‘ಆಆಆಆಆಆ ಕ್ಷೀಈಈಈಈಈಈ’ .

-ವೇಣು ವಿನೋದ್
ಮಂಜು ಮುಸುಕಿದ ದಾರಿಯಲ್ಲಿ
ನಾನು ಮೊದಲ ಬಾರಿಗೆ ನಶ್ಯ ನೋಡಿದ್ದು ಸುಮಾರು೩-೪ ವರ್ಷದವನಿರಬೇಕಾದರೆ ಪೆರ್ಲದ ದಾಮು ಭಂಡಾರಿಗಳ ಕ್ಷೌರದಂಗಡಿಯಲ್ಲಿ.
ದಾಮು ಭಂಡಾರಿಯವರು ಪ್ರತಿ ಗಿರಾಕಿಯ ಕ್ಷೌರ ಮಾಡಿದ ಬಳಿಕ ಮಧ್ಯಂತರದಲ್ಲಿ ತಪ್ಪದೇ ಚಿಟಿಕೆ ನಶ್ಯ ಹಾಕುವ ಗಮ್ಮತ್ತನ್ನು ನೋಡುವುದಕ್ಕಾಗೇ ನಾನು ಅಜ್ಜನೊಂದಿಗೆ ಕ್ಷೌರದಂಗಡಿಗೇ ಹೋಗಿದ್ದುಂಟು!
ಶುದ್ಧ ಬಿಳಿಯ ಪಂಚೆ, ಅದೇ ಬಣ್ಣದ ಶುಭ್ರ ಖಾದಿ ಬನೀನು ಧರಿಸಿದ್ದ ಇಳಿ ವಯಸ್ಸಿನ ಭಂಡಾರಿಯವರನ್ನು ನೋಡುವಾಗಲೇ ಗೌರವ ಬರುವುದು. ಅವರು ಹಳೇ ಅಲ್ಮಾರಿಯ ಮೂಲೆಗೆ ಕೈಹಾಕಿ, ಅಲ್ಲಿಂದ ನಶ್ಯ ತುಂಬಿದ್ದ ಆಕರ್ಷಕ ಗಾಜಿನ ಚಿಕ್ಕ ಗಾತ್ರದ ಸಪುರ ಕೊರಳಿನ ಬಾಟಲಿಯನ್ನು ಹೊರ ತೆಗೆದು, ಹೊರ ಬಂದು ಎಡಗೈ ಅಗಲಿಸಿ, ಬಾಟಲಿಯಿಂದ ನಶ್ಯವನ್ನು ಕೈಗೆ ಹಾಕಿಕೊಂಡು ಅದರಿಂದ ಒಂದು ಚಿಟಿಕೆ ಪುಡಿ ಮಾತ್ರವೆ ಬಲ ಅಂಗುಷ್ಠ ಮತ್ತು ತೋರು ಬೆರಳಿನಲ್ಲಿ ಇರಿಸಿ, ಉಳಿದದ್ದು ಕೊಡವಿ ಅದೊಂದು ಗತ್ತಿನಲ್ಲಿ ನಶ್ಯ ಏರಿಸುತ್ತಿದ್ದರೆ ನನಗೇ ನಶ್ಯ ಹಾಕಿದ ಹಾಗೆ ಆಗುತ್ತಿತ್ತು.
ಇನ್ನು ಮದುವೆ, ಪೂಜೆಯಂತಹ ಸಮಾರಂಭಗಳಲ್ಲೂ ನಶ್ಯ ಹಾಕುವವರು ಒಂದು ಕಡೆ ಸೇರಿಕೊಂಡು ಅದೋ ಇದೋ ರಾಜಕೀಯ ಮಾತಾಡುತ್ತಾ ಹೇಗೆ ಈ ಬಾರಿ ಅಡಕೆಗೆ ರೇಟ್ ಏರಬಹುದೋ ಏನೋ ಎನ್ನುತ್ತಾ ನಶ್ಯ ಹಾಕುವುದು, ಆ ಬಳಿಕ ಲಯಬದ್ಧವಾಗಿ ಅನೇಕರು ‘ಆಆಆಆಆಆ ಕ್ಷೀಈಈಈಈಈಈ’ ಎಂದು ಸೀನುವುದು ಏನು ದೃಶ್ಯ!

ಇನ್ನು ಕೆಲವರು ಒಂದೊಂದು ಪದವನ್ನು ಮಧ್ಯೆ ಆಕ್ಷೀ ಬೆರೆಸಿಕೊಂಡು ಹೇಳುವುದಂತೂ ನಾಟಕೀವಾಗಿರುತ್ತಿತ್ತು.
ಇದರಿಂದ ನಾನೂ ಪ್ರೇರಿತನಾಗಿ ಅನುಸರಿಸಲು ಹೋಗಿ ಮನೆಯಲ್ಲಿ ಚೆನ್ನಾಗಿ ಬೈಗುಳ ತಿಂದದ್ದಿದೆ. ನಾನು, ನನ್ನ ಓರಗೆಯ ಇತರ ಕೆಲ ಮಕ್ಕಳಿಗೂ ನಶ್ಯದಲ್ಲಿ ಆಕರ್ಷಣೆ ಬರಲು ಕಾರಣವೇ ಈ ಆಕ್ಷಿ ಎಂದರೂ ತಪ್ಪಲ್ಲ! ನಶ್ಯವನ್ನು ಹದವಾಗಿ ಏರಿಸಿದಾಗ ಶ್ವಾಸಕೋಶದ ಅಂತರಾಳದಲ್ಲೆಲ್ಲೋ ಉದ್ಭವವಾಗುವ ಆಕ್ಷಿ ನಿಧಾನವಾಗಿ ಕಂಠದ ಮೂಲಕ ಹೊರ ಬರುತ್ತಿರುವಾಗ ಕೆಲವರು ಕಣ್ಮುಚ್ಚಿ ಅಥವಾ ಅರೆಕಣ್ಣು ಮುಚ್ಚಿ, ಬಾಯಿ ಆಆಆಆ ಮಾಡಿಕೊಂಡು ಕೊನೆಗೆ ಆಕ್ಷೀ ಎನ್ನುತ್ತಾ ಮಹದಾನಂದ ಪಡೆಯುವುದನ್ನು ನೋಡಿದ್ದೇನೆ 🙂 ಜೋರು ಶೀತವಾದ ಸಂದರ್ಭದಲ್ಲಿ ಮಾತ್ರ ಮೂಗು ಕ್ಲಿಯರಾಗಲು ಕೆಲವೊಮ್ಮೆ ಅಜ್ಜನೇ ನನಗೆ ನಶ್ಯವನ್ನು ಕರುಣಿಸುತ್ತಿದ್ದರು.
ಯಾಕೆ ಇದೆಲ್ಲಾ ನೆನಪಾಯಿತೆಂದರೆ,ಈಗೀಗ ನಮ್ಮ ಕಡೆಯಂತೂ ನಶ್ಯ ಹಾಕುವವರೇ ಕಾಣಸಿಗುವುದಿಲ್ಲ, ಕೆಲವೊಂದು ಅಜ್ಜಂದಿರನ್ನು ಬಿಟ್ಟರೆ. ಇದು ಒಳ್ಳೆಯದೋ ಕೆಟ್ಟದೋ ಎಂದು ವಿಶ್ಲೇಷಿಸೋದು ನನ್ನ ಉದ್ದೇಶವಲ್ಲ.
ನಿಜ ಹೊಗೆಸೊಪ್ಪಿನಿಂದ ತಯಾರಿಸಿದ ಎಲ್ಲಾ ರೀತಿಯ ವಸ್ತುಗಳೂ ಅತಿಯಾದರೆ ದೇಹಕ್ಕೆ ಮಾರಕವೇ. ಬಹುಷಃ ಸಿಗರೇಟ್, ಗುಟ್ಕಾದ ಜನಪ್ರಿಯತೆಯಲ್ಲಿ ನಶ್ಯದ ಚಟ ಮಸುಕಾಗಿರಬಹುದೇನೋ..
ಯಾವಾಗಲೋ ಒಮ್ಮೆ ನಶ್ಯ ಏರಿಸಿ ಆಕ್ಷೀ ಎನ್ನುವ ಆನಂದ ಅನುಭವಿಸಿದವರಿಗೆ ಮಾತ್ರ ಆ ಖುಷಿ ಬೇರೆಲ್ಲೂ ಸಿಗದು

‍ಲೇಖಕರು avadhi

February 4, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

‘ಅಮ್ಮಚ್ಚಿ’ ಆರ್ಟಾ? ಕಮರ್ಷಿಯಲ್ಲಾ??

ಚಂಪಾ ಶೆಟ್ಟಿ । ಕಳೆದ ವಾರದಿಂದ । ಸಿನೆಮಾ ಮಾಡಬೇಕೆಂದಕೂಡಲೇ ಅನೇಕರಿಂದ ಬಂದದ್ದು ಒಂದೇ ಪ್ರಶ್ನೆ " ನಿಮ್ಮದು ಆರ್ಟ್ ಮೂವಿನಾ? ಕಮರ್ಷಿಯಲ್...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This