʼಶೋವಾ ಎನ್ನುವ ಶೋಕ ಗೀತೆʼ ಅಂಕಣದಲ್ಲಿ ಪೋಲೆಂಡ್‌ ನಲ್ಲಿ ನಿಟ್ಟುಸಿರ ಪಯಣ ಕುರಿತ ಅನುಭವಗಳನ್ನು ಹಂಚಿಕೊಂಡಿದ್ದಾರೆ....

'ಅಪ್ಪನ ಪ್ರೀತಿಯ ಬಗ್ಗೆ ಸಾಕಷ್ಟು ಬರೆದಿದ್ದೇನೆ, ಈ ಸಲ for a change..' – ಭಾರತಿ ಬಿ ವಿ

ಭಾರತಿ ಬಿ ವಿ ನನ್ನ ಅಪ್ಪ ಹಣಕಾಸಿನ ವಿಚಾರದಲ್ಲಿ ತುಂಬ ಕಟ್ಟುನಿಟ್ಟು. ಅವರು ಹಾಗೇ ಇರಲೇಬೇಕಾದ ಅನಿವಾರ್ಯವೂ ಇತ್ತು ಅಂತಿಟ್ಟುಕೊಳ್ಳಿ. ಆಗ...

18 ಪ್ರತಿಕ್ರಿಯೆಗಳು

 1. ಎನ್.ಲಕ್ಷೀಪತಿ

  ಇಂದಿನ ಲೇಖನ ವಾಸ್ತವತೆಗೆ ಹಿಡಿದಿರುವ ಕನ್ನಡಿಯೆಂದರೆ ಅತಿಶಯೋಕ್ತಿಯಾಗಲಾರದು. ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ಗುಡಿಯೊಳಗೆ ಕವನದ ಸಾಲುಗಳ ನೆನಪಾಯಿತು.ಆಧುನಿಕ ಸೌಲಭ್ಯಗಳ ದುರುಪಯೋಗವಾಗುತ್ತಿರುವ ಸೂಚನೆ ಸವಿಸ್ತಾರವಾಗಿ ತಿಳಿಸಿದ್ದೀರಿ.

  ಪ್ರತಿಕ್ರಿಯೆ
 2. ಪ್ರಮೋದ್

  ನಾವು ‘ಶಾಲೋ’ ಮನುಷ್ಯರಾಗುತ್ತಿದ್ದೇವೆ. ಏನನ್ನು ಬಚ್ಚಿಡಬೇಕು, ಏನನ್ನು ಹೇಳಬೇಕೆ೦ಬ ಪರಿಧಿಯನ್ನು ನಮಗೊತ್ತಿಲ್ಲದ ಹಾಗೆ ಕಿತ್ತು ಹಾಕಿದ್ದೇವೆ. ಬಹುಶಃ ಮು೦ದಿನ ದಿನಗಳಲ್ಲಿ ಪ್ರೈವಸಿ ಅನ್ನೋದು ಒ೦ದಾನೊ೦ದು ಕಾಲದಲ್ಲಿ ಎ೦ದು ಶುರುವಾಗಬಹುದು. ಅ೦ತರ೦ಗಕ್ಕೂ ಬಹಿರ೦ಗಕ್ಕೂ ಮಧ್ಯೆ ಅಜಗಜಾ೦ತರವಿದ್ದಿದ್ದು ಈಗ ಎರಡೂ ಒ೦ದೇ ವಾಹಿನಿಯಲ್ಲಿ(ಫೇಸ್ ಬುಕ್) ಕೊಚ್ಚೆಯಾಗಿ ಹರಿಯುತ್ತಿವೆ. ಬಿಗ್ ಬಾಸ್ ಅನ್ನೋದು ಪ್ರೈವಸಿಗೆ ಹೊಸ ಎಲ್ಲೆ ಬರೆದಿದೆ. ಭಾವನೆಗಳು ಮಾರಟಕ್ಕಿವೆ. ಸಕಾಲಿಕ ಬರಹ. ಇದನ್ನು ಫೇಸ್ ಬುಕ್ ನಲ್ಲಿ ಹಾಕಿದರೆ ಜನ ಕಮೆ೦ಟಿಸಿ, ಲೈಕ್ ಮಾಡುತ್ತಾರೆ ಅನ್ನೋದು ವಿಷಾದರಾಗ.

  ಪ್ರತಿಕ್ರಿಯೆ
 3. Renuka Nidagundi

  ಹಿಂದೆ ಒಬ್ಬರು ಅವಧಿಯಲ್ಲಿ ಬರೆದದ್ದನ್ನೆಲ್ಲ ತಂದು ಫೇಸ್ಬುಕ್ಕಿನಲ್ಲಿ ಕಾರುತ್ತಾರೆಂದು ಕಮೆಂಟಿಸಿದ್ದು ನೆನಪಾಯಿತು. ಸಕಾಲಿಕ ಬರಹ ಭಾರತೀ..

  ಪ್ರತಿಕ್ರಿಯೆ
 4. ಉಷಾಕಟ್ಟೆಮನೆ

  ಅದಕ್ಕೇ ಭಾರತಿ ನಾನು ಯಾವಾಗಲೂ, ಅನುಕ್ಷಣವೂ ನೆನಪಿನಲ್ಲಿಟ್ಟುಕೊಳ್ಳುವುದು ಅಡಿಗರ ’ನಿನಗೆ ನೀನೇ ಗೆಳೆಯಾ, ನಿನಗೆ ನೀನೇ ಅವರಿವರ ಮಾತುಗಳ ಮರಳ ದಂಡೆಯ ಮೇಲೆ ನಿನ್ನ ಮಹಲನು ನೀನು ಕಟ್ಟಬೇಡ…’ಎನ್ನುವ ಸಾಲುಗಳು ಮತ್ತು ಡಿ.ವಿ.ಜಿಯವರ
  ’ಒರ್ವನೇ ನಿಲುವೆ ನೀನುತ್ಕಟಕ್ಷಣಗಳಲಿ
  ಧರ್ಮಸಂಕಟಗಳಲಿ, ಜೀವಸಮರದಲಿ,
  ನಿರ್ವಾಣದೀಕ್ಷೆಯಲಿ, ನಿರ್ಯಾಣಘಟ್ಟದಲಿ
  ನಿರ್ಮಿತ್ರನಿರಲು ಕಲಿ.’
  ಪೇಸ್ ಬುಕ್ ಸಂಬಂಧಗಳು ಒಂದು ಹಂತದಲ್ಲಿ ಮುಗಿದುಬಿಡುತ್ತದೆ. ಅದರಿಂದಾಚೆ ಅದು ವಿಸ್ತರಿಸುವುದಿಲ್ಲ. ವಿಸ್ತರಿಸಿದರೂ ಅದು ನಂಬುಗೆಯಾಗಿ ಮಾರ್ಪಡಲು ಇನ್ನೊಂದು ಹಂತ ಬೇಕಾಗುತ್ತದೆ.

  ಪ್ರತಿಕ್ರಿಯೆ
 5. Shwetha Hosabale

  “ಎಲ್ಲವೂ ಸುಮ್ಮನೆ ಅಭದ್ರ ಮನಸ್ಸಿನ ದೊಂಬರಾಟ” ಅನ್ನೋ ನಿಮ್ ಮಾತು ತುಂಬಾ ಚೆನ್ನಾಗಿದೆ. ಸತ್ಯ ಕೂಡಾ. ತುಂಬಾ ಅರ್ಥಪೂರ್ಣ ಬರಹ.

  ಪ್ರತಿಕ್ರಿಯೆ
 6. Sumangala

  ತುಂಬಾ ಚೆನ್ನಾಗಿ ಬರೆದಿದ್ದೀರಿ ಭಾರತಿ. ನಾನು ಅಪರೂಪಕ್ಕೊಮ್ಮೆ ಕೆಲವರ ಫೇಸ್ ಬುಕ್ ಅನ್ನು ಸುಮ್ಮನೇ ಮಜಾ ತೆಗೆದುಕೊಳ್ಳಲು ಎಂಬಂತೆ ನೋಡುತ್ತೇನೆ, ಎರಡು ಮೂರು ಗಂಟೆಗೊಮ್ಮೆ ಸಾಲುಗಳನ್ನು ಹರಿಯಬಿಡುವ ಕೆಲವರು, ಅದಕ್ಕೆ ಹತ್ತಾರು ಕಮೆಂಟುಗಳು, ಲೈಕುಗಳನ್ನು ಕಂಡು ನನಗೆ ಇವರಿಗೆಲ್ಲ ಇಷ್ಟೆಲ್ಲ ಸಮಯ ಎಲ್ಲಿಂದ ಸಿಗುತ್ತದೆಯಪ್ಪ ಎಂದು ಅಚ್ಚರಿಯಾಗುತ್ತದೆ. ಮನೆಯಲ್ಲಿರುವ ಮಗನಿಗೆ ಫೇಸ್ ಬುಕ್ ನಲ್ಲಿ ಕಂಗ್ರಾಟ್ಸ್ ಹೇಳುವ ಅಮ್ಮ/ಅಪ್ಪಂದಿರು, ಅಮ್ಮನಿಗೆ ಫೇಸ್ ಬುಕ್ ನಲ್ಲಿ ಥ್ಯಾಂಕ್ಸ್ ಹೇಳುವ ಮಕ್ಕಳು… ಒಬ್ಬೊಬ್ಬರಿಗೆ ಮೂರು ನಾಲ್ಕು ಸಾವಿರ ಗೆಳೆಯ/ಗೆಳತಿಯರು… ಆಹಾ ಫೇಸ್ ಬುಕ್ ಎಂಬ ಮಾಯಾಜಾಲವೇ… ಬೇರೆ ಬೇರೆ ಶ್ರಮಕೆಲಸದಲ್ಲಿ ತೊಡಗಿರುವವರು, ಕಂಪ್ಯೂಟರ್ ಮುಟ್ಟದೇ ಬೇರೆ ಬೇರೆ ಕೆಲಸದಲ್ಲಿ ತೊಡಗಿರುವವರು ಹೀಗೆ ನಮ್ಮ ಹಾಗೆ ನಿಮಷಕ್ಕೊಮ್ಮೆ ಲಾಗಿನ್ ಆಗುವ ಚಟಕ್ಕೆ ದಾಸರಾಗದ ಪುಣ್ಯವಂತರು ಎನ್ನಿಸುತ್ತದೆ. ದೇವರೇ ನೀನಿರುವುದೇ ನಿಜವಾದಲ್ಲಿ ನನ್ನನ್ನು ಇಂಥ ಮೇನಿಯಾದಿಂದ ದೂರವುಳಿಯುವಂತೆ ಮಾಡಪ್ಪ ಎಂದು ಬೇಡಿಕೊಳ್ಳುವೆ!!! – ಸುಮಂಗಲಾ

  ಪ್ರತಿಕ್ರಿಯೆ
 7. ಶಮ, ನಂದಿಬೆಟ್ಟ

  True to the Core Bharathi…
  ಒಮ್ಮೆ ಹೀಗಾಗಿತ್ತು: ಜನಪ್ರಿಯ ಕಿರುತೆರೆ ಕಲಾವಿದರೊಬ್ಬರು ತೀರಿಕೊಂಡಿದ್ದರು. ಸುಮಾರು 20 ನಿಮಿಷ ಕಳೆದಿರಲಿಕ್ಕಿಲ್ಲ. “ನನ್ನಿನಿಯ ಇನ್ನಿಲ್ಲ” ಎಂಬಂಥ ಒಂದು ಸ್ಟೇಟಸ್ ಅವರ ಪತ್ನಿಯಿಂದ. ಯಾಕೋ ತೀರ ರೇಜಿಗೆ ಹುಟ್ಟಿಸಿತ್ತು ನನಗದು. ನಮ್ಮದೇ ಆದ ಗುಂಪಿನಲ್ಲಿ ನಾವು ನಮ್ಮ ಬಾವನೆಗಳನ್ನು ಹಂಚಿಕೊಂಡು ನಿರಾಳವಾಗೋದಕ್ಕೂ ಅದನ್ನು ಪ್ರಚಾರಕ್ಕಿಡುವುದಕ್ಕೂ ಬಹಳ ವ್ಯತ್ಯಾಸ. ವೈಯಕ್ತಿಕ ಬದುಕಿನ ಹಲವನ್ನು ಹಂಚಿಕೊಳ್ಳುವ ತುಡಿತ ಸಹಜವೇ ಮನುಷ್ಯನಿಗೆ. ಆದರೆ ಎಲ್ಲಿ ಎಷ್ಟು ಎಂಬ ಜಾಗರೂಕತೆ ನಮ್ಮನ್ನು ನಗೆಪಾಟಲಾಗದಂತೆ ತಡೆಯಬಲ್ಲುದು. ನಾನು ಬಹಳಷ್ಟು ಸಾರ್ತಿ ಒಂದು SMS ಮೂಲಕ ನನ್ನವರಿಗಷ್ಟೇ ಹಂಚಿಕೊಳ್ಳುತ್ತೇನೆ. ಇನ್ನು ಫೇಸ್ ಬುಕ್ ನ ಕೆಲವು ಆತ್ಮೀಯರಿಗೆ ಹೇಳಬೇಕಾದಂಥವಿದ್ದಾಗ ವೈಯಕ್ತಿಕವಾಗಿ ಮೆಸೇಜ್ ಬಾಕ್ಸ್ ನಲ್ಲಿ ಹಾಕೋದನ್ನ ರೂಢಿ ಮಾಡಿಕೊಂಡಿದ್ದೇನೆ.
  ಬಹಳ ಅರ್ಥಪೂರ್ಣ ಬರಹ…

  ಪ್ರತಿಕ್ರಿಯೆ
 8. Sandhya Bhat

  ನಿಮ್ಮ ಲೇಖನದ ಅಕ್ಷರ ಅಕ್ಷರವೂ ನಿಜದ ಕಥೆ ಹೇಳುತ್ತೆ ಭಾರತಿ ಮಾ… ಕೆಲವೊಮ್ಮೆ ನಮ್ಮ ಪರಿಧಿಯ ಒಳಗಿನ ವ್ಯಕ್ತಿಗಳೇ ಪರಿಧಿಯಾಚೆಗೆ ನಮ್ಮನ್ನು ಬಿಕರಿಗಿಟ್ಟು ಬಿಡುತ್ತಾರೆ..!! ಅವರ ಪ್ರಚಾರ ಚಪಲಕ್ಕೆ …
  ಅವರ ಅನುಕೂಲಕ್ಕೆ …!!! ನಮಗಿಷ್ಟವಿಲ್ಲದಿದ್ದರೂ ….

  ಪ್ರತಿಕ್ರಿಯೆ
 9. Anuradha.B.Rao

  ಪ್ರಶಾಂತ್ ಆಡೂರ್ ಈ ಪ್ರಚಾರಪ್ರಿಯತೆ ಬಗ್ಗೆ ಬರೆದಿದ್ದರು .. ‘ನೀ Facebookನಾಗ್ ಇಲ್ಲಾ ?… !’ಎಂಬ ಬರಹ . I lost my beloved wife ಅಂತ ಹಾಕಿದವನ ಸ್ಟೇಟಸ್ ಅನ್ನು 52 ಮಂದಿ ಲೈಕ್ ಮಾಡಿದ್ದರಂತೆ !! ಮದುವೆಯ ಹುಡುಗ ಅಥವಾ ಹುಡುಗಿ ಮೊದಲು ಫೇಸ್ ಬುಕ್ ಪ್ರೊಫೈಲ್ ನೋಡ್ತಾರೆ .
  ನಿನ್ನ ಕೊನೆಯ ಸಾಲುಗಳು ‘ಇವೆಲ್ಲ ಭ್ರಮೆಗಳ ಪರದೆಯನ್ನು ಧೈರ್ಯ ವಹಿಸಿ ಒಮ್ಮೆ ಸರಿಸಿ ನೋಡಿದರೆ ಹೃದಯದ ಬಾಗಿಲಿನಾಚೆ ನಮ್ಮ ಕಣ್ಣೀರಿಗೆ ಭುಜವಾಗುವ ಮತ್ತು ನಮ್ಮ ನಗುವಿನ ಜೊತೆ ಅವರ ನಗುವನ್ನೂ ಬೆರೆಸಿ ನಮ್ಮ ಬದುಕಿನಲ್ಲಿ ಮಿಳಿತವಾಗುವಂತ ಬೆರಳೆಣಿಕೆಯಷ್ಟು ಜನ ಮಾತ್ರ ನಮಗಾಗಿ ಕಾದು ನಿಂತಿರುತ್ತಾರೆ … ಕೊನೆಗೂ ನಮ್ಮ ಅಳಲು ಮತ್ತು ಖುಷಿಗಳ ನದಿ ಸೇರುವುದು ಅಂತ ‘ಕೆಲವು’ ಖಾಸಗಿ ಸಂಬಂಧಗಳ ಎದೆಯ ಸಮುದ್ರದಲ್ಲಿ ಮಾತ್ರ ಅನ್ನುವುದನ್ನು …’
  ನನಗೆ ತುಂಬಾ ಇಷ್ಟವಾಯಿತು .

  ಪ್ರತಿಕ್ರಿಯೆ
 10. sujathalokesh

  ಮೇಡಮ್ ನೀವು ಹೇಳಿದ್ದು ಸರಿ. ಬಸಿರಾಗಾಲೀ, ಹೊಟ್ಟೆ ತೊಳಸಿರಲೀ (ಅಂದ್ರೆ ನಲಿವು-ನೋವು ಗಳಿಗೆ ) ಎಲ್ಲಾವನ್ನೂ ವಾಂತಿ ಮಾಡೋಕೆ ಒಂದು ಜಾಗ 🙂 ಬೇಕೂ ಅಂತಾ ಹುಡುಕ್ತಿರ್ತಾರೆ ಅನ್ನೋದು ದಿಟ.

  ಪ್ರತಿಕ್ರಿಯೆ
 11. samyuktha

  Tumba nija!! Innoo neevu “I am feeling sick”, “I am feeling bored”, “I am hungry” annuva thermometer odeyuva status gala bagge baredilla!! 😀

  ಪ್ರತಿಕ್ರಿಯೆ
 12. Usha Rai

  neevu hELuvudu nija Bhaarathi, aadaroo kelavomme naavu mentally weak aagtheve …. hattiradavarodane nOvu nalivugaLannu hanchikoltheve. … manasige swalpa aaraamavenisuttade. theeraa public aagirOdu sariyalla ennuvudannu naanoo 100% oppikoLthEne. Facebooknalli ellavannoo hELikoLluvudaralli arthavilla ennuvudu nanna abhipraaya kooda. chennaagi barediddeeri.

  ಪ್ರತಿಕ್ರಿಯೆ
 13. ಸತೀಶ್ ನಾಯ್ಕ್

  ಈ ಬ್ಯಾನರ್ ಗಳ ಹಾವಳಿಯನ್ನ ಕರ್ನಾಟಕದಲ್ಲಿ ಈಚೆಗೆ ಒಂದು ವರ್ಷದಿಂದಷ್ಟೇ ಕಾಣುತ್ತಿರೋ ನಾನು ಕೆಲವೊಂದು ಸಾರಿ ಅಂದು ಕೊಳ್ತೇನೆ.. ನಾವು ಈ ತಮಿಳು ನಾಡಿನ ಜನರಿಂದ ಇದನ್ನೆಲ್ಲಾ ಕಲಿತಿರ ಬಹುದಾ..?? ಅಥವಾ ಬೆಂಗಳೂರಿನ ತಮಿಳರೇ ಇದನ್ನ ಕಲಿಸಿರಬಹುದಾ ಅಂತ..?? ಮೊದಲಾದರೆ ಎಲೆಕ್ಷನ್ ಹತ್ತಿರವಿದ್ದಾಗ ಆರಡಿ ಮೂರಡಿಗಳ ಬ್ಯಾನರ್ ಅನ್ನು ಕಾಣುವ ಅವಕಾಶವಿತ್ತೇ ವಿನಃ ಬೇರೆ ಸಂಧರ್ಭಗಳಲ್ಲಿ ಅಷ್ಟು ದೊಡ್ಡದಾಗಿ ಬ್ಯಾನರ್ ಗಳನ್ನೂ ಕಟ್ಟಿಸುವ ಪರಿಪಾಟ ನಮ್ಮ ಕಡೆ ಎಲ್ಲ ಅಷ್ಟರ ಮಟ್ಟಿಗೆ ಇರಲಿಲ್ಲವೇನೋ.. ಏನಿದ್ದರೂ ನಾಲ್ಕಡಿ ಎರಡಡಿ ಪೇಪರ್ ಪ್ರಕಟಣೆಗಳೇ ಹೆಚ್ಚಾಗಿ ಕಂಡು ಬರುತ್ತಿದ್ದವು. ಬ್ಯಾನರ್ ಕಟ್ಟಿಸುವುದಿದ್ದರೆ ಅದಾವುದೋ ಮಹತ್ಕಾರ್ಯವೇ ಇರಬೇಕಿತ್ತು.
  ಇಲ್ಲಿಗೆ ಐದು ವರ್ಷದ ಹಿಂದೆ ನಾನು ತಮಿಳು ನಾಡು ಸೇರಿದ್ದು. ಅಲ್ಲಿನ ಬ್ಯಾನರ್ ಗಳ ಬಳಕೆಯನ್ನ ಕಂಡು ಅಕ್ಷರಸಹ ನಿಬ್ಬೆರಗಾಗಿದ್ದೆ. ಅಲ್ಲಿ ಅಲ್ಲಿ ಮದುವೆಯಾಗಲಿ, ಮಕ್ಕಳಾಗಲಿ, ನಾಮಕರಣವಾಗಲಿ, ಕ್ರೀಡಾ ಕೂಟವಾಗಲಿ, ರಾಜಕೀಯ ಸಭೆಗಳಾಗಲಿ, ಆರೋಗ್ಯ ಶಿಬಿರಗಳಾಗಲಿ, ಜಾತ್ರೆಗಳಾಗಲಿ ಯಾವ ಕಾರ್ಯಕ್ರಮವೇ ಆಗಲಿ ಇಪ್ಪತ್ತು X ಮೂವತ್ತು ಅಡಿಗಳ ದೊಡ್ಡ ದೊಡ್ಡ ಬ್ಯಾನರ್ಗಳನ್ನ ಊರಿನ ಅಗಸೆ ಬಾಗಿಲ ಬಳಿಯೋ ಅಥವಾ ನಗರದ ಕೇಂದ್ರ ಭಾಗದ ಬಳಿಯೋ ಹಾಕಲೇ ಬೇಕು ಅನ್ನುವುದು ಅನಿವಾರ್ಯವೇನೋ ಅನ್ನುವಷ್ಟು ಶ್ರದ್ಧೆ ಇಂದ ಹಾಕುತ್ತಾರೆ. ಹತ್ತಾರು ಕಿಮೀ ದೂರದ ಹಳ್ಳಿಗಳ ಜನ ಕೂಡ ತಮ್ಮ ಸುತ್ತಣ ಹಳಿಗಲಿಗೆಲ್ಲ ದೊಡ್ದದೆನಿಸಿದ ಊರೋ ಅಥವಾ ಹತ್ತಿರದ ನಗರಕ್ಕೋ ಬಂದು ತಮ್ಮ ಬ್ಯಾನರ್ ಗಳನ್ನ ಕಟ್ಟುವುದೂ ಉಂಟು..!! ಯಾವ ಸಂತೋಷಕ್ಕೋ ತಿಳಿಯದು. ಆ ಬ್ಯಾನರಿನೊಳಗೆ ಎಳೆ ಮಗುವುನಿಂದ ಇಳಿ ಮುದುಕನ ತನಕ, ಸ್ಪುರದ್ರೂಪ ಅನ್ನುವುದರಿಂದ ಹಿಡಿದು ವಿಕಾರ ಅನ್ನಬಲ್ಲ ಎಲ್ಲ ಮುಖಗಳ ಹತ್ತಿಪ್ಪತ್ತು ಮುಖಗಳನ್ನ.. ಮದುವೆಯಾದರೆ ವಧು ವರರ ಜೋಡಿಯನ್ನ, ರಾಜಕೀಯದವರಾದರೆ ಹಿರಿಯ ಧುರೀಣರ ಮುಖವನ್ನ, ಒಟ್ಟಾರೆ ಊರಲ್ಲಿನ ಪ್ರತಿ ಕಾರ್ಯಕ್ರಮಗಳಿಗೂ ಈ ರೀತಿ ಪ್ರಚಾರ ಮಾಡುವ ಪದ್ಧತಿ ಉಂಟು ಯಾವ ಸಾಧನೆಗೋ ಕಾಣೆ..??
  ದೊಡ್ಡ ದೊಡ್ಡ ನಟರ ಹೊಚ್ಚ ಹೊಸ ಸಿನಿಮಾ ಗಳಾದರೆ ಸಾಕು ಒಂದೂರಿನ ಅಷ್ಟೂ ಹುಡುಗರು ಮುದುಕರು, ಅವರ ಅಭಿಮಾನಿ, ಇವರ ಅಭಿಮಾನಿ ಅನ್ನುವುದನ್ನ ಅಷ್ಟು ಉತ್ಸಾಹದಿಂದ ತೋರಿಸುತ್ತಾರೆಂದರೆ ಒಂದೇ ಸಿನಿಮಾಗೆ ಒಂದೇ ಜಾಗದಲ್ಲಿ ಹದಿನೈದಕ್ಕೂ ಹೆಚ್ಚು ದೊಡ್ಡ ದೊಡ್ಡ ಬ್ಯಾನರ್ ಗಳನ್ನ ತಮ್ಮೆಲ್ಲರ ಮುಖ ಸಮೇತ ಕಟ್ಟುತಾರೆಂದರೆ ಲೆಕ್ಖ ಹಾಕಿ ಯಾವ ರೀತಿ ಇವರ ಬ್ಯಾನರ್ ಪ್ರಿಯತೆಯನ್ನ ಹೊಗಳೋದು ಅಂತ..?? ಮನೆಯ ಮಾಡಿಂದ ಹಿಡಿದು ಮರದ ಜಾಡಿನ ತನಕ ಎಲ್ಲವೂ ಬ್ಯಾನರ್ ನಿಂದಲೇ ಮುಚ್ಚಿ ಹೋಗಿರುತ್ತದೆ..!!
  ಇನ್ನು ನಾಡಿನ ರಾಜಕೀಯದ ಮುಖ್ಯ ಕಲಿಗಳು ಬರುವುದಾದರೆ ನೋಡಬೇಕು, ಅವರ ಗಜಗಾತ್ರದ ದೇಹದ ಬೃಹತ್ ಚಿತ್ರದೊಂದಿಗೆ ನಮ್ಮೆಲ್ಲರ ಭಾಗ್ಯದ ಬೆಳಕೇ.. ನಾಡಿನ ಸೂರ್ಯನೇ.. ಬಡವರ ಬಂಧುವೇ.. ಭೂ ತಾಯಿಯ ಸಿಂಧೂರವೇ, ನಾಡಿನ ಉಸಿರೇ, ಮನೆ ಮನೆಗಳ ಬೆಳಕೇ, ನಮ್ಮ ಹೃದಯದ ಮಿಡಿತವೇ.. ಅಂತ ಅದೂ ಇದೂ ಉದ್ಘಾರಗಳೊಂದಿಗೆ ಅವರ ಬ್ಯಾನರ್ ಗಳನ್ನ ಕಟ್ಟೋದು ನೋಡಿದರೆ ಇಲ್ಲಿನವರಿಗೆ ಬುದ್ಧಿ ಉಂಟಾ ಅಂತ ಅನ್ನಿಸೋದು ಸುಳ್ಳಲ್ಲ.. ಸಾವಿರಾರು ಕೋಟಿ ಕಳ್ಳತನ ಮಾಡಿ ಇಡೀ ರಾಷ್ಟ್ರದಲ್ಲೇ ಕುಖ್ಯಾತಿ ಗಳಿಸಿ ಅವಮಾನಿತರಾದವರಿಗೂ ಇದೇ ಉದ್ಘಾರಗಳು ಅಂದರೆ ನಮ್ಮ ಸಹನೆಯ ಕಟ್ಟೆ ಒಡೆದು ಆ ಬ್ಯಾನರ್ ಗಳಿಗೊಮ್ಮೆ ಎಳೆ ಅಡಿಕೆ ಹಾಕ್ಕೊಂಡು ತುಪುಕ್ ಅಂತ ಉಗಿದು ಬಿಡೋಣ ಅನ್ಸತ್ತೆ..
  ಒಟ್ಟಾರೆ ಈ ಬ್ಯಾನರ್ಗಳ ಪ್ರಚುರ ಪಡಿಸುವಿಕೆ.. ನಮ್ಮ ನೆರೆಯವರ ಬಳುವಳಿಯೇ ಇರಬೇಕು.. ಕೋತಿ ತಾನು ಕೆಡೋದಲ್ದೆ ವನವನ್ನ ಕೆಡಿಸ್ತು ಅನ್ನೋ ಹಾಗೆ.. ಇಲ್ಲಿ ಯಾರೋ ಒಬ್ಬ ಕೊಂಗ ಮಾಡಿದ್ದನ್ನ ನೋಡಿ (ಬಹುಶ ಅವರನ್ನ ನೋಡಿಯೇ ಕಲಿತದ್ದಾದರೆ) ಇಡೀ ನಮ್ಮ ನಾಡೇ ಈ ನಿಟ್ಟಿನಲ್ಲಿ ಮುಂದುವರೆಯುತ್ತಿರೋದು ನಮ್ಮ ಚಳುವಳಿಯೋ.. ಅವರ ಬಳುವಳಿಯೋ ಕಾಣೆ..!!
  ಸಮಯಕ್ಕೊಂದು ಸರಿಯಾದ ಲೇಖನ.. ನಮ್ಮ ಖಾಸಗೀತನದ ವಿಚಾರಗಳು ಕೂಡಾ ನಮ್ಮ ಪ್ರಚಾರದ, ನಮ್ಮ ಪ್ರಸಿದ್ದಿಯ ಅಂಶಗಳಾಗುತ್ತಿವೆ ಎಂದರೆ ತಂತ್ರಜ್ಞಾನದ ಸೋಗಿನಲ್ಲಿ ನಾವೆಲ್ಲಾ ನಮ್ಮ ತನವನ್ನ ಎಷ್ಟರ ಮಟ್ಟಿಗೆ ಕಳೆದು ಕೊಂಡಿದ್ದೇವೆ ಅನ್ನೋದು ಅರಿವಾಗುತ್ತದೆ.

  ಪ್ರತಿಕ್ರಿಯೆ
 14. ಮುನಿ ಹೂಗಾರ್

  ಫೇಸ್‌ಬುಕ್‌ ಅನ್ನೋ ಚರಂಡಿಯಲ್ಲಿ ಸೆಂಟ್ ಹಾಕ್ಕೋಂಡು ಬಿದ್ದು ಒದ್ದಾಡ್ತ ಇರೋ ಎಲ್ಲ, ಗೆಳೆಯ(ತಿ)ರಿಗೆ ಮತ್ತು ಬಂಧು ಮಿತ್ರರಿಗೆ ಇದರ ಅರಿವು ಮೂಡಲಿ ಅನ್ನೋದು ನನ್ನ ಕೋರಿಕೆ, ಆದರೆ ಅವರ್ಯಾರೂ ಸಹ ಇಂಥಹ ತಿಳುವಳಿಕೆಯ ಮಾತುಗಳನ್ನ ಆಲಿಸುವ ಸುಸ್ಥಿತಿಯಲ್ಲಿಲ್ಲ ಎನ್ನುವುದು ವಿಷಾದದ ಸಂಗತಿ. ಕೆಟ್ಟಾಗಲೇ ಬುದ್ದಿ ಬರೋದು ಅನ್ನುವ ಕಾಲ ಇದು. My Life My Rules, Life is short enjoy every bit of it, ಅನ್ನೋರೇ ಹೆಚ್ಚಾಗಿದ್ದಾರೆ. ಆದರೆ ಆ enjoyment ಅಲ್ಲಿ ತಮ್ಮ ಖಾಸಗೀ ಜೀವನದ ಅಣು ಅಣುವನ್ನೂ ಮಾರಾಟಕ್ಕಿಟ್ಟಿರೋದು ಅವರ ಅರಿವಿಗೆ ಬರುವುದಿಲ್ಲ. ಅವರವರ ಬದುಕು ಅವರದೇ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: